ಶುಕ್ರವಾರ, ಜೂನ್ 5, 2020
27 °C

35 ಸಾವಿರ ಗಡಿ ದಾಟಿದ ಮುಂಬೈ ಷೇರುಪೇಟೆ ಸೂಚ್ಯಂಕ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಮೂರನೇ ದಿನವೂ ಸಕಾರಾತ್ಮಕ ವಹಿವಾಟು ಮುಂದುವರಿದಿದೆ. 

ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಂಪನಿಗಳ ಆರ್ಥಿಕ ಸಾಧನೆ ಉತ್ತೇಜನಕಾರಿಯಾಗಿದೆ. ಹೀಗಾಗಿ ಸೂಚ್ಯಂಕ ಏರಿಕೆ ಕಾಣುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) ಮಂಗಳವಾರದ ವಹಿವಾಟಿನಲ್ಲಿ 35 ಸಾವಿರದ ಗಡಿ ತಲುಪಿತು. 297 ಅಂಶಗಳಷ್ಟು ಏರಿಕೆ ಕಂಡು 35,215 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 72 ಅಂಶ ಹೆಚ್ಚಾಗಿ 10,584 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿತು.

ಸಕಾರಾತ್ಮಕ ಅಂಶಗಳು: ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆ, ಏಷ್ಯಾದ ಮಾರುಕಟ್ಟೆಯಲ್ಲಿ ಉತ್ತಮ ವಹಿವಾಟು ಹಾಗೂ ಯುರೋಪ್‌ ಷೇರುಗಳು ಗರಿಷ್ಠ ಮಟ್ಟದಲ್ಲಿ ವಹಿವಾಟು ಆರಂಭಿಸಿರುವುದು ದೇಶಿ ಷೇರುಪೇಟೆಗಳಲ್ಲಿ ಸೂಚ್ಯಂಕದ ಏರಿಕೆಯನ್ನು ಬೆಂಬಲಿಸಿದವು.

ಮಂಗಳವಾರದ ವಹಿವಾಟಿನಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 0.25ರಷ್ಟು ಕಡಿಮೆಯಾಗಿ ಒಂದು ಬ್ಯಾರೆಲ್‌ಗೆ 80.58 ಡಾಲರ್‌ಗೆ ಮಾರಾಟವಾಯಿತು. ಇದರಿಂದ ಬಿಪಿಸಿಎಲ್‌ ಮತ್ತು ಐಒಸಿ ಕಂಪನಿಗಳ ಷೇರುಗಳು ಶೇ 2.06ರವರೆಗೂ ಏರಿಕೆ ಕಂಡವು.

‘ತ್ರೈಮಾಸಿಕ ಹಣಕಾಸು ಸಾಧನೆಯ ಪ್ರಕಟಣೆಗೆ ಚಾಲನೆ ಸಿಕ್ಕಿದೆ. ಹೀಗಾಗಿ, ಹೂಡಿಕೆದಾರರು ಜಾಗತಿಕ ಬೆಳವಣಿಗೆಗಳಿಗಿಂತಲೂ ದೇಶಿ ವಿದ್ಯಮಾನಗಳ ಕಡೆಗೆ ಗಮನ ನೀಡಲಾರಂಭಿಸಿದ್ದಾರೆ. ಕಂಪನಿಗಳ ಆರ್ಥಿಕ ಸಾಧನೆಯು ಮಾರುಕಟ್ಟೆಯ ನಿರೀಕ್ಷೆಯಂತೆಯೇ ಇರುವುದರಿಂದ ವಹಿವಾಟು ಏರುಮುಖವಾಗಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

‘ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ಸೂಚ್ಯಂಕಗಳ ಏರಿಕೆಯಿಂದ ಮಂಗಳವಾರ ‘ನಿಫ್ಟಿ’ ಏರಿಕೆ ಕಂಡಿದೆ. ಬ್ಯಾಂಕಿಂಗ್‌ ವಲಯದ ಷೇರುಗಳು ಹೆಚ್ಚಿನ ಗಳಿಕೆ ಕಂಡಿವೆ. ಅಮೆರಿಕದ ಷೇರುಪೇಟೆಯೊಂದನ್ನು ಬಿಟ್ಟು ಉಳಿದೆಲ್ಲಾ ಪೇಟೆಗಳೂ ಸ್ಥಿರವಾಗಿರುವಂತೆ ಕಾಣುತ್ತಿವೆ’ ಎಂದು ಬಿಎನ್‌ಪಿ ಪರಿಬಾಸ್‌ನ ನಿಧಿ ನಿರ್ವಾಹಕ ರೋಹಿತ್‌ ಶ್ರೀವಾಸ್ತವ್‌ ವಿಶ್ಲೇಷಣೆ ಮಾಡಿದ್ದಾರೆ.

ಸಂಪತ್ತು ₹ 5.30 ಲಕ್ಷ ಕೋಟಿ ವೃದ್ಧಿ

ಮೂರು ವಹಿವಾಟು ಅವಧಿಗಳಲ್ಲಿ ಹೂಡಿಕೆದಾರರ ಸಂಪತ್ತು ₹ 5.30 ಲಕ್ಷ ಕೋಟಿಯಷ್ಟು ವೃದ್ಧಿಯಾಗಿದೆ. ಇದರಿಂದ ಮುಂಬೈ ಷೇರುಪೇಟೆಯ ಬಂಡವಾಳ ಮೌಲ್ಯ ₹ 141 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಶುಕ್ರವಾರ, ಸೋಮವಾರ ಮತ್ತು ಮಂಗಳವಾರದ ವಹಿವಾಟಿನಲ್ಲಿ  ಸಂವೇದಿ ಸೂಚ್ಯಂಕ 428 ಅಂಶಗಳಷ್ಟು ಏರಿಕೆ ಕಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು