ಅಣ್ಣಾ ಹಜಾರೆ ಒಂದು ಗುಳ್ಳೆ ಎನಿಸಿಬಿಟ್ಟಿತು. ದೆಹಲಿಯ ಜಂತರ್ಮಂತರ್ ಬಳಿ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಯುವಕರು, ಪದವೀಧರರು `ನಾನು ಅಣ್ಣಾ~ ಎಂದು ಎದೆಗೆ ಪಟ್ಟಿ ಕಟ್ಟಿಕೊಂಡು, ಅಂಗಿ ಹಾಕಿಕೊಂಡು ಪ್ರತಿಭಟನೆ ಮಾಡಿದಾಗ ಅವರಿಗೆ ಬದಲಾವಣೆ ಬೇಕಾಗಿದೆ ಅನಿಸಿತ್ತು.

ನಮಗೆ ಬದಲಾವಣೆ ಬೇಕು ಎಂಬುದನ್ನು ನಾವು ಚುನಾವಣೆ ಮೂಲಕ ತೋರಿಸಬೇಕು. ನಾವು ಬದಲಾವಣೆ ಬಯಸುತ್ತಿದ್ದೇವೆ ಎಂದು ತೋರಿಸಲು `ಬೆಂಗಳೂರು~ ನಮಗೆ ಒಂದು ಅವಕಾಶ ಕೊಟ್ಟಿತ್ತು.

ನಾಸಾದಲ್ಲಿ ಕೆಲಸ ಮಾಡಿದ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಪಾಠ ಮಾಡುವ ಡಾ.ಅಶ್ವಿನ್ ಮಹೇಶ್ ಈ ಸಾರಿ ಬೆಂಗಳೂರು ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಸ್ಪರ್ಧಿಸಿದ್ದರು.

ಅವರಿಗೆ ಮತ ಹಾಕಬೇಕು ಎಂದೇ ನಾನು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದೆ. ಊರಿಗೆ ಹೋದವನು ಮತದಾನದ ದಿನ ವಾಪಸು ಬಂದೆ. ಅಶ್ವಿನ್ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ಹಾಕಿದೆ. ಎರಡು ಮತ್ತು ಮೂರನೇ ಪ್ರಾಶಸ್ತ್ಯದ ಮತಗಳನ್ನು ಇಬ್ಬರು ಹೆಣ್ಣು ಮಕ್ಕಳಿಗೆ ಹಾಕಿದೆ.

ಆದರೆ, ಮರುದಿನ ಈ ಕ್ಷೇತ್ರದಲ್ಲಿ ಕೇವಲ ಶೇ 25ರಷ್ಟು ಮತದಾನ ಆಗಿದೆ ಎಂದು ತಿಳಿದಾಗ ಅಶ್ವಿನ್ ಗೆಲ್ಲಲಿಕ್ಕಿಲ್ಲ ಎನಿಸಿತು. ಅಶ್ವಿನ್ ಅವರನ್ನು ಸೋಲಿಸಿ ನಾವು ನಮ್ಮನ್ನು ಸೋಲಿಸಿಕೊಂಡಿದ್ದೇವೆ. ಒಂದು ಉದ್ದೇಶವನ್ನು ಸೋಲಿಸಿದ್ದೇವೆ ಎನಿಸಿತು. ಇಂಥ ಚುನಾವಣೆಗಳು ಸಂದೇಶಗಳು; ಮತದಾರರು ಇಂಥ ಸಂದೇಶಗಳನ್ನು ಬಳಸಿಕೊಳ್ಳಬೇಕು.

ಈ ಚುನಾವಣೆಯಲ್ಲಿ ಉದ್ದೇಶ ಮರೆತು ಹೋಗಿತ್ತು. ವಿಧಾನಸಭೆಯ ಯಾವುದೇ ಕ್ಷೇತ್ರಕ್ಕೆ ನಡೆಯುವ ಚುನಾವಣೆಗೂ ಈ ಚುನಾವಣೆಗೂ ವ್ಯತ್ಯಾಸವೇನೂ ಇರಲಿಲ್ಲ. ಅಲ್ಲಿ ನಡೆಯುವುದೆಲ್ಲ ಇಲ್ಲಿಯೂ ನಡೆಯಿತು. ಪದವೀಧರರ ಕ್ಷೇತ್ರಕ್ಕಿಂತ ಶಿಕ್ಷಕರ ಕ್ಷೇತ್ರಗಳ ಚುನಾವಣೆ ಇನ್ನೂ ಅಧ್ವಾನವಾಗಿತ್ತು.

ತುಮಕೂರಿನ ಹೋಟೆಲ್ವೊಂದರಲ್ಲಿ `ಊಟ~ ಮಾಡಿದ 20 ಮಂದಿ ಉಪನ್ಯಾಸಕರು ಕೇವಲ ಎರಡು ಗಂಟೆಯಲ್ಲಿ 23,854 ರೂಪಾಯಿ ಬಿಲ್ ತಂದು ಅಭ್ಯರ್ಥಿಯ ಬೆಂಬಲಿಗರಿಗೆ ಕೊಟ್ಟು ಹೊರಟು ಹೋದರು. ಒಬ್ಬರಿಗೂ ಸರಿಯಾಗಿ ನಿಲ್ಲಲು ಆಗುತ್ತಿರಲಿಲ್ಲ. ಮಾತನಾಡಲೂ ಆಗುತ್ತಿರಲಿಲ್ಲ! ಬಿಲ್ ನೋಡಿ ಗಾಬರಿಯಾದ ಅಭ್ಯರ್ಥಿ ಬೆಂಬಲಿಗರು ಹೋಟೆಲ್ ಮ್ಯಾನೇಜರ್ಗೆ, `ಏನಯ್ಯ ಇಷ್ಟು ಬಿಲ್ ಹಾಕಿದ್ದೀ. ಅವರು ಕುಡಿದಿದ್ದಾರೆ. ನಾವೇನು ಕುಡಿದಿಲ್ಲ~ ಎಂದು ಜಬರಿಸಿದರು.

`ಇಲ್ಲ ಸರ್, ಅವರು ಇಲ್ಲಿ ಕುಡಿದರು ಮತ್ತು ತಿಂದರು ಮಾತ್ರವಲ್ಲ ಎಲ್ಲರೂ ಒಂದೊಂದು ಬಾಟಲ್ ಮತ್ತು ಬೇಕಾದ ಊಟ ಕಟ್ಟಿಸಿಕೊಂಡು ಹೋಗಿದ್ದಾರೆ. ಬಿಲ್ ಸರಿಯಾಗಿದೆ~ ಎಂದ.

ಹೋಟೆಲ್ನಲ್ಲಿ ಅವರು ಇಂದೇ ಜೀವನದ ಕೊನೆ ಎನ್ನುವಂತೆ ತಿಂದಿದ್ದರು. ಕುಡಿದಿದ್ದರು. ಎಲ್ಲೆಲ್ಲಿ ಶಿಕ್ಷಕರಿಗೆ ತುಂಡು-ಗುಂಡಿನ ವ್ಯವಸ್ಥೆ ಆಗಿತ್ತೋ ಅಲ್ಲೆಲ್ಲ ಅವರು ಹೀಗೆಯೇ ಕುಡಿದರು, ತಿಂದರು. ಅವರೆಲ್ಲ ಪದವೀಧರರು ಮಾತ್ರವಲ್ಲ ಶಿಕ್ಷಕರು ಕೂಡ ಎಂಬುದನ್ನು ಮರೆಯುವುದು ಬೇಡ.

ಆರು ವರ್ಷಕ್ಕೆ ಒಮ್ಮೆ ಬರುವ ಚುನಾವಣೆಯಲ್ಲಿ ಹೀಗೆ ತಿಂದು, ಕುಡಿದು ಮತ ಹಾಕಿದರೆ ದೇಶದ ಗತಿ ಏನಾಗುತ್ತದೆ ಎಂದು ತಮ್ಮ ವಿದ್ಯಾರ್ಥಿಗಳಿಗೆ ಹೇಳುವ ಹಕ್ಕು ಹೊರಟು ಹೋಗುತ್ತದೆ ಎಂಬುದೂ ಅವರಿಗೆ ಗೊತ್ತಿರಲಿಲ್ಲ ಅಥವಾ ಮರೆತು ಹೋಗಿತ್ತು. ನಿಂತ ಹುರಿಯಾಳುಗಳಿಗೆ ಗೊತ್ತಿತ್ತು : ಹೀಗೆ ಮಾಡಿದರೆ ತಮಗೆ ಮತ ಬೀಳುತ್ತವೆ ಎಂದು.

ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಲ್ಲಿ ಒಬ್ಬರು ಎಂಟು ಕೋಟಿ ರೂಪಾಯಿ ಖರ್ಚು ಮಾಡಿದರು. ಅವರ ಎದುರು ನಿಂತವರು ನಾಲ್ಕು ಕೋಟಿ ರೂಪಾಯಿ ಖರ್ಚು ಮಾಡಿದರು.

ಇಬ್ಬರೂ ಅಭ್ಯರ್ಥಿಗಳು ಪೈಪೋಟಿಗೆ ಬಿದ್ದು ಮತದಾರರಿಗೆ ಆಮಿಷಗಳನ್ನು ಕೊಟ್ಟರು. ಅವರು ಗಂಡಸರಿಗೆ ಬೆಳ್ಳಿಯ ಗಣಪತಿ ಮೂರ್ತಿ ಕೊಟ್ಟರು. ಹೆಂಗಸರಿಗೆ ಲಕ್ಷ್ಮೀ ಮೂರ್ತಿ ಕೊಟ್ಟರು.

ಸೀರೆ ಕೊಟ್ಟರು, ಕುಪ್ಪಸ ಕೊಟ್ಟರು. ಒಂದು ಶಾಲೆಯಲ್ಲಿ ನೂರು ನೂರೈವತ್ತು ಮತಗಳು ಇವೆ ಎಂದರೆ ಆಡಳಿತ ಮಂಡಳಿಯವರೇ ಅಭ್ಯರ್ಥಿಗಳನ್ನು ಕರೆದು ನಮಗೆ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಒಂದು ಸಭಾಂಗಣ ಕಟ್ಟಿಸಿಕೊಡಿ ನಿಮಗೆ ಮತ ಹಾಕಿಸುತ್ತೇವೆ ಎಂದರು. ಒಬ್ಬ ಅಭ್ಯರ್ಥಿ ಮೊಬೈಲ್ ಕೊಟ್ಟರು. ಇನ್ನೊಬ್ಬರು ಸಾವಿರ, ಎರಡು ಸಾವಿರ ರೂಪಾಯಿಗಳ `ಕರೆನ್ಸಿ~ ಹಾಕಿಸಿದರು. ಯಾರಿಗೂ ಮಾನ ಮರ್ಯಾದೆ ಇರಲಿಲ್ಲ.

ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಇದೆಲ್ಲ ನಡೆಯುತ್ತಿದ್ದಾಗಲೇ ಅತ್ತ ವಿಧಾನಸಭೆಯಿಂದ ಪರಿಷತ್ತಿನ ಹನ್ನೊಂದು ಸೀಟುಗಳಿಗೆ ನಡೆದ ಚುನಾವಣೆಯಲ್ಲಿ ಇಬ್ಬರು ಉದ್ಯಮಿಗಳು ಅತಿ ಹೆಚ್ಚು ಮತ ಪಡೆದು ಗೆದ್ದರು. ಅವರಿಗೆ ಪಕ್ಷಭೇದ ಮರೆತು ಅಡ್ಡ ಮತಗಳು ಚಲಾವಣೆಯಾದುವು.

ಅವರ ಮೇಲಿನ ಪ್ರೀತಿಯಿಂದ ಶಾಸಕರು ಮತ ಹಾಕಿದರು ಎಂದು ಯಾರಾದರೂ ಹೇಳಿದರೆ ನಮಗೆ ನಾವೇ ಮೋಸ ಮಾಡಿಕೊಂಡಂತೆ. ಅವರಲ್ಲಿ ಪ್ರೀತಿ-ಗೀತಿ ಏನಿರಲಿಲ್ಲ! `ಶಾಸಕರು ಮಾರಾಟವಾಗಿದ್ದಾರೆ.

ಹೀಗಾದರೆ ಪ್ರಜಾಪ್ರಭುತ್ವಕ್ಕೆ ಕಷ್ಟ~ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ಬೇರೆ ಪಕ್ಷಗಳ ಟಿಕೆಟ್ ಮೇಲೆ ಗೆದ್ದ ಶಾಸಕರ ರಾಜೀನಾಮೆ ಕೊಡಿಸಿ ಬಿಜೆಪಿ ಟಿಕೆಟ್ ಕೊಟ್ಟು ಗೆಲ್ಲಿಸಿದಾಗ ಶಾಸಕರು ಮಾರಾಟ ಆಗಿರಲಿಲ್ಲವೇ? ಅವರೆಲ್ಲ ಸಿದ್ಧಾಂತವನ್ನು ನಂಬಿಕೊಂಡು ತಮ್ಮ ಪಕ್ಷವನ್ನು ಬಿಟ್ಟಿದ್ದರೇ? ಯಾರೂ ಯಾರಿಗೂ ಬುದ್ಧಿ ಹೇಳುವ ಸ್ಥಿತಿಯಲ್ಲಿ ಇಲ್ಲ.

ಎಲ್ಲರೂ ಜಾರುವ ದಾರಿಗೆ ಬಿದ್ದಿದ್ದಾರೆ. ರಾಜಕಾರಣಿಗಳು ತಾವು ಮಾತ್ರ ಜಾರಿದರೆ ಸಾಲದು ಎಂದು ಮತದಾರರನ್ನೂ ಎಳೆದುಕೊಂಡು ಹೊರಟಿದ್ದಾರೆ. ನುಣುಪಾದ ಜಾರುವ ದಾರಿಯಲ್ಲಿ ಮೇಲೆ ಹತ್ತಿ ಬರುವುದು ಕಷ್ಟ.

ಉದ್ದೇಶ ಮರೆತು ಹೋದರೆ ಆಗುವುದು ಹೀಗೆಯೇ. ವಿಧಾನಪರಿಷತ್ತು ಏಕೆ ರಚನೆಯಾಯಿತು. ಅಲ್ಲಿ ಯಾರು ಸದಸ್ಯರಾಗಿರಬೇಕು ಎಂಬುದು ರಾಜಕೀಯ ಪಕ್ಷಗಳಿಗೆ ಮರೆತು ಹೋಗಿದೆ.

ಮತದಾರರಿಗೆ ಅದು ಗೊತ್ತೇ ಇರುವಂತೆ ಕಾಣುವುದಿಲ್ಲ. ವಿಧಾನ ಪರಿಷತ್ತಿಗೆ ಮೇಲ್ಮನೆ ಎಂಬ ಹೆಸರೂ ಇದೆ. ಸಂವಿಧಾನದಲ್ಲಿ ಮೇಲ್ಮನೆ ರಚನೆಯ ಹಕ್ಕನ್ನು ರಾಜ್ಯ ಸರ್ಕಾರಗಳಿಗೇ ಕೊಡಲಾಗಿದೆ. ಬೇಕಾದರೆ ಇಟ್ಟುಕೊಳ್ಳಬಹುದು. ಬೇಡವಾದರೆ ಬಿಡಬಹುದು. ಎಲ್ಲ ರಾಜ್ಯಗಳಲ್ಲಿ ಮೇಲ್ಮನೆಗಳು ಇಲ್ಲ.

ಕರ್ನಾಟಕದ ಕೆಳಮನೆಯಲ್ಲಿ ಅಥವಾ ವಿಧಾನಸಭೆಯಲ್ಲಿ 225 ಜನ ಸದಸ್ಯರು ಇದ್ದರೆ ವಿಧಾನ ಪರಿಷತ್ತು ಅಥವಾ ಮೇಲ್ಮನೆಯಲ್ಲಿ 75 ಮಂದಿ ಸದಸ್ಯರು ಇದ್ದಾರೆ. ಇದು ಆಯಾ ರಾಜ್ಯಗಳ ಜನಸಂಖ್ಯೆ, ಕ್ಷೇತ್ರಗಳ ಮೇಲೆ ಅವಲಂಬನೆ ಆಗಿರುತ್ತದೆ.

ಮೇಲ್ಮನೆ ಎಂಬುದು ಒಂದು ಪುನರ್ ಪರಿಶೀಲನೆಯ ಸದನ. ಕೆಳಮನೆಗೆ ಹೊಣೆಗಳು ಬಹಳ. ಆದರೆ, ಎರಡೂ ಮನೆಗಳ ಮುಖ್ಯ ಕೆಲಸ ಶಾಸನ ರಚನೆ. ರಾಜಕೀಯ ಮೇಲಾಟದ ನಡುವೆ ಶಾಸನ ರಚನೆಗೆ ಕೆಳಮನೆಯಲ್ಲಿ ವೇಳೆ ಸಿಗುವುದು ಕಡಿಮೆ.

ಆದರೂ ಅದು ರಚಿಸುವ ಶಾಸನಗಳು ಮೇಲ್ಮನೆಗೂ ಬರುತ್ತವೆ. ಮೇಲ್ಮನೆಯಲ್ಲಿ ಹಿರಿಯರು, ಅನುಭವಿಗಳು, ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಇರಬೇಕು ಎಂಬುದು ಅಪೇಕ್ಷಣೀಯ.

ಅವರು ಕೆಳಮನೆ ರಚಿಸಿದ ಶಾಸನಗಳ ಮೇಲೆ ಕ್ಷ ಕಿರಣ ಬೀರಿ ತಮ್ಮ ಅನುಭವದ ಮೂಸೆಯಲ್ಲಿ ಒರೆಗೆ ಹಚ್ಚಿ ಅದಕ್ಕೆ ತಿದ್ದುಪಡಿ ಸೂಚಿಸಿ ಮತ್ತೆ ಕೆಳಮನೆಗೆ ಕಳುಹಿಸಿ ಒಂದು ಸೂಕ್ತ, ಉತ್ತಮ ಶಾಸನ ರಚನೆಯಾಗುವಂತೆ ನೋಡಿಕೊಳ್ಳಬೇಕು. ಇದು ಒಂದು ರೀತಿಯ ಪ್ರತಿಫಲನ ಕೆಲಸ.

ಉದ್ದೇಶ ಮರೆತು ಹೋದರೆ ಹೀಗೆಯೇ ಆಗುತ್ತದೆ. ಈಗ ಮೇಲ್ಮನೆಯಲ್ಲಿ ಇರಬೇಕಾದವರು ಇದ್ದಾರೆಯೇ? ಅದು ಒಂದು ಪುನರ್ವಸತಿ ಕೇಂದ್ರ ಆಗಿಲ್ಲವೇ? ನೇರವಾಗಿ ಚುನಾವಣೆ ಗೆಲ್ಲಲಾಗದವರು ಹಿಂಬಾಗಿಲ ಮೂಲಕ ಆ ಮನೆಯಲ್ಲಿ ನೆರಳು ಕಂಡುಕೊಳ್ಳುತ್ತಿಲ್ಲವೇ?

ಕಲೆ, ಸಾಹಿತ್ಯ, ಪತ್ರಿಕೋದ್ಯಮ, ಸಂಗೀತ, ಶಿಕ್ಷಣ, ಕ್ರೀಡೆ ಇತ್ಯಾದಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನಾಮಕರಣ ವೇಳೆಯಲ್ಲಿ ಅವಕಾಶ ಸಿಗುತ್ತಿದೆಯೇ? ಏನಾದರೂ ನೆಪವೊಡ್ಡಿ ಆ ಕ್ಷೇತ್ರಗಳನ್ನೂ ರಾಜಕೀಯ ಮಾಡುವವರೇ ಕಬಳಿಸುತ್ತಿಲ್ಲವೇ? ಸದನದ ಉದ್ದೇಶ, ಗುರಿ ಎರಡೂ ಮರೆತು ಹೋಗಿವೆ. ಮೇಲ್ಮನೆಗೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಅಧಿಕಾರವಿಲ್ಲ.

ಹಾಗಿದ್ದರೆ ನಿಲುವಳಿ ಸೂಚನೆ ಮಂಡಿಸಲು ಏಕೆ ಆತುರ? ನಿಲುವಳಿ ಸೂಚನೆ ಅಂಗೀಕಾರವಾಗಿ ಅದರ ಮೇಲೆ ಮತದಾನವಾದರೆ ಸರ್ಕಾರಕ್ಕೆ ಇಕ್ಕಟ್ಟು. ಇದು ಗೊತ್ತಿದ್ದೂ ಅನೇಕ ಸಾರಿ ಕೆಳಮನೆಯಲ್ಲಿ ಒಂದು ಗಂಟೆ ಮುಂಚೆ ಮಂಡನೆಯಾದ ನಿಲುವಳಿ ಸೂಚನೆಯೇ ಮೇಲ್ಮನೆಯಲ್ಲಿಯೂ ಮಂಡನೆಯಾಗುತ್ತದೆ.

ಹಾಗಾದರೆ ಕೆಳಮನೆ ಮತ್ತು ಮೇಲ್ಮನೆಯ ಕಲಾಪದಲ್ಲಿ ಏನು ವ್ಯತ್ಯಾಸ ಇದ್ದಂತೆ ಆಯಿತು? ಕೆಳಮನೆಯ ಪಡಿಯಚ್ಚಿನ ಹಾಗೆ ಮೇಲ್ಮನೆಯೂ ಕೆಲಸ ಮಾಡುವುದಾದರೆ ಮೇಲ್ಮನೆಯ ರಚನೆಯ ಉದ್ದೇಶವಾದರೂ ಏನು? ವ್ಯತ್ಯಾಸ ಮರೆತು ಹೋದರೆ ಹೀಗೆಯೇ ಆಗುತ್ತದೆ.

ಕೆಳಮನೆಗೆ ನಡೆಯುವ ಚುನಾವಣೆಗೂ ಮೇಲ್ಮನೆಗೆ ನಡೆಯುವ ಚುನಾವಣೆಗೂ ಏನೂ ವ್ಯತ್ಯಾಸ ಉಳಿದಿಲ್ಲ. ಕೆಳಮನೆಗೆ ನಡೆಯುವ ಚುನಾವಣೆ ವೆಚ್ಚಕ್ಕೆ ಕಡಿವಾಣ, ಮಿತಿಯಾದರೂ ಒಂದು ಇದೆ.

ಅದು ಪಾಲನೆಯಾಗುತ್ತದೆಯೇ ಇಲ್ಲವೇ ಎಂಬುದು ಬೇರೆ ಮಾತು. ಆದರೆ, ಮೇಲ್ಮನೆ ಚುನಾವಣೆ ವೆಚ್ಚಕ್ಕೆ ಮಿತಿ ಎಂಬುದೇ ಇಲ್ಲ. ಇದ್ದಿದ್ದರೆ ನಾಲ್ಕು ಕೋಟಿ, ಎಂಟು ಕೋಟಿ ಖರ್ಚು ಮಾಡಲು ಹೇಗೆ ಸಾಧ್ಯವಾಗುತ್ತಿತ್ತು?

ನಮ್ಮ ಪ್ರತಿನಿಧಿಗಳು ತಾವು ಮಾತ್ರ ಹಾಳಾಗುತ್ತಿಲ್ಲ. ನಮ್ಮನ್ನೂ ಹಾಳು ಮಾಡುತ್ತಿದ್ದಾರೆ. ಕೆಳಮನೆಗೆ ಆಯ್ಕೆಯಾಗುವವರು ಅಮಾಯಕ ಹಳ್ಳಿಯ ಜನರಿಗೆ ಆಮಿಷ ಒಡ್ಡುತ್ತಿದ್ದರು. ಮೇಲ್ಮನೆಗೆ ಆಯ್ಕೆಯಾಗುವ ಪ್ರತಿನಿಧಿಗಳು ಪದವೀಧರರನ್ನು, ಶಿಕ್ಷಕರನ್ನೂ ಹಾಳು ಮಾಡುತ್ತಿದ್ದಾರೆ.

ಪರಿಷತ್ತಿನಲ್ಲಿ ಬರೀ ಶಿಕ್ಷಕರಿಗೆ ಮಾತ್ರ ಏಕೆ ಪ್ರಾತಿನಿಧ್ಯ ಇರಬೇಕು? ಈ `ಮತಕ್ಷೇತ್ರ~ವನ್ನು ರೂಪಿಸಿದಾಗ ಸರ್ಕಾರ ಅತಿಹೆಚ್ಚು ಸಂಖ್ಯೆಯಲ್ಲಿ ನೇಮಕ ಮಾಡುವ ಒಂದು ವಲಯ ಎಂದರೆ ಅದು ಶಿಕ್ಷಣ ವಲಯ ಮಾತ್ರವಾಗಿತ್ತು ಮತ್ತು ಅದರಲ್ಲಿ ಶಿಕ್ಷಕರೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಿದ್ದರು.

ಅವರಿಗೆ ಒಂದು ಪ್ರಾತಿನಿಧ್ಯ ಇರಲಿ ಎಂದು ಈ ಮತಕ್ಷೇತ್ರವನ್ನು ಆಗ ರಚಿಸಲಾಗಿತ್ತು. ಆದರೆ, ಈಗ ಎಂಜಿನಿಯರ್ಗಳು, ವಕೀಲರು, ವೈದ್ಯರು, ಚಾರ್ಟರ್ಡ್ ಅಕೌಂಟೆಂಟ್ಗಳು ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಅವರಿಗೆ ಮೇಲ್ಮನೆಯಲ್ಲಿ ಪ್ರಾತಿನಿಧ್ಯ ಬೇಡವೇ? ಶಿಕ್ಷಕರ ಪ್ರತಿನಿಧಿಗಳಾಗಿ ಆಯ್ಕೆಯಾಗಿ ಹೋದವರು ಶಿಕ್ಷಕರ ವೇತನ, ಬಡ್ತಿ ಮುಂತಾದ ಹಣಕಾಸಿನ ಲಾಭದ ವಿಚಾರಗಳನ್ನು ಬಿಟ್ಟು ಶಿಕ್ಷಣದ ಸುಧಾರಣೆ ಕುರಿತು ಎಷ್ಟು ಸಾರಿ ಮಾತನಾಡಿದ್ದಾರೆ? ಶಿಕ್ಷಕರ ವರ್ಗಾವಣೆಗೆ ನೀತಿ ರೂಪಿಸುವುದು ಎಷ್ಟು ಕಷ್ಟ ಎಂದು ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿಯವರನ್ನು ಕೇಳಿ ನೋಡಿ.

ಅದನ್ನು ಮಾಡಿ ಅವರು ಹೆಚ್ಚೂ ಕಡಿಮೆ ಕಳೆದ ಚುನಾವಣೆಯಲ್ಲಿ ಸೋತೇ ಬಿಟ್ಟಿದ್ದರು! ಈ ಸದನದ ಅತ್ಯಂತ ಹಿರಿಯ ಸದಸ್ಯರಾದ ಅವರು 1980ರಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದಾಗ ಎಷ್ಟು ಖರ್ಚು ಮಾಡಿದ್ದರು, ಎರಡು ವರ್ಷಗಳ ಹಿಂದೆ ಸ್ಪರ್ಧಿಸಿದ್ದಾಗ ಎಷ್ಟು ಖರ್ಚು ಮಾಡಿದ್ದರು ಎಂದೂ ಕೇಳಿ ನೋಡಿ.

ಅವರು 80ರಲ್ಲಿ ಸ್ಪರ್ಧಿಸಿದ್ದಾಗ ಕೇವಲ ನಾಲ್ಕು ಸಾವಿರ ರೂಪಾಯಿ ಮಾತ್ರ ಖರ್ಚು ಮಾಡಿದ್ದರು. ಅದನ್ನೂ ಅವರ ಗೆಳೆಯರೇ ವಹಿಸಿಕೊಂಡಿದ್ದರು. ಎರಡು ವರ್ಷಗಳ ಹಿಂದೆ ಸ್ಪರ್ಧಿಸಿದ್ದಾಗ ಎಷ್ಟು ಖರ್ಚಾಯಿತು? ಹೊರಟ್ಟಿಯವರನ್ನು ಕೇಳಿದೆ. ಹೇಳಿದರು. ಆದರೆ, ಬರೆಯಬೇಡಿ ಎಂದರು!

ವಿಧಾನ ಪರಿಷತ್ತಿನ ಸಭಾಪತಿಯಾಗಿ ಕೆಲಸ ಮಾಡಿದ ಪ್ರೊ.ಬಿ.ಕೆ.ಚಂದ್ರಶೇಖರ್ ಅವರಿಗೂ ವಿಧಾನಸಭೆಯಿಂದ ಪರಿಷತ್ತಿಗೆ ನಡೆದ ಚುನಾವಣೆ ವೈಖರಿಯಿಂದ ಮೇಲ್ಮನೆಯ ಅಪಮೌಲ್ಯವಾಗಿದೆ ಎನಿಸಿದೆ.

ಉದ್ದೇಶ ಮರೆತ ಯಾವ ಸಂಸ್ಥೆಯೂ ಅಸ್ತಿತ್ವದಲ್ಲಿ ಇರಬಾರದು. ಈಗ ವಿಧಾನ ಪರಿಷತ್ತು ಬರೀ ಚುನಾವಣೆ ವೈಖರಿಯಿಂದ ಮಾತ್ರವಲ್ಲ, ಅದರ ಕಾರ್ಯವೈಖರಿ ದೃಷ್ಟಿಯಿಂದಲೂ ಒಂದು ಅಸಂಗತ ಸಂಸ್ಥೆ ಎನಿಸಿದೆ. ಅದನ್ನು ಇಟ್ಟುಕೊಂಡು ನಾವು ಸಾಧಿಸುವಂಥ ಘನಕಾರ್ಯ ಏನಿದೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.