ಮುಂಬೈ (ಪಿಟಿಐ): ದೇಶದ ಷೇರುಪೇಟೆಗಳು 2022–23ನೇ ಹಣಕಾಸು ವರ್ಷದ ಕೊನೆಯ ದಿನವಾದ ಶುಕ್ರವಾರ ಭರ್ಜರಿ ಜಿಗಿತ ಕಂಡವು.
ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರುಗಳನ್ನು ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ್ದು ಹಾಗೂ ಜಾಗತಿಕ ಷೇರುಪೇಟೆಗಳಲ್ಲಿ ನಡೆದ ಸಕಾರಾತ್ಮಕ ವಹಿವಾಟು ಸೂಚ್ಯಂಕಗಳ ಏರಿಕೆಗೆ ನೆರವಾದವು. ವಿದೇಶಿ ಬಂಡವಾಳ ಒಳಹರಿವು ಸಹ ವಹಿವಾಟಿನ ಮೇಲೆ ಪ್ರಭಾವ ಬೀರಿತು.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1,031 ಅಂಶ ಜಿಗಿತ ಕಂಡು 58,991 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 279 ಅಂಶ ಹೆಚ್ಚಾಗಿ 17,359 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.
ಅಮೆರಿಕದ ಬಾಂಡ್ ಗಳಿಕೆ ಕಡಿಮೆ ಆಗಿರುವುದು ಹಾಗೂ ವಿದೇಶಿ ಸಾಂಸ್ಥಿಕ ಬಂಡವಾಳ ಒಳಹರಿವಿನ ಕಾರಣಗಳಿಂದಾಗಿ ಮಾರುಕಟ್ಟೆಗಳಲ್ಲಿ ಉತ್ತಮ ವಹಿವಾಟು ನಡೆಯಿತು ಎಂದು ಕೋಟಕ್ ಸೆಕ್ಯುರಿಟೀಸ್ ಲಿಮಿಟೆಡ್‌ನ ತಾಂತ್ರಿಕ ಸಂಶೋಧನೆಯ ಡೆಪ್ಯುಟಿ ಉಪಾಧ್ಯಕ್ಷ ಅಮೋಲ್ ಅಠಾವಳೆ ತಿಳಿಸಿದ್ದಾರೆ.
ಸೆನ್ಸೆಕ್ಸ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮೌಲ್ಯ ಶೇ 4ರಷ್ಟು ಹೆಚ್ಚಾಯಿತು.
ಬ್ರೆಂಟ್ ತೈಲ ದರ ಶೇ 0.11ರಷ್ಟು ಇಳಿಕೆ ಕಂಡು ಒಂದು ಬ್ಯಾರಲ್‌ಗೆ 79.18 ಡಾಲರ್‌ಗೆ ತಲುಪಿತು. ವಿದೇಶಿ ಬಂಡವಾಳ ಹೂಡಿಕೆದಾರರು ಶುಕ್ರವಾರ ₹ 358 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.