ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ ಮುನ್ನೋಟ: ವಿಪ್ರೊ, ಇನ್ಫೊಸಿಸ್ ಫಲಿತಾಂಶ, ಹಣದುಬ್ಬರದ ಪ್ರಭಾವ ನಿರೀಕ್ಷೆ

Last Updated 12 ಜುಲೈ 2020, 19:05 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಷೇರುಪೇಟೆಗಳ ವಹಿವಾಟಿನ ಮೇಲೆ ಈ ವಾರ ಹಲವು ವಿದ್ಯಮಾನಗಳು ಪ್ರಭಾವ ಬೀರಲಿವೆ.

ಮುಖ್ಯವಾಗಿ ಇನ್ಫೊಸಿಸ್‌ ಮತ್ತು ವಿಪ್ರೊ, ಎಚ್‌ಸಿಎಲ್‌ ಟೆಕ್ನಾಲಜಿ ಕಂಪನಿಗಳ ತ್ರೈಮಾಸಿಕ ಫಲಿತಾಂಶ ಈ ವಾರ ಹೊರಬೀಳಲಿದ್ದು, ಕಂಪನಿಗಳ ಷೇರು ಮೌಲ್ಯದಲ್ಲಿ ವ್ಯತ್ಯಾಸವಾಗಲಿದ್ದು, ಸೂಚ್ಯಂಕದ ಏರಿಳಿತಕ್ಕೂ ಕಾರಣವಾಗಲಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ತ್ರೈಮಾಸಿಕ ಫಲಿತಾಂಶದಿಂದ ವಿವಿಧ ವಲಯಗಳ ಮೇಲೆ ಕೋವಿಡ್‌ ಉಂಟುಮಾಡಿರುವ ಪರಿಣಾಮದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದ್ದಾರೆ.

‘ಜೂನ್‌ ತ್ರೈಮಾಸಿಕದಲ್ಲಿನ ಕಂಪನಿಗಳ ಗಳಿಕೆಯ ಮಾಹಿತಿ ಹೊರಬೀಳಲು ಆರಂಭವಾಗಿದೆ. ಲಾಕ್‌ಡೌನ್‌ನಿಂದ ಕಂಪನಿಗಳ ಮೇಲೆ ಆಗಿರುವ ಪರಿಣಾವು ಇದರಲ್ಲಿ ಕಾಣಿಸಲಿದೆ. ಹೀಗಾಗಿ ಕಂಪನಿಗಳ ಆಡಳಿತ ಮಂಡಳಿಯ ಪ್ರತಿಕ್ರಿಯೆಯ ಬಗ್ಗೆ ಹೂಡಿಕೆದಾರರು ಆಸಕ್ತಿ ಹೊಂದಿದ್ದು, ಅಲ್ಪಾವಧಿಗೆ ಷೇರುಪೇಟೆಯು ಚಂಚಲವಾಗಿರುವ ಸಾಧ್ಯತೆ ಇದೆ’ ಎಂದು ಮೋತಿಲಾಲ್‌ ಓಸ್ವಾಲ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಸಿದ್ಧಾರ್ಥ್ ಖೇಮ್ಕಾ ಹೇಳಿದ್ದಾರೆ.

‘ಈ ವಾರ ಷೇರುಪೇಟೆಯು ಚಂಚಲವಾಗಿರಲಿದೆ. ಏಕೆಂದರೆ 2019ರ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಬಹುತೇಕ ಉದ್ಯಮಗಳು ಲಾಕ್‌ಡೌನ್‌ನಿಂದ ನಲುಗಿವೆ. ಸೂಚ್ಯಂಕವು ಏರುಮುಖವಾಗಿದ್ದರೂ ಲಾಭಗಳಿಕೆಯ ಪ್ರಕ್ರಿಯೆ ನಡೆಯುತ್ತಲೇ ಇದೆ. ಇದನ್ನು ಗಮನಿಸಿದರೆ ವಹಿವಾಟು ಚಂಚಲವಾಗಿರುವ ಸಾಧ್ಯತೆಯೇ ಹೆಚ್ಚು. ಹೂಡಿಕೆದಾರರು ಬಹಳ ಎಚ್ಚರಿಕೆಯಿಂದ ಇರುವುದೇ ಒಳಿತು. ಕೆಲವು ನಿರ್ದಿಷ್ಟ ಷೇರುಗಳು ಸೂಚ್ಯಂಕದ ಮೇಲೆ ಹೆಚ್ಚು ಪ್ರಭಾವ ಬೀರಲಿವೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ತಿಳಿಸಿದ್ದಾರೆ.

‘ಹೂಡಿಕೆದಾರರು ಈ ವಾರ ಮೊದಲಿಗೆ ಹಣದುಬ್ಬರ ಅಂಕಿ–ಅಂಶದ ಮೇಲೆ ತಮ್ಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಆ ಬಳಿಕ ತ್ರೈಮಾಸಿಕ ಫಲಿತಾಂಶದತ್ತ ಗಮನ ಹರಿಸಲಿದ್ದಾರೆ. ಇವುಗಳ ಮಧ್ಯೆ ಕೋವಿಡ್‌ ಪರಿಣಾಮವನ್ನೂ ಸೂಕ್ಷ್ಮವಾಗಿ ಗಮನಿಸಲಿದ್ದಾರೆ’ ಎಂದು ರೆಲಿಗೇರ್ ಬ್ರೋಕಿಂಗ್‌ನ ಉಪಾಧ್ಯಕ್ಷ ಅಜಿತ್‌ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.

‘ಕೋವಿಡ್‌ ನಿಯಂತ್ರಣಕ್ಕೆ ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ವಿದೇಶಿ ನಿಧಿಗಳು ಯಾವ ರೀತಿ ಸ್ಪಂದಿಸಲಿವೆ ಎನ್ನುವುದೇ ಹೆಚ್ಚು ಪ್ರಭಾವ ಬೀರಲಿವೆ. ಮುಂದಿನ ಕೆಲವು ವಾರಗಳವರೆಗೆ ದೇಶಿ ವಿದ್ಯಮಾನಗಳು ಹೆಚ್ಚಿನ ಪರಿಣಾಮವನ್ನೇನೂ ಮಾಡಲಾರವು’ ಎಂದು ಸ್ಯಾಮ್ಕೊ ಸೆಕ್ಯುರಿಟೀಸ್‌ ಆ್ಯಂಡ್‌ ಸ್ಟಾಕ್‌ ನೋಟ್‌ನ ಸ್ಥಾಪಕ ಜಮೀತ್‌ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖ ಅಂಶಗಳು
ಸೋಮವಾರ ಚಿಲ್ಲರೆ ಹಣದುಬ್ಬರದ ಅಂಕಿ–ಅಂಶ
ಮಂಗಳವಾರ ಸಗಟು ಹಣದುಬ್ಬರದ ಮಾಹಿತಿ

ಅಂಕಿ–ಅಂಶ
573:
ಹಿಂದಿನ ವಾರ ಬಿಎಸ್‌ಇ ಏರಿಕೆ
161:ಹಿಂದಿನ ವಾರ ನಿಫ್ಟಿ ಏರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT