ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ ಕುಸಿತದ ಭೀತಿ; ಷೇರುಪೇಟೆಯಲ್ಲಿ ಸೃಷ್ಟಿಯಾಯ್ತು ತಲ್ಲಣ

Last Updated 29 ನವೆಂಬರ್ 2019, 10:33 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಷೇರುಪೇಟೆಗಳಲ್ಲಿ ನಿರಂತರ ಗೂಳಿ ಓಟದ ಪರಿಣಾಮ ಏರುಗತಿಯಲ್ಲಿ ಸಾಗಿದ್ದ ಷೇರುಪೇಟೆ ಸಂವೇದಿ ಸೂಚ್ಯಂಕ ಶುಕ್ರವಾರ ಕುಸಿತ ಕಂಡಿದೆ. ಸಾರ್ವಕಾಲಿಕ ದಾಖಲೆಗಳನ್ನು ಸೃಷ್ಟಿಸಿಕೊಂಡ ಸೆನ್ಸೆಕ್ಸ್‌ 41,000 ಅಂಶಗಳಿಗೂ ಕಡಿಮೆಯಾಗಿದೆ.

ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕ(ಜುಲೈ–ಸೆಪ್ಟೆಂಬರ್‌)ದಲ್ಲಿ ದೇಶದ ಆರ್ಥಿಕ ವೃದ್ಧಿ ದರವು ಶೇ 5ಕ್ಕಿಂತಲೂ ಕಡಿಮೆ ಇರಲಿದೆ ಎಂಬ ವರದಿಗಳಿಂದಾಗಿ ಹೂಡಿಕೆದಾರರು ವಿಚಲಿತಗೊಂಡರು. ಬೆಳಿಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ ಷೇರುಗಳ ಮಾರಾಟಕ್ಕೆ ಮುಂದಾದ ಹೂಡಿಕೆದಾರರು, ಷೇರುಗಳ ಖರೀದಿಯಿಂದ ದೂರ ಉಳಿದರು. ಇದರಿಂದಾಗಿ ಷೇರುಪೇಟೆಯಲ್ಲಿ ಮಾರಾಟದ ಒತ್ತಡ ಸೃಷ್ಟಿಯಾಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ, ಸೆನ್ಸೆಕ್ಸ್‌ 336.36 ಅಂಶ ಇಳಿಕೆಯಾಗುವ ಮೂಲಕ 40,793.81 ಅಂಶಗಳಿಗೆ ಕುಸಿದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ, ನಿಫ್ಟಿ 95.10 ಅಂಶ ಕಡಿಮೆಯಾಗಿ 12,056.05 ಅಂಶಗಳಿಗೆ ತಲುಪಿತು.

ಡಾಲರ್‌ ಎದುರು ರೂಪಾಯಿ ಮೌಲ್ಯ ಸಹ ಕುಸಿತ ಕಂಡಿದ್ದು, ₹71.81ರಲ್ಲಿ ವಹಿವಾಟು ನಡೆದಿದೆ.

ಹಾಂಗ್‌ಕಾಂಗ್‌ ಪ್ರತಿಭಟನೆಗೆ ಅಮೆರಿಕ ಸಂಸತ್ತಿನಲ್ಲಿ ಬೆಂಬಲ ವ್ಯಕ್ತವಾಗಿರುವುದರಿಂದ ಚೀನಾ ಮತ್ತು ಅಮೆರಿಕ ನಡುವಿನ ವಾಣಿಜ್ಯ ಬಿಕ್ಕಟ್ಟು ಮತ್ತಷ್ಟು ಕಗ್ಗಂಟಾಗಲಿದೆ ಎಂದು ಜಾಗತಿಕ ಮಟ್ಟದ ಹೂಡಿಕೆದಾರರು ಆತಂಕ ವ್ಯಕ್ತಪಡಿಸಿದ್ದಾರೆ. ಇದೂ ಸಹ ದೇಶೀಯ ಷೇರುಪೇಟೆಗಳ ಮೇಲೆ ಪರಿಣಾಮ ಬೀರಿದೆ.

ಲೋಹ ವಲಯದ ಷೇರುಗಳು ಶೇ 1.4ರಷ್ಟು ಕುಸಿತ ಕಂಡಿವೆ. ಹಿಂಡಾಲ್ಕೊ, ಜಿಂದಾಲ್‌ ಸ್ಟೀಲ್‌, ಟಾಟಾ ಸ್ಟೀಲ್, ನಾಲ್ಕೊ, ವೇದಾಂತ ಹಾಗೂ ಎಸ್ಎಐಎಲ್‌ ಷೇರುಗಳ ಬೆಲೆ ಶೇ 1 ರಿಂದ ಶೇ 3ರವರೆಗೂ ಇಳಿಕೆಯಾಗಿವೆ.

ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ, ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ ಹಾಗೂ ವಾಣಿಜ್ಯ ಬಳಕೆ ವಾಹನಗಳ ಮಾರಾಟದಲ್ಲಿ ಕುಸಿದಿರುವ ವರದಿಗಳಿಂದಾಗಿ ಆಟೊ ವಲಯದ ಷೇರುಗಳ ಖರೀದಿಗೆ ಹೂಡಿಕೆದಾರರು ಉತ್ಸಾಹ ತೋರಿಲ್ಲ. ಭಾರ್ತಿ ಇನ್ಫ್ರಾಟೆಲ್‌ ಶೇ 6.70 ರಷ್ಟು ಗಳಿಕೆ ದಾಖಲಿಸಿದರೆ, ಜೀ ಎಂಟರ್‌ಟೈನ್‌ಮೆಂಟ್‌ ಷೇರು ಶೇ 7.88ರಷ್ಟು ಕುಸಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT