ಇದು ಆಫ್ರಿಕಾ ಖಂಡದ ಪುರಾತನ ಕಥೆ. ಇಫಿಯೋಪಿಯಾದ ಪರ್ವತ ಶ್ರೇಣಿಗಳಲ್ಲಿ ಆನೆಗಳ ದೊಡ್ಡ ಪರಿವಾರ ನೆಲೆಸಿತ್ತು. ಅದು ಯಾವ ದೇವರ ಕೃಪೆಯೋ ಒಂದು ಹೆಣ್ಣಾನೆಗೆ ಮರಿ ಜನಿಸಿತು. ಅದರ ಬಣ್ಣ ಹೊಳೆಹೊಳೆವ ಬೆಳ್ಳಿಯ ಬಣ್ಣ, ಗುಲಾಬಿ ಬಣ್ಣದ ಕಣ್ಣುಗಳು, ಕಾಲುಗಳು ಮಾತ್ರ ಪಾರದರ್ಶಕವಾದ ವಜ್ರದ ಕಂಭಗಳಂತಿದ್ದವು.

ಅದರ ದಂತಗಳು ಬಂಗಾರದ ತುತ್ತೂರಿಗಳಂತಿದ್ದವು. ಬೆನ್ನ ಮೇಲೆ ಮಾಣಿಕ್ಯ, ರತ್ನಗಳಿಂದ ಕೂಡಿದ ರತ್ನಗಂಬಳಿಯನ್ನು ಹಾಸಿದಂತೆ ತೋರುತ್ತಿತ್ತು. ಅತ್ಯಂತ ಶಾಂತವಾದ ಮುಖ, ಮಣಿಗಳಿಂದ ಸಿಂಗರಿಸಿದ ದೊಡ್ಡ ಮಾಲೆಯಂತೆ ತೊನೆಯುವ ಸೊಂಡಿಲು ಇವುಗಳಿಂದ ಅದು ಮನಮೋಹಕವಾಗಿತ್ತು. ಅದು ರೂಪದಲ್ಲಿ ಮಾತ್ರವಲ್ಲ, ಗುಣದಲ್ಲೂ ಅಪರೂಪದ್ದಾಗಿತ್ತು. ಅದು ಯಾರಿಗೂ ಹಿಂಸೆ ಮಾಡುತ್ತಿರಲಿಲ್ಲ. ಬದಲಾಗಿ ಯಾವ ಆನೆಗೆ ತೊಂದರೆ ಬಂದರೂ ಓಡಿಹೋಗಿ ಸಹಕರಿಸುತ್ತಿತ್ತು.

ಅದು ದೊಡ್ಡದಾದಂತೆಲ್ಲ ಉಳಿದ ಆನೆಗಳು ಅದನ್ನೇ ನಾಯಕನೆಂದು ಭಾವಿಸಿ ಅದರ ಸೇವೆ ಮಾಡುತ್ತಿದ್ದವು. ಅದು ಹೀಗೆ ತನ್ನ ಪಾಡಿಗೆ ತಿರುಗಾಡಿಕೊಂಡಿದ್ದಾಗ ದೂರದಲ್ಲಿ ಒಬ್ಬ ಮನುಷ್ಯನನ್ನು ಕಂಡಿತು. ಆತ ಕಾಡಿನೊಳಗೆ ನವಿಲುಗಳನ್ನು ಹಿಡಿಯಲು ಬಂದವನು. ತುಂಬ ದೂರ ಬಂದಿದ್ದರಿಂದ ಅವನಿಗೆ ಮರಳಿ ಹೋಗುವ ದಾರಿ ತಿಳಿಯದೆ ಕಂಗಾಲಾಗಿ ಅಳುತ್ತಿದ್ದ. ಅವನಿಗೆ ಸಹಾಯ ಮಾಡಲೆಂದು ಈ ಗಜರಾಜ ಅವನೆಡೆಗೆ ನಡೆಯಿತು. ತನ್ನ ಕಡೆಗೆ ಆನೆ ಬರುವುದನ್ನು ಕಂಡು ಮನುಷ್ಯ ಗಾಬರಿಯಾಗಿ ಓಡತೊಡಗಿದ.

ಅವನ ಗಾಬರಿಯನ್ನು ಕಂಡು ಆನೆ ಅಲ್ಲಿಯೇ ನಿಂತಿತು. ಆತನೂ ಧೈರ್ಯದಿಂದ ನಿಂತ. ಆಗ ಆನೆ ಮತ್ತೆ ಮುಂದುವರೆಯಿತು. ಆತ ಹೆದರಿ ಓಡಿದ. ಹೀಗೆ ಮೂರು-ನಾಲ್ಕು ಬಾರಿ ಆದಾಗ ಮನುಷ್ಯನಿಗೆ ಧೈರ್ಯ ಬಂದಿತು. ಹಾಗಾದರೆ ಆನೆ ತನಗೆ ಸಹಾಯ ಮಾಡಲು ಬರುತ್ತಿರಬೇಕೆಂದು ತಿಳಿದು ಗಟ್ಟಿಯಾಗಿ ನಿಂತ. ಆನೆ ಹತ್ತಿರ ಬಂದು, ‘ಯಾಕಪ್ಪಾ, ಏನಾದರೂ ಸಹಾಯ ಬೇಕಿತ್ತೇ?’ ಎಂದು ಕೇಳಿತು. ಅದಕ್ಕೆ ಆತ ತಾನು ದಾರಿ ತಪ್ಪಿದ್ದನ್ನು ಹೇಳಿಕೊಂಡು ಅತ್ತ. ಆಗ ಆನೆ, ‘ಛೇ ಅದಕ್ಕೇಕೆ ಅಳುತ್ತೀ? ಬಾ ನನ್ನ ಬೆನ್ನ ಮೇಲೆ ಕೂತುಕೋ.

ನಿನ್ನನ್ನು ನಗರದ ಹತ್ತಿರ ಬಿಡುತ್ತೇನೆ’ ಎಂದು ಬಾಗಿ ಅವನನ್ನೇರಿಸಿಕೊಂಡು ನಗರದ ಕಡೆಗೆ ನಡೆಯಿತು. ಈತ ದಾರಿಯನ್ನು ಗುರುತು ಮಾಡಿಕೊಳ್ಳುತ್ತ ಬಂದ. ಊರು ಹತ್ತಿರ ಬಂದಾಗ ಅವನನ್ನು ಕೆಳಗಿಳಿಸಿ ಹೋಯಿತು. ಮನುಷ್ಯ ನೇರವಾಗಿ ದಂತದ ಕೆಲಸ ಮಾಡುವವರ ಬಳಿಗೆ ಹೋಗಿ ತಾನು ಕಂಡ ಅಪರೂಪದ ಆನೆಯ ವಿಷಯ ಹೇಳಿದಾಗ ಅವರು ಅದರ ದಂತ ತಂದುಕೊಟ್ಟರೆ ಸಾವಿರ ಬಂಗಾರದ ನಾಣ್ಯಗಳನ್ನು ಕೊಡುವುದಾಗಿ ಹೇಳಿದರು.

ಈತ ಮರುದಿನ ಕರಗಸವನ್ನು ತೆಗೆದುಕೊಂಡು ಮತ್ತೆ ಬಂದ ದಾರಿಯಲ್ಲೇ ಸಾಗಿ ಆನೆಯನ್ನು ಕಂಡ. ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿದ, ‘ನನ್ನ ಬದುಕೇ ಕಷ್ಟವಾಗಿದೆ. ಹೊಟ್ಟೆಗೆ ಏನೂ ಇಲ್ಲ. ನಿನ್ನ ದಂತ ಕೊಟ್ಟರೆ ನನಗೆ ಸ್ವಲ್ಪ ಹಣ ಕೊಡುತ್ತಾರಂತೆ. ನೀನು ಸಹಾಯ ಮಾಡಬಹುದೇ?’ ಅದು ತುಂಬ ಸಾಧು ಸ್ವಭಾವದ ಆನೆ. ‘ಆಯಿತಪ್ಪ, ನಿನಗೆ ಅನುಕೂಲವಾದರೆ ಕತ್ತರಿಸಿಕೋ’ಎಂದು ಮೊಳಕಾಲೂರಿ ಕುಳಿತಿತು. ಈತ ಎರಡೂ ದಂತಗಳನ್ನು ಕೊಯ್ದುಕೊಂಡು ನಗರಕ್ಕೆ ಬಂದ.

ಆಸೆಗೆ ಮಿತಿಯುಂಟೇ? ಮರುವಾರ ಮತ್ತೆ ಕರಗಸ ಹಿಡಿದು ಬಂದ. ‘ಹೋದ ಬಾರಿ ನೀನು ಕೊಟ್ಟ ದಂತದಿಂದ ಸಾಲ ಮುಗಿಯಿತು. ಆದರೆ, ಮುಂದಿನ ಬದುಕಿಗೇನು ಮಾಡಲಿ? ನಿನ್ನ ಸುಂದರವಾದ ಕಾಲುಗಳ ಕೆಳಭಾಗವನ್ನು ಕೊಟ್ಟರೆ ನನಗೆ ಕೆಲಸ ಕೊಡುತ್ತಾರಂತೆ. ದೊರೆತೀತೇ?’ ಎಂದು ಕೇಳಿದ. ಗಜರಾಜ, ‘ಅಯ್ಯಾ ಮುಂದಿನ ಹಾಗೂ ಹಿಂದಿನ ಎರಡೂ ಕಾಲು ಕತ್ತರಿಸಿದರೆ ನನಗೆ ನಡೆಯುವುದು ಸಾಧ್ಯವಿಲ್ಲ. ಅದಕ್ಕೆ ನನ್ನ ಮುಂದಿನ ಎಡಗಾಲು ಹಾಗೂ ಹಿಂದಿನ ಬಲಗಾಲನ್ನು ಕತ್ತರಿಸಿಕೋ.

ನಾನು ಹೇಗೋ ಇರುವಷ್ಟು ದಿನ ಕುಂಟುತ್ತ ಬದುಕುತ್ತೇನೆ. ನಿನ್ನ ಬಾಳು ಚೆನ್ನಾದರೆ ಸಾಕು’ ಎಂದಿತು. ಈ ಪಾಪಿ ಮನುಷ್ಯ ನಿರ್ದಯವಾಗಿ ಎರಡೂ ಕಾಲುಗಳನ್ನು ಕತ್ತರಿಸಿಕೊಂಡು ಹೆಗಲ ಮೇಲೆ ಹೊತ್ತು ನಡೆದ. ಆನೆ ಅವನನ್ನು ಕ್ಷಮಿಸಿದರೂ ನಿಸರ್ಗ ಕ್ಷಮಿಸಬೇಕಲ್ಲ. ಮುಂದಿನ ಕ್ಷಣದಲ್ಲಿ ನೆಲದ ಲಾವಾರಸ ಹೊರಗೆ ನೆಗೆದು ಆ ದಳ್ಳುರಿಯಲ್ಲಿ ಅವನನ್ನು ಸುರಳಿಸುತ್ತಿ ಎಳೆದು ಭೂಗರ್ಭದಲ್ಲಿ ಸೇರಿಸಿಕೊಂಡು ಬಿಟ್ಟಿತು. ನೀಚ ಭೂಗರ್ಭ ಸೇರಿದ.

ಆ ಕ್ಷಣದಲ್ಲೇ ಗಜರಾಜನಿಗೆ ಮತ್ತೆ ಕಳೆದ ದಂತಗಳು ಮತ್ತು ಕಾಲುಗಳು ಮರಳಿ ಬಂದವು. ಇದೊಂದು ಜಾನಪದ ಕಥೆಯಾದರೂ ಇಂದಿಗೂ ಪ್ರಸ್ತುತವಾಗಿದೆ. ಮನುಷ್ಯ, ತನ್ನ ಹಿಂಗಲಾರದ ಆಸೆಗಳನ್ನು ತೀರಿಸಿಕೊಳ್ಳಲು, ನಿಸರ್ಗ, ಸಮಾಜ, ಅಷ್ಟೇ ಏಕೆ ತನ್ನ ಕುಲಬಾಂಧವರನ್ನೇ ಬಳಸಿಕೊಳ್ಳುತ್ತಾನೆ, ಪೀಡಿಸುತ್ತಾನೆ, ಮೋಸಗೊಳಿಸುತ್ತಾನೆ. ಎಂದೋ ಒಂದು ದಿನ ಗಜರಾಜನಿಗೆ ಮೋಸ ಮಾಡಿದ ವ್ಯಕ್ತಿಗೆ ದೊರಕಿದ ಶಿಕ್ಷೆ ನಮಗೂ ದೊರಕೀತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.