ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಸಿಮೆಂಟ್‌ ವಲಯದಲ್ಲಿ ಕೋವಿಡ್‌ ಬಿರುಕು!

ವರ್ಷದಲ್ಲಿ ಶೇ 50ಕ್ಕಿಂತಲೂ ಹೆಚ್ಚು ಲಾಭ ತಂದುಕೊಟ್ಟ ಸಿಮೆಂಟ್‌ ಕಂಪನಿಗಳು
Last Updated 25 ಏಪ್ರಿಲ್ 2021, 15:18 IST
ಅಕ್ಷರ ಗಾತ್ರ

ಕೋವಿಡ್‌ ಸಂಕಷ್ಟದ ನಡುವೆಯೂ ಒಂದು ವರ್ಷದ ಅವಧಿಯಲ್ಲಿ ಷೇರಿನ ಮೌಲ್ಯವನ್ನು ಶೇ 50ಕ್ಕಿಂತಲೂ ಹೆಚ್ಚಿಸಿಕೊಂಡು ಹೂಡಿಕೆದಾರರಿಗೆ ಒಳ್ಳೆಯ ಲಾಭ ತಂದುಕೊಟ್ಟಿದ್ದ ಸಿಮೆಂಟ್‌ ವಲಯದ ಪ್ರಮುಖ ಕಂಪನಿಗಳ ಮೇಲೆ ಮತ್ತೆ ಕೊರೊನಾ ಆತಂಕದ ಕಾರ್ಮೋಡ ಕವಿಯುತ್ತಿದೆ. ದೇಶದಲ್ಲಿ ಕೋವಿಡ್‌ 2ನೇ ಅಲೆಯ ತೀವ್ರತೆಯಿಂದಾಗಿ ನಿರ್ಮಾಣ ಕಾಮಗಾರಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರತೊಡಗಿದ ಬೆನ್ನಲ್ಲೇ ಸಿಮೆಂಟ್‌ ಕಂಪನಿಗಳ ಷೇರಿನ ಮೌಲ್ಯ ಕೆಲ ದಿನಗಳಿಂದ ಕುಸಿಯತೊಡಗಿದೆ.

ಆರ್ಥಿಕತೆ ಚೇತರಿಸಿಕೊಳ್ಳುತ್ತಿದ್ದಂತೆ ದೇಶದಲ್ಲಿ ನಿರ್ಮಾಣ ಕಾಮಗಾರಿಗಳೂ ಮರಳಿ ಹಳಿಗೆ ಬಂದಿದ್ದರಿಂದ ಸಿಮೆಂಟ್‌ ಕಂಪನಿಗಳ ಷೇರಿನ ಮೌಲ್ಯ ಉತ್ತುಂಗಕ್ಕೆ ಏರಿತ್ತು. ಆದರೆ, ಒಂದು ತಿಂಗಳಿಂದ ಕೋವಿಡ್‌ ಎಬ್ಬಿಸುತ್ತಿರುವ ಅಲೆಯು ಷೇರುಪೇಟೆಯಲ್ಲಿ ಸಿಮೆಂಟ್‌ ಕಂಪನಿಗಳ ಬೆಲೆಯಲ್ಲಿ ಮತ್ತೆ ‘ಬಿರುಕು’ ಮೂಡಿಸುವ ಲಕ್ಷಣಗಳು ಕಂಡುಬರುತ್ತಿವೆ.

ಸಿಮೆಂಟ್‌ ಕಂಪನಿಗಳ ಷೇರಿನ ಪಕ್ಷಿನೋಟ
ಸಿಮೆಂಟ್‌ ಕಂಪನಿಗಳ ಷೇರಿನ ಪಕ್ಷಿನೋಟ

ಸಿಮೆಂಟ್‌ ವಲಯದ ‘ದೊಡ್ಡಣ್ಣ’ನಾದ ₹ 1,75,152 ಕೋಟಿ ಮಾರುಕಟ್ಟೆ ಬಂಡವಾಳ ಹೊಂದಿರುವ ‘ಅಲ್ಟ್ರಾಟೆಕ್‌ ಸಿಮೆಂಟ್‌’ ಕಂಪನಿಯ ಷೇರಿನ ಮೌಲ್ಯವು ಏಪ್ರಿಲ್‌ 23ಕ್ಕೆ ವಹಿವಾಟು ಅಂತ್ಯಗೊಂಡಂತೆ ರಾಷ್ಟ್ರೀಯ ಷೇರುಪೇಟೆಯಲ್ಲಿ ಕಳೆದ ಒಂದು ವಾರದಲ್ಲಿ ಶೇ 9.64ರಷ್ಟು ಕುಸಿದಿದೆ. ಒಂದು ತಿಂಗಳ ಅವಧಿಯಲ್ಲಿ ಶೇ 12.55ರಷ್ಟು ಇಳಿದಿದ್ದು, ನಿರ್ಮಾಣ ಕಾಮಗಾರಿಗಳ ಮೇಲೆ ಮತ್ತೆ ಕೋವಿಡ್‌ ಪರಿಣಾಮ ಬೀರಲಿದೆ ಎಂಬ ಹೂಡಿಕೆದಾರರ ಆತಂಕವೇ ಇದಕ್ಕೆ ಕಾರಣ ಎನ್ನಲಾಗಿದೆ.

ಅಲ್ಟ್ರಾಟೆಕ್‌ ಸಿಮೆಂಟ್‌ ಕಂಪನಿಯ ಷೇರಿನ ಬೆಲೆಯು ಕಳೆದ ಮೂರು ತಿಂಗಳಲ್ಲಿ ಶೇ 9.63ರಷ್ಟು ಮಾತ್ರ ಹೆಚ್ಚಾಗಿದೆ. ಒಂದು ವರ್ಷದ ಅವಧಿಯಲ್ಲಿ ಶೇ 76.28ರಷ್ಟು ಏರಿಕೆ ಕಂಡಿದೆ. ಮೂರು ವರ್ಷಗಳ ಅವಧಿಯಲ್ಲಿ ಈ ಕಂಪನಿಯ ಷೇರು ಶೇ 46.44ರಷ್ಟು ಗಳಿಕೆಯನ್ನು ಹೂಡಿಕೆದಾರರಿಗೆ ತಂದುಕೊಟ್ಟಿದೆ. 2020ರ ಮೇ 7ರಂದು 52 ವಾರಗಳ ಕನಿಷ್ಠ (₹3,231) ಮಟ್ಟಕ್ಕೆ ಕುಸಿದಿದ್ದ ಈ ಕಂಪನಿಯ ಷೇರು, ಇದೇ ಏಪ್ರಿಲ್‌ 9ರಂದು 52 ವಾರಗಳ ಗರಿಷ್ಠ (₹7,055.95) ಮಟ್ಟವನ್ನು ತಲುಪಿತ್ತು.

ಮಾರುಕಟ್ಟೆ ಬಂಡವಾಳದ ಆಧಾರದಲ್ಲಿ ಎರಡನೇ ಅತಿ ದೊಡ್ಡ (₹ 1,01,409.63 ಕೋಟಿ) ಕಂಪನಿಯಾದ ‘ಶ್ರೀ ಸಿಮೆಂಟ್‌’ನ ಷೇರಿನ ಬೆಲೆಯು ಒಂದು ವಾರದಲ್ಲಿ ಶೇ 8.81ರಷ್ಟು ಕುಸಿದಿದೆ. ಒಂದು ತಿಂಗಳಲ್ಲಿ ಶೇ 0.73ರಷ್ಟು ಮಾತ್ರ ಇಳಿಕೆ ಕಂಡಿದೆ. ಮೂರು ತಿಂಗಳಲ್ಲಿ ಶೇ 18.62ರಷ್ಟು ಹಾಗೂ ಒಂದು ವರ್ಷದ ಅವಧಿಯಲ್ಲಿ ಶೇ 50.24ರಷ್ಟು ಏರಿಕೆಯಾಗಿದೆ. ಈ ಕಂಪನಿಯು ಮೂರು ವರ್ಷಗಳ ಅವಧಿಯಲ್ಲಿ ಹೂಡಿಕೆದಾರರಿಗೆ ಶೇ 64.20ರಷ್ಟು ಗಳಿಕೆಯನ್ನು ತಂದುಕೊಟ್ಟಿದೆ. 2020ರ ಮೇ 18ರಂದು 52 ವಾರಗಳ ಕನಿಷ್ಠ (₹18,000) ಮಟ್ಟಕ್ಕೆ ಕುಸಿದಿದ್ದ ಈ ಕಂಪನಿಯ ಷೇರಿನ ಬೆಲೆಯು, ಇದೇ ತಿಂಗಳ 8ರಂದು 52 ವಾರಗಳ ಗರಿಷ್ಠ (₹32,048) ಮಟ್ಟವನ್ನು ದಾಖಲಿಸಿತ್ತು.

‘ಅಂಬುಜಾ ಸಿಮೆಂಟ್‌’ ಕಂಪನಿಯ ಷೇರಿನ ಬೆಲೆಯು ಒಂದು ವಾರದಲ್ಲಿ ಶೇ 1.83 ಹಾಗೂ ಒಂದು ತಿಂಗಳಲ್ಲಿ ಶೇ 3.04ರಷ್ಟು ಕುಸಿದಿದೆ. ಮೂರು ತಿಂಗಳಲ್ಲಿ ಶೇ 14.55 ಹಾಗೂ ಒಂದು ವರ್ಷದ ಅವಧಿಯಲ್ಲಿ ಶೇ 72.18ರಷ್ಟು ಹೆಚ್ಚಾಗಿದೆ. ಮೂರು ವರ್ಷಗಳ ಅವಧಿಯಲ್ಲಿ ಕೇವಲ ಶೇ 19.22ರಷ್ಟು ಏರಿಕೆ ಕಂಡಿದೆ.

2020ರ ಮೇ 4ರಂದು 52 ವಾರಗಳ ಕನಿಷ್ಠ (₹161.50) ಮಟ್ಟಕ್ಕೆ ಇಳಿದಿದ್ದ ಈ ಕಂಪನಿಯ ಷೇರಿನ ಮೌಲ್ಯವು, ಇದೇ ತಿಂಗಳ 9ರಂದು 52 ವಾರಗಳ ಗರಿಷ್ಠ (₹329.90) ಮಟ್ಟವನ್ನು ತಲುಪಿತ್ತು.

‘ಎಸಿಸಿ’ ಕಂಪನಿಯ ಷೇರು ಒಂದು ವಾರದಲ್ಲಿ ಶೇ 3.66 ಹಾಗೂ ಒಂದು ತಿಂಗಳಲ್ಲಿ ಶೇ 5.27ರಷ್ಟು ಮೌಲ್ಯವನ್ನು ಕಳೆದುಕೊಂಡಿದೆ. ಈ ಕಂಪನಿಯ ಷೇರಿನ ಬೆಲೆಯು ಒಂದು ವರ್ಷದ ಅವಧಿಯಲ್ಲಿ ಶೇ 52.29ರಷ್ಟು ಹೆಚ್ಚಾಗಿದ್ದರೆ, ಮೂರು ವರ್ಷಗಳ ಅವಧಿಗೆ ಹೋಲಿಸಿದರೆ ಕೇವಲ ಶೇ 15.82ರಷ್ಟು ಏರಿಕೆ ಕಂಡಿದೆ. 2020ರ ಏಪ್ರಿಲ್‌ 29ರಂದು 52 ವಾರಗಳ ಕನಿಷ್ಠ (₹1,107) ಮಟ್ಟಕ್ಕೆ ಕುಸಿದಿದ್ದ ಈ ಷೇರು, ಇದೇ ತಿಂಗಳ 9ರಂದು 52 ವಾರಗಳ ಗರಿಷ್ಠ (₹2,022.85) ಮಟ್ಟಕ್ಕೆ ಜಿಗಿದಿತ್ತು.

‘ಡಾಲ್ಮಿಯಾ ಭಾರತ್‌’ ಕಂಪನಿಯ ಷೇರಿನ ಮೌಲ್ಯವು ಒಂದು ವಾರದಲ್ಲಿ ಶೇ 8.69 ಹಾಗೂ ಒಂದು ತಿಂಗಳಲ್ಲಿ ಶೇ 8.87ರಷ್ಟು ಕುಸಿದಿದೆ. ಈ ಕಂಪನಿಯು ಒಂದು ವರ್ಷದ ಅವಧಿಯಲ್ಲಿ ಹೂಡಿಕೆದಾರರಿಗೆ ಶೇ 167.64ರಷ್ಟು ಲಾಭವನ್ನು ತಂದುಕೊಟ್ಟಿದೆ. ಆದರೆ, ಮೂರು ವರ್ಷಗಳ ಅವಧಿಯಲ್ಲಿ ಇದರ ಷೇರಿನ ಮೌಲ್ಯ ಕೇವಲ ಶೇ 1.90ರಷ್ಟು ಏರಿಕೆ ಕಂಡಿದೆ. 52 ವಾರಗಳ ಅವಧಿಯಲ್ಲಿ ಈ ಕಂಪನಿಯ ಷೇರಿನ ಬೆಲೆಯು ಕನಿಷ್ಠ ಮಟ್ಟ ₹ 474.80ರಿಂದ ಗರಿಷ್ಠ ಮಟ್ಟ ₹ 1,689.75 ಅನ್ನು ತಲುಪಿತ್ತು.

‘ರ‍್ಯಾಮ್ಕೊ ಸಿಮೆಂಟ್‌’ ಕಂಪನಿಯ ಷೇರಿನ ಬೆಲೆಯು ಒಂದು ವಾರದಲ್ಲಿ ಶೇ 5.36ರಷ್ಟು ಹಾಗೂ ಒಂದು ತಿಂಗಳಲ್ಲಿ ಶೇ 2.60ರಷ್ಟು ಕುಸಿತ ಕಂಡಿದೆ. ಒಂದು ವರ್ಷದ ಅವಧಿಯಲ್ಲಿ ಶೇ 68.87ರಷ್ಟು ಗಳಿಕೆಯನ್ನು ಹೂಡಿಕೆದಾರರಿಗೆ ತಂದುಕೊಟ್ಟಿರುವ ಈ ಕಂಪನಿಯ ಷೇರು, ಮೂರು ವರ್ಷಗಳಲ್ಲಿ ಕೇವಲ ಶೇ 12.02ರಷ್ಟು ಲಾಭವನ್ನು ನೀಡಿದೆ. 2020ರ ಮೇ 6ರಂದು 52 ವಾರಗಳ ಕನಿಷ್ಠ (₹ 502.10) ಮಟ್ಟವನ್ನು ತಲುಪಿದ್ದ ಈ ಕಂಪನಿಯ ಷೇರು ಇದೇ ತಿಂಗಳ 9ರಂದು ಗರಿಷ್ಠ (₹958.10) ಮಟ್ಟಕ್ಕೆ ಜಿಗಿದಿತ್ತು.

‘ಜೆ.ಕೆ. ಸಿಮೆಂಟ್‌’ ಕಂಪನಿಯ ಷೇರು ಒಂದು ವಾರ ಹಾಗೂ ತಿಂಗಳ ಅವಧಿಯಲ್ಲಿ ಕ್ರಮವಾಗಿ ಶೇ 2.63 ಹಾಗೂ ಶೇ 2.20ರಷ್ಟು ಮಾತ್ರ ಕುಸಿತ ಕಂಡಿದೆ. ಮೂರು ತಿಂಗಳ ಅವಧಿಯಲ್ಲಿ ಶೇ 33.54ರಷ್ಟು ಏರಿಕೆ ಕಂಡಿರುವ ಈ ಕಂಪನಿಯ ಷೇರು ಒಂದು ವರ್ಷದ ಅವಧಿಯಲ್ಲಿ ಶೇ 144.01ರಷ್ಟು ಲಾಭವನ್ನು ತಂದುಕೊಟ್ಟಿದೆ. ಮೂರು ವರ್ಷಗಳಲ್ಲಿ ಶೇ 189.93ರಷ್ಟು ಲಾಭ ತಂದುಕೊಟ್ಟಿರುವ ಈ ಕಂಪನಿಯ ಷೇರು ಹೂಡಿಕೆದಾರರ ಗಮನ ಸೆಳೆದಿದೆ.

2020ರ ಮೇ 12ರಂದು 52 ವಾರಗಳ ಕನಿಷ್ಠ (₹1,040.65) ಮಟ್ಟಕ್ಕೆ ಕುಸಿದಿದ್ದ ಈ ಕಂಪನಿಯ ಷೇರು, ಇದೇ ತಿಂಗಳ ಮೇ 8ರಂದು 52 ವಾರಗಳ ಗರಿಷ್ಠ (₹2,149.80) ಮಟ್ಟಕ್ಕೆ ಜಿಗಿದಿತ್ತು.

ಸಿಮೆಂಟ್‌ ವಲಯದ ಎರಡಂಕಿ ಬೆಳವಣಿಗೆ

ಗ್ರಾಮೀಣ ಆರ್ಥಿಕತೆ ಚೇತರಿಸಿಕೊಂಡಿರುವುದು, ನಿರ್ಮಾಣ ಕಾಮಗಾರಿಗೆ ಸರ್ಕಾರ ಹೆಚ್ಚಿನ ಹಣ ತೊಡಗಿಸಿರುವುದರಿಂದ ಸಿಮೆಂಟ್‌ಗೆ ಬೇಡಿಕೆ ಹೆಚ್ಚಿದ ಪರಿಣಾಮ 2021ರ ಜನವರಿ–ಮಾರ್ಚ್‌ ನಡುವಿನ ತ್ರೈಮಾಸಿಕ ಅವಧಿಯಲ್ಲಿ ಸಿಮೆಂಟ್‌ ವಲಯವು ಎರಡಂಕಿ ಬೆಳವಣಿಗೆಯನ್ನು ದಾಖಲಿಸಿದೆ.

ಉಪನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿದ ಮನೆಗಳ ನಿರ್ಮಾಣ ಹಾಗೂ ಮೂಲಸೌಲಭ್ಯಕ್ಕೆ ಒತ್ತು ನೀಡಿರುವ ಪರಿಣಾಮ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಸಿಮೆಂಟ್‌ ಕಂಪನಿಗಳು ಉತ್ತಮ ಬೆಳವಣಿಗೆ ಸಾಧಿಸಿವೆ. ರಸ್ತೆ, ರೈಲ್ವೆ ಹಾಗೂ ಮೆಟ್ರೊ ರೈಲು ಸೇರಿ ಮೂಲಸೌಲಭ್ಯ ಕಲ್ಪಿಸಲು ಹೆಚ್ಚಿನ ಹಣ ವಿನಿಯೋಗಿಸುವುದಾಗಿ ಕಳೆದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಘೋಷಿಸಿದ ಬೆನ್ನಲ್ಲೇ ಸಿಮೆಂಟ್‌ ಕಂಪನಿಗಳ ಷೇರುಗಳ ಮೇಲೆ ಹಣ ತೊಡಗಿಸಲು ಹೂಡಿಕೆದಾರರು ಉತ್ಸಾಹ ತೋರಿಸಿದ್ದರು.

ಆದರೆ, ಇದೀಗ ಮತ್ತೆ ದೇಶದಲ್ಲಿ ಕೋವಿಡ್‌ ಪ್ರಮಾಣ ಹೆಚ್ಚಾಗಿದ್ದರಿಂದ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್‌, ಕರ್ಫೂ ಜಾರಿಗೊಳಿಸಿರುವುದರಿಂದ ನಿರ್ಮಾಣ ಕಾಮಗಾರಿಗೆ ಹಿನ್ನಡೆಯಾಗಿದೆ. ಇದರ ಪರಿಣಾಮ 2021–2022 ಹಣಕಾಸಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸಿಮೆಂಟ್‌ಗಳ ಬೇಡಿಕೆ ಕುಸಿಯಲಿದೆ. ಇದು ಸಿಮೆಂಟ್‌ ಕಂಪನಿಗಳ ಲಾಭದ ಮೇಲೆಯೂ ಪರಿಣಾಮ ಬೀರಲಿದೆ.

ಕಳೆದ ಬಾರಿ ಕೋವಿಡ್‌ ಅಬ್ಬರ ತಗ್ಗಿದ ಬಳಿಕ ಪ್ರಮುಖ ಸಿಮೆಂಟ್‌ ಕಂಪನಿಗಳ ಷೇರಿನ ಬೆಲೆ ಶೇ 50ಕ್ಕಿಂತಲೂ ಹೆಚ್ಚಾಗಿತ್ತು. ಕೋವಿಡ್‌ನ ಎರಡನೇ ಅಲೆಯ ಪ್ರಮಾಣ ತಗ್ಗಿದರೆ ಮತ್ತೆ ನಿರ್ಮಾಣ ಕಾಮಗಾರಿಗಳು ಪುನರಾರಂಭಗೊಳ್ಳಲಿದ್ದು, ಮತ್ತೆ ಸಿಮೆಂಟ್‌ಗೆ ಬೇಡಿಕೆ ಬರಲಿದೆ. ಸಿಮೆಂಟ್‌ ವಲಯದ ಗುಣಮಟ್ಟದ ಕಂಪನಿಗಳ ಷೇರುಗಳನ್ನು ಕಡಿಮೆ ಬೆಲೆಗೆ ಖರೀದಿಸಲು ಹೂಡಿಕೆದಾರರಿಗೆ ಇದೀಗ ಇನ್ನೊಂದು ಅವಕಾಶ ಒದಗಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT