ಗುರುವಾರ , ಏಪ್ರಿಲ್ 15, 2021
23 °C

ತಾಳ್ಮೆ...ಜಾಣ್ಮೆ...

ಶಿವರಾಮ್ Updated:

ಅಕ್ಷರ ಗಾತ್ರ : | |

ಕೆಲವೊಮ್ಮೆ ಪೊಲೀಸರು ಸಂಬಂಧವಿಲ್ಲದ ಉಸಾಬರಿಗೆ ಸಿಲುಕುವುದು ಉಂಟು. ನನಗೂ ಅಂಥ ಅನುಭವಗಳಾಗಿವೆ. ಯಾರೋ ಪ್ರೇಮಿ ಹೈ-ಟೆನ್ಷನ್ ವಿದ್ಯುತ್ ಕಂಬದ ಮೇಲೆ ಹತ್ತಿ ಸಾಯುವುದಾಗಿ ಬೆದರಿಸುವುದು, ಕಟ್ಟಡದ ಮೇಲೆ ನಿಂತು ಕೆಳಗೆ ನಿಂತವರಿಗೆ ಪ್ರೇಮಿ ಬರದಿದ್ದರೆ ಬೀಳುವುದಾಗಿ ಹೆದರಿಸುವುದು ಇಂಥ ಸಿನಿಮೀಯ ಘಟನೆಗಳು ಬಹಳ ಹಿಂದಿನಿಂದಲೂ ನಡೆದೇ ಇವೆ. ಮೊನ್ನೆಮೊನ್ನೆ ಚಲನಚಿತ್ರ ನಟ ಹರೀಶ್ ರಾಜ್ ಬೆಂಗಳೂರಿನ ಸಂತೋಷ್ ಚಿತ್ರಮಂದಿರದ ಮೇಲೆ ಹತ್ತಿ ಆತ್ಮಹತ್ಯೆಯ ಬೆದರಿಕೆಯನ್ನು ಹಾಕಿದಾಗ ಅಂಥದ್ದೇ ಘಟನೆ ನನಗೆ ನೆನಪಾಯಿತು.ನಾನು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾಗ ನಡೆದ ಘಟನೆ ಅದು. 2002ರಲ್ಲಿ ನಾನು ಅಲ್ಲಿ ಇನ್ಸ್‌ಪೆಕ್ಟರ್ ಆಗಿದ್ದೆ.ಕಂಟ್ರೋಲ್ ರೂಮ್‌ಗೆ ಮೊಬೈಲ್‌ನಿಂದ ಒಂದು ಫೋನ್ ಬಂದಿತ್ತು. ಅವನು ಹೇಳಿದ ಕಡೆಗೆ ನಾನು ತಕ್ಷಣ ಹೋಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆ ವ್ಯಕ್ತಿ ಹೆದರಿಸಿದ್ದ. ನಾನು ಅಲ್ಲಿಗೆ ಹೋದೆ. ಅಷ್ಟು ಹೊತ್ತಿಗಾಗಲೇ ಅಲ್ಲಿ ಜನಜಂಗುಳಿ. ಆತ್ಮಹತ್ಯೆಯ ಬೆದರಿಕೆಯೊಡ್ಡಿದ್ದವನು ಜನತಾ ಪಕ್ಷದ ಕಾರ್ಯಕರ್ತನಾಗಿದ್ದ. ಇಡೀ ಮೆಜೆಸ್ಟಿಕ್ ಹಾಗೂ ಅದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ವಾಹನದಟ್ಟಣೆಯಾಗಿತ್ತು.ಮೆಜೆಸ್ಟಿಕ್ ಪ್ರದೇಶದ ಅಮರ್ ಹೋಟೆಲ್‌ನ ಏಳನೆಯ ಮಹಡಿಯ ಮೇಲಿದ್ದ ಬೋರ್ಡಿನ ಪಕ್ಕ ಅವನು ಹತ್ತಿ ನಿಂತಿದ್ದ. ಒಂದು ಕಾಲನ್ನು ಮಾತ್ರ ಇಟ್ಟುಕೊಳ್ಳಲು ಅವಕಾಶವಿದ್ದ ಸ್ಥಳದಲ್ಲಿ ನಿಂತಿದ್ದ ಅವನು ತನ್ನ ಕೆಲವು ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಸಾಯುವುದಾಗಿ ಫೋನ್‌ನಲ್ಲಿ ಹೇಳಿದ್ದ. ಅಲ್ಲಿಗೆ ಹೋಗಿ ಅವನಿಗೆ ಫೋನ್ ಮಾಡಿದೆ. ನನ್ನ ಬಗ್ಗೆ ಅವನು ಸಾಕಷ್ಟು ಮಾಹಿತಿ ತಿಳಿದುಕೊಂಡಿದ್ದ. ಅದನ್ನೆಲ್ಲಾ ಓತಪ್ರೋತವಾಗಿ ಹೇಳತೊಡಗಿದ. ‘ಅದಿರಲಿ, ಆತ್ಮಹತ್ಯೆ ಮಾಡಿಕೊಳ್ಳುವಂಥಾದ್ದೇನಾಗಿದೆ’ ಎಂದು ಕೇಳಿದೆ. ‘ಸಿಂಗಲ್ ನಂಬರ್ ಹಾಗೂ ಆನ್‌ಲೈನ್ ಲಾಟರಿಯನ್ನು ತಕ್ಷಣ ನಿಷೇಧಿಸಬೇಕು. ಈಗಲೇ ಇಲ್ಲಿಗೆ ಸಿಎಂ ಅವರನ್ನು ಕರೆಸಿ.

 

ನಾನು ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆ. ಈ ಲಾಟರಿಯ ಚಟಕ್ಕೆ ಬಿದ್ದು ಹಾಳಾಗಿಹೋದೆ. ನನ್ನಂಥ ಎಷ್ಟೋ ಅಮಾಯಕ ಜನ ಲಾಟರಿಯ ಚಟಕ್ಕೆ ಬಿದ್ದು, ಸಾಲದ ಶೂಲ ಹೊತ್ತಿದ್ದಾರೆ. ತಕ್ಷಣ ಆನ್‌ಲೈನ್, ಸಿಂಗಲ್ ನಂಬರ್ ಲಾಟರಿ ನಿಷೇಧಿಸದೇ ಹೋದರೆ ನಾನು ಸಾಯುತ್ತೇನೆ. ಈಗಲೇ ಸಿಎಂ ಬರಲಿ, ಇಲ್ಲೇ ಎಲ್ಲಾ ತೀರ್ಮಾನವಾಗಲಿ’ ಎಂದು ಅವನು ಪಟ್ಟುಹಿಡಿದ.ಕೆಳಗೆ ನಿಂತಿದ್ದ ಜನ ಮೇಲಿಂದ ಬೀಳುವಂತೆ ಅವನನ್ನು ಪುಸಲಾಯಿಸುತ್ತಿದ್ದರು. ಬಿದ್ದರೆ ಎಲ್ಲರೂ ಅವನನ್ನು ಕಾಪಾಡುವುದಾಗಿ ಗೇಲಿ ಮಾಡುತ್ತಿದ್ದರು. ಅವನು ಆತ್ಮಹತ್ಯೆ ಮಾಡಿಕೊಳ್ಳಲು ಜನರೇ ಒಂದಿಷ್ಟು ಕಾರಣಗಳನ್ನು ಹುಟ್ಟುಹಾಕಿದ್ದರು. ಆ ವದಂತಿಗಳಿಂದ ಪರಿಸ್ಥಿತಿ ಇನ್ನಷ್ಟು ಅಧ್ವಾನವಾಗಿತ್ತು. ಯಾಕೆಂದರೆ, ಹೆಚ್ಚು ಜನ ಜಮಾಯಿಸಿದರೆ ಟ್ರಾಫಿಕ್ ಸಮಸ್ಯೆ ಇನ್ನೂ ಜಟಿಲವಾಗುತ್ತದೆಂಬುದು ನಮಗೆ ಗೊತ್ತಿತ್ತು.ನಾವು ಕೋಪದಲ್ಲಿ ಮಾತನಾಡಿದರೆ ಅವನು ಧುಮುಕುತ್ತಿದ್ದ. ಜನರನ್ನು ಚದುರಿಸಲು ಒತ್ತಡ ಹಾಕಿದ್ದರೆ ಅವರು ಕೆರಳುತ್ತಿದ್ದರು. ಅವನು ಸತ್ತರೆ ಸಾಯಲಿ ಎಂದರೆ, ಪೊಲೀಸರ ಉದಾಸೀನದಿಂದ ಒಂದು ಜೀವ ಹೋಯಿತು ಎಂಬ ದೂಷಣೆ. ಅದು ನಮಗೆ ಬೇಡವಾಗಿದ್ದ ಪೀಕಲಾಟ. ಆದರೆ, ಬಗೆಹರಿಸದೆ ವಿಧಿಯಿಲ್ಲ. ಅಗ್ನಿ ಶಾಮಕ ದಳದವರು ಬಂದರು. ಅವರಿಗೆ ಕಾರ್ಯಾಚರಣೆ ನಡೆಸಲು ಅಗತ್ಯವಿರುವಷ್ಟು ಸ್ಥಳಾವಕಾಶವೇ ಅಲ್ಲಿರಲಿಲ್ಲ. ಏನು ಮಾಡಬಹುದು ಎಂದು ಯೋಚಿಸುತ್ತಾ ನಾನು ಹೋಟೆಲ್‌ನೊಳಗೆ ಪ್ರವೇಶಿಸಿದೆ.ಬಿಎಸ್‌ಎಫ್‌ನಲ್ಲಿ (ಗಡಿ ಭದ್ರತಾ ಪಡೆ) ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದ ಒಬ್ಬರು ನನ್ನ ಬಳಿಗೆ ಬಂದರು. ಅವರು ಶಸ್ತ್ರವಿಲ್ಲದೆಯೂ ಕಾರ್ಯಾಚರಣೆ ಮಾಡುವುದರಲ್ಲಿ ಪಳಗಿದ್ದವರು. ಹಾಗಾಗಿ ಎತ್ತರದ ಕಟ್ಟಡಗಳ ಸಣ್ಣ ಜಾಗದ ಮೇಲೂ ಜಿಗಿಯುವುದು ಅಭ್ಯಾಸವಾಗಿತ್ತು.ಅನುಮತಿ ಕೊಟ್ಟರೆ ಅವನು ನಿಂತಿದ್ದ ಜಾಗದ ಎರಡು ಅಡಿಯಷ್ಟು ಹಿಂಬದಿಗೆ ಜಿಗಿದು ಅವನನ್ನು ಹಿಡಿದುಕೊಳ್ಳುವುದಾಗಿ ಅವರು ಕೇಳಿಕೊಂಡರು.ಅದು ರಿಸ್ಕ್ ಎಂಬುದು ಗೊತ್ತಿತ್ತು. ಆ ಸಂದರ್ಭದಲ್ಲಿ ನಮಗೆ ಬೇರೆ ದಾರಿಯೂ ಇರಲಿಲ್ಲ. ನಾನು ಫೋನ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೊತೆ ಮಾತನಾಡುತ್ತ, ಅವನಿಗೆ ಗೊತ್ತಾಗದಂತೆ ಇಶಾರೆ ಕೊಟ್ಟೊಡನೆ ಜಿಗಿಯಲು ಅವರು ಸಿದ್ಧರಿದ್ದರು. ಸಾಕಷ್ಟು ಯೋಚಿಸಿ, ಪ್ಲಾನ್ ಮಾಡಿದೆವು. ಎಲ್ಲವೂ ಅಂದುಕೊಂಡಂತೆಯೇ ಆಯಿತು. ಅವರು ಜಿಗಿದು, ಥಟ್ಟನೆ ಅವನನ್ನು ಹಿಡಿದುಕೊಂಡರು. ಪುಣ್ಯಕ್ಕೆ ಯಾವುದೇ ಅವಘಡ ಸಂಭವಿಸಲಿಲ್ಲ.ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದವನನ್ನು ಸಮಾಧಾನಪಡಿಸಿದೆವು. ಮಂಗಳೂರು ಮೂಲದ ಅವನು ಹೋಟೆಲ್‌ನಲ್ಲಿ ಸಣ್ಣಪುಟ್ಟ ಕೆಲಸ ಮಾಡಿದ ಅನುಭವವಷ್ಟೇ ಇದ್ದವನು. ನಿರುದ್ಯೋಗಿಯಾಗಿದ್ದ. ಲಾಟರಿಯ ಮೋಹದಿಂದ ತುಂಬಾ ಹಣ ಕಳೆದುಕೊಂಡಿದ್ದ. ಆ ಹತಾಶೆಯಲ್ಲೇ ಅವನು ಆತ್ಮಹತ್ಯೆಗೆ ಮುಂದಾಗಿದ್ದ. ಸಾಯುವ ಮೊದಲು ಸರ್ಕಾರವನ್ನು ಎಚ್ಚರಿಸಬೇಕು ಎಂದುಕೊಂಡಿದ್ದ. ಅವನ ಉದ್ದೇಶ ಸರಿಯಾಗಿದ್ದರೂ, ಆರಿಸಿಕೊಂಡಿದ್ದ ಮಾರ್ಗ ಸರಿಯಿರಲಿಲ್ಲ. ಅವನ ಜೀವ ಉಳಿಸಿದ ಮೇಲೆ ನಾವು ನಿರಾಳರಾದೆವು. ಮುಂದೆ ಅದೇ ವ್ಯಕ್ತಿ ನಮ್ಮ ಮಾಹಿತಿದಾರನಾದ.ಈ ರೀತಿಯ ಪ್ರಕರಣಗಳನ್ನು ಭೇದಿಸಲು ಹೆಚ್ಚು ತಾಳ್ಮೆ ಬೇಕು. ಅದನ್ನು ನಾನು ಕಲಿತದ್ದು ತರಬೇತಿಯ ಅವಧಿಯಲ್ಲಿ. 1979ರಲ್ಲಿ ನಾನು ಮೊದಲಿಗೆ ಇಲಾಖೆಗೆ ಟ್ರೈನಿ ಸಬ್ ಇನ್ಸ್‌ಪೆಕ್ಟರ್ ಆಗಿ ಮಾಗಡಿ ರಸ್ತೆಯ ಠಾಣೆಗೆ ಬಂದೆ. ಅಲ್ಲಿ ಇನ್ಸ್‌ಪೆಕ್ಟರ್ ಮೋನಪ್ಪ, ಸಬ್ ಇನ್ಸ್‌ಪೆಕ್ಟರ್ ಕೆ.ಎನ್.ವೀರಪ್ಪನವರ ಗರಡಿಯಲ್ಲೇ ನಾನು ಪಳಗಿದ್ದು. ಕೊಲೆಯತ್ನದ ಪ್ರಕರಣದಲ್ಲಿ ರೌಡಿಯೊಬ್ಬನ ಹುಡುಕಾಟ ನಡೆದಿತ್ತು. ಅವನು ಪ್ರಸನ್ನ ಚಿತ್ರಮಂದಿರದಲ್ಲಿ ಸೆಕೆಂಡ್ ಶೋ ಸಿನಿಮಾ ನೋಡುತ್ತಿದ್ದಾನೆ ಎಂಬ ಮಾಹಿತಿ ಬಂತು. ವೀರಪ್ಪನವರ ನೇತೃತ್ವದ ತಂಡ ಅವನನ್ನು ಹಿಡಿಯಲು ಸಿದ್ಧವಾಯಿತು. ಆ ತಂಡದಲ್ಲಿ ನಾನೂ ಇದ್ದೆ. ನನಗೆ ಕೆಲಸವಿನ್ನೂ ಹೊಸತು. ಉತ್ಸಾಹವಷ್ಟೆ ನಮ್ಮ ಬಂಡವಾಳ. ಪ್ರಸನ್ನ ಚಿತ್ರಮಂದಿರಕ್ಕೆ ನಾವು ಸುಮಾರು ರಾತ್ರಿ 9.30ರ ಹೊತ್ತಿಗೆ ತಲುಪಿದೆವು. ಒಳಗೆ ನುಗ್ಗಿ, ಆ ರೌಡಿಯನ್ನು ಹಿಡಿದು ತರಬೇಕೆಂಬುದು ನನ್ನ ನಿಲುವಾಗಿತ್ತು. ವೀರಪ್ಪನವರು ನನಗೆ ಕಡಿವಾಣ ಹಾಕಿದರು. ಒಂದು ವೇಳೆ ಚಿತ್ರಮಂದಿರಕ್ಕೆ ನುಗ್ಗಿದರೆ ಜನರೆಲ್ಲಾ ಗಲಿಬಿಲಿಗೊಂಡು ಹೊರಗೆ ನುಗ್ಗುವ ಸಾಧ್ಯತೆ ಇರುತ್ತದೆ.ಕಾಲ್ತುಳಿತದಲ್ಲಿ ಯಾರಾದರೂ ಅಮಾಯಕರು ಸತ್ತರೆ ಅದರ ನೈತಿಕ ಹೊಣೆಯನ್ನು ನಾವೇ ಹೊರಬೇಕಾಗುತ್ತದೆ. ಹಾಗಾಗಿ ತಾಳ್ಮೆಯಿಂದಲೇ ಇಂಥ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಅವರು ಕಿವಿಮಾತು ಹೇಳಿದರು. ಮುಂದೆ ಅವರೇನು ಮಾಡುತ್ತಾರೆ ಎಂದು ಕುತೂಹಲದ ಕಣ್ಣುಗಳಿಂದ ನಾನು ಕಾದೆ.ಚಿತ್ರಮಂದಿರದ ಎರಡು ಬಾಗಿಲುಗಳನ್ನು ಹೊರತುಪಡಿಸಿ ಮಿಕ್ಕೆಲ್ಲವನ್ನೂ ಮುಚ್ಚಿಸಿದರು. ಬಾಲ್ಕನಿಯಲ್ಲಿ ಒಂದು ಹಾಗೂ ಕೆಳಗೆ ಒಂದು ಬಾಗಿಲುಗಳಷ್ಟೇ ತೆರೆದಿದ್ದದ್ದು. ಅವುಗಳ ಎದುರಿದ್ದ ಎಲ್ಲಾ ದೀಪಗಳನ್ನೂ ಹಾಕಿಸಿದರು. ಹೊರಗೆ ಬರುವವರು ಆ ಎರಡು ಬಾಗಿಲುಗಳಲ್ಲಿ ಮಾತ್ರ ಬರುವ ಅನಿವಾರ್ಯತೆ ಇತ್ತು. ನಮ್ಮ ತಂಡದವರನ್ನು ಎರಡೂ ಬಾಗಿಲುಗಳ ಮುಂದೆ ವೀರಪ್ಪನವರು ನಿಯೋಜಿಸಿದರು. ರೌಡಿ ಸಲೀಸಾಗಿ ಸಿಕ್ಕಿದ. ಅವನ ಕೆಲವು ಸಹಚರರೂ ಸುಲಭವಾಗಿ ಕೈಗೆ ಸಿಕ್ಕರು.ವೀರಪ್ಪನವರು ಹೇಳಿಕೊಟ್ಟ ತಾಳ್ಮೆಯ ಪಾಠ ನನ್ನ ಮನಸ್ಸಿನಿಂದ ಅಳಿಸಿಹೋಗಲು ಸಾಧ್ಯವೇ ಇಲ್ಲ. ಯಾಕೆಂದರೆ, ನಾನೂ ಚಿತ್ರಮಂದಿರದಲ್ಲಿ ಇನ್ನೊಬ್ಬ ರೌಡಿಯನ್ನು ಅದೇ ರೀತಿ ಕಾರ್ಯಾಚರಣೆ ನಡೆಸಿ 1994ರಲ್ಲಿ ಹಿಡಿದೆ. ಕೊಲೆಯತ್ನದ ಆರೋಪದ ಮೇಲೆ ಗೂಂಡಾ ಕಾಯ್ದೆಯಡಿ ಆ ರೌಡಿಯನ್ನು ಬಂಧಿಸಬೇಕಿತ್ತು. ಆಗ ರಜನೀಕಾಂತ್ ನಟಿಸಿದ್ದ ಸಿನಿಮಾ ಬಿಡುಗಡೆಯಾಗಿತ್ತು. ಪೂರ್ಣಿಮಾ ಟಾಕೀಸಿನಲ್ಲಿ ಆ ರೌಡಿಯು ತನ್ನ ಸಹಚರರೊಟ್ಟಿಗೆ ಆ ಸಿನಿಮಾ ನೋಡುತ್ತಿದ್ದಾನೆಂಬ ಮಾಹಿತಿ ಬಂತು. ಅದೂ ಸೆಕೆಂಡ್ ಶೋ. ಥೇಟ್ ವೀರಪ್ಪನವರು ಮಾಡಿದಂತೆಯೇ ನಾನೂ ಪ್ಲಾನ್ ಮಾಡಿದೆ.ನನ್ನ ಜೊತೆ ಕೆಲಸ ಮಾಡುತ್ತಿದ್ದ ಹೊಸಬರು ಹದಿನೈದು ವರ್ಷದ ಹಿಂದೆ ನಾನು ಹೇಗೆ ಆತುರದಿಂದ ವರ್ತಿಸಿದ್ದೆನೋ ಹಾಗೆಯೇ ವರ್ತಿಸಿದರು. ಅವರನ್ನು ಸಮಾಧಾನಪಡಿಸಿ ಬಾಗಿಲುಗಳ ಮುಂದೆ ಕಾದೆವು. ಆ ರೌಡಿ ಹಾಗೂ ಅವನ ಐವರ ಸಹಚರರು ಸುಲಭವಾಗಿ ಸೆರೆಸಿಕ್ಕರು. ದೀರ್ಘ ಕಾಲದಿಂದ ಹುಡುಕುತ್ತಿದ್ದ ರೌಡಿಯನ್ನು ಬಂಧಿಸಿದ್ದರಿಂದ ಆಗ ಕಮಿಷನರ್ ಆಗಿದ್ದ ಕೋದಂಡರಾಮಯ್ಯ ಹಾಗೂ ಡಿಸಿಪಿಯಾಗಿದ್ದ ರಾಮಕೃಷ್ಣ ಅವರು ನಮ್ಮನ್ನು ಶ್ಲಾಘಿಸಿದರು. ಗೂಂಡಾ ಕಾಯ್ದೆಯಡಿ ಶ್ರೀರಾಮಪುರ ಪೊಲೀಸರು ಆ ರೌಡಿಯನ್ನು ವಶಕ್ಕೆ ತೆಗೆದುಕೊಂಡರು. ಎರಡು ವರ್ಷ ಅವನು ಮೈಸೂರು ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಯಾದ. ನಗರಸಭಾ ಸದಸ್ಯನಾದ.ರಿಸರ್ವೇಷನ್ ನಿಯಮ ಬದಲಾದದ್ದೇ ಅವನ ಪತ್ನಿಯನ್ನೂ ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಿದ. ಈಗ ಅವನ ಪತ್ನಿ ಈಗ ನಗರಸಭಾ ಸದಸ್ಯೆ.

ಪೊಲೀಸ್ ಕೆಲಸದಲ್ಲಿ ಸಮಯ ಪ್ರಜ್ಞೆ ಎಷ್ಟು ಮುಖ್ಯ ಎಂಬುದನ್ನು ನಮಗೆ ಇಂಥ ಅನೇಕ ಪ್ರಕರಣಗಳೇ ಕಲಿಸುತ್ತಾ ಹೋದವು. ಛಲ, ಬಲ, ಹೋರಾಟ ಮನೋಭಾವ, ಧೈರ್ಯ ಇವೆಲ್ಲಾ ಗುಣಗಳು ಪೊಲೀಸರಿಗೆ ಎಷ್ಟು ಮುಖ್ಯವೋ ತಾಳ್ಮೆ ಕೂಡ ಅಷ್ಟೇ ಮುಖ್ಯ ಎಂಬುದು ನನ್ನ ಅರಿವಿಗೆ ಬರಲು ಹೆಚ್ಚು ಕಾಲ ಬೇಕಾಗಲಿಲ್ಲ.

ಮುಂದಿನ ವಾರ: ವಿಧಾನಸೌಧದ ಗಲಭೆ ಭೇದಿಸಿದ್ದು...

ಶಿವರಾಂ ಅವರ ಮೊಬೈಲ್ ನಂಬರ್ 94483 13066

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.