ಭಾನುವಾರ, ಮಾರ್ಚ್ 29, 2020
19 °C

ಪರ ನಿಂದೆಯ ‘ತುರಿಕೆ’ಯೂ ತಿಗಣೆ ಕಡಿತವೂ

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ಸಾಮಾಜಿಕ ಜಾಲತಾಣ ಮತ್ತು ಅಂತರ್ಜಾಲ ತಾಣಗಳಲ್ಲಿ ಉದ್ದೇಶಪೂರ್ವಕವಾಗಿ ರೇಗಿಸುವುದು ಮತ್ತು ನಿಂದಿಸುವುದು ಸ್ನೇಹಪರವಾಗಿರುವುದಿಲ್ಲ ಅಥವಾ ಅಷ್ಟು  ಮಹತ್ವದ್ದೂ ಆಗಿರುವುದಿಲ್ಲ. ಆದರೆ, ನಂತರ ಸಾರ್ವಜನಿಕ ವಲಯಗಳಲ್ಲಿ ನಡೆಯುವ ಚರ್ಚೆಯು ಒಟ್ಟಾರೆ ವಿಷಯವನ್ನು ತುಂಬ ಸಂಕೀರ್ಣಗೊಳಿಸುತ್ತದೆ. ಇಂಟರ್‌ನೆಟ್‌ ಯುಗದಲ್ಲಿ ಇನ್ನೊಬ್ಬರನ್ನು ರೇಗಿಸುವ/ ನಿಂದಿಸುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚುತ್ತಿದೆ. ಮಾತುಗಳಿಂದಲೇ ಇನ್ನೊಬ್ಬರ ಮನಸ್ಸನ್ನು ಗಾಸಿಗೊಳಿಸುವ  ಪ್ರವೃತ್ತಿಯಿಂದ ಅನೇಕರು ಯಾತನೆ ಪಡುತ್ತಾರೆ. ವ್ಯಂಗ್ಯವಾಗಿ ಆಡುವ,  ಹೀಯಾಳಿಸುವ ಮಾತುಗಳು ಮುಗ್ಧರ ಮನಸ್ಸನ್ನು ನೋಯಿಸಿ ಅವರನ್ನು ಜರ್ಜರಿತರನ್ನಾಗಿ ಮಾಡುತ್ತವೆ.ಇತ್ತೀಚಿನ ದಿನಗಳಲ್ಲಿ ಇನ್ನೊಬ್ಬರನ್ನು ಗೋಳುಹೊಯ್ದುಕೊಳ್ಳುವ ಹೊಸ ತಂಡಗಳೇ ಹುಟ್ಟಿಕೊಂಡಿವೆ. ವಿಶ್ವದಾದ್ಯಂತ ಸಾರ್ವಜನಿಕ ಚರ್ಚೆಗಳಲ್ಲಿ, ಭಾಷಣಗಳಲ್ಲಿ ಇನ್ನೊಬ್ಬರನ್ನು ಧೃತಿಗೆಡಿಸುವ ಕಿರುಕುಳ ಸ್ವರೂಪದ ಮಾತುಗಳು ಸ್ವೀಕಾರಾರ್ಹವಾಗಿವೆ. ಅನೇಕರು ಈ ಬಗೆಯ ಕೂರಂಬುಗಳನ್ನು ಬಹುವಾಗಿ ನಿರೀಕ್ಷಿಸುತ್ತಾರೆ ಕೂಡ. ಈ ವಿಷಯದಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ಸಾಕಷ್ಟು ಮುಂದುವರೆದಿದೆ. ನಮ್ಮ ಭಾಷಾ ವೈವಿಧ್ಯದಲ್ಲಿನ ಬೈಗುಳಗಳ ಹರವೂ ಸಾಕಷ್ಟು ದೊಡ್ಡದಿದೆ.ಐದು ವರ್ಷಗಳ ಹಿಂದೆ ಮುದ್ರಿಸಲು ಮುಜುಗರಪಡಬಹುದಾಗಿದ್ದ ನಿಂದನಾತ್ಮಕ ಶಬ್ದಗಳ ಬಳಕೆಗೆ ಈಗ ಯಾವುದೇ ಮಡಿವಂತಿಕೆ ಅಡ್ಡ ಬರುತ್ತಿಲ್ಲ. ಬಹುಭಾಷೆಗಳ ಬಳಕೆ ಮತ್ತು ರೂಪಾಲಂಕಾರದ ಶಬ್ದಗಳಿಂದ ಇತರರಿಗೆ ಮೆಚ್ಚುಗೆಯ ಸಂದೇಶಗಳನ್ನು ಕಳಿಸಬಹುದಾಗಿದೆ. ಜತೆಗೆ, ಬೈಗುಳದ ವಿಷಯದಲ್ಲಿ ಅಮ್ಮ, ಅಕ್ಕನನ್ನು ಎಳೆದು ತರುವುದೂ ಉಚಿತವಲ್ಲ. ಇಂಟರ್‌ನೆಟ್‌ನಲ್ಲಿ ಈಗ ಯಾರನ್ನು ಬೇಕಾದರೂ ಯಾವುದೇ ಭಾಷೆಯಲ್ಲಿ ರೇಗಿಸಬಹುದಾಗಿದೆ. ಅದರ ಗೌರವ ಇಂಟರ್‌ನೆಟ್‌ಗೆ ಸಲ್ಲುತ್ತಿದೆ. ಬೈಗುಳ, ನಿಂದನೆ ಸಾರ್ವಜನಿಕ ಬದುಕು, ಚರ್ಚೆ ಮತ್ತು ರಾಜಕೀಯದಲ್ಲಿಯೂ ಹಾಸು ಹೊಕ್ಕಾಗಿದೆ.ಅಂತರ್ಜಾಲವು, ಅದರಲ್ಲೂ ಪ್ರಮುಖವಾಗಿ ಸಾಮಾಜಿಕ ಮಾಧ್ಯಮವು  ಮುಂಚೂಣಿಗೆ ಬಂದಿದ್ದು, ಬಳಕೆದಾರರಲ್ಲಿ ಗೌರವಕ್ಕೂ ಪಾತ್ರವಾಗಿದೆ. ವಿಶ್ವದ ನಾಲ್ಕನೇ ಅತಿದೊಡ್ಡ ಸೇನೆಯ ಮುಖ್ಯಸ್ಥರಿಂದ ಹಿಡಿದು, ಮುಖ್ಯಮಂತ್ರಿಯಂತಹ ಸಂವಿಧಾನಾತ್ಮಕ ಹುದ್ದೆಯಲ್ಲಿ ಇರುವವರು, ಸಂಪುಟ ದರ್ಜೆಯ ಸಚಿವರು ಸೇರಿದಂತೆ ಪ್ರತಿಯೊಬ್ಬರೂ ಈ ಬೈಗುಳದ ಅಸ್ತ್ರವನ್ನು ಮುಕ್ತವಾಗಿ ಬಳಸುತ್ತಿದ್ದಾರೆ.ಕುಸ್ತಿ ಬಗ್ಗೆ ನಿಮಗೆ ಹೆಚ್ಚಿನ ಅರಿವು ಇದ್ದರೆ, ಅದರ  ಕುರಿತ ಹೋಲಿಕೆಯು ಸದ್ಯದ ಪರಿಸ್ಥಿತಿಯನ್ನು ತಿಳಿದುಕೊಳ್ಳಲು ನೆರವಾಗಲಿದೆ. ಈ ಹಿಂದೆ ರಾಜಕಾರಣವು ಗ್ರೀಕ್‌– ರೋಮನ್‌ ಶೈಲಿಯ ಕುಸ್ತಿ ರೂಪದಲ್ಲಿ ಇರುತ್ತಿತ್ತು. ಆ ಬಗೆಯ ಕುಸ್ತಿಯಲ್ಲಿ ಎದುರಾಳಿಯ ಎದೆಮಟ್ಟದ ಮೇಲೆ ಮಾತ್ರ ಹಿಡಿತ ಸಾಧಿಸಲು ಅವಕಾಶ ಇರುತ್ತಿತ್ತು.  ಆದರೆ, ಈಗ ಅದು ‘ಡಬ್ಲ್ಯುಡಬ್ಲ್ಯುಎಫ್‌’ ಮಾದರಿಯಲ್ಲಿ ಮುಕ್ತ ಹೊಡೆತದ ರೀತಿಯಲ್ಲಿ ನಡೆಯುತ್ತಿದೆ. ಅವಮಾನಕರ ರೀತಿಯಲ್ಲಿ ಬೈಗುಳಗಳನ್ನು ಧಾರಾಳವಾಗಿ ಬಳಸಲಾಗುತ್ತಿದೆ. ನಿಮ್ಮ ಬೈಗುಳಗಳಲ್ಲಿ ನಾಯಿ ಎಂದು ಜರೆಯುವುದು, ಅಮ್ಮ, ಅಕ್ಕನನ್ನು ಎಳೆದು ತರುವುದು ಯಾರಿಗಾದರೂ ಚಿಂತಿತರನ್ನಾಗಿ ಮಾಡಿದೆಯೇ?  ಗೊತ್ತಿಲ್ಲ.ನನ್ನ ಅನುಭವದಲ್ಲಿ ಹೇಳುವುದಾದರೆ, ಈ ಹಿಂದಿನ ನನ್ನ ಕೆಲಸದಲ್ಲಿ ನಾನು ಕಾರ್ಮಿಕ ಸಂಘಟನೆಗಳನ್ನು ಎದುರು ಹಾಕಿಕೊಂಡಿದ್ದೆ. ಸಂಘಟನೆಯ ಕಾರ್ಮಿಕರು ನನ್ನ ವಿರುದ್ಧ ಸದಾ ಕಿಡಿಕಾರುತ್ತಲೇ ಇದ್ದರು. ಅದರಲ್ಲೂ ವಿಶೇಷವಾಗಿ ಶುಕ್ರವಾರ ಮಧ್ಯಾಹ್ನ ನಾನು ಅಂಕಣ ಬರೆಯಲು ಕುಳಿತುಕೊಳ್ಳುವುದು ಅವರಿಗೂ ಗೊತ್ತಿತ್ತು. ಆ ಹೊತ್ತಿಗೆ ಸರಿಯಾಗಿ ನಾನು ಕುಳಿತುಕೊಳ್ಳುವ ಕಿಟಕಿಯ ಕೆಳಭಾಗದಲ್ಲಿಯೇ  ಸೇರಿಕೊಳ್ಳುತ್ತಿದ್ದ ಅವರೆಲ್ಲ ನನ್ನ ವಿರುದ್ಧ ‘ಮುರ್ದಾಬಾದ್‌’ (ನಿನಗೆ ಸಾವು ಬರಲಿ) ಘೋಷಣೆ ಕೂಗುತ್ತಿದ್ದರು. ಗಂಟೆಗಟ್ಟಲೆ ಡ್ರಮ್‌ ಬಾರಿಸುತ್ತಿದ್ದರು. ಕೆಲ ಸಂದರ್ಭಗಳಲ್ಲಂತೂ ಅಸಹ್ಯ ಎನಿಸುವಷ್ಟು ರೀತಿಯಲ್ಲಿ ವಾದ್ಯಗಳನ್ನು ಬಡಿಯುತ್ತಿದ್ದರು.ಕಾರ್ಮಿಕರ ಈ ಬಗೆಯ ವರ್ತನೆಯಿಂದ ದುಗುಡಗೊಂಡಿದ್ದ ನಾನು ಸಂಸ್ಥೆಯ ಮ್ಯಾನೇಜರ್‌ ಜತೆ ನನ್ನ ಆತಂಕ ಹಂಚಿಕೊಂಡಿದ್ದೆ. ‘ಸರ್‌, ಚಿಂತಿತರಾಗಬೇಡಿ. ಕಾರ್ಮಿಕರು ಪ್ರತಿಬಾರಿ ನಿಮ್ಮ ವಿರುದ್ಧ ಮುರ್ದಾಬಾದ್‌ ಘೋಷಣೆ ಕೂಗಿದಾಗೊಮ್ಮೆ ನಿಮ್ಮ ಬದುಕಿನಲ್ಲಿ ಹೊಸ ದಿನ ಸೇರ್ಪಡೆಯಾಗಿದೆಯೆಂದು ಭಾವಿಸಿ’ ಎಂದು ಆತ ಸಲಹೆ ನೀಡಿದ್ದ. ಅದೊಂದು ಕಠಿಣ ಸಲಹೆಯಾಗಿತ್ತು. ಆದರೂ, ಸಾಕಷ್ಟು ಉಪಯುಕ್ತವೂ ಆಗಿತ್ತು. ಮ್ಯಾನೇಜರ್‌ನ ತರ್ಕ ಸರಿಯಾಗಿದ್ದರೆ ನನ್ನ ಬದುಕಿಗೆ ಈಗಾಗಲೇ ಹೊಸದಾಗಿ ಹಲವು ದಿನಗಳು ಸೇರ್ಪಡೆಯಾಗಿವೆ. ಅವು ನನ್ನ ಜೀವಿತಾವಧಿಗೆ ಬೋನಸ್‌ ರೂಪದಲ್ಲಿ ಸೇರಿಕೊಂಡಿವೆ ಎಂದೂ ನಾನು ನಂಬಿರುವೆ.ಸಾಮಾಜಿಕ ಜಾಲತಾಣಗಳು ಮತ್ತು ಇಂಟರ್‌ನೆಟ್‌ನಲ್ಲಿ ಪ್ರಕಟವಾಗುವ ನಿಂದನೆ, ಬೈಗುಳಗಳು ಈಗ ಸ್ವೀಕಾರಾರ್ಹವಾಗಿರುವುದರ ಜತೆಗೆ ಅವು ಸಾರ್ವಜನಿಕವೂ ಆಗುತ್ತಿವೆ. ಸಾರ್ವಜನಿಕ ರಂಗದಲ್ಲಿ ಇರುವ ಯಾರೇ ಆಗಲಿ, ಅದರಲ್ಲೂ ನಿರ್ದಿಷ್ಟವಾಗಿ ಹೇಳುವುದಾದರೆ ದಿನಪತ್ರಿಕೆ ನಡೆಸುವವರಿಗೆ ಬೈಗುಳ ಎದುರಿಸುವುದು ಸಾಮಾನ್ಯ ಪರಿಪಾಠವಾಗಿರುತ್ತದೆ. ಇಂತಹ ನಿಂದನೆಗಳು ವ್ಯಕ್ತಿಗತವಾಗಿರುತ್ತವೆ. ಸಾಮಾನ್ಯವಾಗಿ ದೂರವಾಣಿಗಳ ಮೂಲಕವೇ ವ್ಯಕ್ತವಾಗುತ್ತವೆ. ಇಂತಹ ಘಟನೆಗಳು  ಇಬ್ಬರು ವ್ಯಕ್ತಿಗಳ ಮಧ್ಯೆ ಮಾತ್ರ ನಡೆಯುತ್ತವೆ.ನನಗೂ ಇಂತಹ ಅಸಂಖ್ಯ ಅನುಭವಗಳಾಗಿವೆ. ನನ್ನ ಪತ್ರಿಕೆಯಿಂದ ಕಟು ಟೀಕೆಗೆ ಗುರಿಯಾಗಿದ್ದ ಅರ್ಜುನ್‌ ಸಿಂಗ್ ಅವರು ಒಂದು ದಿನ ಬೆಳಿಗ್ಗೆಯೇ ಫೋನ್‌ ಮಾಡಿದ್ದರು. ‘ಈ ಹೊತ್ತಿಗೆ ರಾಮನಾಥ್‌ ಗೋಯಂಕಾ ಅವರು ಬದುಕಿದ್ದರೆ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆಯಿಂದ ಒಂದು ವಾರದಲ್ಲಿಯೇ ನಿನ್ನನ್ನು ಎತ್ತಂಗಡಿ ಮಾಡಿಸುತ್ತಿದ್ದೆ’ ಎಂದು ಧಮಕಿ ಹಾಕಿದ್ದರು. ಅದಕ್ಕೆ ನಾನು, ‘ಸರ್‌, ಗೋಯೆಂಕಾ ಅವರ ಅಗಲಿಕೆಯಿಂದ ನಿಮಗಾದಷ್ಟೇ ನೋವು ನನಗೂ ಆಗಿದೆ. ಆದರೆ, ಅವರು ಇನ್ನೆಂದೂ ಮರಳಿ ಬರಲಾರರು. ಹೀಗಾಗಿ ನಿಮ್ಮ ಉದ್ದೇಶ ಈಡೇರುವ ಸಾಧ್ಯತೆ ತುಂಬ ಕಡಿಮೆ’ ಎಂದು ತಣ್ಣಗೆ ಉತ್ತರಿಸಿದ್ದೆ. ಈ ಸಂಭಾಷಣೆ ಅಪ್ರಿಯವಾಗಿದ್ದರೂ, ಇಬ್ಬರ ನಡುವಣ ಸಂಭಾವಿತ ಮತ್ತು ಖಾಸಗಿ ಮಾತುಕತೆ ಅದಾಗಿತ್ತು.ಒಂದು ಬಾರಿ ಮುಲಾಯಂ ಸಿಂಗ್‌ ಯಾದವ್‌ ಅವರೂ ನನಗೆ ಕರೆ ಮಾಡಿ, ‘ನಿಮ್ಮ ಅಂಕಣಗಾರ್ತಿ ತವ್ಲೀನ್‌ ಸಿಂಗ್‌ ಅವರ ಕಾಲುಗಳು ಮುರಿದು ಹೋದರೆ ಅದಕ್ಕೆ ನಾನು ಹೊಣೆಯಲ್ಲ’ ಎಂದು ಬೆದರಿಕೆ ಒಡ್ಡಿದ್ದರು. ಈ ಸಂದರ್ಭದಲ್ಲಿ ನಡೆದ ತೀಕ್ಷ್ಣ ಸ್ವರೂಪದ ಮಾತಿನ ಚಕಮಕಿ ನಂತರ ತಾವು ಆಡಿದ ಮಾತುಗಳಿಗೆ ನನ್ನಲ್ಲಿ ಕ್ಷಮೆ ಕೋರಿದ್ದರು. ಬಾಳಾಸಾಹೇಬ್‌ ಠಾಕ್ರೆ ಅವರನ್ನು ಮಾಫಿಯಾ ಗುಂಪಿನ ಸದಸ್ಯ ಎಂದು ನಾನು ಬಣ್ಣಿಸಿದ ದಿನವೇ ಅವರು ನನಗೆ ಕರೆ ಮಾಡಿದ್ದರು. ‘ನನ್ನನ್ನು ನಿಂದಿಸುವವರ ಪೈಕಿ ನಿಮ್ಮ ಬರವಣಿಗೆ ನನಗೆ ಹೆಚ್ಚು ಖುಷಿ ಕೊಡುತ್ತದೆ. ನನ್ನ ಮನೆಗೆ ಬಂದು ಆತಿಥ್ಯ ಸ್ವೀಕರಿಸುವಿರಾ?’ ಎಂದು ಪ್ರಶ್ನಿಸಿದ್ದರು.ಅವರ 80ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನನಗೆ ನೀಡಿದ ಟಿ.ವಿ. ಸಂದರ್ಶನದಲ್ಲಿ ನನ್ನೊಂದಿಗೆ ವಿವರವಾಗಿ ಮಾತನಾಡಿದ್ದರು.

ಬೈಗುಳ ಮತ್ತು ವೃತ್ತಿ ಸಂಬಂಧಗಳು ಸಾರ್ವಜನಿಕಗೊಳ್ಳಬಾರದು. ವಿವಾದ ಬಿಸಿ ಏರಿದ ಸಂದರ್ಭದಲ್ಲಿ ಆಡಿದ ಮಾತುಗಳಿಗೆ ಕ್ಷಮೆ ಕೇಳಿದ್ದರೆ ಅದನ್ನು ಮನ್ನಿಸಬಹುದು. ನಿಂದನೆಗೆ ಗುರಿಯಾದ ವ್ಯಕ್ತಿ ನಿಜವಾಗಿಯೂ ತಪ್ಪು ಎಸಗಿ ಅದನ್ನು ಸರಿಪಡಿಸಲು ಮುಂದಾಗಿದ್ದರೆ ಅದರಿಂದಲೂ ಸಾರ್ವಜನಿಕ ಬದುಕಿಗೆ ಒಳ್ಳೆಯದೇ ಆಗುತ್ತದೆ.ಹಿಂದೆ ಬಹಿರಂಗವಾಗಿ, ಸಾರ್ವಜನಿಕವಾಗಿ ನಡೆಯುತ್ತಿದ್ದ ಕೆಲ ಟೀಕಾಪ್ರಹಾರ, ನಿಂದನೆಯು ಈಗ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಒಂದು ಬಾರಿ ಅಂತರ್ಜಾಲ ತಾಣಗಳಲ್ಲಿ ನಿಂದನೆ, ಬೈಗುಳ ಹರಿಯಬಿಟ್ಟ ನಂತರ ಅದನ್ನು ಅರಗಿಸಿಕೊಳ್ಳುವುದು ಅಥವಾ ನಿರ್ವಹಿಸುವುದು ಯಾರಿಗೇ ಆಗಲಿ ತುಂಬ ಕಷ್ಟವಾಗುತ್ತದೆ.ಕಾರ್ಮಿಕ ಸಂಘಟನೆಯ ಗುಂಪಿನಲ್ಲಿ ಇರುವ ಅನಾಮಧೇಯರು ನಿಂದಿಸುವುದಕ್ಕಿಂತ, ಸಾರ್ವಜನಿಕ ಬದುಕಿನಲ್ಲಿ ಇರುವ, ಸಾಕಷ್ಟು ಜನಬೆಂಬಲವನ್ನೂ ಹೊಂದಿರುವ ಜನಪ್ರಿಯ ವ್ಯಕ್ತಿಯ ವಿರುದ್ಧದ ನಿಂದನೆ ಹೆಚ್ಚು ವೈಯಕ್ತಿಕವಾಗಿದ್ದು ತೀರ ಕೆಳಮಟ್ಟದ್ದೂ ಆಗಿರುತ್ತದೆ. ಹೀಗೆ ಆದಾಗ, ನಿಂದನೆಗೆ ಗುರಿಯಾದವರು ತಮ್ಮನ್ನು ನಿಂದಿಸುವವರ ಜತೆ ಮಾತನಾಡುವುದನ್ನೇ ನಿಲ್ಲಿಸುತ್ತಾರೆ. ಇಲ್ಲವೇ ತಮ್ಮನ್ನು ನಿಂದಿಸಿದವರ ವಿರುದ್ಧ  ಪ್ರತೀಕಾರಕ್ಕೆ ಮುಂದಾಗುತ್ತಾರೆ. ತಾವು ಸಾರ್ವಜನಿಕ ಬದುಕಿನಲ್ಲಿ ಇರುವುದನ್ನೂ ಮರೆತು ಎದುರಾಳಿಗಳನ್ನು ಸದೆಬಡಿಯಲು ಮುಂದಾಗುತ್ತಾರೆ. ಈ ವಿಷಯದಲ್ಲಿ ಪತ್ರಕರ್ತರು ತಮ್ಮ ವೃತ್ತಿ ಬದುಕಿನಲ್ಲಿ ಬೆಚ್ಚಿಬೀಳುವಂತಹ ಸವಾಲುಗಳನ್ನೇ ಎದುರಿಸಬೇಕಾಗುತ್ತದೆ. ಪತ್ರಕರ್ತರು ಕೂಡ ದಪ್ಪ ಚರ್ಮದವರಾಗಿದ್ದರೂ ಅವರೂ ಮನುಷ್ಯರೇ ಹೊರತು ಘೇಂಡಾಮೃಗಗಳಲ್ಲ. ಬೈಗುಳಗಳನ್ನು ಯಾರೊಬ್ಬರೂ ಹಗುರವಾಗಿ ಪರಿಗಣಿಸುವುದೂ ಇಲ್ಲ.ವೃತ್ತಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಪತ್ರಕರ್ತರು ತಮ್ಮ ದಿನನಿತ್ಯದ ಕೆಲಸಗಳಲ್ಲಿ ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ತೇಲಿಬಿಟ್ಟ ಅವಮಾನಕರವಾದ ಹೇಳಿಕೆಯ ತೀಕ್ಷ್ಣತೆ ಆಧರಿಸಿ ಆತನ ಬಗ್ಗೆ ಸಂಪಾದಕೀಯ ನಿಲುವು ನಿರ್ಧಾರವಾಗಬೇಕೇ ಅಥವಾ ಆತ ಪ್ರತಿನಿಧಿಸುವ ರಾಜಕೀಯ ಸಿದ್ಧಾಂತ ಆಧರಿಸಿಯೇ ಎನ್ನುವ ಸಂದಿಗ್ಧಕ್ಕೆ ಪತ್ರಕರ್ತರು ಒಳಗಾಗುತ್ತಾರೆ. ಇದಕ್ಕೆ ಆಕರ್ಷಕ ಉತ್ತರ ‘ಇಲ್ಲ’ ಎಂದಾಗಿರುತ್ತದೆ. ಆದರೆ, ಸರಿಯಾದ ಉತ್ತರ ‘ಹೌದು’ ಎಂದೇ ಹೇಳಬೇಕಾಗುತ್ತದೆ. ಹೋರಾಟದಲ್ಲಿ ನೇರವಾಗಿ ಭಾಗಿಯಾಗುವವರೆಗೆ ಯಾರೊಬ್ಬರೂ ಹೋರಾಟಗಾರನಾಗಿರುವುದಿಲ್ಲ. ಕಾರ್ಮಿಕ ಸಂಘಟನೆಯ ಕೋಪೋದ್ರಿಕ್ತ ಸದಸ್ಯರು ನಿಮ್ಮ ಬೆನ್ನ ಹಿಂದೆ ಮುರ್ದಾಬಾದ್‌ ಘೋಷಣೆ ಕೂಗುವವರಂತೆ, ನಿಂದಕರೂ ವರ್ತಿಸುತ್ತಾರೆ. ಕಾರ್ಮಿಕರ ಪರವಾಗಿ ನಿಮ್ಮ ಧೋರಣೆ ಬದಲಾದರೆ ಅಥವಾ ಅವರ ಜತೆ ಸೌಹಾರ್ದ ಸಂಬಂಧ ಹೊಂದಲು ಮುಂದಾದರೆ ಅವರು ಹೆಚ್ಚು ಖುಷಿಪಡುತ್ತಾರೆ. ತಾವು ವಿರೋಧಿಸುವ ವ್ಯಕ್ತಿ ಸಾಯಬೇಕು, ಆತನಿಗೆ ಹಾನಿಯಾಗಬೇಕು ಎಂದೇನೂ ಅವರು ಬಯಸುವುದಿಲ್ಲ. ಚಳವಳಿ, ಘೋಷಣೆಗಳ ಮೂಲಕ ತಮ್ಮ ಎದುರಾಳಿಗಳನ್ನು ಕನಿಷ್ಠ ತಬ್ಬಿಬ್ಬುಗೊಳಿಸುವುದು, ಅವರ ವಿಚಾರ ಲಹರಿಯನ್ನು ಹಾದಿ ತಪ್ಪಿಸುವುದು ಅವರ ಇರಾದೆಯಾಗಿರುತ್ತದೆಯಷ್ಟೆ.

ಗದ್ದಲ ಮಾಡಲು ಅವಕಾಶ ಮಾಡಿಕೊಡುವುದರ ಮೂಲಕ ಕಾರ್ಮಿಕರ ಜತೆ ಸಂಘರ್ಷಕ್ಕೆ ಇಳಿಯದೇ ಯುದ್ಧ ಗೆಲ್ಲಲು (ಅವರ ಮನಸ್ಸು ಗೆಲ್ಲಲು) ಸಾಧ್ಯವಿದೆ.  ಅದೊಂದು ಉದ್ಧಟತನದ ಧೋರಣೆಯಾಗಿರದೆ, ಜಾಣ ಪ್ರತಿಕ್ರಿಯೆಯಾಗಿರುತ್ತದೆ.ಬನ್ಸಿಲಾಲ್‌ ಅವರು ನಮ್ಮ ಒರಟು ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ಇಂತಹ ಸ್ವಭಾವದ ರಾಜಕಾರಣಿಗಳು ಸದ್ಯದ ಸಾಮಾಜಿಕ ಮಾಧ್ಯಮ ಮತ್ತು ಇಂಟರ್‌ನೆಟ್‌ ಯುಗದಲ್ಲಿ ಹೇಗೆ ವರ್ತಿಸುತ್ತಿದ್ದರು ಎಂದು ನಾನು ಕೆಲವೊಮ್ಮೆ ಆಲೋಚಿಸುವೆ. ಅವರು ರೊಚ್ಚಿಗೆದ್ದು ಪ್ರತಿಕ್ರಿಯಿಸುತ್ತಿದ್ದರೇ ಎನ್ನುವ ಪ್ರಶ್ನೆಗೆ ಬಹುಶಃ ಇರಲಿಕ್ಕಿಲ್ಲ ಎಂದೂ ಭಾಸವಾಗುತ್ತದೆ. ಇಂತಹ ಸ್ವಭಾವದ ಅನೇಕರು ನಿಜವಾಗಿಯೂ ಕೊಳಕು ವ್ಯಕ್ತಿತ್ವದವರಾಗಿರುತ್ತಾರೆ. ಒಂದು ವೇಳೆ ಅವರು ಯಾರಿಗಾದರೂ  ಹಾನಿ ಉಂಟು ಮಾಡಲು ಮನಸ್ಸು ಮಾಡಿದ್ದರೆ, ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುವ ಮೂರ್ಖತನ ಮಾಡುವುದಿಲ್ಲ. ನಿಮ್ಮೆದುರು ನಗು ನಗುತ್ತ ಇರುವಂತೆಯೇ  ಯಾವುದೇ ಸಾಕ್ಷ್ಯ ಸಿಗದಂತೆ ತಮಗಿಷ್ಟ ಬಂದದ್ದನ್ನು ಮಾಡಿ ಮುಗಿಸುತ್ತಿದ್ದರು.ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಿದ್ಯಾರ್ಥಿಯಾಗಿದ್ದ ನನಗೆ ಆದ ಅನುಭವವೊಂದು ಹೀಗಿದೆ. ವಿದ್ಯುತ್‌ ಮಂಡಳಿಯ ಕಾರ್ಮಿಕರ ತಂಡವೊಂದು ಬನ್ಸಿಲಾಲ್‌ ಅವರಿಗೆ ಕಪ್ಪು ಬಾವುಟದ ಸ್ವಾಗತ ಕೋರಿ ತನ್ನ ಪ್ರತಿಭಟನೆ ದಾಖಲಿಸುತ್ತಿತ್ತು. ಅದಕ್ಕೆ ಬನ್ಸಿಲಾಲ್‌ ಅವರ ಪ್ರತಿಕ್ರಿಯೆ ಹೀಗಿತ್ತು. ‘ಸೋದರರೆ, ನಾನು ಹುಟ್ಟಿದಾಗ ನನ್ನ ಅವ್ವ ನನ್ನನ್ನು ಉದ್ದನೆಯ ಕಪ್ಪು ಬಟ್ಟೆಯಲ್ಲಿ ಸುತ್ತಿದ್ದಳು. ಆಗಲೂ ನಾನು ಹೆದರಿರಲಿಲ್ಲ. ಈಗ ಈ ಕಪ್ಪು ಬಟ್ಟೆಯ ಝಂಡಾಗಳಿಗೆ (ಧ್ವಜ) ನಾನು ಹೆದರುವೆ ಎಂದು ನೀವು ಭಾವಿಸಿದ್ದರೆ ಅದು ನಿಮ್ಮ  ಮೂರ್ಖತನ’ ಎಂದು ಹೇಳಿ ಕಾರ್ಮಿಕರನ್ನು ಹೀಯಾಳಿಸಿದ್ದರು.ಮೂಲತಃ ಯಾರ ವಿರುದ್ಧವಾದರೂ ಬೈಗುಳಗಳ ಮಳೆ ಸುರಿಸುವುದು ಮತ್ತು ಕಿರುಕುಳ ಕೊಡುವುದು ಹೆಚ್ಚು ಮಹತ್ವದ ಸಂಗತಿ ಏನಲ್ಲ. ಟೀಕೆಗಳ ವಿರುದ್ಧದ ಅಭಿವ್ಯಕ್ತಿ ವಿಷಯದಲ್ಲಿ ಸೂಕ್ಷ್ಮತೆಯೂ ಇರಬೇಕಾಗುತ್ತದೆ. ತಿಗಣೆಗಳ ಕಡಿತ ಹಿತಕಾರಿಯಾಗಿರಲಾರದು. ತುರಿಕೆ  ಮಾತ್ರ ಅಸಹನೀಯವಾಗಿರುತ್ತದೆ. ದೇಶದ ರಾಜಧಾನಿ ದೆಹಲಿಯಲ್ಲಿ ಚಿಕೂನ್‌ಗುನ್ಯ ಮತ್ತು ಡೆಂಗಿ ಸಾಂಕ್ರಾಮಿಕ ಪಿಡುಗಿನಂತೆ ಹರಡುತ್ತಿರುವಾಗ ಸರ್ಕಾರದ ನಿರ್ಲಕ್ಷ್ಯದ ಧೋರಣೆ ಖಂಡಿಸಿ ನಿಂದಿಸಿದಾಗ,  ಸರ್ಕಾರಿ ಸಂಸ್ಥೆಗಳೆಲ್ಲ ಎಚ್ಚೆತ್ತುಕೊಂಡು ಕ್ರಿಯಾಶೀಲಗೊಂಡಿವೆ. ಇದರಿಂದ ಅನೇಕರ ಜೀವ ಉಳಿದಿದೆ. ಸಾವಿರಾರು ಜನರು ಸೊಳ್ಳೆ ಕಡಿತದಿಂದ ವಾರಗಟ್ಟಲೆ ಕೆಲಸಕ್ಕೆ ಹೋಗದೆ ಯಾತನೆಪಡುತ್ತಿದ್ದಾರೆ. ತಿಗಣೆ ಕಡಿದರೂ ಯಾರೊಬ್ಬರೂ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ತಿಗಣೆಗೆ ಹಿಡಿಶಾಪ ಹಾಕುತ್ತಲೇ ಖಾಸಗಿಯಾಗಿ ತುರಿಸಿಕೊಂಡು ಗೀರು ಗಾಯ ಮಾಡಿಕೊಂಡು, ಮೇಲ್ನೋಟಕ್ಕೆ ಏನೂ ಆಗಿಯೇ ಇಲ್ಲ ಎಂಬಂತೆ ವರ್ತಿಸಿದರೆ ಅಂತಿಮವಾಗಿ ನೀವೇ ಗೆಲ್ಲಬಹುದು.(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)