ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರು ಮಾತು: ಷೇರುಪೇಟೆ ಭಾಗೀದಾರರು ಯಾರು?

Last Updated 8 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಷೇರು ಮಾರುಕಟ್ಟೆಗೆ ಬರುವವರೆಲ್ಲರೂ ಹೂಡಿಕೆ ಮಾಡಿ ಲಾಭ ಗಳಿಸುವ ಉದ್ದೇಶದಿಂದಲೇ ಬರುತ್ತಾರೆ.ಷೇರುಪೇಟೆಯಲ್ಲಿ ಷೇರುಗಳ ಖರೀದಿ ಮತ್ತು ಮಾರಾಟ ಮಾಡುವವರನ್ನು ಷೇರುಪೇಟೆಯ ಭಾಗಿದಾರರು (Stock Market Participants) ಎಂದು ಸರಳವಾಗಿ ಕರೆಯಬಹುದು. ವೈಯಕ್ತಿಕ ಹೂಡಿಕೆದಾರರು, ಸಾಂಸ್ಥಿಕ ಹೂಡಿಕೆದಾರರು, ಹಣಕಾಸು ನಿರ್ವಹಣಾ ಸಂಸ್ಥೆಗಳು, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೀಗೆ ಹಲವರು ಷೇರು ಮಾರುಕಟ್ಟೆಯ ಭಾಗೀದಾರರಾಗಿರುತ್ತಾರೆ. ಅವರೆಲ್ಲರ ಪಾಲ್ಗೊಳ್ಳುವಿಕೆಯಿಂದ ಷೇರು ಮಾರುಕಟ್ಟೆ ಮುನ್ನಡೆಯುತ್ತದೆ.

ಮಾರುಕಟ್ಟೆಯ ಭಾಗೀದಾರರ ಕೆಲವು ಉದಾಹರಣೆಗಳು ಹೀಗಿವೆ.

1. ದೇಶಿ ರಿಟೇಲ್ ಹೂಡಿಕೆದಾರರು (Domestic Retail Participants): ಷೇರುಗಳ ಖರೀದಿ ಮತ್ತು ಮಾರಾಟ ಮಾಡುವ ನಮ್ಮ–ನಿಮ್ಮಂತಹ ವೈಯಕ್ತಿಕ ಹೂಡಿಕೆದಾರರನ್ನು ದೇಶಿ ರಿಟೇಲ್ಹೂಡಿಕೆದಾರರು ಎಂದು ಕರೆಯಬಹುದು. ಇಲ್ಲಿ ಹೂಡಿಕೆದಾರನು ಸಾಂಪ್ರದಾಯಿಕ ರೀತಿಯಲ್ಲಿ ಅಥವಾ ಆನ್‌ಲೈನ್ ಮೂಲಕಷೇರುಗಳನ್ನು ಖರೀದಿಸುತ್ತಾನೆ. ಐಪಿಒಗಳಲ್ಲಿ (ಆರಂಭಿಕ ಸಾರ್ವಜನಿಕ ಹೂಡಿಕೆ) ₹ 2ಲಕ್ಷದವರೆಗಿನ ಹೂಡಿಕೆ ಮಾಡುವವರನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ರಿಟೇಲ್ಹೂಡಿಕೆದಾರ ಎಂದು ಪರಿಗಣಿಸುತ್ತದೆ.

2. ಅನಿವಾಸಿ ಭಾರತೀಯ ಹೂಡಿಕೆದಾರ (Non- Resident Indians - NRI’s): ಭಾರತೀಯ ಮೂಲದವರಾಗಿದ್ದು ಅನ್ಯ ದೇಶಗಳಲ್ಲಿ ವಾಸವಿದ್ದು ಭಾರತೀಯ ಷೇರುಪೇಟೆಯಲ್ಲಿ ಹಣತೊಡಗಿಸುವವರು ಅನಿವಾಸಿ ಭಾರತೀಯ ಹೂಡಿಕೆದಾರರು. ಅನಿವಾಸಿ ಭಾರತೀಯರು ಷೇರು ಮಾರುಕಟ್ಟೆಯಲ್ಲಿ ತೊಡಗಿಸಲು ಕೆಲವು ಇತಿಮಿತಿಗಳಿವೆ.

‌3. ದೇಶಿ ಸಾಂಸ್ಥಿಕ ಹೂಡಿಕೆದಾರರು (Domestic Institutions): ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದನ್ನು ದೇಶಿಯ ಸಾಂಸ್ಥಿಕ ಹೂಡಿಕೆ ಎಂದು ಕರೆಯಲಾಗುತ್ತದೆ. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್), ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್), ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ), ವಿವಿಧ ಬ್ಯಾಂಕ್‌ಗಳು ದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ ಉದಾಹರಣೆಗಳು.

4. ದೇಶಿ ಹಣಕಾಸು ನಿರ್ವಹಣಾ ಸಂಸ್ಥೆಗಳು (Domestic Asset Management Companies): ದೇಶಿ ಹಣಕಾಸು ನಿರ್ವಹಣಾ ಸಂಸ್ಥೆಗಳು ಜನರಿಂದ ಸಂಗ್ರಹಿಸಿದ ಹೂಡಿಕೆಯನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸುತ್ತವೆ. ಮ್ಯೂಚುವಲ್‌ ಫಂಡ್‌ ಕಂಪನಿಗಳು ಇಂತಹ ಹೂಡಿಕೆ ಸಂಸ್ಥೆಗಳಿಗೆ ಉದಾಹರಣೆಗಳು.

5. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (Foreign Institutional Investors - FII’s): ವಿದೇಶಿ ಸಂಸ್ಥೆಗಳು ಭಾರತದ ಷೇರುಪೇಟೆಯಲ್ಲಿ ಹೂಡಿಕೆ ಮಾಡುವುದನ್ನು ವಿದೇಶಿ ಸಾಂಸ್ಥಿಕ ಹೂಡಿಕೆ ಎನ್ನಬಹುದು. ವಿದೇಶಿ ಹಣಕಾಸು ನಿರ್ವಹಣಾ ಸಂಸ್ಥೆಗಳು, ಮ್ಯೂಚುವಲ್ ಫಂಡ್ ಕಂಪನಿಗಳು, ಇನ್ಶೂರೆನ್ಸ್ ಕಂಪನಿಗಳು ಇದರಲ್ಲಿ ಒಳಗೊಂಡಿರುತ್ತವೆ. ಭಾರತದಂತಹ ಅಭಿವೃದ್ಧಿಶೀಲ ಅರ್ಥ ವ್ಯವಸ್ಥೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಪ್ರಮುಖ ಪಾತ್ರ ವಹಿಸುತ್ತಾರೆ. ಭಾರತದಲ್ಲಿ ಸುಮಾರು 1,500 ವಿದೇಶಿ ಸಾಂಸ್ಥಿಕ ಹೂಡಿಕೆ ಕಂಪನಿಗಳು ‘ಸೆಬಿ’ಯಲ್ಲಿ ನೋಂದಾಯಿಸಿಕೊಂಡುಷೇರುಗಳ ಖರೀದಿ ಮತ್ತು ಮಾರಾಟದಲ್ಲಿ ಭಾಗಿಯಾಗುತ್ತಿವೆ.

ಶರತ್ ಎಂ.ಎಸ್.
ಶರತ್ ಎಂ.ಎಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT