ದೇವನಹಳ್ಳಿ ವಿಮಾನ ನಿಲ್ದಾಣದಿಂದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿರುವ ಸಿಂಗಹಳ್ಳಿಯಲ್ಲಿ ದೊಡ್ಡ ದೊಡ್ಡ ಐಟಿ ಕಂಪನಿಗಳಿವೆ. ಹಾರ್ಡ್ವೇರ್, ವಿಮಾನಯಾನ ಸಂಸ್ಥೆಗಳ ದೊಡ್ಡ ಕಚೇರಿಗಳಿವೆ. ವೇರ್ಹೌಸ್ಗಳು ಮತ್ತು ಏರೊಸ್ಪೇಸ್ ಪಾರ್ಕ್ಗಳಿವೆ. ಇವೆಲ್ಲವುಗಳ ನಡುವೆ ಒಂದು ‘ಕ್ರಿಕೆಟಿಗರಲ್ಲಿ ಕನಸುಗಳನ್ನು ಹುಟ್ಟುಹಾಕುವ ಕಾರ್ಖಾನೆ’ಯೂ ಇದೆ!

ಹೌದು; ಇಲ್ಲಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯ ಶ್ರೇಷ್ಠತಾ ಕೇಂದ್ರವೇ ಆ ಕಾರ್ಖಾನೆ. ಉದಯೋನ್ಮುಖ ಕ್ರಿಕೆಟಿಗರಿಗೆ ತಿದ್ದಿ ತೀಡಿ ತರಬೇತುಗೊಳಿಸುವ, ಗಾಯಗೊಂಡು ಬರುವ ತಾರಾವರ್ಚಸ್ಸಿನ ಆಟಗಾರರ ದೇಹ ಮತ್ತು ಮನಸ್ಸನ್ನು ಪುನಶ್ಚೇತನಗೊಳಿಸುವ ಹಾಗೂ ಕ್ರಿಕೆಟ್ ಬೆಳವಣಿಗೆಗೆ ಪೂರಕವಾದ ಹತ್ತು ಹಲವು ಚಟುವಟಿಕೆಗಳು ನಡೆಯುವ ಸ್ಥಳ ಇದಾಗಿದೆ. ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ಸಾಧ್ಯವಾಗದ ಪಂದ್ಯಗಳಿಗೂ ಬಿಸಿಸಿಐ ಶ್ರೇಷ್ಠತಾ ಕೇಂದ್ರವೇ ‘ಪರ್ಯಾಯ’ ಸ್ಥಳವಾಗಿ ಮಾರ್ಪಟ್ಟಿದೆ.

ಅದಕ್ಕಾಗಿಯೇ ಹೋದ ತಿಂಗಳಷ್ಟೇ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅವರು ಇಲ್ಲಿ ಆಡಿದರು. ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕೊಹ್ಲಿ ದೆಹಲಿ ತಂಡವನ್ನು ಪ್ರತಿನಿಧಿಸಿದ್ದರು. ಇಲ್ಲಿ ಎರಡು ಪಂದ್ಯಗಳನ್ನು ಆಡಿ ಒಂದರಲ್ಲಿ ಶತಕ, ಇನ್ನೊಂದರಲ್ಲಿ ಅರ್ಧ ಶತಕ ದಾಖಲಿಸಿದರು. ನವದೆಹಲಿಯಲ್ಲಿ ಹುಟ್ಟಿ ಬೆಳೆದ ಕೊಹ್ಲಿಗೆ ಬೆಂಗಳೂರು ಎಂದರೆ ಎರಡನೇ ತವರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂಲಕ ಅವರು ಉದ್ಯಾನನಗರಿಯ ಕ್ರಿಕೆಟ್ ಪ್ರೇಮಿಗಳ ಕಣ್ಮಣಿಯಾಗಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವರ ಹಲವು ಅವಿಸ್ಮರಣೀಯ ಇನಿಂಗ್ಸ್ ಒಡಮೂಡಿವೆ. ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಅಂಗಣದಲ್ಲಿಯೂ ಕೊಹ್ಲಿ ತಮ್ಮ ಛಾಪು ಮೂಡಿಸಿದರು.

ಅದಿರಲಿ; ಈ ಶ್ರೇಷ್ಠತಾ ಕೇಂದ್ರ ಆರಂಭವಾಗಿದ್ದು ಹೇಗೆ? ಇಲ್ಲಿ ಏನೇನು ಇದೆ ಎಂಬುದನ್ನು ಒಂದು ಸುತ್ತು ಹಾಕಿ ನೋಡೋಣ ಬನ್ನಿ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುಮಾರು ಎರಡು ದಶಕಗಳು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಕಾರ್ಯನಿರ್ವಹಿಸಿತು. ಗಾಯಗೊಂಡ ಆಟಗಾರರ ಆರೈಕೆ, ತರಬೇತಿ ಮತ್ತು ಪುನಶ್ಚೇತನ ಈ ಕೇಂದ್ರದ ಪ್ರಾಥಮಿಕ ಕಾರ್ಯವಾಗಿತ್ತು. ಕ್ರಿಕೆಟ್ ಬೆಳೆದಂತೆ ಎನ್ಸಿಎ ಕಾರ್ಯವ್ಯಾಪ್ತಿಯೂ ವಿಸ್ತರಿಸಿತು. ಜೂನಿಯರ್, ಸೀನಿಯರ್ ಆಟಗಾರರ ತರಬೇತಿ, ಕೋಚ್ಗಳಿಗೆ ತರಬೇತಿ ಸೇರಿದಂತೆ ಕ್ರಿಕೆಟ್ನ ಪ್ರತಿಯೊಂದು ವಿಭಾಗಗಳಿಗೂ ತನ್ನ ನೆರವಿನ ಹಸ್ತ ಚಾಚಿತು. ಇದರಿಂದಾಗಿ ಕ್ರಿಕೆಟ್ನ ಸರ್ವಾಂಗೀಣ ಬೆಳವಣಿಗೆಗೆ ಬೇಕಾದ ಎಲ್ಲ ಸೌಲಭ್ಯಗಳೂ ಒಂದೇ ಸೂರಿನಡಿಯಲ್ಲಿ ಅಭಿವೃದ್ಧಿಗೊಳ್ಳತೊಡಗಿದವು. ಅದಕ್ಕಾಗಿ ದೊಡ್ಡ ಸ್ಥಳವೂ ಅಗತ್ಯವಾಗಿತ್ತು.

ಇದರಿಂದಾಗಿ ಸಿಂಗಹಳ್ಳಿಯಲ್ಲಿ ನಲವತ್ತು ಎಕರೆಯಲ್ಲಿ ಎನ್ಸಿಎ ಹರಡಿಕೊಂಡಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಭವ್ಯವಾದ ಶ್ರೇಷ್ಠತಾ ಕೇಂದ್ರ (ಎನ್ಸಿಎ ಹೆಸರು ಬದಲಿಸಲಾಯಿತು) ತಲೆ ಎತ್ತಿತು. 2024ರ ಸೆಪ್ಟೆಂಬರ್ನಲ್ಲಿ ಈ ಕೇಂದ್ರ ಕಾರ್ಯಾರಂಭ ಮಾಡಿತು.

‘ಗಾಯಗೊಂಡ ಕ್ರಿಕೆಟಿಗರಿಗೆ ಆರೈಕೆ ನೀಡುವುದಷ್ಟೇ ಈ ಕೇಂದ್ರದ ಕಾರ್ಯ ಎಂಬ ಕಲ್ಪನೆ ಜನರಲ್ಲಿದೆ. ಆದರೆ ಭಾರತದ ಕ್ರಿಕೆಟ್ ತಂಡದ ಬೆಂಚ್ ಶಕ್ತಿಯನ್ನು (ಮುಂಚೂಣಿಗೆ ಬರಲು ಸಿದ್ಧವಾಗಿರುವ ಎರಡನೇ ಸಾಲಿನ ಪ್ರತಿಭಾನ್ವಿತ ಆಟಗಾರರು) ಬಲಿಷ್ಠಗೊಳಿಸುವುದು ಮತ್ತು ವಿಶ್ವದರ್ಜೆಯ ಪೈಪೋಟಿಗೆ ಆಟಗಾರರ ಸಾಮರ್ಥ್ಯವನ್ನು ವೃದ್ಧಿಸುವ ಕಾರ್ಯ ಕೂಡ ಇಲ್ಲಿ ನಡೆಯುತ್ತಿದೆ’ ಎಂದು ಈ ಕೇಂದ್ರದ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಉದ್ಘಾಟನೆ ದಿನ ಹೇಳಿದ್ದರು.

ಅದಕ್ಕೆ ತಕ್ಕಂತೆ ಇಲ್ಲಿ ಈಗ ಕ್ರಿಕೆಟ್ನ ವಿವಿಧ ಆಯಾಮಗಳ ಕುರಿತ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಅಷ್ಟೇ ಏಕೆ; ಕಳೆದ ಆರು ತಿಂಗಳಲ್ಲಿ ದುಲೀಪ್ ಟ್ರೋಫಿ, ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯ ಅರ್ಹತಾ ಪಂದ್ಯಗಳು, ಭಾರತ ಎ ಮತ್ತು ದಕ್ಷಿಣ ಆಫ್ರಿಕಾ ಎ ತಂಡಗಳ ಪಂದ್ಯಗಳು ನಡೆದವು. ಸದ್ಯ ವಿಜಯ್ ಹಜಾರೆ ಟ್ರೋಫಿ ಪಂದ್ಯಗಳು ಕೂಡ ಇಲ್ಲಿ ನಡೆಯುತ್ತಿವೆ.

ಬೃಹತ್ ಪ್ರವೇಶ ದ್ವಾರವನ್ನು ದಾಟಿ ಮುಖ್ಯ ಕಟ್ಟಡ ಪ್ರವೇಶಿಸುತ್ತಿದ್ದಂತೆಯೇ ಹಾಲ್ ಆಫ್ ಫೇಮ್ ಇದೆ. ಅಂತಿಮ ಹಂತದ ಕಾಮಗಾರಿಗಳು ಪ್ರಗತಿಯಲ್ಲಿವೆ. ಹಾಗೆ ದಾಟಿ ಇನ್ನೊಂದು ದ್ವಾರದ ಹೊಸ್ತಿಲು ದಾಟಿದರೆ ಹಸಿರುಟ್ಟು ಕಂಗೊಳಿಸುತ್ತಿರುವ ಕ್ರಿಕೆಟ್ ಮೈದಾನ ಕಣ್ಮನ ಸೆಳೆಯುತ್ತದೆ. 85 ಯಾರ್ಡ್ ಬೌಂಡರಿ ಇರುವ ವಿಶ್ವದರ್ಜೆ ಕ್ರೀಡಾಂಗಣ ಇದು.

ಮುಂಬೈ ಕೆಂಪು ಮಣ್ಣಿನಿಂದ ಸಿದ್ಧಗೊಳಿಸಿರುವ 13 ಪಿಚ್ಗಳು ಇಲ್ಲಿವೆ. ಹೊನಲು ಬೆಳಕಿನ ಕಂಬಗಳು, ಸೌತ್ ಪೆವಿಲಿಯನ್ ಮತ್ತು ಪಂದ್ಯಗಳ ನೇರಪ್ರಸಾರ ಸೌಲಭ್ಯ ಕೇಂದ್ರ ಕೂಡ ಇಲ್ಲಿದೆ.

ಇಲ್ಲಿಂದ ಎಡಗಡೆಗೆ ಸಾಗಿದರೆ ಬಿ ಮೈದಾನ ಗಮನ ಸೆಳೆಯುತ್ತದೆ. 75 ಯಾರ್ಡ್ ಬೌಂಡರಿ ಇರುವ ಇದರಲ್ಲಿ ಮಂಡ್ಯದ ಕಪ್ಪುಮಣ್ಣು ಬಳಸಿ ಮಾಡಲಾಗಿರುವ 11 ಪಿಚ್ಗಳಿವೆ. ಪಕ್ಕದಲ್ಲಿರುವ ಮೂರನೇ ಮೈದಾನ (ಸಿ)ದಲ್ಲಿ ಒಡಿಶಾದ ಕಾಳಹಂಡಿಯಿಂದ ತರಿಸಿರುವ ಕಪ್ಪುಮಣ್ಣಿನಿಂದ ಸಿದ್ಧವಾದ 9 ಪಿಚ್ಗಳಿವೆ. ಈ ಮೂರು ಮೈದಾನಗಳಲ್ಲಿ ಮಳೆ ನೀರು ತ್ವರಿತವಾಗಿ ಹರಿದುಹೋಗಲು ಸಬ್ಸರ್ಫೇಸ್ ವ್ಯವಸ್ಥೆ ಮಾಡಲಾಗಿದೆ.

ಮೈದಾನಗಳಾಚೆ ನೆಟ್ಸ್ ಅಭ್ಯಾಸಕ್ಕಾಗಿ 45 ಪಿಚ್ಗಳು ಇವೆ. ಜೊತೆಗೆ ಹೊನಲು ಬೆಳಕಿನ ವ್ಯವಸ್ಥೆ ಇದೆ. ಓಟದ ಅಭ್ಯಾಸಕ್ಕಾಗಿ ಟ್ರ್ಯಾಕ್ ಮತ್ತು ಫೀಲ್ಡಿಂಗ್ ಅಭ್ಯಾಸದ ಸೌಕರ್ಯಗಳು ಇವೆ. ಕ್ಯಾಮೆರಾಗಳ ಮೂಲಕ ಆಟಗಾರರ ಸಾಮರ್ಥ್ಯವನ್ನು ವಿಶ್ಲೇಷಿಸುವ ತಂತ್ರಜ್ಞಾನ ಇಲ್ಲಿ ಅಳವಡಿಸಲಾಗಿದೆ.

16 ಸಾವಿರ ಚದರಡಿ ಜಾಗದಲ್ಲಿ ನಿರ್ಮಿಸಿರುವ ದೊಡ್ಡ ಕಟ್ಟಡದಲ್ಲಿ ಸ್ಲೀಪಿಂಗ್ ಪಾಡ್ಗಳಿರುವ ಜಿಮ್ನಾಷಿಯಂ, ಅಥ್ಲೆಟಿಕ್ಸ್ ಟ್ರ್ಯಾಕ್, ಫಿಸಿಯೊಥೆರಪಿ ಕೇಂದ್ರ, ಕ್ರೀಡಾ ವಿಜ್ಞಾನ ಮತ್ತು ಔಷಧಿ ಪ್ರಯೋಗಾಲಯ, ಝಕುಜಿ, ಸೌನಾ ಮತ್ತು ಸ್ಟೀಮ್ ಬಾತ್, ಐಸ್ ಬಾತ್, 25 ಮೀಟರ್ಸ್ ಈಜುಕೊಳಗಳು ಇವೆ. ಇದಲ್ಲದೇ ಭವ್ಯವಾದ ಭೋಜನ ಶಾಲೆ, ಆಡಳಿತ ಕಚೇರಿಗಳು, ಸಭಾಭವನ, ವಸತಿ ಕೋಣೆಗಳು ಕೂಡ ಇವೆ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗುವ ಲೋಹದ ಹಕ್ಕಿಗಳನ್ನು ಈ ಕೇಂದ್ರದ ಕಟ್ಟಡದ ಬಾಲ್ಕನಿಯಲ್ಲಿ ನೋಡುವುದರ ಜೊತೆಗೆ, ಮೈದಾನದಲ್ಲಿ ಬ್ಯಾಟರ್ ಸಿಡಿಸುವ ಸಿಕ್ಸರ್ಗಳ ಸವಿಯನ್ನೂ ಉಣ್ಣಬಹುದು. ಸುತ್ತಲೂ ಆಳೆತ್ತರದ ಕಾಂಪೌಂಡ್ ಇರುವ ಕೇಂದ್ರದ ಒಳಗಿರುವ ಮೈದಾನಗಳಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯುತ್ತವೆ. ಆದರೆ ಆ ತಡೆಯನ್ನೂ ಮೀರಿದ ಅಭಿಮಾನಿಗಳ ಕ್ರಿಕೆಟ್ ಪ್ರೀತಿಯ ಕೂಗು ಇಲ್ಲಿ ಪ್ರತಿಧ್ವನಿಸುತ್ತದೆ. ಇತ್ತೀಚೆಗೆ ವಿರಾಟ್ ಕೊಹ್ಲಿ, ರಿಷಭ್ ಪಂತ್, ರಜತ್ ಪಾಟೀದಾರ್ ಅವರು ಆಡುವ ಸಂದರ್ಭದಲ್ಲಿ ಕಾಂಪೌಂಡ್ ಹೊರಗಡೆಯಿಂದ ಇಣುಕಿ ಹಾಕುತ್ತಿದ್ದ ನೂರಕ್ಕೂ ಹೆಚ್ಚು ಅಭಿಮಾನಿಗಳ ಘೋಷಣೆಗಳು ತೇಲಿಬಂದಿದ್ದವು. ಅಕ್ಕಪಕ್ಕದ ಮರ, ಕಟ್ಟಡಗಳ ಮೇಲೆ ಹತ್ತಿ ವಿರಾಟ್..ವಿರಾಟ್.. ಎಂದು ಕೂಗಿದವರಿಗೂ ಕಮ್ಮಿಯಿಲ್ಲ. ಇತ್ತೀಚೆಗೆ ರೋಹಿತ್ ಶರ್ಮಾ ಅವರು ಬಿಸಿಸಿಐ ಸಿಒಇ ಆರಂಭಿಸಿರುವ ‘ಬ್ರಾಂಕೊ ಟೆಸ್ಟ್’ ನಲ್ಲಿ ಅಗ್ರಶ್ರೇಯಾಂಕ ಪಡೆದು ಉತ್ತೀರ್ಣರಾಗಿದ್ದರು. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಎದುರು ಏಕದಿನ ಸರಣಿಯಲ್ಲಿ ಮಿಂಚಿದ್ದರು. ಒಟ್ಟಿನಲ್ಲಿ ಬಿಸಿಸಿಐ ಸಿಒಇ ಎಲ್ಲ ರೀತಿಯಿಂದಲೂ ಭಾರತದ ಕ್ರಿಕೆಟ್ ಶಕ್ತಿಕೇಂದ್ರವಾಗಿ ವಿಸ್ತರಿಸುತ್ತಿದೆ.

ಪರಿಣತ ತರಬೇತುದಾರರು...

ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಇಲ್ಲಿ ಪುನಶ್ಚೇತನ, ತರಬೇತಿ ಮತ್ತು ಕೌಶಲಾವೃದ್ಧಿಯ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಜೂನಿಯರ್, ಸೀನಿಯರ್ ಮತ್ತು ಈಗಾಗಲೇ ಭಾರತ ತಂಡದಲ್ಲಿ ಆಡುತ್ತಿರುವ ಎಲ್ಲ ಆಟಗಾರರಿಗೂ ಇಲ್ಲಿ ವಿಭಿನ್ನ ಯೋಜನೆಗಳಿವೆ. ಅವುಗಳನ್ನು ನಿರ್ವಹಿಸಲು ವಿಷಯ ಪರಿಣತ ತರಬೇತುದಾರರು ಇದ್ದಾರೆ. ಆಟಗಾರರಷ್ಟೇ ಅಲ್ಲ. ಕೋಚ್ಗಳನ್ನು ಸಿದ್ಧಗೊಳಿಸಲು ಕೂಡ ವಿಶೇಷ ತರಗತಿಗಳು ನಮ್ಮಲ್ಲಿವೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್, ಕ್ರೀಡಾ ವಿಜ್ಞಾನ, ಫಿಸಿಯೊಥೆರಪಿ, ಕ್ರೀಡಾ ಮನಃಶಾಸ್ತ್ರ ಮತ್ತಿತರ ವಿಭಾಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಇದರ ಫಲವಾಗಿ ಮುಂದಿನ ಒಂದು ದಶಕಕ್ಕಿಂತಲೂ ಹೆಚ್ಚು ಅವಧಿಯವರೆಗೆ ಭಾರತ ತಂಡದ ಬೆಂಚ್ ಶಕ್ತಿ ಬಲಿಷ್ಠವಾಗಿಯೇ ಇರಲಿದೆ. ನಮ್ಮಲ್ಲಿಗೆ ಬರುವ ಆಟಗಾರರು ಹೊರಗಿನ ಅಕಾಡೆಮಿಗಳಲ್ಲಿರುವ ಕೋಚ್ಗಳಿಂದ ಬಹಳಷ್ಟು ಕೌಶಲಗಳನ್ನು ಕಲಿತಿರುತ್ತಾರೆ. ನಮ್ಮಲ್ಲಿ ಬಂದಾಗ ಕಲಿಸುವ ಕೆಲವು ಕೌಶಲಗಳು ಅವರಿಗೆ ಗೊಂದಲ ಮೂಡಿಸಬಹುದು. ಅದಕ್ಕಾಗಿ ನಮ್ಮಲ್ಲಿ ಕಲಿತಿದ್ದೇ ಅಂತಿಮ ಎಂದು ನಾವು ಹೇಳುವುದಿಲ್ಲ. ಆಟಗಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಕೌಶಲಗಳನ್ನು ಆಯ್ಕೆ ಮಾಡಿಕೊಳ್ಳ ಬಹುದು – ವಿವಿಎಸ್ ಲಕ್ಷ್ಮಣ್, ಬಿಸಿಸಿಐ ಸಿಒಇ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.