ಬುಧವಾರ, ಆಗಸ್ಟ್ 10, 2022
24 °C
ಆರು ತಿಂಗಳಲ್ಲೇ ಐಟಿ ಕಂಪನಿಗಳ ಷೇರುಮೌಲ್ಯ ಶೇ 50ರಷ್ಟು ಹೆಚ್ಚಳ

PV Web Exclusive | ಷೇರುಪೇಟೆಯಲ್ಲಿ ಮಿಂಚಿದ ಐಟಿ ವಲಯ

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

Prajavani

ಷೇರುಪೇಟೆಯಲ್ಲಿ ಇದೀಗ ಐಟಿ ವಲಯ ಮಿಂಚುತ್ತಿದೆ. ಕೋವಿಡ್‌ ಸಂಕಷ್ಟದ ನಡುವೆಯೂ ಕಳೆದ ಆರು ತಿಂಗಳ ಅವಧಿಯಲ್ಲಿ ಬಹುತೇಕ ಐಟಿ ಕಂಪನಿಗಳ ಷೇರಿನ ಮೌಲ್ಯ ಶೇ 50ಕ್ಕಿಂತಲೂ ಹೆಚ್ಚಾಗಿದೆ. ಅಮೆರಿಕದಲ್ಲಿನ ಎಚ್‌–1ಬಿ ವೀಸಾ ವಿವಾದಕ್ಕೆ ತೆರೆ ಬಿದ್ದಿರುವುದು ಹಾಗೂ ನೂತನ ಅಧ್ಯಕ್ಷರ ಆಯ್ಕೆಯಿಂದಾಗಿ ಹೂಡಿಕೆದಾರರ ಚಿತ್ತ ಇದೀಗ ಐಟಿ ವಲಯದತ್ತ ಹರಿಯುತ್ತಿದೆ.

***

ಕೋವಿಡ್‌ ಸಂಕಷ್ಟದ ನಡುವೆಯೂ ಮಾಹಿತಿ ತಂತ್ರಜ್ಞಾನ (ಐ.ಟಿ) ವಲಯವು ‌ಅಲ್ಪಾವಧಿಯಲ್ಲೇ ಚೇತರಿಸಿಕೊಂಡು, ಜಾಗತಿಕ ಮಟ್ಟದಲ್ಲಿ ಮತ್ತೆ ತನ್ನ ವಹಿವಾಟು ವಿಸ್ತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಷೇರುಪೇಟೆಯಲ್ಲಿ ಐಟಿ ವಲಯವು ಮಿಂಚುತ್ತಿದ್ದು, ಆರು ತಿಂಗಳ ಅವಧಿಯಲ್ಲಿ ಹಲವು ಕಂಪನಿಗಳ ಷೇರುಮೌಲ್ಯವು ಶೇ 50ಕ್ಕಿಂತ ಹೆಚ್ಚಾಗಿವೆ.

ಮುಂಬೈ ಷೇರುಪೇಟೆಯಲ್ಲಿ 2020ರ ಜೂನ್‌ 1ರಂದು 14,366 ಅಂಶಗಳಿದ್ದ ‘ಬಿಎಸ್‌ಇ ಐಟಿ’ ಸೂಚ್ಯಂಕವು, ಇದೇ ಡಿಸೆಂಬರ್‌ 11ಕ್ಕೆ 22,667 ಅಂಶಗಳಿಗೆ ತಲುಪುವ ಮೂಲಕ 8,301 (ಶೇ 58) ಅಂಶಗಳನ್ನು ಗಳಿಸಿಕೊಂಡಿದೆ. 2019ರ ಡಿಸೆಂಬರ್‌ 2ರಂದು 14,749 ಅಂಶಗಳಿದ್ದ ‘ಬಿಎಸ್‌ಐ ಐಟಿ’ ಸೂಚ್ಯಂಕವು ಒಂದು ವರ್ಷದ ಅವಧಿಯಲ್ಲಿ 7,918 (ಶೇ 53.68) ಅಂಶಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ.

ರಾಷ್ಟ್ರೀಯ ಷೇರುಪೇಟೆಯಲ್ಲಿ 2020ರ ಜೂನ್‌ 1ರಂದು 14,307 ಅಂಶಗಳಿದ್ದ ‘ನಿಫ್ಟಿ ಐಟಿ’ ಸೂಚ್ಯಂಕವು, ಇದೇ ಡಿಸೆಂಬರ್‌ 11ರ ವೇಳೆಗೆ 8,357 (ಶೇ 58.41) ಅಂಶಗಳನ್ನು ಗಳಿಸಿಕೊಳ್ಳುವುದರೊಂದಿಗೆ 22,664 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. 2019ರ ಡಿಸೆಂಬರ್‌ 2ರಂದು 14,852 ಅಂಶಗಳಿದ್ದ ‘ನಿಫ್ಟಿ ಐಟಿ’ ಸೂಚ್ಯಂಕವು ಒಂದು ವರ್ಷದ ಅವಧಿಯಲ್ಲಿ 7,812 (ಶೇ 52.59) ಅಂಶಗಳನ್ನು ಗಳಿಸಿಕೊಂಡಿದೆ. ‘ನಿಫ್ಟಿ–50’ ಸೂಚ್ಯಂಕವು ಆರು ತಿಂಗಳ ಅವಧಿಯಲ್ಲಿ ಶೇ 37.53 ಅಂಶಗಳ ಏರಿಕೆ ಕಂಡಿದ್ದರೆ, ಒಂದು ವರ್ಷದ ಅವಧಿಯಲ್ಲಿ ಕೇವಲ ಶೇ 12.16 ಅಂಶಗಳನ್ನು ಹೆಚ್ಚಿಸಿಕೊಂಡಿದೆ.

‘ಮೈಂಡ್‌ಟ್ರೀ’ ಶತಕ ಸಾಧನೆ

ಷೇರುಪೇಟೆಯಲ್ಲಿ ಐಟಿ ವಲಯದ ಪ್ರಮುಖ ಕಂಪನಿಗಳ ಸಾಧನೆಗಳನ್ನು ಅವಲೋಕಿಸಿದಾಗ ‘ಮೈಂಡ್‌ಟ್ರೀ’ ಕಂಪನಿಯು ಒಂದು ವರ್ಷದ ಅವಧಿಯಲ್ಲಿ ತನ್ನ ಷೇರುಮೌಲ್ಯವನ್ನು ದುಪ್ಪಟ್ಟು ಹೆಚ್ಚಿಸಿಕೊಳ್ಳುವ ಮೂಲಕ ಶತಕ ಸಾಧನೆ ಮಾಡಿದೆ. 2019ರ ಡಿಸೆಂಬರ್‌ 2ರಿಂದ 2020ರ ಡಿಸೆಂಬರ್‌ 11ರ ಅವಧಿಯಲ್ಲಿ ಈ ಕಂಪನಿಯ ಷೇರಿನ ಬೆಲೆಯು ₹ 731.50 (ಶೇ 103.72) ಮೌಲ್ಯ ವೃದ್ಧಿಯಾಗಿದೆ. ಕಳೆದ ಜೂನ್‌ 1ರಿಂದ ಇದುವರೆಗೆ ₹ 544.35 (ಶೇ 60.99) ಹೆಚ್ಚಾಗಿದೆ.

ಎಲ್‌ ಆ್ಯಂಡ್‌ ಟಿ ಇನ್‌ಫೋಟೆಕ್‌ ಕಂಪನಿಯ ಷೇರಿನ ಬೆಲೆಯು 2019ರ ಡಿಸೆಂಬರ್‌ 2ರಂದು ₹ 1,636.65 ಇತ್ತು. ಒಂದು ವರ್ಷದ ಅವಧಿಯಲ್ಲಿ ₹ 1,632 (ಶೇ 99.71) ಹೆಚ್ಚಾಗುವ ಮೂಲಕ ಈಗ ₹ 3,268.65ಕ್ಕೆ ತಲುಪಿದೆ. ಆರು ತಿಂಗಳ ಅವಧಿಯಲ್ಲಿ ಈ ಕಂಪನಿಯ ಷೇರಿನ ಬೆಲೆಯು ₹ 1,425.70 (ಶೇ 77.35) ಹೆಚ್ಚಾಗಿದೆ.

ಕಳೆದ ಜೂನ್‌ 1ರಿಂದ ಡಿಸೆಂಬರ್‌ 11ರವರೆಗಿನ ಅವಧಿಯಲ್ಲಿ ಮಾಹಿತಿ ತಂತ್ರಜ್ಞಾನ ವಲಯದ ದೈತ್ಯ ಕಂಪನಿಗಳಾದ ಟಿಸಿಎಸ್‌ನ ಷೇರಿನ ಮೌಲ್ಯವು ಶೇ 36.10, ಇನ್ಫೊಸಿಸ್‌ ಶೇ 66.27, ಎಚ್‌.ಸಿ.ಎಲ್‌ ಟೆಕ್‌ ಶೇ 54.04, ವಿಪ್ರೊ ಶೇ 64.38, ಟೆಕ್‌ ಮಹೀಂದ್ರಾ ಶೇ 69.14, ಎಂಫಸಿಸ್‌ ಶೇ 53.62ರಷ್ಟು ಬೆಲೆ ಏರಿಕೆ ಕಂಡಿದೆ. ಐಟಿ ವಲಯದ ಹಲವು ಕಂಪನಿಗಳು ಕೇವಲ ಆರು ತಿಂಗಳ ಅವಧಿಯಲ್ಲಿ ಹೂಡಿಕೆದಾರರಿಗೆ ಶೇ 50ಕ್ಕಿಂತ ಹೆಚ್ಚು ಲಾಭವನ್ನು ತಂದುಕೊಟ್ಟಿದ್ದು, ಇನ್ನಷ್ಟು ಬಂಡವಾಳವನ್ನು ತಮ್ಮತ್ತ ಸೆಳೆಯಲು ಷೇರುಪೇಟೆಯಲ್ಲಿ ಅವು ಪೈಪೋಟಿಗಿಳಿದಿವೆ.

ಡಿಜಿಟಲ್‌ಗೆ ಹೆಚ್ಚಿದ ಬೇಡಿಕೆ

ಕೋವಿಡ್‌ ಸಂಕಷ್ಟದ ಕಾರಣಕ್ಕೆ ಹಲವು ಕಂಪನಿಗಳು ತಮ್ಮ ಕಾರ್ಯವೈಖರಿಯಲ್ಲಿ ಬದಲಾವಣೆಗಳನ್ನು ತರುತ್ತಿದ್ದು, ಹಲವು ಕೆಲಸಗಳನ್ನು ನಿರ್ವಹಿಸಲು ಡಿಜಿಟಲ್‌ ಮೊರೆಹೋಗುತ್ತಿವೆ. ಮುಂದಿನ 12ರಿಂದ 18 ತಿಂಗಳ ಕಾಲ ಶೇ 70ರಷ್ಟು ಉದ್ಯಮಗಳು ಡಿಜಿಟಲ್‌ ಹಾಗೂ ಕ್ಲೌಡ್‌ ವಿಭಾಗಗಳಲ್ಲಿನ ಹೊರಗುತ್ತಿಗೆ ಮೇಲಿನ ಬಜೆಟ್‌ ಅನ್ನು ಹೆಚ್ಚಿಸಲಿವೆ. ಇದರ ಭಾರಿ ಲಾಭ ಐಟಿ ಕಂಪನಿಗಳಿಗೆ ಲಭಿಸಲಿದೆ ಎಂದು ಎನ್‌.ಎ.ಎಸ್‌.ಎಸ್‌.ಸಿ.ಒ.ಎಂ ಹಾಗೂ ಮೆಕ್‌ಕಿನ್‌ಸೆಯ್‌ ಸಂಸ್ಥೆಯ ವರದಿ ತಿಳಿಸಿದೆ.

ಪ್ರತಿ ಬಾರಿಯೂ ಆರ್ಥಿಕ ಸಂಕಷ್ಟ ತಲೆದೋರಿದಾಗ ಇನ್ನು ಮುಂದೆ ಐಟಿ ಉದ್ಯಮಗಳು ನೆಲ ಕಚ್ಚಲಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಉಳಿದೆಲ್ಲ ಉದ್ಯಮಗಳಿಗಿಂತಲೂ ಬಹುಬೇಗನೆ ಐಟಿ ಉದ್ಯಮಗಳು ಚೇತರಿಸಿಕೊಳ್ಳುತ್ತವೆ ಎಂಬುದಕ್ಕೆ ಇದೀಗ ಕೋವಿಡ್‌ ಸಂಕಷ್ಟವೂ ಸಾಕ್ಷಿಯಾಗಿದೆ.

ಬದಲಾದ ಸನ್ನಿವೇಶಕ್ಕೆ ಬಹುಬೇಗನೆ ಹೊಂದಿಕೊಂಡಿರುವ ಐಟಿ ಕಂಪನಿಗಳು, ತಮ್ಮ ನೌಕರರಿಂದ ಮನೆಯಿಂದಲೇ ಕೆಲಸ ಮಾಡಿಸುವ ಮೂಲಕ ಕಚೇರಿ ನಿರ್ವಹಣೆಯ ‘ಆರ್ಥಿಕ ಹೊರೆ’ಯನ್ನೂ ತಗ್ಗಿಸಿಕೊಂಡು, ಲಾಭ ಗಳಿಕೆಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿವೆ.

ಎಚ್‌–1ಬಿ ವೀಸಾ ವಿವಾದ

ಅಮೆರಿಕದ ಪ್ರತಿಭಾವಂತರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಡೊನಾಲ್ಡ್‌ ಟ್ರಂಪ್‌ ಸರ್ಕಾರ ‘ಎಚ್‌–1ಬಿ ವೀಸಾ’ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಇದರಿಂದಾಗಿ ಭಾರತೀಯ ಮೂಲದ ಐಟಿ ಕಂಪನಿಗಳು ಅಮೆರಿಕದ ಪ್ರತಿಭಾವಂತರಿಗೆ ಹೆಚ್ಚಿನ ಸಂಬಳ ನೀಡಿ ನೌಕರಿಗೆ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಜೊತೆಗೆ ನೌಕರರಿಗೆ ವೇತನ ಹೆಚ್ಚಿಸಬೇಕು ಎಂಬ ನಿಯಮವೂ ಐಟಿ ಕಂಪನಿಗಳ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು.

ಟ್ರಂಪ್‌ ಸರ್ಕಾರದ ಈ ಕಾಯ್ದೆಯನ್ನು ಪ್ರಶ್ನಿಸಿ ಅಲ್ಲಿನ ನ್ಯಾಯಾಲಯದ ಮೆಟ್ಟಿಲೇರಲಾಗಿತ್ತು. ಡಿಸೆಂಬರ್‌ 1ರಂದು ಅಮೆರಿಕ ನ್ಯಾಯಾಲಯವು ಟ್ರಂಪ್‌ ಸರ್ಕಾರದ ನೂತನ ಕಾಯ್ದೆಯನ್ನು ರದ್ದುಗೊಳಿಸಿ ಆದೇಶಿಸಿರುವದರಿಂದ ಐಟಿ ಕಂಪನಿಗಳು ನಿಟ್ಟುಸಿರು ಬಿಟ್ಟಿವೆ.

ಅಮೆರಿಕ ಸರ್ಕಾರವು ಪ್ರತಿ ವರ್ಷ 85,000 ‘ಎಚ್‌–1ಬಿ ವೀಸಾ’ ನೀಡುತ್ತಿದೆ. ಇದರಲ್ಲಿ ಭಾರತದ ಐಟಿ ಕಂಪನಿಗಳದ್ದೇ ಸಿಂಹಪಾಲು ಇರುತ್ತಿತ್ತು. ಟ್ರಂಪ್‌ ಸರ್ಕಾರದ ‘ಅಮೆರಿಕ ಪ್ರಜೆ ಮೊದಲು’ ನೀತಿಯ ಪರಿಣಾಮ ಮೂರು ವರ್ಷಗಳಿಂದ ಐಟಿ ಕಂಪನಿಗಳಿಗೆ ‘ಎಚ್‌–1ಬಿ ವೀಸಾ’ ಲಭಿಸುವ ಪ್ರಮಾಣ ಕಡಿಮೆಯಾಗುತ್ತಿತ್ತು. ಇದೀಗ ನ್ಯಾಯಾಲಯವು ಟ್ರಂಪ್‌ ಸರ್ಕಾರ ಜಾರಿಗೊಳಿಸಿದ್ದ ನೂತನ ಕಾಯ್ದೆಯನ್ನು ಅಮಾನ್ಯಗೊಳಿಸಿದ್ದರಿಂದ ‘ಎಚ್‌–1ಬಿ ವೀಸಾ’ ಪಡೆದುಕೊಳ್ಳುವ ಹಾದಿ ಮತ್ತೆ ಸುಗಮವಾಗುವ ಸಾಧ್ಯತೆ ಇದೆ. ಜೊತೆಗೆ ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದಿರುವ ಜೋ ಬೈಡನ್‌ ಅವರು ಭಾರತೀಯ ಪರ ನಿಲುವು ತಳೆಯಬಹುದು ಎಂಬ ನಿರೀಕ್ಷೆಯಲ್ಲೂ ಐಟಿ ಕಂಪನಿಗಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು