ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಡವಾಳದ ಹೊರಹರಿವು ಹೆಚ್ಚಳ: ಮೂರು ದಿನದ ಗೂಳಿ ಓಟಕ್ಕೆ ತಡೆ

Published 15 ಮೇ 2024, 15:10 IST
Last Updated 15 ಮೇ 2024, 15:10 IST
ಅಕ್ಷರ ಗಾತ್ರ

ಮುಂಬೈ: ಸತತ ಮೂರು ವಹಿವಾಟು ದಿನಗಳಲ್ಲಿ ಏರಿಕೆ ಕಂಡಿದ್ದ ಷೇರು ಸೂಚ್ಯಂಕಗಳು ಬುಧವಾರ ಇಳಿಕೆ ಕಂಡಿವೆ.

ವಿದೇಶಿ ಸಾಂಸ್ಥಿಕ ಬಂಡವಾಳದ ಹೊರಹರಿವು ಹೆಚ್ಚಳ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಟಿಸಿಎಸ್‌ ಕಂಪನಿಯ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಸೂಚ್ಯಂಕಗಳು ಕುಸಿತ ದಾಖಲಿಸಿವೆ. 

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 117 ಅಂಶ ಇಳಿಕೆ ಕಂಡು, 72,987 ಅಂಶಗಳಲ್ಲಿ ಸ್ಥಿರಗೊಂಡಿತು. ದಿನದ ವಹಿವಾಟಿನ ಒಂದು ಸಂದರ್ಭದಲ್ಲಿ 281 ಅಂಶ ಇಳಿಕೆಯಾಗಿತ್ತು. 

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 17 ಅಂಶ ಇಳಿಕೆ ಕಂಡು, 22,200 ಅಂಶಗಳಲ್ಲಿ ವಹಿವಾಟನ್ನು ಮುಕ್ತಾಯಗೊಂಡಿತು. 

ಸೆನ್ಸೆಕ್ಸ್‌ ಗುಚ್ಛದಲ್ಲಿನ ಟಾಟಾ ಮೋಟರ್ಸ್‌, ಏಷ್ಯನ್‌ ಪೇಂಟ್ಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಜೆಎಸ್‌ಡಬ್ಲ್ಯು ಸ್ಟೀಲ್‌, ಹಿಂದುಸ್ತಾನ್‌ ಯೂನಿಲಿವರ್‌, ನೆಸ್ಲೆ ಇಂಡಿಯಾ ಮತ್ತು ಟೈಟನ್‌ ಕಂಪನಿಯ ಷೇರಿನ ಮೌಲ್ಯವು ಕುಸಿದಿದೆ.

ಭಾರ್ತಿ ಏರ್‌ಟೆಲ್‌, ಪವರ್ ಗ್ರಿಡ್‌, ಮಹೀಂದ್ರ ಆ್ಯಂಡ್‌ ಮಹೀಂದ್ರ, ಎಲ್‌ ಆ್ಯಂಡ್‌ ಟಿ, ಎಚ್‌ಸಿಎಲ್‌ ಟೆಕ್ನಾಲಜೀಸ್‌ ಷೇರಿನ ಮೌಲ್ಯ ಏರಿಕೆಯಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲದ ಬೆಲೆಯು ಶೇ 0.21ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರಲ್‌ಗೆ 82.55 ಡಾಲರ್‌ ಆಗಿದೆ.‌

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಂಗಳವಾ‌ರದ ವಹಿವಾಟಿನಲ್ಲಿ ಒಟ್ಟು 4,065 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಷೇರುಪೇಟೆಯ ಅಂಕಿಅಂಶಗಳು ತಿಳಿಸಿವೆ.

‘ಲೋಕಸಭಾ ಚುನಾವಣಾ ಫಲಿತಾಂಶದ ಅನಿಶ್ಚಿತತೆಯು ಹೂಡಿಕೆ ಮೇಲೆ ಪರಿಣಾಮ ಬೀರಿದೆ. ಮತ್ತೊಂದೆಡೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರುಗಳ ಮಾರಾಟ ಮುಂದುವರಿದಿದೆ. ದೇಶೀಯ ಹೂಡಿಕೆದಾರರು ಆಯ್ದ ಷೇರುಗಳ ಖರೀದಿಯತ್ತ ಚಿತ್ತ ನೆಟ್ಟಿದ್ದಾರೆ. ಇದರಿಂದ ದೇಶದ ಷೇರುಪೇಟೆಗಳು ಇಳಿಕೆ ಕಂಡಿವೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವಿಸಸ್‌ನ (ಸಂಶೋಧನಾ ವಿಭಾಗ) ಮುಖ್ಯಸ್ಥ ವಿನೋದ್‌ ನಾಯರ್‌ ತಿಳಿಸಿದ್ದಾರೆ.

ಎಲ್‌ಐಸಿ ಎಂ–ಕ್ಯಾಪ್‌ಗೆ ₹37 ಸಾವಿರ ಕೋಟಿ ಸೇರ್ಪಡೆ

ನವದೆಹಲಿ (ಪಿಟಿಐ): ಎಲ್‌ಐಸಿ ಷೇರಿನ ಮೌಲ್ಯವು ಶೇ 6ರಷ್ಟು ಏರಿಕೆಯಾಗಿದ್ದು ಒಂದೇ ದಿನ ಮಾರುಕಟ್ಟೆ ಮೌಲ್ಯಕ್ಕೆ (ಎಂ–ಕ್ಯಾಪ್) ₹37159 ಕೋಟಿ ಸೇರ್ಪಡೆಯಾಗಿದೆ. ಸಾರ್ವಜನಿಕರ ಷೇರು‍ ಪಾಲು ಹೆಚ್ಚಳಕ್ಕೆ ಸೆಬಿ ಹೆಚ್ಚುವರಿ ಕಾಲಾವಕಾಶ ನೀಡಿರುವುದೇ ಈ ಏರಿಕೆಗೆ ಕಾರಣವಾಗಿದೆ. 

ಬಿಎಸ್‌ಇಯಲ್ಲಿ ಷೇರಿನ ಮೌಲ್ಯ ಶೇ 6.31ರಷ್ಟು ಏರಿಕೆಯಾಗಿದ್ದು ಪ್ರತಿ ಷೇರಿನ ಬೆಲೆ ₹989.80ಕ್ಕೆ ತಲುಪಿದೆ. ಎನ್‌ಎಸ್‌ಇಯಲ್ಲಿ ಷೇರಿನ ಮೌಲ್ಯದಲ್ಲಿ ಶೇ 6.33ರಷ್ಟು ಏರಿಕೆಯಾಗಿದ್ದು ಪ್ರತಿ ಷೇರಿನ ಬೆಲೆ ₹990ಕ್ಕೆ ಮುಟ್ಟಿದೆ. ಒಟ್ಟು ಎಂ–ಕ್ಯಾಪ್‌ ₹6.26 ಲಕ್ಷ ಕೋಟಿ ಆಗಿದೆ.

ಚಿನ್ನ ₹450 ಬೆಳ್ಳಿ ₹900 ಏರಿಕೆ

ನವದೆಹಲಿ (ಪಿಟಿಐ): ಇಲ್ಲಿನ ಚಿನಿವಾರ ಪೇಟೆಯಲ್ಲಿ ಬುಧವಾರ ಹಳದಿ ಲೋಹ ಹಾಗೂ ಬೆಳ್ಳಿ ಧಾರಣೆಯಲ್ಲಿ ಏರಿಕೆಯಾಗಿದೆ. ಚಿನ್ನದ ದರ 10 ಗ್ರಾಂಗೆ ₹450 ಹೆಚ್ಚಳವಾಗಿದ್ದು ₹73400ಕ್ಕೆ ತಲುಪಿದೆ. ಬೆಳ್ಳಿ ಧಾರಣೆಯು ಕೆ.ಜಿಗೆ ₹900 ಏರಿಕೆಯಾಗಿದ್ದು ₹86900ಕ್ಕೆ ಮುಟ್ಟಿದೆ.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ವಹಿವಾಟು ಸಕಾರಾತ್ಮಕವಾಗಿ ನಡೆದಿದೆ. ಇದು ದೇಶೀಯ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದ್ದು ದರ ಏರಿಕೆಯಾಗಿದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT