ಗುರುವಾರ , ಜೂಲೈ 2, 2020
27 °C

ಕಡಿಮೆ ಬೆಲೆಯ ಲ್ಯಾಪ್‌ಟಾಪ್‌ಗಳು

ಯು.ಬಿ. ಪವನಜ Updated:

ಅಕ್ಷರ ಗಾತ್ರ : | |

ಕಡಿಮೆ ಬೆಲೆಯ ಲ್ಯಾಪ್‌ಟಾಪ್‌ಗಳು

ಇತ್ತೀಚೆಗೆ ಡೆಸ್ಕ್‌ಟಾಪ್ ಗಣಕಗಳ ಜಾಗದಲ್ಲಿ ಲ್ಯಾಪ್‌ಟಾಪ್ ಮತ್ತು 2-ಇನ್-1ಗಳು ಬಳಕೆಯಾಗುತ್ತಿವೆ. ಕಡಿಮೆ ಶಕ್ತಿ ಸಾಕು ಎನ್ನುವವರಿಗಾಗಿ ಸ್ವಲ್ಪ ಕಾಲ ನೆಟ್‌ಬುಕ್ ಎಂಬ ಲ್ಯಾಪ್‌ಟಾಪ್ ಮಾದರಿಯ ಆದರೆ ಚಿಕ್ಕದಾದ ಸಾಧನಗಳು ಮಾರುಕಟ್ಟೆಯಲ್ಲಿ ಇದ್ದವು. ನಂತರ ಅವುಗಳ ಸ್ಥಾನವನ್ನು 2-ಇನ್-1 ಗಳು ಆಕ್ರಮಿಸಿದವು. 2-ಇನ್-1ಗಳಲ್ಲಿ ಸ್ಪರ್ಶಪರದೆ ಇರುತ್ತದೆ. ಯಾಕೆಂದರೆ ಅದನ್ನು ಟ್ಯಾಬ್ಲೆಟ್ ಆಗಿಯೂ ಬಳಸಬಹುದು. ಈ ಸ್ಪರ್ಶಪರದೆಯಿಂದಾಗಿ ಅವುಗಳ ಬೆಲೆ ಜಾಸ್ತಿಯಾಗಿವೆ. ನಮಗೆ ಕಡಿಮೆ ಶಕ್ತಿಯ ಲ್ಯಾಪ್‌ಟಾಪ್ ಮಾದರಿಯ ಸಾಧನವೇ ಸಾಕು, ಸ್ಪರ್ಶಪರದೆ ಬೇಕಾಗಿಲ್ಲ ಎನ್ನುವವರಿಗಾಗಿ ಅಂತಹ ಸಾಧನಗಳೂ ಬಂದಿವೆ. ಅಂದರೆ ಕಡಿಮೆ ಶಕ್ತಿಯ 2-ಇನ್-1 ಅಲ್ಲದ ಲ್ಯಾಪ್‌ಟಾಪ್ ಮಾದರಿಯ ಗಣಕಗಳಲ್ಲಿ ಮತ್ತೆ ಹಲವು ನಮೂನೆಗಳಿವೆ. ಈ ವಾರ ಅಂತಹ ಮೂರು ಲ್ಯಾಪ್‌ಟಾಪ್ ಆರ್‌ಡಿಪಿ ತಿನ್‌ಬುಕ್‌ಗಳ (RDP ThinBook) ಕಡೆ ನಮ್ಮ ವಿಮರ್ಶಾನೋಟವನ್ನು ಬೀರೋಣ.

ಹಿಂದೊಮ್ಮೆ ಇದೇ ಅಂಕಣದಲ್ಲಿ ಆರ್‌ಡಿಪಿ ಕಂಪೆನಿಯ ಬಗ್ಗೆ ಬರೆಯಲಾಗಿತ್ತು. ಒಂದು ತಿನ್‌ಬುಕ್ ಅನ್ನು ವಿಮರ್ಶೆ ಮಾಡಲಾಗಿತ್ತು. ಈ ಸಲ ವಿಮರ್ಶೆ ಮಾಡುತ್ತಿರುವ ಈ ತಿನ್‌ಬುಕ್‌ಗಳು ಅದೇ ತಿನ್‌ಬುಕ್‌ನ ಸುಧಾರಿತ ಆವೃತ್ತಿಗಳು.

ಈ ತಿನ್‌ಬುಕ್‌ಗಳು ನೋಡುವುದಕ್ಕೆ ಮಾಮೂಲಿ ಲ್ಯಾಪ್‌ಟಾಪ್‌ ನಂತೆಯೇ ಕಾಣುತ್ತವೆ. ಇವುಗಳಲ್ಲಿ 1130 ಮತ್ತು 1430 ಮಾದರಿಗಳನ್ನು ಕೈಯಲ್ಲಿ ಹಿಡಿದಾಗ ಇವು ಕಡಿಮೆ ಬೆಲೆಯವು ಎಂದು ಅನುಭವಕ್ಕೆ ಬರುತ್ತದೆ. ಇವುಗಳ ತಯಾರಿಕೆಯಲ್ಲಿ ಬಳಸಿರುವ ಎಲ್ಲ ಪ್ಲಾಸ್ಟಿಕ್ ಮತ್ತು ಪರದೆ ಕಡಿಮೆ ಬೆಲೆಯವು. ಬಳಸುವಾಗ ತುಂಬ ಎಚ್ಚರಿಕೆಯಿಂದ ಬಳಸಬೇಕು. ಇವು ಸುದೀರ್ಘ ಕಾಲ ಬಾಳಿಕೆ ಬರುವುದು ಅನುಮಾನ. ಆದರೆ 1110 ಮಾದರಿ ಮಾತ್ರ ಉಳಿದೆರಡಕ್ಕಿಂತ ಸ್ವಲ್ಪ ಮೇಲ್ದರ್ಜೆಯದ್ದು ಎಂದು ಅನ್ನಿಸುತ್ತದೆ. ಅಂತೆಯೇ ಇದಕ್ಕೆ ಬೆಲೆಯೂ ಸ್ವಲ್ಪ ಜಾಸ್ತಿ. ಬೆಲೆ ಜಾಸ್ತಿಯಾಗಲು ಸ್ಪರ್ಶಪರದೆ ಇರುವುದೂ ಒಂದು ಕಾರಣ.

ಇವುಗಳಲ್ಲಿ ಎರಡು ಯುಎಸ್‌ಬಿ (ಯುಎಸ್‌ಬಿ 2, 3) ಮತ್ತು ಒಂದು ಮಿನಿ ಎಚ್‌ಡಿಎಂಐ ಕಿಂಡಿಗಳಿವೆ. 3.5 ಮಿ.ಮೀ ಇಯರ್‌ಫೋನ್ ಕಿಂಡಿ ಹಾಗೂ ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್‌ ಹಾಕಲು ಕಿಂಡಿಗಳಿವೆ. ಮಧ್ಯಭಾಗದಲ್ಲಿ ಸ್ಪರ್ಶಪ್ಯಾಡ್ (ಟಚ್‌ಪ್ಯಾಡ್) ಇದೆ. ಇದೇ ಪ್ಯಾಡ್‌ನ ಕೆಳಭಾಗವನ್ನು ಒತ್ತುವ ಮೂಲಕ ಮೌಸ್ ಕ್ಲಿಕ್ ಕಾರ್ಯ ಮಾಡಬಹುದು. ಎಡಭಾಗ ಕ್ಲಿಕ್ ಮತ್ತು ಬಲಭಾಗ ಬಲ-ಕ್ಲಿಕ್ ಕೆಲಸವನ್ನು ಮಾಡುತ್ತವೆ. ಆದರೆ ಈ ಪ್ಯಾಡ್‌ನ ಗುಣಮಟ್ಟ ಅದ್ಭುತ ಎನ್ನುವಂತಿಲ್ಲ. ಬೇರೆ ಮೌಸ್ ಜೋಡಿಸಿ ಕೆಲಸ ಮಾಡುವುದೇ ಉತ್ತಮ. ಆದರೆ 1110 ಮಾದರಿಯಲ್ಲಿ ಸ್ಪರ್ಶ ಪರದೆ ಇರುವುದರಿಂದ ಈ ಸ್ಪರ್ಶಪ್ಯಾಡ್ ಬಳಸುವ ಅಗತ್ಯ ಕಡಿಮೆ.

ಈ ಲ್ಯಾಪ್‌ಟಾಪ್‌ಗಳ ಪ್ರಾಥಮಿಕ ಮೆಮೊರಿ ಕೇವಲ 2 ಗಿಗಾಬೈಟ್ ಎಂದು ನೆನಪಿಟ್ಟುಕೊಳ್ಳಬಹುದು. 32 ಗಿಗಾಬೈಟ್‌ನ ಸಂಗ್ರಹದಲ್ಲಿ ಹಲವು ದೊಡ್ಡ ತಂತ್ರಾಂಶಗಳನ್ನು ಅನುಸ್ಥಾಪಿಸಿದರೆ ಅದೂ ಬೇಗನೆ ಖಾಲಿ ಆಗಬಹುದು. ಮೆಮೊರಿ ಕಾರ್ಡ್ ಹಾಕುವ ಕಿಂಡಿಯಲ್ಲಿ 128 ಗಿಗಾಬೈಟ್ ತನಕ ಅಧಿಕ ಸಂಗ್ರಹದ ಕಾರ್ಡ್ ಹಾಕಿಕೊಳ್ಳಬಹುದು. ಯುಎಸ್‌ಬಿ ಕಿಂಡಿಯ ಮೂಲಕ ಬಾಹ್ಯ ಹಾರ್ಡ್‌ಡಿಸ್ಕ್ ಜೋಡಿಸಿಕೊಳ್ಳಬಹುದು. ಒಟ್ಟಿನಲ್ಲಿ ಕಡಿಮೆ ಸಂಗ್ರಹ ಶಕ್ತಿಯ ಸಮಸ್ಯೆಗೆ ಪರಿಹಾರ ಇದೆ. ಆದರೆ ಕಡಿಮೆ ಪ್ರಾಸೆಸಿಂಗ್ ಶಕ್ತಿಯ ಸಮಸ್ಯೆಗೆ ಪರಿಹಾರವಿಲ್ಲ. ಅಂದರೆ ಅಧಿಕ ಪ್ರಾಸೆಸಿಂಗ್ ಶಕ್ತಿಯನ್ನು ಬೇಡುವ ಕೆಲಸಗಳಿಗೆ ಇದು ಹೇಳಿದ್ದಲ್ಲ. ಅಂತರಜಾಲ ವೀಕ್ಷಣೆ, ಇಮೇಲ್, ಆಫೀಸ್ ಕೆಲಸಗಳು, ಸಣ್ಣಪುಟ್ಟ ಗ್ರಾಫಿಕ್ಸ್, ಸರಳವಾದ ಆಟಗಳನ್ನು ಆಡುವುದು –ಇತ್ಯಾದಿ ಕೆಲಸಗಳಿಗೆ ಇದು ಸಾಕು.

ಈ ಲ್ಯಾಪ್‌ಟಾಪ್‌ಗಳ ಪರದೆ ಪರವಾಗಿಲ್ಲ. ಹೈಡೆಫಿನಿಶನ್ ಮತ್ತು 4k ವಿಡಿಯೊಗಳ ವೀಕ್ಷಿಸುವ ಅನುಭವ ಒಂದು ಮಟ್ಟಿಗೆ ತೃಪ್ತಿದಾಯಕವಾಗಿವೆ. ಇವುಗಳ ಆಡಿಯೊ ಇಂಜಿನ್ ಕೂಡ ಪರವಾಗಿಲ್ಲ. ಉತ್ತಮ ಗುಣಮಟ್ಟದ ಇಯರ್‌ಫೋನ್ ಜೋಡಿಸಿ ಆಲಿಸಿದಾಗ ಧ್ವನಿಯ ಗುಣಮಟ್ಟ ಒಂದು ಮಟ್ಟಿಗೆ ತೃಪ್ತಿದಾಯಕವಾಗಿತ್ತು. ಪರದೆಯಲ್ಲಿ ಚಿತ್ರಗಳ ಪುನರುತ್ಪತ್ತಿ ನೀಡುವ ಹಣಕ್ಕೆ ತೃಪ್ತಿದಾಯಕವಾಗಿದೆ ಎನ್ನಬಹುದು.

ಇದರ ಬ್ಯಾಟರಿ ಶಕ್ತಿಶಾಲಿಯಾಗಿದೆ. ಸುಮಾರು 7ರಿಂದ 9 ಗಂಟೆ ಬಾಳಿಕೆ ಬರುತ್ತದೆ. ಬ್ಯಾಟರಿ ಚಾರ್ಜ್ ಮಾಡಲು ಪ್ರತ್ಯೇಕ ಚಾರ್ಜರ್ ನೀಡಿದ್ದಾರೆ. ಇವು ಬಳಸುವುದು ವಿಂಡೋಸ್ 10 ಕಾರ್ಯಾಚರಣ ವ್ಯವಸ್ಥೆಯನ್ನು. ಅಂದರೆ ನಿಮ್ಮಲ್ಲಿ ಕನ್ನಡದ ಹಳೆಯ ಫಾಂಟ್ ಬಳಸಿ ತಯಾರಿಸಿದ ಕಡತಗಳಿದ್ದಲ್ಲಿ ಅವುಗಳನ್ನು ಈ ಲ್ಯಾಪ್‌ಟಾಪ್‌ಗಳಲ್ಲಿ ತೆರೆಯಬಹುದು. ಸೂಕ್ತ ಫಾಂಟ್‌ಗಳನ್ನು ನೀವು ಹಾಕಿಕೊಳ್ಳಬೇಕು ಅಷ್ಟೆ. ಅಂದರೆ ತುಂಬ ವರ್ಷಗಳಿಂದ ಕನ್ನಡ ಲೇಖನ ತಯಾರಿಸುತ್ತಿರುವವರಿಗೆ ಇವು ಸೂಕ್ತ. ಒಟ್ಟಿನಲ್ಲಿ ಹೇಳುವುದಾದರೆ ಅತಿ ಕಡಿಮೆ ಬೆಲೆಗೆ ಒಂದು ಮಟ್ಟಿಗೆ ಉತ್ತಮ ಉತ್ಪನ್ನ ಎನ್ನಬಹುದು. ಅದರಲ್ಲೂ ಕನ್ನಡ ಲೇಖಕರಿಗೆ ಇವು ಉತ್ತಮ.

ಏಳನೇ ವರ್ಷಕ್ಕೆ...

ಜನವರಿ 2012ರಲ್ಲಿ ಪ್ರಾರಂಭವಾದ ಗ್ಯಾಜೆಟ್‌ಲೋಕ ಈಗ ಸತತ 6 ವರ್ಷಗಳನ್ನು ಪೂರೈಸಿ 7ನೆಯ ವರ್ಷಕ್ಕೆ ಕಾಲಿಡುತ್ತಿದೆ. ಸತತವಾಗಿ ನಡೆಸಿಕೊಂಡು ಬಂದ ಪ್ರಜಾವಾಣಿಗೂ, ಓದುತ್ತಿರುವ ಹಾಗೂ ಈ ಮೂಲಕ ಪ್ರೋತ್ಸಾಹಿಸುತ್ತಿರುವ ನಿಮಗೂ ಧನ್ಯವಾದಗಳು.

***

ವಾರದ ಆ್ಯಪ್ : ನಿನ್ನ ನೀ ತಿಳಕೊ

ನಮ್ಮ ದೇಶದಲ್ಲಿ ಬಹುಪಾಲು ಜನರಿಗೆ ತಾವು ಯಾರು ಎಂದೇ ತಿಳಿದಿರುವುದಿಲ್ಲ. ನಾನು ಇಲ್ಲಿ ಅಧ್ಯಾತ್ಮದ ಮಾತನಾಡುತ್ತಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಮೂಲಭೂತವಾಗಿ ಎಂತಹ ವ್ಯಕ್ತಿ ಎಂಬುದು ನಿರ್ಧರಿತ ವಾಗಿರುತ್ತದೆ.

ಅದಕ್ಕನುಗುಣವಾದ ಉದ್ಯೋಗ ಮಾಡಿದರೆ ಆತ/ಆಕೆ ಜೀವನದಲ್ಲಿ ಜಯಶಾಲಿಯಾಗುತ್ತಾರೆ. ಎಂತಹ ವ್ಯಕ್ತಿ ನೀವು ಎಂಬುದನ್ನು ತಿಳಿಯಲು ಕೆಲವು ಪರೀಕ್ಷೆಗಳಿವೆ. ಅಂತಹ ಒಂದು ಪರೀಕ್ಷೆ ನಿಮಗೆ ಈಗ ಆ್ಯಂಡ್ರಾಯ್ಡ್ ಕಿರುತಂತ್ರಾಂಶ ರೂಪದಲ್ಲಿ ದೊರೆಯುತ್ತಿದೆ. ಅದು ಬೇಕಿದ್ದಲ್ಲಿ ನೀವು ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ Personality Trait Test ಎಂದು ಹುಡುಕಬೇಕು ಅಥವಾ http://bit.ly/gadgetloka310 ಜಾಲತಾಣಕ್ಕೆ ಭೇಟಿ ನೀಡಬೇಕು. ನಿಮ್ಮಲ್ಲಿ ಹತ್ತನೆ ತರಗತಿ ಮುಗಿಸಿ ಮುಂದೆ ಏನು ಮಾಡಬೇಕು ಎಂದು ತಡಕಾಡುವ ಮಕ್ಕಳಿದ್ದಲ್ಲಿ ಅವರಿಗೆ ಈ ಪರೀಕ್ಷೆ ನೀಡಿ ಅವರು ಯಾವ ದಾರಿಯಲ್ಲಿ ಮುಂದುವರೆದರೆ ಉತ್ತಮ ಎಂಬುದನ್ನು ಪತ್ತೆಹಚ್ಚಲು ಸಹಾಯ ಮಾಡಬಹುದು.

***

ಗ್ಯಾಜೆಟ್ ಸುದ್ದಿ : ಆ್ಯಪಲ್ ಕಂಪೆನಿಯಿಂದ ಹಳೆ ಐಫೋನ್ ಒಡೆಯರಿಗೆ ಮೋಸ

ಹೊಸ ಮಾದರಿಯ ಫೋನ್ ಮಾರುಕಟ್ಟೆಗೆ ಬಂದಾಗ ಹಳೆಯ ಫೋನ್‌ಗಳನ್ನು ತುಂಬ ರಿಯಾಯಿತಿ ದರದಲ್ಲಿ ಮಾರುವುದು ತಿಳಿದಿರಬಹುದು. ಆದರೆ ಆ್ಯಪಲ್ ಕಂಪೆನಿ ತನ್ನ ಗ್ರಾಹಕರಿಗೆ ಸದ್ದಿಲ್ಲದೆ ಮೋಸ ಮಾಡಿದೆ. ಹೊಸ ಐಫೋನ್ ಬಂದಾಗ ಹಳೆಯ ಐಫೋನ್‌ಗಳಲ್ಲಿ ಸದ್ದಿಲ್ಲದೆ ತಂತ್ರಾಂಶ ನವೀಕರಣದ ಹೆಸರಿನಲ್ಲಿ ಒಂದು ಕುತಂತ್ರಾಂಶವನ್ನು ಸೇರಿಸಿದೆ. ಅದು ಹಳೆಯ ಐಫೋನ್‌ಗಳನ್ನು ನಿಧಾನವಾಗಿ ಕೆಲಸ ಮಾಡುವಂತೆ ಮಾಡುತ್ತದೆ.

ಹಳೆಯ ಫೋನ್‌ಗಳ ಬ್ಯಾಟರಿ ತನ್ನ ಶಕ್ತಿ ಕಳೆದುಕೊಂಡಿರುತ್ತದೆ ಆದುದರಿಂದ ಫೋನನ್ನು ನಿಧಾನವಾಗಿ ಕೆಲಸ ಮಾಡುವಂತೆ ಮಾಡುತ್ತಿದ್ದೇವೆ ಎಂದು ಆ್ಯಪಲ್ ಕಂಪೆನಿ ಸಮಜಾಯಿಸಿ ನೀಡಿದೆ. ಹೊಸ ಬ್ಯಾಟರಿಯನ್ನು ಗ್ರಾಹಕರು ದುಬಾರಿ ಬೆಲೆ ನೀಡಿ ಆ್ಯಪಲ್ ಸೇವಾ ಕೇಂದ್ರದಲ್ಲೇ ಹಾಕಿಸಿಕೊಂಡರೆ ಆಗ ಕಂಪೆನಿಯವರು ಸದ್ದಿಲ್ಲದೆ ಈ ಕುತಂತ್ರಾಂಶವನ್ನೂ ತೆಗೆದುಹಾಕುತ್ತಾರೆ ಅಥವಾ ಅದು ನಿಷ್ಕ್ರಿಯವಾಗುತ್ತದೆ. ಗ್ರಾಹಕರು ತಾವೇ ಕಡಿಮೆ ಬೆಲೆಯಲ್ಲಿ ಬ್ಯಾಟರಿ ಕೊಂಡುಕೊಂಡು ಬದಲಿಸಿದರೆ ಆಗ ಫೋನ್ ಸರಿಯಾಗುವುದಿಲ್ಲ. ನಿಧಾನವಾಗಿಯೇ ಕೆಲಸ ಮಾಡುತ್ತಿರುತ್ತದೆ. ಈ ಮೋಸದ ವಿರುದ್ಧ ಅಮೆರಿಕದಲ್ಲಿ ಹಲವು ಗ್ರಾಹಕರು ಆ್ಯಪಲ್ ಕಂಪೆನಿಯ ವಿರುದ್ಧ ನ್ಯಾಯಾಲಯಗಳಲ್ಲಿ ದಾವೆ ಹೂಡಿದ್ದಾರೆ. ಕೊನೆಗೂ ಆ್ಯಪಲ್ ಗ್ರಾಹಕರಿಗೆ ತಲೆಬಾಗಿ ತನ್ನ ಬ್ಯಾಟರಿ ಬೆಲೆಯನ್ನು 79 ಡಾಲರಿನಿಂದ 29 ಡಾಲರಿಗೆ ಇಳಿಸಿದೆ. ಜೊತೆಗೆ ತನ್ನ ತಂತ್ರಾಂಶದಲ್ಲೂ ಬದಲಾವಣೆ ಮಾಡಿ ಗ್ರಾಹಕರಿಗೆ ತಮ್ಮ ಬ್ಯಾಟರಿಯ ಆರೋಗ್ಯವನ್ನು ತೋರಿಸುವ ವ್ಯವಸ್ಥೆ ಮಾಡಿದೆ.

***

ಗ್ಯಾಜೆಟ್ ಸಲಹೆ 

ಭರತ ದತ್ತವಾಡೆ ಅವರು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದು: ನೀವು ಒನ್‌ ಪ್ಲಸ್ 5ಟಿ ಬಗ್ಗೆ ಬರೆಯುತ್ತ ಸುಮಾರು 45 ನಿಮಿಷದಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ ಎಂದು ಬರೆದಿದ್ದಿರಿ. ಆದರೆ ಫೋನ್ ಪೂರ್ತಿ ಚಾರ್ಜ್‌ಗೆ 45 ನಿಮಿಷ ಸಾಲುವುದಿಲ್ಲ. 80-85 ನಿಮಿಷ ಬೇಕು.

ಉ: ಸಾಮಾನ್ಯವಾಗಿ ಜನರು ಫೋನಿನ ಬ್ಯಾಟರಿ ಚಾರ್ಜ್ ಅನ್ನು ಸುಮಾರು 20-30%ಗಿಂತ ಕಡಿಮೆ ಆಗಲು ಬಿಡುವುದಿಲ್ಲ. 20% ನಿಂದ 100%ಗೆ ಸುಮಾರು 45-50 ನಿಮಿಷ ಸಾಕು. ನೀವು ಹೇಳಿದ್ದು ಸರಿ. 0% ನಿಂದ 100%ಗೆ ಸುಮಾರು 75-80 ನಿಮಿಷ ಬೇಕು.

***

ಗ್ಯಾಜೆಟ್ ತರ್ಲೆ

ವಾಟ್ಸ್‌ಆ್ಯಪ್, ಹೈಕ್, ಟೆಲಿಗ್ರಾಂ ಇತ್ಯಾದಿ ಕಿರುತಂತ್ರಾಂಶಗಳು ಗೊತ್ತು ತಾನೆ? ಸಂದೇಶ ಕಳುಹಿಸಲು ಮತ್ತು ಮಾತುಕತೆ ನಡೆಸಲು (ಚಾಟ್ ಮಾಡಲು) ಅವುಗಳನ್ನು ಬಳಸಲಾಗುತ್ತದೆ.

ಕೆಲವರಿಗೆ ಟೆಲಿಗ್ರಾಂನಲ್ಲಿ ಸಂದೇಶ ಕಳುಹಿಸಿದರೆ, ನಂತರ ವಾಟ್ಸ್‌ಆ್ಯಪ್‌ನಲ್ಲಿ ‘ಟೆಲಿಗ್ರಾಂ ನೋಡು’ ಎಂದು ಸಂದೇಶ ಕಳುಹಿಸಬೇಕಾಗುತ್ತದೆ. ಕೆಲವೊಮ್ಮೆ ಅದೂ ಸಾಲದೆ ವಾಟ್ಸ್‌ಆ್ಯಪ್ ನೋಡು ಎಂದು ಒಂದು ಎಸ್‌ಎಂಎಸ್ ಕಳುಹಿಸಬೇಕಾಗುತ್ತದೆ. ಇನ್ನು ಕೆಲವರಿಗೆ ಅದೂ ಸಾಲದೆ ಫೋನ್ ಮಾಡಿಯೇ ಹೇಳಬೇಕಾಗುತ್ತದೆ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.