ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಗಳಿಕೆಯಲ್ಲಿ ಎಫ್‌ಎಂಸಿಜಿ ವಲಯದ ‘ಕಿಂಗ್‌’ ಆದ ಐಟಿಸಿ'

ಆರು ತಿಂಗಳಲ್ಲಿ ಷೇರಿನ ಮೌಲ್ಯ ಶೇ 30.40ರಷ್ಟು ಹೆಚ್ಚಳ
Last Updated 3 ಜುಲೈ 2022, 13:28 IST
ಅಕ್ಷರ ಗಾತ್ರ

ಷೇರುಪೇಟೆಯಲ್ಲಿ ಮಾರಾಟದ ಒತ್ತಡಕ್ಕೆ ಸಿಲುಕಿ ಹಲವು ಕಂಪನಿಗಳು ಇನ್ನೂ ಕುಸಿತದ ಹಾದಿಯಲ್ಲೇ ಹೆಣಗಾಡುತ್ತಿವೆ. ಇದರ ನಡುವೆಯೇ ಆರು ತಿಂಗಳಲ್ಲೇ ತನ್ನ ಷೇರಿನ ಮೌಲ್ಯವನ್ನು ಶೇ 30ರಷ್ಟು ಹೆಚ್ಚಿಸಿಕೊಂಡ ಐಟಿಸಿ ಕಂಪನಿಯು, ಎಫ್‌ಎಂಸಿಜಿ ವಲಯದ ‘ಕಿಂಗ್‌’ ಎನಿಸಿಕೊಂಡಿದೆ...

ಮಾರಾಟದ ಒತ್ತಡಕ್ಕೆ ಸಿಲುಕಿ ಭಾರತೀಯ ಷೇರುಪೇಟೆಯಲ್ಲಿ ಹಲವು ವಲಯಗಳ ಸೂಚ್ಯಂಕಗಳು ‘ಕೆಂಪು’ ದೂಳಿನಿಂದ ಕೂಡಿದ ಕುಸಿತದ ಹಾದಿಯಿಂದ ಇನ್ನೂ ಹೊರಬಂದಿಲ್ಲ. ಇದರ ನಡುವೆಯೇ ವೇಗವಾಗಿ ಬಿಕರಿಯಾಗುವ ಗ್ರಾಹಕ ಸರಕುಗಳ (ಎಫ್‌ಎಂಸಿಜಿ) ವಲಯ ‘ಹಸಿರು’ ಬಣ್ಣದಿಂದ ಕಂಗೊಳಿಸುವ ಹಾದಿಯಲ್ಲಿ ಸಾಗತೊಡಗಿದೆ. ಆರು ತಿಂಗಳಲ್ಲಿ ಮಾರುಕಟ್ಟೆ ಬಂಡವಾಳವನ್ನು ಶೇ 30.40ರಷ್ಟು ಹೆಚ್ಚಿಸಿಕೊಂಡಿರುವ ಐಟಿಸಿ ಕಂಪನಿಯು, ಗಳಿಕೆಯಲ್ಲಿ ಎಫ್‌ಎಂಸಿಜಿ ವಲಯದ ‘ಕಿಂಗ್‌’ ಎನಿಸಿಕೊಂಡಿದೆ.

ಕಳೆದ ಆರು ತಿಂಗಳ ವಹಿವಾಟುಗಳನ್ನು ಗಮನಿಸಿದಾಗ ಮುಂಬೈ ಷೇರುಪೇಟೆ (ಬಿಎಸ್‌ಇ)ಯ ಮುಖ್ಯ ಸೂಚ್ಯಂಕ ‘ಸೆನ್ಸೆಕ್ಸ್‌’ ಶೇ 9.18 ಹಾಗೂ ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ)ಯ ಪ್ರಧಾನ ಸೂಚ್ಯಂಕ ‘ನಿಫ್ಟಿ–50’ ಶೇ 9.23ರಷ್ಟು ಕುಸಿತ ಕಂಡಿದೆ. ಹೀಗಿದ್ದರೂ ಇದೇ ಅವಧಿಯಲ್ಲಿ ‘ಬಿಎಸ್‌ಇ ಎಫ್‌ಎಂಸಿಜಿ’ ಶೇ 2.33 ಹಾಗೂ ‘ನಿಫ್ಟಿ ಎಫ್‌ಎಂಸಿಜಿ’ ಸೂಚ್ಯಂಕಗಳು ಶೇ 3.05ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿವೆ. ಈ ನಡುವೆ ನಿಫ್ಟಿ ಐಟಿ (ಶೇ –27.48), ನಿಫ್ಟಿ ಮೆಟಲ್‌ (ಶೇ –14.95), ನಿಫ್ಟಿ ಬ್ಯಾಂಕ್‌ (ಶೇ –6.69) ಹಾಗೂ ನಿಫ್ಟಿ ಫಾರ್ಮಾ (ಶೇ –13.80) ಸೂಚ್ಯಂಕಗಳು ತನ್ನ ಮೌಲ್ಯವನ್ನು ಕಳೆದುಕೊಂಡಿರುವುದು ಗಮನಾರ್ಹ ಸಂಗತಿ.

ಪುಟಿದೆದ್ದ ಐಟಿಸಿ:

ಕಳೆದ ಒಂದು ವಾರದಲ್ಲಿ ‘ನಿಫ್ಟಿ 50’ ಸೂಚ್ಯಂಕವು ಕೇವಲ ಶೇ 0.34ರಷ್ಟು ಏರಿಕೆ ಕಂಡಿದ್ದರೆ, ‘ನಿಫ್ಟಿ ಎಫ್‌ಎಂಸಿಜಿ’ ಸೂಚ್ಯಂಕವು ಶೇ 2.51ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಎಫ್‌ಎಂಸಿಜಿ ವಲಯದಲ್ಲಿ ಮಾರುಕಟ್ಟೆ ಬಂಡವಾಳ ನೋಡಿದಾಗ ಎರಡನೇ ದೊಡ್ಡ ಕಂಪನಿಯಾಗಿರುವ ಐಟಿಸಿಯು ಈ ಅವಧಿಯಲ್ಲಿ ಪುಟಿದೆದ್ದಿದ್ದು, ರಾಷ್ಟ್ರೀಯ ಷೇರುಪೇಟೆಯಲ್ಲಿ ಷೇರಿನ ಮೌಲ್ಯವನ್ನು ₹ 18.50 (ಶೇ 6.95)ರಷ್ಟು ಹೆಚ್ಚಿಸಿಕೊಂಡಿದೆ. 2021ರ ಜುಲೈ 9ರಂದು 52 ವಾರಗಳ ಕನಿಷ್ಠ ಮಟ್ಟಕ್ಕೆ (₹200.90) ಕುಸಿದಿದ್ದ ಐಟಿಸಿಯು, ಇದೇ ಜುಲೈ 1ರಂದು ಹೊಸದಾಗಿ 52 ವಾರಗಳ ಗರಿಷ್ಠ ಮಟ್ಟವನ್ನು (₹ 285) ನಿರ್ಮಿಸುವ ಮೂಲಕ ಹೂಡಿಕೆದಾರರ ಗಮನ ಸೆಳೆದಿದೆ. ವಾರಾಂತ್ಯವೂ ಆಗಿದ್ದ ಶುಕ್ರವಾರದಂದೇ ಈ ಕಂಪನಿಯ ಷೇರಿನ ಬೆಲೆಯು ₹ 10.85 (ಶೇ 3.97)ರಷ್ಟು ಹೆಚ್ಚಾಗಿರುವುದು ವಿಶೇಷವಾಗಿದೆ.

ಐಟಿಸಿ ಕಂಪನಿಯ ಷೇರಿನ ಮೌಲ್ಯವರ್ಧನೆ
ಐಟಿಸಿ ಕಂಪನಿಯ ಷೇರಿನ ಮೌಲ್ಯವರ್ಧನೆ

ಮೂರು ವರ್ಷಗಳಿಗೆ ಹೋಲಿಸಿ ನೋಡಿದರೆ ಈ ಕಂಪನಿಯ ಷೇರಿನ ಮೌಲ್ಯ ಹೆಚ್ಚಾಗಿರುವುದು ಕೇವಲ ಶೇ 3.42ರಷ್ಟು. ಆದರೆ, ಷೇರುಪೇಟೆಯಲ್ಲಿನ ‘ಕರಡಿ ಕುಣಿತ’ದಿಂದಾಗಿ ಹಲವು ಪ್ರಮುಖ ಕಂಪನಿಗಳು ಕುಸಿತದ ಹಾದಿಯನ್ನು ಹಿಡಿದಿದ್ದರೂ ಈ ಕಂಪನಿಯು ತೋರಿದ ‘ಗೂಳಿ ಓಟ’ದಿಂದಾಗಿಒಂದು ವರ್ಷದ ಅವಧಿಯಲ್ಲಿ ಷೇರಿನ ಬೆಲೆ ₹81.35 (ಶೇ40.07)ರಷ್ಟು ಹೆಚ್ಚಾಗಿದೆ. ಒಂದು ತಿಂಗಳಲ್ಲಿ ₹ 12.50 (4.59%), 3 ತಿಂಗಳಲ್ಲಿ ₹ 31.05 (12.25%) ಹಾಗೂ ಆರು ತಿಂಗಳಲ್ಲಿ 6 ತಿಂಗಳಲ್ಲಿ ₹ 66.30 (30.40%)ರಷ್ಟು ಬೆಲೆಯನ್ನು ಹೆಚ್ಚಿಸಿಕೊಂಡಿರುವುದು ಗಮನಾರ್ಹ ಸಂಗತಿಯಾಗಿದೆ.

ಐಟಿಸಿ ಜೊತೆಗೆ ಪೈಪೋಟಿಗಿಳಿದಿರುವ ಎಫ್‌ಎಂಸಿಜಿ ವಲಯದ ‘ವರುಣ ಬೆವರೆಜಸ್‌’ ಕಂಪನಿ ಸಹ ಆರು ತಿಂಗಳಲ್ಲಿ ಶೇ 34.01ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಈ ಕಂಪನಿಯ ಷೇರಿನ ಮೌಲ್ಯವು ಕಳೆದ ಮೂರು ತಿಂಗಳಲ್ಲಿ ಶೇ 26.79 ಹಾಗೂ ಒಂದು ತಿಂಗಳಲ್ಲಿ ಶೇ 7.33ರಷ್ಟು ಹೆಚ್ಚಾಗಿದೆ.

ಇದೇ ವಲಯದ ಇನ್ನೊಂದು ಪ್ರಮುಖ ಕಂಪನಿ ಕೋಲ್ಗೇಟ್‌ ಪಾಮೋಲಿವ್‌ನ ಷೇರಿನ ಮೌಲ್ಯ ಆರು ತಿಂಗಳಲ್ಲಿ ಶೇ 2.30ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಉಳಿದ ಕಂಪನಿಗಳ ಷೇರಿನ ಮೌಲ್ಯ ಕುಸಿತದ ಹಾದಿಯನ್ನೇ ತುಳಿದಿದೆ.

ಪಾತಾಳಕ್ಕೆ ಕುಸಿದ ಜುಬಿಲೆಂಟ್‌ ಫುಡ್‌:

ವರ್ಷಾರಂಭದಿಂದ ಇದುವರೆಗೆ ಲೆಕ್ಕಹಾಕಿದಾಗ ಎಫ್‌ಎಂಸಿಜಿ ವಲಯದಲ್ಲಿ ಅತಿ ಹೆಚ್ಚು ಮೌಲ್ಯ ಕಳೆದುಕೊಂಡ ಮೊದಲ ಮೂರು ಕಂಪನಿಗಳ ಸಾಲಿನಲ್ಲಿ ಕ್ರಮವಾಗಿ ಜುಬಿಲೆಂಟ್‌ ಫುಡ್‌ (ಶೇ –24.61), ಗೋದರೇಜ್‌ ಕನ್ಸ್ಯೂಮರ್‌ (ಶೇ –19.30), ಇಮಾಮಿ (ಶೇ –17.30) ನಿಂತಿವೆ.

ಮಾರುಕಟ್ಟೆ ಬಂಡವಾಳದ ಆಧಾರದಲ್ಲಿ ಅತಿ ದೊಡ್ಡ ಕಂಪನಿಯಾಗಿರುವ ಹಿಂದೂಸ್ಥಾನ್‌ ಯೂನಿಲಿವರ್‌ ಲಿಮಿಟೆಡ್‌ (ಎಚ್‌ಯುಎಲ್‌) ಕಂಪನಿಯ ಷೇರು ಶೇ 3.30ರಷ್ಟು ಕುಸಿತ ಕಂಡಿದೆ. ಈ ವಲಯದ ಉಳಿದ ಪ್ರಮುಖ ಕಂಪನಿಗಳಾದ ನೆಸ್ಲೆ (ಶೇ –9.70), ಟಾಟಾ ಕನ್ಸ್ಯೂಮರ್‌ (ಶೇ –3.21), ಬ್ರಿಟಾನಿಯಾ (ಶೇ –0.60) ಕೂಡ ಷೇರಿನ ಮೌಲ್ಯವನ್ನು ಕಳೆದುಕೊಂಡಿವೆ.

ಐಟಿಸಿ ಕಂಪನಿಯ ಇಣುಕುನೋಟ:

₹ 3.50 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಐಟಿಸಿ ಕಂಪನಿಯು ಸಿಗರೇಟ್‌ ಉದ್ಯಮದಲ್ಲಿ ಏಕಸ್ವಾಮ್ಯ ಸಾಧಿಸಿದ್ದು, ಕಂಪನಿಯ ಆದಾಯದ ದೊಡ್ಡ ಪಾಲು ಈ ಉದ್ಯಮದಿಂದಲೇ ಬರುತ್ತಿದೆ. ಜೊತೆಗೆ ಪೇಪರ್‌ ಹಾಗೂ ಪ್ಯಾಕೇಜಿಂಗ್‌ ಉದ್ಯಮದಲ್ಲೂ ಮುಂಚೂಣಿಯಲ್ಲಿದೆ. ಈಗ ಎಫ್‌ಎಂಸಿಜಿ ಉದ್ಯಮದಲ್ಲೂ ವಹಿವಾಟು ವಿಸ್ತರಿಸಿಕೊಳ್ಳುತ್ತಿದೆ. ಹೋಟೆಲ್‌ ಉದ್ಯಮದಲ್ಲೂ ಹೆಸರು ಮಾಡಿರುವ ಈ ಕಂಪನಿಯ ಷೇರು ಭಾರಿ ಪ್ರಮಾಣದಲ್ಲಿ ‘ಏರಿಳಿತ’ ಕಾಣುವುದು ಅಪರೂಪ. ಷೇರುಪೇಟೆಯಲ್ಲಿ ಮಾರಾಟ ಒತ್ತಡದ ನಡುವೆಯೂ ಈ ಕಂಪನಿಯ ಷೇರು 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿರುವುದು ಹೂಡಿಕೆದಾರರಲ್ಲಿ ಭರವಸೆಯ ಬೆಳಕು ಮೂಡಿಸಿದೆ.

ಸಿಗರೇಟ್‌ ಮೇಲಿನ ತೆರಿಗೆ ಸ್ಥಿರವಾಗಿರುವುದು, ಕೋವಿಡ್‌ ಪ್ರಮಾಣ ಇಳಿಕೆಯಾದ ಬಳಿಕ ಶಾಲಾ–ಕಾಲೇಜುಗಳು ಪುನರಾರಂಭಗೊಂಡು ನೋಟ್‌ಬುಕ್‌ಗಳಿಗೆ ಬೇಡಿಕೆ ಹೆಚ್ಚಾಗಿರುವುದು, ಹೋಟೆಲ್‌ಗಳ ವಹಿವಾಟು ಮತ್ತೆ ಸಹಜ ಸ್ಥಿತಿಯತ್ತ ಮರಳುತ್ತಿರುವುದು ಐಟಿಸಿ ಕಂಪನಿಗೆ ಪೂರಕವಾಗಿದೆ.

ಈ ಕಂಪನಿಯ ಷೇರಿನ ಮುಖಬೆಲೆ ಒಂದು ರೂಪಾಯಿ. ಡಿವಿಡೆಂಡ್‌ ಇಲ್ಡ್‌ 4.04 ಇದೆ. ಪ್ರತಿ ಷೇರಿಗೆ ಫೆಬ್ರುವರಿ 14ರಂದು ₹ 5.25 ಅನ್ನು ಮಧ್ಯಂತರ ಡಿವಿಡೆಂಡ್‌ ನೀಡಿದ್ದ ಕಂಪನಿಯು, ಮೇ 26ರಂದು ₹ 6.25 ಅನ್ನು ಮತ್ತೆ ಡಿವಿಡೆಂಡ್‌ ನೀಡಿದೆ.

2021ರ ಮಾರ್ಚ್‌ ಅಂತ್ಯಕ್ಕೆ ₹ 16,806.89 ಕೋಟಿ ಆದಾಯ ಗಳಿಸಿದ್ದ ಕಂಪನಿಯು 2022ರ ಮಾರ್ಚ್‌ ಅಂತ್ಯಕ್ಕೆ ₹ 16,426 ಕೋಟಿ ಆದಾಯ ಗಳಿಸಿತ್ತು. 2021ರ ಮಾರ್ಚ್‌ ಅಂತ್ಯಕ್ಕೆ ₹ 4,156.20 ಕೋಟಿ ನಿವ್ವಳ ಲಾಭ ಗಳಿಸಿದ್ದ ಕಂಪನಿಯು 2022ರ ಮಾರ್ಚ್‌ ಅಂತ್ಯಕ್ಕೆ ₹ 4,190.96 ಕೋಟಿ ಲಾಭ ಗಳಿಸಿತ್ತು. ಇದೀಗ 2022–23ನೇ ಆರ್ಥಿಕ ಸಾಲಿನ ಮೊದಲ ತ್ರೈಮಾಸಿ ಅವಧಿ ಪೂರ್ಣಗೊಂಡಿದೆ. ಮೊದಲ ತ್ರೈಮಾಸಿಕ ಅವಧಿಯಲ್ಲಿ ಐಟಿಸಿ ಕಂಪನಿಯ ಆದಾಯ ಗಳಿಕೆಯ ಮೇಲೆ ಹೂಡಿಕೆದಾರರು ಕಣ್ಣಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT