ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಪಿಐ: ಹೆಚ್ಚಿದ ಹಿಂತೆಗೆತ

ಹಣಕಾಸು, ಐ.ಟಿ. , ದೂರಸಂಪರ್ಕ ವಲಯದ ಷೇರು ಮಾರಾಟ
Last Updated 21 ಜನವರಿ 2023, 20:30 IST
ಅಕ್ಷರ ಗಾತ್ರ

ಬೆಂಗಳೂರು: ‘ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ದೇಶದ ಷೇರುಪೇಟೆಗಳಲ್ಲಿ ಹಣಕಾಸು, ಐ.ಟಿ. ಮತ್ತು ದೂರಸಂಪರ್ಕ ವಲಯದ ಷೇರುಗಳನ್ನು ಹೆಚ್ಚಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ತಿಳಿಸಿದರು.

ಇನ್ನೊಂದೆಡೆ, ಲೋಹ ಮತ್ತು ಗಣಿ ವಲಯದ ಷೇರುಗಳನ್ನು ಮಾತ್ರವೇ ವಿದೇಶಿ ಹೂಡಿಕೆದಾರರು ಖರೀದಿಸುತ್ತಿದ್ದಾರೆ ಎಂದು ಅವರು ಪ್ರಜಾವಾಣಿಗೆ ತಿಳಿಸಿದರು.

ನ್ಯಾಷನಲ್‌ ಸೆಕ್ಯುರಿಟೀಸ್‌ ಡೆಪಾಸಿಟರಿ ಲಿಮಿಟೆಡ್‌ನಲ್ಲಿ (ಎನ್‌ಎಸ್‌ಡಿಎಲ್‌) ಇರುವ ಮಾಹಿತಿಯ ಪ್ರಕಾರ, ಜನವರಿ 20ರವರೆಗಿನ ಅವಧಿಯಲ್ಲಿ ₹15,425 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ವರ್ಷದ ಆರಂಭದಲ್ಲಿಯೇ ನಿರಂತರವಾಗಿ ಮಾರಾಟ ಮಾಡುತ್ತಿರುವುದು ತುಸು ಅಚ್ಚರಿ ಮೂಡಿಸಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ 2022ರರಲ್ಲಿ ಗರಿಷ್ಠ ಮಟ್ಟದಲ್ಲಿ ಇದ್ದ ಡಾಲರ್ ಇದೀಗ ಇಳಿಕೆ ಕಾಣುತ್ತಿದೆ. ಡಾಲರ್‌ ಮೌಲ್ಯ ಇಳಿಕೆಯು ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳ ಪಾಲಿಗೆ ಅನುಕೂಲ ಮಾಡಿಕೊಡಲಿದೆ. ಈ ನಿಟ್ಟಿನಲ್ಲಿ ಭಾರತಕ್ಕೆ ವಿದೇಶಿ ಬಂಡವಾಳ ಒಳಹರಿವು ಆಗಬೇಕಿತ್ತು. ಆದರೆ, ಮಾರುಕಟ್ಟೆ ಮೌಲ್ಯವು ಕಡಿಮೆ ಇರುವ ಚೀನಾ, ಹಾಂಗ್‌ಕಾಂಗ್‌, ದಕ್ಷಿಣ ಕೊರಿಯಾ ಮತ್ತು ಥಾಯ್ಲೆಂಡ್‌ ಮಾರುಕಟ್ಟೆಗಳಲ್ಲಿ ಅವರು ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಈ ಕಾರಣದಿಂದಾಗಿ ಭಾರತದಿಂದ ಬಂಡವಾಳ ಹಿಂದಕ್ಕೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬಂಡವಾಳ ಹಿಂದಕ್ಕೆ ಪಡೆಯುವುದು ಮುಂದುವರಿಸಿದ್ದಾರೆ. ಜನವರಿ 2 ರಿಂದ 20ರವರೆಗಿನ ವಹಿವಾಟಿನಲ್ಲಿ ₹19,880 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದೇ ಅವಧಿಯಲ್ಲಿ ದೇಶಿ ಸಾಂಸ್ಥಿಕ ಹೂಡಿಕೆದಾರರು ₹16,180 ಕೋಟಿಗೂ ಅಧಿಕ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT