ಭಾನುವಾರ, ಜೂನ್ 13, 2021
20 °C

ಗಾಂಧಿ ನಂತರದ ಗಾಂಧಿವಾದಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳೆದ ವಾರ ಹೆಸರಾಂತ ಪರಿಸರವಾದಿ ಚಂಡಿ ಪ್ರಸಾದ್ ಭಟ್ ಅವರಿಗೆ ಗಾಂಧಿ ಶಾಂತಿ ಪ್ರಶಸ್ತಿ ಪುರಸ್ಕಾರ ಸಂದಿತು. ಭಾರತ ಸರ್ಕಾರವು ಪ್ರತಿವರ್ಷ ನೀಡುವ ಪ್ರಶಸ್ತಿ ಇದು. ತಾಂತ್ರಿಕವಾಗಿ ಅಷ್ಟೇ ‘ಪ್ರತಿ ವರ್ಷ ನೀಡುವ ಪ್ರಶಸ್ತಿ ಇದು’ ಎಂದು ಹೇಳಿದರೆ ಇನ್ನೂ ಸರಿಯಾದೀತೇನೋ? ಯಾಕೆಂದರೆ, ಯುಪಿಎ ಸರ್ಕಾರವು ಅಧಿಕಾರದಲ್ಲಿರುವ ಕಳೆದ ಹತ್ತು ವರ್ಷಗಳಲ್ಲಿ ಗಾಂಧಿ ಶಾಂತಿ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಿದ್ದು ಎರಡೇ ಸಲ.೨೦೦೫ರಲ್ಲಿ ದಕ್ಷಿಣ ಆಫ್ರಿಕಾದ ತತ್ವಜ್ಞ  ಹಾಗೂ ಚಳವಳಿಕಾರ ಡೆಸ್ಮಂಡ್ ಟುಟು ಆ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಈಗ, ಲೋಕಸಭಾ ಚುನಾವಣೆ ಹತ್ತಿರದಲ್ಲಿರುವಾಗ, ಯುಪಿಎ ಸೋಲುವುದು ಖಾತರಿ ಎನ್ನುವಂಥ ಪರಿಸ್ಥಿತಿ ಇರುವಾಗ ಚಂಡಿ ಪ್ರಸಾದ್ ಭಟ್ ಅವರಿಗೆ ಪ್ರಶಸ್ತಿ ನೀಡಲಾಗಿದೆ.ಗಾಂಧಿ ಶಾಂತಿ ಪ್ರಶಸ್ತಿಯ ಯೋಚನೆ ಹುಟ್ಟಿದ್ದು ೧೯೯೪ರಲ್ಲಿ, ಮಹಾತ್ಮ ಗಾಂಧಿ­ಯವರ ೧೨೫ನೇ ಜನ್ಮದಿನದ ಸಂದರ್ಭದಲ್ಲಿ. ಆಗ ಪಿ.ವಿ. ನರಸಿಂಹ ರಾವ್ ಪ್ರಧಾನಿ­ಯಾ­ಗಿದ್ದರು. ವಿದ್ವತ್‌ಪೂರ್ಣ ವ್ಯಕ್ತಿಯಾಗಿದ್ದ ಪಿ.ವಿ. ನರಸಿಂಹ ರಾವ್ ಅವರಿಗೆ ನೆಹರು–ಗಾಂಧಿ ಪರಂಪರೆಯ ವಿಷಯ­ದಲ್ಲಿ ನಿರ್ಧರಿತ ಅಸ್ಪಷ್ಟತೆ ಇತ್ತು.೧೯೮೦ರ ದಶಕದಲ್ಲಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಇಬ್ಬರನ್ನೂ ಅಪಾರವಾಗಿ ಗೌರವಿ­ಸುತ್ತಿದ್ದರು. ಆದರೆ ೧೯೯೧ರಲ್ಲಿ ಅನಿರೀಕ್ಷಿತವಾಗಿ ಪ್ರಧಾನಿಯಾದ ಮೇಲೆ ಅವರು ತಮ್ಮದೇ ವಿಭಿನ್ನ ಹಾದಿಯಲ್ಲಿ ಸಾಗಿದರು. ಆರ್ಥಿಕ ಉದಾರೀ­ಕರಣಕ್ಕೆ ಒತ್ತುನೀಡಿದ್ದು, ಗಾಂಧಿ ಶಾಂತಿ ಪ್ರಶಸ್ತಿ ಕೊಡಮಾಡುವ ನಿರ್ಧಾರ ತೆಗೆದುಕೊಂಡಿದ್ದು ಅದಕ್ಕೆ ಉದಾಹರಣೆಗಳು.ಮಹಾತ್ಮ ಗಾಂಧಿ ಗೌರವದ ವಿಷಯದಲ್ಲಿ ನರಸಿಂಹ ರಾವ್ ನಿಷ್ಠರಾಗಿದ್ದರು ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೂ ಗಾಂಧಿ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ಕೊಡಮಾಡುವ ಅವರ ಯೋಜನೆಯ ಹಿಂದೆ ಇಂದಿರಾ ಗಾಂಧಿ ಸ್ಮರಣೆಯನ್ನು ಹತ್ತಿಕ್ಕುವ ಚಾಣಾಕ್ಷತನ  ಇದ್ದಿರ­ಬಹುದು. ರಾಜೀವ್ ಗಾಂಧಿ ಪ್ರಧಾನಿ­ಯಾದಾಗ ಮಾಡಿದ ಮೊದಲ ಕೆಲಸಗಳಲ್ಲಿ ಅವರ ತಾಯಿಯ ಹೆಸರಿನಲ್ಲಿ ಪ್ರಶಸ್ತಿ ನೀಡಲಾರಂಭಿ­ಸಿದ್ದೂ ಒಂದು. ಅದು ನೊಬೆಲ್ ಪ್ರಶಸ್ತಿಯಷ್ಟೇ ಪ್ರತಿಷ್ಠಿತವಾದದ್ದು ಎಂದು ರಾಜೀವ್ ಗಾಂಧಿ ಸರ್ಕಾರ ಹೇಳಿಕೊಂಡಿತ್ತು.ಶಾಂತಿ, ನಿಶ್ಶಸ್ತ್ರೀ­ಕರಣ, ಹಾಗೂ ಅಭಿವೃದ್ಧಿಗಾಗಿ ಇಂದಿರಾ ಗಾಂಧಿ ಪ್ರಶಸ್ತಿಯನ್ನು ನೀಡಲು ನಿರ್ಧರಿಸ­ಲಾಗಿತ್ತು. ೧೯೮೬ರಲ್ಲಿ ಮೊದಲ ಬಾರಿಗೆ ಆ ಪ್ರಶಸ್ತಿ ನ್ಯೂಯಾರ್ಕ್ ಮೂಲದ ಸಂಸತ್ ಸದಸ್ಯರಿಗೆ ಸಂದಿತು. ಆಮೇಲೆ ಆ ಪ್ರಶಸ್ತಿಗೆ ಭಾಜನರಾದವರಲ್ಲಿ ರಷ್ಯಾದ ರಾಜಕಾರಣಿ ಮಿಖಾಯಿಲ್‌ ಗೊರ್ಬಚೇವ್, ನಾರ್ವೆಯ ಮುತ್ಸದ್ದಿ ಮಹಿಳೆ ಗ್ರೊ ಹರ್ಲೆಮ್ ಬ್ರುಂಡ್ಲೆಂಟ್ ಹಾಗೂ ನಮೀಬಿಯಾದ ಸ್ವಾತಂತ್ರ್ಯ ಹೋರಾಟ­ಗಾರ ಸ್ಯಾಮ್ ನುಜೋಮಾ ಇದ್ದರು.೧೯೯೧ರಲ್ಲಿ ತಮಿಳು ಭಯೋತ್ಪಾದಕರು ರಾಜೀವ್ ಗಾಂಧಿಯವರನ್ನು ಕೊಂದರು. ಆ ವರ್ಷದ ಕೊನೆಗೆ ರಾಜೀವ್ ಗಾಂಧಿ ಅವರಿಗೇ ಮರಣೋತ್ತರವಾಗಿ ಆ ಪ್ರಶಸ್ತಿ ಘೋಷಿಸ­ಲಾಯಿತು. ನೆಹರು ಕುಟುಂಬದ ಬಗೆಗೆ ಪಿ.ವಿ. ನರಸಿಂಹ ರಾವ್ ಅವರಿಗಿದ್ದ ಮುಲಾಜು, ರಾಜೀವ್ ಹತ್ಯೆಯ ಪರಮ ಕ್ರೌರ್ಯ ಎರಡೂ ಆ ಪ್ರಶಸ್ತಿ ಘೋಷಣೆಯ ಹಿಂದೆ ಕೆಲಸ ಮಾಡಿದ್ದವು. ಮೂರು ವರ್ಷಗಳ ನಂತರ, ಗಾಂಧೀಜಿ ಅವರ ೧೨೫ನೇ ಜನ್ಮದಿನದ ಹೊತ್ತಿಗೆ ಪಿ.ವಿ. ನರಸಿಂಹ ರಾವ್ ತಮ್ಮ ಚಿಂತನೆ ಹಾಗೂ ಕ್ರಿಯೆಯಲ್ಲಿ ಆ ಮುಲಾಜನ್ನು ಮೀರಿ, ಸ್ವತಂತ್ರ ಹೆಜ್ಜೆಗಳನ್ನು ಇಡತೊಡಗಿದ್ದರು.ಗಾಂಧಿ ಶಾಂತಿ ಪ್ರಶಸ್ತಿ ಕೊಡುವ ಅವರ ಯೋಚನೆ ಅದನ್ನು ರುಜುವಾತು ಪಡಿಸಿತು. ಈ ಪ್ರಶಸ್ತಿಯ ನಗದು ಬಹುಮಾನದ ಮೊತ್ತ ಒಂದು ಕೋಟಿ ರೂಪಾಯಿ. ಇಂದಿರಾ ಗಾಂಧಿ ಪ್ರಶಸ್ತಿಯ ಮೊತ್ತ ಇದಕ್ಕೆ ಹೋಲಿಸಿದರೆ ತೀರಾ ಕಡಿಮೆ; ಕೇವಲ ೨೫ ಲಕ್ಷ ರೂಪಾಯಿ. ಈ ವ್ಯತ್ಯಾಸ ಅಕಸ್ಮಾತ್ತಾಗಿ ಆದುದಲ್ಲ. ಯಾರೋ (ಬಹುಶಃ ಖುದ್ದು ಪಿ.ವಿ. ನರಸಿಂಹ ರಾವ್) ಇನ್ಯಾರಿಗೋ (ಬಹುಶಃ ಸೋನಿಯಾ ಗಾಂಧಿ) ಇಂದಿರಾ ಗಾಂಧಿಗಿಂತ ಮಹಾತ್ಮ ಗಾಂಧಿ ದೊಡ್ಡಮನುಷ್ಯ ಎಂಬುದನ್ನು ಸ್ಪಷ್ಟಪಡಿಸಿದ ನಿರ್ಣಯ ಅದು.ಗಾಂಧಿ ಶಾಂತಿ ಪ್ರಶಸ್ತಿ ಪುರಸ್ಕಾರಕ್ಕೆ ಮೊದಲು ಭಾಜನರಾದವರು ವಸಾಹತು ವ್ಯವಸ್ಥೆಯನ್ನು ವಿರೋಧಿಸಿದ್ದ ನಾಯಕ ಜೂಲಿಯಸ್ ನೈರೇರೆ. ಆಮೇಲೆ ಆ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದವರಲ್ಲಿ ಶ್ರೀಲಂಕಾದಲ್ಲಿ ಸಮಾಜ ಸೇವೆ ಮಾಡಿದ ಎ.ಟಿ. ಅರಿಯರತ್ನೆ, ನೆಲ್ಸನ್ ಮಂಡೇಲಾ, ಕೊರೆಟ್ಟಾ ಸ್ಕಾಟ್ ಕಿಂಗ್ (ಡಾ. ಮಾರ್ಟಿನ್ ಲೂಥರ್ ಕಿಂಗ್ ಪತ್ನಿ), ಐರಿಷ್ ಶಾಂತಿದೂತ ಜಾನ್ ಹ್ಯೂಮ್ ಪ್ರಮುಖರು. ಬಾಂಗ್ಲಾದೇಶದ ಗ್ರಾಮೀಣ ಬ್ಯಾಂಕ್‌ಗೂ ಈ ಪ್ರಶಸ್ತಿ ಸಂದಿದೆ.ಇಂದಿರಾ ಗಾಂಧಿ ಹಾಗೂ ಮಹಾತ್ಮ ಗಾಂಧಿ ಹೆಸರಿನ ಈ ಎರಡು ಪ್ರಶಸ್ತಿಗಳ ಗುರಿ ಒಂದೇ ಆದರೂ ಅವು ಏಕರೂಪದ ಪ್ರಶಸ್ತಿಗಳಲ್ಲ. ಎರಡೂ ಪ್ರಶಸ್ತಿಗಳಿಗೆ ವ್ಯಕ್ತಿ ಅಥವಾ ಸಂಸ್ಥೆಯನ್ನು ಪರಿಗಣಿಸಬಹುದು. ಉಭಯ ಪ್ರಶಸ್ತಿಗಳೂ ಶಾಂತಿ ಸ್ಥಾಪನೆಗೆ ಆದ್ಯತೆ ನೀಡುತ್ತವೆ. ಆದರೆ ಇಂದಿರಾ ಗಾಂಧಿ ಪ್ರಶಸ್ತಿಯು ಅಭಿವೃದ್ಧಿಗೂ ಒತ್ತು ನೀಡುತ್ತದೆ. ಮಹಾತ್ಮ ಗಾಂಧಿ ಪ್ರಶಸ್ತಿಯು ಸಾಮಾಜಿಕ, ರಾಜಕೀಯ ಬದಲಾವಣೆ ತರುವ ನಿಟ್ಟಿನಲ್ಲಿ ಅನುಸರಿಸುವ ಅಹಿಂಸಾ ಮಾರ್ಗಕ್ಕೆ ಆದ್ಯತೆ ನೀಡುತ್ತದೆ.ಉಭಯ ಪ್ರಶಸ್ತಿಗಳಿಗೆ ಭಾಜನರಾದವರ ಪಟ್ಟಿಗಳನ್ನು ಹೋಲಿಸಿ ನೋಡಿದರೆ ನಮ್ಮ ತಿಳಿವಳಿಕೆ ಹೆಚ್ಚಾಗುತ್ತದೆ. ಇಂದಿರಾ ಗಾಂಧಿ ಪ್ರಶಸ್ತಿಯು ತುಸು ಹೆಚ್ಚು ರಾಜಕೀಯವಾದದ್ದು. ವರ್ಷಗಳಿಂದ ಆಯ್ಕೆಗಾರರು ಅದ್ಭುತ ಎನ್ನುವಂಥ ಕೆಲವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ವರ್ಣಭೇದ ನೀತಿಗಾಗಿ ಹೋರಾಡಿದ ಟ್ರೆವರ್ ಹಡಲ್‌ಸ್ಟನ್ ಹಾಗೂ ಕೀನ್ಯಾದ ಪರಿಸರವಾದಿ ವಾಂಗರಿ ಮಥಾಯ್ ತರಹದವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಅದಕ್ಕೆ ಉದಾಹರಣೆ.ಹಮೀದ್ ಕರ್ಜೈ ಅಥವಾ  ಶೇಖ್ ಹಸೀನಾ ಅವರ ಸರ್ಕಾರಗಳ ಜೊತೆ ನಿಕಟ ಬಾಂಧವ್ಯಗಳನ್ನು ಬೆಳೆಸಿಕೊಳ್ಳಲು ಭಾರತ ಬಯಸಿರದಿದ್ದರೆ  ಅವರನ್ನು ಆಯ್ಕೆ ಮಾಡು­ವುದು ಸಾಧ್ಯವಿರಲಿಲ್ಲ ಎಂಬುದೂ ಸತ್ಯ. ಈ ಪ್ರಶಸ್ತಿಗೆ ಆಯ್ಕೆಯಾದ ರಾಷ್ಟ್ರಗಳ 12 ಮಾಜಿ ಹಾಗೂ ಹಾಲಿ ಮುಖ್ಯಸ್ಥರಲ್ಲಿ  ಕರ್ಜೈ ಹಾಗೂ  ಹಸೀನಾ ಅವರೂ ಸೇರಿದ್ದಾರೆ. ಇನ್ನೊಂದೆಡೆ, ಗಾಂಧಿ ಶಾಂತಿ ಪ್ರಶಸ್ತಿಯು ಸಮಾಜ ಸೇವೆ ಹಾಗೂ ನಾಗರಿಕ ಕ್ರಿಯಾಶೀಲತೆಗೆ ಆದ್ಯತೆ ನೀಡುತ್ತಾ ಬಂದಿದೆ.ಎರಡೂ ಪ್ರಶಸ್ತಿಗಳ ಪಟ್ಟಿಯಲ್ಲಿ ಕಾಣುವ ಏಕೈಕ ಹೆಸರು ಜೆಕ್ ಗಣರಾಜ್ಯದ ನಾಟಕಕಾರ, ಹೋರಾಟಗಾರ ವ್ಯಾಕ್‌ಲಾವ್ ಹ್ಯಾವೆಲ್. ೧೯೯೩ರಲ್ಲಿ ಅವರಿಗೆ ಇಂದಿರಾ ಗಾಂಧಿ ಪ್ರಶಸ್ತಿ ಸಂದಿತು. ಹತ್ತು ವರ್ಷಗಳ ನಂತರ ಗಾಂಧಿ ಶಾಂತಿ ಪ್ರಶಸ್ತಿ ಪುರಸ್ಕಾರಕ್ಕೆ ಅವರು ಭಾಜನ­ರಾದರು. ಉಭಯ ಪ್ರಶಸ್ತಿಗಳ ಪಟ್ಟಿಯಲ್ಲಿ ಇಲ್ಲ ಎಂಬ ಕಾರಣಕ್ಕೂ ಎರಡು ಹೆಸರು­ಗಳು ಮುಖ್ಯವಾಗುತ್ತವೆ. ಅವೆಂದರೆ, ದಲೈ ಲಾಮಾ ಹಾಗೂ ಆಂಗ್ ಸಾನ್ ಸೂಕಿ. ಅವರಿಬ್ಬರದ್ದು ಎರಡೂ ಪ್ರಶಸ್ತಿಗಳಿಗೆ ಪರಿಗಣಿಸ­ಬಹುದಾದ ಸಾಧನೆ. ಬಹುಶಃ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅತಿ ಹೆಚ್ಚೇ ಎನ್ನಬಹುದಾದ ಎಚ್ಚರಿಕೆಯ ಧೋರಣೆಯಿಂ­ದಾಗಿ ಆ ಇಬ್ಬರನ್ನೂ ಪ್ರಶಸ್ತಿಗೆ ಪರಿಗಣಿಸಿಲ್ಲ.ಎರಡೂ ಪ್ರಶಸ್ತಿಗಳ ವಿಷಯದಲ್ಲಿ ಇನ್ನೊಂದು ಮುಖ್ಯವಾದ ಹೋಲಿಕೆಯನ್ನು ನಾನು ಮಾಡಲೇ ಬೇಕು. ಈಗಾಗಲೇ ನಾನು ಬರೆದಂತೆ ಹತ್ತು ವರ್ಷಗಳಲ್ಲಿ ಯುಪಿಎ ಸರ್ಕಾರ ಗಾಂಧಿ ಶಾಂತಿ ಪ್ರಶಸ್ತಿಗೆ ಎರಡು ಸಲ ಮಾತ್ರ ಅರ್ಹರನ್ನು ಆಯ್ಕೆ ಮಾಡಿದೆ. ಆದರೆ ಇಂದಿರಾ ಗಾಂಧಿ ಪ್ರಶಸ್ತಿಗೆ ೨೦೦೪ರಿಂದಲೂ ಪ್ರತಿವರ್ಷ ಆಯ್ಕೆಯನ್ನು ತಪ್ಪಿಸಲೇ ಇಲ್ಲ. ಡಾ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದ ಪಾರಂಪರಿಕ ಗೌರವವು ಪಿ.ವಿ. ನರಸಿಂಹ ರಾವ್ ಸರ್ಕಾರಕ್ಕಿಂತ ಒಂದು ಕೈ ಜಾಸ್ತಿ. ಇಂದಿರಾ ಗಾಂಧಿ ಸ್ಮರಣೆ ಪ್ರತಿವರ್ಷವೂ ಆಗಬೇಕು. ಆದರೆ ಮಹಾತ್ಮನನ್ನು ಐದು ವರ್ಷಕ್ಕೊಮ್ಮೆ ನೆನಪಿಸಿ­ಕೊಂಡರೆ ಸಾಕು ಎಂಬ ಧೋರಣೆ ಇದು. ಪ್ರಶಸ್ತಿಗೆ ಚಂಡಿ ಪ್ರಸಾದ್ ಭಟ್ ಆಯ್ಕೆ ಸ್ವಾಗತಾರ್ಹ.೯೩೪ರಲ್ಲಿ ಗಡವಾಲ್‌ನ ರೈತ ಕುಟುಂಬದಲ್ಲಿ ಹುಟ್ಟಿದ ಅವರು ಸಮಾಜ ಸೇವೆಗೇ ತಮ್ಮ ಬದುಕನ್ನು ಕೇಂದ್ರೀಕರಿಸಿದವರು. ಹೃಷಿಕೇಶ–ಬದರೀನಾಥ ವಲಯದಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಚಂಡಿ ಪ್ರಸಾದ್, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಜಯಪ್ರಕಾಶ್ ನಾರಾಯಣ್ ಮಾತಾಡುತ್ತಿ­ದ್ದುದನ್ನು ಕೇಳಿಸಿ ಕೊಂಡರು. ಅದರಿಂದ ಪ್ರಭಾವಿತರಾಗಿ ಅವರು ಸಮಾಜ ಸೇವೆಗೆ ಇಳಿದದ್ದು.೧೯೬೪ರಲ್ಲಿ ಚಂಡಿ ಪ್ರಸಾದ್, ದಶೌಲಿ ಗ್ರಾಮ ಸ್ವರಾಜ್ ಸಂಘ (ಡಿಜಿಎಸ್‌ಎಸ್) ಸ್ಥಾಪಿಸಿದರು. ಗುಡಿ ಕೈಗಾರಿಕೆಗಳ ಮೂಲಕ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲು ಆ ಸಂಘ ಬದ್ಧವಾಗಿತ್ತು. ಜೇನು ಕೃಷಿ ಹಾಗೂ ಕೃಷಿ ಸುಧಾರಣೆಗೆ ಅಗತ್ಯ ಸೌಲಭ್ಯ ಒದಗಿಸುವ ಸಹಕಾರಿ ವ್ಯವಸ್ಥೆಯನ್ನೂ ಸಂಘ ರೂಪಿಸಿತು. ತನ್ನ ಕಾರ್ಯಚಟುವಟಿಕೆಗಳ ಕಾರಣಕ್ಕೆ ಡಿಜಿಎಸ್‌ಎಸ್, ಅರಣ್ಯ ಇಲಾಖೆಯ ವಿರೋಧ ಎದುರಿಸಬೇಕಾಯಿತು.ಗ್ರಾಮೀಣ ಕುಶಲಕರ್ಮಿ­ಗಳಿಗೆ ಅಗತ್ಯವಿರುವ ಕಚ್ಚಾವಸ್ತುಗಳನ್ನು ಒದಗಿಸಲು ನಿರಾಕರಿಸಿದ ಅರಣ್ಯ ಇಲಾಖೆಯು ಕಾಗದ ಹಾಗೂ ಪ್ಲೈವುಡ್ ನ ದೊಡ್ಡ ದೊಡ್ಡ ಕಾರ್ಖಾನೆಗಳಿಗೆ ಕಚ್ಚಾವಸ್ತುಗಳನ್ನು ಮಾತ್ರ ಚಕಾರವೆತ್ತದೆ ಒದಗಿಸುತ್ತಿತ್ತು. ಇದನ್ನು ಡಿಜಿಎಸ್‌ಎಸ್ ಪ್ರಸ್ತಾಪಿಸಿ, ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿತು. ೧೯೭೦ರಲ್ಲಿ ಅಲಕಾನಂದದಲ್ಲಿ ಭೀಕರ ಪ್ರವಾಹ

ಎದ್ದಿತು. ಮಣ್ಣಿನ ಕೊರೆತದಿಂದಾಗಿ ಅಲ್ಲಲ್ಲಿ ಭೂಕುಸಿತ ಉಂಟಾಯಿತು. ಬೆಟ್ಟತಪ್ಪಲಿನಲ್ಲಿನ ವಾಣಿಜ್ಯ ಅರಣ್ಯೀಕ ರಣದಿಂದ ಸಮಾಜಕ್ಕೆ ಅನ್ಯಾಯ ಆಗುವುದಷ್ಟೇ ಅಲ್ಲ, ಪರಿಸರ ಹಾನಿಯೂ ಉಂಟಾಗುತ್ತದೆ ಎಂದು ಚಂಡಿ ಪ್ರಸಾದ್ ಭಟ್ ಅವರಿಗೆ ಸ್ಪಷ್ಟವಾಯಿತು.೧೯೭೩ರಲ್ಲಿ ಮಂಡಲ್ ಗ್ರಾಮದಲ್ಲಿ ಮರ ಕಡಿಯುವುದನ್ನು ವಿರೋಧಿಸಲು ಚಂಡಿ ಪ್ರಸಾದ್ ಹಳ್ಳಿಗರ ಗುಂಪು ಕಟ್ಟಿಕೊಂಡು ಹೊರಟರು. ‘ಚಿಪ್ಕೊ ಆಂದೋಲನ’ ಪ್ರಾರಂಭ­ವಾದದ್ದು ಹಾಗೆ. ಸ್ಥಳೀಯ ಜನರಿಗೆ ಪರಿಸರದ ಮೇಲೆ ಇರುವ ಹಕ್ಕನ್ನು ಪ್ರತಿಪಾದಿ­ಸುವುದು ಹಾಗೂ ವಿಮಾನಗಳ ಮೂಲಕ ಕಾರ್ಖಾನೆಗಳಿಗೆ ಬಿದಿರು ಸಾಗಣೆ ಮಾಡುವುದನ್ನು ವಿರೋಧಿಸುವುದು ಆಂದೋಲನದ ಮುಖ್ಯ ಉದ್ದೇಶವಾಗಿತ್ತು.ಆಧುನಿಕ ಭಾರತದ ಪರಿಸರವಾದದ ಅರ್ಥಪೂರ್ಣ ಶೋಧ ಚಿಪ್ಕೊ ಆಂದೋಲನ. ಮರ ಕಡಿಯುವುದನ್ನು ಹಲವು ಕಡೆ ಯಶಸ್ವಿ­ಯಾಗಿ ತಪ್ಪಿಸಿದ ಡಿಜಿಎಸ್‌ಎಸ್, ಆಮೇಲೆ ಚಂಡಿ ಪ್ರಸಾದ್ ನಾಯಕತ್ವದಲ್ಲಿ ಪರಿಸರ ಪುನರ್‌ ಸ್ಥಾಪನೆಯತ್ತ ಗಮನ ಹರಿಸಿತು. ಭಾರತೀಯ ಸಸ್ಯ ಸಂಪತ್ತಿನಿಂದ ಸಮೃದ್ಧ­ವಾಗಿದ್ದ ಘಟ್ಟಗಳ ಮಹತ್ವವನ್ನು ಮುಂದಿಟ್ಟುಕೊಂಡು ಹಳ್ಳಿಯ ಜನ ಹೋರಾಟ ಮಾಡಿದರು.ಕಳೆದ ನಲವತ್ತು ವರ್ಷಗಳಿಗೂ ಅಧಿಕ ಅವಧಿಯಲ್ಲಿ ಚಂಡಿ ಪ್ರಸಾದ್ ಭಟ್ ತಣ್ಣಗೆ ಕೆಲಸ ಮಾಡಿದವರು. ಜನಪ್ರಿಯತೆ ಅವರಿಗೆ ಬೇಕಿಲ್ಲ. ಉತ್ತರಾಖಂಡದ ತಮ್ಮ ಜನರ ನಡುವೆಯೇ ಉಳಿದುಕೊಂಡು ಹೋರಾಡಿದವರು ಅವರು. ಉದ್ಯೋಗ, ಮಹಿಳಾ ಸ್ವಾವಲಂಬನೆ, ದಲಿತರ ಅಭಿವೃದ್ಧಿ ಹಾಗೂ ಮುಖ್ಯವಾಗಿ ಪರಿಸರ ಸಂರಕ್ಷಣೆಗೆ ಟೊಂಕ ಕಟ್ಟಿದರು. ತಮ್ಮ ಕೆಲಸಗಳ ಮೂಲಕ ಹಲವು ತಲೆಮಾರುಗಳ ಹೋರಾಟಗಾರು, ಬರಹಗಾರರಿಗೆ ಅವರು ಸ್ಫೂರ್ತಿಯಾಗಿದ್ದಾರೆ.ಪರಿಸರವಾದಿ ಮಾಧವ್ ಗಾಡ್ಗೀಳ್, ಪತ್ರಕರ್ತರಾದ ಅನಿಲ್ ಅಗರ್‌ವಾಲ್ ಹಾಗೂ ಸುನಿತಾ ನಾರಾಯಣ್, ವಿದ್ವಾಂಸರೂ ಹೋರಾಟಗಾರರೂ ಆದ ಅನುಪಮ್ ಮಿಶ್ರ ಹಾಗೂ ಶೇಖರ್ ಪಾಠಕ್, ಸಮಾಜ ಸೇವಕ ಸಚ್ಚಿದಾನಂದ ಭಾರತಿ ಇವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಚಂಡಿ ಪ್ರಸಾದ್ ಜೊತೆ ಸಂವಾದಕ್ಕೆ ತೆರೆದುಕೊಂಡು ಚಿಂತನೆಗಳನ್ನು ರೂಪಿಸಿಕೊಂಡವರು.ನಾನು ಮೊದಲು ಚಂಡಿ ಪ್ರಸಾದ್ ಅವರನ್ನು ಭೇಟಿ ಮಾಡಿದ್ದು ಗೋಪೇಶ್ವರದ ಅವರ ಮನೆಯಲ್ಲಿ; ೧೯೮೧ರಲ್ಲಿ. ಆಮೇಲೆ ಹಲವು ಸಂದರ್ಭಗಳಲ್ಲಿ ಅವರ ಮಾತನ್ನು ಕೇಳಿದ್ದೇನೆ. ತಮ್ಮ ಡಿಜಿಎಸ್‌ಎಸ್ ಕಚೇರಿಯಲ್ಲಿ ಚಿಪ್ಕೊ ಚಳವಳಿಯ ಪ್ರಾರಂಭದ ದಿನಗಳ ಇತಿಹಾಸವನ್ನು ಅವರು ಮೆಲುಕುಹಾಕಿದ್ದು, ಪಿತೋರಗಢದ ಈಗಿನ ಪ್ರಭಾವಿ ಪತ್ರಿಕೆ ‘ಪಹರ್’ ಅನ್ನು ಅವರು ಪ್ರಾರಂಭಿಸಿದ್ದು, ಪ್ರೊಬೆಷನರಿ ಹಂತದಲ್ಲಿದ್ದ ಐಎಎಸ್ ಅಧಿಕಾರಿಗಳನ್ನು ಉದ್ದೇಶಿಸಿ ಮಸ್ಸೂರಿಯಲ್ಲಿ ಅವರು ಮಾತಾಡಿದ್ದು, ದೆಹಲಿಯಲ್ಲಿ ಮೊಮ್ಮಗುವಿನ ಜೊತೆ ಅವರು ಆಟವಾಡಿದ್ದು ಎಲ್ಲವೂ ನನಗೆ ನೆನಪಿದೆ. ಅವರ ಘನತೆ, ಬುದ್ಧಿವಂತಿಕೆ, ಬದ್ಧತೆ, ಪ್ರಜ್ಞಾಪೂರ್ವಕ ದೇಶಭಕ್ತಿ ಎಲ್ಲವನ್ನೂ ನಾನು ಕಂಡಿದ್ದೇನೆ.ಚಂಡಿ ಪ್ರಸಾದ್ ಭಟ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂಬ ಸುದ್ದಿಯನ್ನು ಪತ್ರಿಕೆ­ಗಳಲ್ಲಿ ಓದಿದ ಮೇಲೆ ಅವರ ಜೊತೆ ಮಾತನಾಡಲು ಯತ್ನಿಸಿದೆ. ಅವರ ಫೋನ್ ವ್ಯಾಪ್ತಿ ಪ್ರದೇಶದ ಹೊರಗೆ ಇತ್ತು. ಬಹುಶಃ ಅವರು ತಮ್ಮ ಗುಡ್ಡಗಾಡಿಗೆ ಹೋಗುತ್ತಿರ­ಬಹುದು ಎಂದು ನನಗೆ ಅನ್ನಿಸಿತು. ಕೊನೆಗೂ ಅವರು ಮಾತಿಗೆ ಸಿಕ್ಕರು. ಆಗಷ್ಟೇ ಡಾಕ್‌ಪತ್ಥರ್ ತಲುಪಿದ್ದರು. ಗೋಪೇಶ್ವರದಿಂದ ಇನ್ನೊಂದು ತುದಿಯಲ್ಲಿದ್ದ ಗಡವಾಲ್‌ ಅಂಚಿನ ಪಟ್ಟಣ ಅದು.ಹತ್ತು ವರ್ಷದ ಹಿಂದೆ ಭಟ್‌ಜೀ ಅಲ್ಲೆಲ್ಲಾ ಬಸ್‌ನಲ್ಲಿ ಪ್ರಯಾಣ ಮಾಡಿರಬೇಕು. ಈಗ ಅವರಿಗೆ ಎಂಬತ್ತು ವರ್ಷ. ಹಾಗಾಗಿ ಕಾರ್‌ನಲ್ಲಿ ಪ್ರಯಾಣಿಸಲು ಒಪ್ಪಿದ್ದರು. ಹೃಷಿಕೇಶ್‌ ಕಾರಿನಲ್ಲೂ ಆರು ತಾಸುಗಳ ಕಠಿಣ ಹಾದಿ. ಅಲ್ಲಿಂದ ಪಶ್ಚಿಮ ದಿಕ್ಕಿನಲ್ಲಿ ಯಮುನಾ ನದಿ ದಂಡೆಯ ಮೇಲೆ ಇನ್ನೂ ನಾಲ್ಕು ತಾಸಿನ ಪ್ರಯಾಣ. ಅಲ್ಲಿನ ಗುಣಮಟ್ಟಕ್ಕೆ ಹೋಲಿಸಿ ನೋಡಿದರೂ ಅದು ಕಠಿಣತಮವಾದ ಪ್ರವಾಸವೇ ಹೌದು.ಭಟ್‌ಜೀ ಡಾಕ್‌ಪತ್ಥರ್‌ಗೆ ಹೋಗಿದ್ದು ಅಲ್ಲಿನ ಸ್ಥಳೀಯ ಕಾಲೇಜು ವಿದ್ಯಾರ್ಥಿಗಳು ಆಹ್ವಾನಿಸಿದ್ದ ಕಾರಣಕ್ಕೆ. ಗಾಂಧಿ ಶಾಂತಿ ಪ್ರಶಸ್ತಿಯ ಸುದ್ದಿ ಅವರನ್ನು ತಲುಪಿದಾಗಲೂ ಅವರು ಸದಾ ಯಾವ ಕೆಲಸ ಮಾಡಿಕೊಂಡು ಬಂದಿದ್ದರೋ ಅದನ್ನೇ ಮಾಡುತ್ತಿದ್ದರು. ಅದೇ ಬೋಧನೆ, ಸೇವೆ, ಹಂಚುವುದು. ಮಹತ್ವದ ಪ್ರಶಸ್ತಿಗೆ ಅವರ ಆಯ್ಕೆ ನನ್ನಲ್ಲಿ ಸಹಜ ಸಂತೋಷವನ್ನು ಉಂಟುಮಾಡಿತು. ಸಾಕಷ್ಟು ಭ್ರಷ್ಟಾಚಾರ, ದಡ್ಡತನದ ಕೆಲಸಗಳನ್ನು ಕಳೆದ ಎರಡು ಅಧಿಕಾರಾವಧಿಯಲ್ಲಿ ಮಾಡಿರುವ ಯುಪಿಎ ಸರ್ಕಾರ, ಈ ಪ್ರಶಸ್ತಿಯ ಆಯ್ಕೆಯ ವಿಷಯದಲ್ಲಿ ಮಾತ್ರ ಸರಿಯಾಗಿಯೇ ಯೋಚಿಸಿದೆ.ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.