ಸೋಮವಾರ, ಮೇ 10, 2021
21 °C

ಕ್ರಿಕೆಟ್ ಧ್ಯಾನದಲ್ಲಿ ಮರೆತೇ ಹೋದ ಹಾಕಿ

ಕುಲದೀಪ ನಯ್ಯರ್ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಕ್ರೀಡೆ ಎಂಬ ಅಭಿದಾನ ಹೊತ್ತ ಹಾಕಿ ಇಂದು ನಮ್ಮ ನೆಲದಲ್ಲಿಯೇ ಮಹತ್ವ ಕಳೆದುಕೊಳ್ಳುತ್ತಿರುವುದನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ. ಕ್ರಿಕೆಟ್ ಆಟಕ್ಕೆ ಸಿಗುವ ಮನ್ನಣೆ ಹಾಕಿಗೆ ಯಾಕೆ ಸಿಗುತ್ತಿಲ್ಲ?ಕ್ರಿಕೆಟ್ ಆಟಗಾರರು ಪಂದ್ಯದಲ್ಲಿ ಮೇಲಿಂದ ಮೇಲೆ ಕಳಪೆ ಸಾಧನೆ ಮಾಡಿದರೂ ಕೋಟಿಗಟ್ಟಲೆ ಹಣ ಬಾಚುತ್ತಾರೆ. ಸನ್ಮಾನ ಮಾಡಿಸಿಕೊಳ್ಳುತ್ತಾರೆ. ಇದನ್ನೆಲ್ಲ ನೋಡಿದರೆ ನನಗೆ ರೋಮನ್ ಸಾಮ್ರಾಜ್ಯದ ಕುಸ್ತಿಮಲ್ಲರ ನೆನಪಾಗುತ್ತದೆ.ಈ ಕುಸ್ತಿಮಲ್ಲರು ಪ್ರೇಕ್ಷಕರನ್ನು ಮೆಚ್ಚಿಸಲು ಎದುರಾಳಿ ಪಟುವನ್ನು ಕೊಲ್ಲದೇ ವಿಧಿ ಇರಲಿಲ್ಲ! ಯಾಕೆಂದರೆ ಜನರು ಕಾಸು ಕೊಟ್ಟು ಈ ಪೈಶಾಚಿಕ ದೃಶ್ಯ ನೋಡಲು ತುದಿಗಾಲ ಮೇಲೆ ನಿಂತಿರುತ್ತಿದ್ದರು. ಇದೆಂಥ ಹೋಲಿಕೆ ಎಂದು ಹುಬ್ಬೇರಿಸಬೇಡಿ.ನನಗೆ ಕ್ರಿಕೆಟ್ ಮೇಲೆ ದ್ವೇಷವಿಲ್ಲ. ಅಥವಾ ಕ್ರಿಕೆಟ್ ಆಟಗಾರರಿಗೆ ಭಾರಿ ಹಣ ಕೊಡುವ ಬಗ್ಗೆಯೂ ನಾನೇನು ಹೊಟ್ಟೆಕಿಚ್ಚು ಪಡುತ್ತಿಲ್ಲ. ವಾಸ್ತವ ಸಂಗತಿಯನ್ನು ಬಿಚ್ಚಿಡುತ್ತಿದ್ದೇನೆ, ಅಷ್ಟೆ.ಇತ್ತೀಚೆಗೆ ಚೀನಾದ ಓರ್ಡೊಸ್‌ನಲ್ಲಿ ನಡೆದ ಚೊಚ್ಚಲ ಏಷ್ಯಾ ಚಾಂಪಿಯನ್ಸ್ ಟ್ರೋಫಿ  ಹಾಕಿ ಟೂರ್ನಿಯಲ್ಲಿ ಭಾರತವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗು ಬಡಿದು ಗೆಲುವನ್ನು ತನ್ನ ಮುಡಿಗೇರಿಸಿಕೊಂಡಿತು. ನಿಜಕ್ಕೂ ಅದೊಂದು ಸಂಭ್ರಮದ ಗಳಿಗೆ.

 

ಪೆನಾಲ್ಟಿ ಶೂಟೌಟ್‌ನಿಂದ ಭಾರತವು ಗೆದ್ದಿದ್ದು ಪಂದ್ಯವನ್ನು ಇನ್ನಷ್ಟು ರೋಚಕವನ್ನಾಗಿಸಿತ್ತು. ಆದರೆ ಆ ಸಂದರ್ಭದಲ್ಲಿ ಬೆಂಗಳೂರಿನ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದ ನನಗೆ ಚೀನಾದಿಂದ ಹಾಕಿ ಪಂದ್ಯದ ನೇರ ಪ್ರಸಾರವನ್ನು ನೋಡಲು ಸಾಧ್ಯವಾಗಲಿಲ್ಲ.`ನಾವು ಹಾಕಿ ಪಂದ್ಯದ ಪ್ರಸಾರವನ್ನು ನಿಲ್ಲಿಸಿದ್ದೇವೆ. ಯಾಕೆಂದರೆ ನಮ್ಮಲ್ಲಿ ತಂಗುವ ಅತಿಥಿಗಳು ಹಾಕಿ ಆಟ ನೋಡಲು ಇಷ್ಟಪಡುವುದಿಲ್ಲ~ ಎಂದು ಹೋಟೆಲ್ ವ್ಯವಸ್ಥಾಪಕರು ನನಗೆ ಸಮಜಾಯಿಷಿ ಕೊಟ್ಟರು. ಆಗ ನನಗೆ ನಿಜಕ್ಕೂ ಅಚ್ಚರಿ ಆಯಿತು.

 

ಭಾರತ ಹಾಗೂ ಪಾಕ್ ಹಾಕಿ ಹಣಾಹಣಿ ನೋಡಲೂ ಜನರಿಗೆ ಕಾತರವಿಲ್ಲವೇ ಎಂದುಕೊಂಡೆ. ಭಾರತದಲ್ಲಿ ಹಾಕಿ ಎಷ್ಟು ಹೀನಾಯ ಸ್ಥಿತಿಯಲ್ಲಿದೆ ಎನ್ನುವುದನ್ನು ಬಿಂಬಿಸಲು ಇದಕ್ಕಿಂತ ಇನ್ನೇನು ಪುರಾವೆ ಬೇಕು?ಭಾರತದಲ್ಲಿ ಏಷ್ಯಾ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ನೇರ ಪ್ರಸಾರವೂ ಇರಲಿಲ್ಲ ಎನ್ನುವುದು ನನಗೆ ನಂತರದಲ್ಲಿ ಗೊತ್ತಾಯಿತು.ಹಾಗೆ ನೋಡಿದರೆ ಸುಮಾರು ಆರು ದಶಕಗಳಿಗೂ ಸುದೀರ್ಘ ಅವಧಿಯ ನನ್ನ ವೃತ್ತಿ ಬದುಕಿನಲ್ಲಿ ರಾಜಕೀಯ ವಿಷಯವನ್ನು ಹೊರತುಪಡಿಸಿ ನಾನು ಎಂದಿಗೂ ಕ್ರೀಡೆಯ ಬಗ್ಗೆ ಬರೆದದ್ದೇ ಇಲ್ಲ. ಹಾಗೆ ನೋಡಿದರೆ, ನನಗೆ ಈ ಬಗ್ಗೆ ಬರೆಯುವ ತುರ್ತು ಕೂಡ ಇರಲಿಲ್ಲ. ಇನ್ನೊಂದು ವಿಷಯವೆಂದರೆ ನಾನು ದಿನಪತ್ರಿಕೆಗಳ ಕ್ರೀಡಾ ಪುಟದತ್ತ ಗಮನ ಹರಿಸುವುದು ತೀರಾ ಅಪರೂಪ ಎಂದರೆ ಅದು ಅತಿಶಯೋಕ್ತಿಯಲ್ಲ.ಕ್ರಿಕೆಟ್‌ನಂತೆಯೇ ಹಾಕಿ ಪಂದ್ಯವನ್ನು ನೋಡಲು ಜನ ಯಾಕೆ ಮುಗಿ ಬೀಳುವುದಿಲ್ಲವೋ ನನಗೆ ಅರ್ಥವಾಗುತ್ತಿಲ್ಲ. ಈ ಸಂದರ್ಭದಲ್ಲಿ ನನಗೆ ಭಾರತದ ಹಾಕಿ ಕಲಿ ಮೇಜರ್ ಧ್ಯಾನ್‌ಚಂದ್ ಸಿಂಗ್ ನೆನಪಾಗುತ್ತಾರೆ.

 

ಅವರು ಇಡೀ ಜಗತ್ತು ಕಂಡ ಅಪ್ರತಿಮ ಹಾಕಿ ಪಟು. ಬಹುಶಃ ಇತರ ಯಾವುದೇ ಕ್ರೀಡೆಯಲ್ಲಿಯೂ ಅವರಷ್ಟು ಚತುರ ಆಟಗಾರರು ಕಾಣಸಿಗುವುದಿಲ್ಲವೇನೋ? ಅಂತೆಯೇ ಅವರನ್ನು ಹಾಕಿ ಲೋಕದ ದಂತಕಥೆ ಎಂದೇ ಬಣ್ಣಿಸಲಾಗುತ್ತದೆ. ಧ್ಯಾನ್‌ಚಂದ್ ಆಟದ ಮೋಡಿಗೆ ಪ್ರೇಕ್ಷಕರು ಮಾತ್ರವಲ್ಲ; ಎದುರಾಳಿಗಳೂ ನಿಬ್ಬೆರಗಾಗುತ್ತಿದ್ದರು.

 

ಹಾಗಿರುತ್ತಿತ್ತು ಅವರ ಆಟದ ವೈಖರಿ! ಅವರೊಬ್ಬ ಕಲಾತ್ಮಕ ಆಟಗಾರರಾಗಿದ್ದರು. ಒಲಿಪಿಂಕ್ ಪಂದ್ಯಗಳಲ್ಲಿ ಆಡಿದ್ದ ಧ್ಯಾನ್‌ಚಂದ್ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದರು. 1956ರಲ್ಲಿ ಅವರಿಗೆ ಪದ್ಮಭೂಷಣ ಸಮ್ಮಾನ ಕೂಡ ದೊರೆತಿದೆ.1932ರಲ್ಲಿ ಬರ್ಲಿನ್‌ನಲ್ಲಿ ನಡೆದ ಒಲಿಂಪಿಕ್ ಪಂದ್ಯದಲ್ಲಿ ಸರ್ವಾಧಿಕಾರಿ ಹಿಟ್ಲರ್ ಕೂಡ ಧ್ಯಾನ್‌ಚಂದ್ ಆಟಕ್ಕೆ ಮನಸೋತಿದ್ದ. ಜರ್ಮನಿ ಸೇನೆಯಲ್ಲಿ ಉನ್ನತ ಸ್ಥಾನವನ್ನು ನೀಡುವ ಹಿಟ್ಲರ್ ಆಹ್ವಾನವನ್ನು ಚಂದ್ ಆಗ ನಯವಾಗಿಯೇ ನಿರಾಕರಿಸಿದ್ದರು.

 

ಆದರೆ ದೇಶ ಕಂಡ ಇಂಥ ಮಹಾನ್ ಆಟಗಾರ ತನ್ನ ಕೊನೆಯ ದಿನಗಳಲ್ಲಿ ಆರ್ಥಿಕ ಮುಗ್ಗಟ್ಟು ಹಾಗೂ ಅನಾರೋಗ್ಯದಿಂದ ಬಳಲುವಂತಾಯಿತು. ಹಾಗೆ ನೋಡಿದರೆ ಆ ಕಾಲಘಟ್ಟದಲ್ಲಿ ಹಾಕಿ ಆಟಗಾರರ ಮುಂದೆ, ಇಂದಿನ ಕ್ರಿಕೆಟ್ ಕಲಿಗಳಂತೆ ಹಣದ ಹೊಳೆ ಹರಿಯುತ್ತಿರಲಿಲ್ಲ. ಅಲ್ಲಿ ವ್ಯಕ್ತಿಗಿಂತ ಆಟವೇ ಪ್ರಧಾನವಾಗಿತ್ತು.ನನಗೆ ಕ್ರಿಕೆಟ್ ಮೇಲೆ ದ್ವೇಷವೇನೂ ಇಲ್ಲ. ಆದರೆ ಕ್ರಿಕೆಟ್ ನೋಡುವಾಗಲೆಲ್ಲ ಆಟಗಾರರನ್ನು ಬಿಕರಿಗಿಡಲಾಗಿದೆಯೇ ಎನ್ನುವ ಅನುಮಾನ ಮೂಡುತ್ತದೆ. `ಹಣದ ಥೈಲಿಗೆ ತಕ್ಕಂತೆ ಆಟದ ವೈಖರಿ~ ಎನ್ನುವ ಭಾವನೆ ಬಂದುಬಿಡುತ್ತದೆ.

 

ಅಲ್ಲದೆ, ಈ ಆಟಗಾರರು ಅತಿಮುದ್ದಿನಿಂದ ಹಾಳಾದ ಉಡಾಳ ಮಕ್ಕಳಂತೆ ಕಾಣುತ್ತಾರೆ. ತಮಗಾದ ಗಾಯವನ್ನು ಮುಚ್ಚಿಡುತ್ತಾ, ಸುಳ್ಳು ಸುಳ್ಳು ವೈದ್ಯಕೀಯ ವರದಿ ಮುಂದಿಟ್ಟುಕೊಂಡು ತಂಡದಲ್ಲಿ ಪ್ರವೇಶ ಗಿಟ್ಟಿಸಿಕೊಳ್ಳುತ್ತಾರೆ. ಇತ್ತೀಚಿನ ಲಂಡನ್ ಪ್ರವಾಸವೇ ಇದಕ್ಕೆ ನೈಜ ಉದಾಹರಣೆ.ಭಾರತದ ಹಾಕಿ ಬಗ್ಗೆ ಮಾತನಾಡುವಾಗ ವಿಲಕ್ಷಣ ಚಿತ್ರಣ ಕಂತೆಯೇ ಕಣ್ಣಿಗೆ ಕಟ್ಟುತ್ತದೆ. ನಮ್ಮಲ್ಲಿ ಆಟಗಾರರಿಗೆ ಬಿಡಿಗಾಸು ಕೊಟ್ಟು ಕೈತೊಳೆದುಕೊಂಡು ಅವರನ್ನು ಗುಲಾಮರಂತೆ ನಡೆಸಿಕೊಳ್ಳಲಾಗುತ್ತದೆ.

 

ಏಷ್ಯಾ ಚಾಂಪಿಯನ್ಸ್ ಟ್ರೋಫಿ  ಹಾಕಿ ಟೂರ್ನಿಯಲ್ಲಿ ಸಾಧನೆ ಮೆರೆದ ಕೆಲವರಿಗೆ ಸ್ವಂತ ಮನೆ ಕೂಡ ಇಲ್ಲದಂಥ ಸ್ಥಿತಿಗೆ ಏನನ್ನೋಣ? `ನಮ್ಮ ದೇಶದಲ್ಲಿ ಹಾಕಿ ಹೀನಾಯ ಸ್ಥಿತಿಯಲ್ಲಿದೆ. ಸಾಧನೆಗೆ ಕಿಮ್ಮತ್ತಿಲ್ಲ~ ಎಂದು ಭಾರತ ಹಾಕಿ ತಂಡದ ನಾಯಕ ರಾಜ್‌ಪಾಲ್ ಸಿಂಗ್ ಮಾಡಿರುವ ಆರೋಪ ನೂರಕ್ಕೆ ನೂರರಷ್ಟು ಸತ್ಯ.ಹಾಕಿಗೆ ಬಂದಿರುವ ದಯನೀಯ ಸ್ಥಿತಿ, ಈ ಆಟವನ್ನು ನಿಯಂತ್ರಿಸಲು ಯಾರಿಗೆ ನಿಜವಾದ ಅಧಿಕಾರವಿದೆ ಎನ್ನುವುದರ ಕುರಿತ ವಾಗ್ವಾದ, ನಂತರದಲ್ಲಿ ಕ್ರೀಡಾ ಸಚಿವಾಲಯ ಸೃಷ್ಟಿಸಿದ ಗೊಂದಲ -ಈ ಎಲ್ಲ ಅರೆಕೊರೆಗಳ ಮಧ್ಯೆಯೂ ನಮ್ಮ ಹಾಕಿಪಟುಗಳು ಚೀನಾದಲ್ಲಿ ಅಭೂತಪೂರ್ವವಾಗಿ ಆಟವಾಡಿದ್ದು ಮೆಚ್ಚತಕ್ಕ ವಿಷಯ.

ಕೆಲವೊಂದು ವಿವಾದಗಳೂ ಹಾಕಿ ತಂಡವನ್ನು ಸುತ್ತಿಕೊಂಡಿದ್ದವು.

 

ಹೊಸ ವಿದೇಶಿ ತರಬೇತುದಾರನ ನೇತೃತ್ವದಲ್ಲಿ ತಂಡವು ಚೀನಾ ಪ್ರವಾಸ ಕೈಗೊಳ್ಳುವ ಮುನ್ನ ಹಿರಿಯ ಆಟಗಾರರಾದ ಸಂದೀಪ್ ಸಿಂಗ್ ಹಾಗೂ ಸರ್ದಾರ್ ಸಿಂಗ್ ಅವರು ತಂಡದಿಂದ ಹೊರನಡೆದರು. ಈ ಬೆಳವಣಿಗೆಯು ಆಟಗಾರರಿಗೆ ಹಾಕಿಯ ಮೇಲಿರುವ ಬದ್ಧತೆಯನ್ನು ತೋರಿಸುತ್ತದೆ.ಮೂರು ದಶಕಗಳ ಹಿಂದಿನ ಹಾಕಿಯ ವೈಭವ ಮತ್ತೆ ಮರುಕಳಿಸಲಿ ಎನ್ನುವುದು ನನ್ನ ಆಶಯ. 1980ರಲ್ಲಿ  ಮಾಸ್ಕೊದಲ್ಲಿ  ನಡೆದ ಪಂದ್ಯದಲ್ಲಿ ನಮ್ಮ ಆಟಗಾರರು ಚಿನ್ನ ಗೆದ್ದಿದ್ದರು. ಅಲ್ಲಿಂದ ಮುಂದೆ ಒಲಿಂಪಿಕ್ ಪಂದ್ಯಗಳಿಗೆ ಅರ್ಹತೆಯನ್ನು ಪಡೆಯುವುದಕ್ಕೆ ಹೋರಾಟದ ಹಾದಿಯಲ್ಲಿ ಕ್ರಮಿಸಬೇಕಾಯಿತು.ಹಾಕಿಯು ನೇಪಥ್ಯಕ್ಕೆ ಸರಿದ ಈ ಹಂತದಲ್ಲಿ ಕ್ರಿಕೆಟ್ ಹುಚ್ಚು ತನ್ನ ಆಧಿಪತ್ಯ ಸ್ಥಾಪಿಸಿತು. 1983ರಲ್ಲಿ ಭಾರತವು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮ್ದ್ದಿದು ನಿಜಕ್ಕೂ ಆಶಾದಾಯಕ ಬೆಳವಣಿಗೆ.ಇದರ ನಂತರದಲ್ಲಿ ಬಿಸಿಸಿಐ ಕ್ರಿಕೆಟ್ ಉತ್ತೇಜನಕ್ಕೆ ಟೊಂಕ ಕಟ್ಟಿ ನಿಂತಿತು. ಇದೀಗ ಬಿಸಿಸಿಐ ಇಡೀ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಶ್ರೀಮಂತ ಮಂಡಳಿಯಾಗಿದೆ. ಆದರೆ, ಬಿಸಿಸಿಐ ನಿಜವಾದ ಬದ್ಧತೆಯು ಆಟದ ಮೇಲಿದೆಯೋ ಅಥವಾ ಆಟಗಾರರ ಮೇಲೋ ಎನ್ನುವುದು ಬೇರೆಯೇ ಮಾತು!ಈಗ ಮತ್ತೆ ಹಾಕಿ ವಿಷಯಕ್ಕೆ ಬರೋಣ. ಸ್ಪೇನ್, ಹಾಲೆಂಡ್, ಜರ್ಮನಿ ಹಾಗೂ ಆಸ್ಟ್ರೇಲಿಯಾ ದೇಶಗಳು ಹಾಕಿಯ ಮೇಲೆ ಹಿಡಿತ ಸಾಧಿಸಲು ಅವಕಾಶ ಮಾಡಿಕೊಟ್ಟಿದ್ದು ನಾವೇ ಅಲ್ಲವೇ?  ಹಾಗಾಗಿಯೇ ಅವರು ತಮ್ಮ ನೆಲ ಹಾಗೂ ಆಟಕ್ಕೆ ಒಗ್ಗುವ ರೀತಿಯಲ್ಲಿ ನೀತಿ-ನಿಯಮಾವಳಿಗಳನ್ನು ಅತ್ಯಂತ ಚಾಣಾಕ್ಷತನದಿಂದ ಮಾರ್ಪಾಡು ಮಾಡಿಕೊಂಡಿದ್ದಾರೆ.

 

ನಮಗೆ ಪಶ್ಚಿಮ ಅಥವಾ ಆಸ್ಟ್ರೇಲಿಯಾದ ಹಾಕಿ ತರಬೇತುದಾರರೇ ಅಂತಿಮ ಎಂಬಂತೆ ಆಗಿಬಿಟ್ಟಿದೆ. ಹಾಗಾಗಿಯೇ ಅವರು ಆಡುವ ಹಾಕಿಯೇ ನಿಜವಾದ ಹಾಕಿ ಎಂಬುದು ನಮ್ಮ ಬಲವಾದ ನಂಬಿಕೆ. ಇದರಿಂದಾಗಿ ಸಹಜವಾಗಿಯೇ ಆ ದೇಶಗಳ ಹಾಕಿ ಆಟಗಾರರಿಗೆ `ಹೀರೋ~ ಇಮೇಜು ಪ್ರಾಪ್ತವಾಗಿದೆ. ಆದರೆ ನಮ್ಮ ಆಟಗಾರರ ಪಾಡು ನೋಡಿ, ವಿದೇಶ ಪ್ರವಾಸ ಮುಗಿಸಿಕೊಂಡು ಇವರೆಲ್ಲ ಬರಿಗೈಲಿ ವಾಪಸಾಗುವ ದೃಶ್ಯವನ್ನು ನಾವು ದಯನೀಯವಾಗಿ ನೋಡಬೇಕಾಗಿ ಬಂದಿದೆ.ನಮ್ಮ ದೇಶದಲ್ಲಿರುವ ಬಹುತೇಕ ಕ್ರೀಡಾ ಸಂಸ್ಥೆಗಳಲ್ಲಿ ದಶಕಗಳಿಂದಲೂ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತ ಬಂದಿವೆ. ಈ ಹಿನ್ನೆಲೆಯಲ್ಲಿ ನೋಡಿದರೆ, ಉದ್ದೇಶಿತ ಕ್ರೀಡಾ ಮಸೂದೆಯು ಈ ಸಂಸ್ಥೆಗಳನ್ನು ನಿಯಂತ್ರಿಸಲು ಶಿಫಾರಸು ಮಾಡಬಹುದಿತ್ತು ಎನ್ನುವುದರಲ್ಲಿ ಅನುಮಾನ ಇಲ್ಲ. ವಿಪರ್ಯಾಸವೆಂದರೆ ನಮ್ಮಲ್ಲಿ ಕ್ರೀಡೆ ಎನ್ನುವುದು ರಾಜ್ಯಕ್ಕೆ ಸಂಬಂಧಪಟ್ಟ ವಿಷಯವಾಗಿದೆ.

 

ಶರದ್ ಪವಾರ್, ಪ್ರಫುಲ್ ಪಟೇಲ್ ಹಾಗೂ ರಾಜೀವ್ ಶುಕ್ಲಾರಂಥ ವ್ಯಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಮಸೂದೆಯನ್ನು ಖಡಾಖಂಡಿತವಾಗಿ ವಿರೋಧಿಸುತ್ತಿದ್ದಾರೆ.  ಮಸೂದೆಯಲ್ಲಿ ಸ್ವಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಎಷ್ಟೆಲ್ಲ ಹಣ ಖರ್ಚು ಮಾಡಲಾಗಿದೆ ಎನ್ನುವುದಕ್ಕೆ ಸ್ವತಃ ಬಿಸಿಸಿಐ ಉತ್ತರ ಕೊಡಬೇಕಾಗುತ್ತದೆ.   (ನಿಮ್ಮ ಅನಿಸಿಕೆಗಳನ್ನು ಕಳಿಸಿ:  editpagefeedback@prajavani.co.in)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.