ಗುರುವಾರ , ಮೇ 13, 2021
38 °C

ಎನ್ರಿಕೋ ಕಾರುಜೋ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಎಷ್ಟೋ ಬಾರಿ ಕೆಲವು ತರುಣರು ಹೇಳುವುದನ್ನು ಕೇಳಿದ್ದೇನೆ, `ನಾವು ಶ್ರೀಮಂತರ ಮನೆಯಲ್ಲಿ ಹುಟ್ಟಬೇಕಿತ್ತು, ನಮಗೆ ಅವಕಾಶಗಳೇ ದೊರಕುವುದಿಲ್ಲ. ನಮ್ಮಂಥವರನ್ನು ಯಾರು ಕೇಳುತ್ತಾರೆ? ಎಲ್ಲ ಅವಕಾಶಗಳು ದೊಡ್ಡವರಿಗೆ ಮಾತ್ರ' ಎಂಬುದನ್ನು. ಈ ಮಾತುಗಳು ಎಳ್ಳಷ್ಟೂ ಸತ್ಯವಲ್ಲ. ನಿಜವಾಗಿಯೂ ಏನನ್ನಾದರೂ ಸಾಧಿಸಲೇಬೇಕೆಂಬ ಹಟ ಇದ್ದರೆ ಯಾವ ಸಮಸ್ಯೆಯೂ ಅಡ್ಡಬರುವುದಿಲ್ಲ. ಅಂಥ ಒಂದು ಬಲವಾದ ಉದಾಹರಣೆ ಎನ್ರಿಕೋ ಕಾರುಜೋ ಎಂಬ ಹಾಡುಗಾರನದು.ಇಟಲಿಯ ನೇಪಲ್ಸ್ ನಗರದಲ್ಲಿ 1873 ರ ಫೆಬ್ರುವರಿ 25 ರಂದು ಬಡ ಮನೆತನದಲ್ಲಿ ಎನ್ರಿಕೋ ಕಾರುಜೋ ಹುಟ್ಟಿದ. ಹಣದ ಬಡತನ; ಆದರೆ ಪರಿವಾರದ ಶ್ರೀಮಂತಿಕೆ! ಈತನ ತಾಯಿ ಹಡೆದದ್ದು ಇಪ್ಪತ್ತೊಂದು ಮಕ್ಕಳನ್ನು. ಅದರಲ್ಲಿ ಇಪ್ಪತ್ತು ಗಂಡು, ಒಂದು ಹೆಣ್ಣು. ಆದರೆ ಅದರಲ್ಲಿ ಹದಿನೆಂಟು ಮಕ್ಕಳು ತಮ್ಮ ಹತ್ತನೇ ವಯಸ್ಸನ್ನು ಮುಟ್ಟುವ ಮೊದಲೇ ಸಾವನ್ನಪ್ಪಿದವು. ಎನ್ರಿಕೋನ ಅಪ್ಪ ಒಂದು ಕುಲುಮೆಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಮಗ ಎನ್ರಿಕೋ ಕೂಡ ತನ್ನ ಹಾಗೆಯೇ ಮೆಕ್ಯಾನಿಕ್ ಆಗಿ ತನಗೆ ಸಹಾಯ ಮಾಡಲಿ ಎಂದು ತರಬೇತಿ ಕೊಡಿಸಿದ. ನಂತರ ಎನ್ರಿಕೋ ಕೆಲ ದಿನ ತಂದೆಯ ಜೊತೆಗೆ ಕಾರ್ಖಾನೆಯಲ್ಲಿ ಕೆಲಸವನ್ನೂ ಮಾಡಿದ. ಅವನ ತಾಯಿ ಮಾತ್ರ, ಮಗ ಶಾಲೆಗೆ ಹೋಗಲಿ ಎಂದು ಹತ್ತಿರದ ಚರ್ಚಿನ ಪಾದ್ರಿಯೊಬ್ಬರು ನಡೆಸುತ್ತಿದ್ದ ಶಾಲೆಗೆ ಕಳುಹಿಸಿದಳು.ಈ ಹುಡುಗ ಹಗಲಿನಲ್ಲಿ ಕೆಲಸ ಮಾಡುತ್ತ, ರಾತ್ರಿ ಮತ್ತು ಭಾನುವಾರ ಶಾಲೆಗೆ ಹೋಗಿ ಓದಿದ. ಅವನಿಗೆ ಹಾಡುವ ಆಸೆ. ತಾಯಿಗೂ ಮಗ ಹಾಡಬಲ್ಲ ಎನ್ನಿಸಿ ತಾನೇ ಸ್ವಲ್ಪ ಕಲಿಸಿದಳು. ನಂತರ ತರಬೇತಿಗಾಗಿ ಸಂಗೀತದ ಶಿಕ್ಷಕರ ಹತ್ತಿರ ಕಳುಹಿಸಿದಳು. ಆ ಶಿಕ್ಷಕ ಈತನ ಹಾಡುಗಾರಿಕೆಯನ್ನು ಕೇಳಿ, `ನಿನ್ನ ಧ್ವನಿ ಕಿಟಕಿಯ ಸಂದಿಯಲ್ಲಿ ತೂರಿಬರುವ ಗಾಳಿಯ ಶಿಳ್ಳೆಯಂತಿದೆ. ನೀನು ಹಾಡುಗಾರನೇ? ನಿನ್ನಂತಹ ಕೆಟ್ಟ ಧ್ವನಿಯನ್ನು ನಾನು ಇದುವರೆಗೂ ಕೇಳಿಲ್ಲ' ಎಂದನಂತೆ. ಸಂಗೀತ ಕಲಿಯಬೇಕೆಂದವನಿಗೆ ಇದಕ್ಕಿಂತ ಕೆಟ್ಟ ಪ್ರಾರಂಭ ಬೇಕೇ? ಎನ್ರಿಕೋ ಮನೆಗೆ ಬಂದು ತಾಯಿಯ ಮುಂದೆ ಅತ್ತ. ಆಕೆ ಹೇಳಿದಳು, `ಶಿಕ್ಷಕರು ಹಾಗೇಕೆ ಹೇಳಿದರೋ ತಿಳಿಯದು. ನನ್ನ ಪ್ರಕಾರ ನಿನ್ನ ಕಂಠ ತುಂಬ ಚೆನ್ನಾಗಿದೆ. ನೀನೇ ಹಾಡು'.

ಹುಡುಗ ಧೈರ್ಯ ತಂದುಕೊಂಡ. ಇಟಲಿಯ ಜಾನಪದ ಹಾಡುಗಳನ್ನು ಹಾಡತೊಡಗಿದ. ಯಾರು ಕೇಳಿಯಾರು ಇವನ ಹಾಡುಗಳನ್ನು? ಈತನೇ ನೇಪಲ್ಸ್‌ನ ರಸ್ತೆ ಪಕ್ಕ ಒಂದಿಷ್ಟು ಜನರನ್ನು ಕೂಡಿಸಿಕೊಂಡು ನಿಯಾಪೊಲಿಟನ್ ಜಾನಪದ ಗೀತೆಗಳನ್ನು ಹಾಡತೊಡಗಿದ. ಒಂದು ವಿಶೇಷವಾದ ಚೀರುದನಿಯಲ್ಲಿ ಹಾಡುತ್ತಿದ್ದ ಇವನ ಹಾಡುಗಳು ಪ್ರಸಿದ್ಧವಾದವು. ನಂತರ ಜನ ದುಡ್ಡು ಕೊಟ್ಟು ಕೇಳತೊಡಗಿದರು.ನಂತರ ಆತ ಸಂಗೀತ ಶಿಕ್ಷಕರ ಬಳಿಗೆ ಹೋಗಿ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತ. ಆಗ ಅವನಿಗೆ ಕಲಿಸಲು ತಾಮುಂದು, ನಾಮುಂದು ಎಂದು ಸಂಗೀತದ ಗುರುಗಳು ಬಂದರಂತೆ. ಮುಂದೆ ಎನ್ರಿಕೋ ಕಾರುಜೋ ಏರಿದ ಮಟ್ಟವನ್ನು ಊಹಿಸುವುದು ಕಷ್ಟ. ಆತ ಇಂಗ್ಲೆಂಡಿನಲ್ಲಿ, ಅಮೇರಿಕೆಯಲ್ಲಿ ತರುಣರ ಆರಾಧ್ಯ ದೈವವಾದ, ಸಂಗೀತದ ಸೀಮಾ ಪುರುಷ ಎನ್ನಿಸಿಕೊಂಡ. ಗ್ರಾಮಾಪೋನ್‌ಗಳಲ್ಲಿ ಧ್ವನಿಮುದ್ರಿತವಾದ ಮೊಟ್ಟಮೊದಲ ಹಾಡುಗಾರ ಎಂಬ ಖ್ಯಾತಿ ಆತನಿಗೆ ಬಂತು. ಅವನ ಕಾರ್ಯಕ್ರಮಗಳಿಗೆ ಆರು ತಿಂಗಳುಗಳ ಕಾಲ ಮೊದಲೇ ಟಿಕೆಟ್ಟುಗಳು ಮಾರಾಟವಾಗಿ ಹೋಗುತ್ತಿದ್ದವಂತೆ. ಅವನ ಚಿತ್ರವಿರುವ ಬಂಗಾರದ ನಾಣ್ಯಗಳನ್ನು ಮಾಡಿ ಹಂಚುತ್ತಿದ್ದರಂತೆ. ಅಂತೂ ಬದುಕಿದ್ದಾಗಲೇ ದಂತಕಥೆಯಾಗಿ ಹೋದವನು ಎನ್ರಿಕೋ ಕಾರುಜೋ.ಬಾಲ್ಯದಲ್ಲಿ ಅವನಿಗೆ ಯಾವ ಅವಕಾಶವಿತ್ತು? ಏನು ಅನುಕೂಲವಿತ್ತು? ಬಹುಶಃ ಏನೂ ಇಲ್ಲ ಎಂದು ಕೊರಗುವ ನಮ್ಮ ತರುಣ ಮಿತ್ರರಿಗಿಂತ ಅವನ ಪರಿಸ್ಥಿತಿ ಕೆಟ್ಟದಾಗಿತ್ತು. ಆದರೆ ಅವನ ಹೃದಯದಲ್ಲಿ ಸಾಧನೆಯ ಛಲವಿತ್ತು, ಸಾಧಿಸದೇ ಬಿಡಲಾರೆ ಎಂಬ ತುಡಿತವಿತ್ತು, ಅದನ್ನು ಸಾಕಾರ ಮಾಡಿಕೊಳ್ಳುವ ಕಾರ್ಯದಲ್ಲಿ ಸತತ ಪ್ರಯತ್ನದ ಒತ್ತು ಇತ್ತು. ಇವಿಷ್ಟಿದ್ದರೆ ಸಾಕು ಏನನ್ನಾದರೂ ಪಡೆಯಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.