ಗುರುವಾರ , ಫೆಬ್ರವರಿ 25, 2021
18 °C

ಅಧಿಕಾರ, ಗಿಧಿಕಾರ ಇತ್ಯಾದಿ...

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ಅಧಿಕಾರ, ಗಿಧಿಕಾರ ಇತ್ಯಾದಿ...

ಅಧಿಕಾರವೇ ಹಾಗೆ. ಅದು ಒಂದು ವಿಪರ್ಯಾಸ. ಅದು ಜನರು ಕೊಟ್ಟುದು. ಆದರೆ, ಅದೇ ಅಧಿಕಾರ ಜನರಿಂದ ದೂರ ಹೋಗುವುದನ್ನು ಕಲಿಸುತ್ತದೆ ಅಥವಾ ಜನರು ದೂರ ಇರಬೇಕು ಎಂದು ಬಯಸುತ್ತದೆ. ಅಧಿಕಾರದಲ್ಲಿ ಇದ್ದವರು ಹೆಚ್ಚೇನೂ ಮಾಡಬೇಕಿಲ್ಲ. ಅವರಿಗೆ  ಇರುವ ಅಧಿಕಾರವೇ ಅದನ್ನೆಲ್ಲ ಮಾಡಿಸಿ ಬಿಡುತ್ತದೆ.ಅಧಿಕಾರದ ಸುತ್ತ ಇರುವ ಭದ್ರತೆ, ದೌಲತ್ತು, ಕೆಂಪು ದೀಪದ ಕಾರು, ಭವ್ಯ ಬಂಗಲೆ, ಅದಕ್ಕೆ ಒಂದು ಭದ್ರವಾದ ಬಾಗಿಲು, ಬಾಗಿಲ ಬಳಿ ಬಂದೂಕು ಹಿಡಿದ ಕಾವಲುಗಾರರು... ಒಂದೇ ಎರಡೇ... ಜನಪ್ರತಿನಿಧಿಗೆ  ನಾವು ಕೊಟ್ಟ ಅಧಿಕಾರವೇ ಆತನನ್ನು ನಮ್ಮಿಂದ  ದೂರ ತೆಗೆದುಕೊಂಡು ಹೋಗಿ ಬಿಡುತ್ತದೆ. ಅಧಿಕಾರ ಇರುವಷ್ಟು ದಿನ ಆತನೂ ನಮ್ಮಿಂದ ದೂರವೇ ಇರಬೇಕು ಎಂದು ಬಯಸುತ್ತಾನೆ.ನಮ್ಮ ನಡುವೆಯೇ ನಿನ್ನೆ ಮೊನ್ನೆ ವರೆಗೆ ಇದ್ದ ಆತ ಈಗ ಸೈರನ್‌  ಕೂಗುವ ವಾಹನದ ಹಿಂದೆ ಕೆಂಪು ದೀಪದ ಕಾರಿನಲ್ಲಿ ಕುಳಿತು ನಮ್ಮ ಮುಂದೆಯೇ ಹೋಗಿ ಬಿಡುತ್ತಾನೆ. ಆತನಿಗೆ ನಿಜವಾಗಿಯೂ ಅಷ್ಟು ಬಿಡುವಿಲ್ಲದ ಕೆಲಸ  ಇರುತ್ತದೆಯೇ?ಮೊನ್ನೆ ಹೀಗೆಯೇ ಆಯಿತು. ನಮ್ಮ ಗೃಹ ಸಚಿವ ಪರಮೇಶ್ವರರು ತಿರುಪತಿಯಿಂದ ವಾಪಸು ಬೆಂಗಳೂರಿಗೆ ಬರುತ್ತಿದ್ದರು. ಕೃಷ್ಣರಾಜಪುರದ ಬಳಿ ಅವರು ನಗರವನ್ನು ಪ್ರವೇಶಿಸಿದಾಗ ಅವರ ಕಾರು ವಾಹನ ದಟ್ಟಣೆಯ ನಡುವೆ ಸಿಕ್ಕಿಕೊಂಡಿತು. ದಟ್ಟಣೆ ದಾಟಿಕೊಂಡು ಬರಲು ಅವರಿಗೆ 12 ನಿಮಿಷ ತಡವಾಯಿತು. ಅವರ ವಾಹನ ಸುಗಮವಾಗಿ ಸಾಗಿ ಹೋಗುವಂತೆ ನೋಡಿಕೊಳ್ಳಬೇಕಿದ್ದ ಸಂಚಾರ ಇನ್ಸ್‌ಪೆಕ್ಟರ್‌ಗೆ ಈಗ ಕರ್ತವ್ಯ ಲೋಪದ ನೋಟಿಸ್‌ ಜಾರಿಯಾಗಿದೆ.ಆ ಇನ್ಸ್‌ಪೆಕ್ಟರ್‌ಗೆ ನೋಟಿಸ್‌ ಜಾರಿ ಮಾಡಿ ಅವರಿಗೆ ಶಿಕ್ಷೆ ಕೊಡಬೇಕು ಎಂದು ಸ್ವತಃ ಪರಮೇಶ್ವರ್‌ ಬಯಸುತ್ತಾರೆ ಎಂದು ನನಗೆ ಅನಿಸುವುದಿಲ್ಲ. ಮೂಲತಃ ಅವರು ಒಬ್ಬ ಸಭ್ಯ ಮನುಷ್ಯ. ಅವರ ಜೊತೆ ಸಂಪರ್ಕ ಸಾಧಿಸುವುದು ಬಹಳ ಕಷ್ಟವಾದರೂ ಅವರು ಅಹಂಕಾರಿಯಲ್ಲ. ಆದರೆ, ಈಗ ಅವರು ನಮ್ಮ ಗೃಹಸಚಿವರು. ಇಡೀ ಪೊಲೀಸ್‌ ಇಲಾಖೆ ಅವರ ಕೈಯಲ್ಲಿ ಇದೆ. ಇತರ ಯಾವ ಸಚಿವರಿಗೂ ಇಲ್ಲದ ಮರ್ಯಾದೆ ಅವರಿಗೆ.ಎಲ್ಲಿ ಹೋದರೂ ಪೊಲೀಸರು ಸಂಭ್ರಮದಿಂದಲೋ, ಭಯದಿಂದಲೋ ಗೌರವ ಸಲ್ಲಿಸುತ್ತಾರೆ. ಮುಖ್ಯಮಂತ್ರಿ ಬಿಟ್ಟರೆ ಗೃಹ ಸಚಿವರಿಗೆ ಮಾತ್ರ ಎಲ್ಲಿಗೆ ಹೋದರೂ ಪೊಲೀಸರ ಗೌರವ ರಕ್ಷೆ ಸಿಗುತ್ತದೆ. ಅವರ ವಾಹನ ಎಲ್ಲೆಲ್ಲಿ ಸಂಚರಿಸುತ್ತದೆ ಅದೆಲ್ಲ ನಿಸ್ತಂತು ವ್ಯವಸ್ಥೆ ಮೂಲಕ ಪೊಲೀಸ್‌ ನಿಯಂತ್ರಣ ಕೊಠಡಿಗೆ ಗೊತ್ತಾಗುತ್ತ ಇರುತ್ತದೆ.ಗೃಹ ಸಚಿವರು ಎಲ್ಲಿಯೂ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳಬಾರದು. ಅಕಸ್ಮಾತ್‌ ಸಿಲುಕಿಕೊಂಡರೆ ಅದನ್ನು ಇಲಾಖೆ  ಸಹಿಸಬಾರದು ಎಂಬ ಸ್ಥಿತಿಯನ್ನು ವ್ಯವಸ್ಥೆಯೇ ನಿರ್ಮಿಸಿಬಿಡುತ್ತದೆ. ‘ಗೃಹ ಸಚಿವರು ಎಂದರೇನು? ಅವರು ಅಷ್ಟೆಲ್ಲ ಪೊಲೀಸರು ಇರುವಾಗ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುವುದು ಎಂದರೇನು’ ಎಂದು ಇಡೀ ಪೊಲೀಸ್‌ ಇಲಾಖೆ ಚಿಂತಿತವಾಗುತ್ತದೆ.ಹಾಗೆ ಗೃಹ ಸಚಿವರು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುವುದು ವ್ಯವಸ್ಥೆಯ ದೋಷ ಎಂದು ಇಲಾಖೆಗೆ ಅನಿಸತೊಡಗುತ್ತದೆ. ಅದರ ಫಲವೇ ಒಬ್ಬ ಇನ್ಸ್‌ಪೆಕ್ಟರ್‌ಗೆ ನೋಟಿಸ್‌ ಜಾರಿಯಾಗುತ್ತದೆ. ಅವರಿಗೆ  ಶಿಕ್ಷೆಯಾಗುತ್ತದೆಯೋ ಏನೋ ಗೊತ್ತಿಲ್ಲ. ಆದರೆ, ಅದೇ ರಸ್ತೆಯಲ್ಲಿ ನಿತ್ಯ ಸಂಚರಿಸುವ ಲಕ್ಷಾಂತರ ಜನರ ಬಗೆಗೆ ವ್ಯವಸ್ಥೆ ಹೇಗೆ ಯೋಚಿಸುತ್ತದೆ? ‘ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ಹೀಗೆಯೇ ಹೆಚ್ಚುತ್ತಿದ್ದರೆ ನಾವು ಏನು ಮಾಡಲು ಆಗುತ್ತದೆ’ ಎಂದೇ  ಅಲ್ಲವೇ ಪೊಲೀಸರು ನಮಗೆ ಸಮಜಾಯಿಷಿ ಕೊಡುವುದು?ಜನರ ಯಾವ ಸಮಸ್ಯೆಯ ಬಿಸಿಯೂ ಯಾವ ಸಚಿವರಿಗೂ ತಟ್ಟುವುದಿಲ್ಲ. ಲೋಕೋಪಯೋಗಿ ಸಚಿವರಿಗೆ ನಮ್ಮ ರಸ್ತೆಗಳು ಹೇಗೆ  ಕೆಟ್ಟಿವೆ ಎಂಬುದು ತಿಳಿದಿರುವುದಿಲ್ಲ. ಸಮಾಜ ಕಲ್ಯಾಣ ಸಚಿವರಿಗೆ ನಮ್ಮ ವಿದ್ಯಾರ್ಥಿ ನಿಲಯಗಳು ಎಂಥ ದುಃಸ್ಥಿತಿಯಲ್ಲಿ ಇವೆ ಎಂದು ಗೊತ್ತಿರುವುದಿಲ್ಲ. ಆರೋಗ್ಯ ಸಚಿವರಿಗೆ ನಮ್ಮ ಆಸ್ಪತ್ರೆಗಳು ಹೇಗೆ ಹದಗೆಟ್ಟಿವೆ ಎಂದು ಅನುಭವಕ್ಕೆ ಬಂದಿರುವುದಿಲ್ಲ. ಆದರೂ ಅವರು ಆಯಾ ಇಲಾಖೆಯ ಉಸ್ತುವಾರಿ ನೋಡಿಕೊಳ್ಳುತ್ತ ಇರುತ್ತಾರೆ.ಯಾವ ಸಚಿವರೂ ನಮ್ಮ ಕೆಲಸವನ್ನು ಸರಿಯಾಗಿ ಮಾಡುವುದಿಲ್ಲ ಎಂದು ಗೊತ್ತಿದ್ದೂ ಜನರು ಅವರ ಸುತ್ತ ಗ್ರಹಗಳ ಹಾಗೆ ಸುತ್ತಬೇಕು ಎಂದು ಬಯಸುತ್ತಾರೆ. ಅವರಿಗೆ ಹಾರ ತುರಾಯಿ ಹಾಕಬೇಕು ಎಂದು ಹಾತೊರೆಯುತ್ತಾರೆ. ಅಧಿಕಾರವೇ ಹಾಗೆ. ಅದು ಒಂದು ಅಮಲು. ಅಧಿಕಾರದಲ್ಲಿ ಇದ್ದವರಿಗೆ ಮಾತ್ರವಲ್ಲ ಅವರ ಸುತ್ತ ಇದ್ದವರಿಗೂ ಅದು ಒಂದು ರೀತಿ ಅಮಲು ತರಿಸುತ್ತದೆ. ಇದು ಭಾರತೀಯ ವ್ಯಕ್ತಿತ್ವದಲ್ಲಿನ ದೋಷ.ಸಾಹಿತ್ಯಕ್ಕೆ ನೊಬೆಲ್‌ ಪ್ರಶಸ್ತಿ ಪಡೆದ ವಿ.ಎಸ್.ನೈಪಾಲರು 1980ರ ದಶಕದ ಕೊನೆಯಲ್ಲಿ ಕರ್ನಾಟಕಕ್ಕೆ ಬಂದಿದ್ದರು. ಆ ಭಾರತ ಭೇಟಿಯ ಅನುಭವಗಳನ್ನು ಇಟ್ಟುಕೊಂಡೇ ಅವರು ‘ಇಂಡಿಯಾ: ಎ ಮಿಲಿಯನ್‌ ಮ್ಯುಟಿನೀಸ್‌ ನೌ’ ಎಂಬ ಪುಸ್ತಕವನ್ನು 1990ರಲ್ಲಿ ಪ್ರಕಟಿಸಿದರು. ಆಗಿನ್ನೂ ಸಚಿವರಾಗಿದ್ದ ಎಂ.ಪಿ.ಪ್ರಕಾಶರನ್ನು ಅವರ ಮನೆಯಲ್ಲಿ ನೈಪಾಲರು ಭೇಟಿ ಮಾಡಿದ್ದರು. ಪ್ರಕಾಶ್ ಅವರು ಕರ್ನಾಟಕದ ಹಾಗೆ ನೋಡಿದರೆ ಒಟ್ಟಾರೆ  ಭಾರತದ ರಾಜಕೀಯ ವ್ಯವಸ್ಥೆ ಮತ್ತು ಅಲ್ಲಿನ ದ್ವಂದ್ವಗಳನ್ನು ಕುರಿತು ನೈಪಾಲ್‌ ಜೊತೆಗೆ ಮಾತನಾಡಿದ್ದರು:‘ರಾಜ ಮಹಾರಾಜರ, ಜಮೀನುದಾರರ ಸುದೀರ್ಘ ಆಳ್ವಿಕೆಗೆ ಒಳಪಟ್ಟ ನಮ್ಮ ಜನರು ಅಧಿಕಾರದ ಸ್ಥಾನಗಳನ್ನು ಯಾವಾಗಲೂ ಭಯಮಿಶ್ರಿತ ಗೌರವದಿಂದ ನೋಡಿದ್ದಾರೆ. ಬಹುಶಃ ಅದೇ ಕಾರಣಕ್ಕಾಗಿ ಅವರು ಅಧಿಕಾರದ ಗದ್ದುಗೆಗಳನ್ನು ಅಷ್ಟೇ ತಾತ್ಸಾರ ಮತ್ತು ದ್ವೇಷದಿಂದಲೂ ನೋಡಿದ್ದಾರೆ.ಇಲ್ಲಿ ಒಂದು ವಿಪರ್ಯಾಸ ಇದೆ : ಬೇಗ  ಕೈಗೆ ಸಿಗುವ, ಸರಳ  ಜೀವನ ನಡೆಸುವ ಮತ್ತು ಸಹಾನುಭೂತಿಯುಳ್ಳ ಒಬ್ಬ ವ್ಯಕ್ತಿ ಅಧಿಕಾರದಲ್ಲಿ ಇರಲಿ ಎಂದು ಬಯಸುವ ಜನರೇ ಅಧಿಕಾರದ ಬಗೆಗೆ ಭಿನ್ನ ಅನಿಸಿಕೆ ಹೊಂದಿದ್ದಾರೆ. ಅಧಿಕಾರ ಎಂದರೆ ಅಲ್ಲಿ ಆಡಂಬರ ಇರಬೇಕು, ಡೌಲು ಇರಬೇಕು, ಅದು ಅಧಿಕಾರಯುತವಾಗಿರಬೇಕು ಮತ್ತು ಶ್ರೀಮಂತವಾಗಿರಬೇಕು ಎಂದೂ ಅವರು ಅಂದುಕೊಳ್ಳುತ್ತಾರೆ. ಎರಡೂ ಕೂಡಿ ಹೋಗಲು ಸಾಧ್ಯವಿಲ್ಲ.‘ಈಗ ಸಚಿವನಾಗಿರುವ ನನ್ನಂಥವನ ವಿಚಾರದಲ್ಲಿ ಸಚಿವನಾಗುವುದಕ್ಕಿಂತ ಮುಂಚೆ ತಮ್ಮ ಊರಿನ ಹಳೆಯ, ನಮ್ರ ವಕೀಲನಂತೆ ಇದ್ದ ಹಾಗೆಯೇ ನಾನು ಇರಬೇಕು ಎಂದು ಜನರು ಬಯಸುತ್ತಾರೆ.  ಆದರೆ, ನನ್ನ ಸುತ್ತ ಅಧಿಕಾರಿಗಳು ಇದ್ದರೆ ಮತ್ತು ನಾನೇ ಅಧಿಕಾರದ ಭಂಗಿಯನ್ನು ಆಹ್ವಾನಿಸಿಕೊಂಡರೆ ಜನರು ನನ್ನನ್ನು ಗೌರವಿಸುತ್ತಾರೆ’ ಎಂದು ಪ್ರಕಾಶ್‌ ಅವರು ನೈಪಾಲರಿಗೆ ಅಧಿಕಾರದ ಕುರಿತು ಭಾರತೀಯರ ಮನಃಸ್ಥಿತಿಯನ್ನು ಅರ್ಥ ಮಾಡಿಸಿಕೊಟ್ಟಿದ್ದರು.ಮೊನ್ನೆ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲರು ಸಂಪುಟ ಸಭೆಗೆ ಬರಲು ಮೆಟ್ರೊದಲ್ಲಿ ಸಾಮಾನ್ಯರ ಹಾಗೆ ಪ್ರಯಾಣ ಮಾಡಿದ್ದು ಮಾಧ್ಯಮಗಳಿಗೆ ಸುದ್ದಿಯಾಯಿತು. ಸುದ್ದಿ ಏಕೆ ಆಯಿತು ಎಂದರೆ ಪಾಟೀಲರು ಸಾಮಾನ್ಯರ ಹಾಗೆ  ಪ್ರಯಾಣ ಮಾಡುವುದು ಸಹಜವಲ್ಲ ಎನ್ನುವಂತೆ ಮಾಧ್ಯಮಗಳಿಗೆ  ತೋರುತ್ತದೆ.ಅಂದರೆ ಅವರು ನಮ್ಮ ಹಾಗೆ ಮೆಟ್ರೊದಲ್ಲಿ ಪ್ರಯಾಣ ಮಾಡಬಾರದು ಎಂದೇ ಆಳದಲ್ಲಿ ಇರುತ್ತದೆ. ಅದನ್ನು ಮೀರಿ ಅವರು ಮೆಟ್ರೊದಲ್ಲಿ ಪ್ರಯಾಣಿಸಿದರೆ ಅದು ರೋಮಾಂಚನ ಹುಟ್ಟಿಸುತ್ತದೆ. ಅಧಿಕಾರದಲ್ಲಿ ಇರುವವರು ನಮ್ಮ ಹಾಗೆಯೇ ಸಾಮಾನ್ಯರು ಅಲ್ಲ ಎಂದು ನಮಗೆ ಏಕೆ ಅನಿಸುತ್ತದೆ?ನಮಗೆ ಹಾಗೆ ಏಕೆ ಅನಿಸುವುದಿಲ್ಲ ಎಂಬುದಕ್ಕೆ ಪ್ರಕಾಶ್‌ ಅವರು ನೈಪಾಲರ ಮುಂದೆ ಕಾರಣ ಕೊಟ್ಟಿದ್ದರು.  ನಮ್ಮ ಸ್ವಾತಂತ್ರ್ಯಕ್ಕೆ ನಾಳೆ ಸೋಮವಾರಕ್ಕೆ ಎಪ್ಪತ್ತು ವರ್ಷ. ಆದರೂ ನಮ್ಮ ಮನಸ್ಸು 1947ಕ್ಕಿಂತ ಹಿಂದೆಯೇ ಇದೆ.ನಮ್ಮ ರಾಜಕಾರಣಿಗಳು ಯಾರೂ ಬ್ರಿಟನ್‌ ಪ್ರಧಾನಿಯಷ್ಟು ಪ್ರಭಾವಿಗಳು ಅಲ್ಲ. ಕೆಲವು ದಿನಗಳ ಹಿಂದೆ ಬ್ರಿಟನ್‌ ಪ್ರಧಾನಿ ಹುದ್ದೆ ತೊರೆದ ಡೇವಿಡ್ ಕ್ಯಾಮರಾನ್‌ ತಮ್ಮ ಮನೆಯನ್ನು ತಾವೇ ಹೇಗೆ ಖಾಲಿ ಮಾಡಿದರು ಎಂದು ನಮಗೆ ನೆನಪು ಇರಬಹುದು. ತಮ್ಮ ಮನೆಯ ಸಾಮಾನು ಪೆಟ್ಟಿಗೆಗಳನ್ನು ತಾವೇ ಹೊಟ್ಟೆಯ ಮೇಲೆ ಹಿಡಿದುಕೊಂಡು ಸಾಗಿಸಿದರು.ಅಧಿಕಾರ ಕಳೆದುಕೊಂಡ ನಮ್ಮ ಯಾವ ರಾಜಕಾರಣಿಯಾದರೂ ಹೀಗೆ ಮನೆ ಖಾಲಿ ಮಾಡಿದ್ದು ನಮಗೆ ಗೊತ್ತಿದೆಯೇ? ಇಷ್ಟು ವರ್ಷಗಳಲ್ಲಿ ಒಬ್ಬರಾದರೂ ಹಾಗೆ ಮನೆ ಖಾಲಿ ಮಾಡಲಿಲ್ಲ. ಅಧಿಕಾರ ಹೋದ ಮೇಲೆ ನ್ಯಾಯಾಲಯದಿಂದ ಆದೇಶ ಬರುವವರೆಗೆ ಅವರು ಸರ್ಕಾರಿ ಮನೆಗಳನ್ನೇ ಖಾಲಿ ಮಾಡುವುದಿಲ್ಲವಲ್ಲ? ಅಲ್ಲಿಯೂ ಅದೇ ಸಮಸ್ಯೆ. ಅಧಿಕಾರ  ಹೋಯಿತು ಎಂದು ನಂಬುವುದಕ್ಕೇ ಅವರು ಸಿದ್ಧರಿರುವುದಿಲ್ಲ.ಅಧಿಕಾರ ಇಲ್ಲದಿದ್ದರೂ ಅಧಿಕಾರದಲ್ಲಿ ಇದ್ದಾಗ ಇದ್ದ ಮನೆಯಲ್ಲಿಯಾದರೂ ಇರೋಣ ಎಂದು ಅಂದುಕೊಳ್ಳುತ್ತಾರೋ ಏನೋ?! ಕ್ಯಾಮರಾನ್‌ ಅವರು ಅಧಿಕಾರ ಹೋದ ನಂತರ ಮಾತ್ರ  ಹೀಗೆ ನಡೆದುಕೊಂಡವರು ಅಲ್ಲ. ಅವರು ಬ್ರಿಟನ್‌ ಪ್ರಧಾನಿಯಾಗಿದ್ದಾಗಲೂ ಲಂಡನ್‌ನ ಮೆಟ್ರೊದಲ್ಲಿ ಸಾಮಾನ್ಯನ ಹಾಗೆಯೇ ನಿಂತುಕೊಂಡು ಪ್ರಯಾಣ ಮಾಡಿದವರು.ಇಲ್ಲಿ ಎಚ್‌.ಕೆ.ಪಾಟೀಲರಿಗೆ ಸೀಟು ಬಿಟ್ಟು ಕೊಡಲು ಕೆಲವರಾದರೂ ಸಿದ್ಧರಿರುತ್ತಾರೆ. ಅಲ್ಲಿ ಯಾರೂ ಕ್ಯಾಮರಾನ್‌ ಬಂದರು ಎಂದು ಎದ್ದೂ ನಿಲ್ಲಲಿಲ್ಲ, ಸೀಟೂ ಬಿಟ್ಟುಕೊಡಲಿಲ್ಲ! ಅಲ್ಲಿ ಪ್ರಧಾನಿಯೂ ನಮ್ಮ ಹಾಗೆ ಒಬ್ಬ. ಆತ ನಮಗಿಂತ ದೊಡ್ಡವನು ಅಲ್ಲ.ಇಲ್ಲಿ ನಾವು ಹಾಗೆ ಭಾವಿಸುವುದಿಲ್ಲ. ರಾಜಕಾರಣಿಗಳೂ ಭಾವಿಸುವುದಿಲ್ಲ. ಅದೇ ಕಾರಣಕ್ಕಾಗಿ ಅಧಿಕಾರವು ಅವರ ಮೇಲೆ ಮಾತ್ರವಲ್ಲ ಅವರ ಮಕ್ಕಳ ಮೇಲೂ ವ್ಯತಿರಿಕ್ತ ಪರಿಣಾಮ ಮಾಡುತ್ತದೆ. ನೈಪಾಲರ ಮುಂದೆ ಪ್ರಕಾಶ್‌ ಅವರು ಅದನ್ನೂ ಹೇಳಿದ್ದರು. ‘ನಾನೇನೋ ಹಡಗಲಿಯಿಂದ ಬಂದೆ, ಅಲ್ಲಿಗೆ ಮರಳಿ ಹೋಗಲು ಸಿದ್ಧನಿದ್ದೇನೆ. ಆದರೆ, ನನ್ನ ಮಕ್ಕಳಿಗೆ ಈಗ ನಗರ ಇಷ್ಟವಾಗಿದೆ. ಅವರು ವಾಪಸು ಹಳ್ಳಿಗೆ ಹೋಗಿ ಇರುವುದು ದುಸ್ತರ’  ಎಂದು ಒಪ್ಪಿಕೊಂಡಿದ್ದರು.ನಮ್ಮ ರಾಜಕಾರಣಿಗಳು ಯಾರೂ ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಅವರಷ್ಟು ಪ್ರಸಿದ್ಧರು ಅಲ್ಲ. ಒಬಾಮ ಮುಂದಿನ ನವೆಂಬರ್‌ ತಿಂಗಳು ಅಧಿಕಾರ ಬಿಟ್ಟು ಕೊಡುತ್ತಾರೆ. ಅಧಿಕಾರ ತೊರೆದ ನಂತರ ಅವರು ಎಲ್ಲಿಯೋ ತಮ್ಮ ಊರಿಗೆ ಹೋಗಿ ಸಾಮಾನ್ಯನ ಹಾಗೆ ಇದ್ದು ಬಿಡುತ್ತಾರೆ. ಜಿಮ್ಮಿ ಕಾರ್ಟರ್‌ ಅಮೆರಿಕೆಯ ಅಧ್ಯಕ್ಷ ಹುದ್ದೆ ತೊರೆದು ನೇರವಾಗಿ ತಮ್ಮ ಹೊಲಕ್ಕೆ ಹೋಗಿ ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದರು.ಒಬಾಮ ತಮ್ಮ ಚಿಕ್ಕ ಮಗಳಿಗೆ ಈಗಲೇ ಕಠಿಣ ಜೀವನದ ಪಾಠಗಳನ್ನು ಹೇಳಿ ಕೊಡುತ್ತಿರುವಂತಿದೆ. ಅವರ ಮಗಳು ಸಷಾ ಈಗ ರಜೆ  ಸಮಯದಲ್ಲಿ ರೆಸ್ಟಾರೆಂಟ್‌ನಲ್ಲಿ ಕೆಲಸ ಮಾಡಲು ಆರಂಭಿಸಿದ್ದಾಳೆ. ನಮ್ಮ ಯಾವ ರಾಜಕಾರಣಿಯ ಮಗ ಅಥವಾ ಮಗಳಿಂದ ನಾವು ಇಂಥ ಸರಳತೆ ನಿರೀಕ್ಷಿಸಲು ಸಾಧ್ಯ? ಒಂದು ಸಾರಿ ಒಬ್ಬ ವ್ಯಕ್ತಿ ಅಧಿಕಾರಿಯಾದರೆ ಸಾಕು.ಆತನ ಸರ್ಕಾರಿ ಕಾರಿನಲ್ಲಿ ಅಥವಾ ಜೀಪಿನಲ್ಲಿಯೇ ಅವನ ಮಕ್ಕಳು ಶಾಲೆಗೆ  ಹೋಗಲು ಆರಂಭಿಸುತ್ತಾರೆ. ಅವನ ಹೆಂಡತಿ ತರಕಾರಿ ತರಲು ಅದೇ ಕಾರು ಅಥವಾ ಜೀಪನ್ನು ಬಳಸುತ್ತಾಳೆ. ಅದೆಲ್ಲ ಸಹಜ ಎನ್ನುವಂತೆ ಅವರಿಗೆ ತೋರುತ್ತದೆ. ನಮಗೂ ಅನಿಸುತ್ತದೆ! ಆತ, ಹಿರಿಯ ಅಧಿಕಾರಿಯಾಗಿದ್ದು ಇನ್ನೇನು ಕಚೇರಿಗೆ ಹೋಗಬೇಕು ಎನ್ನುವಾಗ ಗಡಿಬಿಡಿಯಲ್ಲಿ ಶೂ ಕಟ್ಟಿಕೊಳ್ಳಲು ಹೊರಟರೆ ಲೇಸು ಕಟ್ಟಲು ಯಾರೋ ಓಡಿ ಬಂದು ಸಹಾಯ ಮಾಡುತ್ತಾರೆ!ಕೆಲವು ತಿಂಗಳ ಹಿಂದೆ ಕಲಬುರ್ಗಿಯಿಂದ ಬೆಂಗಳೂರಿಗೆ ಬರುತ್ತಿದ್ದೆ. ನನ್ನ ಬೋಗಿಯಲ್ಲಿಯೇ ಒಬ್ಬ ಸಚಿವರೂ ಪ್ರಯಾಣ ಮಾಡುತ್ತಿದ್ದರು. ರೈಲು ರಾಯಚೂರಿಗೆ ಬಂದಾಗ ಅವರ ಸಹಾಯಕ ಊಟದ ಡಬ್ಬಿಯನ್ನು ತೆಗೆದು ಸಚಿವರಿಗೆ ಬಡಿಸಲು ತೊಡಗಿದ. ಬಿಳಿ ಗರಿ ಗರಿ ಬಟ್ಟೆ ತೊಟ್ಟಿದ್ದ ಸಚಿವರ ಅಂಗಿಯ ಮೇಲೆ, ಅವರ ಬಿಳಿ ಚಪ್ಪಲಿಯ ಮೇಲೆ ಅನ್ನ ಸಾರು ಬೀಳತೊಡಗಿತು.ಸಹಾಯಕ ಕೂಡಲೇ ಸಣ್ಣ ಟವೆಲ್‌ ತೆಗೆದು ಅದನ್ನೆಲ್ಲ ಒರೆಸಲು ತೊಡಗಿದ. ಸಚಿವರಿಗೆ ನಾವು ನಮ್ಮ ತೆರಿಗೆ ಹಣದಲ್ಲಿ ಎಷ್ಟೆಲ್ಲ ಸವಲತ್ತು ಕೊಟ್ಟಿದ್ದೇವೆ! ಅವರು ಪ್ರಥಮ ದರ್ಜೆಯಲ್ಲಿಯೇ ಪ್ರವಾಸ ಮಾಡಬೇಕು. ಅವರು ಮಲಗುವಾಗ ಅವರಿಗೆ ಹಾಸಿಗೆ  ಹಾಸಿ ಕೊಡಲು, ಮೇಲೆ ಹೊದಿಸಲು ಒಬ್ಬ ಸೇವಕ ಅಥವಾ ಸಹಾಯಕ ಜೊತೆಗೇ ಪ್ರಯಾಣಿಸಬಹುದು. ಊರು ಬಂದ ಮೇಲೆ ಕೆಳಗೆ ಇಳಿದ ಕೂಡಲೇ ಅವರ  ಲಗೇಜು ಹಿಡಿದುಕೊಳ್ಳಲು ಇನ್ನೊಬ್ಬ ಇರಬೇಕು.ಅವರು ಮನೆಗೆ  ಹೋಗುವಾಗ ಅವರ ಕಾರಿನ ಹಿಂದೆ ಒಂದು ಕಾರು ಮುಂದೆ ಶಂಖ ಊದುವ ಒಂದು ಜೀಪು. ಸಚಿವರು ಸಂಚರಿಸುವ ಮಾರ್ಗದಲ್ಲಿ ಮನುಷ್ಯರು ಹೋಗಲಿ ನಾಯಿಗಳೂ ಇರಬಾರದು.ಅಧಿಕಾರವೇ ಹಾಗೆ. ಅದು ಜನರು ಕೊಟ್ಟದು. ಆದರೆ, ಅದು ಜನರಿಂದಲೇ ದೂರ ಒಯ್ಯುವಂಥದು! ಅದು ಒಂದು ಅಮಲು; ಒಂದು ವಿಪರ್ಯಾಸ!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.