ಶುಕ್ರವಾರ, ಜುಲೈ 1, 2022
28 °C

ಗಡಿಯೊಳಗಿನ ವೈರಿಯತ್ತ ಅಕ್ಷೋಹಿಣಿ ಕ್ಷಿಪಣಿ

ನಾಗೇಶ್ ಹೆಗಡೆ Updated:

ಅಕ್ಷರ ಗಾತ್ರ : | |

ಗಡಿಯೊಳಗಿನ ವೈರಿಯತ್ತ ಅಕ್ಷೋಹಿಣಿ ಕ್ಷಿಪಣಿ

ಹೊಸ  ವರ್ಷದ ಸ್ವಾಗತಕ್ಕೆ ಆರು ದಿನ ಬಾಕಿ ಇದ್ದಾಗಲೇ ಭಾರತ ಭರ್ಜರಿ ಪಟಾಕಿಯನ್ನು ಆಕಾಶಕ್ಕೆ ಹಾರಿಸಿ ಹರ್ಷದ ಹೊನಲನ್ನೇ ಚಿಮ್ಮಿಸಿದೆ. ತಲೆಯಲ್ಲಿ ಪರಮಾಣು ಬಾಂಬನ್ನು ಹೊತ್ತು ವಾಯುಮಂಡಲದ ಆಚೆಗೆ ಏರಿ ಹೋಗಿ ಅಲ್ಲಿಂದ ಬೇಕೆಂದ ದಿಕ್ಕಿಗೆ ಗುಂಡುಕಲ್ಲಿನಂತೆ ಬೀಳಬಲ್ಲ ‘ಅಗ್ನಿ-5’ (ಅಂದರೆ ‘ಅಗ್ನಿ’ಯ ಐದನೇ ಅವತಾರ, ‘ಅಗ್ನಿಪಂಚಮ’) ಕ್ಷಿಪಣಿ ಸಾಧನೆ ಮತ್ತೊಮ್ಮೆ ಸಾಬೀತಾಗಿದೆ.ಈ ಹಿಂದೆ ಮೂರು ಬಾರಿಯೂ ಇದು ಪ್ರಯೋಗಾರ್ಥ ಯಶಸ್ವಿಯಾಗಿ ನೆಗೆದು ಸಾವಿರಾರು ಕಿ.ಮೀ. ಆಚಿನ ಸಮುದ್ರಕ್ಕೆ ಬಿದ್ದಿತ್ತು. ಈ ಬಾರಿಯ ವಿಶೇಷ ಏನೆಂದರೆ, ಅದನ್ನು ದೊಡ್ಡ ಪಿಪಾಯಿಯಂತೆ ಟ್ರಕ್ ಮೇಲೆ ಕೂರಿಸಿ ಹಾರಿಸಿದ್ದರು. ದಿಲ್ಲಿಯ ಗಣತಂತ್ರ ಪರೇಡಿನ ಟ್ಯಾಬ್ಲೊ ಮೇಲೆ ಕೂತಂತೇ ಹಾರಿದ ಹಾಗೆ.ಹೀಗೆ ಸಂಚಾರಿ ವಾಹನದಲ್ಲಿ ಇಟ್ಟು ಹಾರಿಸಲು ಕಾರಣ ಇಷ್ಟೆ: ಭಾರತ ಎಂದೂ ತಾನಾಗಿ ಮೊದಲ ಪರಮಾಣು ಶಸ್ತ್ರವನ್ನು ಬಳಸುವುದಿಲ್ಲ ಎಂದು ಪಣ ತೊಟ್ಟಿದೆ. ಹಾಗೆಂದು, ಬೇರೆ ಯಾರಾದರೂ ನಮ್ಮ ಮೇಲೆ ಅಣ್ವಸ್ತ್ರ ಪ್ರಯೋಗಿಸಿದರೆ ‘ನಾವು ಸರ್ವನಾಶವಾದರೂ ನಿಮ್ಮನ್ನು ಸುಡುತ್ತೇವೆ’ ಎಂಬ ಎಚ್ಚರಿಕೆಯನ್ನು ಅಕ್ಕಪಕ್ಕದವರಿಗೆ ಬಿಂಬಿಸಬೇಕಿದೆ.ಇದಕ್ಕೆ ‘ಮರುದಾಳಿ ಸಾಮರ್ಥ್ಯ’ ಎನ್ನುತ್ತಾರೆ. ನಮ್ಮ ಪರಮಾಣು ಕ್ಷಿಪಣಿಗಳು ಮೊದಲ ದಾಳಿಯ ನಂತರವೂ ಸುರಕ್ಷಿತ ಉಳಿದರೆ ಮಾತ್ರ ಅದು ಸಾಧ್ಯವಾಗುತ್ತದೆ. ಅಂದರೆ, ನಮ್ಮ ಅಣ್ವಸ್ತ್ರ ಎಲ್ಲಿದೆ ಎಂಬುದು ಗೊತ್ತಾಗಬಾರದು. ಇಂದು ಇಲ್ಲಿದೆ, ನಾಳೆ ಇನ್ನೆಲ್ಲೋ ಇದೆ ಅನ್ನುವಂತಿರಬೇಕು. ನಮ್ಮ ‘ಅಗ್ನಿ ಪಂಚಮ’ ಈಗ ಎಲ್ಲೆಂದರಲ್ಲಿ ಠಿಕಾಣಿ ಹೂಡಬಲ್ಲ ಜಂಗಮ ಬಾಂಬ್ ಎಂಬುದನ್ನೂ ತೋರಿಸಿದಂತಾಗಿದೆ.ಅಗ್ನಿ ಮಾದರಿಯನ್ನು ‘ಗುಂಡು ಕ್ಷಿಪಣಿ’ (ಬ್ಯಾಲಿಸ್ಟಿಕ್ ಮಿಸೈಲ್) ಎನ್ನುತ್ತಾರೆ.  ದೊಡ್ಡ ಗುಂಡನ್ನು ಮೇಲಕ್ಕೆ, ಗಗನದಾಚೆಗೆ ಎಸೆದು ಅದು ತನ್ನ ತೂಕದಿಂದಾಗಿಯೇ ಕೆಳಕ್ಕೆ ಬೀಳುವಂತೆ ಮಾಡುವ ತಂತ್ರವದು. ನಿಂತಲ್ಲಿಂದ ಎತ್ತರಕ್ಕೆ ನೆಗೆಯುವ ಸಾಮರ್ಥ್ಯ ಅದಕ್ಕೆ ಮುಖ್ಯವೇ ಶಿವಾಯ್, ಗುರಿ ಅಷ್ಟೊಂದು ನಿಖರವಾಗಿರುವುದಿಲ್ಲ. ಕ್ಷಿಪಣಿ ನಿಂತಿರುವ ಕೋನವನ್ನು ಕೊಂಚ ಬದಲಿಸಿದರೆ ಅದು ಹಾರಿಸಿದ ಗುಂಡು ಬೀಜಿಂಗ್ ಬದಲು ಟೋಕಿಯೊ ಇಲ್ಲವೆ ಮಾಸ್ಕೊ ಇಲ್ಲವೆ ಮೊಂಗೋಲಿಯಾದ ರಾಜಧಾನಿ ಉಲಾನ್‌ಬಾತರ್ ಅಥವಾ ಈಜಿಪ್ತಿನ ಪಿರಮಿಡ್ಡೊ ಎಲ್ಲೋ ಬೀಳಬಹುದು.ಗುಂಡುಕ್ಷಿಪಣಿಯ ಬದಲು ವಿಮಾನದಂತೆ ನೆಲಕ್ಕೆ ಸಮಾನಾಂತರವಾಗಿ ದಿಕ್ಕನ್ನು ಬದಲಿಸುತ್ತ ಸಾಗುವ ಕ್ಷಿಪಣಿಗೆ ‘ಕ್ರೂಸ್ ಮಿಸೈಲ್’ ಎನ್ನುತ್ತಾರೆ. ಇದಕ್ಕೆ ವಿಮಾನದಂತೆ ಪುಟ್ಟ ರೆಕ್ಕೆ, ಚಿಕ್ಕ ಚುಕ್ಕಾಣಿ ಕೂಡ ಇರುತ್ತದೆ. ನೆಲ, ಜಲ, ವಾಯು ಮೂರರಿಂದಲೂ ಇದನ್ನು ಚಿಮ್ಮಿಸಬಹುದು. ಏಳೆಂಟು ನೂರು ಕಿ.ಮೀ. ದೂರದವರೆಗೆ ಚಲಿಸಿಯೂ ನಿರ್ದಿಷ್ಟ ಗುರಿ ತಲುಪುವಂತಿರಬೇಕು.ಪರಮಾಣು ಬಾಂಬನ್ನು ಹೊತ್ತು ಸಾಗಬಲ್ಲ ‘ನಿರ್ಭಯ’ ಹೆಸರಿನ ಅಂಥ ಕ್ರೂಸ್ ಕ್ಷಿಪಣಿಯನ್ನು ತಯಾರಿಸಲು ನಮ್ಮ ವಿಜ್ಞಾನಿಗಳು ಶ್ರಮಿಸುತ್ತಲೇ ಇದ್ದಾರೆ. ಹಿಂದಿನ ಮೂರು ಯತ್ನಗಳು ವಿಫಲವಾಗಿದ್ದವು. ಮೊನ್ನೆ ಅಗ್ನಿಯನ್ನು ಉಡಾಯಿಸುವ ಎರಡು ದಿನ ಮೊದಲು ಅದೇ ಒಡಿಶಾ ಕರಾವಳಿಯಲ್ಲಿ ‘ನಿರ್ಭಯ’ವನ್ನು ಹಾರಿಸುವ ನಾಲ್ಕನೆಯ ಯತ್ನ ನಡೆದಿತ್ತು. ಅದೂ ದಿಕ್ಕು ತಪ್ಪಿ ಚಿಮ್ಮಿದ್ದರಿಂದ ಎರಡೇ ನಿಮಿಷಗಳಲ್ಲಿ ಅದನ್ನು ಸ್ಫೋಟಿಸಲಾಯಿತು.ಅಣ್ವಸ್ತ್ರ ಹೊತ್ತಿರುವ ಕ್ರೂಸ್ ಕ್ಷಿಪಣಿ ಅತ್ಯಂತ ಕರಾರುವಾಕ್ಕಾಗಿ ಕೆಲಸ ಮಾಡಬೇಕು. ವೈರಿಯ ರಡಾರ್‌ಗೆ ಗೊತ್ತಾಗದ ಹಾಗೆ ನೆಲಕ್ಕೆ ಸಮೀಪದಲ್ಲೇ ಅತಿ ವೇಗದಲ್ಲಿ ಸಾಗಬೇಕಾದ ಇದು ದಿಕ್ಕು ತಪ್ಪಿ ನಮ್ಮ ರಾಷ್ಟ್ರದಲ್ಲೇ ಸಿಡಿದರೆ? ಪಾಕಿಸ್ತಾನದ ಬಳಿ ‘ಬಾಬರ್’ ಕ್ರೂಸ್ ಕ್ಷಿಪಣಿಗಳಿವೆ. ರಷ್ಯ ಮತ್ತು ಚೀನಾದ ತಂತ್ರಜ್ಞಾನದಿಂದ ತಯಾರಾಗಿದ್ದು. ಅವು ದಾರಿಯಲ್ಲಿ ಸಾಗುತ್ತಲೆ ಕಿರು ರೆಕ್ಕೆಗಳನ್ನು ಬಿಚ್ಚಿಕೊಂಡು 700 ಕಿ.ಮೀ. ದೂರ ಬಂದು ಸ್ಫೋಟವಾಗುತ್ತವೆ.ನಮ್ಮಲ್ಲೂ ರಷ್ಯದ ನೆರವಿನಿಂದ ನಿರ್ಮಸಲಾದ ‘ಬ್ರಹ್ಮೋಸ್’ ಕ್ರೂಸ್ ಕ್ಷಿಪಣಿ ಇದೆ (ಬೆಂಗಳೂರಿನ ಬಸವನಗುಡಿ ನ್ಯಾಶನಲ್ ಕಾಲೇಜಿನ ಮೈದಾನದಲ್ಲಿ ನಾಳೆಯಿಂದ ನಾಲ್ಕು ದಿನ ಅವುಗಳ ಮಾಡೆಲ್‌ಗಳನ್ನು ನೋಡಬಹುದು; ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅಲ್ಲಿ ವಿವಿಧ ಏರೋಸ್ಪೇಸ್ ಸಾಧನ ಸಾಧನೆಗಳ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ).ನಾವು ಪಾಕಿಸ್ತಾನಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ನಮ್ಮದೇ ‘ಅರಿಹಂತ್’ ಪರಮಾಣು ಇಂಧನ ಚಾಲಿತ ಜಲಾಂತರ್ಗಾಮಿಯನ್ನು ನಿರ್ಮಿಸಿ ಈ ವರ್ಷ ಆಗಸ್ಟ್‌ನಲ್ಲಿ ಚಾಲನೆ ಕೊಟ್ಟಿದ್ದೇವೆ. ರಷ್ಯದಿಂದ ಖರೀದಿಸಿದ ‘ಚಕ್ರ’ ಜಲಾಂತರ್ಗಾಮಿಯ ಮಾದರಿಯಲ್ಲಿ ನಾವೇ ಸ್ವಂತ ನಿರ್ಮಿಸಿದ್ದು. ಆಳ ಸಮುದ್ರದಿಂದ ಆಕಾಶಕ್ಕೆ ನೆಗೆಯಬಲ್ಲ ಪರಮಾಣು ಗುಂಡು ಕ್ಷಿಪಣಿಯನ್ನು ಅದರಲ್ಲಿ ಹೂಡಿಡಬಹುದು. ಕ್ರೂಸ್ ಕ್ಷಿಪಣಿಯ ಹಾಗೆ ನೀರೊಳಕ್ಕೇ ಸಾಗಬಲ್ಲ ಟಾರ್ಪಿಡೊ ಇವೆಯಾದರೂ ವೈರಿ ಹಡಗುಗಳ ನಿರ್ನಾಮವಷ್ಟೇ ಅವುಗಳ ಗುರಿ ಆಗಿರುವುದರಿಂದ ಅದರಲ್ಲಿ ಅಣ್ವಸ್ತ್ರ ಹೂಡಿರುವುದಿಲ್ಲ. ಒಂದು ದೇಶದ ನೆಲಸೇನೆ, ಜಲಸೇನೆ, ವಾಯುಸೇನೆ ಹೀಗೆ ಮೂರರ ಬಳಿಯೂ ಪರಮಾಣು ಶಸ್ತ್ರಾಸ್ತ್ರ ಇದ್ದರೆ ಅದಕ್ಕೆ ‘ತ್ರಿಬಲ’ ಮಿಲಿಟರಿ ಎನ್ನುತ್ತಾರೆ. ನಮ್ಮಲ್ಲಿ ವೈರಿಯ ಮೇಲೆ ಬಾಂಬ್ ಹಾಕಬಲ್ಲ ವಿಮಾನಗಳಿವೆ, ಜಲಾಂತರ್ಗಾಮಿ ಇದೆ. ನೆಲದಿಂದಲೇ ಚಿಮ್ಮಿಸಬಲ್ಲ ಅಣ್ವಸ್ತ್ರ ತನಗೂ ಬೇಕೆಂದು ನಮ್ಮ ಆರ್ಮಿ ಒತ್ತಡ ಹಾಕುತ್ತಿದೆ. ಅದಕ್ಕೆ ‘ನಿರ್ಭಯ’ ಸದ್ಯಕ್ಕಿಲ್ಲ.ಮಿಲಿಟರಿ ತಂತ್ರಜ್ಞಾನವನ್ನು ಬದಿಗಿಡಿ; ತೋಳ್‌ಬಲ ಎಷ್ಟೇ ಇದ್ದರೂ ಅದರ ಅಂತಿಮ ಗುರಿ ವಿನಾಶವೇ ತಾನೆ? ಮನುಷ್ಯನ ಬುದ್ಧಿಶಕ್ತಿಯ ಪರಾಕಾಷ್ಠೆಯನ್ನು ತೋರಿಸಬಲ್ಲ ಅದ್ಭುತ ಸಾಧನೆಗಳು 2016ರಲ್ಲಿ ಸಾಕಷ್ಟು ಆಗಿವೆ. ಅವುಗಳಲ್ಲಿ ಅತ್ಯಂತ ಮಹತ್ವದ ವೈಜ್ಞಾನಿಕ ಸಾಧನೆ ಎಂದರೆ ಜೀನ್ ಎಡಿಟಿಂಗ್.ಯಾವುದೇ ಜೀವಿಯ ಹುಟ್ಟುಗುಣವನ್ನು ಅದು ಹುಟ್ಟುವ ಮೊದಲೇ ತಿದ್ದುಪಡಿ (ಎಡಿಟ್) ಮಾಡಬಲ್ಲ ಸಾಮರ್ಥ್ಯ ಮನುಷ್ಯನಿಗೆ ಎಟಕಿದೆ. ಉದಾಹರಣೆಗೆ, ಮನುಷ್ಯರಿಗೆ ಅನುಕೂಲವಾಗುವಂತೆ ಸೊಳ್ಳೆಯ ಗುಣಾಣುವನ್ನು ತಿದ್ದುಪಡಿ ಮಾಡಬಹುದು. ಅಂಥ ಹೊಸ ಸೊಳ್ಳೆಯ ಶರೀರದೊಳಕ್ಕೆ ಮಲೇರಿಯಾ ವೈರಾಣು ತೂರಿಕೊಂಡರೆ ಅಲ್ಲೇ ವೈರಾಣು ಜೀರ್ಣವಾಗಿಬಿಡುತ್ತದೆ. ಆ ಸೊಳ್ಳೆ ಯಾರನ್ನೇ ಕಚ್ಚಿದರೂ ಮಲೇರಿಯಾ ಭಯವಿಲ್ಲ.ಇದು ಕುಲಾಂತರಿ ಅಲ್ಲ. ಏಕೆಂದರೆ, ಇದರೊಳಕ್ಕೆ ಬೇರೊಂದು ಕುಲದ ಜೀವಿಯ ಗುಣಾಣುವನ್ನು ತೇಪೆ ಹಚ್ಚುವುದಿಲ್ಲ. ಇದ್ದುದನ್ನೇ ತಿದ್ದಿ ಬದಲಿಸಬಹುದು. ಸ್ವಾರಸ್ಯದ ಸಂಗತಿಯೆಂದರೆ ಇದು ಮನುಷ್ಯನಿಗೆ ಹೊಳೆದ ಐಡಿಯಾ ಅಲ್ಲವೇ ಅಲ್ಲ. ಏಕಾಣುಜೀವಿಗಳು ಕ್ರಿಸ್ಪ್‌ಆರ್ (crispr) ಎಂಬ ಅಸ್ತ್ರವನ್ನು ವೈರಾಣುಗಳ ಮೇಲೆ ಪ್ರಯೋಗಿಸಲೆಂದು ಅನಾದಿ ಕಾಲದಿಂದಲೂ ಬಳಸುತ್ತಿವೆ. ಇದು ಒಂಥರಾ ಗುರಿ ನಿರ್ದೇಶಿತ ಕ್ಷಿಪಣಿಯ ಹಾಗೆಯೇ ಕೆಲಸ ಮಾಡುತ್ತದೆ. ವೈರಿಯ ಬ್ರಹ್ಮಸೂತ್ರದ ಒಳಕ್ಕೆ ಒಂದು ಕಿಣ್ವಕಣವನ್ನು ಸರಿಯಾಗಿ ತೂರಿಸಿದರೆ ಸಾಕು, ವೈರಿಯ ಚಹರೆ ಬದಲಾಗುತ್ತದೆ.ಈ ಬಗೆಯ ಗುಣಾಣು ತಿದ್ದುಪಡಿ ತಂತ್ರವನ್ನು ಉಪಯೋಗಿಸಿ ಚೀನೀಯರು ಮನುಷ್ಯನ ಭ್ರೂಣದ ವಂಶವಾಹಿಯನ್ನೇ ತಿದ್ದಿದ್ದಾರೆ. ಈಗಿರುವ ಕಾಯಿದೆಗಳ ಪ್ರಕಾರ, ಅಂಥ ಭ್ರೂಣವನ್ನು ತಾಯಿಯ ಗರ್ಭದಲ್ಲಿ ಇಡುವಂತಿಲ್ಲ, ಸುಮ್ಮನೆ ಪ್ರಯೋಗಕ್ಕೆಂದು ಗಾಜಿನ ಬಟ್ಟಲಲ್ಲಿ ಬೆಳೆಸಿ ನೋಡಬಹುದು. ಆದರೆ ನಮಗೆ ಬೇಕಿದ್ದಂಥ ಮಗು, ಅಂದರೆ ‘ಡಿಸೈನರ್ ಬೇಬಿ’ಯನ್ನು ಸೃಷ್ಟಿಸುವ ತಂತ್ರಜ್ಞಾನ ಕೈಗೆಟುಕಿತು ಎಂಬಂತೆ ಈ ವಿಷಯಕ್ಕೆ ಪ್ರಚಾರ ಸಿಕ್ಕಿದೆ.ಸದ್ಯಕ್ಕೆ ಚೀನೀಯರು ತಮ್ಮ ಸಂಶೋಧನೆಯನ್ನು ಲೋಕಕಲ್ಯಾಣಕ್ಕಷ್ಟೇ ಸೀಮಿತಗೊಳಿಸಿದ್ದಾರೆ.  ಅಂದರೆ, ಮುಂದೆ ಹುಟ್ಟುವ ಮಗುವಿಗೆ ಏಡ್ಸ್ ರೋಗ ಬಾರದ ಹಾಗೆ ಅದರ ರಕ್ತಗುಣವನ್ನೇ ತಿದ್ದುಪಡಿ ಮಾಡಿದ್ದಾರೆ. ಹಾಗಿದ್ದರೆ ಆ ಮಗು ಬೆಳೆದು ಯಾವುದೇ ಲಂಗುಲಗಾಮಿಲ್ಲದೆ ಲೈಂಗಿಕ ಅನಾಚಾರ ಮಾಡುತ್ತ ಹೋಗಬಹುದೆ? ಅದು ವಿವಾದದ ಮೊದಲ ಮೊಳಕೆ ಆಗಬಹುದು.ಇನ್ನು, ಮುಪ್ಪೇ ಬಾರದ ಮನುಷ್ಯಜೀವಿಯನ್ನು ಸೃಷ್ಟಿ ಮಾಡಿದರೆ (ಜೀನ್ ತಿದ್ದುಪಡಿಯಿಂದ ಅದೂ ಸಾಧ್ಯ ಎಂದು ಇಲಿಗಳ ಮೇಲೆ ನಡೆಸಿದ ಪ್ರಯೋಗಗಳಲ್ಲಿ ಗೊತ್ತಾಗಿದೆ) ಭೂಮಿಯ ಜನಸಂಖ್ಯೆ ಎಲ್ಲಿಗೆ ಹೋಗಿ ಮುಟ್ಟೀತು? ಅಂಥ ಚಿರಾಯುಗಳ ಸೃಷ್ಟಿಯ ನೈತಿಕತೆ ವಿಷಯ ನಮ್ಮ ತಾಳಮದ್ದಲೆಯ ಅರ್ಥಧಾರಿಗಳಿಗೆ ಸಿಕ್ಕರೆ ಅಹೋರಾತ್ರಿ ಇದರ ಒಳಿತು ಕೆಡುಕುಗಳನ್ನು ಚರ್ಚಿಸಬಹುದು.ಮನುಷ್ಯ ಜೀವಿಯ ಗುಣಗಳನ್ನು ತಿದ್ದುವ ಮಾತು ಹಾಗಿರಲಿ, ಸೊಳ್ಳೆಯ ಬ್ರಹ್ಮಸೂತ್ರದಲ್ಲಿ ಹಸ್ತಕ್ಷೇಪ ಮಾಡುವುದರ ನೈತಿಕತೆಯೂ ಚರ್ಚಾಸ್ಪದವೇ ತಾನೆ? ಮಲೇರಿಯಾ ಕಾಯಿಲೆ ಇದ್ದುದರಿಂದಲೇ ಮನುಷ್ಯರ ಸಂಖ್ಯೆ ಒಂದು ಮಿತಿಯಲ್ಲಿ ಇದೆ. ಈಗಲೂ ಪ್ರತಿವರ್ಷ ನಾಲ್ಕಾರು ಲಕ್ಷ ಜನರು ಮಲೇರಿಯಾ ಜ್ವರಕ್ಕೆ ನಲುಗಿ ಸಾಯುತ್ತಿದ್ದಾರೆ.ಹಿಂದಿನ ಶತಮಾನಗಳಲ್ಲಿ ಸೊಳ್ಳೆಗಳನ್ನು ದೂರವಿಡುವ ತಂತ್ರಗಳೂ ಗೊತ್ತಿರಲಿಲ್ಲ; ಮಲೇರಿಯಾದ ಭೀಕರತೆಯನ್ನು ತಗ್ಗಿಸಬಲ್ಲ ಔಷಧಗಳೂ ಇರಲಿಲ್ಲ. ಅಂದಾಜಿನ ಪ್ರಕಾರ ಸುಮಾರು 60 ಶತಕೋಟಿ ಜನರೇ ಹುಟ್ಟದಂತೆ ಅದು ತಡೆದಿದೆ.ಹೀಗೆ, ನಿಸರ್ಗದ ಸಮತೋಲವನ್ನು ಕಾಯ್ದುಕೊಂಡ ಸೊಳ್ಳೆಯ ಗುಣಾಣುಗಳನ್ನು ನಾವು ತಿದ್ದುಪಡಿ ಮಾಡುವುದು ಸರಿಯೆ? ಸರಿ ಎಂತಲೇ ಈ ಕ್ಷಣಕ್ಕೆ ವಾದಿಸೋಣ.ಹಾಗಿದ್ದರೆ ಮಲೇರಿಯಾ ನಿಯಂತ್ರಣವಷ್ಟೇ ಏಕೆ? ಡೆಂಗೇ, ಚಿಕೂನ್‌ಗುನ್ಯ, ಹಳದಿಜ್ವರ, ಝೀಕಾ, ಮಿದುಳುಜ್ವರ ಹೀಗೆ ಸುಮಾರು ಹದಿನೈದಕ್ಕೂ ಹೆಚ್ಚು ಬಗೆಯ ಕಾಯಿಲೆಗಳನ್ನು ತರಬಲ್ಲ ರೋಗಾಣುಗಳನ್ನು ಸೊಳ್ಳೆಗಳು ತಮ್ಮ ಶರೀರದಲ್ಲಿ ಹೊತ್ತು ಹಾರುತ್ತಿರುತ್ತವೆ. ಅಂದಮೇಲೆ ಮನುಷ್ಯರ ವಾಸನೆಯೇ ಅವಕ್ಕೆ ವಾಕರಿಕೆ ತರುವಂತೆ ಮಾಡಬಹುದಲ್ಲ? ಯಾಕೆ ಕೇವಲ ಮಲೇರಿಯಾ ವಿರುದ್ಧ ಮಾತ್ರ ಶಸ್ತ್ರ ಎತ್ತಿದ್ದು?ಈ ಪ್ರಶ್ನೆಗೆ ಉತ್ತರಗಳು ವಿಜ್ಞಾನ ರಂಗವನ್ನು ಮೀರಿ ಆಚೀಚೆಗೆ ಹರಡಿಕೊಂಡಿವೆ. ಸೊಳ್ಳೆಗಳು ಇದ್ದುದರಿಂದಲೇ ಔಷಧ ಉದ್ಯಮ ಬಹುದೊಡ್ಡ ಪ್ರಮಾಣದಲ್ಲಿ ಬೆಳೆದಿದೆ.ಕೋಟ್ಯಂತರ ಜನರು ಸೊಳ್ಳೆಗಳಿಂದಾಗಿಯೇ ಉತ್ತಮ ಬದುಕನ್ನು ಕಂಡುಕೊಂಡಿದ್ದಾರೆ. ನಮ್ಮ ದೇಶದಲ್ಲೇ ಕಾಣುವುದಿಲ್ಲವೆ? ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಿಷೇಧಿಸಲಾದ 51 ಬಗೆಯ ಪೀಡೆನಾಶಕ ವಿಷಗಳ ಬಳಕೆಯನ್ನು ನಮ್ಮ ದೇಶದಲ್ಲಿ ‘ಈಗಲೂ ಮುಂದುವರೆಸುವ ಅನಿವಾರ್ಯತೆ ಇದೆ’ ಎಂದು ಈ ತಿಂಗಳ ಆರಂಭದಲ್ಲಿ ಕೇಂದ್ರ ಸರ್ಕಾರ ದಿಲ್ಲಿಯ ಉಚ್ಚ ನ್ಯಾಯಾಲಯಕ್ಕೆ ಹೇಳಿಕೆ ನೀಡಿತು.ತಜ್ಞರ ಸಮಿತಿಯ ಶಿಫಾರಸಿನ ಪ್ರಕಾರವೇ ತಾನು ಹಾಗೆ ಮಾಡುತ್ತಿದ್ದೇನೆ ಎಂದು ಕೂಡ ತಿಳಿಸಿತು. ಆ ತಜ್ಞರ ಸಮಿತಿಯಲ್ಲಿ ವಿಷ ಉತ್ಪಾದಿಸುವ ಕಂಪನಿಗಳ ಪ್ರತಿನಿಧಿಗಳೇ ತುಂಬಿಕೊಂಡಿದ್ದಾರೆ ಎಂಬುದು ಬೇರೆ ಮಾತು. ವಿಷಗಳನ್ನು ಮಾರುವುದು, ಆ ವಿಷಗಳ ದುಷ್ಪರಿಣಾಮಗಳಿಂದಾಗಿ ಜನರು ಕಾಯಿಲೆ ಬೀಳುವುದು, ಅದರಿಂದಾಗಿ ಔಷಧಗಳಿಗೆ, ವೈದ್ಯರಿಗೆ ಹಾಗೂ ಆಸ್ಪತ್ರೆಗಳಿಗೆ ಬೇಡಿಕೆ ಹೆಚ್ಚಿರುವುದು, ಅದರಿಂದಾಗಿ ದೇಶದ ಜಿಡಿಪಿಯಲ್ಲಿ ಹೆಚ್ಚಳ ಕಾಣುತ್ತಿರುವುದು ಎಲ್ಲವೂ ಕಣ್ಣೆದುರಿಗೇ ಇರುವಾಗ ಸೊಳ್ಳೆಗಳನ್ನು ನಿರ್ನಾಮ ಮಾಡುವುದೆಂದರೆ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕೊಯ್ದ ಹಾಗೆ ತಾನೆ?ನಮ್ಮ ಪೂರ್ವ ಪಶ್ಚಿಮಗಳ ದೊಡ್ಡ ದೇಶಗಳನ್ನು ಗುರಿ ಇಟ್ಟುಕೊಂಡು ಗುಂಡುಕ್ಷಿಪಣಿಯನ್ನು ನಾವು ಸಿದ್ಧಪಡಿಸಿದೆವು. ಹಾಗೆಯೇ ದಕ್ಷಿಣಕ್ಕಿರುವ ಪುಟ್ಟ ಶ್ರೀಲಂಕಾ ಸಾಧಿಸಿದ ಗುರಿಯೂ ನಮಗೆ ಮಾದರಿಯಾಗಬೇಕು. ಶ್ರೀಲಂಕಾ ಇದೀಗ ಮಲೇರಿಯಾವನ್ನು ಸಂಪೂರ್ಣ ನಿರ್ನಾಮ ಮಾಡಿದ ಏಷ್ಯಾದ ಮೊದಲ ದೇಶವೆಂದು ಮೂರು ತಿಂಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಶಾಭಾಸ್‌ಗಿರಿ ಪಡೆದಿದೆ. ಗಡಿಯಾಚಿನ ವೈರಿಗಿಂತ ಗಡಿಯೊಳಗಿನ ವೈರಿಯನ್ನು ಮೊದಲು ಮಟ್ಟ ಹಾಕಬೇಕಲ್ಲವೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.