ಭಾನುವಾರ, ಮೇ 9, 2021
25 °C

ತೆರೆಯ ಮೇಲಿನ ಬಿಂಬಗಳ ಲೋಕದಲ್ಲಿ

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ತೆರೆಯ ಮೇಲಿನ ಬಿಂಬಗಳ ಲೋಕದಲ್ಲಿ

ಮೊನ್ನೆ ನನ್ನ ಗೆಳೆಯರೊಬ್ಬರು ಹೀಗೇ ಸಹಜ­ವಾಗಿ ಮಾತಾಡುತ್ತಾ ಬಾಲಿವುಡ್ ಸಿನಿಮಾದ ಚರ್ಚೆ ಶುರು ಮಾಡಿದರು. ಚಿಕ್ಕಂದಿ­ನಲ್ಲಿ ಕ್ಲಾಸಿಗೆ ಚಕ್ಕರ್ ಹೊಡೆದು ದಿನಕ್ಕೆ ಎರಡೋ ಮೂರೋ ಸಿನಿಮಾ ನೋಡುತ್ತಿದ್ದ ಕಾಲದಿಂದ ನನಗೆ ಸಿನಿಮಾದ ಬಗ್ಗೆ ಅಪಾರ ಆಸಕ್ತಿ. ಆದರೆ ಇಂದಿನ ಸಿನಿಮಾ­ಗಳನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟ­ವಾಗುತ್ತಿದೆ. ಈ ವಿಚಾರವನ್ನು ನನ್ನ ಆ ಗೆಳೆಯರಿಗೆ ತಿಳಿಸಲಾಗಿ ಅವರು ಇಂದಿನ ಸಿನಿಮಾ ಲೋಕ ಮತ್ತು ಅದನ್ನು ಎಂಟೂ ದೆಸೆಗಳಲ್ಲಿ ಆವರಿಸಿ­ರುವ ಗಿಲೀಟಿನ ಲೋಕದ ಬಗ್ಗೆ ಗಾಢ ಒಳನೋಟಗಳನ್ನು ನೀಡಬಲ್ಲ ಒಂದು ಸಲಹೆ ನೀಡಿದರು. ‘ಗೂಗಲ್‌ಗೆ ಹೋಗಿ ಮೇಕಪ್ ರಹಿತ ಬಾಲಿವುಡ್ ತಾರೆಯರು ಅಂತ ಟೈಪ್ ಮಾಡಿ. ಆಗ ಆ ಥಳುಕಿನ ಲೋಕದ ಬಣ್ಣ ಪೂರ್ತಿ ಬಿಟ್ಟುಕೊಳ್ಳುತ್ತೆ’

ನಾನಾದರೋ ಅವರ ಸಲಹೆಯನ್ನು ಗಂಭೀರ­ವಾಗಿ ತೆಗೆದುಕೊಂಡು ಅವರು ಹೇಳಿದ ರೀತಿ ಟೈಪ್ ಮಾಡಿದಾಗ ಮೇಕಪ್‌ ರಹಿತ ಬಾಲಿವುಡ್ ನಟ-ನಟಿಯರ ಅನಾಕರ್ಷಕ ಭಾವ­ಚಿತ್ರಗಳು ಕಂಪ್ಯೂಟರಿನ ಸರ್ವಸಾಕ್ಷಿ ತೆರೆಯ ಮೇಲೆ ಮೂಡಿದವು. ಅದನ್ನು ನೋಡಿ ನನಗೆ ದಂಗು ಬಡಿದಹಾಗಾಯಿತು. ಮೇಕಪ್ ಧಾರಣೆ ಮಾಡಿಕೊಂಡಾಗ ಕನಸಿನ ರಾಣಿಯರ ಹಾಗೆ ಕಂಗೊಳಿಸುವ ಕಡುಚೆಲುವೆಯರು ಇವರೇ ಏನು ಎಂದು ನನ್ನನ್ನು ನಾನೇ ಕೇಳಿಕೊಳ್ಳತೊಡಗಿದೆ.ಭೋರ್ಗರೆವ ಮಳೆಯ ನೀರಿನ ಹೊಡೆತಕ್ಕೆ ಸಿಲುಕಿ ರಂಗುರಂಗಿನ ಚಿಟ್ಟೆಗಳು ತಮ್ಮ ರೆಕ್ಕೆ­ಗಳಿಂದ ಬೇರ್ಪಟ್ಟು ಚದುರಿಬಿದ್ದಿರುವ ದೃಶ್ಯ­ಗಳನ್ನು ಹಿಮಾಲಯದ ತಪ್ಪಲುಗಳಲ್ಲಿ ಹಲವು ಬಾರಿ ಕಂಡಿರುವ ನನಗೆ ರೆಕ್ಕೆಯಿಂದ ಬೇರ್ಪಟ್ಟ ಚಿಟ್ಟೆಗಳು ಕೇವಲ ಹುಳಗಳಂತೆ ಕಾಣುವುದು ನೆನಪಾಯಿತು. ಮೇಕಪ್ ವಿಮುಕ್ತೆಯರಾದ ಸಿನಿಮಾ ನಟಿಯರೂ ಅತ್ಯಂತ ರೂಪರಹಿತೆ­ಯರಾಗಿ ಕಂಡರು. ಅಂದರೆ ಅವರು ಹುಳು­ಗಳಂತೆ ಅಂತ ನಾನು ಹೇಳುತ್ತಿಲ್ಲ. ಅವರನ್ನು ಅಗೌರವ­ದಿಂದ ನೋಡುವುದು ಸರಿಯಲ್ಲ. ಆದರೆ ಹೇಗೆ ಚಿಟ್ಟೆಯ ರೆಕ್ಕೆ ರೂಪ ಮತ್ತು ಅದರ ರೆಕ್ಕೆ ಕಳೆದ ರೂಪ ಎರಡರ  ನಡುವಿನ ತದ್ವಿರುದ್ಧ ಸಂಬಂಧ ನನಗೆ ಒಂದು ವಿದ್ಯುತ್ ಛಳುಕು ಹೊಡೆಸಿತ್ತೋ ಅದೇ ರೀತಿಯ ಅನುಭವ ಈ ಫೋಟೊ­ಗಳನ್ನು ನೋಡಿದಾಗ ಆಯಿತು ಎಂದು ಮಾತ್ರ ಹೇಳುತ್ತಿದ್ದೇನೆ. ಇಂದಿನ ಯುವತಿಯರ ಆರಾಧ್ಯ ಆದರ್ಶಗಳಾಗಿರುವ, ಇಂದಿನ ಯುವಕರ ಕಾಮವನ್ನು ಕ್ರೂರವಾಗಿ ಕೆರಳಿಸುವ ಅಂದಗಾತಿಯರು ಇವರೇನಾ ಎಂದು ಬೆಚ್ಚಿದೆ.ಇಂದಿನ ಯುವಪೀಳಿಗೆಯನ್ನು ಟೀಕಿಸುತ್ತಾ ನನ್ನ ದೌರ್ಬಲ್ಯಗಳನ್ನು ಇಳಿವಯಸ್ಸಿನಲ್ಲಿ ಮುಚ್ಚಿ­-ಡುವ ಪ್ರಯಾಸವನ್ನೂ ನಾನಿಲ್ಲಿ ಮಾಡು­ತ್ತಿಲ್ಲ. ವಯಸ್ಸಾದ ಹಾಗೆ ಕಾಮಾ­ಕರ್ಷಣೆ ಕಡಿಮೆ­ಯಾಗುತ್ತದೆಂದೂ ನಾನು ತಿಳಿದಿಲ್ಲ. ನನ್ನ ಮೆಚ್ಚಿನ ಹೀರೋಯಿನ್‌ಗಳಾಗಿರುವ ರಾಣಿ ಮುಖರ್ಜಿ ಮತ್ತು ಪ್ರಿಯಾಂಕ ಛೋಪ್ರಾ ಇಬ್ಬರೂ ಇಷ್ಟು ಸಾದಾ ಕಾಣುತ್ತಾರಲ್ಲ ಎಂದು ನನಗೆ ಅತೀವ ವಿಷಾದ,ಖೇದವುಂಟಾದುದನ್ನು ಲೋಕಸಾಕ್ಷಿಯಾಗಿ ಒಪ್ಪಿಕೊಳ್ಳುತ್ತೇನೆ.ಕಳೆದ ಅರ್ಧ ಶತಮಾನದಿಂದ ಸಿನಿಮಾ ಲೋಕ ನಮ್ಮ ಲೋಕವನ್ನು ಹೇಗೆ ಪ್ರಭಾವಿ­ಸು­ತ್ತದೆ ಎಂದು ನಾನು ಬಲ್ಲೆ. ಆಯಾ ದಶಕ­ಗಳಲ್ಲಿ ಜನಪ್ರಿಯರಾಗಿದ್ದ ನಟ-ನಟಿಯರು ಆ ಕಾಲದ ಗಂಡಸು ಹೆಂಗಸರ ಉಡುಗೆ ತೊಡಿಗೆ­ಗಳನ್ನು, ಕೇಶ­ವಿನ್ಯಾಸವನ್ನು, ಚಲನವಲನಗಳನ್ನು, ಭಾವ­ಭಂಗಿಗಳನ್ನು ರೂಪಿಸುತ್ತಾರೆ ಎಂದು ಕಣ್ಣಾರೆ ಕಂಡಿದ್ದೇನೆ.ನಮ್ಮ ಪ್ರೆಸ್ಸಿನಲ್ಲಿ ಹರಿ ಎಂಬ ಅದ್ಭುತವಾದ ಯುವಕ ಕೆಲಸ ಮಾಡುತ್ತಿದ್ದ. ಅವನು ಆ ಕಾಲದ ಹಾಟ್ ಹೀರೋ ದೇವಾನಂದ್‌ರ ನಕಲಾ­­­ಗುವುದೇ ತನ್ನ ಜೀವನದ ಪರಮೋದ್ದೇಶ­ವೆಂದು ತಿಳಿದಿದ್ದ. ದೇವಾನಂದ್ ಹಾಗೆ ತಲೆ­ಯನ್ನು ವಾರೆ ಮಾಡಿ ನೋಡುವುದನ್ನು ಮಾತಾ­ಡುವುದನ್ನು ಬಹಳ ಶ್ರಮಪಟ್ಟು ಅಭ್ಯಾಸ ಮಾಡಿಕೊಂಡಿದ್ದ. ಜೊತೆಗೆ ಅದೇ ರೀತಿಯ ಹೇರ್ ಸ್ಟೈಲ್, ಅದೇ ರೀತಿಯ ದಿರಿಸು.  ಇದ­ಕ್ಕಾಗಿ ಅವನನ್ನು ನಮ್ಮ ಪ್ರೆಸ್ಸಿನಲ್ಲೇ ಕೆಲಸ ಮಾಡು­ತ್ತಿದ್ದ ಅವರ ಮಾವ ಚಿನ್ನಪ್ಪ ಯಾವಾ­ಗಲೂ ಬೈಯುತ್ತಿದ್ದರು.  ಮಿಕ್ಕವರು ಅವನನ್ನು ಮರಿ ದೇವಾನಂದ್ ಅತ ಕರೆಯುತ್ತಿದ್ದರು. ಆದರೆ ಹರಿ ಇವೆಲ್ಲಕ್ಕೂ ಕುರುಡಾಗಿ ಕಿವುಡಾಗಿ ತನ್ನ ದೇವಾನಂದ್‌ತನವನ್ನು ದಿನೇದಿನೇ ವರ್ಧಿಸಿ­ಕೊಳ್ಳುತ್ತಲೇ ಇದ್ದ. ಪಾಪ, ಒಂದು ದಿನ ಒಂದು ದುರ್ಘಟನೆ ಸಂಭವಿಸಿತು. ದೇವಾನಂದ್‌ನ ಹೆಸರಾಂತ ಸಿನಿಮಾ ‘ಸಿ.ಐ.ಡಿ’ಯ ‘ಲೇಕೆ ಪೆಹಲಾ ಪೆಹಲಾ ಪ್ಯಾರ್’ ಹಾಡು ಹೇಳುತ್ತಾ ಆಧ್ಯಾತ್ಮಿಕ ಆನಂದದಲ್ಲಿ, ಕನಕಪುರದ ಬಯಲು­ನಾಟಕ ತಂಡದವರ ‘ರಾಮಾಂಜನೇಯ ಯುದ್ಧ’ ನಾಟಕದ ಕರಪತ್ರಗಳನ್ನು ಟ್ರೆಡಲ್ ಮಿಷನ್ನಿನಲ್ಲಿ ಪ್ರಿಂಟ್ ಮಾಡುತ್ತಿದ್ದವನು ಆ ಆನಂದದಲ್ಲಿ ಕಾಗದದ ಜೊತೆಗೆ ತನ್ನ ತೋರು ಬೆರಳನ್ನೂ ಮಿಷನ್ನಿನೊಳಗಡೆ ತುರುಕಿಸಿ ಆ ಬೆರಳನ್ನು ಅಪ್ಪಚ್ಚಿ ಮಾಡಿಕೊಂಡ. ಸಿನಿಮಾ ಹಾಡು ಹಾಡುತ್ತಿದ್ದ ಬಾಯಿ ನೋವಿನಿಂದ ಕಿರುಚ­ತೊಡಗಿತ್ತು. ಕೂಡಲೇ ನಮ್ಮ ಮ್ಯಾನೇಜರ್ ರಾಮರಾವ್ ಅವನನ್ನು ವಿಕ್ಟೋರಿಯಾ ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗಕ್ಕೆ ಕರೆದೊಯ್ಯಲಾಗಿ ಅಲ್ಲಿನ ತಜ್ಞರು ಆ ದೇವಾನಂದ್ ಭಕ್ತನ ತೋರುಬೆಳನ್ನು ಅವನ ದೇವಾ­ನಂದ್‌ಮಯ ಘಟದಿಂದ ಕತ್ತರಿಸಿ ಹಾಕಿದರು.‘ಪೆಹಲಾ ಪೆಹಲಾ ಪ್ಯಾರ್ ನ’ ಆ ಗಾಯ­ದಿಂದ ಅವನು ಮೂರು ಮಾಸಗಳಲ್ಲಿ ಗುಣವಾಗಿ ತೋರುಬೆರಳುರಹಿತನಾಗಿ ಕೆಲಸಕ್ಕೆ ಹಿಂದಿರುಗಿದ. ಆದರೆ ಅವನ ದೇವಾನಂದ್‌ತನ ಆ ಘಟನೆಯಿಂದ ಯಾವ ರೀತಿಯಿಂದಲೂ ಕಡಿಮೆಯಾಗಲಿಲ್ಲ.ಆ ಹರಿಯನ್ನು ಸದಾ ತಮಾಷೆ ಮಾಡುತ್ತಿದ್ದ ನಾನೂ ಮುಂದೊಮ್ಮೆ ಅವನಂತೆಯೇ ಅನು­ಕರಣಾಪರಾಯಣನಾದೆ. ಒಂದಷ್ಟು ದಿನ ಎಂ ಜಿ ಆರ್ ಹಾಡುಗಳನ್ನು ದೇವರನಾಮವೆಂಬಂತೆ ಗುನುಗುತ್ತಾ ನನ್ನ ಸಹಪಾಠಿಗಳ ನಡುವೆ ಸುಳಿ­ಯುತ್ತಿದ್ದೆ. ನನ್ನ ಸಿನಿಮಾ ಹುಚ್ಚು ನನ್ನ ಓದಿಗೆ ಮುಳುವಾಗಿ ಎಸ್ ಎಸ್ ಎಲ್ ಸಿಯಲ್ಲಿ ಅದ್ಭುತ­­ವಾದ ರೀತಿಯಲ್ಲಿ ಫಿಸಿಕ್ಸ್ ಮತ್ತು ಮ್ಯಾಥ್ಸ್ ನಲ್ಲಿ ಢುಮುಕಿ ಹೊಡೆದ ಸಂದರ್ಭ­ದಲ್ಲಿ ಧರ್ಮೇಂದ್ರ ನಟಿಸಿದ ಆ ಯುಗದ ಸೂಪರ್ ಹಿಟ್ ‘ಫೂಲ್ ಔರ್ ಪತ್ಥರ್’ ಸಿನಿಮಾದ ಫ್ಯಾನಾಗಿಹೋದೆ. ಆ ಸಿನಿಮಾವನ್ನು ಅದೆಷ್ಟು ಸಲ ನೋಡಿದೆನೋ ನೆನಪಿಲ್ಲ.­ಧರ್ಮೇಂದ್ರರಂತೆ ಎದೆಯ ಮತ್ತು ತೋಳಿನ ಮಾಂಸ ಖಂಡಗಳನ್ನು ಉಬ್ಬಿಸಿಕೊಳ್ಳಲೆಂದು ಗರಡಿ ಸಾಧನೆ ಮಾಡತೊಡಗಿದೆ. ಅವರ ರೀತಿ­ಯಲ್ಲಿ ಜರ್ಕಿನ್ ಹಾಕಿಕೊಂಡು ಕನ್ನಡಿ ಮುಂದೆ ನಿಂತು ಪಡಿಮೂಡಿದಾಕೃತಿಗೆ ನಾನೇ ಮುಗ್ಧ­ನಾಗುತ್ತಿದ್ದಾಗ ನನ್ನ ಗುಂಗುರುಕೂದಲು ನನ್ನನ್ನು ಕೆರಳಿಸಿತು. ಧರ್ಮೇಂದ್ರನ ಹಾಗೆ ನೀಳವಲ್ಲದ ಮತ್ತು ನಿಗುರಿ ನಿಲ್ಲುವ ಕೂದಲನ್ನು ಪಡೆಯ­ಬೇಕೆಂದು ಪಣ ತೊಟ್ಟೆ. ನಾಯಿಯ ಡೊಂಕು­ಬಾಲದಂತೆ ಅದೆಷ್ಟು ಬಾಚಿನೇರವಾಗಿ ನಿಲ್ಲಿಸಿ­ದರೂ ಮತ್ತೆ ಸುರಳುಸುರಳಿ ಸುತ್ತಿಕೊಳ್ಳುತ್ತಿದ್ದ ನನ್ನ ಕೂದಲನ್ನು ಶಪಿಸತೊಡಗಿದೆ. ನನ್ನ ಪ್ರಾಣ­ಮಿತ್ರರಾದ ಚೌರದಂಗಡಿಯವರನ್ನು ಬೇಡಿ­ಕೊಳ್ಳ­ತೊಡಗಿದೆ: ‘ಹೇಗಾದರೂ ಮಾಡಿ ನನ್ನ ಕೂದಲನ್ನು ಧರ್ಮೇಂದ್ರರ ಕೂದಲಹಾಗೆ ಮಾಡಿ’ ಎಂದು. ಅವರು ಮುಸುಮುಸು ನಗು­ತ್ತಿದ್ದರು. ಕೊನೆಗೊಮ್ಮೆ ಬಹುಮಟ್ಟಿಗೆ ಯಶಸ್ವಿ­ಯಾದಾಗ ನನ್ನ ಕಿಲಾರಿ ರೋಡಿನ ರೌಡಿ ಗೆಳೆ­ಯರು ನನ್ನನ್ನು  ನೋಡಿ ‘ ಏನಮ್ಮಾ, ಥೇಟ್ ಧರ್ಮೇದ್ರನ ಥರ ಕಾಣ್ತಾ ಇದ್ಯಲ್ಲೋ’ ಅಂದಾಗ ಸಾಸಿವೆಯ ಮೇಲೆ ಸಾಗರ ಹರಿ­ದಂತಾಗಿ ಹಿರಿಹಿರಿಹಿಗ್ಗಿದೆ. ಅವರ ತಜ್ಞ ಸಲಹಾ­ನುಸಾರ ಮೂರು ಬಾರಿ ತಲೆಯನ್ನು ಬೋಡಿ ಹೊಡೆಸಿಕೊಂಡೆ.ಇನ್ನೊಂದು ಘಟ್ಟದಲ್ಲಿ ಶಿವಾಜಿಗಣೇಶನ್‌ರ ಹಾಗೆ ಸ್ಟೈಲಾಗಿ ಸಿಗರೇಟು ಸೇದಬೇಕೆಂದು ಸಿಗರೇಟು­ ದಾಸನಾಗಿ ಹೋದೆ. ಅಂದು ಶುರುವಾದ ಆ ದುಶ್ಚಟ ಇಂದಿಗೂ ಬಿಟ್ಟಿಲ್ಲ.ಈ ಲಘುಘಟನೆಗಳನ್ನು ನೆನಪಿಸಿಕೊಳ್ಳುವು ದರ ಗಂಭೀರ ಉದ್ದೇಶವೆಂದರೆ ನಮ್ಮ ಯುಗದ ಜನಪ್ರಿಯ ಮಾಧ್ಯಮವಾದ ಸಿನಿಮಾ ನಮ್ಮನ್ನು ಯಾವ ಮಟ್ಟದಲ್ಲಿ ಪ್ರಭಾವಿಸುತ್ತದೆ ಎಂಬು ದನ್ನು ಮನವರಿಕೆ ಸೋದಾಹರಣವಾಗಿ, ಮಾಡಿ­ಕೊಡಲು. ತೆರೆಯ ಮೇಲಿನ ಬಿಂಬಗಳು ಆಲೋಚನಾ ಪೂರ್ವ ಸ್ಥಿತಿಯಲ್ಲಿ, ವಿಮರ್ಶಾ ಶಕ್ತಿಗೆ ಹೊರತಾಗಿ ನಮ್ಮನ್ನು ಲೂಟಿ ಮಾಡಿ ಬಿಟ್ಟಿರುತ್ತವೆ. ದೈವವಶಾತ್ ಮುಂದೆ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾದ ಸಂದರ್ಭದಲ್ಲಿ ನಮ್ಮ ಗುರುಗಳಾದ ಲಂಕೇಶರಂಥವರ ಆರೋ­ಗ್ಯ­­ಕರ ಪ್ರಭಾವದಿಂದ ಗಂಭೀರ ಸಿನಿಮಾದ ಬಗ್ಗೆ ತೀವ್ರ ಆಸಕ್ತಿ ಬೆಳೆಸಿಕೊಂಡ ಕಾರಣ ಜನಪ್ರಿಯ ಸಿನಿಮಾದ ಅದಮ್ಯ ಮೋಡಿಯಿಂದ ಪಾರಾದೆ. ಆದರೆ ನಮ್ಮ ಲೋಕದ ಎಲ್ಲಾ ಮನುಜರಿಗೆ ಆ ಅದೃಷ್ಟ ದುರ್ಲಭ.ನಾನು ಈಗಾಗಲೇ ಕಂಡು ಉಂಡಿರುವ ಅರ್ಧಶತಮಾನಕ್ಕೂ ಹೆಚ್ಚಿನ ಜೀವಾವಧಿಯಲ್ಲಿ ನನ್ನ  ಹರೆಯದ ಕಾಲಕ್ಕೆ ಹೋಲಿಸಿದರೆ ಇಂದು ತೆರೆಯ ಮೇಲಿನ ಬಿಂಬಗಳ ಪ್ರಭಾವ ಅದೆಷ್ಟೋ ಪಟ್ಟು ಹೆಚ್ಚಿದೆ.  ಈಗಂತೂ ಅವರದೇ ಜಗತ್ತು. ಉದಾಹರಣೆಗೆ ಬಾಲಿವುಡ್ ಇಂದು ಹಾಲಿ­ವುಡ್ಡನ್ನೂ ಹಿಂದೆ ಹಾಕಿ ಇಂದಿನ ಜಗತ್ತಿನ ಯುವಪೀಳಿಗೆಯ ವಿಶ್ವಸಂಸ್ಕೃತಿಯಾಗಿ ಬೆಳೆದು ನಿಂತಿದೆ. ಇತಿಹಾಸಾರ್ಹ ವ್ಯಕ್ತಿಗಳ ಮೇಣದ ಪ್ರತಿಮೆಗಳನ್ನು ಪ್ರದರ್ಶಿಸುವ ಮೇಡಂ ಟುಸ್ಸಾಡ್ ಮ್ಯೂಸಿಯಮ್‌ನವರು ಮೊನ್ನೆ ಮೊನ್ನೆ ತಮ್ಮ ಸಂಗ್ರಹಾಲಯಕ್ಕೆ  ಅಮಿತಾಭ್ ಬಚ್ಚನ್, ಐಶ್ವರ್ಯ ರೈ, ಕರೀನಾ, ಹೃತಿಕ್ ರೋಷನ್ ಮತ್ತು ಶಾರುಖ್ ಖಾನ್ ಅವರ ಪ್ರತಿಮೆಗಳನ್ನು ಸೇರ್ಪಡೆ ಮಾಡಿದ್ದಾರೆ. ಬರ್ಲಿನ್‌ನಲ್ಲಿ ಅವುಗಳ ಸಾರ್ವಜನಿಕ ಪ್ರದರ್ಶನ ಒಂದು ದಿನ ನಡೆದಾಗ ಇಲ್ಲಿನ ಯುವಕ ಯುವತಿಯರು ತಮ್ಮ ದೇವರ ಜೊತೆಗೆ ಫೋಟೊ ತೆಗೆಸಿಕೊಳ್ಳಲಿಚ್ಛಿಸುವ ಭಕ್ತ ಶಿರೋಮಣಿಗಳ ಹಾಗೆ ಆ ಪ್ರತಿಮೆಗಳ ಮೈ ಸೋಕಿ ನಿಂತು ತಮ್ಮ ಬದುಕಿನ ಆ ಪರಮಾನಂದದ ಗಳಿಗೆಗಳನ್ನು ಫೋಟೊ ತೆಗೆಸಿಕೊಳ್ಳುತ್ತಿರುವುದನ್ನು ಕಂಡು ನಾನು ಬೆರಗಾಗಿಹೋದೆ.ಜನಪ್ರಿಯ ಕಲೆಗಳು ಇಂದು ನಮ್ಮ ಜಗತ್ತನ್ನು ಬುದ್ಧ -ಏಸೂಗಳಿಗಿಂತಾ ಇತಿಹಾಸ ಪ್ರಸಿದ್ಧ  ನಾಯಕರುಗಳಿಗಿಂತಾ  ಜಗಜ್ಜಾಹೀರಾದ ಕಲಾ­ಕಾರ­ರಿಗಿಂತಾ ಹೆಚ್ಚಿನ ಪ್ರಮಾಣದಲ್ಲಿ ಪ್ರಭಾವಿ­ಸುತ್ತಿವೆ. ಅವುಗಳಲ್ಲಿ ಸಿಂಹಪಾಲು ಸಿನಿಮಾ­ಗಳದು, ಜಾಹಿರಾತುಗಳದು. ನಮ್ಮ ದೃಶ್ಯ ಮಾಧ್ಯಮಗಳ ಸಮಾಚಾರ ಭಾಗಗಳು ಇಂದು ಸಿನಿಮಾ ಮತ್ತು ಜಾಹೀರಾತಿನ ನಡುವೆ ಸ್ಯಾಂಡ್‌­ವಿಚ್ಚಾಗಿದೆ. ಸ್ಪಪ್ನದರ್ಶನ ಮಾಡಿಸಿ ನಿಜದ ನೆನಹನ್ನು ಮರೆಸುವ ಇಂಥ ಬಿಂಬಗಳ ಹಲ್ಲೆ ರಾಜ­ಕಾರಣವನ್ನೂ ಹೊಕ್ಕಿದೆ. ಚುನಾವಣಾ ಪ್ರಚಾರ, ಜನಪ್ರತಿನಿಧಿಗಳ ವಾಗ್ವಾದಗಳು ಎಲ್ಲವೂ ಇಂದು ಬಿಂಬಾವೃತ ಜಗತ್ತಿನಲ್ಲಿ ಭ್ರಮಾ­ತ್ಮಕ ಮನರಂಜನೆಯ ಆಯಾಮ ಪಡೆದು­­ಕೊಂಡಿವೆ.ಧರ್ಮವನ್ನು ಜನರ ಅಫೀಮೆಂದು ಕರೆದ ಕಾರ್ಲ್ ಮಾರ್ಕ್ಸ್  ಇವತ್ತು ಈ ಧರಿತ್ರಿಗೆ ವಾಪಸಾದರೆ ತನ್ನ ಹೇಳಿಕೆಯನ್ನು ಬದಲಿಸಿ ಈ ಬಿಂಬಗಳ ಸಂಭ್ರಮವನ್ನೇ ಜನರ ಅಫೀಮೆಂದು ಕರೆದಾನು. ವಾಣಿಜ್ಯೀಕರಣ­ಗೊಂಡು  ಕೃತಾರ್ಥ­ರಾಗಿರುವ ತೋರಿಕೆಯ ಲೋಕೋದ್ಧಾರಕ ಗುರು­ಶ್ರೇಷ್ಠರು ತಮ್ಮ ಪ್ರಚಾರ­ಗಳಲ್ಲಿ ಜಾಹೀ­ರಾತು ಮತ್ತು ಸಿನಿಮಾದ ಪ್ರಚಾರ ಮಾದರಿ­­­ಗಳನ್ನು ಶರವೇಗದಿಂದ ಅಳ­ವಡಿಸಿ­ಕೊಳ್ಳ­ಹತ್ತಿ­ದ್ದಾರೆ. ಸಮಾಜದ ಸ್ವವಿಮರ್ಶೆಯನ್ನು ಜಾಗೃತ­­ವಾಗಿರಿ­ಸಬೇಕಾದ ಜವಾಬ್ದಾರಿ ಹೊತ್ತ ಸಾಹಿತಿ­ವರೇಣ್ಯರೂ ಈ ಬಿಂಬಗಳ ಲೋಕದ ಸಂಭ್ರಮ­ದೊಂದಿಗೆ ಪೈಪೋಟಿ­­ಗಿಳಿಯುತ್ತಿದ್ದಾರೆ (ಉದಾಹರಣೆ: ಜೈಪುರ ಉತ್ಸವ). ಕಬೀರ ಹೇಳುತ್ತಾನೆ:ಇಡೀ ಜಗತ್ತು ಸುಖಿಯಾಗಿ ಮಲಗಿದೆ; ಆದರೆ ದಾಸ ಕಬೀರ ದುಃಖಿ; ಆದ್ದರಿಂದ ಎಚ್ಚೆತ್ತು ಕುಳಿತಿದ್ದಾನೆ. ಎಲ್ಲರೂ ಸ್ವಪ್ನಾವೃತರಾಗಿರುವಾಗ ಜಾಗರ­ವಿದ್ದು  ಸುತ್ತಾ ಘೇರಾಯಿಸುತ್ತಿರುವ ಅಪಾಯಗಳನ್ನು ಮುಂಗಂಡು ಮಲಗಿರುವ ಜಗತ್ತನ್ನು ಎಚ್ಚರಿ­ಸಲು ಇಂದು ಅಲ್ಪಸಂಖ್ಯಾತರಾಗಿರುವ ಕಲಾ­ಕಾರರು ಏನು ಮಾಡಲ್ಲರು? ಬಿಂಬಗಳ ಹಿಂದಿರುವ ನಿಜಗಳನ್ನು ಅತಿ ಕಠೋರ ಶೋಷಣೆ­ಗೊಳಗಾದವರು ಮಾತ್ರ ಅರ್ಥ ಮಾಡಿ­ಕೊಳ್ಳುತ್ತಿ­ದ್ದಾರೆ. ತಮ್ಮ ನೆಲ, ಜಲ, ಗಾಳಿಗಾಗಿ ಹೋರಾಡುತ್ತಿದ್ದಾರೆ.  ಅವರಿಂದ ದೂರದಲ್ಲಿ ಪ್ರಜ್ಞಾವಂತರು ಹ್ಯಾಮ್ಲೆಟ್ಟನ ಥರ ಯೋಚಿ­ಸುತ್ತಾ ಕೂತಿದ್ದಾರೆ-. ಪರ್ಯಾಯ ಸ್ವಪ್ನಗಳ ಬಗ್ಗೆ, ಪರ್ಯಾಯ ಜಗತ್ತುಗಳ ಬಗ್ಗೆ... ನನಗೆ ಸಿದ್ದರಾಮನ ಒಂದು ಸಾಲು ನೆನಪಾಗುತ್ತಿದೆ: ‘ಸ್ಪಪ್ನದಲ್ಲಿ ಬಂದ ಮಾಯಾ­ಬದ್ಧತ್ವವ ಸ್ವಪ್ನದಲ್ಲಿ ಪರಿಹರಿಸಾ ಕಪಿಲಸಿಧ್ಧ ಮಲ್ಲಿಕಾರ್ಜುನ’.ನಿಮ್ಮ ಅನಿಸಿಕೆ ತಿಳಿಸಿ:

editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.