ಶನಿವಾರ, ಮೇ 30, 2020
27 °C

ದಿನದ ಏರಿಕೆಯೊಂದಿಗೆ ಹಣಕಾಸು ವರ್ಷ ಮುಗಿಸಿದ‌ ಷೇರುಪೇಟೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ (ಸೆನ್ಸೆಕ್ಸ್) ಮತ್ತು ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ (ನಿಫ್ಟಿ) ಮಂಗಳವಾರ ಏರಿಕೆ ದಾಖಲಿಸಿದವು. ಇದು ಸೋಮವಾರದ ದಿನದಂತ್ಯದ ವಹಿವಾಟಿಗೆ ಹೋಲಿಸಿದರೆ ಏರಿಕೆಯೇನೋ ಹೌದು, ಆದರೆ ಮಾಸಾಂತ್ಯ ಮತ್ತು ವರ್ಷಾಂತ್ಯದ ಲೆಕ್ಕದಲ್ಲಿ ಇದು ದಶಕದಲ್ಲಿಯೇ ಅತ್ಯಂತ ಕಳಪೆ ಅಂತ್ಯವಾಗಿದೆ.

ಜಗತ್ತನ್ನು ಆವರಿಸಿಕೊಳ್ಳುತ್ತಿರುವ ಕೊರೊನಾ ವೈರಸ್ ಭೀತಿ ಷೇರುಪೇಟೆಯನ್ನೂ ಆವರಿಸಿದ್ದು, ಜನರು ತಮ್ಮ ಹೂಡಿಕೆಯನ್ನು ನಗದೀಕರಿಸಿಕೊಂಡು ಮಾರುಕಟ್ಟೆಯಿಂದ ಕಾಲ್ತೆಗೆಯಲು ತರಾತುರಿ ತೋರುತ್ತಿದ್ದಾರೆ. ಏಷ್ಯಾ ಸೇರಿದಂತೆ ವಿಶ್ವದ ವಿವಿಧ ಮಾರುಕಟ್ಟೆಗಳಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

ರಾಷ್ಟ್ರೀಯ ಷೇರು ಸಂವೇದಿ (ನಿಫ್ಟಿ 50) ಸೂಚ್ಯಂಕವು ಶೇ 3.82ರಷ್ಟು ಏರಿಕೆ ದಾಖಲಿಸಿ, 8597.75 ಅಂಶಗಳೊಂದಿಗೆ ದಿನದ ವಹಿವಾಟು ಮುಗಿಸಿತು. ಮುಂಬೈ ಪೇಟೆಯ ಸೆನ್ಸೆಕ್ಸ್ ಶೇ 3.62ರಷ್ಟು ಏರಿಕೆ ದಾಖಲಿಸಿ, 29468.49 ಅಂಶಗಳೊಂದಿಗೆ ದಿನದ ವಹಿವಾಟು ಮುಗಿಸಿತು.

ನಿನ್ನೆಯ (ಮಾರ್ಚ್ 30) ವಹಿವಾಟಿಗೆ ಹೋಲಿಸಿದರೆ ಇದು ಏರಿಕೆ ಹೌದು. ಆದರೆ ಅಕ್ಟೋಬರ್ 2008ರ ನಂತರ ಕಂಡ ಅತ್ಯಂತ ದೊಡ್ಡ ಮಾಸಿಕ ಕುಸಿತ. 2009ರ ನಂತರ ಕಂಡ ಅತ್ಯಂತ ದೊಡ್ಡ ವಾರ್ಷಿಕ ಕುಸಿತ.

ನಿನ್ನೆಯಷ್ಟೇ (ಮಾರ್ಚ್ 30) ಭಾರತವು ಒಂದು ದಿನದಲ್ಲಿ ದಾಖಲಾದ ಅತಿಹೆಚ್ಚು ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯನ್ನು ಪ್ರಕಟಿಸಿದೆ. ಭಾರತದಲ್ಲಿ ಈಗ ಸೋಂಕಿತರ ಒಟ್ಟು ಸಂಖ್ಯೆ 1251ಕ್ಕೆ ಏರಿದೆ.

ಕೋವಿಡ್-19 ಪ್ರಕರಣಗಳ ಸಂಖ್ಯೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವು 21 ದಿನಗಳ ಲಾಕ್‌ಡೌನ್ ಘೋ‍ಷಿಸಿದೆ. ಲಾಕ್‌ಡೌನ್ ವಿಸ್ತರಿಸುವ ಆಲೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ದೇಶದ 10 ವರ್ಷಗಳ ಮಿತಿಯ ಬಾಂಡ್‌ಗಳು ಶೇ 6.08ರ ಪ್ರತಿಫಲ ದಾಖಲಿಸಿದೆ. ಕಳೆದ ಬಾರಿ ಇದು ಶೇ 6.21 ದಾಖಲಿಸಿತ್ತು.  ಷೇರುಪೇಟೆಯಲ್ಲಿ ಖನಿಜ ವ್ಯವಹಾರ ನಡೆಸುವ ಕಂಪನಿಗಳು ಅತಿಹೆಚ್ಚು ಲಾಭ ದಾಖಲಿಸಿದವು. ನಿಫ್ಟಿ ಮೆಟಲ್ಸ್‌ ಸೂಚ್ಯಂಕವು ಶೇ 5.19 ಮತ್ತು ಫಾರ್ಮಾ ಸೂಚ್ಯಂಕವು ಶೇ 4.07ರ ಏರಿಕೆ ದಾಖಲಿಸಿತು.

ಇಂಧನ ವಲಯದ ಪ್ರಮುಖ ಕಂಪನಿ ಕಂಪನಿ ಭಾರತ್ ಪೆಟ್ರೊಲಿಯಂ ಶೇ 15.3ರಷ್ಟು ಏರಿಕೆ ದಾಖಲಿಸಿತು. ಬ್ಲ್ಯೂಚಿಪ್ (ದೊಡ್ಡ ಗಾತ್ರದ ಬಂಡವಾಳದ ಕಂಪನಿ) ಷೇರುಗಳ ಪೈಕಿ ಭಾರತ್ ಪೆಟ್ರೊಲಿಯಂ ಷೇರುಗಳೇ ಅತಿ ಹೆಚ್ಚು ಮುನ್ನಡೆ (316.90 ರೂಪಾಯಿ) ಗಳಿಸಿದ್ದು. ಇಂಡಸ್‌ಇಂಡ್ ಬ್ಯಾಂಕ್‌ ಷೇರುಗಳು ಶೇ 15ರಷ್ಟು ಕುಸಿತ ಕಂಡು, 351 ರೂಪಾಯಿಯಲ್ಲಿ ದಿನದ ವಹಿವಾಟು ಮುಗಿಸಿತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು