ಶನಿವಾರ, ಮೇ 15, 2021
23 °C

ನಟಿ ಏಂಜೆಲಿನಾ ಜೋಲೀಕೆ ಪೀಛೆ ಕ್ಯಾನ್ಸರ್ ಕತೆ

ನಾಗೇಶ್ ಹೆಗಡೆ Updated:

ಅಕ್ಷರ ಗಾತ್ರ : | |

ನಟಿ ಏಂಜೆಲಿನಾ ಜೋಲೀಕೆ ಪೀಛೆ ಕ್ಯಾನ್ಸರ್ ಕತೆ

ಬಾಸ್ಮತಿ, ಬೇವು, ಅರಿಶಿಣದಂಥ ಜೀವದ್ರವ್ಯಗಳನ್ನು ಖಾಸಗಿ ಕಂಪೆನಿಗಳು ಪೇಟೆಂಟ್ ಮಾಡಿಕೊಳ್ಳಲು ಯತ್ನಿಸಿದ ಹುನ್ನಾರ ನಮಗೆ ಗೊತ್ತೇ ಇದೆ. ಅದೇ ರೀತಿ ಮನುಷ್ಯ ದೇಹದಲ್ಲಿರುವ  ಜೀನ್  (ಗುಣಾಣು)ಗಳನ್ನೂ ಲಾಭಕೋರ ಕಂಪೆನಿಗಳು ಪೇಟೆಂಟ್ ಮಾಡಿಕೊಳ್ಳತೊಡಗಿವೆ. ಸ್ತನ ಕ್ಯಾನ್ಸರ್‌ಗೆ ಕಾರಣವಾಗುವ ಎರಡು ಗುಣಾಣುಗಳಿಗೆ ಅಮೆರಿಕದ ಕಂಪೆನಿಯೊಂದು ಹಕ್ಕುಸ್ವಾಮ್ಯ ಪಡೆದಿತ್ತು.

ಅದರ ವಿರುದ್ಧ ಸಾರ್ವಜನಿಕ ಹಿತಾಸಕ್ತಿಯ ಖಟ್ಲೆಯೊಂದು ಕಳೆದ ನಾಲ್ಕು ವರ್ಷಗಳಿಂದ ಅಲ್ಲಿನ ನ್ಯಾಯಾಲಯದಲ್ಲಿ ಹಲವು ಸುತ್ತುಗಳನ್ನು ಏರುತ್ತ ಅಮೆರಿಕದ ಸರ್ವೋಚ್ಚ ನ್ಯಾಯಾಲಯಕ್ಕೆ ಬಂದಿತ್ತು. ಕಳೆದ ವಾರ ಅದರ ತೀರ್ಪು ಹೊರಬಿದ್ದಿದೆ. ಕೆಲವರಿಗೆ ಅಚ್ಚರಿ, ಕೆಲವರಿಗೆ ಆಘಾತ, ಕೆಲವರಿಗೆ ಸಂತೋಷ - ಅಂತೂ ವೈದ್ಯಕೀಯ ವಿಜ್ಞಾನದಲ್ಲಿ ಹಾಗೂ ನ್ಯಾಯರಂಗದಲ್ಲಿ ಈ ತೀರ್ಪು ಬಹುದೊಡ್ಡ ತುಮುಲ ಎಬ್ಬಿಸಿದೆ.ಇದರ ಹಿಂದಿನ ಕತೆಯೂ ಅಷ್ಟೇ ಸಿನಿಮೀಯವಾಗಿದೆ. ಒಬ್ಬ ಮಹಿಳಾ ವಿಜ್ಞಾನಿಯ ಛಲ ಬಿಡದ ಸಾಹಸ, ಒಬ್ಬ ಸಿನಿಮಾ ತಾರೆ ತನ್ನ ಜೀವ ಉಳಿಸಿಕೊಳ್ಳಲೆಂದು ತನ್ನೆರಡೂ ಸ್ತನ ಛೇದನ ಮಾಡಿಸಿಕೊಂಡಿದ್ದು, ಒಂದು ಖಾಸಗಿ ಕಂಪೆನಿ ಸ್ತನಕ್ಯಾನ್ಸರ್ ಸಂಬಂಧಿ ಜೀನ್‌ಗಳಿಗೆ ಪೇಟೆಂಟ್ ಪಡೆದಿದ್ದು, ಒಂದಿಷ್ಟು ವಿಜ್ಞಾನಿಗಳು ಖಟ್ಲೆ ಹೂಡಿದ್ದು, ಖಟ್ಲೆಯನ್ನು ಬಲಪಡಿಸಲೆಂದೇ ಒಂದು ಸಿನಿಮಾ ತಯಾರಾಗಿದ್ದು, ಎಲ್ಲವೂ ಸೇರಿ ಮಾಧ್ಯಮಗಳಿಗೆ ಮಸಾಲೆಬಜ್ಜಿಯಾಯಿತು.ಸಿಗರೇಟಿನ ಚಟವಿದ್ದವರಿಗೆ ಶ್ವಾಸಕೋಶದ ಕ್ಯಾನ್ಸರ್, ತಂಬಾಕು ಅಗಿಯುವವರಿಗೆ ಬಾಯಿ ಯ ಕ್ಯಾನ್ಸರ್ ಹೀಗೆ ಒಬ್ಬೊಬ್ಬ ವ್ಯಕ್ತಿಯ ಜೀವನ ಶೈಲಿಯೇ ಅವರವರ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಇನ್ನು ಕೆಲವರಿಗೆ ಕೆಲಸ ಮಾಡುವ ಪರಿಸರವೇ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಕಲ್ನಾರಿನ ಗಣಿ ಕಾರ್ಮಿಕರಿಗೆ ಶ್ವಾಸಕೋಶದ ಕ್ಯಾನ್ಸರ್, ಯುರೇನಿಯಂ ಅದುರು ಕುಟ್ಟುವವರಿಗೆ ರಕ್ತದ ಕ್ಯಾನ್ಸರ್ ಬರುವ ಸಂಭವ ಜಾಸ್ತಿ ಇರುತ್ತದೆ.

ಮತ್ತೆ ಕೆಲವರಲ್ಲಿ ಕ್ಯಾನ್ಸರ್ ರೋಗ ವಂಶಪಾರಂಪರ‌್ಯವಾಗಿ ಬರುವುದೂ ಇರುತ್ತದೆ. ಬ್ರೋಕಾ ಹೆಸರಿನ ವಿಜ್ಞಾನಿ 1850ರಲ್ಲೇ ಅಂಥ ಕೆಲವು ಕುಟುಂಬಗಳ ಅನೇಕ ತಲೆಮಾರುಗಳ ಚರಿತ್ರೆಯನ್ನೇ ಜಾಲಾಡಿ ಈ ಬಗೆಯ ಕ್ಯಾನ್ಸರಿನ ವಿವರವನ್ನು ಬರೆದಿಟ್ಟಿದ್ದ. ಅದು ನಿಜವೇ ಇದ್ದಿರಬಹುದಾದರೂ ನಮ್ಮ ಕುಟುಂಬದಲ್ಲಿ ಅಂಥ ವಂಶಪಾರಂಪರ‌್ಯ ಎಳೆ ಇದೆಯೇ ಎಂಬುದನ್ನು ಪರೀಕ್ಷಿಸುವ ಯಾವ ಸಾಧನವೂ ಇರಲಿಲ್ಲ.ಮೇರಿ ಕ್ಲೇರ್ ಕಿಂಗ್ ಎಂಬ ಯುವತಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಈ ಸಂಶೋಧನೆಯನ್ನು ಕೈಗೆತ್ತಿಕೊಂಡಳು. ಅದು ಸುಲಭದ ಕೆಲಸವಾಗಿರಲಿಲ್ಲ. ನಮ್ಮ ಪ್ರತಿಯೊಂದು ಜೀವಕೋಶದಲ್ಲಿ ಸುಮಾರು 30 ಸಾವಿರ ಜೀನ್‌ಗಳಿವೆ. ಅವುಗಳಲ್ಲಿ ಯಾವ ಜೀನ್ ಎಡಬಿಡಂಗಿ ಕೆಲಸ ಮಾಡಿದರೆ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ, ಯಾವ ಜೀನ್ ಅತಿರೇಕ ವರ್ತಿಸಿದರೆ ಸ್ತನ ಕ್ಯಾನ್ಸರ್ ಬರುತ್ತದೆ ಎಂಬುದನ್ನು ಪತ್ತೆ ಹಚ್ಚುವುದು ಸುಲಭದ ಕೆಲಸವೇನಲ್ಲ. ಆದರೂ ಆಕೆ 1985ರಿಂದ ಅಹೋರಾತ್ರಿ ಅದಕ್ಕೆಂದು ಕೆಲಸ ಮಾಡಿದಳು.

ಬ್ರೋಕಾ ತೋರಿಸಿದ ವಿಧಾನದಲ್ಲೇ ವಂಶಪಾರಂಪರ‌್ಯ ಕ್ಯಾನ್ಸರಿನಿಂದ ಸತ್ತವರ ಕುಟುಂಬಗಳಿಗೆ ಹೋಗಿ ಅವರ ವಂಶದ ಹೊಸ ಕುಡಿಗಳ ರಕ್ತದ ಸ್ಯಾಂಪಲ್‌ಗಳ ಜೀನ್‌ಗಳನ್ನು ಜಾಲಾಡಿದಳು. ಮಹಿಳೆಯರ ಸಂತಾನ ಸಂಬಂಧಿ ಅಂಗಗಳಿಗೆ ಕ್ಯಾನ್ಸರ್ ಉಂಟುಮಾಡಬಲ್ಲ ಒಂದಲ್ಲ, ಎರಡು ಗುಣಾಣುಗಳು ಇರಬೇಕೆಂದು1990ರಲ್ಲಿ ಘೋಷಿಸಿದಳು.

ಸ್ತನ ಕ್ಯಾನ್ಸರ್‌ಗೆ ಕಾರಣವಾಗುವ ಗುಣಾಣುವಿಗೆ ಬ್ರೋಕಾ ಸ್ಮರಣಾರ್ಥ  `ಬಿಆರ್‌ಸಿಎ1' ಎಂತಲೂ ಅಂಡಾಶಯದ ಕ್ಯಾನ್ಸರ್‌ಗೆ ಕಾರಣವಾಗುವ ಗುಣಾಣುವಿಗೆ  `ಬಿಆರ್‌ಸಿಎ2'  ಎಂತಲೂ ಹೆಸರು ಕೊಟ್ಟಳು. ತಾನು ಅವನ್ನು ಕಣ್ಣಾರೆ ಕಂಡಿಲ್ಲವೆಂದೂ ಇತರ ಯಾರೇ ಆದರೂ ಇನ್ನೂ ಕ್ಲಿಷ್ಟ ವಿಧಾನಗಳಿಂದ ಪರೀಕ್ಷೆ ಮಾಡಿದರೆ ಅವು ಸಿಕ್ಕೇ ಸಿಗುತ್ತವೆ ಎಂತಲೂ ಪುರಾವೆ ಸಮೇತ ಮಂಡಿಸಿದಳು.ಈ ಗುಣಾಣುವನ್ನು ಪತ್ತೆ ಮಾಡಿದರೆ ಸಿಗುವ ಲಾಭವನ್ನು ಊಹಿಸಿ ಅದನ್ನು ಹುಡುಕಲು ಅಂತರರಾಷ್ಟ್ರೀಯಮಟ್ಟದ ತುರುಸಿನ ಪೈಪೋಟಿ ಯೇ ನಡೆಯಿತು. ಅದರ ಶೋಧಕ್ಕೆಂದೇ ಹೊಸ ಕಂಪೆನಿಗಳು ಹುಟ್ಟಿಕೊಂಡವು.  `ಮಿರಿಯಾಡ್ ಜೆನೆಟಿಕ್ಸ್'  ಹೆಸರಿನ ಕಂಪೆನಿಯೊಂದು ಉತಾ ವಿವಿಯ ತಜ್ಞರಿಗೆ ಧನಸಹಾಯ ಮಾಡಿ, ತನ್ನದೂ ವಿಜ್ಞಾನಿಗಳನ್ನು ನಿಯೋಜಿಸಿತು. ನಾಲ್ಕು ವರ್ಷಗಳ ನಂತರ ಮಿರಿಯಾಡ್‌ಗೆ ಮೊದಲ ಟ್ರೋಫಿ ಸಿಕ್ಕಿತು. ಮನುಷ್ಯರ ವರ್ಣತಂತುವಿನಲ್ಲಿ ಮಾಲೆಯಂತೆ `ಬಿಆರ್‌ಸಿಎ1 ಮತ್ತು ಎ2'  ಇಂತಲ್ಲೇ ಅಡಗಿವೆ ಎಂಬುದನ್ನು ಅದು ಪತ್ತೆ ಹಚ್ಚಿತು. ಈ ಎರಡಕ್ಕೂ ಪೇಟೆಂಟ್ ಪಡೆಯಿತು.ಸ್ತನಕ್ಯಾನ್ಸರ್‌ಗೆ ಕಾರಣವಾಗುವ  `ಬಿಆರ್‌ಸಿಎ1'  ಕೆಟ್ಟದ್ದೇನಲ್ಲ. ಅದರ ಕೆಲಸ ಏನೆಂದರೆ, ಒಟ್ಟಾರೆ ಮನುಷ್ಯನ ಗುಣಾಣು ಮಾಲೆಯಲ್ಲಿ ಎಲ್ಲೇ ಏನಾದರೂ ದೋಷ ಕಂಡರೆ ಅದನ್ನು ರಿಪೇರಿ ಮಾಡಬಲ್ಲ ಪ್ರೊಟೀನನ್ನು ಉತ್ಪಾದಿಸಿ ರವಾನೆ ಮಾಡುತ್ತದೆ. ಎಂಡೊಸಲ್ಫಾನ್‌ನಂಥ ಕೆಮಿಕಲ್ ವಿಷದಿಂದಲೋ ಅಥವಾ ವಿಕಿರಣದ ಹೊಡೆತದಿಂದಲೋ ಡಿಎನ್‌ಎ ಭಗ್ನವಾದರೆ ಅದು ವೈದ್ಯನಂತೆ ಕೆಲಸ ಮಾಡುತ್ತದೆ. ತೊಂದರೆ ಏನೆಂದರೆ ಕೆಲವೊಮ್ಮೆ ಇದು ತಾನೇ ಆಘಾತಕ್ಕೊಳಗಾಗಿ ವಿರೂಪಗೊಳ್ಳುತ್ತದೆ.

ಅದು ಮಾಡುವ ಕೆಲಸಗಳೆಲ್ಲ ಎಡವಟ್ಟಾಗಿ, ಕ್ಯಾನ್ಸರ್ ರೋಗ ಪಸರಿಸುತ್ತದೆ. ವಿರೂಪಗೊಂಡ ಜೀನ್ ಮುಂದೆ ತಾಯಿಯಿಂದ ಮಗಳಿಗೆ ದಾಟುತ್ತಾ ಹೋಗುತ್ತದೆ. ಇದನ್ನು ಪತ್ತೆ ಹಚ್ಚಿದ ಮಿರಿಯಾಡ್ ಕಂಪೆನಿಯೂ ಕೆಟ್ಟದ್ದೇನಲ್ಲ. ಮಾನವ ತಳಿನಕ್ಷೆಯ ಇಂತಿಂಥ ಗುಣಾಣು ಇಂತಿಂಥದ್ದೇ ಕೆಲಸ ಮಾಡುತ್ತದೆ ಎಂಬುದನ್ನು ಪತ್ತೆ ಹಚ್ಚಿ ಅನೇಕ ಕಂಪೆನಿಗಳು ಈಗಾಗಲೇ ಸಾವಿರಾರು ಪೇಟೆಂಟ್ ಪಡೆದಿವೆ.  ಬಿಆರ್‌ಎಸಿ1 ಮತ್ತು 2  ಜೋಡಿ ಜೀನ್‌ಗಳಿಗೆ ಹೊಸ ಕಂಪೆನಿಯೊಂದು ಪೇಟೆಂಟ್ ಗಿಟ್ಟಿಸಿದ್ದು ಸಹಜವೇ ಆಗಿತ್ತು.

ಪೇಟೆಂಟ್ ಆಮಿಷ, ಲಾಭದ ಆಮಿಷ ಇಲ್ಲದಿದ್ದರೆ ಯಾವ ಕಂಪೆನಿಯೂ ಸಂಶೋಧನೆಗೆ ಹಣ ವ್ಯಯಿಸುವುದಿಲ್ಲ. ವಿಜ್ಞಾನ ಶೀಘ್ರ ಮುಂದುವರಿಯುವುದಿಲ್ಲ. ಮಿರಿಯಾಡ್ ಕಂಪೆನಿ, ಇನ್ನಷ್ಟು ಸಂಶೋಧನೆ ನಡೆಸಿ ಅವನ್ನು ಪತ್ತೆ ಹಚ್ಚಬಲ್ಲ ವಿಧಾನವನ್ನೂ ರೂಪಿಸಿಕೊಂಡಿತು. ಯಾವ ಯುವತಿ ಬೇಕಾದರೂ ವಿಶೇಷ ರಕ್ತ ಪರೀಕ್ಷೆ ಮಾಡಿಸಿಕೊಂಡು ತನಗೆ ಮುಂದೆಂದಾದರೂ ಸ್ತನ ಕ್ಯಾನ್ಸರ್ ಬಂದೀತೆ ಎಂದು ಇಂದೇ ಪರೀಕ್ಷೆ ಮಾಡಿಸಿಕೊಳ್ಳುವಂತಾಯಿತು.ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಜಗತ್ತಿನಲ್ಲಿ ಪ್ರತಿವರ್ಷ ಸುಮಾರು ನಾಲ್ಕೂವರೆ ಲಕ್ಷ ಮಹಿಳೆಯರು ಸ್ತನ ಕ್ಯಾನ್ಸರಿನಿಂದ ಸಾಯುತ್ತಿದ್ದಾರೆ. ಶೇಕಡಾ 1ಕ್ಕಿಂತ ಕಡಿಮೆ. ಆದರೂ ಅಂಥ ಮಾರಣಾಂತಿಕ ಕಾಯಿಲೆಯ ಬೀಜ ನಮ್ಮ ರಕ್ತದಲ್ಲಿ ಇದೆಯೇ ಎಂದು ಪರೀಕ್ಷಿಸಲು ಅನುಕೂಲಸ್ಥ ಮಹಿಳೆಯರು ಮಿರಿಯಾಡ್ ಕಂಪೆನಿಗೆ ಹಣ ಸುರಿದರು. ಕಂಪೆನಿಯ ಷೇರುಬೆಲೆ ಸತತ ಏರತೊಡಗಿತು.

ಬೇರೆ ಯಾವುದೇ ಕಂಪೆನಿ ಅಥವಾ ಆಸ್ಪತ್ರೆಯವರು ಈ ಬಗೆಯ ರಕ್ತಪರೀಕ್ಷೆಯಲ್ಲಿ ತೊಡಗದಂತೆ ಮಿರಿಯಾಡ್ ತನ್ನ ಪೇಟೆಂಟ್ ಹಕ್ಕನ್ನು ಝಳಪಿಸಿ ಖಟ್ಲೆ ಹಾಕುವುದಾಗಿ ಗದರಿಸುತ್ತಿತ್ತು. ಬೇರೆ ಗತಿ ಇಲ್ಲದೆ ಮಹಿಳೆಯರು ರಕ್ತಪರೀಕ್ಷೆಗೆ ಇದೊಂದೇ ಕಂಪೆನಿಗೆ ಬರಬೇಕಿತ್ತು. ಇನ್ನೊಬ್ಬರ ಅಭಿಪ್ರಾಯ ಕೇಳಲು ಹೋಗುವಂತೆಯೇ ಇರಲಿಲ್ಲ. ಗುಣಾಣು ಸಂಶೋಧಕರಿಗೂ ಅದೊಂದು ತೊಡಕಾಗಿತ್ತು. ಮನುಷ್ಯನ ಬೇರೆ ಬೇರೆ ಜೀನ್‌ಗಳ ಲಕ್ಷಣಗಳನ್ನು ಒಟ್ಟೊಟ್ಟಿಗೆ ಅಧ್ಯಯನ ಮಾಡುವಾಗ ಅಪ್ಪಿತಪ್ಪಿ ಕೂಡ  `ಬಿಆರ್‌ಎಸಿ  1 ಮತ್ತು 2'ರ ಸಮೀಪ ಕೂಡ ಸುಳಿದರೆ ಖಟ್ಲೆ ಎದುರಿಸಬೇಕಾಗಿತ್ತು. ಹಾಗಾಗಿ ಅವೆರಡನ್ನು ಪ್ರತ್ಯೇಕಿಸಿ ದೂರ ಇಟ್ಟೇ ಇನ್ನುಳಿದವುಗಳ ಪರೀಕ್ಷೆ ಮಾಡಬೇಕಿತ್ತು.ಕುಪಿತ ವೈದ್ಯರು, ಬೇಸತ್ತ ರೋಗಿಗಳು ಮತ್ತು ಮಾನವ ಹಕ್ಕುಗಳ ಹೋರಾಟಗಾರರು ಎಲ್ಲರೂ ಒಂದಾಗಿ ಈ ಕಂಪೆನಿಯ ವಿರುದ್ಧ 2009ರಲ್ಲಿ ದಾವೆ ಹೂಡಿದರು. ಕೆಳಗಿನ ಕೋರ್ಟ್‌ನಲ್ಲಿ ಜಯ, ಮಧ್ಯದ ಹಂತದಲ್ಲಿ ಮತ್ತೆ ಹಿನ್ನಡೆ. `ಎಷ್ಟೊಂದು ಗುಣಾಣುಗಳಿಗೆ ಪೇಟೆಂಟ್ ಪಡೆದಾಗಿದೆ, ಇದರಲ್ಲೇನು ವಿಶೇಷ?'  ಎಂದು ಒಂದು ಹಂತದಲ್ಲಿ ಖಟ್ಲೆಯೇ ವಜಾ. ಮತ್ತೆ ಅದನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಒಯ್ಯಲು ನಿರ್ಧರಿಸಿ ವಕೀಲರಿಗೆ ವಿಜ್ಞಾನ ತರಬೇತಿ ಕೂಡ ಕೊಡಿಸಲಾಯಿತು.

ಇದು ತೀರಾ ಮಹತ್ವದ ಸಂಗತಿಯೆಂದು ಪರಿಗಣಿಸಿ, ಇದೇ ವಿಷಯದ ಬಗ್ಗೆ ಸಿನಿಮಾ ಕೂಡ ಬಂತು:  `ಈಛ್ಚಿಟಜ್ಞಿಜ ಅ್ಞ್ಞಜಿಛಿ ಚ್ಟಛ್ಟಿ'   ಹೆಸರಿನ ಈ ಚಲನಚಿತ್ರದಲ್ಲಿ ಪ್ರಾಣ ಹೀರುವ ಕ್ಯಾನ್ಸರ್ ಕಾಯಿಲೆ ತನ್ನ ರಕ್ತದಲ್ಲೇ ಇದ್ದೀತೆಂಬ ಸಂಶಯ ಹೊತ್ತ ಯುವತಿ ಆನ್ನಿಯ ಮನೋಬಲದ ಕತೆಯಿದೆ. ಸಾಹಸಿ ಸಾಧಕಿ ಮೇರಿ ಕಿಂಗ್ ಕತೆಯಿದೆ. ಆಸೆಬುರುಕ ಔಷಧ ಕಂಪೆನಿಗಳ ಕತೆಯಿದೆ. ಮನುಷ್ಯನ ಶರೀರದ ಜೀನ್‌ಗಳ ಮೇಲೆ ಪೇಟೆಂಟ್ ಹಕ್ಕು ಪಡೆದರೆ ಏನೆಲ್ಲ ಸಮಸ್ಯೆ ಹುಟ್ಟಿಕೊಳ್ಳುತ್ತವೆ ಎಂಬುದರ ವಿವರಗಳಿವೆ (ಈ ಎಲ್ಲವನ್ನೂ ಜಾಲಪುಟದಲ್ಲಿ ನೋಡಬಹುದು).

ಈ ಚಿತ್ರದಿಂದಾಗಿ ಖಟ್ಲೆ ಕುರಿತು ಮಾಧ್ಯಮಗಳು ಮತ್ತು ಜನಸಾಮಾನ್ಯರು ಕೂಡ ಅಮೆರಿಕದಲ್ಲಿ ಬಿರುಸಿನ ಚರ್ಚೆಯಲ್ಲಿ ಪಾಲ್ಗೊಳ್ಳುವಂತಾಯಿತು. ವರ್ಣತಂತು, ಅದರೊಳಗಿನ ಡಿಎನ್‌ಎ, ಅದರೊಳಗಿನ ಗುಣಾಣುಗಳ ಮಾಲೆಯಂಥ ಕ್ಲಿಷ್ಟ ಸಂಗತಿ ಸಾರ್ವಜನಿಕ ಚರ್ಚೆಯ ವಿಷಯವಾಗಿ ಬೆಳೆಯಿತು. ಈ ನಡುವೆ ಇನ್ನೊಂದು ಸಿನಿಮೀಯ ತಿರುವು. ಹೆಸರಾಂತ ನಟಿ ಏಂಜೆಲಿನಾ ಜೋಲಿ ತಾನು ಈ  `ಬಿಆರ್‌ಎಸಿ ಎ1'  ಗುಣಾಣುವಿನ ಭಯದಿಂದಾಗಿ ಹೇಗೆ ಎರಡೂ ಸ್ತನಗಳನ್ನು ತೆಗೆಸಿಕೊಂಡೆ ಎಂದು `ನ್ಯೂಯಾರ್ಕ್ ಟೈಮ್ಸ'ನಲ್ಲಿ ಕಳೆದ ಮೇ 14ರಂದು ಬಹಿರಂಗ ಲೇಖನ ಬರೆದು ಅಭಿಮಾನಿಗಳಿಗೆ ಶಾಕ್ ಕೊಟ್ಟಳು. ಮಾಧ್ಯಮಗಳಿಗೆ ಮಾರಿಯೌತಣ ಕೊಟ್ಟಳು. 38ರ ಹರೆಯದ, ಮೂರು ಮಕ್ಕಳ ತಾಯಿ ಏಂಜೆಲಿನಾ ಜೋಲಿ ಅಂತಿಂಥ ತಾರೆಯಲ್ಲ.

ಶ್ರೇಷ್ಠ ನಟಿಯೆಂದು ಆರು ಪ್ರಶಸ್ತಿಗಳನ್ನು ಬಾಚಿಕೊಂಡು, ನಾಲ್ಕು ಪ್ರಣಯ ಪ್ರಕರಣ, ಎರಡು ವಿಚ್ಛೇದನ, ಸಲಿಂಗರತಿ, ಮಾದಕ ವ್ಯಸನವೇ ಮುಂತಾದ ರಗಳೆಗಳ ಮಧ್ಯೆ ಮಾಧ್ಯಮದ ಕಣ್ಮಣಿಯಾಗಿ ಅತ್ಯಂತ ರೂಪವತಿ, ಅತ್ಯಂತ ಹೆಚ್ಚು ಹಣ ಪಡೆಯುವ ನಟಿ ಎಂದೆಲ್ಲ ಖ್ಯಾತಿ ಪಡೆದವಳು. ಅವಳ ತಾಯಿ, ಚಿಕ್ಕಮ್ಮ, ಅಜ್ಜಿ ಎಲ್ಲರೂ ಸ್ತನ ಕ್ಯಾನ್ಸರಿಗೆ ಬಲಿಯಾದವರು. ಈಕೆ ಮಿರಿಯಾಡ್ ಕಂಪೆನಿಯಿಂದ ಗುಣಾಣು ಪರೀಕ್ಷೆ ಮಾಡಿಸಿದಾಗ ಕ್ಯಾನ್ಸರ್ ಕಾಯಿಲೆ ಬರುವ ಸಂಭವನೀಯತೆ ಶೇಕಡಾ 87ರಷ್ಟು ಇದೆ ಎಂದು ಗೊತ್ತಾಗಿತ್ತಂತೆ.  `ಮುಂಜಾಗ್ರತೆಯಿಂದ ಸ್ತನಗಳನ್ನು ತೆಗೆಸಿಕೊಂಡು ಅಂಥ ಸಾಧ್ಯತೆಯನ್ನು ಶೇಕಡಾ 5ಕ್ಕೆ ಇಳಿಸಿಕೊಂಡೆ, ಕೃತಕ ಸಾಧನ ಅಳವಡಿಸಿಕೊಂಡಿದ್ದರಿಂದ ನನ್ನ ಹೆಣ್ತನಕ್ಕೇನೂ ಕುಂದು ಬಂದಿಲ್ಲ'  ಎಂದು ಹೇಳಿದಳು.ಮಹಿಳೆಯರ ಜಾಗೃತಿಗೆಂದೇ ತನ್ನ ಖಾಸಗಿ ಸಾಹಸವನ್ನು ಜೋಲಿ ಬಹಿರಂಗ ಮಾಡಿದ್ದು ಸರಿಯೇ ಇರಬಹುದು. ಆದರೆ ಮಿರಿಯಾಡ್ ಕಂಪೆನಿಯತ್ತ ಇನ್ನಷ್ಟು ಮಹಿಳೆಯರು ದೌಡಾಯಿಸುವಂತಾಯಿತು. ಮತ್ತೆ ವಿವಾದದ ತಕ್ಕಡಿ ಜೋಲಿ ಹೊಡೆಯಿತು. ಕೊನೆಗೂ ಜಟಾಪಟಿಗೆ ವಿರಾಮ ಹಾಕುವಂತೆ ಸರ್ವೋಚ್ಚ ನ್ಯಾಯಾಲಯ ಇದೀಗ ತನ್ನ ಒಮ್ಮತದ ತೀರ್ಪು ನೀಡಿದೆ. ನೈಸರ್ಗಿಕ ಜೀನ್‌ಗಳ ಮೇಲೆ ಪೇಟೆಂಟ್ ಹಕ್ಕು ಪಡೆಯುವುದು ಕಾನೂನುಬಾಹಿರ ಎಂದು ಘೋಷಿಸಿದೆ. ಮಹಿಳಾ ಹಕ್ಕುಗಳ ರಕ್ಷಣಾ ಸಂಘಗಳು ಹಬ್ಬ ಆಚರಿಸುತ್ತಿವೆ.

ಕ್ಯಾನ್ಸರ್‌ಗೆ ರಕ್ತ ಪರೀಕ್ಷೆ ಇನ್ನು ಮೇಲೆ ಅಗ್ಗವಾಗಲಿದೆ. ವಕೀಲರು ಹಬ್ಬ ಆಚರಿಸಬಹುದಾಗಿದೆ. ಈಗಾಗಲೇ ಪೇಟೆಂಟ್ ಬಂಧನದಲ್ಲಿ ಸಿಲುಕಿದ ನೂರಾರು ಜೀನ್‌ಗಳ ಬಿಡುಗಡೆಗೆ ಕೇಸ್ ಹಾಕಬಹುದಾಗಿದೆ. ಈ ವಿದ್ಯಮಾನದ ಹಿಂದಿನ ಸಂದೇಶವೇನು ಗೊತ್ತೆ? ಭಗ್ನಗೊಂಡ ವರ್ಣತಂತುಗಳನ್ನು ರಿಪೇರಿ ಮಾಡುವ ಕಣವೊಂದು ಸ್ವತಃ ವಿರೂಪಗೊಂಡಾಗ ದೇಹಕ್ಕೆ ಕ್ಯಾನ್ಸರ್ ಬರುತ್ತದೆ. ವೈದ್ಯಕೀಯ ವಿಜ್ಞಾನವೇ ಹಣದ ಆಮಿಷದಿಂದ ವಿರೂಪಗೊಂಡಾಗ ಇಡೀ ಸಮಾಜಕ್ಕೆ ಕ್ಯಾನ್ಸರ್ ಬರುತ್ತದೆ.

 ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.