ಸೋಮವಾರ, ಜುಲೈ 26, 2021
23 °C
ಬ್ಯಾಂಕಿಂಗ್‌ ಷೇರುಗಳಲ್ಲಿ ಮಾರಾಟ ಒತ್ತಡ

6 ದಿನಗಳ ಗೂಳಿ ಓಟಕ್ಕೆ ತಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ  : ಷೇರುಪೇಟೆಯಲ್ಲಿನ ಆರು ವಹಿವಾಟು ದಿನಗಳ ಗೂಳಿ ಓಟಕ್ಕೆ ಗುರುವಾರ ತಡೆ ಬಿದ್ದಿತು.

ಬ್ಯಾಂಕಿಂಗ್‌ ಷೇರುಗಳಲ್ಲಿನ  ಮಾರಾಟ ಒತ್ತಡದಿಂದಾಗಿ ಸಂವೇದಿ ಸೂಚ್ಯಂಕವು 129 ಅಂಶಗಳ ಕುಸಿತ ಕಂಡಿತು. ದಿನದ ವಹಿವಾಟಿನಲ್ಲಿ 599 ಅಂಶ ಏರಿಕೆ ಕಂಡಿದ್ದ (34,310 ಅಂಶ) ಸೂಚ್ಯಂಕವು ಕೊನೆಯಲ್ಲಿ 33,980.70 ಅಂಶಗಳಿಗೆ ಇಳಿಯಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ 32 ಅಂಶ ಕುಸಿದು ದಿನದಂತ್ಯಕ್ಕೆ 10,029 ಅಂಶಗಳಿಗೆ ತಲುಪಿತು.

ಕಾಣದ ಖರೀದಿ ಉತ್ಸಾಹ: ಆರ್ಥಿಕ ಚೇತರಿಕೆ ಸಾಧ್ಯತೆ ಬಗ್ಗೆ ಹೂಡಿಕೆದಾರರಲ್ಲಿ ಮನೆ ಮಾಡಿರುವ ಕಾದು ನೋಡುವ ತಂತ್ರ ಮತ್ತು  ಕೋವಿಡ್‌ ಪ್ರಕರಣಗಳು ಒಂದೇ ದಿನ ದಾಖಲೆ ಸಂಖ್ಯೆಯಲ್ಲಿ ಹೆಚ್ಚಳಗೊಂಡಿರುವುದರಿಂದ ಪೇಟೆಯಲ್ಲಿ ಖರೀದಿ ಉತ್ಸಾಹ ಕುಗ್ಗಿದೆ. 

ಅವಧಿ ಸಾಲಗಳ ಮರು ಪಾವತಿ ಮುಂದೂಡಿಕೆಯಲ್ಲಿ ಬಡ್ಡಿ ಮನ್ನಾ ಮಾಡುವ ಕುರಿತು ಹೇಳಿಕೆ ನೀಡಲು ಆರ್‌ಬಿಐ ಮತ್ತು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ನೀಡಿದ ಸೂಚನೆಯು ಬ್ಯಾಂಕಿಂಗ್‌ ಷೇರುಗಳಲ್ಲಿ ಮಾರಾಟ ಒತ್ತಡ ಸೃಷ್ಟಿಸಿತು. ಜಾಗತಿಕ ಷೇರುಪೇಟೆಗಳಲ್ಲಿನ ದುರ್ಬಲ ವಹಿವಾಟು ಕೂಡ ಸೂಚ್ಯಂಕ ಕುಸಿತಕ್ಕೆ ಕಾರಣವಾಯಿತು.

ಏಷ್ಯನ ಪೇಂಟ್ಸ್‌ ಷೇರು ಬೆಲೆ ಗರಿಷ್ಠ ಶೇ 5ರಷ್ಟು ಕುಸಿತ ಕಂಡಿತು. ಬಜಾಜ್‌ ಫೈನಾನ್ಸ್‌, ಎಚ್‌ಡಿಎಫ್‌ಸಿ, ಇಂಡಸ್‌ಇಂಡ್‌ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌ ಮತ್ತು ಕೋಟಕ್‌ ಬ್ಯಾಂಕ್ ಷೇರುಗಳೂ ಕುಸಿತ ದಾಖಲಿಸಿವೆ.

ಟೆಕ್‌ ಮಹೀಂದ್ರಾ, ಸನ್‌ ಫಾರ್ಮಾ, ಭಾರ್ತಿ ಏರ್‌ಟೆಲ್‌ ಮತ್ತು ಎಚ್‌ಸಿಎಲ್ ಟೆಕ್‌ ಷೇರುಗಳು ಲಾಭ ಬಾಚಿಕೊಂಡವು.

ಹಾಂಗ್‌ಕಾಂಗ್‌, ಸೋಲ್‌, ಟೋಕಿಯೊ ಷೇರುಪೇಟೆಗಳಲ್ಲಿಯೂ ಮಾರಾಟ ಒತ್ತಡ  ಕಂಡು ಬಂದಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲದ ಬೆಲೆಯು ಶೇ 1.21ರಷ್ಟು ಕಡಿಮೆಯಾಗಿ ಪ್ರತಿ ಬ್ಯಾರಲ್‌ಗೆ 39.31 ಡಾಲರ್‌ಗೆ ಇಳಿಯಿತು.

ರೂಪಾಯಿ ಬೆಲೆ: ಡಾಲರ್‌ ಎದುರಿನ ರೂಪಾಯಿ ವಿನಿಮಯ ದರವು 10 ಪೈಸೆ ಕಡಿಮೆಯಾಗಿ ₹ 75.57ಕ್ಕೆ ಇಳಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.