ಶನಿವಾರ, ಏಪ್ರಿಲ್ 1, 2023
31 °C

ಷೇರುಪೇಟೆ ಏರುಗತಿಯಲ್ಲಿ ಇದ್ದಾಗ ಹೂಡಿಕೆ ಹೇಗೆ?

ಸಿದ್ಧಾರ್ಥ ಖೇಮ್ಕಾ Updated:

ಅಕ್ಷರ ಗಾತ್ರ : | |

ದೇಶದ ಷೇರು ಮಾರುಕಟ್ಟೆಗಳು ಹಬ್ಬದ ಸಂಭ್ರಮದಲ್ಲಿವೆ. ಷೇರು ಮಾರುಕಟ್ಟೆಗಳ ಪ್ರಮುಖ ಸೂಚ್ಯಂಕಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 60 ಸಾವಿರದ ಗಡಿ ದಾಟಿ ಬಂದಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 18 ಸಾವಿರದ ಗಡಿ ದಾಟಿ ಬಂದಿದೆ.

ಜಾಗತಿಕ ಪ್ರಭಾವಗಳು ಏನೇ ಇದ್ದರೂ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಈ ವರ್ಷ ಸರಿಸುಮಾರು ಶೇಕಡ 30ರಷ್ಟು ಏರಿಕೆ ಕಂಡಿವೆ. ಪ್ರವರ್ಧಮಾನಕ್ಕೆ ಬರುತ್ತಿರುವ ಇತರ ಹಲವು ದೇಶಗಳ ಷೇರು ಮಾರುಕಟ್ಟೆಗಳಿಗಿಂತ ಹೆಚ್ಚಿನ ಏರಿಕೆಯನ್ನು ಇವು ದಾಖಲಿಸಿವೆ. ಮಾರುಕಟ್ಟೆಗಳಲ್ಲಿ ಕಂಡುಬಂದಿರುವ ಈ ಓಟಕ್ಕೆ ವ್ಯವಸ್ಥೆಯಲ್ಲಿ ನಗದು ಲಭ್ಯತೆ ಹೆಚ್ಚಿರುವುದು, ಕಾರ್ಪೊರೇಟ್ ಕಂಪನಿಗಳ ಆದಾಯವು ಒಳ್ಳೆಯ ಮಟ್ಟದಲ್ಲಿ ಇರುವುದು, ಕೋವಿಡ್‌–19 ಪ್ರಕರಣಗಳು ಕಡಿಮೆ ಆಗುತ್ತಿರುವುದು ಕೆಲವು ಪ್ರಮುಖ ಕಾರಣಗಳು. ಇವಿಷ್ಟೇ ಅಲ್ಲದೆ, ಕೇಂದ್ರ ಸರ್ಕಾರ ರೂಪಿಸಿದ ಉತ್ಪಾದನೆ ಆಧಾರಿತ ಉತ್ತೇಜನ ಯೋಜನೆ (ಪಿಎಲ್‌ಐ), ದೂರಸಂಪರ್ಕ ವಲಯಕ್ಕೆ ಸಂಬಂಧಿಸಿದಂತೆ ರೂಪಿಸಿದ ಪರಿಹಾರ ಕ್ರಮಗಳು, ಏರ್‌ ಇಂಡಿಯಾದ ಖಾಸಗೀಕರಣ ಕೂಡ ಮಾರುಕಟ್ಟೆ ಮೇಲೆ ಸಕಾರಾತ್ಮಕ ಪರಿಣಾಮ ಉಂಟುಮಾಡಿವೆ.

ಆರ್ಥಿಕ ಪ್ರಗತಿಯನ್ನು ತಿಳಿದುಕೊಳ್ಳಲು ನಾವು ಪ್ರತಿ ತಿಂಗಳು ಗಮನಿಸುವ ಬಹುತೇಕ ಸೂಚಕಗಳು ಉತ್ತಮ ಬೆಳವಣಿಗೆಯನ್ನು ತೋರಿಸುತ್ತಿವೆ. ಆರ್ಥಿಕ ಚೇತರಿಕೆ ಗಟ್ಟಿ ನೆಲೆಯಲ್ಲಿ ಆಗುತ್ತಿದೆ ಎಂದು ಹೇಳುತ್ತಿವೆ. ಇ-ವೇ ಬಿಲ್ ಸೃಷ್ಟಿ, ರಸ್ತೆ ಬಳಕೆಗೆ ಶುಲ್ಕ ಸಂಗ್ರಹ, ವಿದ್ಯುತ್ ಉತ್ಪಾದನೆ ತ್ವರಿತ ಗತಿಯಲ್ಲಿ ಏರಿಕೆ ಕಂಡಿವೆ. ಪ್ರಸಕ್ತ ಹಣಕಾಸು ವರ್ಷದ ಮೊದಲನೇ ತ್ರೈಮಾಸಿಕದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ದರವು ಶೇಕಡ 20.1ರಷ್ಟು ಇತ್ತು. ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್) ದೇಶದ ಜಿಡಿಪಿ ಬೆಳವಣಿಗೆ ದರವು 2021ರಲ್ಲಿ ಶೇಕಡ 9.5ರಷ್ಟು ಇರಲಿದೆ ಎಂದು ಅಂದಾಜು ಮಾಡಿದೆ. 2022ರಲ್ಲಿ ಇದು ಶೇಕಡ 8.5ರಷ್ಟು ಬೆಳವಣಿಗೆ ಕಾಣಲಿದೆ ಎಂದೂ ಅದು ಹೇಳಿದೆ. ಇದು ಪ್ರವರ್ಧಮಾನಕ್ಕೆ ಬರುತ್ತಿರುವ ಹಾಗೂ ಅಭಿವೃದ್ಧಿ ಹೊಂದಿರುವ ಅರ್ಥ ವ್ಯವಸ್ಥೆಗಳ ಸಾಲಿನಲ್ಲಿ ಅತಿಹೆಚ್ಚಿನ ಬೆಳವಣಿಗೆ ದರ ಆಗಲಿದೆ. ಇದಕ್ಕೆ ಹೋಲಿಸಿದರೆ, ಜಾಗತಿಕ ಅರ್ಥ ವ್ಯವಸ್ಥೆಯು 2021ರಲ್ಲಿ ಶೇಕಡ 6ರಷ್ಟು, 2022ರಲ್ಲಿ ಶೇಕಡ 4.9ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಕೂಡ ಐಎಂಎಫ್ ಅಂದಾಜಿಸಿದೆ.

ವೇಗದ ಅಭಿವೃದ್ಧಿ ದರ ಹಾಗೂ ಆಂತರಿಕ ಬೇಡಿಕೆಯನ್ನು ಆಧರಿಸಿದ ನಮ್ಮ ಅರ್ಥ ವ್ಯವಸ್ಥೆಯನ್ನು ಗಮನಿಸಿದ ಜಾಗತಿಕ ಹೂಡಿಕೆದಾರರಲ್ಲಿ ದೇಶದಲ್ಲಿ ಹೂಡಿಕೆ ಮಾಡಬೇಕು ಎಂಬ ಬಯಕೆ ಇದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಇದುವರೆಗೆ ಅಂದಾಜು ₹ 60,000 ಕೋಟಿ (ಪ್ರಾಥಮಿಕ ಮಾರುಕಟ್ಟೆಯಲ್ಲಿನ ಹೂಡಿಕೆ ಸೇರಿದಂತೆ) ಹೂಡಿಕೆ ಮಾಡಿರುವುದು ಇದನ್ನು ತೋರಿಸುತ್ತದೆ.

ಸದ್ಯ ಷೇರು ಮಾರುಕಟ್ಟೆಯಲ್ಲಿ ಷೇರುಗಳ ಮೌಲ್ಯವು ಹೆಚ್ಚಿನ ಮಟ್ಟದಲ್ಲಿ ಇದೆ ಎಂಬ ಮಾತಿದೆ. ಈ ಸಂದರ್ಭದಲ್ಲಿ ನಾವು ಹೂಡಿಕೆದಾರರಿಗೆ, ತಮ್ಮ ಪೋರ್ಟ್‌ಫೋಲಿಯೊದಲ್ಲಿ ನಗದಿನ ಪ್ರಮಾಣವನ್ನು ಶೇಕಡ 5ರಿಂದ ಶೇಕಡ 10ರಷ್ಟಕ್ಕೆ ಹೆಚ್ಚಿಸಿ ಎಂಬ ಸಲಹೆ ನೀಡುತ್ತಿದ್ದೇವೆ. ಹೀಗಿದ್ದರೂ, ಕೆಲವು ಷೇರುಗಳಲ್ಲಿ ಹಾಗೂ ಕೆಲವು ವಲಯಗಳಲ್ಲಿ ಏರುಗತಿ ಮುಂದುವರಿಯಲಿರುವ ಕಾರಣದಿಂದಾಗಿ ಪೋರ್ಟ್‌ಫೋಲಿಯೊದಲ್ಲಿ ನಗದು ಪ್ರಮಾಣವನ್ನು ತೀರಾ ಹೆಚ್ಚಿಸಿಕೊಳ್ಳಿ ಎಂಬ ಸಲಹೆಯನ್ನೂ ನೀಡುವುದಿಲ್ಲ. ಅದರ ಬದಲಾಗಿ ನಾವು ಪೋರ್ಟ್‌ಫೋಲಿಯೊದಲ್ಲಿನ ತುಸು ಭಾಗವನ್ನು ಬಹಳ ಚೆನ್ನಾಗಿ ಬೆಳವಣಿಗೆ ಕಾಣುತ್ತಿರುವ ಷೇರುಗಳಿಂದ, ಕಡಿಮೆ ಬೆಲೆಗೆ ಸಿಗುತ್ತಿರುವ ಮೌಲ್ಯಯುತ ಷೇರುಗಳತ್ತ ತಿರುಗಿಸಲು ಸಲಹೆ ನೀಡುತ್ತಿದ್ದೇವೆ. 

ಐ.ಟಿ., ಗ್ರಾಹಕ ಸೇವಾ ವಲಯ, ಸಿಮೆಂಟ್, ರಿಯಲ್ ಎಸ್ಟೇಟ್ ವಲಯಗಳು ಒಳ್ಳೆಯ ಪ್ರಮಾಣದ ಏರಿಕೆ ಕಾಣುವುದನ್ನು ಮುಂದುವರೆಸಲಿವೆ. ಆರ್ಥಿಕ ಚಟುವಟಿಕೆಗಳು ಹೆಚ್ಚುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಪ್ರಯಾಣ ಮತ್ತು ಪ್ರವಾಸೋದ್ಯಮ ವಲಯಗಳು ಸಹ ಉತ್ತಮ ಬೆಳವಣಿಗೆ ಕಾಣಲಿವೆ ಎಂದು ನಿರೀಕ್ಷಿಸಬಹುದು. ಇದುವರೆಗೆ ಮಾರುಕಟ್ಟೆಯ ಏರಿಕೆಯು ಕೆಲವು ಆಯ್ದ, ದೊಡ್ಡ ವಲಯಗಳಿಂದ ನಡೆದಿದೆ. ಆದರೆ, ಈಗ ತಮ್ಮ ಆಂತರಿಕ ಮೌಲ್ಯಕ್ಕಿಂತ ಕಡಿಮೆ ದರದಲ್ಲಿ ಷೇರು ಮೌಲ್ಯ ಹೊಂದಿರುವ ಕೆಲವು ವಲಯಗಳು ಒಳ್ಳೆಯ ಬೆಳವಣಿಗೆ ಸಾಧಿಸುವ ಸಾಧ್ಯತೆ ಇದೆ. ಬ್ಯಾಂಕಿಂಗ್ ಮತ್ತು ಆಟೊಮೊಬೈಲ್ ವಲಯಗಳು ಈಚೆಗೆ ಒಳ್ಳೆಯ ಏರಿಕೆ ಕಂಡಿಲ್ಲ. ಆದರೆ, ಪ್ರಸಕ್ತ ಹಣಕಾಸು ವರ್ಷದ ಇನ್ನುಳಿದ ಅವಧಿಯಲ್ಲಿ ಈ ಎರಡು ವಲಯಗಳ ಷೇರುಗಳು ಒಳ್ಳೆಯ ಬೆಳವಣಿಗೆ ಕಾಣುವ ಸಾಧ್ಯತೆ ಇದೆ. 

ಹೂಡಿಕೆದಾರರು ತಮ್ಮ ಹಣವನ್ನು ಜಾಣತನದಿಂದ ಹಂಚಿಕೆ ಮಾಡುವತ್ತ ಗಮನ ಹರಿಸಬೇಕು. ತಮ್ಮ ಹೂಡಿಕೆಗಳು ಬಗೆಬಗೆಯ ಕಂಪನಿಗಳಲ್ಲಿ ಇರುವಂತೆ ನಿಗಾ ವಹಿಸಬೇಕು. ಆಗ ಮಾರುಕಟ್ಟೆಯ ಅಸ್ಥಿರ ಸಂದರ್ಭಗಳನ್ನು ಹಾಗೂ ಇಳಿಕೆಯ ಸಂದರ್ಭಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಹೀಗೆ ಮಾಡಲು ಇರುವ ಮಾರ್ಗ ಎಂದರೆ, ಮಾರುಕಟ್ಟೆಯು ಇಳಿಕೆ ಕಂಡಾಗಲೆಲ್ಲ ಒಳ್ಳೆಯ ಕಂಪನಿಗಳ ಷೇರುಗಳನ್ನು ಖರೀದಿಸಿ ಇರಿಸಿಕೊಳ್ಳುವುದು.

(ಲೇಖಕ: ಮೋತಿಲಾಲ್ ಓಸ್ವಾಲ್‌ ಫೈನಾನ್ಶಿಯಲ್‌ ಸರ್ವಿಸಸ್‌ ಕಂಪನಿಯ ಬ್ರೋಕಿಂಗ್ ಮತ್ತು ವಿತರಣೆ ವಿಭಾಗದ ಸಣ್ಣ ಹೂಡಿಕೆಗಳ ಸಂಶೋಧನಾ ಮುಖ್ಯಸ್ಥ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು