ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರೀದಿ ಕೇಂದ್ರದತ್ತ ಸುಳಿಯದ ರೈತರು

Last Updated 8 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ


ಗುಲ್ಬರ್ಗ:  ಮೂರು ಸಾವಿರ ರೂಪಾಯಿ ಆಸುಪಾಸು ಸುತ್ತುತ್ತ ರೈತರನ್ನು ಹೈರಾಣ ಮಾಡಿದ್ದ ತೊಗರಿ ಬೆಲೆಯು, ಒಂದೇ ಒಂದು ಬ್ಯಾನರ್‌ನಿಂದಾಗಿ ನಾಲ್ಕು ಸಾವಿರ ರೂಪಾಯಿ ಗಡಿ ದಾಟುವಂತಾಗಿದೆ!ತೊಗರಿ ಮಂಡಳಿಯು ಖರೀದಿ ಕೇಂದ್ರ ಆರಂಭಿಸಿದ ದಿನದಿಂದಲೇ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ತೊಗರಿ ಬೆಲೆ ರೂ4,000  ತಲುಪಿದೆ. ಜೇವರ್ಗಿಯಲ್ಲಿ ರೈತರು ಉಪವಾಸ ಸತ್ಯಾಗ್ರಹ ಮಾಡಿ ಕೊನೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬಳಿಕವಷ್ಟೇ ಖರೀದಿ ಕೇಂದ್ರ ಆರಂಭಿಸಿದ ಸರ್ಕಾರ, ಈ ಕೆಲಸವನ್ನು ಮೊದಲೇ ಯಾಕೆ ಮಾಡಲಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. ರೈತರ ಐದು ದಿನಗಳ ಉಪವಾಸ ಸತ್ಯಾಗ್ರಹ ಮತ್ತು ರೈತರು ವಿಷ ಸೇವಿಸಿದ ಘಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಶನಿವಾರದಿಂದಲೇ ತೊಗರಿ ಖರೀದಿ ಕೇಂದ್ರ ಆರಂಭಿಸಲು ಆದೇಶಿಸಿದ್ದರು.

ಕೇಂದ್ರ ಆರಂಭ:
ನಗರದ ಗಂಜ್ ಪ್ರದೇಶದಲ್ಲಿರುವ ಎಪಿಎಂಸಿ ಗೋದಾಮಿನಲ್ಲಿ ತೊಗರಿ ಮಂಡಳಿಯು ‘ತೊಗರಿ ಖರೀದಿ ಕೇಂದ್ರ’ ಆರಂಭಿಸಿದೆ. ಸೋಜಿಗವೆಂದರೆ ಮೂರು ದಿನಗಳಾದರೂ ಈವರೆಗೆ ಒಂದೇ ಒಂದು ಕಿಲೋ ತೊಗರಿಯನ್ನು ರೈತರು ಇಲ್ಲಿ ನೀಡಿಲ್ಲ!ಈ ಕೇಂದ್ರದ ಮುಂದೆ ರೂ4,000ಕ್ಕೆ ತೊಗರಿ ಖರೀದಿಸುವ ಒಂದು ಬ್ಯಾನರ್ ಹಾಕಿದ ಕೆಲ ಹೊತ್ತಿನಲ್ಲೇ ವ್ಯಾಪಾರಿಗಳು ನಿಗದಿ ಮಾಡುವ ಬೆಲೆ ಈ ಗಡಿಯನ್ನು ದಾಟಿದೆ. ಹೀಗಾಗಿ ರೈತರು ಖರೀದಿ ಕೇಂದ್ರದತ್ತ ಸುಳಿಯದೇ ಸ್ವಲ್ಪ ಹೆಚ್ಚಿನ ದರ ನೀಡುತ್ತಿರುವ ವ್ಯಾಪಾರಿಗಳಿಗೇ ತೊಗರಿ ಮಾರುತ್ತಿದ್ದಾರೆ. ಖರೀದಿ ಕೇಂದ್ರದಲ್ಲಿ ಇರುವ ಅಧಿಕಾರಿಗಳು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಕಾಯ್ದು ಮನೆಗೆ ಹೋಗುತ್ತಿದ್ದಾರೆ.‘ಸರ್ಕಾರ ಮಾರುಕಟ್ಟೆ ಪ್ರವೇಶಿಸಿದರೆ ವ್ಯಾಪಾರಿಗಳು ಕೂಡ ಬೆಲೆ ಹೆಚ್ಚಿಸುತ್ತಾರೆ. ಇದನ್ನು ಗಮನಿಸಿಯೇ ನಾವು ಖರೀದಿ ಕೇಂದ್ರ ಆರಂಭಿಸಲು ಒತ್ತಾಯಿಸಿದ್ದೆವು. ಕಳೆದ ಶುಕ್ರವಾರದವರೆಗೆ ಪ್ರತಿ ಕ್ವಿಂಟಲ್‌ಗೆ ರೂ3,000ಕ್ಕಿಂತ ತುಸು ಹೆಚ್ಚಿದ್ದ ಬೆಲೆಯು ಈಗ ರೂ4,000   ಗಡಿ ದಾಟಿದೆ. ಸಂಪುಟ ಸಭೆಯ ನಿರ್ಧಾರದಂತೆ ಮೊದಲೇ ಕೇಂದ್ರ ಆರಂಭಿಸಿದ್ದರೆ ರೈತರು ಹೋರಾಟ ವಿಕೋಪಕ್ಕೆ ಹೋಗುವ ಸ್ಥಿತಿಯೇ ಇರುತ್ತಿರಲಿಲ್ಲ’ ಎಂದು ಕೇದಾರಲಿಂಗಯ್ಯ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

ರೈತರ ಸಂತಸ: ‘ಖರೀದಿ ಕೇಂದ್ರಕ್ಕಿಂತ ಒಂದಷ್ಟು ಹೆಚ್ಚು ಹಣ ನಮಗೆ ವ್ಯಾಪಾರಿಗಳಲ್ಲಿ ಸಿಗುತ್ತಿದೆ. ಕೇಂದ್ರದಲ್ಲಿ ಪಹಣಿ ನೀಡಿ, ತೊಗರಿ ಕೊಟ್ಟರೆ ಚೆಕ್ ನೀಡುವ ವ್ಯವಸ್ಥೆ ಇದೆ. ಆದರೆ ವ್ಯಾಪಾರಿಗಳು ನೇರವಾಗಿ ಹಣ ಕೊಡುತ್ತಿದ್ದಾರೆ. ಸರ್ಕಾರದ ನಿರ್ಧಾರದಿಂದ ಒಂದಷ್ಟು ಹೆಚ್ಚು ಹಣ ನಮ್ಮ ಕೈಸೇರುವಂತಾಗಿದೆ’ ಎಂದು ಚಿತ್ತಾಪೂರ ತಾಲ್ಲೂಕಿನ ಕೃಷಿಕ ಬಸವರಾಜಪ್ಪ ಪಾಟೀಲ ಸಂತಸ ವ್ಯಕ್ತಪಡಿಸಿದರು. ಬೇಳೆ ಕಾರ್ಖಾನೆಗಳಿಗೆ ತೊಗರಿ ಪೂರೈಸಲು ಒಪ್ಪಂದ ಮಾಡಿಕೊಂಡಿರುವ ವ್ಯಾಪಾರಿಗಳು, ನಿತ್ಯವೂ ರೈತರಿಂದ ತೊಗರಿ ಖರೀದಿಸಿ ಸಾಗಿಸುತ್ತಾರೆ. ಒಂದು ವೇಳೆ ಸರ್ಕಾರವೇ ರೈತರಿಂದ ನೇರವಾಗಿ ಖರೀದಿ ಆರಂಭಿಸಿದರೆ ತಮಗೆ ನಷ್ಟ ಎಂಬುದನ್ನು ಅರಿತ ವ್ಯಾಪಾರಿಗಳು ಸರ್ಕಾರ ಪ್ರಕಟಿಸಿದ ಬೆಲೆಗಿಂತ ಹೆಚ್ಚಿಗೆ ಹಣ ನೀಡಿ ರೈತರಿಂದ ಖರೀದಿಸುತ್ತಿದ್ದಾರೆ. ಶನಿವಾರ ಸುಮಾರು 14,000 ಕ್ವಿಂಟಲ್ ತೊಗರಿ ಖರೀದಿಯಾಗಿದ್ದರೆ, ಸೋಮವಾರ 12,000 ಕ್ವಿಂಟಲ್ ಹಾಗೂ ಮಂಗಳವಾರ 12,000 ಕ್ವಿಂಟಲ್ ಮಾರಾಟವಾಗಿದೆ. ಮಂಗಳವಾರ ತೊಗರಿ ಬೆಲೆಯು ಕ್ವಿಂಟಲ್‌ಗೆ ರೂ4,331ಗೆ ತಲುಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT