ಬುಧವಾರ, ಮೇ 12, 2021
20 °C

ನಮ್ಮದಲ್ಲದ ವಸ್ತು

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಈ ಕಥೆಯನ್ನು ಹೇಳಿದವರು ನನಗೆ ಸ್ನೇಹಿತರಾದ ಕೊಪ್ಪಳದ ವಿರುಪಾಕ್ಷಪ್ಪನವರು.

ಒಂದೂರಿನಲ್ಲಿ ಒಬ್ಬ ಶ್ರಿಮಂತ. ಸರಿ, ಸೊಟ್ಟ ದಾರಿಗಳನ್ನೆಲ್ಲ ಬಳಸಿಕೊಂಡು ಭಾರೀ ಹಣ ಸಂಪಾದಿಸಿದ್ದ. ಅವನಿಗೆ ಎಲ್ಲಿ ನೋಡಿದಲ್ಲಿ ಹೊಲಗಳು, ಮನೆಗಳು, ಭಾರೀ ಜಾಗೆಗಳು. ಮನೆಯಲ್ಲಿ ಬಂಗಾರದ ರಾಶಿಯನ್ನೇ ಹಾಕಿಕೊಂಡಿದ್ದ.

 

ಹಣ ಹೆಚ್ಚಾದಷ್ಟು ಸುತ್ತಮುತ್ತಲಿನ ಜನರ ಮೇಲೆ ನಂಬಿಕೆ ಕಡಿಮೆಯಾಗಿ ಎಲ್ಲರ ಮೇಲೆ ಸಂಶಯ ಪ್ರಾರಂಭವಾಗುತ್ತದೆ. ಯಾರು ತನಗೆ ಎಲ್ಲಿ ಮೋಸ ಮಾಡಿಯಾರೋ ಎಂಬ ಭಯ ಕಾಡುತ್ತದೆ. ಆದರೂ ಯಾರಾದರೂ ಒಬ್ಬರು ವಿಶ್ವಾಸಿಕರು ಬೇಕಲ್ಲವೇ?ಶ್ರಿಮಂತ ಹುಡುಕಿ ಹುಡುಕಿ ಒಬ್ಬ ಅತ್ಯಂತ ಬಡವ್ಯಕ್ತಿಯನ್ನು ಆರಿಸಿದ. ಆತ ಅತ್ಯಂತ ಪ್ರಾಮಾಣಿಕ, ನಂಬಿಕಸ್ಥ ಮತ್ತು ಮೇಲಾಗಿ ಒಂದು ಮಾತನ್ನು ಹೆಚ್ಚಾಗಿ ಆಡದೇ ಯಜಮಾನ ಹೇಳಿದ ಹಾಗೆಯೇ ಮಾಡುವವ. ಅವನನ್ನು ಕರೆದು ಮಾತನಾಡಿಸಿದ, `ನೋಡಯ್ಯೊ, ನೀನು ನನ್ನ ಅತ್ಯಂತ ನಂಬಿಕೆಯ ವ್ಯಕ್ತಿ.ಸದಾ ನನ್ನೊಡನೆಯೇ ಇರಬೇಕು. ನನ್ನ ವ್ಯವಹಾರಗಳು ನೂರಾರು. ನೀನು ಅವನ್ನು ನೋಡುತ್ತಿರಬೇಕು. ಆದರೆ ಅದರಲ್ಲಿ ತಲೆಹಾಕಬಾರದು. ಏನೇನೋ ಘಟನೆಗಳು ನಡೆಯುತ್ತವೆ ಅವುಗಳ ಬಗ್ಗೆ ಯಾರ ಮುಂದೂ ಬಾಯಿ ಬಿಚ್ಚಬಾರದು. ನನ್ನ ಕಾರಿನಲ್ಲಿ, ಕೋಣೆಯಲ್ಲಿ ಹಣ, ಬಂಗಾರ ಬಂದು ಬಿದ್ದರೂ ಕಣ್ಣೆತ್ತಿ ನೋಡಬಾರದು.ನನಗೆ ಬೇಕಾದುದನ್ನೆಲ್ಲ ನೀನೇ ಪೂರೈಸುವುದರೊಡನೆ ನನ್ನ ಕಾರನ್ನು ನೀನೇ ಓಡಿಸಬೇಕು, ಇಷ್ಟೆಲ್ಲ ಮಾಡುವುದಕ್ಕೆ ನಿನಗೆ ಸಂಬಳ ಎಷ್ಟು ಕೊಡಬೇಕು?~ ಆ ಮನುಷ್ಯ ಹೇಳಿದ,  `ಸ್ವಾಮೀ ನನ್ನ ಬಂಡವಾಳವೇ ಪ್ರಾಮಾಣಿಕತೆ. ನಿಮ್ಮ ನಂಬುಗೆಗೆ ಎಂದೂ ಅಪಚಾರ ಮಾಡಲಾರೆ. ನನಗೆ ಹೆಚ್ಚು ಹಣವೂ ಬೇಡ. ನನ್ನ ಬದುಕಿಗೆ ಸಾಕಾಗುವಷ್ಟು ಕೊಟ್ಟರೆ ಸಾಕು.~ಮರುದಿನದಿಂದಲೇ ಅವನ ಕೆಲಸ ಪ್ರಾರಂಭವಾಯಿತು. ಎಲ್ಲರೂ ಸೇವಕನ ಪ್ರಾಮಾಣಿಕತೆಯನ್ನು ಮೆಚ್ಚಿದರು. ಒಂದು ದಿನ ಯಜಮಾನ ಅವಸರದಿಂದ ಬಂದು ಕಾರಿನಲ್ಲಿ ಹುಡುಕಾಡತೊಡಗಿದ. ಸೇವಕನನ್ನು ಕೇಳಿದ,  `ಏನಯ್ಯ, ಇಲ್ಲಿ ಇಪ್ಪತ್ತೈದು ಬೆಳ್ಳಿಯ ನಾಣ್ಯಗಳಿದ್ದ ಚೀಲವನ್ನಿಟ್ಟಿದ್ದೆ ನೋಡಿದ್ದೀಯಾ?~  `ಇಲ್ಲ ಸ್ವಾಮಿ ನಾನು ಅದನ್ನು ನೋಡಲೇ ಇಲ್ಲ~ ಎಂದ ಸೇವಕ.  `ನೀನೇನು ದನ ಕಾಯುತ್ತಿದ್ದೆಯಾ? ನಾನು ಎಲ್ಲಿ ಹೋದಲ್ಲಿ ಗಮನವಿಡಬೇಕಲ್ಲವೇ?~ ಪ್ರಶ್ನಿಸಿದ ಯಜಮಾನ. `ಹೌದು ಸ್ವಾಮಿ, ನೀವು ಮೂರು ನಾಲ್ಕು ಕಡೆಗೆ ಹೋಗಿದ್ದೀರಿ. ಆದರೆ ತಾವು ನಾಣ್ಯದ ಚೀಲವನ್ನು ತೆಗೆದುಕೊಂಡು ಹೋದದ್ದು ತಿಳಿಯಲಿಲ್ಲ. ಅದನ್ನು ನೋಡಲೂ ಇಲ್ಲ~ ಎಂದು ಗೋಗರೆದ ಸೇವಕ.ಯಜಮಾನ ಹೇಳಿದ.  `ನೀನೇ ಆ ಚೀಲವನ್ನು ಕದ್ದಿದ್ದೀಯಾ. ನಿನ್ನ ಹೊರತು ಅದು ಇನ್ನಾರಿಗೂ ಸಾಧ್ಯವಿಲ್ಲ. ನಾಳೆಯೊಳಗೆ ತಂದುಕೊಡದಿದ್ದರೆ ನಿನ್ನನ್ನು ಪೋಲಿಸರಿಗೆ ಒಪ್ಪ್ಪಿಸುತ್ತೇನೆ.~ ಬಡವ ಗಾಬರಿಯಾದ.ಮರುದಿನ ಬೆಳಿಗ್ಗೆ ಬಡವನ ಮಗಳು ಶ್ರಿಮಂತರ ಹೊಲಕ್ಕೆ ಕೆಲಸಕ್ಕೆ ಹೋದಾಗ ಒಂದು ನಾಣ್ಯವಿರುವ ಚೀಲ ಸಿಕ್ಕಿತು. ಆಕೆ ತಂದು ತಂದೆಗೆ ಕೊಟ್ಟಳು. ತಂದೆ ತೆಗೆದು ನೋಡಿದಾಗ ಇಪ್ಪತ್ತೈದು ಬೆಳ್ಳಿಯ ನಾಣ್ಯಗಳಿದ್ದವು. ಓಹೋ, ಇದೇ ಯಜಮಾನರ ಚೀಲ. ಪಾಪ! ತಮ್ಮ ಹೊಲದಲ್ಲಿ ಬೀಳಿಸಿಕೊಂಡಿದ್ದಾರೆ ಎಂದುಕೊಂಡು ಅವರಿಗೆ ಕೊಟ್ಟ.ಯಜಮಾನ ಚೀಲ ಬಿಚ್ಚಿ ನೋಡಿ ಗುರುಗುಟ್ಟಿದ,  `ಎಲಾ, ಚೀಲದಲ್ಲಿ ಮೂವತ್ತೈದು ನಾಣ್ಯಗಳಿದ್ದವು. ಇಪ್ಪತ್ತೈದು ನನಗೆ ಕೊಟ್ಟು ಹತ್ತು ನಾಣ್ಯ ನೀನೇ ಹೊಡೆದು ಬಿಟ್ಟೆಯಾ? ನಿನ್ನನ್ನು ಕೋರ್ಟಿಗೆ ಎಳೆದುಬಿಡುತ್ತೇನೆ~ ಎಂದು ಹಾರಾಡಿದ. ಸೇವಕ ಕಂಗಾಲಾದ, ಗೋಗರೆದ. ಅವನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವಾಗ ಶ್ರಿಮಂತ ಹೇಳಿದ.  `ಇವನು ನನ್ನ ಸೇವಕ.

 

ಬೆಳ್ಳಿಯ ನಾಣ್ಯದ ಚೀಲದಿಂದ ಹತ್ತು ನಾಣ್ಯಗಳನ್ನು ಕದ್ದು ಇಪ್ಪತ್ತೈದನ್ನು ಮಾತ್ರ ಮರಳಿ ಕೊಟ್ಟಿದ್ದಾನೆ.~ ನ್ಯಾಯಾಧೀಶರು ಕೇಳಿದರು, `ನೀವು ಕಳೆದುಕೊಂಡಿದ್ದ ಚೀಲದಲ್ಲಿ ಎಷ್ಟು ನಾಣ್ಯಗಳಿದ್ದವು?~  `ಮೂವತ್ತೈದು ಸ್ವಾಮೀ~ ಎಂದ ಶ್ರಿಮಂತ.  `ಅಲ್ಲಪ್ಪ ನಿನಗೆ ಸಿಕ್ಕ ಚೀಲದಲ್ಲಿ ಎಷ್ಟು ನಾಣ್ಯಗಳಿದ್ದವು?~ ನ್ಯಾಯಾಧೀಶರು ಸೇವಕನನ್ನು ಕೇಳಿದರು. `ಇಪ್ಪತ್ತೈದು ಸ್ವಾಮಿ~ ಎಂದ ಸೇವಕ. ಈಗಾಗಲೇ ನ್ಯಾಯಾಧೀಶರಿಗೆ ಈತನ ಪ್ರಾಮಾಣಿಕತೆ ಮನದಟ್ಟಾಗಿತ್ತು. ಅವನು ಪ್ರಾಮಾಣಿಕನಲ್ಲದಿದ್ದರೆ ಇಪ್ಪತ್ತೈದು ನಾಣ್ಯಗಳನ್ನಾದರೂ ಯಾಕೆ ಹಿಂತಿರುಗಿಸುತ್ತಿದ್ದ?ಅವರ ತೀರ್ಮಾನ ಅದ್ಭುತವಾಗಿತ್ತು.  ಶ್ರಿಮಂತರ ಹೇಳಿಕೆಯಂತೆ ಅವರ ಚೀಲದಲ್ಲಿ ಮೂವತ್ತೈದು ನಾಣ್ಯಗಳಿದ್ದವು. ಆದರೆ ಈತನಿಗೆ ಸಿಕ್ಕ ಚೀಲದಲ್ಲಿ ಇಪ್ಪತ್ತೈದೇ ಇವೆ. ಅಂದರೆ ಈತನಿಗೆ ಸಿಕ್ಕ ಚೀಲ ಶ್ರಿಮಂತರದಲ್ಲ.

 

ಆದ್ದರಿಂದ ಮತ್ತೊಬ್ಬರು ಇನ್ನು ಹತ್ತು ದಿನದಲ್ಲಿ ಅದನ್ನು ಸಾಕ್ಷಿ ನೀಡಿ ಪಡೆಯದಿದ್ದರೆ ಆ ಇಪ್ಪತ್ತೈದು ನಾಣ್ಯಗಳು ಸೇವಕನಿಗೇ ಸೇರಬೇಕು. ಯಾರಿಗಾದರೂ ಮೂವತ್ತೈದು ನಾಣ್ಯಗಳ ಚೀಲ ಸಿಕ್ಕಿದರೆ ಅದು ಶ್ರಿಮಂತರದಿರಬಹುದು.  ಶ್ರಿಮಂತ ಬೆಪ್ಪನಾದ.ತಮ್ಮದಲ್ಲದ ವಸ್ತುಗಳನ್ನು ಪಡೆಯುವ ಹುಚ್ಚು, ನಮ್ಮದಾದ ವಸ್ತುಗಳನ್ನು ಕಳೆದುಬಿಡುತ್ತದೆ. ನಾವು ಕಷ್ಟಪಟ್ಟ ವಸ್ತುಗಳನ್ನೇ ಜೀರ್ಣಿಸುವುದು ಕಷ್ಟವಾಗಿರುವಾಗ ಮತ್ತೊಬ್ಬರ ವಸ್ತು ನಮಗೆ ಹೇಗೆ ದಕ್ಕೀತು, ಒಳ್ಳೆಯದನ್ನು ಮಾಡೀತು?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.