ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆನ್ಸೆಕ್ಸ್‌ 736 ಅಂಶ ಇಳಿಕೆ: ಕರಗಿದ ₹4.86 ಲಕ್ಷ ಕೋಟಿ ಸಂಪತ್ತು

ಎಲ್‌ಐಸಿ ಷೇರು ಕುಸಿತ
Published 19 ಮಾರ್ಚ್ 2024, 15:31 IST
Last Updated 19 ಮಾರ್ಚ್ 2024, 15:31 IST
ಅಕ್ಷರ ಗಾತ್ರ

ನವದೆಹಲಿ: ಎಂಟು ವರ್ಷಗಳ ಬಳಿಕ ಬ್ಯಾಂಕ್‌ ಆಫ್‌ ಜಪಾನ್‌ ಪ್ರಕಟಿಸಿದ ಬಡ್ಡಿದರ ಏರಿಕೆ ನೀತಿಯಿಂದಾಗಿ ಷೇರುಪೇಟೆಯಲ್ಲಿ ಮಂಗಳವಾರ ನಕಾರಾತ್ಮಕ ವಹಿವಾಟು ನಡೆಯಿತು.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 736 ಅಂಶಗಳಷ್ಟು ಕುಸಿತ ಕಂಡಿತು. ವಹಿವಾಟಿನಲ್ಲಿ ಹೂಡಿಕೆದಾರರ ಒಟ್ಟು ₹4.86 ಲಕ್ಷ ಕೋಟಿ ಸಂಪತ್ತು ಕರಗಿಹೋಯಿತು.

ಸೆನ್ಸೆಕ್ಸ್‌ 72,012ಕ್ಕೆ ಸ್ಥಿರಗೊಂಡಿತು. ದಿನದ ವಹಿವಾಟಿನಲ್ಲಿ 71,933 ಅಂಶಗಳಿಗೆ ಮುಟ್ಟಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ  ನಿಫ್ಟಿ 238 ಅಂಶ ಇಳಿಕೆ ಕಂಡು, 21,817ಕ್ಕೆ ಕೊನೆಗೊಂಡಿತು. 

ಇಂಡಸ್‌ಇಂಡ್‌ ಬ್ಯಾಂಕ್‌, ವಿಪ್ರೊ, ನೆಸ್ಟ್ಲೆ, ಎಚ್‌ಸಿಎಲ್‌ ಟೆಕ್ನಾಲಜೀಸ್‌, ಇನ್ಫೊಸಿಸ್‌, ಪವರ್‌ಗ್ರಿಡ್‌, ಐಟಿಸಿ, ಟೆಕ್‌ ಮಹೀಂದ್ರ, ಟಾಟಾ ಮೋಟರ್ಸ್‌ ಮತ್ತು ಅಲ್ಟ್ರಾಟೆಕ್‌ ಸಿಮೆಂಟ್‌ನ ಷೇರಿನ ಮೌಲ್ಯ ಇಳಿಕೆ ಆಗಿದೆ. 

ಬಜಾಜ್‌ ಫೈನಾನ್ಸ್‌, ಕೋಟಕ್‌ ಮಹೀಂದ್ರ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಬಜಾಜ್‌ ಫಿನ್‌ಸರ್ವ್‌, ಟೈಟನ್‌ ಮತ್ತು ಭಾರ್ತಿ ಏರ್‌ಟೆಲ್‌ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ. 

ಬಿಎಸ್‌ಇ ಮಿಡ್‌ಕ್ಯಾಪ್‌ ಮತ್ತು ಸ್ಮಾಲ್‌ಕ್ಯಾಪ್‌ ಸೂಚ್ಯಂಕಗಳು ಕ್ರಮವಾಗಿ ಶೇ 1.36 ಮತ್ತು ಶೇ 1.04ರಷ್ಟು ಇಳಿಕೆಯಾಗಿವೆ.

ಎಲ್‌ಐಸಿ ಷೇರು ಇಳಿಕೆ: ಎಲ್‌ಐಸಿ ಷೇರಿನ ಮೌಲ್ಯ ಶೇ 3ರಷ್ಟು ಕುಸಿದಿದೆ. 

ಬಿಎಸ್‌ಇಯಲ್ಲಿ ಷೇರಿನ ಮೌಲ್ಯ ಶೇ 2.77ರಷ್ಟು ಮತ್ತು ಎನ್‌ಎಸ್‌ಇಯಲ್ಲಿ ಶೇ 2.71 ಕಡಿಮೆ ಆಗಿದೆ. ಪ್ರತಿ ಷೇರಿನ ಬೆಲೆ ಕ್ರಮವಾಗಿ ₹879.50 ಮತ್ತು ₹879.85ಕ್ಕೆ ಮುಟ್ಟಿದೆ. 

ಬಿಎಸ್‌ಇಯಲ್ಲಿ ಮೂರು ದಿನಗಳ ವಹಿವಾಟಿನಲ್ಲಿ ಶೇ 8.27ರಷ್ಟು ಷೇರಿನ ಮೌಲ್ಯ ಇಳಿದಿದೆ. 

ಐಟಿಸಿ ಷೇರಿನ ಮೌಲ್ಯವೂ ಇಳಿಕೆ: ಐಟಿಸಿ ಷೇರಿನ ಮೌಲ್ಯ ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಕ್ರಮವಾಗಿ ಶೇ 1.89 ಮತ್ತು ಶೇ 1.84ರಷ್ಟು ಇಳಿದಿದೆ. ಷೇರಿನ ಬೆಲೆ ಕ್ರಮವಾಗಿ ₹409.50 ಮತ್ತು ₹409.75ಕ್ಕೆ ಮುಟ್ಟಿದೆ.

ಟಿಸಿಎಸ್‌ಗೆ ₹45497 ಕೋಟಿ ನಷ್ಟ

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ (ಟಿಸಿಎಸ್‌) 2.3 ಕೋಟಿ (ಶೇ 0.65ರಷ್ಟು) ಈಕ್ವಿಟಿ ಷೇರುಗಳ ಮಾರಾಟಕ್ಕೆ ಪ್ರವರ್ತಕ ಕಂಪನಿಯಾದ ಟಾಟಾ ಸನ್ಸ್‌ ಮುಂದಾಗಿರುವ ಬೆನ್ನಲ್ಲೇ ಕಂಪನಿಯ ಷೇರಿನ ಮೌಲ್ಯ ಶೇ 4ಕ್ಕಿಂತಲೂ ಹೆಚ್ಚು ಇಳಿಕೆಯಾಗಿದೆ. ಬಿಎಸ್‌ಇಯಲ್ಲಿ ಶೇ 4.03 ಮತ್ತು ಎನ್‌ಎಸ್‌ಇಯಲ್ಲಿ ಷೇರಿನ ಮೌಲ್ಯ ಶೇ 4.37ರಷ್ಟು ಕುಸಿದಿದೆ.

ಪ್ರತಿ ಷೇರಿನ ಬೆಲೆ ಕ್ರಮವಾಗಿ ₹3977.55 ಮತ್ತು ₹3977ಕ್ಕೆ ಮುಟ್ಟಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ ಒಂದೇ ದಿನ ₹45497 ಕೋಟಿ ಕರಗಿದೆ. ಕಂಪನಿಯ ಒಟ್ಟು ಎಂ–ಕ್ಯಾಪ್‌ ₹14.54 ಲಕ್ಷ ಕೋಟಿ ಆಗಿದೆ. ಬ್ಲಾಕ್‌ಡೀಲ್‌ನಲ್ಲಿ ಟಿಸಿಎಸ್‌ನ ಷೇರುಗಳನ್ನು ಮಾರಾಟ ಮಾಡಲು ಟಾಟಾ ಸನ್ಸ್‌ ಮುಂದಾಗಿದ್ದು ಪ್ರತಿ ಷೇರಿಗೆ ₹4001 ಬೆಲೆ ನಿಗದಿಪಡಿಸಿದೆ. ಅಂದರೆ ಪ್ರತಿ ಷೇರಿಗೆ ಶೇ 3.65ರಷ್ಟು ರಿಯಾಯಿತಿ ಪ್ರಕಟಿಸಿದೆ. ಈ ಷೇರುಗಳ ಮಾರಾಟದ ಒಟ್ಟು ಮೊತ್ತ ₹9 ಸಾವಿರ ಕೋಟಿ ಆಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT