ಭಾರತ ಮತ್ತು ಬಾಂಗ್ಲಾದೇಶದಲ್ಲಿ ಹರಿದು ಬಂಗಾಳಕೊಲ್ಲಿ ಸೇರುವ ಗಂಗಾ ನದಿ ನೀರಿನ ಹಂಚಿಕೆಯ ಒಪ್ಪಂದ ಮುಗಿಯಲು ಇನ್ನೊಂದೇ ವರ್ಷ ಬಾಕಿ ಇದೆ. ಮುಂದೇನು..?

ನವದೆಹಲಿ: ಶೇಖ್ ಹಸೀನಾ ಪದಚ್ಯುತಿ, ಷರೀಷ್ ಒಸ್ಮಾನ್ ಹಾದಿ ಹತ್ಯೆ ನಂತರದಲ್ಲಿ ಬಾಂಗ್ಲಾದೇಶದಲ್ಲಿ ಉಂಟಾಗಿರುವ ಹಿಂಸಾಚಾರ, ಭಾರತ ವಿರೋಧಿ ಧೋರಣೆಯ ನಂತರದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದೆ. ಇದೇ ಸಂದರ್ಭದಲ್ಲಿ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಹರಿದು ಬಂಗಾಳಕೊಲ್ಲಿ ಸೇರುವ ಗಂಗಾ ನದಿ ನೀರಿನ ಹಂಚಿಕೆಯ ಒಪ್ಪಂದ ಮುಗಿಯಲು ಇನ್ನೊಂದೇ ವರ್ಷ ಬಾಕಿ ಇದೆ.

ಭಾರತ ಮತ್ತು ಬಾಂಗ್ಲಾದೇಶ ನಡುವೆ ಗಂಗಾ ನದಿ ನೀರು ಹಂಚಿಕೆ ಸಂಬಂಧಿಸಿದಂತೆ 1996ರಲ್ಲಿ ನಡೆದ ಒಪ್ಪಂದವನ್ನು ದ್ವಿಪಕ್ಷೀಯ ರಾಜತಾಂತ್ರಿಕ ವಿಜಯ ಎಂದೇ ಬಣ್ಣಿಸಲಾಗಿತ್ತು. ನೀರಿನ ಅಭಾವ ತೀವ್ರವಾದ ಋತುಮಾನದಲ್ಲಿ ಅತ್ಯಮೂಲ್ಯವಾದ ನದಿ ನೀರನ್ನು ಹಂಚಿಕೆ ಮಾಡುವ ಉದ್ದೇಶದಿಂದ 30 ವರ್ಷಗಳ ಅವಧಿಗೆ ಭಾರತ ಹಾಗೂ ಬಾಂಗ್ಲಾದೇಶ ಒಪ್ಪಂದಕ್ಕೆ ಸಹಿ ಹಾಕಿದ್ದವು. ಅದು 2026ರ ಡಿಸೆಂಬರ್ನಲ್ಲಿ ಅಂತ್ಯವಾಗಲಿದೆ. ಈ ಒಪ್ಪಂದ ಮುಂದುವರಿಸುವ ಸಂಬಂಧ ಉಭಯ ರಾಷ್ಟ್ರಗಳ ನಡುವೆ ಮಾತುಕತೆ ಆರಂಭವಾಗಿದೆ.
.ಗಂಗಾ ನದಿ ನೀರು ಒಪ್ಪಂದ ಚರ್ಚೆ: ಬಾಂಗ್ಲಾದ ನೀಯೋಗ ಭೇಟಿ.ಗಂಗಾ ನದಿ ಸಂರಕ್ಷಣೆ ಕರಡು ಮಸೂದೆ ಪರಿಶೀಲನೆ.
ಏನಿದು ಗಂಗಾ ನದಿ ಒಪ್ಪಂದ..?

1960ರಲ್ಲಿ ಫರಕ್ಕಾ ಬ್ಯಾರೇಜ್ ನಿರ್ಮಾಣ ಆರಂಭವಾಯಿತು. ಗಂಗಾ ನದಿ ನೀರನ್ನು ಹೂಗ್ಲಿಗೆ ತಿರುಗಿಸಿದಲ್ಲಿ ಅಲ್ಲಿರುವ ಹೂಳನ್ನು ಕೊಚ್ಚಿ ಹೋಗುವಂತೆ ಮಾಡುವುದು ಮತ್ತು ಕೋಲ್ಕತ್ತ ಬಂದರಿಗೆ ನದಿ ನೀರಿನ ಹರಿವು ಹೆಚ್ಚಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು. ಭಿನ್ನಾಭಿಪ್ರಾಯಗಳೊಂದಿಗೆ ಆರಂಭವಾದ ಈ ಕಾಮಗಾರಿ 1975ರಲ್ಲಿ ಪೂರ್ಣಗೊಂಡಿತು.

ಬ್ಯಾರೇಜ್ನಿಂದಾಗಿ ನದಿ ಹರಿಯುವ ಪ್ರದೇಶದ ಕೆಳ ಭಾಗದಲ್ಲಿರುವ ಬಾಂಗ್ಲಾದೇಶಕ್ಕೆ ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗುತ್ತದೆ ಎಂಬ ಕೂಗು ಎದ್ದಿತು. ನೀರಿನ ಹರಿವು ಕಡಿಮೆಯಾದರೆ ಸವಳು ಹೆಚ್ಚಾಗುತ್ತದೆ. ಅದು ಕೃಷಿ, ಮೀನುಗಾರಿಕೆ ಮತ್ತು ದೋಣಿ ಸಂಚಾರಕ್ಕೂ ತೊಂದರೆಯಾಗಲಿದೆ ಎಂದು ಬಾಂಗ್ಲಾ ವಾದ ಮಂಡಿಸಿತು.

ತಾತ್ಕಾಲಿಕ ಒಪ್ಪಂದಗಳು ನಡೆದರೂ, ರಾಜತಾಂತ್ರಿಕ ಸಂಘರ್ಷ ಮುಂದುವರಿಯುತ್ತಲೇ ಇತ್ತು. ಆದರೆ 1996ರಲ್ಲಿ ಇದಕ್ಕೊಂದು ಪೂರ್ಣ ವಿರಾಮ ಹೇಳುವಂತೆ ಭಾರತ ಮತ್ತು ಬಾಂಗ್ಲಾ ನಡುವೆ ಗಂಗಾ ನದಿ ನೀರಿನ ಹಂಚಿಕೆ ಒಪ್ಪಂದ ನಡೆಯಿತು. ಅಂದಿನ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಒಪ್ಪಂದಕ್ಕೆ ಸಹಿ ಹಾಕಿದ್ದರು. ದಶಕಗಳ ನದಿ ನೀರಿನ ವ್ಯಾಜ್ಯ ಸುಗಮವಾಗಿ ಬಗೆಹರಿದಿದ್ದಕ್ಕೆ ಇಡೀ ಜಗತ್ತೇ ಶ್ಲಾಘಿಸಿತು.

ಗಂಗಾ ನದಿ ನೀರು ಹಂಚಿಕೆಯ ಸೂತ್ರವೇನು?

ಪ್ರತಿ ವರ್ಷ ಜನವರಿ 1 ಹಾಗೂ ಮೇ 31ರ ನಡುವೆ ಫರಕ್ಕಾ ಬ್ಯಾರೇಜ್ನಿಂದ ಹತ್ತು ದಿನಗಳಂತೆ ನೀರು ಹಂಚಿಕೆಯ ಸೂತ್ರ ಮಾಡಲಾಯಿತು.

ಸಮಾನ ಹಂಚಿಕೆ: ನೀರಿನ ಹರಿವು 70 ಸಾವಿರ ಕ್ಯುಸೆಕ್ಗಿಂತ ಕೆಳಗಿದ್ದಲ್ಲಿ ಉಭಯ ರಾಷ್ಟ್ರಗಳು 50:50ರ ಅನುಪಾತದಂತೆ ಹಂಚಿಕೊಳ್ಳಬೇಕು.

ಕನಿಷ್ಠ ಖಾತರಿ: ಬ್ಯಾರೇಜ್ನಲ್ಲಿ ಒಂದೊಮ್ಮೆ ನೀರು 70 ಸಾವಿರ ಮತ್ತು 75 ಸಾವಿರ ಕ್ಯುಸೆಕ್ ಇದ್ದಲ್ಲಿ ಎರಡೂ ರಾಷ್ಟ್ರಗಳಿಗೆ ಕನಿಷ್ಠ ನೀರು ಹಂಚಿಕೆಯಾಗಬೇಕು

ಕಷ್ಟದ ಪರಿಸ್ಥಿತಿಯಲ್ಲಿ ಕನಿಷ್ಠ ಗ್ಯಾರಂಟಿ: ಬಿರುಬೇಸಿಗೆಯ ಕಾಲವಾದ ಮಾರ್ಚ್ 11ರಿಂದ ಮೇ 10ರವರೆಗೆ ಎರಡೂ ರಾಷ್ಟ್ರಗಳು ಈ ಬ್ಯಾರೇಜ್ನಿಂದ ಕನಿಷ್ಠ 35 ಸಾವಿರ ಕ್ಯುಸೆಕ್ ನೀರನ್ನು ಪ್ರತಿ 10 ದಿನಗಳ ಅವಧಿಗೆ ಪಡೆಯುವಂತೆ ಈ ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ. ಇದರ ನಿರ್ವಹಣೆಗೆ ಜಂಟಿ ನದಿಗಳ ಆಯೋಗ (JRC) ಅಡಿಯಲ್ಲಿ ಜಂಟಿ ಸಮಿತಿಯನ್ನು ರಚಿಸಲಾಗಿದೆ. ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಈ ಸಮಿತಿಯು ನೀರಿನ ಹರಿವಿನ ಮೇಲೆ ನಿಗಾ ಇಡಲಿದೆ.

ಅವಧಿ ಮುಗಿಯುವ ಹಂತಕ್ಕೆ ಒಪ್ಪಂದ, ಹೊಸ ಸವಾಲುಗಳು

ಗಂಗಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಮೂರು ದಶಕಗಳ ಹಿಂದೆ ನಡೆದ ಒಪ್ಪಂದ 2026ರ ಡಿಸೆಂಬರ್ನಲ್ಲಿ ಅಂತ್ಯವಾಗಲಿದೆ. ಸದ್ಯದ ಜಾಗತಿಕ ರಾಜಕೀಯ ಪರಿಸ್ಥಿತಿ ಭಿನ್ನವಾಗಿದ್ದು, ಭಾರತ ಮತ್ತು ಬಾಂಗ್ಲಾ ನಡುವೆ ಉದ್ವಿಗ್ನತೆ ತಲೆದೋರಿದೆ.

1996ರಲ್ಲಿ ನಡೆದ ಒಪ್ಪಂದಕ್ಕೆ 1949ರಿಂದ 1988ರ ನೀರಿನ ಹರಿವಿನ ಮಾಹಿತಿಯನ್ನು ಆಧಾರವಾಗಿಟ್ಟುಕೊಳ್ಳಲಾಗಿತ್ತು. ಆದರೆ ನಂತರದಲ್ಲಿನ ಹವಾಮಾನ ಬದಲಾವಣೆಯ ಪರಿಣಾಮ ನೀರಿನ ಹರಿವು ಮತ್ತು ಗಂಗಾ ನದಿ ಪಾತ್ರ ಬದಲಾಗಿದೆ. ಮಳೆ ಮಾರುತಗಳೂ ಸಮರ್ಪಕವಾಗಿಲ್ಲ. ಬರಗಾಲ ಆಗಾಗ ಆವರಿಸುತ್ತಿದೆ ಮತ್ತು ನೀರಿನ ಹರಿವಿನ ದಿನಗಳ ಕುರಿತೂ ಖಚಿತತೆ ಇಲ್ಲ. ಹಳೇ ಒಪ್ಪಂದದಲ್ಲಿ ಉಲ್ಲೇಖಿಸಲಾದ ದತ್ತಾಂಶಗಳು ಈಗ ಅಪ್ರಸ್ತುತ. ಹೀಗಾಗಿ ಹವಾಮಾನ ಬದಲಾವಣೆಯನ್ನೂ ಒಳಗೊಂಡು ನದಿ ನೀರು ಹಂಚಿಕೆಯ ಸೂತ್ರವನ್ನು ಸಿದ್ಧಪಡಿಸಬೇಕು ಎಂಬುದು ತಜ್ಞರ ವಾದವಾಗಿದೆ.

ನದಿ ಪಾತ್ರದ ಮೇಲಿರುವ ಭಾರತದಲ್ಲಿ ಕೃಷಿ, ವಿದ್ಯುತ್ ಉತ್ಪಾದನೆ ಮತ್ತು ಒಳನಾಡಿನ ಜಲಮಾರ್ಗಗಳ ನಿರ್ವಹಣೆಯ ಸವಾಲು ಇದೆ. ಈ ಎಲ್ಲಾ ಅಂಶಗಳಲ್ಲಿ ಒಂದಷ್ಟು ಬದಲಾವಣೆಯನ್ನು ಭಾರತ ಬಯಸಿದೆ. ಮತ್ತೊಂದೆಡೆ ಕೆಳಪಾತ್ರದಲ್ಲಿರುವ ಬಾಂಗ್ಲಾದೇಶವು ತನಗೆ ಹೆಚ್ಚಿನ ನೀರಿನ ಪಾಲು ಕೇಳುವ ಮತ್ತು ಸಹಜ ಹರಿವನ್ನೇ ಕನಿಷ್ಠ ಗ್ಯಾರಂಟಿಗೊಳಿಸುವ ಬೇಡಿಕೆ ಇಡುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.

ಮತ್ತೊಂದೆಡೆ ನೀರಿನ ವಿಷಯವು ಆಯಾ ರಾಜ್ಯಕ್ಕೆ ಸಂಬಂಧಿಸಿದ್ದಾಗಿದೆ. ಹೀಗಾಗಿ ಬಾಂಗ್ಲಾದೇಶಕ್ಕೆ ಗಂಗಾ ಹರಿಯುವ ಮುನ್ನ ಪಶ್ಚಿಮ ಬಂಗಾಳದ ಮೂಲಕವೇ ಸಾಗುವುದರಿಂದ ಈ ರಾಜ್ಯದ ಪಾತ್ರವೂ ಮುಖ್ಯವಾಗಲಿದೆ. ತೀಸ್ತಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಈ ಹಿಂದೆ ಪಶ್ಚಿಮ ಬಂಗಾಳ ಆಕ್ಷೇಪ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.