ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಷೇರುಪೇಟೆ: ಉತ್ತಮ ಗಳಿಕೆ ಕಂಡ ಷೇರುಪೇಟೆ ಸೂಚ್ಯಂಕಗಳು

Published 4 ಫೆಬ್ರುವರಿ 2024, 19:14 IST
Last Updated 4 ಫೆಬ್ರುವರಿ 2024, 19:14 IST
ಅಕ್ಷರ ಗಾತ್ರ

ಸತತ ಎರಡು ವಾರಗಳಿಂದ ಕುಸಿತದ ಹಾದಿಯಲ್ಲಿದ್ದ ಷೇರುಪೇಟೆ ಸೂಚ್ಯಂಕಗಳು ಗಳಿಕೆಯ ಲಯಕ್ಕೆ ಮರಳಿವೆ. ಫೆಬ್ರುವರಿ 2ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಉತ್ತಮ ಗಳಿಕೆ ಕಂಡಿವೆ.

72,085 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ
ಶೇ 2ರಷ್ಟು ಗಳಿಸಿಕೊಂಡಿದೆ. 21,853 ಅಂಶಗಳಲ್ಲಿ ವಹಿವಾಟು ಮುಗಿಸಿದ ನಿಫ್ಟಿ ಶೇ 2.34ರಷ್ಟು ಜಿಗಿದಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಸಕಾರಾತ್ಮಕತೆ, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ (ಐಎಂಎಫ್) ಭಾರತದ ಜಿಡಿಪಿ ಬೆಳವಣಿಗೆ ಗುರಿ ಹೆಚ್ಚಳ, ಬಡ್ಡಿದರ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಅಮೆರಿಕದ ಫೆಡರಲ್ ಬ್ಯಾಂಕ್, ಮಧ್ಯಂತರ ಬಜೆಟ್‌ಗೆ ಸಿಕ್ಕ ಉತ್ತಮ ಪ್ರತಿಕ್ರಿಯೆ, ತ್ರೈಮಾಸಿಕ ಫಲಿತಾಂಶಗಳಲ್ಲಿ ನಿರೀಕ್ಷಿತ ಗಳಿಕೆ ಸೇರಿ ಹಲವು ಅಂಶಗಳು ಮಾರುಕಟ್ಟೆ ಪುಟಿದೇಳಲು ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 11.5, ಅನಿಲ ಮತ್ತು ತೈಲ ಸೂಚ್ಯಂಕ ಶೇ 9, ಎನರ್ಜಿ ಸೂಚ್ಯಂಕ ಶೇ 8ರಷ್ಟು ಗಳಿಸಿಕೊಂಡಿವೆ. ಉಳಿದಂತೆ ನಿಫ್ಟಿ ಲೋಹ, ಆಟೊ ಮತ್ತು ರಿಯಲ್ ಎಸ್ಟೇಟ್ ತಲಾ ಶೇ 4ರಷ್ಟು ಹೆಚ್ಚಳ ಕಂಡಿವೆ. ಕಳೆದ ವಾರ ದೇಶೀಯ ಸಾಂಸ್ಥಿಕ ಹೂಡಿಕೆದಾರರು ₹10,102.62 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹2,008.68 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್, ಭಾರತ್‌ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಪವರ್ ಗ್ರಿಡ್ ಕಾರ್ಪೊರೇಷನ್, ಬ್ಯಾಂಕ್ ಆಫ್ ಬರೋಡಾ ಮತ್ತು ಅದಾನಿ ಪೋರ್ಟ್ ಆ್ಯಂಡ್‌ ಸ್ಪೆಷಲ್ ಎಕಾನಾಮಿಕ್ ಜೋನ್ ಗಳಿಕೆ ಕಂಡಿವೆ. ಪೇಟಿಎಂ, ಚೋಳಮಂಡಲಂ ಇನ್ವೆಸ್ಟೆಮೆಂಟ್ ಅಂಡ್ ಫೈನಾನ್ಸ್ ಕಂಪನಿ, ಎಸ್‌ಬಿಐ ಕಾರ್ಡ್ಸ್ ಆ್ಯಂಡ್‌ ಪೇಮೆಂಟ್ಸ್ ಮತ್ತು ಲಾರ್ಸನ್ ಆ್ಯಂಡ್‌ ಟ್ಯೂಬ್ರೋ ಕುಸಿದಿವೆ.

ಮುನ್ನೋಟ: ಈ ವಾರ ಅಶೋಕ್ ಲೇಲ್ಯಾಂಡ್, ಬಜಾಜ್ ಕನ್ಸ್ಯೂಮರ್ ಕೇರ್ ಲಿ., ಬಜಾಜ್ ಎಲೆಕ್ಟ್ರಿಕಲ್ಸ್ ಲಿ., ಏರ್‌ಟೆಲ್, ಬಾರ್ಬಿಕ್ಯೂ ನೇಷನ್ ಹಾಸ್ಪಿಟಾಲಿಟಿ, ಐಡಿಯಾ ಫೋರ್ಜ್ ಟೆಕ್ನಾಲಜಿ, ಸಿಎಎಂಎಸ್, ಗೋ ಕಲರ್ಸ್, ಗೋದ್ರೇಜ್ ಪ್ರಾಪರ್ಟೀಸ್‌, ಜೆಕೆ ಟೈರ್, ನೈಕಾ, ಟಿಟಿಕೆ ಪ್ರೆಸ್ಟೀಜ್, ಅಪೋಲೋ ಟೈರ್, ಜೆಕೆ ಪೇಪರ್, ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್, ಲುಪಿನ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ವರದಿ ಪ್ರಕಟಿಸಲಿವೆ. ಜಾಗತಿಕ ವಿದ್ಯಮಾನಗಳು ಹಾಗೂ ದೇಶೀಯ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.


ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT