ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1 ಸಾವಿರ ದಾಟಿದ ಎಲ್‌ಐಸಿ ಷೇರು

Published 5 ಫೆಬ್ರುವರಿ 2024, 15:39 IST
Last Updated 5 ಫೆಬ್ರುವರಿ 2024, 15:39 IST
ಅಕ್ಷರ ಗಾತ್ರ

ನವದೆಹಲಿ/ ಮುಂಬೈ: ಏಷ್ಯಾ ಮತ್ತು ಯುರೋಪಿಯನ್‌ ಷೇರು ಮಾರುಕಟ್ಟೆಗಳಲ್ಲಿ ನಡೆದ ಇಳಿಮುಖ ವಹಿವಾಟು ಸೇರಿದಂತೆ ರಿಲಯನ್ಸ್‌ ಇಂಡಸ್ಟ್ರೀಸ್‌, ಭಾರ್ತಿ ಏರ್‌ಟೆಲ್‌ ಮತ್ತು ಮಾರುತಿ ಕಂಪನಿಯ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಷೇರುಪೇಟೆಯಲ್ಲಿ ಸೋಮವಾರ ಸೂಚ್ಯಂಕಗಳು ಇಳಿಕೆ ದಾಖಲಿಸಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 354 ಅಂಶ ಇಳಿಕೆಯಾಗಿ 71,731ರಲ್ಲಿ ವಹಿವಾಟು ಮುಕ್ತಾಯವಾಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 82 ಅಂಶ ಕಡಿಮೆಯಾಗಿ, 21,771ರಲ್ಲಿ ಅಂತ್ಯಗೊಂಡಿತು.

ಎಲ್‌ಐಸಿ ಷೇರಿನ ಬೆಲೆ ಏರಿಕೆ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರಿನ ಮೌಲ್ಯ ಶೇ 6ರಷ್ಟು ಹೆಚ್ಚಾಗಿದೆ. ಪ್ರತಿ ಷೇರಿನ ಬೆಲೆ ಮೊದಲ ಬಾರಿಗೆ ₹1 ಸಾವಿರ ದಾಟಿದೆ.

ಬಿಎಸ್‌ಇಯಲ್ಲಿ ಷೇರಿನ ಮೌಲ್ಯ ಶೇ 5.90ರಷ್ಟು ಹೆಚ್ಚಾಗಿದ್ದು, ಪ್ರತಿ ಷೇರಿನ ಬೆಲೆ ₹1,000.35ಕ್ಕೆ ತಲುಪಿದೆ. ದಿನದ ಆರಂಭಿಕ ವಹಿವಾಟಿನಲ್ಲಿ ಪ್ರತಿ ಷೇರಿನ ಬೆಲೆಯು 52 ವಾರಗಳ ಗರಿಷ್ಠ ಮಟ್ಟವಾದ ₹1,027.95ಕ್ಕೆ ತಲುಪಿತ್ತು.

ಎನ್‌ಎಸ್‌ಇಯಲ್ಲಿಯೂ ಷೇರಿನ ಮೌಲ್ಯ ಶೇ 5.64ರಷ್ಟು ಏರಿಕೆಯಾಗಿದ್ದು, ಪ್ರತಿ ಷೇರಿನ ಬೆಲೆ ₹998.85 ಆಗಿದೆ. ಆರಂಭಿಕ ವಹಿವಾಟಿನಲ್ಲಿ ಷೇರಿನ ಮೌಲ್ಯ ಶೇ 8.73ರಷ್ಟು ಏರಿಕೆಯಾಗಿ, ಪ್ರತಿ ಷೇರಿನ ಬೆಲೆಯು  52 ವಾರಗಳ ಗರಿಷ್ಠ ಮಟ್ಟವಾದ ₹1,028ಕ್ಕೆ ತಲು‍ಪಿತ್ತು.

ಎಲ್‌ಐಸಿಯ ಮಾರುಕಟ್ಟೆ ಮೌಲ್ಯಕ್ಕೆ ಒಂದೇ ದಿನ ₹35,230 ಕೋಟಿ ಸೇರ್ಪಡೆಯಾಗಿದೆ. ಕಂಪನಿಯ ಒಟ್ಟು ಮೌಲ್ಯ ₹6.32 ಲಕ್ಷ ಕೋಟಿಗೆ ತಲುಪಿದೆ.

ಕಳೆದ ತಿಂಗಳು ಸರ್ಕಾರಿ ಸ್ವಾಮ್ಯದ ಕಂಪನಿಗಳ ಪೈಕಿ ಮಾರುಕಟ್ಟೆ ಮೌಲ್ಯಮಾಪನದ ಶ್ರೇಯಾಂಕದಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವನ್ನು ಎಲ್‌ಐಸಿ ಮೀರಿಸಿತ್ತು.

ಟಾಟಾ ಷೇರು ಏರಿಕೆ: ಟಾಟಾ ಮೋಟರ್ಸ್‌ ಷೇರುಗಳು ಶೇ 6ರಷ್ಟು ಏರಿಕೆಯಾಗಿವೆ. ಕಂಪನಿಯ ಮಾರುಕಟ್ಟೆ ಮೌಲ್ಯಕ್ಕೆ ಒಂದೇ ದಿನ ₹15,949 ಕೋಟಿ ಸೇರ್ಪಡೆಯಾಗಿದೆ. ಕಂಪನಿಯ ಒಟ್ಟು ಮೌಲ್ಯ ₹3.07 ಲಕ್ಷ ಕೋಟಿ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT