ಸೋಮವಾರ, ಏಪ್ರಿಲ್ 12, 2021
26 °C

ನಮ್ಮ ಅಳಿಯ - ಸೊಸೆ ಹೇಗಿರಬೇಕು

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಮೊನ್ನೆ ಪದ್ಮಾವತಮ್ಮ ಮನೆಗೆ ಬಂದಿದ್ದರು. ಅವರು ಬಂದರೆಂದರೆ ಮನೆಗೆ ಪೋಸ್ಟ್ ಆಫೀಸ್ ಬಂದ ಹಾಗೆ. ಯಾವ ಪ್ರಯತ್ನವಿಲ್ಲದೇ ಊರ ಸುದ್ದಿಯೆಲ್ಲ ತಿಳಿಯುತ್ತದೆ. ಈ ಬಾರಿ ಅವರು ಬೇರೆಯವರ ಮನೆಯ ವಿಷಯಗಳನ್ನು ತಂದಿರಲಿಲ್ಲ, ಎಲ್ಲ ಅವರ ಮನೆಯ ವಿಷಯವೇ. ಅವರ ಮಗಳ ಮದುವೆಯಾಗಿ ಎರಡು ವರ್ಷವೂ ಕಳೆದಿಲ್ಲ.ಈಗಾಗಲೇ ಅವಳ ಮನೆಯಲ್ಲಿ ದೊಡ್ಡ ರಾದ್ದಾಂತವಾಗಿ ಮಗಳು ಮನೆಗೆ ಬಂದುಬಿಟ್ಟಿದ್ದಾಳೆ. ಗಂಡನ ಕಡೆಯವರು ತುಂಬ ಹಿಂಸೆ ಕೊಡುತ್ತಾರಂತೆ. ಅವಳಿಗೆ ಯಾವ ಸ್ವಾತಂತ್ರ್ಯವೂ ಇಲ್ಲ. ಮೊದಮೊದಲು ಗಂಡ ಸ್ವಲ್ಪ ಸಹಾನುಭೂತಿಯಿಂದ ವರ್ತಿಸುತ್ತಿದ್ದನಂತೆ. ಇತ್ತೀಚಿಗೆ ಅವನೂ ತಂದೆ-ತಾಯಿಯರು ಹೇಳಿದ್ದನ್ನೇ ಕೇಳಿಕೊಂಡು ಹೆಂಡತಿಗೆ ಚಿತ್ರಹಿಂಸೆ ಕೊಡುತ್ತಿದ್ದಾನಂತೆ. ಅವಳು ತಡೆಯಲಾಗದೇ ತಾಯಿಯ ಮನೆಗೆ ಬಂದುಬಿಟ್ಟಿದ್ದಾಳೆ. ಪದ್ಮಾವತಮ್ಮ ಆಕೆಗೆ ಹೇಳಿದ್ದಾರಂತೆ,  ನೀನ್ಯಾಕೆ ಚಿಂತೆ ಮಾಡುತ್ತೀ.  ಅವರಿಗೆ ಬುದ್ಧಿ ಕಲಿಸುತ್ತೇನೆ. ವರದಕ್ಷಿಣೆಗಾಗಿ ತೊಂದರೆಕೊಡುತ್ತಿದ್ದಾರೆ ಎಂದು ಪೋಲೀಸ್ ಕಂಪ್ಲೇಂಟ್ ಕೊಟ್ಟರೆ ನೆಲಕ್ಕೆ ಮೂಗು ಉಜ್ಜಿಕೊಂಡು ಬರಬೇಕು, ಹಾಗೆ ಮಾಡುತ್ತೇನೆ. ನನಗೆ ಪದ್ಮಾವತಮ್ಮನವರ ಬೀಗರ ಕಡೆಯವರೂ ಪರಿಚತರೇ.ಆದ್ದರಿಂದ ಹಿನ್ನೆಲೆ ನನಗೆ ಗೊತ್ತಿತ್ತು. ಅವರು ಸಾತ್ವಿಕರು, ಸ್ವಲ್ಪ ಧರ್ಮ, ಪೂಜೆ, ದೇವಸ್ಥಾನ ಇವುಗಳಲ್ಲಿ ನಂಬಿಕೆ ಇಟ್ಟುಕೊಂಡಿದ್ದವರು. ಹೊಸದಾಗಿ ಬಂದ ಸೊಸೆಯನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಆದರೆ, ಈಕೆ ಸ್ವಲ್ಪ ಅಹಂಕಾರದ ಹುಡುಗಿ. ಈ ಪೂಜೆ, ಪುನಸ್ಕಾರವೆಂದರೆ ಆಗುವುದಿಲ್ಲ. ಅತ್ತೆ, ಮಾವಂದಿರಿಗೆ ಈಕೆಯ ಆಧುನಿಕ  ವೇಷ ಭೂಷಣ ಅಷ್ಟು ಇಷ್ಟವಾಗಿಲ್ಲ. ಮದುವೆಯಾದ ಹೆಂಗಸು ಈ ರೀತಿ ಅರ್ಧ ಬೆನ್ನು, ಅರ್ಧ ಎದೆ ಕಾಣುವಂತೆ ಬಟ್ಟೆ ಹಾಕಿಕೊಳ್ಳುವುದು ಅಷ್ಟು ಸರಿಯಲ್ಲ ಎಂದು ಮೆದುವಾಗಿ ಹೇಳಿ ನೋಡಿದ್ದಾರೆ. ಇದರಿಂದ ಆಕೆಯ ಆತ್ಮ ಗೌರವಕ್ಕೆ ಧಕ್ಕೆಯಾಯಿತೆಂದು ಕೂಗಾಡಿ, ಅತ್ತು, ಊಟ ಮಾಡದೇ ಮಲಗಿ ಮನೆಯಲ್ಲಿ ರಂಪವಾಯಿತು. ಈ ಹುಡುಗಿಗೆ ಮನೆ ಕೆಲಸ ಮಾಡಿಯೇ ಗೊತ್ತಿಲ್ಲ. ಅತ್ತೆಗೂ ವಯಸ್ಸಾಗಿದೆ. ಸ್ವಲ್ಪ ಸಹಾಯ ಮಾಡಬಾರದೇ ಎಂದು ಮಾವ ಹೇಳಿದ್ದೇ ತಪ್ಪಾಯಿತು. ಕೆಲಸದವಳು ಬೇಕಾಗಿದ್ದರೆ ಮಗನ ಮದುವೆಯನ್ನು ಒಬ್ಬ ಕೆಲಸದವಳ ಜೊತೆ ಮಾಡಬೇಕಿತ್ತು ಎಂದು ಒರಟಾಗಿ ಮಾತನಾಡಿ ಮೂರು ದಿನ ಮನೆಯಲ್ಲಿ ಊಟಮಾಡದೇ ಹೋಟೆಲ್ಲಿಗೆ ಹೋಗಿ ತಿಂದು ಬಂದಿದ್ದಾಳೆ.ಅತ್ತೆ-ಮಾವ ಏನು ಮಾತನಾಡಿದರೆ ಏನಾಗುತ್ತದೋ ಎಂದು ಭಯಪಟ್ಟು ಅವಳಿಗೆ ಏನನ್ನೂ ಹೇಳದೇ ಸುಮ್ಮನಿದ್ದು ಬಿಟ್ಟಿದ್ದಾರೆ. ಬರಬರುತ್ತಾ ಅವಳ ಸ್ವಭಾವ ಗಂಡನಿಗೂ ಕಷ್ಟವಾಯಿತು. ಆಕೆ ಮಲಗುವುದೇ ರಾತ್ರಿ ಎರಡು ಗಂಟೆಗೆ, ಬೆಳಿಗ್ಗೆ ಏಳುವುದು ಹತ್ತು ಗಂಟೆಗೆ. ಆಕೆಯ ಗಂಡ ಆಫೀಸಿಗೆ ಬೆಳಿಗ್ಗೆ ಎಂಟೂವರೆಗೇ ಹೊರಡಬೇಕು. ದಿನಾಲು ತಾಯಿಯೇ ಕಷ್ಟಪಟ್ಟು ಮಗನಿಗೆ ತಿಂಡಿ ಮಾಡಿ, ಊಟ ಕಟ್ಟಿಕೊಡಬೇಕು. ಒಂದು ದಿನ ತಡೆಯದೇ ಆತನೂ ಹೆಂಡತಿಗೆ ಬುದ್ಧಿ ಹೇಳುವ ಧೈರ್ಯಮಾಡಿದ. ಪರಿಣಾಮ ಮನೆಯಲ್ಲಿ ರುದ್ರನರ್ತನ. ಆಕೆ ತನ್ನ ಗಂಟುಮೂಟೆ ಕಟ್ಟಿಕೊಂಡು ತಾಯಿಯ ಮನೆಗೆ ಬಂದುಬಿಟ್ಟಳು. ಹಗ್ಗ ಹರಿಯುವ ಹಂತಕ್ಕೆ ಬಂದ ಈ ಪರಿಸ್ಥಿತಿಯನ್ನು ನೋಡಿದಾಗ ಇದು ಬಹಳಷ್ಟು ಮನೆಗಳಲ್ಲಿ ಆಗುತ್ತಿದೆಯಲ್ಲ ಎನ್ನಿಸಿತು.ಈ ಮಾತು ಬರೀ ಹುಡುಗಿಯರಿಗೆ ಮಾತ್ರವಲ್ಲ, ಹುಡುಗರಿಗೂ ಹೊಂದುತ್ತದೆ. ಹೊಸದಾಗಿ ಮದುವೆಯಾದ ತರುಣ-ತರುಣಿಯರಲ್ಲಿ ಬೇಗ ಮನಸ್ತಾಪಗಳು ಬಂದು, ಹೊಂದಾಣಿಕೆ ಆಗದಿರುವುದಕ್ಕೆ ಬಹುಪಾಲು ಕಾರಣ ನಾವು ಪಾಲಕರೇ ಎನ್ನಿಸಿತು.ಮಗಳು ಚಿಕ್ಕವಳಾಗಿದ್ದಾಗ ತಂದೆ ತಾಯಿಯರನ್ನು, ಹಿರಿಯರನ್ನು ಗಮನಿಸುತ್ತಾಳೆ. ತಾಯಿಯನ್ನು ತಂದೆ ನಡೆಸಿಕೊಳ್ಳುವ ರೀತಿ, ತಾಯಿ ಅಥವಾ ತಂದೆಯ ದರ್ಪದ ವರಸೆ ಇದು ಅವಳ ಮನದಲ್ಲಿ ಮೂಡುತ್ತದೆ. ನಾವು ನಮ್ಮ ಮಕ್ಕಳಿಗೆ ಇನ್ನೊಬ್ಬರೊಡನೆ ಹೊಂದಿಕೊಂಡು ಬದುಕುವ, ಸಣ್ಣಪುಟ್ಟ ತ್ಯಾಗಗಳನ್ನು ಕುಟುಂಬಕೋಸ್ಕರ ಮಾಡುವುದನ್ನು ಕಲಿಸುವುದಿಲ್ಲ. ಹಿರಿಯರಿಗೆ ಗೌರವ ನೀಡುವ, ಸಂಪ್ರದಾಯಗಳನ್ನು ಗೌರವಿಸುವ ಪಾಠ ಹೇಳುವುದಿಲ್ಲ. ಬದಲಾಗಿ ನನ್ನ ಮಗನನ್ನು ರಾಜನ ಹಾಗೆ ಮತ್ತು ಮಗಳನ್ನು ರಾಣಿಯ ಹಾಗೆ ಬೆಳೆಸಿದ್ದೇವೆ ಎಂದು ಜಂಬ ಕೊಚ್ಚಿಕೊಳ್ಳುತ್ತೇವೆ.

 

ನಿಮ್ಮ ಸೊಸೆ ಹೇಗಿರಬೇಕೆಂದು ಬಯಸುತ್ತೀರೋ ಅದೇ ರೀತಿ ನಿಮ್ಮ ಮಗಳನ್ನೂ ಬೆಳೆಸಿ. ನಿಮ್ಮ ಅಳಿಯ ಹೇಗಿರಬೇಕೆಂದು ಅಪೇಕ್ಷಿಸುತ್ತೀರೋ, ಅದೇ ರೀತಿ ನಿಮ್ಮ ಮಗನನ್ನೂ ಬೆಳೆಸಿ. ಆಗ ಮನೆ-ಮನಗಳು ಒಂದಾಗಿ ಕುಟುಂಬ ಜೀವನ ಸುಂದರವಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.