ಭಾನುವಾರ, ಏಪ್ರಿಲ್ 18, 2021
32 °C

ಜನಕೇಂದ್ರಿತ ರಾಜಕೀಯ; ಜನರದೇ ಕರ್ತವ್ಯ

ಡಾ.ಆರ್.ಬಾಲಸುಬ್ರಹ್ಮಣ್ಯಂ Updated:

ಅಕ್ಷರ ಗಾತ್ರ : | |

ಜನಕೇಂದ್ರಿತ ರಾಜಕೀಯ; ಜನರದೇ ಕರ್ತವ್ಯ

ನಮ್ಮ ಸುತ್ತಮುತ್ತ ಅಪಾರ ರಾಜಕೀಯ ವಿದ್ಯಮಾನಗಳು ನಡೆಯುತ್ತಿವೆ. ಅಮೆರಿಕದಲ್ಲಿ ಕಳೆದ 18 ತಿಂಗಳಿನಿಂದ ಶ್ವೇತಭವನದ ಗದ್ದುಗೆಗಾಗಿ ನಡೆದ ಚುನಾವಣಾ ಸಮರ, ಅಧ್ಯಕ್ಷ ಬರಾಕ್ ಒಬಾಮ ಅವರ ಮರು ಆಯ್ಕೆಯೊಂದಿಗೆ ಇತ್ತೀಚೆಗಷ್ಟೇ ಕೊನೆಗೊಂಡಿದೆ. ಅಲ್ಲಿ ಹಾದಿ ಬದಿಯಿಂದ ಹಿಡಿದು ಪ್ರಮುಖ ಟಿ.ವಿ ವಾಹಿನಿಗಳವರೆಗೆ ಸಾಕಷ್ಟು ಚರ್ಚೆ ಮತ್ತು ಸಂವಾದಗಳು ನಡೆದದ್ದನ್ನು ನಾವು ಕಂಡೆವು.ಅವರೆಲ್ಲರೂ ಗೆಲುವಿನ ಬಗ್ಗೆ ಭವಿಷ್ಯ ನುಡಿಯುತ್ತಿದ್ದರಾದರೂ ಇದ್ಯಾವುದರ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣದ ಮತದಾರರು ಮಾತ್ರ ಒಬಾಮ ಅವರನ್ನು ಮರಳಿ ಶ್ವೇತಭವನದಲ್ಲಿ ಕೂರಿಸುವ ತೀರ್ಮಾನ ಕೈಗೊಂಡರು. ನಮ್ಮ ದೇಶದಲ್ಲಿ ನಾವೂ ನಮ್ಮದೇ ಆದ ರಾಜಕೀಯ, ರಾಜಕಾರಣಿಗಳು ಮತ್ತು ಚುನಾವಣಾ ವ್ಯವಸ್ಥೆಯನ್ನು ಹೊಂದಿದ್ದೇವೆ.ಅದು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ ಇರಬಹುದು, ಹೊಸ ರಾಜಕೀಯ ಪಕ್ಷಗಳ ಸ್ಥಾಪನೆಯೇ ಆಗಿರಬಹುದು, ಇಲ್ಲವೇ ನೂತನ ಪಕ್ಷಗಳಿಗೆ ಕೈಗಾರಿಕಾ ಕುಳಗಳು ನೀಡಿರುವ ಕೊಡುಗೆಯ ನಿರಾಕರಣೆಯೇ ಆಗಿರಬಹುದು- ನಾವು ಸಹ ಇಂತಹ ಚರ್ಚೆಗಳಲ್ಲಿ ಭಾಗಿಯಾಗುತ್ತಾ ಬಂದಿದ್ದೇವೆ.ಈ ಎಲ್ಲ ಗೌಜು ಗದ್ದಲಗಳ ನಡುವೆಯೇ, ನಿಜವಾಗಲೂ ನಡೆಯುತ್ತಿರುವುದೇನು ಎಂಬುದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ನಾವು ಮಾಡಬಹುದು. ಡಿಸೆಂಬರ್ 10ರಂದು ತಮ್ಮ ರಾಜಕೀಯ ಪಕ್ಷವನ್ನು ಅಸ್ತಿತ್ವಕ್ಕೆ ತರುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇತ್ತೀಚೆಗೆ ಘೋಷಿಸಿದ್ದಾರೆ.

 

ಅರವಿಂದ ಕೇಜ್ರಿವಾಲ್ ಸ್ವಂತ ರಾಜಕೀಯ ಪಕ್ಷ ಕಟ್ಟುವ ಸಲುವಾಗಿ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆಯಿಂದ ಈಗ ಹಿಂದೆ ಸರಿದಿದ್ದಾರೆ. ಹಲವು ವರ್ಷಗಳ ಹಿಂದೆ, ಐಎಎಸ್ ಅಧಿಕಾರಿಯಾಗಿದ್ದ ಜಯಪ್ರಕಾಶ್ ನಾರಾಯಣ್ ಅವರೂ ಇದೇ ಉದ್ದೇಶ ಇಟ್ಟುಕೊಂಡು`ಲೋಕಸತ್ತಾ~ ಎಂಬ ರಾಜಕೀಯ ಪಕ್ಷ ಕಟ್ಟಿದ್ದರು.ಭಾರತದ ರಾಜಕೀಯ ವ್ಯಾಪ್ತಿ ಸಾಕಷ್ಟು ವಿಶಾಲವಾಗಿದ್ದು ಹೆಚ್ಚು ಹೆಚ್ಚು ರಾಜಕೀಯ ಪಕ್ಷಗಳ ಆರಂಭಕ್ಕೆ ಅವಕಾಶ ಒದಗಿಸಿಕೊಟ್ಟಿದೆ. ಆದರೆ ಈ ಅವಕಾಶವು ಜನಸಾಮಾನ್ಯರಿಗೆ ಗುಣಮಟ್ಟದ ರಾಜಕಾರಣ ಮತ್ತು ಆಡಳಿತ ವ್ಯವಸ್ಥೆ ಒದಗಿಸುವುದಕ್ಕೆ ಪೂರಕವಾಗಿದೆಯೇ? ಹೊಸ ಪರಿಕಲ್ಪನೆ ಒಳಗೊಂಡ ನೂತನ ಪಕ್ಷಗಳು ದೇಶದ ಪ್ರಸಕ್ತ ರಾಜಕೀಯ ಚದುರಂಗದಾಟದ ರೀತಿಯನ್ನು ಬದಲಿಸಬಲ್ಲವೇ?ರಾಜಕೀಯ ಪಕ್ಷಗಳನ್ನು ರಚಿಸಿಕೊಳ್ಳಲು ಜನರಿಗೆ ತಮ್ಮದೇ ಆದ ಕಾರಣಗಳಿರುತ್ತವೆ ಎಂಬುದು ಯಾರಿಗಾದರೂ ಸುಲಭವಾಗಿ ಅರ್ಥವಾಗುವ ಸಂಗತಿ. ನಮ್ಮ ದೇಶದಲ್ಲಿ ರಾಜಕೀಯ ಪಕ್ಷ ಸ್ಥಾಪಿಸುವುದು ಒಂದು ಖಾಸಗಿ ಕಂಪೆನಿ ತೆರೆಯುವುದಕ್ಕಿಂತ ಅಥವಾ ಸ್ವಯಂ ಸೇವಾ ಸಂಸ್ಥೆ ಸ್ಥಾಪಿಸುವುದಕ್ಕಿಂತಲೂ ಸುಲಭದ ಕಾರ್ಯ.ಅದಕ್ಕೆ ನಾವು ಮಾಡಬೇಕಾದುದಿಷ್ಟೇ- ಒಂದಷ್ಟು ಜನರ ಬೆಂಬಲ ಗಳಿಸುವುದು, ಪಕ್ಷವನ್ನು ಪ್ರಮಾಣೀಕರಿಸಲು ಯಾವ ಪಕ್ಷದ ಸದಸ್ಯತ್ವವನ್ನೂ ಹೊಂದಿರದ 100 ನೋಂದಾಯಿತ ಮತದಾರರನ್ನು ಒಗ್ಗೂಡಿಸುವುದು ಮತ್ತು ಅದಾದ 30 ದಿನಗಳ ಒಳಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸುವುದು.ಈ ನಿಗದಿತ ಅರ್ಜಿ ನಮೂನೆಯು ಪಕ್ಷದ ಸಂವಿಧಾನ ಸೇರಿದಂತೆ ಸಮಂಜಸ ಅನುಬಂಧ ಮತ್ತು ಪ್ರಮಾಣಪತ್ರಗಳ ಸಮೇತ ಸಲ್ಲಿಕೆಯಾಗಬೇಕು. ಕೇಂದ್ರ ಚುನಾವಣಾ ಆಯೋಗ ಸಹ ಈ ಪ್ರಕ್ರಿಯೆಯನ್ನು ಸುಲಭವಾಗಿ ಅರ್ಥಮಾಡಿಕೊಂಡು ಅಳವಡಿಸಿಕೊಳ್ಳಲು ಅನುವಾಗುವಂತೆ ಮೂಲ ಮಾದರಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.ಆಯೋಗ ಅಧಿಕೃತವಾಗಿ ಆರು ರಾಜಕೀಯ ಪಕ್ಷಗಳು, ರಾಜ್ಯ ಮಟ್ಟದ 54 ಪಕ್ಷಗಳು ಮತ್ತು ಇತರ ನೂರಾರು ರಾಜಕೀಯ ಪಕ್ಷಗಳ ಪಟ್ಟಿ ಮಾಡಿದೆಯಾದರೂ ದೇಶದಲ್ಲಿ ಸುಮಾರು ಒಂದು ಸಾವಿರದಷ್ಟು ರಾಜಕೀಯ ಪಕ್ಷಗಳಿವೆ ಎನ್ನಲಾಗಿದೆ. ಇದೇನಾದರೂ ಪ್ರಬುದ್ಧ ಮತ್ತು ಸ್ಪಂದನಶೀಲ ಪ್ರಜಾಪ್ರಭುತ್ವದ ಚಿಹ್ನೆಯೇ ಆಗಿದ್ದರೆ ಭಾರತ ಖಂಡಿತವಾಗಿಯೂ ಅತ್ಯುನ್ನತ ಆಡಳಿತ ವ್ಯವಸ್ಥೆ ಹೊಂದಿದ ದೇಶ ಆಗಬೇಕಾಗಿತ್ತು.ವಿಷಾದದ ಸಂಗತಿ ಎಂದರೆ ವಾಸ್ತವ ಹಾಗಿಲ್ಲ. ದೇಶದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಅವರು ಇತ್ತೀಚೆಗೆ ಭಾಷಣವೊಂದರಲ್ಲಿ, ಬಹುತೇಕ ರಾಜಕೀಯ ಪಕ್ಷಗಳು ನಿಷ್ಕ್ರಿಯವಾಗಿವೆ ಮತ್ತು ಕೇವಲ 60- 70 ಪಕ್ಷಗಳು ಮಾತ್ರ ಚುನಾವಣಾ ರಾಜಕೀಯದಲ್ಲಿ ತೊಡಗಿಕೊಂಡಿವೆ ಎಂದು ವಿಷಾದಿಸಿದ್ದರು.ಒಂದು ಪಕ್ಷವಂತೂ ಬೀದಿ ಬದಿಯ ಪೆಟ್ಟಿಗೆ ಚಹಾದಂಗಡಿಯನ್ನೇ ತನ್ನ ಅಧಿಕೃತ ನೋಂದಾಯಿತ ವಿಳಾಸವನ್ನಾಗಿ ನೀಡಿದ್ದರೆ, ಮತ್ತೊಂದು ರಾಜಕೀಯ ಪಕ್ಷದ ಮುಖಂಡರು ತಮ್ಮ ಮಗಳ ಮದುವೆಯ ಖರ್ಚು ವೆಚ್ಚವನ್ನೇ ಪಕ್ಷದ ಖರ್ಚು ವೆಚ್ಚವೆಂದು ತೋರಿಸಿದ್ದಾರೆ ಎಂದು ಹೇಳಲಾಗಿದೆ. ಪರಿಸ್ಥಿತಿ ಹೀಗಿರುವಾಗ ಅಷ್ಟೊಂದು ಪಕ್ಷಗಳು ಅಸ್ತಿತ್ವಕ್ಕೆ ಬಂದದ್ದಾದರೂ ಯಾಕೆ? ಕೆಲವರು ನಿಜಕ್ಕೂ ಇದರಿಂದ ಬದಲಾವಣೆ ಆಗುತ್ತದೆ ಎಂದು ನಂಬಬಹುದಾದರೂ ವಸ್ತುಸ್ಥಿತಿ ಬೇರೆಯೇ ಇದೆ.ರಾಜಕೀಯ ಪಕ್ಷಕ್ಕೆ ನೀಡುವ ದೇಣಿಗೆಯು ತೆರಿಗೆ ಮುಕ್ತವಾಗಿರುತ್ತದೆ. ಹಲವು ವರ್ಷಗಳ ಹಿಂದೆ ಆಗಿನ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ, ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯ ಪ್ರವಾಹದ ದಿಡ್ಡಿ ಬಾಗಿಲನ್ನು ಮುಕ್ತವಾಗಿ ತೆರೆದಿಡಲು ನಿರ್ಧರಿಸಿತು. ಅದಕ್ಕಾಗಿ ತೆರಿಗೆ ವಿನಾಯಿತಿ ಕೊಡಲು ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿಯನ್ನೇ ತಂದಿತು.ಹೀಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 13ಎ ಅಡಿ ರಾಜಕೀಯ ಪಕ್ಷಗಳು ತೆರಿಗೆ ವಿನಾಯಿತಿ ಪಡೆಯುತ್ತವೆ. ಇದರ ಜೊತೆಗೆ, ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 29ಬಿ ಮತ್ತು 29ಸಿ ಅಡಿಯೂ ರಾಜಕೀಯ ಪಕ್ಷಗಳು ದೇಣಿಗೆ ಪಡೆಯಲು ಅವಕಾಶ ಇರುತ್ತದೆ ಮತ್ತು ಈ ದೇಣಿಗೆಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 13ಎ ಅಡಿ ತೆರಿಗೆ ವಿನಾಯಿತಿ ಸಿಗುತ್ತದೆ.20 ಸಾವಿರ ರೂಪಾಯಿಗಿಂತ ಹೆಚ್ಚು ದೇಣಿಗೆ ಸ್ವೀಕರಿಸಿದ ಪಕ್ಷಗಳು, ಸಂಬಂಧಿಸಿದ ವಿವರ ಒಳಗೊಂಡ ದೇಣಿಗೆ ವರದಿಯನ್ನು ತಮ್ಮ ಆದಾಯ ಲೆಕ್ಕಪತ್ರದೊಂದಿಗೆ ಲಗತ್ತಿಸಿ ಸಲ್ಲಿಸಬೇಕು. ಈ ದೇಣಿಗೆ ವರದಿಗಳ ಪ್ರತಿಯನ್ನು ಪಕ್ಷಗಳು ಕೇಂದ್ರ ಚುನಾವಣಾ ಆಯೋಗಕ್ಕೂ ಸಲ್ಲಿಸುತ್ತವೆ. ಅದು ಆಯೋಗದದ ವೆಬ್‌ಸೈಟ್‌ನಲ್ಲಿ ಕಾಣಸಿಗುತ್ತದೆ.

 

2008- 09ರಲ್ಲಿ ಪಕ್ಷಗಳು ಪಡೆದಿರುವ  ದೇಣಿಗೆಯ ಪಟ್ಟಿಯನ್ನು ನೋಡಿದರೆ, 460 ಕೋಟಿ ರೂಪಾಯಿ ಪಡೆದಿರುವ ಕಾಂಗ್ರೆಸ್ ಪಕ್ಷ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಸುಮಾರು 220 ಕೋಟಿ ರೂಪಾಯಿ ಪಡೆದುಕೊಂಡಿರುವ ಬಿಜೆಪಿ ನಂತರದ ಸ್ಥಾನದಲ್ಲಿರುವುದು ತಿಳಿಯುತ್ತದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಸಾಮಾನ್ಯ ಪ್ರಜೆಗೆ, ಈ ಹಣ ಎಲ್ಲಿಂದ ಬಂತು ಮತ್ತು ಅದನ್ನು ಯಾವ ಕಾರ್ಯಕ್ಕಾಗಿ ಬಳಸಲಾಗುತ್ತಿದೆ ಎಂಬುದನ್ನು ತಿಳಿಯುವ ಅರ್ಹತೆ ಇಲ್ಲವೇ?ಈ ವಿಷಯವನ್ನು ಇತ್ತೀಚೆಗೆ ಪ್ರಸ್ತಾಪಿಸಿರುವ ಚಿಂತಕ ಸುಬ್ರಮಣಿಯನ್ ಸ್ವಾಮಿ, ಕಾಂಗ್ರೆಸ್ ಪಕ್ಷ ನೀಡಿರುವ ಸಾಲದ ಬಗ್ಗೆ ಚುನಾವಣಾ ಆಯೋಗದ ಬಳಿ ಪ್ರಶ್ನೆ ಎತ್ತಿದ್ದಾರೆ. ಚುನಾವಣಾ ಆಯೋಗವೇನೋ ಕಾನೂನಿನ ಪರಿಮಿತಿಯೊಳಗೆ ಇದಕ್ಕೆ ಪ್ರತಿಕ್ರಿಯಿಸಿದೆ. ಆದರೆ ಮೂಲ ಪ್ರಶ್ನೆ ಮಾತ್ರ ಉತ್ತರ ಸಿಗದೆ ಹಾಗೇ ಉಳಿದುಹೋಗುತ್ತದೆ.

 

ಪಾರದರ್ಶಕ ಮತ್ತು ಉತ್ತರದಾಯಿತ್ವ ಪ್ರದರ್ಶಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಏನನ್ನು ಬಹಿರಂಗಗೊಳಿಸಬೇಕು? ನಂತರ ಅವು ಅಧಿಕಾರಕ್ಕೆ ಬಂದರೆ ತಮಗೆ ದೇಣಿಗೆ ಕೊಟ್ಟಿರುವವರ ಒತ್ತಡ ಅವುಗಳ ಮೇಲೆ ಇರುವುದಿಲ್ಲವೇ? ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಮಾತ್ರ ಪಕ್ಷಗಳು ಮತ್ತು ಅಭ್ಯಥಿಗಳ ಖರ್ಚುವೆಚ್ಚವನ್ನು ಚುನಾವಣಾ ಆಯೋಗ ಮೇಲ್ವಿಚಾರಣೆ ಮಾಡುತ್ತದೆ.ಹಾಗಿದ್ದರೆ ಚುನಾವಣೆಗೆ ಸಾಕಷ್ಟು ಮೊದಲೇ ಸಮರ್ಥ ಅಭ್ಯರ್ಥಿಗಳು ವ್ಯಯಿಸುವ ಕೋಟಿಗಟ್ಟಲೆ ಹಣದ ಬಗ್ಗೆ ಏನು ಹೇಳಬೇಕು? ರಾಜ್ಯದ ವಿಧಾನಸಭೆಗೆ ಯಾವಾಗ ಚುನಾವಣೆ ನಡೆಯುತ್ತದೆ ಎಂಬುದು ಇನ್ನೂ ಖಾತ್ರಿಯಾಗದಿರುವ ಈ ಸಂದರ್ಭದಲ್ಲಿ, ನಮ್ಮ್ಲ್ಲಲಿ ಇಂತಹ ಬೆಳವಣಿಗೆಯನ್ನು ನಾವು ಕಾಣುತ್ತಿದ್ದೇವೆ. ಈ ಹಣ ಎಲ್ಲಿಂದ ಬರುತ್ತದೆ ಎಂಬುದನ್ನು ನಾವು ತಿಳಿಯುವುದು ಬೇಡವೇ?ಈ ವಿಷಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕಾದರೆ, ದೇಣಿಗೆ ವರದಿಗಳೊಂದಿಗೆ ರಾಜಕೀಯ ಪಕ್ಷಗಳು ಸಲ್ಲಿಸುವ ಆದಾಯ ಪ್ರಮಾಣಪತ್ರವನ್ನು ಮಹಾಲೇಖಪಾಲರಿಂದ ಪರಿಶೋಧನೆಗೆ ಒಳಪಡಿಸುವುದು ಒಳ್ಳೆಯದು.ಈ ನಿಟ್ಟಿನಲ್ಲಿ ಮತ್ತೊಂದು ಸಲಹೆ ಎಂದರೆ, ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದಾಗ ದೇಣಿಗೆದಾರರು ಏನಾದರೂ ಲಾಭ ಪಡೆದುಕೊಳ್ಳುತ್ತಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು  ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕು, ಎಲ್ಲ ದೇಣಿಗೆದಾರರೂ ಪಾನ್ ಸಂಖ್ಯೆ ನಮೂದಿಸುವುದನ್ನು ಕಡ್ಡಾಯ ಮಾಡಬೇಕು.

 

ನಗದು ವ್ಯವಹಾರಕ್ಕೆ ಅವಕಾಶ ಇರದೆ, ಯಾವ ಬಗೆಯ ದೇಣಿಗೆಯಾದರೂ ಸರಿ ಅದು ಚೆಕ್ ಅಥವಾ ಡಿ.ಡಿ ಮೂಲಕವೇ ಆಗಬೇಕು. ಯಾವ ಪಕ್ಷವೂ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಬದ್ಧತೆ ಹೊಂದಿಲ್ಲ ಮತ್ತು ತನ್ನ ಆರ್ಥಿಕ ಮೂಲದ ಮಾಹಿತಿಯನ್ನು ಜನಸಾಮಾನ್ಯರಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಬಹಿರಂಗಪಡಿಸಿಲ್ಲ ಎಂಬುದನ್ನು ಸಮೀಕ್ಷೆಗಳು ನಮಗೆ ತಿಳಿಸುತ್ತವೆ.ಪಕ್ಷಗಳ ನಿಧಿ ಮತ್ತು ಹಣಕಾಸು ವ್ಯವಹಾರ ಹೇಗೆ ರಹಸ್ಯವಾಗಿ ಇದೆಯೋ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಅವುಗಳಿಗೆ ಇರುವ ಬದ್ಧತೆಯೂ ಅಷ್ಟೇ ದುರ್ಬಲವಾಗಿ ಇದೆ. ಎಲ್ಲ ನೋಂದಾಯಿತ ಪಕ್ಷಗಳೂ ಚುನಾವಣೆ ನಡೆಸಬೇಕು ಮತ್ತುಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಬೇಕು ಎಂಬುದನ್ನು ಚುನಾವಣಾ ಆಯೋಗ ಕಡ್ಡಾಯ ಮಾಡಿದೆ. ಆದರೆ ನಮ್ಮ ದೇಶದಲ್ಲಿ ಇಂದು ಬಹುತೇಕ ರಾಜಕೀಯ ಪಕ್ಷಗಳನ್ನು ಒಬ್ಬಿಬ್ಬರು ವ್ಯಕ್ತಿಗಳು ಅಥವಾ ಕೆಲವು ಕುಟುಂಬಗಳು ಮಾತ್ರ ನಿಯಂತ್ರಿಸುತ್ತಿರುವುದು ವಿಪರ್ಯಾಸವೇ ಸರಿ.ಬೆರಳೆಣಿಕೆಯ ಪಕ್ಷಗಳಷ್ಟೇ ಅಲ್ಪಸ್ವಲ್ಪ ಆಂತರಿಕ ಪ್ರಜಾಪ್ರಭುತ್ವವನ್ನು ಕಾಯ್ದುಕೊಂಡಿವೆ. ಒಂದು ವೇಳೆ ಚುನಾವಣೆ ನಡೆದರೂ ಅದು ಪೂರ್ವ ನಿರ್ಧಾರಿತ ಆಗಿರುತ್ತದೆ ಮತ್ತು ಅಧ್ಯಕ್ಷರನ್ನು ವಿವಿಧ ಪಟ್ಟಭದ್ರ ಗುಂಪುಗಳು ಮೊದಲೇ ನಿರ್ಧರಿಸಿರುತ್ತವೆ. ತಮ್ಮ ನಾಯಕರಿಗೆ ಅನಿರ್ಬಂಧಿತ ಅಧಿಕಾರ ಮತ್ತು ಸ್ವಾತಂತ್ರ್ಯ ನೀಡಲು ಜನ ತಮ್ಮ ಸಂವಿಧಾನಕ್ಕೇ ತಿದ್ದುಪಡಿ ತರುತ್ತಾರೆ.ವಿಶ್ವದ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯಾವೊಂದು ಪಕ್ಷವೂ ಪ್ರಜಾಪ್ರಭುತ್ವ ಮಾದರಿಯಲ್ಲಿ ಕಾರ್ಯ ನಿರ್ವಹಿಸದಿರುವುದು ವ್ಯವಸ್ಥೆಯ ವ್ಯಂಗ್ಯ. ಯಾವುದೇ ಒಬ್ಬ ಕೆಳಸ್ತರದ ಮನುಷ್ಯ ಸಾಧಾರಣ ಸದಸ್ಯನಾಗಿ ರಾಜಕೀಯ ಪಕ್ಷ ಸೇರಿ, ಅದರ ಅಧ್ಯಕ್ಷನಾಗುವ ಆಕಾಂಕ್ಷೆ ಹೊಂದಲು ಸಾಧ್ಯವೇ? ಇತ್ತೀಚೆಗೆ ಯುವ ಕಾಂಗ್ರೆಸ್ ಘಟಕವು, ತಾನು ಕ್ರಮಿಸಬೇಕಾದ ಹಾದಿ ಸಾಕಷ್ಟಿದ್ದರೂ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದುವ ಪ್ರಯತ್ನವನ್ನಂತೂ ಮಾಡಿದೆ.ತಮ್ಮ ತತ್ವ- ಸಿದ್ಧಾಂತ, ಸದಸ್ಯತ್ವ, ಪ್ರಮುಖ ಹಿತಾಸಕ್ತಿಗಳು ಹಾಗೂ ರಾಜಕಾರಣಕ್ಕೆ ಇಳಿಯುವುದಕ್ಕೆ ಕಾರಣವಾದ ಅಂಶಗಳನ್ನು ಸಂಶಯಕ್ಕೆ ಎಡೆ ಇಲ್ಲದಂತೆ ಜನಸಾಮಾನ್ಯರಿಗೆ ತಿಳಿಸಬೇಕಾದುದು ಈಗಾಗಲೇ ಅಸ್ತಿತ್ವದಲ್ಲಿರುವ ಮತ್ತು ಅಸ್ತಿತ್ವಕ್ಕೆ ಬರಲಿರುವ ರಾಜಕೀಯ ಪಕ್ಷಗಳ ಕರ್ತವ್ಯವಲ್ಲವೇ? ಈ ಪಕ್ಷಗಳ ಆಡಳಿತ ಮತ್ತು ಆರ್ಥಿಕ ವ್ಯವಹಾರದ ರಹಸ್ಯ ಮಾಹಿತಿಯನ್ನು ಜನಸಾಮಾನ್ಯರು ಅರಿಯಬೇಕಾದ ಅಗತ್ಯವಿಲ್ಲವೇ? ನಾವು ಪ್ರತಿಯೊಬ್ಬರೂ ರಾಜಕೀಯವಾಗಿ ಸಹ ಯೋಚನೆ ಮಾಡಲಾರಂಭಿಸಿದ ನಂತರವಷ್ಟೇ ಬದಲಾವಣೆ ಸಾಧ್ಯವಾಗುತ್ತದೆ.ರಾಜಕೀಯ ಪಕ್ಷಗಳು ಸಾರ್ವಜನಿಕ ಬದ್ಧತೆ ಹೊಂದಿರಬೇಕಾಗುತ್ತದೆ. ಹೀಗಾಗಿ, ರಾಜಕೀಯ ಪಕ್ಷಗಳಿಂದ ಹೊಣೆಗಾರಿಕೆ, ಪಾರದರ್ಶಕತೆ ಮತ್ತು ಪ್ರಜಾಸತ್ತಾತ್ಮಕ ಆಡಳಿತವನ್ನು ಆಗ್ರಹಿಸುವುದು ನಮ್ಮ ಹಕ್ಕಷ್ಟೇ ಅಲ್ಲ ಪ್ರಜಾಸತ್ತಾತ್ಮಕ ಕರ್ತವ್ಯ ಸಹ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಹೀಗೆ ಬದಲಾವಣೆಯ ಸಹಭಾಗಿಗಳಾಗಲು ನಾವು ಪ್ರಜಾಪ್ರಭುತ್ವ ರಾಷ್ಟ್ರದ ಸದಸ್ಯರಾಗಿದ್ದೇವೆ ಎಂಬುದಷ್ಟೇ ಸಾಕು.

 

ಚುನಾವಣೆಗೆ ಸ್ಪರ್ಧಿಸುವ ಸಾಮರ್ಥ್ಯ ಹೊಂದಿರುವುದು ಮಾತ್ರವಲ್ಲ, ನೀತಿ ನಿರೂಪಣೆಗೆ ಅಗತ್ಯವಾದ ಬೌದ್ಧಿಕ ಸಂಪನ್ಮೂಲ ಹೊಂದಿರುವ, ಉತ್ತಮ ಆಡಳಿತ ಹಾಗೂ ಪ್ರಜಾಸತ್ತಾತ್ಮಕ ನಾಯಕತ್ವದ ತತ್ವಗಳನ್ನು ಪ್ರತಿಪಾದಿಸುವ ರಾಜಕೀಯ ನಾಯಕರಷ್ಟೇ ಪಕ್ಷ ಸ್ಥಾಪನೆಗೆ ಮುಂದಾಗಬೇಕು ಎಂದು ನಾವು ಆಗ್ರಹಿಸಬೇಕು.ನಮ್ಮ ನಾಯಕರು ಪಕ್ಷ ಮುನ್ನಡೆಸುವ ತಮ್ಮ ದಾರಿಗೆ ಸ್ವಯಂ ಅವಧಿಯನ್ನು ನಿಗದಿಪಡಿಸಿಕೊಳ್ಳುವರೇ? ಪಕ್ಷಗಳನ್ನು ತಮ್ಮ ಕುಟುಂಬದ ಅಧೀನ ಮಾಡಿಕೊಳ್ಳದೆ, ನಿಜವಾಗಲೂ ಅದರ ಮೇಲೆ ಅಧಿಕಾರ ಹೊಂದಿರುವ ಜನರಿಗೆ ವಾರಸುದಾರಿಕೆಯನ್ನು ಹಸ್ತಾಂತರಿಸುವರೇ?ಇದೆಲ್ಲ ಕಾರ್ಯರೂಪಕ್ಕೆ ಬಂದರೆ ದೇಶದ ರಾಜಕೀಯ ವ್ಯವಸ್ಥೆ ನಿಜಕ್ಕೂ ಪರಿವರ್ತನೆ ಹೊಂದುತ್ತದೆ, ರಾಜಕೀಯ ಎಂಬುದು ಮತ್ತೆ ನ್ಯಾಯೋಚಿತವಾಗಿ ಜನರಿಗೇ ಸಲ್ಲುತ್ತದೆ ಮತ್ತು ಜನಕೇಂದ್ರಿತ ಆಗುತ್ತದೆ. ಅಲ್ಲಿಯವರೆಗೂ ಬರೀ ಅಲಂಕಾರಿಕ ಮತ್ತು ಈಡೇರದ ಪೊಳ್ಳು ಭರವಸೆಗಳಷ್ಟೇ ನಮಗೆ ದಕ್ಕುತ್ತವೆ ಮತ್ತು ಅದಕ್ಕಾಗಿ ನಮ್ಮನ್ನೇ ನಾವು ದೂರಿಕೊಳ್ಳಬೇಕಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.