ಮಂಗಳವಾರ, ಆಗಸ್ಟ್ 16, 2022
22 °C

ಬಂಡವಾಳ ಮಾರುಕಟ್ಟೆ: ಮಾರುಕಟ್ಟೆ ಎದ್ದಿರುವಾಗ ನೀವು ಬೀಳದಿರಿ!

ಅವಿನಾಶ್ ಕೆ.ಟಿ. Updated:

ಅಕ್ಷರ ಗಾತ್ರ : | |

2020ರ ಜನವರಿ 14ರಂದು 41,952 ಅಂಶಗಳಲ್ಲಿ ಇದ್ದ ಸೆನ್ಸೆಕ್ಸ್ ಕೋವಿಡ್-19 ಪ್ರಕರಣಗಳು ಜಾಗತಿಕ ವಾಗಿ ಹೆಚ್ಚಳವಾಗುತ್ತಾ ಸಾಗಿದಂತೆ ಮಾರ್ಚ್ 23ರ ವೇಳೆಗೆ 25,981ಕ್ಕೆ ಕುಸಿಯಿತು. ಅಂದರೆ ಮಾರುಕಟ್ಟೆ ಏಕಾಏಕಿ ಶೇಕಡ 38ರಷ್ಟು ಇಳಿಯಿತು. ಆದರೆ ಡಿಸೆಂಬರ್ 4ರ ವೇಳೆಗೆ 45,079 ಅಂಶಗಳ ಗಡಿ ದಾಟಿರುವ ಸೆನ್ಸೆಕ್ಸ್ ಹೊಸ ದಾಖಲೆ ಬರೆದಿದೆ. ಸತತ ಐದು ವಾರಗಳ ಏರಿಕೆಯನ್ನು ನಿಫ್ಟಿ ಮತ್ತು ಸೆನ್ಸೆಕ್ಸ್ ದಾಖಲಿಸಿವೆ.

ಷೇರುಪೇಟೆಯಲ್ಲೀಗ ಗೂಳಿಯ ಓಟ ಶುರುವಾಗಿದ್ದು ಮತ್ತಷ್ಟು ಹೂಡಿಕೆ ಮಾಡಬೇಕೋ, ಕಾದು ನೋಡುವ ತಂತ್ರ ಅನುಸರಿಸಬೇಕೋ ಎನ್ನುವ ಗೊಂದಲ ಹೂಡಿಕೆದಾರರಲ್ಲಿ ಮೂಡಿದೆ. ಈ ಸಂದರ್ಭದಲ್ಲಿ, ಷೇರು ಮಾರುಕಟ್ಟೆ ಸೂಚ್ಯಂಕ ಗಳ ಏರಿಕೆಗೆ ಅಸಲಿ ಕಾರಣವೇನು? ಸೂಚ್ಯಂಕಗಳು ಏರಿದಾಗ ಹೂಡಿಕೆದಾರರು ಮಾಡುವ ತಪ್ಪು ಗಳೇನು? ಮಧ್ಯಮ ಮತ್ತು ಸಣ್ಣ ಶ್ರೇಣಿಯ (ಮಿಡ್, ಸ್ಮಾಲ್ ಕ್ಯಾಪ್) ಷೇರುಗಳಲ್ಲಿ ಹಣ ತೊಡಗಿಸುವಾಗ ಯಾವ ಅಂಶಗಳು ಗಮನದಲ್ಲಿರಬೇಕು ಎನ್ನುವ ಬಗ್ಗೆ ವಿವರ ಇಲ್ಲಿದೆ.

ಗೂಳಿ ಓಟಕ್ಕೆ ಅಸಲಿ ಕಾರಣಗಳು!

1) ಡಾಲರ್ ಮೌಲ್ಯ ಕುಸಿತ: 2020ರ ಮಾರ್ಚ್ 24ರಂದು ಡಾಲರ್ ಮೌಲ್ಯ ₹ 77.33 ಇತ್ತು. ಡಿಸೆಂ ಬರ್ 4 ರಂದು ಡಾಲರ್ ಮೌಲ್ಯ ₹ 73.80ಕ್ಕೆ ಕುಸಿದಿದೆ. ಡಾಲರ್ ಸೇರಿದಂತೆ ಯಾವುದೇ ದೇಶದ ಕರೆನ್ಸಿ ಮೌಲ್ಯ ಕಳೆದುಕೊಳ್ಳುತ್ತಿದೆ ಎಂದರೆ ಹಣದುಬ್ಬರದ ಜತೆಗೆ ನಿರುದ್ಯೋಗ ಹೆಚ್ಚಳವಾಗಿ ಆರ್ಥಿಕ ಪ್ರಗತಿ ಕುಂಠಿತವಾಗುತ್ತದೆ ಎಂದರ್ಥ. ಅಮೆರಿಕದ ಡಾಲರ್ ಮೌಲ್ಯ ಕುಸಿಯುತ್ತಿರುವುದರಿಂದ ಹೂಡಿಕೆದಾರರು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳತ್ತ ಮುಖ ಮಾಡುತ್ತಾರೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆಯನ್ನು ಹೆಚ್ಚಿಸುತ್ತಲೇ ಇದ್ದಾರೆ. ಅಂದರೆ ಡಾಲರ್ ಮೌಲ್ಯ ಕುಸಿತದ ಲಾಭ ಭಾರತೀಯ ಷೇರುಪೇಟೆಗೆ ದಕ್ಕಿದೆ. ಹೀಗಾಗಿ ಷೇರುಪೇಟೆ ಸೂಚ್ಯಂಕಗಳು ಹೊಸ ದಾಖಲೆಗಳನ್ನು ನಿರ್ಮಿಸುತ್ತಿವೆ.

2) ‌ಸರ್ಕಾರದ ನೀತಿ: 2008ರ ಆರ್ಥಿಕ ಬಿಕ್ಕಟ್ಟಿನ ಸಂದರ್ಭ ಮತ್ತು ಈಗಿನ ಆರ್ಥಿಕ ಹಿಂಜರಿತದ ಸಂದರ್ಭವನ್ನು ಗಣನೆಗೆ ತೆಗೆದುಕೊಂಡು ನೋಡಿದಾಗ ಈಗಿನ ಪರಿಸ್ಥಿತಿಯನ್ನು ಸರ್ಕಾರ ಉತ್ತಮವಾಗಿ ನಿಭಾಯಿಸಿದೆ ಎನ್ನಲು ಅಡ್ಡಿಯಿಲ್ಲ. 2008ರ ಬಿಕ್ಕಟ್ಟಿನ ನಂತರದಲ್ಲಿ 2009ರಿಂದ 2014ರವರೆಗೆ ಹಣದುಬ್ಬರದ ಪ್ರಭಾವ ತೀವ್ರವಾಗಿತ್ತು. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಾಣುತ್ತಲೇ ಇತ್ತು. ಆದರೆ ಸರಿಯಾದ ಆರ್ಥಿಕ ಕ್ರಮಗಳಿಂದಾಗಿ ಸದ್ಯದ ಸ್ಥಿತಿಯಲ್ಲಿ ರೂಪಾಯಿ ಮೌಲ್ಯ ಗಣನೀಯ ಕುಸಿತ ಕಾಣುವ ಸಾಧ್ಯತೆ ಕಡಿಮೆ. ಅನ್ಯ ದೇಶಗಳ ಕರೆನ್ಸಿಗೆ ಹೋಲಿಕೆ ಮಾಡಿ ನೋಡಿದಾಗ ರೂಪಾಯಿ ಈಗಲೂ ಉತ್ತಮ ಸ್ಥಿತಿಯಲ್ಲೇ ಇದೆ. ಕೋವಿಡ್ ನಂತರದಲ್ಲಿ ಆರ್‌ಬಿಐ ರೆಪೊ ದರವನ್ನು ಗಣನೀಯವಾಗಿ ಇಳಿಕೆ ಮಾಡಿರುವುದರಿಂದ ನಗದು ಕೊರತೆ ಎದುರಾಗಿಲ್ಲ. ಅಲ್ಲದೆ ಇತ್ತೀಚಿನ ಹಣಕಾಸು ನೀತಿ ಪ್ರಕಟಿಸುವಾಗಲೂ ಆರ್‌ಬಿಐ ನಗದು ಕೊರತೆಯಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದೆ. ಇವೆಲ್ಲವೂ ಅರ್ಥ ವ್ಯವಸ್ಥೆಯ ಚೇತರಿಕೆಗೆ ಸಕಾರಾತ್ಮಕ ಕಾರಣಗಳಾಗಿರುವುದರಿಂದ ಷೇರುಪೇಟೆ ಸೂಚ್ಯಂಕಗಳು ಪುಟಿದೇಳುತ್ತಿವೆ.

3) ಸರ್ಕಾರದ ಯೋಜನೆಗಳು: ಮಧ್ಯಮ ಮತ್ತು ಸಣ್ಣ ಮಟ್ಟದ ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡಲು ಸರ್ಕಾರ ಸಕಾಲಕ್ಕೆ ಕೆಲ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅತ್ಮನಿರ್ಭರ ಭಾರತ ಘೋಷಣೆ ಮತ್ತು ಉತ್ಪಾದನೆ ಆಧರಿತ ನೆರವು ಯೋಜನೆಗಳು ದೀರ್ಘಾವಧಿಯಲ್ಲಿ ಉತ್ತಮ ಫಲಿತಾಂಶ ನೀಡಲು ಶಕ್ತವಾಗಿವೆ. ಇವು ಉತ್ಪಾದನಾ ವಲಯದ ಜಿಡಿಪಿಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ನೆರವಾಗಲಿವೆ. ಇದಲ್ಲದೆ ಷೇರು ಮಾರುಕಟ್ಟೆಯಲ್ಲಿ ವಿವಿಧ ವಲಯಗಳ ಮಧ್ಯಮ ಮತ್ತು ಸಣ್ಣ ಮಟ್ಟದ ಕಂಪನಿಗಳು (ಮಿಡ್ ಆ್ಯಂಡ್ ಸ್ಮಾಲ್ ಕ್ಯಾಪ್) ಕೂಡ ಗಳಿಕೆಯ ಓಟದಲ್ಲಿವೆ.

ಮೂರು ತಪ್ಪು ಮಾಡಬೇಡಿ:

1) ಹೆಚ್ಚು ಲಾಭ ಮಾಡುವ ಉದ್ದೇಶದಿಂದ ಬೆಲೆ ಜಾಸ್ತಿ ಇರುವ ಉತ್ತಮ ಕಂಪನಿಗಳ ಷೇರುಗಳನ್ನು ಮಾರಾಟ ಮಾಡಿ ಕಡಿಮೆ ಬೆಲೆಗೆ ಸಿಗುವ, ಭವಿಷ್ಯದ ಮುನ್ನೋಟ ಇಲ್ಲದಿರುವ ಷೇರುಗಳನ್ನು ಖರೀದಿಸಬೇಡಿ.

2) ಉದ್ಯಮವೊಂದರ ಹಿನ್ನೆಲೆ ಅರಿಯದೆ ಅಂದಾಜಿನ ಲೆಕ್ಕಾಚಾರದಲ್ಲಿ ಹೂಡಿಕೆ ಮಾಡಬೇಡಿ. ಬೆಕ್ಕು ಮತ್ತು ಹುಲಿ ವೈಜ್ಞಾನಿಕವಾಗಿ ಒಂದೇ ಕುಟುಂಬಕ್ಕೆ ಸೇರಿದ ಪ್ರಾಣಿಗಳಾದರೂ ಅವುಗಳ ಸಾಮರ್ಥ್ಯ ಬೇರೆಯೇ ಎಂಬುದು ಗಮನದಲ್ಲಿರಲಿ.

3) ಹೂಡಿಕೆ ಬೆಲೆ ಮೇಲಿನ ಗಳಿಕೆಯ ಅನುಪಾತ (P E Ratio) ಅಳತೆ ಮಾಡದೆ ಹೂಡಿಕೆ ನಿರ್ಧಾರಕ್ಕೆ ಬರಬೇಡಿ.

ಮಿಡ್, ಸ್ಮಾಲ್ ಕ್ಯಾಪ್ ಆಯ್ಕೆಗೆ ಸೂತ್ರ:

1) ಭವಿಷ್ಯದ ಮುನ್ನೋಟದೊಂದಿಗೆ ಸರಿಯಾದ ಉದ್ದಿಮೆ ನಡೆಸುತ್ತಿರುವ ಕಂಪನಿ ಪರಿಗಣಿಸಿ.

2) ಕಂಪನಿಯ ಆಡಳಿತ ಮಂಡಳಿಯಲ್ಲಿ ಯಾರಿದ್ದಾರೆ ಪರಿಶೀಲನೆ ಮಾಡಿ.

3) ಲೆಕ್ಕಪತ್ರಗಳ ಸರಿಯಾದ ನಿರ್ವಹಣೆಯ ಜತೆಗೆ ಸಾಮಾನ್ಯ ಹೂಡಿಕೆದಾರರ ಬಗ್ಗೆ ಆಡಳಿತ ಮಂಡಳಿಗೆ ಕಾಳಜಿ ಇದೆಯೇ ನೋಡಿ.

ಅರಿತು ಹೂಡಿಕೆ ಮಾಡಿ: ಮ್ಯೂಚುವಲ್ ಫಂಡ್‌ ಅಥವಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಇರುವ ಹಣವನ್ನೆಲ್ಲಾ ಹೂಡಿಕೆ ಮಾಡುವ ಧಾವಂತಕ್ಕೆ ಬೀಳಬಾರದು. ನಾವು ಎಷ್ಟು ರಿಸ್ಕ್ ತೆಗೆದುಕೊಳ್ಳುವುದಕ್ಕೆ ಸಾಧ್ಯ, ಭವಿಷ್ಯದಲ್ಲಿ ನಮ್ಮ ಹಣಕಾಸಿನ ಅಗತ್ಯಗಳೇನು, ಮಾರುಕಟ್ಟೆಯ ದಿಢೀರ್ ಏರಿಳಿತದಿಂದ ನಮ್ಮ ಹೂಡಿಕೆಗೆ ತಾತ್ಕಾಲಿಕ ನಷ್ಟವಾದರೆ ಅದನ್ನು ನಿಭಾಯಿಸಲು ಸಾಧ್ಯವಿದೆಯೇ ಎಂಬಿತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಷೇರುಪೇಟೆಯಲ್ಲಿ ಕಳೆದ ವಾರ ಏನಾಯಿತು?

ಡಿಸೆಂಬರ್ 4ಕ್ಕೆ ಅಂತ್ಯಗೊಂಡ ವಾರದಲ್ಲಿ ಸೆನ್ಸೆಕ್ಸ್ 45,079 ಅಂಶಗಳೊಂದಿಗೆ ವಹಿವಾಟು ಮುಗಿಸಿದ್ದರೆ ನಿಫ್ಟಿ 13,258 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದೆ. ಎರಡೂ ಸೂಚ್ಯಂಕಗಳು ವಾರದ ಅವಧಿಯಲ್ಲಿ ಸರಿಸುಮಾರು ಶೇಕಡ 2ರಷ್ಟು ಗಳಿಕೆ ದಾಖಲಿಸಿವೆ. ನಿಫ್ಟಿ ಮಿಡ್ ಕ್ಯಾಪ್ ಶೇಕಡ 2.4ರಷ್ಟು, ನಿಫ್ಟಿ ಬ್ಯಾಂಕ್ ಶೇ 1ರಷ್ಟು, ಸ್ಮಾಲ್ ಕ್ಯಾಪ್ ಶೇ 2ರಷ್ಟು, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 9ರಷ್ಟು, ಲೋಹ ವಲಯ ಶೇ 8ರಷ್ಟು ಜಿಗಿತ ದಾಖಲಿಸಿವೆ.

ಗಳಿಕೆ–ಇಳಿಕೆ: ಡಿಸೆಂಬರ್ 4ಕ್ಕೆ ಅಂತ್ಯಗೊಂಡ ವಾರದಲ್ಲಿ ಗೇಲ್ ಶೇ 17ರಷ್ಟು, ಒಎನ್‌ಜಿಸಿ ಶೇ 14ರಷ್ಟು, ಹಿಂಡಾಲ್ಕೋ ಶೇ 12ರಷ್ಟು, ಮಾರುತಿ ಸುಜುಕಿ ಶೇ 11ರಷ್ಟು, ಸನ್ ಫಾರ್ಮಾ ಶೇ 11ರಷ್ಟು, ಏಷ್ಯನ್ ಪೇಂಟ್ಸ್ ಶೇ 10ರಷ್ಟು ಮತ್ತು ಯುಪಿಎಲ್ ಶೇ 10ರಷ್ಟು ಗಳಿಕೆ ಕಂಡಿವೆ. ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 4ರಷ್ಟು, ಕೋಟಕ್ ಶೇ 4ರಷ್ಟು ಮತ್ತು ಸೆನ್ಟ್ಲೇ ಇಂಡಿಯಾ ಶೇ 1ರಷ್ಟು ಕುಸಿದಿವೆ,

ಮುನ್ನೋಟ: ಈ ವಾರ ಯುರೋಪ್ ಕೇಂದ್ರೀಯ ಬ್ಯಾಂಕ್ ಹಣಕಾಸು ನೀತಿ ಪ್ರಕಟಿಸಲಿದೆ. ನವೆಂಬರ್‌ನ ಹಣದುಬ್ಬರದ ಅಂಕಿ-ಅಂಶಗಳು ಹೊರಬೀಳಲಿವೆ. ಅಕ್ಟೋಬರ್‌ನ ಕೈಗಾರಿಕಾ ಉತ್ಪಾದನೆಯ ದತ್ತಾಂಶ ಲಭ್ಯವಾಗಲಿದೆ. ಈ ಎಲ್ಲ ಬೆಳವಣಿಗೆಗಳ ಜತೆಗೆ ಕೋವಿಡ್–19ಕ್ಕೆ ಲಸಿಕೆ ವಿಚಾರ, ಜಾಗತಿಕ ಮಾರುಕಟ್ಟೆಗಳಲ್ಲಿನ ಸ್ಥಿತಿಗತಿ ಮುಂತಾದ ಅಂಶಗಳು ಸೂಚ್ಯಂಕಗಳ ಮೇಲೆ ಪ್ರಭಾವ ಬೀರಲಿವೆ.

(ಲೇಖಕ ‘ಇಂಡಿಯನ್‌ಮನಿ.ಕಾಂ’ನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು