ಸೋಮವಾರ, ಮಾರ್ಚ್ 8, 2021
19 °C

ಅಪ್ಪನ ಪ್ರೀತಿ

ಕಲೀಮ್ ಉಲ್ಲಾ Updated:

ಅಕ್ಷರ ಗಾತ್ರ : | |

ಅಪ್ಪನ ಪ್ರೀತಿ

ಆ ದಿನ ತರಗತಿಯಲ್ಲಿ ಪಾಠ ಮಾಡುತ್ತಿದ್ದೆ. ಹಳ್ಳಿಯ ಯಜಮಾನರೊಬ್ಬರು ಕಿಟಕಿಯಿಂದ ಇಣುಕಿ ಏನೋ ಹುಡುಕುತ್ತಿದ್ದರು. ‘ಯಾರು ಬೇಕಾಗಿತ್ತು ಎಂದೆ’. ‘ನಾನು ನಮ್ಮ ಪಾಪಣ್ಣನ್ನ ನೋಡಬೇಕಿತ್ತು’ ಎಂದವರೆ ಬಾಗಿಲನ್ನು ನೂಕಿಕೊಂಡು ನೇರ ಕ್ಲಾಸ್ ರೂಮಿನೊಳಗೆ ನುಗ್ಗಿ ಬಂದು ಬಿಟ್ಟರು.  ಈ ದಿಢೀರ್ ಪ್ರಕ್ರಿಯೆಗೆ ಹುಡುಗರೆಲ್ಲಾ ‘ಹೋ’ ಎಂದು ಅಬ್ಬರಿಸಿ ನಗತೊಡಗಿದವು. ನನಗೆ ಕೋಪ ಬಂದು ಕ್ಲಾಸಿನಲ್ಲಿದ್ದ ಎಲ್ಲರಿಗೂ ಏಯ್ ಎಂದು ಗದರಿಸಿದೆ. ಮಕ್ಕಳೆಲ್ಲಾ ಗಪ್‌ಚಿಪ್ ಆದರು.



ಪಾಪಣ್ಣನ ನೋಡಲು ಬಂದ ಯಜಮಾನರು ಗಲಿಬಿಲಿಗೊಂಡಿದ್ದರು. ಅವರ ಕೈಯಲ್ಲಿ ಮಾಸಿದ ಎರಡು ಬ್ಯಾಗುಗಳಿದ್ದವು. ಅವುಗಳ ತುಂಬ ಅನೇಕ ತಿನ್ನುವ ವಸ್ತುಗಳಿದ್ದವು. ಬಗಲಲ್ಲಿ ಕಾಸಿದ ಹಳದಿ ತುಪ್ಪದ ಬಾಟಲಿ ಇಳಿ ಬಿದ್ದಿತ್ತು. ಹೊಲದ ಕೆಲಸ ಮುಗಿಸಿ ನೇರ ಬಸ್ಸು ಹಿಡಿದು ಬಂದ ಕಾರಣ ಅವರ ಬಟ್ಟೆಗಳು ಒಂದಿಷ್ಟು ಮಣ್ಣಾಗಿದ್ದವು.



ನಾನು ಕೇಳುತ್ತಿದ್ದ ಪ್ರಶ್ನೆಗಳಿಗೆ ಅವರು ಉತ್ತರಿಸದೆ ಮತ್ತದೇ ಅವಸರದಲ್ಲಿ ಅತ್ತಿತ್ತ ನೋಡುತ್ತಾ ತಮ್ಮ ಪಾಪಣ್ಣನನ್ನು ಹುಡುಕುತ್ತಿದ್ದರು. ಜಾತ್ರೆಯಲ್ಲಿ ನಡೆದಾಡುವ ಎಳೆಯ ಮಗುವ ಕಳಕೊಂಡವರ ರೀತಿ ಅವರು ಇಡೀ ತರಗತಿಯನ್ನ ತಡಕಾಡುತ್ತಿದ್ದರು. ನಾನು ಅವರ ಮುಖ ಮತ್ತು ಕಾತರದ ಕಣ್ಣುಗಳನ್ನೇ ನೋಡುತ್ತಿದ್ದೆ. ವಾತ್ಸಲ್ಯ ಮತ್ತು ಮುಗ್ಧತೆಯ ಬೆಳಕಿನಿಂದ ಅವು ಹೊಳೆಯುತ್ತಿದ್ದವು. ನನಗೆ ಅವರನ್ನು ನೋಡಿ ಪ್ರೀತಿಯೇ ಉಕ್ಕಿ ಬಂತು. ಅವರು ಮಾತ್ರ ನನ್ನ ಮಾತಿಗೂ, ಕೈಗೂ ಸಿಗದೆ ಎಳೆಗರುವಿನಂತೆ ಕ್ಲಾಸಿನ ತುಂಬಾ ಶತಪತ ಸುತ್ತುತ್ತಿದ್ದರು.



ಯೂನಿಫಾರಂನಲ್ಲಿರುವ ವಿದ್ಯಾರ್ಥಿಗಳನ್ನು ಒಟ್ಟಿಗೆ ನೋಡುವಾಗ ಎಲ್ಲಾ ಮಕ್ಕಳು ಒಂದೇ ತಾಯಿಯ ಬಸಿರ ಬಳ್ಳಿಯಿಂದ ಹುಟ್ಟಿ ಬಂದಂತೆ ಕಾಣುತ್ತವೆ. ಆ ಏಕತೆಯ ಬಣ್ಣದಲ್ಲಿ ನಮ್ಮ ನಮ್ಮ ಮಕ್ಕಳನ್ನು ಸಡನ್ನಾಗಿ ಹುಡುಕಿಕೊಳ್ಳುವುದು ಬಲು ಕಷ್ಟದ ಕೆಲಸ. ಅದೇ ಫಜೀತಿ ಇಲ್ಲಿ ಯಜಮಾನರಿಗೂ ಆಗಿತ್ತು. ‘ಎಲ್ಲಾ ನೋಡಕ್ಕೆ ಒಂದೇ ಥರ ಅದಾವೆ ಸ್ವಾಮಿ. ಏನೂ ತಿಳಿಯಂಗಿಲ್ಲ’ ಎಂದು ಕೊನೆಗೆ ಸುಸ್ತಾದ ಯಜಮಾನರು ನನ್ನ ಬಳಿ ಬಂದು ನಿಂತರು.



ಹಳ್ಳಿ ಯಜಮಾನರ ದಿಢೀರ್ ಆಗಮನದಿಂದ ಹುಡುಗರಿಗೆ ಪಾಠದ ಮಧ್ಯೆ ಒಂದು ಪುಕ್ಕಟ್ಟೆ  ಬ್ರೇಕ್ ಸಿಕ್ಕಂತೆ ಆಗಿತ್ತು. ಮೊದಲೇ, ನನ್ನ ಸತತ ಕೊರೆತದಿಂದ ಸುಸ್ತಾಗಿದ್ದ ಮಕ್ಕಳು ಅದೇ ಬಿಡುಗಡೆಯೆಂದು ಭಾವಿಸಿ ಮತ್ತೆ  ತಮ್ಮಲ್ಲೇ ಕಸಪಿಸ ಎಂದು ಶುರು ಮಾಡಿಕೊಂಡವು. ಮತ್ತೊಮ್ಮೆ  ಗದರಿಸಿದೆ.



ಒಮ್ಮೆ, ನನ್ನ ಅಪ್ಪನೂ ಇದೇ ಥರ ಬೀಡಿ ಎಳೆಯುತ್ತಾ ಇಂಥದ್ದೇ ಮಾಸಲು ಬಟ್ಟೆಯಲ್ಲಿ ನನ್ನ ಹುಡುಕಿಕೊಂಡು ಕಾಲೇಜಿಗೆ ಬಂದು ಬಿಟ್ಟಿದ್ದರು. ಆಗ ನಾನು ಕಲಿಯುತ್ತಿದ್ದ ಪ್ರತಿಷ್ಠಿತ ಕಾಲೇಜಿನ ಹುಡುಗ ಹುಡುಗಿಯರಲ್ಲಾ ಒಮ್ಮೆಲೇ ಗೊಳ್ಳಂತ ನಕ್ಕಿದ್ದರು. ತಕ್ಷಣ ನನಗೆ ಅವಮಾನವಾದಂತಾಗಿ ಕಣ್ಣೀರು ಬಂದಿತ್ತು. ನನ್ನ ಮೇಷ್ಟ್ರು ಇವರ್ಯಾರು ಎಂದು ಬಾಯಿ ಬಿಡುವ ಮೊದಲೇ ನಾನು ಎದ್ದು ನಿಂತು, ‘ಇವರು ನಮ್ಮಪ್ಪ ಸಾರ್’ ಎಂದು ಹೇಳಿಕೊಂಡೆ.



ಬಹಳಷ್ಟು ಜನ ನನ್ನ ಅಪ್ಪನ ನೋಡಿ ಮುಖ ಕಿವುಚಿಕೊಂಡಿದ್ದರು. ನಾನು ಇದ್ಯಾವುದಕ್ಕೂ ಕೇರ್ ಮಾಡದೆ ಅಪ್ಪನ ಕರೆದುಕೊಂಡು ಹೋಗಿ ಕಾಲೇಜಿನ ಮುಂದಿದ್ದ ಮರದ ನೆರಳಿನ ಕಟ್ಟೆಯ ಮೇಲೆ ಕೂರಿಸಿದ್ದೆ. ಆದರೆ, ಅಪ್ಪನಿಗೇ ಹೆಚ್ಚು ಮುಜುಗರವಾಗಿತ್ತು. ‘ನೋಡ್ಬೇಕು ಅನ್ನಿಸ್ತು. ನೆಂಪಾಗಿ ಹೆಂಗಿದ್ನೋ ಹಂಗೇ ಬಂದ್ಬಿಟ್ಟೆ. ನಾವೆಲ್ಲಾ ಹಂಗ್ ಹೇಳ್ದೆ ಕೇಳ್ದೆ ಬರಬಾರದಿತ್ತೇನೋ?’ ಎಂದು ಸಂಕೋಚದಿಂದ ಕೊರಗಿದರು. ‘ಹಂಗೇನಿಲ್ಲ. ಯಾವಾಗ ಬೇಕಾದ್ರೂ ಬರಬಹುದು.



ಅಪ್ಪನಾಗಿ ನೀನು ಬರೋದು ನಿನ್ನ ಹಕ್ಕು’ ಎಂದು ಹೇಳಿದ್ದೆ. ಅಪ್ಪನಿಗೆ ಈ ಮಾತಿಂದ ಒಂದಿಷ್ಟು ನೆಮ್ಮದಿ ಅನ್ನಿಸಿತು. ಅದೇ ಖುಷಿಯಲ್ಲಿ ನಾಲ್ಕಾರು ಬೀಡಿ ಹಚ್ಚಿ ಬುರುಬುರು ಎಳೆದಿದ್ದರು. ಇದೆಲ್ಲಾ ಒಮ್ಮೆಗೇ ನೆನಪಾಯಿತು. ಯಜಮಾನರ ರೂಪದಲ್ಲಿ ಸತ್ತ ಅಪ್ಪನೇ ಮತ್ತೆ ಬಂದು ನಿಂತಂತೆ ಅನ್ನಿಸತೊಡಗಿತು.



ಆಶ್ಚರ್ಯ ಅಂದರೆ ಯಜಮಾನರು ಕ್ಲಾಸಿನಲ್ಲಿ ತಮ್ಮ ಕುಡಿಯನ್ನು ಈ ಪರಿಯಾಗಿ ಹುಡುಕುವಾಗ ಯಾವ ನರಪಿಳ್ಳೆಯೂ ‘ಪಾಪಣ್ಣ ಅಂದ್ರೆ ನಾನು ಸಾರ್.  ಇವರು ನಮ್ಮಪ್ಪ ಸಾರ್’ ಎಂದು ಧೈರ್ಯವಾಗಿ ಎದ್ದು ನಿಲ್ಲಲಿಲ್ಲ. ನಗರದ ಕಾಲೇಜು ಪರಿಸರ ಸೇರುವ ಹಳ್ಳಿಯ ಮಕ್ಕಳು ಹೀಗೆ ಒಮ್ಮಿಂದೊಮ್ಮೆಲೇ ತುಂಬಾ ನಾಜೂಕಾಗಿ ಬಿಡುತ್ತವೆ. ನಾವು ಈ ಸ್ಥಿತಿಯಲ್ಲಿರುವವರ ಮಕ್ಕಳು ಎಂದು ಗೆಳೆಯರಿಗೆ, ಅದರಲ್ಲೂ ಮುಖ್ಯವಾಗಿ ಹುಡುಗಿಯರಿಗೆ ಗೊತ್ತಾಗಿ ಬಿಟ್ಟರೆ, ತಮ್ಮ ಮರ್ಯಾದೆ ಕಡಿಮೆಯಾಗುತ್ತದೆ ಎಂಬ ಅಳುಕು ಅವರದು. ಎಲ್ಲಿ ಆಡಿಕೊಂಡು ನಗುತ್ತಾರೋ?, ಗೇಲಿಮಾಡಿ ಹಂಗಿಸುತ್ತ್ತಾರೋ ಎಂಬ ಅಂಜಿಕೆ ಹೆಚ್ಚಿನ ಮಕ್ಕಳ ಮನಸ್ಸಿನಲ್ಲಿ ಮೂಡಿಬಿಟ್ಟಿದೆ. ನಮ್ಮ ನಗರದ ನಾಗರಿಕತೆಗಳು ರೂಪಿಸಿರುವ ಸಂಕುಚಿತ ಸ್ಥಿತಿಯಿದು.



‘ಪಾಪಣ್ಣ ಅಂತ ಈ ಕ್ಲಾಸಿನಲ್ಲಿ ಯಾರೂ ಇದ್ದಂಗಿಲ್ಲ ಯಜಮಾನರೇ’ ಎಂದು ನಾನು ಹೇಳಿದ ತಕ್ಷಣ ‘ನೀವು ಪಾಠ ಮಾಡಿ ಸ್ವಾಮಿ, ಇಲ್ಲೇ ಎಲ್ಲೋ ಇರ್ಬೇಕು. ನಾನು ಹೊರಗೆ ಕಾಯ್ಕಂಡು ಇರ್ತೀನಿ’ ಎಂದವರೇ, ಸೀದಾ ಕ್ಲಾಸಿನಿಂದ ಹೊರಗೆ ಹೋಗಿ ಕಾರಿಡಾರಿನ ಒಂದು ಮೂಲೆಯಲ್ಲಿ ಗುಬ್ಬಚ್ಚಿಯಂತೆ ಕೂತುಕೊಂಡರು.



ನಾನು ನನ್ನ ಕ್ಲಾಸಿನ ಹುಡುಗರಿಗೆ ‘ಅವರ ಮಗ ಯಾರಾದ್ರೂ ಈ ಕ್ಲಾಸಲ್ಲಿ ಇದ್ರೆ ಎದ್ದು ಹೋಗಪ್ಪ’ ಎಂದು ಹೇಳಿದೆ. ಯಾರೂ ಎದ್ದು ನಿಲ್ಲಲಿಲ್ಲ. ಎಲ್ಲರೂ ಮತ್ತೆ ಗುಜುಗುಜು ಮಾತಾಡಿಕೊಂಡು ಒಬ್ಬರ ಮುಖ ಒಬ್ಬರು ನೋಡಿಕೊಂಡವು. ಅವರ ಮಗ ಯಾರು? ಯಾವ ಸೆಕ್ಷನ್ನಲ್ಲಿ ಇದ್ದಾನೆ ಅಂತ ನಿಮಗ್ಯಾರಿಗಾದರೂ ಗೊತ್ತೇನ್ರೋ?’ ಎಂದು ಮತ್ತೆ ಕೇಳಿದೆ. ಮಕ್ಕಳು ಇಲ್ಲ ಸಾರ್ ಎಂದವು. ನಾನು ಇದನ್ನೆಲ್ಲಾ ಆಮೇಲೆ ವಿಚಾರಿಸಿ ನೋಡೋಣವೆಂದು ನಿಲ್ಲಿಸಿದ್ದ ಪಾಠವನ್ನು ಮತ್ತೆ ಮುಂದುವರೆಸಿದೆ.



ಅಷ್ಟರಲ್ಲಿ ನನಗೆ ಏನೋ ದಿಢೀರಂತ ಹೊಳೆದಂತಾಯಿತು. ಒಬ್ಬ ಹುಡುಗ ಕತ್ತು ಬಗ್ಗಿಸಿಕೊಂಡು ಸೂಕ್ಷ್ಮವಾಗಿ ಚಡಪಡಿಸುತ್ತಿದ್ದ. ಅವನ ನೋಡಿ ಕೋಪದಿಂದ ‘ಲೇ ಬಸವರಾಜ ಏಳೋ ಮೇಲೆ’ ಎಂದು ಕಿರುಚಿದೆ. ಒಂದೇ ಸಲ ಸ್ಫೋಟಗೊಂಡ ನನ್ನ ದನಿಗೆ ಹುಡುಗರೆಲ್ಲಾ ಬೆಚ್ಚಿಬಿದ್ದರು. ‘ನಮ್ಮ ಮೇಷ್ಟ್ರಿಗೆ ಏನಾದರೂ ಹುಚ್ಚುಹಿಡೀತಾ? ಇಲ್ಲ ದೆವ್ವ ಮೆಟ್ಟುಕೊಂಡಿತಾ?’ ಎನ್ನುವಂತೆ ಅವರೆಲ್ಲಾ ನನ್ನ ದಿಟ್ಟಿಸಿ ನೋಡುತ್ತಿದ್ದರು. ‘ಲೇ ಅವರು ನಿಮ್ಮಪ್ಪ ಅಲ್ಲವೇನೋ’ ಎಂದೆ. ಬಸವರಾಜ ತಲೆತಗ್ಗಿಸಿ ನಿಂತುಕೊಂಡಿದ್ದ.



‘ಯಾಕೋ ಇಷ್ಟು ಜನರ ಮುಂದೆ ಅವರನ್ನ ಅಪ್ಪ ಅಂತ ಒಪ್ಪಿಕೊಳ್ಳೋಕೆ ನಿನಗೆ ನಾಚಿಕೆ ಆಗ್ತಾ ಇದೆಯಾ? ಪಾಪಣ್ಣ ಅಂತ ಅವರು ಕರೆದಿದ್ದು ನಿನಗೆ ತಾನೆ? ಅವರನ್ನ ನೋಡಿ ಬಚ್ಚಿಟ್ಟುಕೊಳ್ತೀಯಾ? ಹೋಗು ತಪ್ಪಾಯಿತು ಅಂತ ಹೇಳಿ ಮಾತಾಡಿಸು. ಅವರನ್ನ ಕೆಳಗೆ ಸ್ಟಾಫ್ ರೂಮಿನಲ್ಲಿ ಕೂರಿಸಿರು’ ಎಂದು ಜೋರು ಮಾಡಿ ಅವನನ್ನು ಕ್ಲಾಸಿನಿಂದ ಹೊರಗೆ ಓಡಿಸಿದೆ. ಆದರೂ ನನಗ್ಯಾಕೋ ಅನುಮಾನ. ಹೀಗಾಗಿ ಕ್ಲಾಸನ್ನು ಅರ್ಧಕ್ಕೆ ನಿಲ್ಲಿಸಿ ಅವನ ಹಿಂದೆಯೇ ನಡೆದುಹೋದೆ.



ಮಗ ಕಾರಿಡಾರಿನಲ್ಲಿ ಎದುರಿಗೆ ಬಂದಾಗ ಕೂತಿದ್ದ ಯಜಮಾನರು ಸಂಭ್ರಮದಿಂದ ಎದ್ದು ನಿಂತರು. ಅವರ ಪ್ರೀತಿ ಹೇಳತೀರದಾಗಿತ್ತು. ಅವನ ಕೆನ್ನೆ ಸವರಲು ಅವರು ಕೈ ಚಾಚಿದಾಗ ಬಸವರಾಜ ಮುಖವನ್ನು ಝಾಡಿಸಿ ತಿರುಗಿಸಿಕೊಂಡ. ಅಪ್ಪ ಪ್ರೀತಿಯಿಂದ ಹೊತ್ತು ತಂದ ಕಾಸಿದ ತುಪ್ಪ, ಗಿಣ್ಣು, ಉಪ್ಪಿನ ಕಾಯಿ, ಎಲ್ಲಾ ಅಲ್ಲೇ ತೆಗೆದು ತೋರಿಸಲು ಹವಣಿಸಿದಾಗ ‘ಅದೆಲ್ಲಾ ಮೊದಲು ಒಳಗಿಡು’ ಎಂದು ಒರಟಾಗಿ ಗದರಿಸಿದ. ಅಪ್ಪ ಜೇಬಿನಿಂದ ತೆಗೆದ ನೋಟುಗಳನ್ನು ಮಾತ್ರ ಫಟಾರಂತ ಕಸಿದು ಪ್ಯಾಂಟಿನ ಜೇಬಿಗೆ ತುರುಕಿಕೊಂಡ. ನಾನು ಹಿಂದೆ ನಿಂತಿರುವುದು ಅವನಿಗೆ ತಿಳಿದಿರಲಿಲ್ಲ.



‘ನಿನಗೆ ಯಾರು ಕಾಲೇಜತ್ರ ಬಾ ಅಂದೋರು. ಇಲ್ಲಿಗ್ಯಾಕೆ ನನ್ನ ಮರ್ಯಾದಿ ತೆಗೆಯಾಕೆ ಬಂದ್ಯಾ? ಅಲ್ಲೇ ಹಾಸ್ಟೆಲ್ ಹತ್ರ ಬಿದ್ದು ಸಾಯಕ್ಕೆ ಆಗಲಿಲ್ವಾ ನಿನಗೆ. ನನ್ನ ಫ್ರೆಂಡ್ಸ್ ಎದುರು ನನ್ನ ಮಾನ ಮರ್ಯಾದೆನೆಲ್ಲಾ ತೆಗೆದು ಬಿಟ್ಟಲ್ಲ ಥೂ... ನಿನ್ ಮಖಕ್ಕೆ’ ಅಂತ ಅವನು ಇನ್ನೇನೋ ಬೈಯ್ಯಲು ಬಾಯಿ ತೆಗೆದಿದ್ದ. ಅಪ್ಪನ ಹಿಡಿದು ಹೊಡೆಯುವವನಂತೆ ಆಡುತ್ತಿದ್ದ. ಆದರೂ, ಅವರಪ್ಪ ಅವನ ಹಿಡಿದು ಮುದ್ದಿಸಲು ಹವಣಿಸುತ್ತಲೇ ಇದ್ದರು. ಹಿಂದೆ ನಿಂತು ಇದನ್ನೆಲ್ಲಾ ನೋಡುತ್ತಿದ್ದ ನನಗ್ಯಾಕೋ ಸಿಕ್ಕಾಪಟ್ಟೆ ಸಿಟ್ಟು ಬಂದು ಬಿಟ್ಟಿತು.



ಹಿಂದಿನಿಂದ ಬಂದವನೇ ಅವನನ್ನು ಹಿಡಿದೆಳೆದುಕೊಂಡು ಕೆನ್ನೆಗಳ ಮೇಲೆ ಸರಿಯಾಗಿ ನಾಲ್ಕು ಬಾರಿಸಿ ಬಿಟ್ಟೆ. ‘ಅಯ್ಯಯ್ಯೋ ದಮ್ಮಯ್ಯ, ಹೊಡೀಬ್ಯಾಡಿ ಸ್ವಾಮಿ. ಇರೋನೊಬ್ಬನೇ ಮಗ. ಜೀವ ಕೈಯಲ್ಲಿಟ್ಟುಕೊಂಡು ಅವನ ಸಾಕಿದ್ದೀವಿ. ಏನಾದ್ರೂ ಅವನ ಕಡೆಯಿಂದ ತಪ್ಪಾಗಿದ್ರೆ ನಾನು ನಿಮ್ಮ ಕಾಲಿಗೆ ಬಿದ್ದು ಕ್ಷಮೆ ಕೇಳ್ತೀನಿ. ಅವನಿಗೆ ಮಾತ್ರ ಹೊಡೀಬ್ಯಾಡಿ’ ಎಂದು ಅವನಪ್ಪ ಗೋಗರೆಯ ತೊಡಗಿದರು. ನನ್ನ ಬಾಯಿ ಕಟ್ಟಿದಂತಾಗಿ ಕಣ್ಣು ತುಂಬಿಕೊಂಡವು.                         

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.