ಶನಿವಾರ, ಮೇ 28, 2022
30 °C

ನಾಯಿಯ ಶಾಪ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಮೊನ್ನೆ ಒಬ್ಬರು, `ನಾನು ನಿವೃತ್ತನಾಗಿ ಇಪ್ಪತ್ತು ವರ್ಷವಾದರೂ ನನ್ನ ಪಿಂಚಣಿ ತೀರ್ಮಾನವಾಗಿಲ್ಲ. ಮುಖ್ಯಮಂತ್ರಿಗಳಿಂದ ಹಿಡಿದು ಆಫೀಸಿನ ಜವಾನ್‌ವರೆಗೂ ಎಲ್ಲರ  ಕೈಕಾಲು ಹಿಡಿದಿದ್ದೇನೆ. ಇನ್ನೂ ಇತ್ಯರ್ಥವಾಗಿಲ್ಲ, ನಾನು ಅಸಹಾಯಕನಾಗಿದ್ದೆೀನೆ~ ಎಂದು ಹೇಳುತ್ತಿದ್ದರು.ಇನ್ನೊಬ್ಬರು, `ನನ್ನ ಜಮೀನಿಗೆ ಬರಬೇಕಾದ ಪರಿಹಾರ ಧನ ನಾಲ್ಕು ವರ್ಷಗಳಿಂದ ಬಂದಿಲ್ಲ. ಮನೆಯ್ಲ್ಲಲಿ ಬದುಕೇ ಕಷ್ಟವಾಗಿದೆ. ಯಾರಿಗೆ ಹೇಳಿಕೊಂಡರೂ ಪ್ರಯೋಜನವಾಗುತ್ತಿಲ್ಲ~ ಎಂದು ಹಲುಬುತ್ತಿದ್ದರು. ಹೀಗೆ ಪ್ರತಿಯೊಬ್ಬರಲ್ಲೂ ಸಮಸ್ಯೆಗಳ ದೊಡ್ಡ ಪಟ್ಟಿಯೇ ಇದೆ. ದುಡ್ಡು ಕೊಡದೇ ಯಾವ ಕೆಲಸವೂ ಆಗುವುದಿಲ್ಲ.ಕಣ್ಣಿಗೆ ಢಾಳಾಗಿ ಕಾಣುವಷ್ಟು ಭ್ರಷ್ಟರಾದ ಜನ ಆರಾಮವಾಗಿ ಹೊರಗೇ ಗೌರವ ಪಡೆಯುತ್ತ ಓಡಾಡುತ್ತಿದ್ದಾರೆ. ಪ್ರಾಮಾಣಿಕರಾದವರು ಒದ್ದಾಡುತ್ತಲೇ ಇದ್ದಾರೆ. ಯಾರನ್ನು ಕೇಳಿದರೂ ವ್ಯವಸ್ಥೆಯೇ ಹಾಗಿದೆ, ಯಾರಿಗೆ ಹೇಳುವುದು ಎಂದು ಅಸಹಾಯಕತೆ ವ್ಯಕ್ತಪಡಿಸುವಾಗ ಮಹಾಭಾರತದ ಪುಟ್ಟ ಪ್ರಸಂಗ ನೆನಪಾಯಿತು.ಚಕ್ರವರ್ತಿ ಜನಮೇಜಯ ಮಹಾಯಾಗವೊಂದನ್ನು ಮಾಡಲು ಯೋಜಿಸಿದ. ಎಲ್ಲ ತಯಾರಿ ನಡೆದು ಇನ್ನೇನು ಯಾಗ ಪ್ರಾರಂಭವಾಗಬೇಕು ಎನ್ನುವಾಗ ಸೇವಕರು ಯಾಗ ಮಂಟಪದಿಂದ ಸ್ವಲ್ಪ ದೂರದ್ಲ್ಲಲಿ ನಾಯಿ ಮರಿಯೊಂದು ಕುಳಿತಿರುವುದನ್ನು ನೋಡಿದರು.

 

ಅದು ಯಾವ ತೊಂದರೆಯನ್ನು ಮಾಡದೇ, ಕೇವಲ ದೂರದಿಂದ ಎಲ್ಲವನ್ನೂ ನೋಡುತ್ತ ಕುಳಿತಿತ್ತು. ಯಾಗದ ಪಾವಿತ್ರ್ಯವನ್ನು ಕೆಡಿಸುವ ಯಾವ ಕೆಲಸವನ್ನೂ ದು ಮಾಡಿರಲಿಲ್ಲ.

 

ಸೇವಕರು ನೋಡುತ್ತಿರುವಂತೆಯೇ ಯಾಗದ ಕೊನೆಕ್ಷಣದ ಸಿದ್ಧತೆಗಳನ್ನು ಗಮನಿಸಲು ಜನಮೇಜಯನ ತಮ್ಮಂದಿರಾದ ಶ್ರುತಸೇನ, ಉಗ್ರಸೇನ ಭೀಮರು ಅಲ್ಲಿಗೆ ಬಂದರು. ನಾಯಿಮರಿಯನ್ನು ಕಂಡು ಕೋಪ ಉಕ್ಕಿ ಅದನ್ನು ಹೊಡೆದು ದೂರಕ್ಕೆ ಅಟ್ಟಿಬಿಟ್ಟರು.ಈ ನಾಯಿಮರಿ ಸಾಮಾನ್ಯವಾದದ್ದಲ್ಲ. ಅದರ ತಾಯಿ ಸರಮೆ. ಅದು ದೇವಲೋಕದ ನಾಯಿ. ತನ್ನ ಮರಿಗೆ ಆದ ಅಪಮಾನ, ಪೆಟ್ಟುಗಳಿಂದ ಸಿಟ್ಟಾದ ಸರಮೆ, ಜನಮೇಜಯನ ಯಾಗ ಮಂಟಪಕ್ಕೆ ಬಂದಿತು.

 

ಯಾವ ತಪ್ಪನ್ನೂ ಮಾಡದ ತನ್ನ ಮರಿಗೆ ಅಧಿಕಾರ ಮದದಿಂದ ಕುರುಡಾಗಿದ್ದ ಜನಮೇಜನ ತಮ್ಮಂದಿರು ಹೊಡೆದದ್ದೆೀಕೆ ಎಂದು ವಾದ ಮಾಡಿ ಚಕ್ರವರ್ತಿಯನ್ನು ಅಲ್ಲಿಗೆ ಬರಲು ಒತ್ತಾಯಿಸಿತು.ಯಾಗದಂಥ ಮಹಾಕಾರ್ಯದ್ಲ್ಲಲಿ ನಾಯಿಮರಿಗೆ ಹೊಡೆದ ಘಟನೆ ತೀರ ಅಲ್ಪವಾದದ್ದು ಎಂದು ಭಾವಿಸಿ ಜನಮೇಜಯನಾಗಲೀ, ಅವನ ತಮ್ಮಂದಿರಾಗಲೀ ಯಾವ ಉತ್ತರವನ್ನೂ ನೀಡಲು ಬರಲಿಲ್ಲ.ಸರಮೆಗೆ ಈ ಅಹಂಕಾರ ಇನ್ನೂ ಕೋಪ ತಂದಿತು. ಆಗ ಸರಮೆ, ಯಾವ ಕಾರಣವೂ ಇಲ್ಲದೇ  ಮರಿಗೆ ಹಿಂಸೆ ನೀಡಿದ್ದೀರಿ. ನಿರಪರಾಧಿಯನ್ನು ಅಸಹಾಯತೆಗೆ ದೂಡಿದ ನೀವು ಶಾಪಕ್ಕೆ ಅರ್ಹರಾಗಿದ್ದೀರಿ. ಇನ್ನು ನಿಮ್ಮ ಮನೆತನದವರು ಯಾರ ಊಹೆಗೂ ನಿಲುಕದಷ್ಟು ಆಕಸ್ಮಿಕ ತೊಂದರೆಗೆ ಸಿಲುಕಿಕೊಳ್ಳುತ್ತೀರಿ ಎಂದಿತು.

 

ಈ ಶಾಪದ ನುಡಿ ಜನಮೇಜನಿಗೆ ತಲುಪಿದಾಗ ಆತ ಓಡಿ ಬಂದು ಕ್ಷಮೆ ಕೇಳಿದ. ನಂತರ ಶಾಪ ವಿಮೋಚನೆಗೆ ಸರಮೆ ಪರಿಹಾರೋಪಾಯಗಳನ್ನು ತಿಳಿಸಿತು. ಚಕ್ರವರ್ತಿಯ ಕ್ಷಮೆ ಯಾಚನೆಯನ್ನು ಮನ್ನಿಸಿ ಅವರನ್ನು ಕ್ಷಮಿಸಿ ಮರಿಯನ್ನು ಕರೆದುಕೊಂಡು ಹೋಯಿತು. ಇದರಲ್ಲಿ ನನಗೆ ಆ ಕಾಲದ ಕೆಲವು ಸಂಗತಿಗಳು ಹೊಳೆದದ್ದು ಹೀಗೆ -1. ಎಷ್ಟೇ ಎತ್ತರದ ಅಧಿಕಾರದಲ್ಲಿ ಇದ್ದವರಿಗೂ ನಾಯಿಮರಿಯಂತಹ ಪುಟ್ಟ ಪ್ರಾಣಿಯನ್ನು ಅನವಶ್ಯಕವಾಗಿ ಹಿಂಸಿಸುವ ಅಧಿಕಾರ ಇರಲಿಲ್ಲ.2. ಒಂದು ಅಸಹಾಯಕ ನಾಯಿ, ಚಕ್ರವರ್ತಿಯನ್ನು ಕರೆಸಿ ಶಾಪಕೊಡುವಷ್ಟು ನೈತಿಕ ಸ್ಥೈರ್ಯ ಪಡೆದಿತ್ತು.3.ನಾಯಿಯ ಶಾಪ ಕೂಡ ಚಕ್ರವರ್ತಿಯನ್ನು ಅಲುಗಾಡಿಸಿ ಕ್ಷಮೆ ಕೇಳಿಸುವಷ್ಟು ಪ್ರಬಲವಾಗಿತ್ತು.

 

ಆ ಕಾಲದ ನಾಯಿಗೆ ದೊರಕಿದಷ್ಟು ಸ್ವಾತಂತ್ರ್ಯ, ಅಧಿಕಾರ, ಪ್ರಜೆಗಳ, ಪ್ರಜೆಗಳಿಗಾಗಿ, ಪ್ರಜೆಗಳಿಂದಲೇ ರಚಿತವಾದ ಪ್ರಜಾಪ್ರಭುತ್ವದ್ಲ್ಲಲಿ ಒಂದಂಶ ಬರುವುದಾದರೆ ಎಷ್ಟು ಚೆನ್ನ ಅಲ್ಲವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.