ಮಂಗಳವಾರ, ಜೂನ್ 15, 2021
25 °C

ಕೆ.ಆರ್. ನಾರಾಯಣನ್ ಮಹಾಪ್ರತಿಭೆ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ನಮ್ಮ ದೇಶ ಅನೇಕ ಅದ್ಭುತ ವ್ಯಕ್ತಿಗಳನ್ನು ರಾಷ್ಟ್ರಪತಿಗಳನ್ನಾಗಿ ಕಂಡಿದೆ. ಅವರಲ್ಲಿ ಡಾ. ಕೆ.ಆರ್ ನಾರಾಯಣನ್ ಅವರು ನಾವು ಸದಾ ಸ್ಮರಿಸಬೇಕಾದಂತಹ ವ್ಯಕ್ತಿ. ಮೃದು ಸ್ವಭಾವದ ಆದರೆ ಅಷ್ಟೇ ಕಠೋರ ನಿಷ್ಠೆಯ ಈ ಧೀಮಂತ ಮನುಷ್ಯನ ಬಗ್ಗೆ ಹೆಚ್ಚು ಪ್ರಚಾರವಾಗದಿರುವುದು ದುರದೃಷ್ಟ.ಕಿತ್ತು ತಿನ್ನುವ ಬಡತನದ ಬೇಗೆಯಿಂದೆದ್ದು, ಛಲದಿಂದ ದುಡಿದು, ಸ್ವಪ್ರಯತ್ನದಿಂದಲೇ ತನ್ನ ಅದೃಷ್ಟವನ್ನು ದೃಷ್ಟವಾಗಿಸಿಕೊಂಡ ಚೈತನ್ಯ ಕೆ.ಆರ್ ನಾರಾಯಣನ್‌ರದು. ಅವರ ಮಾತು ನೇರ, ಸದಾ ಸತ್ಯದ ಅನ್ವೇಷಣೆಯಲ್ಲಿ ಮಾತ್ರ ತೊಡಗುವಂತಹದು. ಮುಂದಿದ್ದವರ ದೊಡ್ಡತನವನ್ನು ತಿಳಿದು ಪ್ರಶ್ನೆ ಕೇಳದೇ ಬಿಟ್ಟವರಲ್ಲ.ಒಂದು ಬಾರಿ ಅವರು ಇಂಗ್ಲೆಂಡಿನಲ್ಲಿದ್ದಾಗ ಮಹಾತ್ಮ ಗಾಂಧೀಜಿಯವರ ಉಪನ್ಯಾಸಕ್ಕೆ ಹೋಗಿದ್ದರು. ಉಪನ್ಯಾಸ ಮುಗಿದ ಮೇಲೆ ನಾರಾಯಣನ್‌ರು ಪ್ರಶ್ನೆ ಕೇಳಿದಾಗ ಆಗಿನ್ನೂ ಅವರಿಗೆ ಇಪ್ಪತ್ತೈದು ವರ್ಷ. `ಗಾಂಧೀಜಿ, ತಾವು ಸತ್ಯ ಮತ್ತು ಅಸತ್ಯಗಳ ನಡುವಿನ ಆಯ್ಕೆಯನ್ನು ತುಂಬ ಸುಲಭಗೊಳಿಸಿದ್ದೀರಿ.

 

ಆದರೆ ಎರಡು ಸತ್ಯಗಳ ನಡುವೆ ಹೇಗೆ ಆಯ್ಕೆ ಮಾಡಬೇಕೆಂಬುದನ್ನು ತಿಳಿಸಲಿಲ್ಲ. ಇಂಗ್ಲೆಂಡಿನಲ್ಲಿ ಜನ ನನ್ನನ್ನು ಭಾರತದಲ್ಲಿ ಅಸ್ಪೃಶ್ಯತೆಯ ಬಗ್ಗೆ ಕೇಳಿದರೆ ಏನು ಹೇಳಲಿ? ಭಾರತ ದೊಡ್ಡ ದೇಶವೆಂಬುದೂ ಸತ್ಯ, ಅಸ್ಪೃಶ್ಯತೆ ಇರುವುದೂ ಸತ್ಯ. ಯಾವುದನ್ನು ಆಯ್ದುಕೊಳ್ಳಲಿ? ನನ್ನ ದೇಶವನ್ನು ರಕ್ಷಿಸಿಕೊಳ್ಳಲೇ, ಇಲ್ಲ, ಅಸ್ಪೃಶ್ಯತೆಯನ್ನು ಒಪ್ಪಿಕೊಳ್ಳಲೇ?~ ಕ್ಷಣಕಾಲ ಗಾಂಧೀಜಿ ಕಣ್ಣು ಮುಚ್ಚಿ ನಂತರ ಹೇಳಿದರು. `ಎರಡನ್ನೂ ಒಪ್ಪಿಕೋ; ಎರಡೂ ಸತ್ಯ.~  ಗಾಂಧೀಜಿಯ ಈ ಸತ್ಯಾನ್ವೇಷಣೆಯ ತೀವ್ರತೆ ತರುಣ ನಾರಾಯಣನ್‌ಗೆ ಇಷ್ಟವಾಯಿತು.ಅವರ ಸ್ವಭಾವ ಮೃದುವಾದರೂ ನೇರವಾಗಿ ಹೇಳಬೇಕಾದಾಗ ಅಥವಾ ಯಾರಾದರೂ ಅವರನ್ನು ಅಪಮಾನ ಮಾಡಲು ಪ್ರಯತ್ನಿಸಿದಾಗ, ಮಾತಿನ ಮೊನಚನ್ನು ಕಡಿಮೆ ಮಾಡಿದವರಲ್ಲ. ಅವರು ಲಂಡನ್ನಿನ ಅರ್ಥಶಾಸ್ತ್ರದ ಶಾಲೆಯಲ್ಲಿ ಪ್ರಥಮರಾಗಿ ಬಂದಾಗ ಕೇರಳದಲ್ಲಿ ಸ್ನೇಹಿತರೆಲ್ಲ ಸೇರಿ ಸಂತೋಷಕೂಟವನ್ನು ಆಯೋಜಿಸಿದ್ದರು.

 

ಆಗ ಅತ್ಯಂತ ಪ್ರಭಾವಶಾಲಿ ಹಾಗೂ ದುರಹಂಕಾರಿ ಎಂದೇ ಕರೆಯಲ್ಪಡುತ್ತಿದ್ದ ವಿ.ಕೆ. ಮೆನನ್‌ರೂ ಬಂದಿದ್ದರು. ಊಟ ಮುಗಿಸಿ ಹೋಗುವ ಮುಂಚೆ ಮೆನನ್ ನಾರಾಯಣನ್‌ರ ಪಕ್ಕದಲ್ಲಿ ನಿಂತು, `ನಾರಾಯಣನ್ ನೀನು ಪ್ರಥಮ ಸ್ಥಾನ ಪಡೆದಿದ್ದೀ ಎಂದು ಕೇಳಿದ್ದೇನೆ. ನಿನಗೆ ಗೊತ್ತಿರಬೇಕು, ಕೆಲವು ಜನ ಆಕಸ್ಮಿಕವಾಗಿ ಹೀಗೆ ಪ್ರಶಸ್ತಿ ಪಡೆದುಬಿಡುತ್ತಾರೆ~ ಎಂದು ಪಿಸುಗುಟ್ಟಿದರು. ನಾರಾಯಣನ್ ತಕ್ಷಣವೇ ಕೇಳಿದರು. `ತಾವು ಪಡೆದದ್ದು ಅದೇ ರೀತಿಯೇ ಸರ್?~ ಮೆನನ್ ಅಲ್ಲಿ ನಿಲ್ಲಲಿಲ್ಲ.ಅವರು ಪ್ರತಿಯೊಬ್ಬರಲ್ಲೂ, ತಮ್ಮ ಪತ್ನಿಗೂ ತೋರುತ್ತಿದ್ದ ವಿನಯವನ್ನು ಅವರ ಪತ್ನಿ ಶ್ರಿಮತಿ ಉಷಾ ನೆನಪಿಸಿಕೊಳ್ಳುತ್ತಾರೆ. ಒಂದು ಬಾರಿ ರೈಲು ಪ್ರಯಾಣ ಮಾಡುವಾಗ ಯಾವುದೋ ಸಣ್ಣ ಸ್ಟೇಷನ್ನಿನಲ್ಲಿ ರೈಲು ನಿಂತಿತು. ಉಷಾರವರು, `ಇಲ್ಲಿ ಚಹಾ ಸಿಕ್ಕೀತೇನೋ~ ಎನ್ನುವಷ್ಟರಲ್ಲಿ ನಾರಾಯಣನ್ ತಾನೇ ಕೆಳಗಿಳಿದು ಹೋದರು.ನಿಧಾನವಾಗಿ ರೈಲು ಚಲಿಸಲಾರಂಭಿಸಿತು. ಓಡುತ್ತ ಬಂದು ರೈಲು ಏರಿದ ನಾರಾಯಣನ್ ಒಂದು ಕೈಯಲ್ಲಿ ಚಹಾದ ಕಪ್ಪು ಹಿಡಿದುಕೊಂಡು, ಇನ್ನೊಂದರಿಂದ ರೈಲಿನ ಬಾಗಿಲನ್ನು ಹಿಡಿದು ಒದ್ದಾಡುತ್ತಿದ್ದಾರೆ. `ಏನು ಮಾಡುತ್ತಿದ್ದೀರಿ~ ಎಂದು ಉಷಾ ಕೇಳಿದರೆ. `ಓಡಿ ಬರುವ ಅವಸರದಲ್ಲಿ ಒಂದು ಚಪ್ಪಲಿ ಬಿದ್ದು ಹೋಯಿತು. ಇನ್ನೊಂದನ್ನು ಬೇಗನೇ ಕಿತ್ತು ಬಿಸಾಕುತ್ತೇನೆ. ಇಲ್ಲದಿದ್ದರೆ ಒಂದೇ ಚಪ್ಪಲಿಯಿಂದ ಯಾರಿಗೇನು ಪ್ರಯೋಜನ?  ಹೀಗೆಂದು ಅದನ್ನು ಬೀಳಿಸಿ ಬಂದರಂತೆ.ಹೀಗೆ ವಿನಯ, ನಿಶಿತ ಮತಿ, ನೇರಮಾತು, ಸಜ್ಜನಿಕೆಗಳ ಸಾಕಾರಮೂರ್ತಿಯಾಗಿದ್ದವರು ಕೆ.ಆರ್. ನಾರಾಯಣನ್‌ರವರು. ಅಂಥವರ ನೆನಪು ನಮ್ಮ ಜೀವನಕ್ಕೆ ತಂಪು ತರುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.