ಭಾನುವಾರ, ಜನವರಿ 16, 2022
28 °C

ಓಮೈಕ್ರಾನ್ ಭೀತಿಗೆ 949 ಅಂಶ ಕುಸಿದ ಸೆನ್ಸೆಕ್ಸ್

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಕೊರೊನಾ ವೈರಾಣುವಿನ ರೂಪಾಂತರಿ ತಳಿ ಓಮೈಕ್ರಾನ್ ದೇಶದಲ್ಲಿ ಹರಡುತ್ತಿರುವುದು ಹೂಡಿಕೆದಾರರನ್ನು ಭೀತಿಗೊಳಿಸಿದೆ. ಇದರ ಪರಿಣಾಮವಾಗಿ ದೇಶದ ಷೇರು ಮಾರುಕಟ್ಟೆ ಸೂಚ್ಯಂಕಗಳು ಸೋಮವಾರದ ವಹಿವಾಟಿನಲ್ಲಿ ಭಾರಿ ಇಳಿಕೆ ದಾಖಲಿಸಿದವು.

ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಿದ್ದು ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದೇಶದ ಷೇರು ಮಾರುಕಟ್ಟೆಗಳಿಂದ ಹಣ ಹಿಂದಕ್ಕೆ ಪಡೆಯುತ್ತಿರುವುದು ಕೂಡ ಸೂಚ್ಯಂಕಗಳ ಪತನಕ್ಕೆ ಕಾರಣವಾದವು ಎಂದು ವರ್ತಕರು ತಿಳಿಸಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರದ ವಹಿವಾಟಿನಲ್ಲಿ 949 ಅಂಶ ಇಳಿಕೆ ದಾಖಲಿಸಿತು. ಮೂರು ತಿಂಗಳಿಗೂ ಹೆಚ್ಚಿನ ಅವಧಿಯ ಕನಿಷ್ಠ ಮಟ್ಟವಾದ 56,747 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರು‍ಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 284 ಅಂಶ ಇಳಿಕೆ ಕಂಡಿತು. ನಿಫ್ಟಿಯು 16,912 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು.

ಸೋಮವಾರದ ವಹಿವಾಟಿನಲ್ಲಿ ಷೇರು ಹೂಡಿಕೆದಾರರ ಸಂಪತ್ತಿನ ಒಟ್ಟು ಮೌಲ್ಯವು ₹ 4.29 ಲಕ್ಷ ಕೋಟಿಯಷ್ಟು ಕಡಿಮೆ ಆಗಿದೆ. ಬಿಎಸ್‌ಇಯಲ್ಲಿ ವಹಿವಾಟು ನಡೆಸುವ ಎಲ್ಲ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯವು ₹ 256 ಲಕ್ಷ ಕೋಟಿಗೆ ಇಳಿಕೆ ಆಗಿದೆ.

‘ಓಮೈಕ್ರಾನ್ ತಳಿಯ ವಿಚಾರವಾಗಿ ಉದ್ಭವಿಸಿರುವ ಅನಿಶ್ಚಿತತೆಗಳು ದೇಶಿ ಹೂಡಿಕೆದಾರರ ವಿಶ್ವಾಸಕ್ಕೆ ಪೆಟ್ಟು ನೀಡಿವೆ. ಸದ್ಯದ ಸ್ಥಿತಿಯಲ್ಲಿ ದೇಶಿ ಷೇರು ಮಾರುಕಟ್ಟೆಗಳಲ್ಲಿ ಅಸ್ಥಿರತೆ ಇರುವ ಸಾಧ್ಯತೆ ಇದೆ. ಓಮೈಕ್ರಾನ್ ಪ್ರಭಾವ, ಆರ್‌ಬಿಐ ಹಣಕಾಸು ನೀತಿ ಸಮಿತಿ ಕೈಗೊಳ್ಳುವ ತೀರ್ಮಾನ ಹಾಗೂ ಅಮೆರಿಕದ ಫೆಡರಲ್ ಬ್ಯಾಂಕ್ ಹಣಕಾಸು ನೀತಿಗೆ ಸಂಬಂಧಿಸಿದಂತೆ ಕೈಗೊಳ್ಳುವ ತೀರ್ಮಾನವನ್ನು ಆಧರಿಸಿ ಷೇರುಪೇಟೆಯ ಚಲನೆ ಇರಲಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

‘ಈಗಿನ ಸಂದರ್ಭದಲ್ಲಿ ಇರುವ ಅನಿಶ್ಚಿತತೆಗಳನ್ನು ಪರಿಗಣಿಸಿ, ಆರ್‌ಬಿಐ ಹೊಂದಾಣಿಕೆಯ ನಿಲುವನ್ನು ಮುಂದುವರಿಸಬೇಕು ಎಂಬ ಬಯಕೆಯು ಬಂಡವಾಳ ಮಾರುಕಟ್ಟೆಯಲ್ಲಿ ಇದೆ. ಆದರೆ, 2022ರ ಮೊದಲಾರ್ಧದಲ್ಲಿ ಒಂದಿಷ್ಟು ಬದಲಾವಣೆಗಳನ್ನು ನಿರೀಕ್ಷಿಸಬಹುದು’ ಎಂದು ನಾಯರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇಕಡ 2.23ರಷ್ಟು ಹೆಚ್ಚಳ ಆಗಿ ಪ್ರತಿ ಬ್ಯಾರೆಲ್‌ಗೆ 71.44 ಡಾಲರ್‌ಗೆ ತಲುಪಿದೆ. ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಸೋಮವಾರ 28 ಪೈಸೆ ಕುಸಿದು 75.40ಕ್ಕೆ ತಲುಪಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು