ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಯಲ್ಲಿ ಬಿಗಿಗೊಳ್ಳುತ್ತಿದೆ ದೇಶಿ ಹೂಡಿಕೆದಾರರ ಹಿಡಿತ

Published 22 ನವೆಂಬರ್ 2023, 12:55 IST
Last Updated 22 ನವೆಂಬರ್ 2023, 12:55 IST
ಅಕ್ಷರ ಗಾತ್ರ

ಭಾರತದ ಬಂಡವಾಳ ಮಾರುಕಟ್ಟೆಯಲ್ಲಿ 1991–92ರಿಂದ ವಿದೇಶಿ ಬಂಡವಾಳ ಹೂಡಿಕೆಗೆ (ಎಫ್‌ಪಿಐ) ಅವಕಾಶ ಕಲ್ಪಿಸಲಾಯಿತು. ಅಲ್ಲಿಂದಲೂ ವಿದೇಶಿ ಹೂಡಿಕೆದಾರರು ಭಾರತದ ಷೇರುಪೇಟೆಯ ದಿಕ್ಕನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ. ವಿದೇಶಿ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡಲು ಆರಂಭಿಸುತ್ತಿದ್ದಂತೆಯೇ ಮಾರುಕಟ್ಟೆಯು ತೀವ್ರ ಕುಸಿತಕ್ಕೆ ಒಳಗಾಗುತ್ತಿತ್ತು. ಆದರೆ, ಈಚೆಗೆ ಮಾರುಕಟ್ಟೆಯ ಚಿತ್ರಣದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ದೇಶಿ ಹೂಡಿಕೆದಾರರ (ಸಾಂಸ್ಥಿಕ ಮತ್ತು ವೈಯಕ್ತಿಕ)  ಭಾಗವಹಿಸುವಿಕೆ ಹೆಚ್ಚಾಗುತ್ತಿದ್ದು, ಎಫ್‌ಪಿಐನಿಂದ ಆಗುವ ನಕಾರಾತ್ಮಕ ಪರಿಣಾಮವನ್ನು ನಿಯಂತ್ರಿಸುವ ಮಟ್ಟಿಗೆ ದೇಶಿ ಬಂಡವಾಳ ಹೂಡಿಕೆಯು ಷೇರುಪೇಟೆಯಲ್ಲಿ ಆಗುತ್ತಿದೆ.

ದೇಶಿ ಹೂಡಿಕೆದಾರರು ಹೆಚ್ಚು ಪ್ರಬುದ್ಧತೆಯಿಂದ ವರ್ತಿಸುತ್ತಿದ್ದು, ಬಂಡವಾಳ ಮಾರುಕಟ್ಟೆಯಲ್ಲಿ ಮುಖ್ಯ ಭೂಮಿಕೆ ನಿಭಾಯಿಸಲು ಆರಂಭಿಸಿರುವುದು ಆರೋಗ್ಯಕರ ಮತ್ತು ಅಪೇಕ್ಷಣೀಯ ಬೆಳವಣಿಗೆ ಆಗಿದೆ. ಹಿಂದಿನ ತಲೆಮಾರಿನವರು ಬ್ಯಾಂಕ್‌ ಠೇವಣಿಗಳಲ್ಲಿ ಮತ್ತು ಚಿನ್ನದ ಮೇಲಿನ ಹೂಡಿಕೆಯನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ, ಯುವ ಪೀಳಿಗೆಯು ಈಕ್ವಿಟಿ ಮೆಲಿನ ಹೆಚ್ಚಾಗಿ ಹಣ ತೊಡಗಿಸುತ್ತಿದೆ. ಡಿ–ಮ್ಯಾಟ್‌ ಖಾತೆಗಳ ಸಂಖ್ಯೆಯ 2020ರ ಏಪ್ರಿಲ್‌ನಲ್ಲಿ ₹4.09 ಕೋಟಿ ಇದ್ದಿದ್ದು 2023ರ ಅಕ್ಟೋಬರ್‌ನಲ್ಲಿ ₹12.97 ಕೋಟಿಗೆ ಏರಿಕೆ ಕಂಡಿದೆ. ಮ್ಯೂಚುವಲ್ ಫಂಡ್ ಉದ್ಯಮದ ನಿರ್ವಹಣಾ ಸಂಪತ್ತು ಮೌಲ್ಯವು 2012ರ ನವೆಂಬರ್‌ನಲ್ಲಿ ₹7.93 ಲಕ್ಷ ಕೋಟಿಯಷ್ಟು ಇದ್ದಿದ್ದು 2023ರ ಅಕ್ಟೋಬರ್‌ನಲ್ಲಿ ₹46.7 ಲಕ್ಷ ಕೋಟಿಗೆ ಏರಿಕೆ ಆಗಿದೆ. 11 ವರ್ಷಗಳಲ್ಲಿ ಸರಿಸುಮಾರು ಆರು ಪಟ್ಟು ಬೆಳವಣಿಗೆ ಕಂಡುಬಂದಿದೆ. ನ್ಯಾಷನಲ್‌ ಪೆನ್ಶನ್ ಫಂಡ್‌ ಮತ್ತು ವಿಮಾ ಕಂಪನಿಗಳಲ್ಲಿ ಹೂಡಿಕೆಯೂ ಗಣನೀಯವಾಗಿ ಹೆಚ್ಚಾಗುತ್ತಿದೆ.

ಈ ಬೆಳವಣಿಗೆಗಳು ದೇಶಿ ಹೂಡಿಕೆದಾರರನ್ನು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವ ಪ್ರಮುಖ ಶಕ್ತಿಯಾಗಿ ರೂಪಿಸುತ್ತಿವೆ. ಹೀಗಾಗಿ ಮಾರುಕಟ್ಟೆಯ ದಿಕ್ಕನ್ನು ನಿರ್ಧರಿಸುವಲ್ಲಿ ‘ಎಫ್‌ಪಿಐ’ ಪ್ರಭಾವವು ಕಡಿಮೆ ಆಗುತ್ತಿದೆ. ವಿದೇಶಿ ಹೂಡಿಕೆದಾರರು 2021ರಲ್ಲಿ ₹54,563 ಕೋಟಿ ಮತ್ತು 2022ರಲ್ಲಿ ₹1.45 ಲಕ್ಷ ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ಧಾರೆ. ಇಷ್ಟು ಪ್ರಮಾಣದಲ್ಲಿ ಅವರು ಮಾರಾಟ ಮಾಡಿದ್ದರು ಸಹ ಷೇರುಪೇಟೆ ಮೇಲೆ ತೀವ್ರ ಪರಿಣಾಮ ಉಂಟಾಗಿಲ್ಲ. ಈಚಿನ ಮಾರುಕಟ್ಟೆಯ ಚಲನೆಯನ್ನೇ ಗಮನಿಸೋಣ; ಆಗಸ್ಟ್‌, ಸೆಪ್ಟೆಂಬರ್‌, ಅಕ್ಟೋಬರ್‌ ತಿಂಗಳಿನಲ್ಲಿ ಮತ್ತು ನವೆಂಬರ್‌ 15ರವರೆಗಿನ ವಹಿವಾಟಿನಲ್ಲಿ ಒಟ್ಟು ₹83,422 ಕೋಟಿ ಮೌಲ್ಯದ ಷೇರುಗಳನ್ನು ವಿದೇಶಿ ಹೂಡಿಕೆದಾರರು ಮಾರಾಟ ಮಾಡಿದ್ದಾರೆ. ಇದೇ ಅವಧಿಯಲ್ಲಿ ದೇಶಿ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ₹77,995 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸುವ ಮೂಲಕ ಎಫ್‌ಪಿಐ ಮಾರಾಟದಿಂದ ಷೇರುಪೇಟೆ ಕುಸಿತ ಕಾಣುವುದನ್ನು ತಪ್ಪಿಸಿದ್ದಾರೆ. ಸಿರಿವಂತರು (ಎಚ್‌ಎನ್‌ಐ) ಮತ್ತು ಚಿಲ್ಲರೆ ಹೂಡಿಕೆದಾರರೂ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಿದ್ದಾರೆ. ಈ ಕಾರಣದಿಂದಾಗಿಯೇ ನಿಫ್ಟಿಯು ಆಗಸ್ಟ್‌ನಿಂದ ನವೆಂಬರ್ ಮಧ್ಯಭಾಗದವರೆಗೂ 19,600ರ ಮಟ್ಟವನ್ನು ಕಾಯ್ದುಕೊಳ್ಳುವಂತೆ ಆಗಿದೆ.

ದೇಶಿ ಮತ್ತು ವಿದೇಶಿ ಹೂಡಿಕೆದಾರರು ಭಿನ್ನ ಕಾರ್ಯತಂತ್ರ ಅನುಸರಿಸುತ್ತಿದ್ದಾರೆ. ವಿದೇಶಿ ಹೂಡಿಕೆದಾರರು ವಿವಿಧ ವಲಯಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಆದರೆ, ದೇಶಿ ಹೂಡಿಕೆದಾರರು ಈಕ್ವಿಟಿ ಅದರಲ್ಲಿಯೂ ಮುಖ್ಯವಾಗಿ ಡೆಡ್‌ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಅಮೆರಿಕದ ಬಾಂಡ್‌ ಗಳಿಕೆ ಹೆಚ್ಚಾದರೆ, ಡಾಲರ್‌ ಮೌಲ್ಯ ಏರಿಕೆ ಕಂಡರೆ ಅಥವಾ ಯಾವುದೇ ಬಾಹ್ಯ ಅಪಾಯ ಎದುರಾದರೆ ಅಂತಹ ಸಂದರ್ಭಗಳಲ್ಲಿ ವಿದೇಶಿ ಬಂಡವಾಳ ಹಿಂತೆಗೆತ ಆಗುತ್ತದೆ. ದೇಶಿ ಹೂಡಿಕೆಯು ಬಾಹ್ಯ  ಬೆಳವಣಿಗೆಗಳಿಂದ ಹೆಚ್ಚಿನ ಪ್ರಭಾವಕ್ಕೆ ಒಳಗಾಗುವುದಿಲ್ಲ. ಇದು ದೇಶಿ ಹೂಡಿಕೆದಾರರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ.

ಕಳೆದ ಕೆಲವು ತಿಂಗಳುಗಳಲ್ಲಿ ವಿದೇಶಿ ಹೂಡಿಕೆದಾರರು ನಿರಂತರವಾಗಿ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ದೊಡ್ಡ ಖಾಸಗಿ ಬ್ಯಾಂಕ್‌ಗಳ ಷೇರುಗಳ ಮೌಲ್ಯ ಇಳಿಮುಖವಾಗಿದೆ. ಎಫ್‌ಪಿಐ ಹೊಂದಿರುವ ಷೇರುಗಳಲ್ಲಿ ಬ್ಯಾಂಕಿಂಗ್ ವಲಯದ ಷೇರುಗಳ ಪಾಲೇ ಹೆಚ್ಚಿಗೆ ಇದೆ. ತಮ್ಮ ಬಳಿ ಒಟ್ಟು ₹52.12 ಲಕ್ಷ ಕೋಟಿ ಮೌಲ್ಯದ ಸಂಪತ್ತು ಹೊಂದಿದ್ದು, ಅದರಲ್ಲಿ ಬ್ಯಾಂಕಿಂಗ್ ವಲಯದ ಪಾಲು ₹17.01 ಲಕ್ಷ ಕೋಟಿ ಮೌಲ್ಯದಷ್ಟು ಇದೆ. ಅಮೆರಿಕದ ಬಾಂಡ್‌ ಗಳಿಕೆ ಹೆಚ್ಚಾಗುತ್ತಿರುವುರಿಂದ ವಿದೇಶಿ ಹೂಡಿಕೆದಾರರು ಭಾರತದಲ್ಲಿ ಷೇರುಗಳನ್ನು ಮಾರಾಟ ಮಾಡಲು ಒತ್ತು ನೀಡಿದ್ದಾರೆ. ಆದರೆ, ಬ್ಯಾಂಕಿಂಗ್ ವಲಯದ ಲಾಭವು ಉತ್ತಮವಾಗಿದೆ. ಸಾಲ ನೀಡಿಕೆ ಸಾಮರ್ಥ್ಯ ವೃದ್ಧಿಸಿದ್ದು, ಒಟ್ಟು ಸ್ಥಿತಿಯು ಸುಧಾರಿಸಿದೆ. ಅಂತೆಯೇ ಐ.ಟಿ.ಯಿಂದಲೂ ವಿದೇಶಿ ಹೂಡಿಕೆದಾರರು ಬಂಡವಾಳ ಹಿಂಪಡೆಯುತ್ತಿದ್ದಾರೆ. ತಾಳ್ಮೆಯಿಂದ ವರ್ತಿಸುವ ಹೂಡಿಕೆದಾರರಿಗೆ, ಷೇರುಪೇಟೆಯಲ್ಲಿ ಲಭ್ಯವಾಗುವ ಅವಕಾಶಗಳ ಪ್ರಯೋಜನ ಪಡೆದುಕೊಳ್ಳಲು ಇದು ಸೂಕ್ತ ಸಂದರ್ಭ ಆಗಿದೆ.

ಲೇಖಕ: ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT