ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವಾರ ಐಪಿಒ ಮೆರವಣಿಗೆ!

ಸಾರ್ವಜನಿಕರಿಗೆ ಐದು ಕಂಪನಿಗಳ ಷೇರುಗಳು ಖರೀದಿಗೆ ಮುಕ್ತ
Last Updated 14 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಾರ್ಚ್‌ 15ರಿಂದ 17ರವರೆಗಿನ ಅವಧಿಯಲ್ಲಿ ಒಟ್ಟು ಐದು ಕಂಪನಿಗಳು ತಮ್ಮ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸಲಿವೆ. ಒಂದೇ ವಾರದಲ್ಲಿ ಐದು ಕಂಪನಿಗಳ ಐಪಿಒ (ಕಂಪನಿಯ ಷೇರುಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿಸುವ ಪ್ರಕ್ರಿಯೆ) ಇರುವುದು ಈಚಿನ ದಿನಗಳಲ್ಲಿ ಇದೇ ಮೊದಲು.

ದೇಶದ ಷೇರು ಮಾರುಕಟ್ಟೆಗಳತ್ತ ಹಣದ ಹರಿವು ಹೆಚ್ಚಿರುವುದು, ಷೇರು ಮಾರುಕಟ್ಟೆಯು ಸಕಾರಾತ್ಮಕ ವಹಿವಾಟು ಕಾಣುತ್ತಿರುವುದು ಸಾಲು ಸಾಲು ಕಂಪನಿಗಳು ಐಪಿಒ ಮೊರೆ ಹೋಗುತ್ತಿರುವುದಕ್ಕೆ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ರಾಸಾಯನಿಕಗಳ ತಯಾರಿಕಾ ಕಂಪನಿಯಾದ ಲಕ್ಷ್ಮಿ ಆರ್ಗ್ಯಾನಿಕ್ ಇಂಡಸ್ಟ್ರೀಸ್‌ ಮತ್ತು ಎಂಜಿನಿಯರಿಂಗ್‌ ಕಂಪನಿಯಾದ ಕ್ರಾಫ್ಟ್ಸ್‌ಮನ್‌ ಆಟೊಮೇಷನ್ ಐಪಿಒ ಸೋಮವಾರದಿಂದ (ಮಾ. 15) ಆರಂಭ ಆಗಲಿದೆ. ಚಿನ್ನಾಭರಣಗಳ ಮಾರಾಟ ಮಳಿಗೆಗಳನ್ನು ದೇಶದ ಹಲವು ರಾಜ್ಯಗಳಲ್ಲಿ ಹೊಂದಿರುವ ‘ಕಲ್ಯಾಣ್‌ ಜ್ಯುವೆಲ್ಲರ್ಸ್‌ ಇಂಡಿಯಾ ಲಿಮಿಟೆಡ್’ ಕಂಪನಿಯ ಐಪಿಒ ಮಂಗಳವಾರದಿಂದ (ಮಾ. 16) ಶುರುವಾಗಲಿದೆ.

ಕಿರು ಹಣಕಾಸು ಸಂಸ್ಥೆಯಾದ ‘ಸೂರ್ಯೋದಯ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌’ ಹಾಗೂ ಗೇಮಿಂಗ್‌ ಅಪ್ಲಿಕೇಷನ್‌ಗಳ ಅಭಿವೃದ್ಧಿಯಲ್ಲಿ ತೊಡಗಿರುವ ನಜಾರಾ ಟೆಕ್ನಾಲಜೀಸ್‌ನ ಐಪಿಒ ಬುಧವಾರದಿಂದ (ಮಾ. 18) ಆರಂಭ ಆಗಲಿದೆ. ಅನುಪಮ್‌ ರಾಸಾಯನ್ ಇಂಡಿಯಾ ಲಿಮಿಟೆಡ್‌ ಕಂಪನಿಯ ಐಪಿಒಗೆ ಬಿಡ್‌ ಸಲ್ಲಿಕೆ ಈಗಾಗಲೇ ಆರಂಭವಾಗಿದ್ದು, ಮಂಗಳವಾರದ ವರೆಗೆ (ಮಾ. 16) ಬಿಡ್ ಸಲ್ಲಿಸಲು ಅವಕಾಶ ಇದೆ.

‘ಷೇರು ಮಾರುಕಟ್ಟೆಯು ಏರುಮುಖ ಚಲನೆ ಕಾಣುತ್ತಿದೆ. ಈ ಕಾರಣದಿಂದಾಗಿ, ಇಷ್ಟೊಂದು ಕಂಪನಿಗಳು ಒಂದೇ ಸಮಯದಲ್ಲಿ ಐಪಿಒಗೆ ಮುಂದಾಗಿವೆ ಅನಿಸುತ್ತಿದೆ. ಐಪಿಒಗೆ ಮುಂದಾಗುವ ಎಲ್ಲ ಕಂಪನಿಗಳಲ್ಲಿ ಹೂಡಿಕೆ ಮಾಡುವುದು ಜಾಣತನ ಆಗಲಾರದು. ಹಣಕಾಸಿನ ಸ್ಥಿತಿಗತಿ ಚೆನ್ನಾಗಿರುವ, ಒಳ್ಳೆಯ ಕಾರ್ಪೊರೇಟ್ ಆಡಳಿತ ಇರುವ ಹಾಗೂ ಭವಿಷ್ಯದಲ್ಲಿ ಒಳ್ಳೆಯ ವಹಿವಾಟು ನಡೆಸಬಹುದಾದ ಕಂಪನಿಗಳಲ್ಲಿ ಹೂಡಿಕೆ ಮಾಡುವುದು ಒಳಿತು’ ಎಂದು ಸುವಿಷನ್ಸ್‌ ಹೋಲ್ಡಿಂಗ್ಸ್ ಪ್ರೈವೇಟ್‌ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರಮೋದ್ ಬಿ.ಪಿ. ವಿಶ್ಲೇಷಿಸಿದರು.

‘ಚಿನ್ನದ ದರ ಇಳಿಕೆ ಕಂಡಿದೆ. ದೇಶಿ ಬಾಂಡ್‌ ಮಾರುಕಟ್ಟೆಯು ಹಲವರ ನಿರೀಕ್ಷೆಗೆ ಅನುಗುಣವಾಗಿ ಲಾಭ ತಂದು ಕೊಟ್ಟಿಲ್ಲ. ಆದರೆ, ಲಾಕ್‌ಡೌನ್‌ ನಂತರದಲ್ಲಿ ಷೇರು ಮಾರುಕಟ್ಟೆಯು ಒಳ್ಳೆಯ ಲಾಭ ತಂದುಕೊಟ್ಟಿದೆ. ಹಾಗಾಗಿ, ಬಹಳಷ್ಟು ಜನ ಹೂಡಿಕೆದಾರರು ಷೇರು ಮಾರುಕಟ್ಟೆಗಳ ಕಡೆ ಮುಖ ಮಾಡಿದ್ದಾರೆ. ಹೂಡಿಕೆದಾರರಲ್ಲಿನ ಉತ್ಸಾಹ, ಪೂರಕ ವಾತಾವರಣದ ಪ್ರಯೋಜನ ಪಡೆಯಲು ಕಂಪನಿಗಳೂ ಮುಂದಾಗಿವೆ’ ಎಂದು ಹಣಕಾಸು ತಜ್ಞರೊಬ್ಬರು ಅಭಿಪ್ರಾಯಪಟ್ಟರು.

2020–21ರಲ್ಲಿ ನಡೆದ ಐಪಿಒಗಳ ಪೈಕಿ ಶೇಕಡ 78ರಷ್ಟು ಕಂಪನಿಗಳ ಷೇರುಗಳು, ಷೇರುಮಾರುಕಟ್ಟೆಯಲ್ಲಿ ವಹಿವಾಟು ಆರಂಭಿಸಿದ ಮೊದಲ ದಿನವೇ ಹೂಡಿಕೆದಾರರಿಗೆ ಲಾಭ ತಂದುಕೊಟ್ಟಿವೆ. ಐಪಿಒಗಳ ವಿಚಾರವಾಗಿ ಸಣ್ಣ ಹೂಡಿಕೆದಾರರಲ್ಲಿ ಉತ್ಸಾಹ ಹೆಚ್ಚಲು ಇದು ಕೂಡ ಒಂದು ಕಾರಣ ಆಗಿರಬಹುದು ಎಂದು ಪ್ರಮೋದ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT