ಬುಧವಾರ, ಸೆಪ್ಟೆಂಬರ್ 18, 2019
23 °C

ಹಳಿಗೆ ಮರಳದ ಷೇರುಪೇಟೆ

Published:
Updated:

ಮುಂಬೈ: ದೇಶದ ಷೇರುಪೇಟೆಗಳು ಹಳಿಗೆ ಮರಳುವ ಲಕ್ಷಣಗಳೇ ಕಾಣುತ್ತಿಲ್ಲ. ಏಳು ವಾರಗಳ ವಹಿವಾಟಿನಲ್ಲಿ ಆರು ವಾರಗಳಲ್ಲಿಯೂ ಇಳಿಮುಖವಾಗಿಯೇ ವಹಿವಾಟು ಅಂತ್ಯಗೊಂಡಿವೆ.

ಆಗಸ್ಟ್‌ 4 ರಿಂದ 9ರವರೆಗೆ ನಡೆದ ವಾರದ ವಹಿವಾಟಿನಲ್ಲಿ ಮಾತ್ರವೇ ಸಕಾರಾತ್ಮಕ ಅಂತ್ಯ ಕಂಡುಬಂದಿತ್ತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ವಾರದ ವಹಿವಾಟಿನಲ್ಲಿ 649 ಅಂಶ ಇಳಿಕೆ ಕಂಡು, 36,701 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 218 ಅಂಶ ಇಳಿಕೆಯಾಗಿ 10,829 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಎಫ್‌ಪಿಐ: ವಿದೇಶಿ ಸಾಂಸ್ಥಿಕ ಹೂಡಿಕೆ ದಾರರು (ಎಫ್‌ಪಿಐ) ಆಗಸ್ಟ್‌ನಲ್ಲಿಯೂ ದೇಶದ ಷೇರುಪೇಟೆಗಳಲ್ಲಿ ಮಾರಾಟಕ್ಕೆ ಹೆಚ್ಚಿನ ಗಮನ ನೀಡಿದ್ದಾರೆ. 

ವಾರದ ವಹಿವಾಟಿನಲ್ಲಿ ₹ 2,353 ಕೋಟಿಗೂ ಅಧಿಕ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಆಗಸ್ಟ್‌ 1 ರಿಂದ 16ರವರೆಗೆ ₹ 10,416 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಜುಲೈನಲ್ಲಿ ₹ 2,986 ಕೋಟಿ ಹಿಂದಕ್ಕೆ ಪಡೆದಿದ್ದರು.

ಕರಗಿದ ₹ 2.42 ಲಕ್ಷ ಕೋಟಿ
ಷೇರುಪೇಟೆಯ ನಕಾರಾತ್ಮಕ ಚಲನೆಯಿಂದಾಗಿ ಹೂಡಿಕೆದಾರರ ಸಂಪತ್ತು ಮೌಲ್ಯ ದಿನೇ ದಿನೇ ಕರಗುತ್ತಿದೆ. ವಾರದ ವಹಿವಾಟಿನಲ್ಲಿ, ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯದಲ್ಲಿ ₹ 2.42 ಲಕ್ಷ ಕೋಟಿ ಕರಗಿದೆ. 

ಷೇರುಪೇಟೆಯ ಬಂಡವಾಳ ಮೌಲ್ಯ ₹ 140.34 ಲಕ್ಷ ಕೋಟಿಯಿಂದ ₹ 137. 92 ಲಕ್ಷ ಕೋಟಿಗೆ ಇಳಿಕೆಯಾಗಿದೆ. ಜುಲೈ 5 ರಿಂದ ಆಗಸ್ಟ್‌ 24ರವರೆಗಿನ ವಹಿವಾಟಿನಲ್ಲಿ ಕರಗಿರುವ ಸಂಪತ್ತಿನ ಮೌಲ್ಯವು ₹ 13.42 ಲಕ್ಷ ಕೋಟಿಗಳಷ್ಟಾಗಿದೆ.

Post Comments (+)