ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ ಪತನ, ₹ 13 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು

Last Updated 24 ಫೆಬ್ರುವರಿ 2022, 20:51 IST
ಅಕ್ಷರ ಗಾತ್ರ

ನವದೆಹಲಿ: ಷೇರುಪೇಟೆ ಸೂಚ್ಯಂಕವು ಭಾರಿ ಇಳಿಕೆ ಕಂಡ ಪರಿಣಾಮವಾಗಿ ಹೂಡಿಕೆದಾರರ ₹ 13.44 ಲಕ್ಷ ಕೋಟಿ ಮೌಲ್ಯದ ಸಂಪತ್ತು ಗುರುವಾರ ಕರಗಿದೆ.

ಮುಂಬೈ ಷೇರುಪೇಟೆಯಲ್ಲಿ ನೋಂದಾಯಿತ ಆಗಿರುವ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯವು ಗುರುವಾರದ ಅಂತ್ಯಕ್ಕೆ ₹ 242 ಲಕ್ಷ ಕೋಟಿಗೆ ಇಳಿಕೆ ಆಗಿದೆ. ಬುಧವಾರ ಈ ಮೌಲ್ಯವು ₹ 255 ಲಕ್ಷ ಕೋಟಿಯಷ್ಟು ಇತ್ತು.

ವಿದೇಶಿ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಹೆಚ್ಚಿನ ಗಮನ ನೀಡಿದ್ದು ಕೂಡ ಮಾರುಕಟ್ಟೆ ಕುಸಿಯಲು ಒಂದು ಕಾರಣ ಎಂದು ವರ್ತಕರು ತಿಳಿಸಿದ್ದಾರೆ.

‘ನಿಫ್ಟಿಯು ಗರಿಷ್ಠ 18,604 ಅಂಶಗಳವರೆಗೆ ಈ ಹಿಂದೆ ತಲುಪಿತ್ತು. ಆ ಮಟ್ಟಕ್ಕೆ ಹೋಲಿಸಿದರೆ ಈಗ ನಿಫ್ಟಿ ಶೇ 13ರಷ್ಟು ಇಳಿಕೆ ಆಗಿದೆ. ರಷ್ಯಾ ಮತ್ತು ಉಕ್ರೇನ್‌ ನಡುವಿನ ಸಂಘರ್ಷದ ಪರಿಸ್ಥಿತಿಯನ್ನು ಕಂಡರೆ, ಮಾರುಕಟ್ಟೆಗಳು ಒತ್ತಡದಲ್ಲಿ ವಹಿವಾಟು ನಡೆಸುವುದು ಇನ್ನಷ್ಟು ದಿನ ಮುಂದುವರಿಯಬಹುದು’ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಣ್ಣ ಹೂಡಿಕೆಗಳ ಸಂಶೋಧನಾ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕಾ ಹೇಳಿದ್ದಾರೆ. ‘ಹೂಡಿಕೆದಾರರು ಈಗ ತಾಳ್ಮೆಯಿಂದ ಇರಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.

ಬಿಎಸ್‌ಇ ನೋಂದಾಯಿತ ಸರಿಸುಮಾರು 279 ಕಂಪನಿಗಳ ಷೇರುಗಳು ತಮ್ಮ ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ಕುಸಿದಿವೆ. ‘ಹೂಡಿಕೆದಾರರು ಆತಂಕಕ್ಕೆ ಒಳಗಾಗಿದ್ದಾರೆ. ಷೇರುಗಳ ಮಾರಾಟದಲ್ಲಿ ತೊಡಗಿದ್ದಾರೆ’ ಎಂದು ಕೋಟಕ್ ಸೆಕ್ಯುರಿಟೀಸ್‌ನ ಈಕ್ವಿಟಿ ಹೂಡಿಕೆಗಳ ಮುಖ್ಯಸ್ಥ ಶ್ರೀಕಾಂತ್ ಚವಾಣ್ ಹೇಳಿದ್ದಾರೆ.

ದೇಶಿ ಷೇರುಪೇಟೆ ಭಾರಿ ಪತನ

ಮುಂಬೈ: ಉಕ್ರೇನ್ ಮೇಲೆ ರಷ್ಯಾ ಪೂರ್ಣ ಪ್ರಮಾಣದ ಯುದ್ಧ ಘೋಷಣೆ ಮಾಡಿದ್ದು ದೇಶದ ಷೇರುಪೇಟೆಗಳು ಭಾರಿ ಪತನ ಕಾಣುವಂತೆ ಮಾಡಿದೆ. ಯುದ್ಧ ಘೋಷಣೆ ಆದ ನಂತರದಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 2,702 ಅಂಶ ಕುಸಿಯಿತು. 2020ರ ಮಾರ್ಚ್ 23ರ ನಂತರ ಸೆನ್ಸೆಕ್ಸ್ ಈ ಪ್ರಮಾಣದ ಕುಸಿತ ಕಂಡಿದ್ದು ಇದೇ ಮೊದಲು.

ವಹಿವಾಟಿನ ನಡುವಿನಲ್ಲಿ ಸೆನ್ಸೆಕ್ಸ್ 2,850 ಅಂಶಗಳವರೆಗೂ ಕುಸಿದಿತ್ತು. ದಿನದ ಅಂತ್ಯಕ್ಕೆ 54,529 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 815 ಅಂಶ (ಶೇಕಡ 4.78ರಷ್ಟು) ಕುಸಿಯಿತು. 16,247 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.

ಸೆನ್ಸೆಕ್ಸ್ ಸೂಚ್ಯಂಕದಲ್ಲಿನ ಅಷ್ಟೂ ಕಂಪನಿಗಳ ಷೇರುಗಳು ಇಳಿಕೆ ಕಂಡವು. ಜಾಗತಿಕವಾಗಿ ಬಹುತೇಕ ಷೇರು ಮಾರುಕಟ್ಟೆಗಳು ಕುಸಿತ ದಾಖಲಿಸಿವೆ. ಹೂಡಿಕೆದಾರರು ಸುರಕ್ಷಿತ ಆಯ್ಕೆಯಾದ ಚಿನ್ನದ ಕಡೆ ಮುಖ ಮಾಡಿದ್ದಾರೆ.

‘ವಿಶ್ವದ ಷೇರು ಮಾರುಕಟ್ಟೆಗಳು ಯುದ್ಧ ನಡೆಯುತ್ತದೆ ಎಂಬ ನಿರೀಕ್ಷೆ ಹೊಂದಿರಲಿಲ್ಲ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವೆ ಸಭೆ ನಡೆಯುತ್ತದೆ ಎಂಬ ನಿರೀಕ್ಷೆ ಇತ್ತು. ಹಾಗಾಗಿ, ಯುದ್ಧದ ಘೋಷಣೆಯ ಸುದ್ದಿಯು ತೀರಾ ಅನಿರೀಕ್ಷಿತವಾಗಿ ಎರಗಿತು. ಜಗತ್ತಿನ ಎಲ್ಲೆಡೆ ಷೇರು ಮಾರುಕಟ್ಟೆಗಳು ಕುಸಿದಿವೆ’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಬಿಎಸ್‌ಇ ಸ್ಮಾಲ್‌ ಕ್ಯಾಲ್‌, ಮಿಡ್ ಕ್ಯಾಪ್ ಮತ್ತು ಲಾರ್ಜ್ ಕ್ಯಾಪ್ ಸೂಚ್ಯಂಕಗಳು ಕೂಡ ಗರಿಷ್ಠ ಶೇ 5.77ರವರೆಗೆ ಕುಸಿದಿವೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 102 ಪೈಸೆ ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT