ಮಂಗಳವಾರ, ಮಾರ್ಚ್ 21, 2023
23 °C

ಬೇಗ ನಿವೃತ್ತಿಗೆ ಬೇಕು ‘ಫೈರ್’: ಹಣಕಾಸು ಸಾಕ್ಷರತೆಯ ಬಗ್ಗೆ ರಾಜೇಶ್ ಕುಮಾರ್ ಟಿಆರ್

ರಾಜೇಶ್ ಕುಮಾರ್ ಟಿ.ಆರ್. Updated:

ಅಕ್ಷರ ಗಾತ್ರ : | |

Prajavani

ಉದ್ಯೋಗದಿಂದ ನಿವೃತ್ತಿ ಎಂದರೆ ಅರವತ್ತು ವರ್ಷ ವಯಸ್ಸಾದಾಗ ಎದುರಾಗುವಂಥದ್ದು ಎನ್ನುವ ಅಲೋಚನೆ ಇತ್ತು. ಆದರೆ ಈಗ ನಿವೃತ್ತಿಯ ಪರಿಕಲ್ಪನೆಯೇ ಬದಲಾಗಿದೆ. ಮೂವತ್ತು, ನಲವತ್ತು ವರ್ಷ ತುಂಬುವಷ್ಟರಲ್ಲಿ ನಿವೃತ್ತಿಗೆ ಸಜ್ಜಾಗಬೇಕು ಎಂದು ಹೊಸ ತಲೆಮಾರಿನವರು ಆಲೋಚನೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ‘ಫೈರ್’ (FIRE) ಹೂಡಿಕೆ ವಿಧಾನ.

‘ಫೈನಾನ್ಷಿಯಲ್ ಇಂಡಿಪೆಂಡೆನ್ಸ್, ರಿಟೈರ್ ಅರ್ಲಿ’ (ಹಣಕಾಸಿನ ಸ್ವಾತಂತ್ರ್ಯ ಮತ್ತು ಬೇಗನೆ ನಿವೃತ್ತಿ) ಎನ್ನುವುದು ‘ಫೈರ್’ ಎನ್ನುವುದರ ವಿಸ್ತೃತ ರೂಪ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಆರ್ಥಿಕ ಸ್ವಾವಲಂಬನೆ ಸಾಧಿಸಿ ನೌಕರಿಯಿಂದ ನಿವೃತ್ತಿ ಹೊಂದುವ ಲೆಕ್ಕಾಚಾರವನ್ನು ‘ಫೈರ್’ ಕಲಿಸಿಕೊಡುತ್ತದೆ. ಅಂದಹಾಗೆ, ‘ಫೈರ್ ’ ಹೂಡಿಕೆ ತಂತ್ರಗಾರಿಕೆಯನ್ನು ನೀವು ಹೇಗೆ ಅಳವಡಿಸಿಕೊಳ್ಳಬಹುದು?

‘ಫೈರ್’ ಹೂಡಿಕೆ: ವ್ಯಕ್ತಿ ತನ್ನ ಇಪ್ಪತ್ತನೆಯ ವರ್ಷ ಮತ್ತು ನಲವತ್ತನೆಯ ವರ್ಷದ ನಡುವಿನ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಗಳಿಸುವ ಆದಾಯದಲ್ಲಿ ಶೇಕಡ 50ರಿಂದ ಶೇ 70ರಷ್ಟು ಹಣವನ್ನು ಉಳಿತಾಯ ಮಾಡಿ, ಉತ್ತಮ ಲಾಭಾಂಶ ಕೊಡುವ ಹೂಡಿಕೆಗಳಲ್ಲಿ ತೊಡಗಿಸುವ ಮೂಲಕ ನೌಕರಿಯಿಂದ ಬೇಗನೆ ನಿವೃತ್ತಿ ಪಡೆದುಕೊಳ್ಳಲು ಸಜ್ಜಾಗುವ ಪ್ರಕ್ರಿಯೆಯೇ ‘ಫೈರ್’ ಹೂಡಿಕೆ. ಈ ಹೂಡಿಕೆ ತಂತ್ರಗಾರಿಕೆಯಲ್ಲಿ ಇಪ್ಪತ್ತು, ಮೂವತ್ತು ಮತ್ತು ನಲವತ್ತನೇ ವಯಸ್ಸಿನಲ್ಲಿ ಉಳಿತಾಯ ಮಾಡಿ ಹೂಡಿಕೆ ಮಾಡುವ ಹಣ ನಿವೃತ್ತಿ ನಂತರದ ಬದುಕಿಗೆ ಆಧಾರವಾಗುತ್ತದೆ, ವ್ಯಕ್ತಿಗೆ ಬೇಗ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಬಿಡುತ್ತದೆ.

ವಿಕ್ಕಿ ರಾಬಿನ್ ಮತ್ತು ಜೋ ಡೋಮಿನಿಗಿಜ್ 1992ರಲ್ಲಿ ಬರೆದಿರುವ ‘ಯುವರ್ ಮನಿ ಆರ್ ಯುವರ್ ಲೈಫ್’ ಎನ್ನುವ ಪುಸ್ತಕದಿಂದ ‘ಫೈರ್’ ಪರಿಕಲ್ಪನೆ ಹುಟ್ಟಿಕೊಂಡಿದೆ. ಜಗತ್ತಿನಾದ್ಯಂತ ಅನೇಕ ಜನ ಈಗ ‘ಫೈನಾನ್ಸಿಯಲ್ ಇಂಡಿಪೆಂಡೆನ್ಸ್, ರಿಟೈರ್ ಅರ್ಲಿ’ ಮಂತ್ರ ಜಪಿಸುತ್ತಿದ್ದಾರೆ. ಈ ಪರಿಕಲ್ಪನೆ ಯನ್ನು ನಿಮ್ಮ ಜೀವನದಲ್ಲಿ ನಿಜವಾಗಿಸಿಕೊಳ್ಳಬೇಕಾದರೆ ಶೇ 50ರಿಂದ ಶೇ 70ರಷ್ಟು ಹಣವನ್ನು ಉಳಿತಾಯ ಮಾಡಬೇಕು. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕು. ಜಾಣ್ಮೆಯಿಂದ, ಹೆಚ್ಚು ಲಾಭಾಂಶ ಬರುವ ಕಡೆ ಹೂಡಿಕೆ ಮಾಡಬೇಕು. ಮಕ್ಕಳ ಶಿಕ್ಷಣ, ಮನೆ ಬಾಡಿಗೆ, ಆಹಾರ ವೆಚ್ಚ, ಗೃಹ ಸಾಲ ಇತ್ಯಾದಿ ಜವಾಬ್ದಾರಿಗಳಿಂದಾಗಿ ಅನೇಕರಿಗೆ ಶೇ 50ರಿಂದ ಶೇ 70ರಷ್ಟು ಉಳಿತಾಯ ಸಾಧ್ಯವಾಗದೇ ಇರಬಹುದು. ಆದರೆ, ಅಷ್ಟು ಉಳಿತಾಯ ಮಾಡುವ ದಿಕ್ಕಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಮುನ್ನಡೆಯಬೇಕು ಎನ್ನುವುದಷ್ಟೇ ಇದರ ತಾತ್ಪರ್ಯ.

‘ಫೈರ್’ ಲೆಕ್ಕಾಚಾರದಲ್ಲಿ ನಿವೃತ್ತಿಗೆ ಎಷ್ಟು ಹಣ ಬೇಕು?: ನಿವೃತ್ತಿ ಹೊಂದಿದ ಮೊದಲ ವರ್ಷದಲ್ಲಿ ನೀವು ಮಾಡಲಿರುವ ವೆಚ್ಚದ 25 ಪಟ್ಟು ಹೆಚ್ಚು ಹಣ ನಿಮ್ಮಲ್ಲಿರಬೇಕು ಎನ್ನುವುದು ಲೆಕ್ಕಾಚಾರ. ಉದಾಹರಣೆಗೆ, ನಿವೃತ್ತಿ ಹೊಂದಿದ ಮೊದಲ ವರ್ಷ ನೀವು ₹ 10 ಲಕ್ಷ ವೆಚ್ಚ ಮಾಡುತ್ತೀರಿ ಎಂದು ಭಾವಿಸಿ. ಇದರಂತೆ ಅಂದಾಜು ಮಾಡಿದರೆ ನಿವೃತ್ತಿಗೆ ₹ 2.5 ಕೋಟಿ
(10 ಲಕ್ಷX25 = 2.5 ಕೋಟಿ) ಬೇಕಾಗುತ್ತದೆ. ಬೇಗನೆ ನಿವೃತ್ತಿ ಹೊಂದುವ ಸಂದರ್ಭದಲ್ಲಿ, ಹೀಗೆಯೇ, ಇಷ್ಟೇ ಹಣ ಇರಬೇಕು ಎಂದಲ್ಲ.

ನಿಮಗೆ ಹೇಗೆ ಸರಿ ಹೊಂದುವುದೋ ಅದಕ್ಕೆ ತಕ್ಕಂತೆ ನಿವೃತ್ತಿಗೆ ಅಗತ್ಯವಿರುವ ಮೊತ್ತದ ಅಂದಾಜಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಹಣದುಬ್ಬರ ಮುಂತಾದ ಅಂಶಗಳನ್ನು ಒಳಗೊಂಡು ನಿವೃತ್ತಿಗೆ ಎಷ್ಟು ಹಣ ಅಗತ್ಯ ಎನ್ನುವುದನ್ನು ಕಂಡುಕೊಳ್ಳಬೇಕಾಗುತ್ತದೆ. ಭಾರತದ ಮಟ್ಟಿಗೆ ಹೇಳುವುದಾದರೆ ಬೇಗ ನಿವೃತ್ತಿ ಹೊಂದಲು ₹ 3 ಕೋಟಿಯಿಂದ ₹ 6 ಕೋಟಿ ಒಳ್ಳೆಯ ಮೊತ್ತ ಎಂದು ಪರಿಗಣಿಸಬಹುದು.

‘ಫೈರ್’ನಲ್ಲಿ ಮೂರು ತತ್ವಗಳು: ಮಿತವ್ಯಯ, ಪರ್ಯಾಯ ಆದಾಯದ ಮೂಲಗಳನ್ನು ಕಂಡುಕೊಳ್ಳುವುದು ಮತ್ತು ಹೆಚ್ಚು ಲಾಭಾಂಶ ಇರುವ ಕಡೆ ಹೂಡಿಕೆ ಮಾಡುವುದು ‘ಫೈರ್’ ಪರಿಕಲ್ಪನೆಯ ಮೂರು ಮುಖ್ಯ ತತ್ವಗಳು. ಖರ್ಚಿನಲ್ಲಿ ವಿವೇಚನೆ ಬಳಸುವುದು ‘ಫೈರ್’ ತತ್ವದ ಬಹಳ ಮುಖ್ಯ ಅಂಶ. ಹೊಸ ಕಾರು ಖರೀದಿ ಬದಲು ಹಳೆಯ ಕಾರು ತೆಗೆದುಕೊಳ್ಳುವುದು, ಸಾರ್ವಜನಿಕ ಸಾರಿಗೆ ಬಳಸುವುದು, ಸ್ವಂತ ಮನೆ ಕೊಳ್ಳುವ ಬದಲು ಬಾಡಿಗೆ ಮನೆಯಲ್ಲಿ ವಾಸ ಮಾಡುವುದು, ಕ್ರೆಡಿಟ್ ಕಾರ್ಡ್ ಬಳಸದಿರುವುದು, ಹೊರಗಿನ ಆಹಾರ, ಪಾರ್ಟಿ, ಮೋಜು ಮಸ್ತಿಗೆ ಖರ್ಚು ಮಾಡದಿರುವುದು ಹೀಗೆ ಅನೇಕ ಮಿತವ್ಯಯದ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

ಒಂದೇ ಆದಾಯದ ಮೂಲ ನೆಚ್ಚಿಕೊಳ್ಳುವ ಬದಲು ಪರ್ಯಾಯ ಆದಾಯದ ಮೂಲಗಳನ್ನು ಕಂಡುಕೊಳ್ಳುವುದು ಕೂಡ ಈ ಸಿದ್ಧಾಂತದ ಮುಖ್ಯ ಅಂಶವಾಗಿದೆ. ಉದಾಹರಣೆಗೆ, ಷೇರು ಹೂಡಿಕೆಯಿಂದ ಲಾಭಾಂಶ ಪಡೆಯುವುದು, ನಿಶ್ಚಿತ ಠೇವಣಿಯಿಂದ ಬಡ್ಡಿ ಪಡೆಯುವುದು, ಬ್ಲಾಗಿಂಗ್ ಮಾಡಿ ಆದಾಯ ಗಳಿಸುವುದು, ಯೂಟ್ಯೂಬ್ ಚಾನಲ್ ಆರಂಭಿಸಿ ಸಂಪಾದಿಸುವುದು, ಪುಸ್ತಕ ಬರೆದು ದುಡ್ಡು ಗಳಿಸುವುದು ಹೀಗೆ ಪ್ರತಿಯೊಬ್ಬರೂ ತಮ್ಮ ಕೌಶಲ ಆಧರಿಸಿ ಬೇರೆ ಬೇರೆ ಆದಾಯದ ಮೂಲಗಳನ್ನು ಕಂಡುಕೊಳ್ಳಬೇಕು.

ಷೇರುಪೇಟೆಯಲ್ಲಿ ಮತ್ತೆ ಅನಿಶ್ಚಿತತೆಯ ಓಟ

ಸತತ ಎರಡು ವಾರಗಳಿಂದ ಗಳಿಕೆಯ ಹಾದಿಯಲ್ಲಿದ್ದ ಷೇರುಪೇಟೆ ಸೂಚ್ಯಂಕಗಳು ಕುಸಿತ ಕಂಡಿದ್ದು, ಅನಿಶ್ಚಿತತೆಯ ಓಟ ಶುರುವಾಗಿದೆ. ಏಪ್ರಿಲ್ 13ಕ್ಕೆ ಕೊನೆಗೊಂಡ ವಾರದಲ್ಲಿ ನಿಫ್ಟಿ ಮತ್ತು ಸೆನ್ಸೆಕ್ಸ್ ಇಳಿಕೆ ದಾಖಲಿಸಿವೆ. 58,338 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.06ರಷ್ಟು ಇಳಿದಿದೆ. 17,475 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 1.13ರಷ್ಟು ತಗ್ಗಿದೆ.

ಜಾಗತಿಕ ವಿದ್ಯಮಾನಗಳ ಜೊತೆಗೆ ಕಂಪನಿಗಳ ತ್ರೈಮಾಸಿಕ ಸಾಧನೆ ವರದಿಯಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಾರದಿರುವುದು ಸೇರಿ ಹಲವು ಅಂಶಗಳು ಕುಸಿತಕ್ಕೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ಎನರ್ಜಿ ಸೂಚ್ಯಂಕ ಹೊರತುಪಡಿಸಿ ಎಲ್ಲ ಸೂಚ್ಯಂಕಗಳು ನರಾಕಾತ್ಮಕ ಫಲಿತಾಂಶ ಕೊಟ್ಟಿವೆ. ನಿಫ್ಟಿ ಐ.ಟಿ. ವಲಯ ಶೇ 2.8ರಷ್ಟು, ಲೋಹ ವಲಯ ಶೇ 1.8ರಷ್ಟು, ಮಿಡ್ ಕ್ಯಾಪ್ ಶೇ 1.1 , ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇ 0.5ರಷ್ಟು ಇಳಿಕೆಯಾಗಿವೆ.

ಗಳಿಕೆ–ಇಳಿಕೆ: ನಿಫ್ಟಿಯಲ್ಲಿ ಅಪೋಲೊ ಹಾಸ್ಪಿಟಲ್ ಶೇ 3ರಷ್ಟು, ಒಎನ್‌ಜಿಸಿ ಶೇ 2ರಷ್ಟು, ಜೆಎಸ್‌ಡಬ್ಲ್ಯೂ ಸ್ಟೀಲ್ ಶೇ 1.3ರಷ್ಟು ಏರಿಕೆಯಾಗಿವೆ. ಹಿಂಡಾಲ್ಕೊ ಶೇ 6ರಷ್ಟು, ಟಾಟಾ ಮೋಟರ್ಸ್ ಶೇ 5ರಷ್ಟು, ವಿಪ್ರೊ ಶೇ 4ರಷ್ಟು, ಕೋಲ್ ಇಂಡಿಯಾ ಶೇ 4ರಷ್ಟು ಮತ್ತು ಏಷ್ಯನ್ ಪೇಂಟ್ಸ್ ಶೇ 4ರಷ್ಟು ಇಳಿಕೆಯಾಗಿವೆ.

ಮುನ್ನೋಟ: ಈ ವಾರ ಮೈಂಡ್ ಟ್ರೀ, ಎಸಿಸಿ, ಏಂಜಲ್ ಒನ್, ಎಚ್‌ಸಿಎಲ್ ಟೆಕ್, ಐಸಿಐಸಿಐ ಲೋಂಬಾರ್ಡ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿ., ಟಾಟಾ ಕಮ್ಯೂನಿಕೇಷನ್ಸ್, ಐಸಿಐಸಿಐ ಬ್ಯಾಂಕ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

ಭಾರತೀಯ ರಿಸರ್ವ್ ಬ್ಯಾಂಕ್ ಜೂನ್‌ನಲ್ಲಿ ಬಡ್ಡಿ ದರ ಹೆಚ್ಚಿಸುವ ಅಂದಾಜಿದೆ. ಜಾಗತಿಕವಾಗಿಯೂ ಪ್ರಮುಖ ದೇಶಗಳ ಬ್ಯಾಂಕ್‌ಗಳು ಬಡ್ಡಿ ದರ ಹೆಚ್ಚಳ ಮಾಡುತ್ತಿವೆ. ಬಡ್ಡಿ ದರ ಹೆಚ್ಚಳವಾಗದಂತೆ ಷೇರುಪೇಟೆಯಿಂದ ಹಣದ ಹೊರ ಹರಿವು ಹೆಚ್ಚಾಗುತ್ತದೆ. ಉಳಿದಂತೆ ಹಣದುಬ್ಬರದ ಕಾರಣದಿಂದಾಗಿ ಕಂಪನಿಗಳಿಗೆ ವೆಚ್ಚದ ಹೊಡೆತ ಬೀಳುತ್ತಿದ್ದು ಲಾಭಾಂಶದ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಉಂಟಾಗಲಿದೆ ಎನ್ನುವತ್ತ ಹೂಡಿಕೆದಾರರ ದೃಷ್ಟಿ ನೆಟ್ಟಿದೆ. ಜಾಗತಿಕ ಬೆಳವಣಿಗೆಗಳ ಜೊತೆಗೆ ದೇಶಿ ವಿದ್ಯಮಾನಗಳಿಗೆ ಷೇರುಪೇಟೆ ಸೂಚ್ಯಂಕಗಳು ಪ್ರತಿಕ್ರಿಯಿಸಲಿವೆ. ಸದ್ಯದಲ್ಲಿ ಏರಿಳಿತದ ಹಾದಿ ಮುಂದುವರಿಯುವುದರಿಂದ ಹೂಡಿಕೆದಾರರು ಬಹಳ ಎಚ್ಚರಿಕೆಯಿಂದ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ.

(ಲೇಖಕ ಚಾರ್ಟರ್ಡ್‌ ಅಕೌಂಟೆಂಟ್)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು