ಐದು ದಿನಗಳಲ್ಲಿ ಶೇ 48ರಷ್ಟು ಕುಸಿದ ಲಕ್ಷ್ಮೀ ವಿಲಾಸ್ ಬ್ಯಾಂಕ್ ಷೇರು

ನವದೆಹಲಿ: ಲಕ್ಷ್ಮೀ ವಿಲಾಸ್ ಬ್ಯಾಂಕ್ (ಎಲ್ವಿಬಿ) ಷೇರು ಮೌಲ್ಯ ಸತತ ಐದನೇ ದಿನವೂ ಇಳಿಕೆ ಕಂಡಿದ್ದು, ಐದು ದಿನಗಳಲ್ಲಿ ಶೇ 48ರಷ್ಟು ಕುಸಿದಿದೆ. ಬ್ಯಾಂಕ್ಗೆ ಸಂಬಂಧಿಸಿದಂತೆ ನಕಾರಾತ್ಮ ಸುದ್ದಿಗಳು ಹರಿದಾಡುತ್ತಿರುವುದರಿಂದ ಹೂಡಿಕೆದಾರರು ಷೇರು ಮಾರಾಟಕ್ಕೆ ಮುಂದಾಗಿದ್ದಾರೆ.
ಮುಂಬೈ ಷೇರುಪೇಟೆಯಲ್ಲಿ ಲಕ್ಷ್ಮೀ ವಿಲಾಸ್ ಬ್ಯಾಂಕ್ ಷೇರು ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಸೋಮವಾರ ಒಂದೇ ದಿನ ಶೇ 10ರಷ್ಟು ಇಳಿಕೆಯಾಗಿದೆ. ರಾಷ್ಟ್ರೀಯ ಷೇರುಪೇಟೆಯಲ್ಲಿಯೂ ಶೇ 10ರಷ್ಟು ಇಳಿಕೆಯೊಂದಿಗೆ ಪ್ರತಿ ಷೇರು ಬೆಲೆ ₹8.10 ತಲುಪಿದೆ.
ಕಳೆದ ಮಂಗಳವಾರ ಕೇಂದ್ರ ಸರ್ಕಾರವು ಆರ್ಬಿಐ ಶಿಫಾರಸಿನ ಮೇರೆಗೆ ಲಕ್ಷ್ಮೀ ವಿಲಾಸ್ ಬ್ಯಾಂಕ್ ಮೇಲೆ ಒಂದು ತಿಂಗಳು ತಾತ್ಕಾಲಿಕ ನಿರ್ಬಂಧ ಹೇರಿದೆ. ಬ್ಯಾಂಕ್ ನಿರ್ದೇಶಕರ ಮಂಡಳಿಯನ್ನು ರದ್ದು ಪಡಿಸಿದ್ದು, ಠೇವಣಿದಾರರಿಗೆ ಹಣ ಹಿಂಪಡೆಯುವ ಮಿತಿ ಗರಿಷ್ಠ ₹25,000 ನಿಗದಿ ಪಡಿಸಿದೆ. ಖಾಸಗಿ ವಲಯದ ಲಕ್ಷ್ಮಿ ವಿಲಾಸ್ ಬ್ಯಾಂಕ್ನ ಹಣಕಾಸು ಪರಿಸ್ಥಿತಿ ಹದಗೆಡುತ್ತಿದ್ದ ಬೆನ್ನಲ್ಲೇ ಈ ನಿರ್ಧಾರಕ್ಕೆ ಬರಲಾಗಿದೆ
ಕಳೆದ ವರ್ಷ ಸೆಪ್ಟೆಂಬರ್ನಿಂದ ದೇಶದ ಮೂರು ಬ್ಯಾಂಕ್ಗಳು ನಿರ್ಬಂಧಕ್ಕೆ ಒಳಗಾಗಿವೆ. 2019ರಲ್ಲಿ ಪಂಜಾಬ್ ಮತ್ತು ಮಹಾರಾಷ್ಟ್ರ ಕೋ–ಆಪರೇಟಿವ್ ಬ್ಯಾಂಕ್ (ಪಿಎಂಸಿ) , 2020ರ ಮಾರ್ಚ್ನಲ್ಲಿ ಖಾಸಗಿ ವಲಯದ ಯೆಸ್ ಬ್ಯಾಂಕ್ ನಿರ್ಬಂಧಕ್ಕೆ ಒಳಗಾಗಿವೆ. ಭಾರತೀಯ ಸ್ಟೇಟ್ ಬ್ಯಾಂಕ್ನ ಮಾರ್ಗದರ್ಶನದಲ್ಲಿ ಯೆಸ್ ಬ್ಯಾಂಕ್ ಪುನಶ್ಚೇತನಗೊಂಡಿದೆ, ಆದರೆ ಪಿಎಂಸಿ ಇನ್ನೂ ಚೇತರಿಕೆ ಕಾಣಬೇಕಿದೆ.
ಸೋಮವಾರ ಸೆನ್ಸೆಕ್ಸ್ 141 ಅಂಶ ಏರಿಕೆಯಾಗಿ 44,023.47 ಅಂಶಗಳಲ್ಲಿ ವಹಿವಾಟು ನಡೆದಿದೆ. ನಿಫ್ಟಿ 55 ಅಂಶ ಚೇತರಿಕೆಯೊಂದಿಗೆ 12,914.55 ಅಂಶಗಳಲ್ಲಿ ವಹಿವಾಟು ಮುಂದುವರಿದಿದೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.