ಗುರುವಾರ , ಮಾರ್ಚ್ 4, 2021
29 °C

ಪೋಲರೋಯಿಡ್ ಝಿಪ್ ಪುಟಾಣಿ ಪ್ರಿಂಟರ್

ಯು.ಬಿ. ಪವನಜ Updated:

ಅಕ್ಷರ ಗಾತ್ರ : | |

ಪೋಲರೋಯಿಡ್ ಝಿಪ್ ಪುಟಾಣಿ ಪ್ರಿಂಟರ್

ಒಂದಾನೊಂದು ಕಾಲದಲ್ಲಿ ಫೋಟೊಗ್ರಫಿ ಎಂದರೆ ಫಿಲ್ಮಿನಲ್ಲಿ ಚಿತ್ರೀಕರಿಸಿ, ಲ್ಯಾಬಿಗೆ ಕಳುಹಿಸಿ ಫೋಟೊಗ್ರಾಫಿಕ್ ಕಾಗದದಲ್ಲಿ ಮುದ್ರಿಸುವುದಾಗಿತ್ತು. ನೀವು ತೆಗೆದ ಫೋಟೊ ಹೇಗೆ ಬಂದಿದೆ ಎಂಬುದು ಇಡೀ ಫಿಲ್ಮನ್ನು ಸಂಸ್ಕರಿಸಿದ ನಂತರವೇ ಗೊತ್ತಾಗುತ್ತಿತ್ತು. ಅದೇ ಸಮಯದಲ್ಲಿ ಪೋಲರೋಯಿಡ್ ಎಂಬ ಕಂಪೆನಿಯ ಅದೇ ಹೆಸರಿನ ಕ್ಯಾಮೆರಾ ತುಂಬ ಜನಪ್ರಿಯವಾಗಿತ್ತು. ಅದರ ವೈಶಿಷ್ಟ್ಯವೆಂದರೆ ಫೋಟೊ ತೆಗೆದ ತಕ್ಷಣವೇ ಫೋಟೊ ಅದರಿಂದಲೇ ಮುದ್ರಿತವಾಗಿ ಹೊರಬರುತ್ತಿತ್ತು.ಈ ಫೋಟೊ ಕೆಲವು ವರ್ಷಗಳಲ್ಲಿ ಮಸುಕಾಗುತ್ತಿತ್ತು, ಅದು ಬೇರೆ ವಿಷಯ. ಈಗ ಡಿಜಿಟಲ್ ಯುಗ. ಫೋಟೊ ಮುದ್ರಿಸುವವರು ಕಡಿಮೆ. ಅವರೂ ಡಿಜಿಟಲ್ ವಿಧಾನದಲ್ಲೇ ಮುದ್ರಿಸುತ್ತಾರೆ. ನಿಮ್ಮ ಸ್ಮಾರ್ಟ್‌ಫೋನಿನ ಕ್ಯಾಮೆರಾದಲ್ಲಿ ತೆಗೆದ ಫೋಟೊವನ್ನು ತಕ್ಷಣ ನೀವೇ ಮುದ್ರಿಸುವಂತಿದ್ದರೆ? ಹೌದು. ಅಂತಹ ಪುಟಾಣಿ ಫೋಟೊ ಪ್ರಿಂಟರ್‌ಗಳೂ ಬಂದಿವೆ. ಅಂತಹ ಒಂದು ಗ್ಯಾಜೆಟ್ ನಮ್ಮ ಈ ವಾರದ ಗ್ಯಾಜೆಟ್‌ಲೋಕ ಅಂಕಣದಲ್ಲಿ. ಅದುವೇ ಪೋಲರೋಯಿಡ್ ಝಿಪ್ (Polaroid ZIP Instant Photoprinter).ಗುಣವೈಶಿಷ್ಟ್ಯಗಳು

ಪುಟಾಣಿ ಫೋಟೊ ಪ್ರಿಂಟರ್, 7.4 x 2.3 x 12 ಸೆ.ಮೀ. ಗಾತ್ರ, 186 ಗ್ರಾಂ ತೂಕ, 2 x 3 ಇಂಚು ಗಾತ್ರದ ಫೋಟೊ ಮುದ್ರಿಸುತ್ತದೆ, ಒಂದು ಸಲಕ್ಕೆ 10 ಫೋಟೊ ಕಾಗದಗಳನ್ನು ಇಡಬಹುದು, ಬ್ಲೂಟೂತ್ ಮತ್ತು ಎನ್‌ಎಫ್‌ಸಿ ಸಂಪರ್ಕ, ತೆಗೆಯಲಸಾಧ್ಯವಾದ 500 mAh ಶಕ್ತಿಯ ರಿಚಾರ್ಜೆಬಲ್ ಬ್ಯಾಟರಿ, ಮೈಕ್ರೊಯುಎಸ್‌ಬಿ ಕಿಂಡಿ, ಇತ್ಯಾದಿ. ನಾಲ್ಕು ಬಣ್ಣಗಳಲ್ಲಿ ಲಭ್ಯ. ಮಾರುಕಟ್ಟೆ ಬೆಲೆ ಸುಮಾರು ₹12 ರಿಂದ ₹13 ಸಾವಿರ.ರಚನೆ ಮತ್ತು ವಿನ್ಯಾಸ ತುಂಬಾ ಚೆನ್ನಾಗಿದೆ. ಮುಂಭಾಗದಲ್ಲಿ ಮೂರು ಎಲ್‌ಇಡಿಗಳು ಮತ್ತು ಒಂದು ಮೈಕ್ರೊಯುಎಸ್‌ಬಿ ಕಿಂಡಿ ಇದೆ. ಚಾರ್ಜ್ ಆಗುತ್ತಿರುವುದು, ಚಾರ್ಜ್ ಆಗಿರುವುದು, ಮಾಹಿತಿ ವರ್ಗಾವಣೆ ಆಗುತ್ತಿರುವುದು, ಮುದ್ರಿಸುತ್ತಿರುವುದು, ಇತ್ಯಾದಿಗಳನ್ನು ಸೂಚಿಸಲು ಈ ಎಲ್‌ಇಡಿಗಳ ಬಳಕೆ ಆಗುತ್ತದೆ. ಮೈಕ್ರೊಯುಎಸ್‌ಬಿ ಕಿಂಡಿ ಮೂಲಕ ಈ ಮುದ್ರಕವನ್ನು ಚಾರ್ಜ್ ಮಾಡಬಹುದು. ಒಂದು ಸಲ ಚಾರ್ಜ್‌ ಮಾಡಲು ಸುಮಾರು ಒಂದೂವರೆ ಗಂಟೆ ಬೇಕು. ಒಮ್ಮೆ ಪೂರ್ತಿ ಚಾರ್ಜ್‌ ಆದರೆ ಸುಮಾರು 30 ಫೋಟೊಗಳನ್ನು ಮುದ್ರಿಸಬಹುದು ಎಂದು ಅವರ ಕೈಪಿಡಿಯಲ್ಲಿದೆ. ಆದರೆ ನಾನು ಬಳಸಿದಾಗ ಅದಕ್ಕಿಂತ ತುಂಬ ಮೊದಲೇ ಬ್ಯಾಟರಿ ಮುಗಿದಿತ್ತು.ಚಾರ್ಜ್‌ ಮಾಡಲು ಯುಎಸ್‌ಬಿ ಕೇಬಲ್ ನೀಡಿದ್ದಾರೆ, ಆದರೆ ಚಾರ್ಜರ್ ನೀಡಿಲ್ಲ. ನಿಮ್ಮಲ್ಲಿರುವ ಯುಎಸ್‌ಬಿ ಚಾರ್ಜರ್ ಬಳಸಬೇಕು. ಮೇಲ್ಭಾಗದ ಮುಚ್ಚಳಸರಿಸಿ ತೆಗೆಯಬಹುದು. ಹಾಗೆ ತೆಗೆದಾಗ ಫೋಟೊವನ್ನು ಮುದ್ರಿಸಲು ಬೇಕಾದ ಕಾಗದವನ್ನು ಇಡುವ ಸ್ಥಳ ಕಂಡುಬರುತ್ತದೆ. ಒಂದು ಸಲಕ್ಕೆ ಹತ್ತು ಕಾಗದಗಳನ್ನು ಇಡಬಹುದು. ಹಿಂಭಾಗದಲ್ಲಿ ಮುದ್ರಿತವಾದ ಫೋಟೊ ಹೊರಬರುತ್ತದೆ.ಈ ಮುದ್ರಕ ಸ್ಮಾರ್ಟ್‌ಫೋನ್ ಜೊತೆ ಮಾತ್ರ ಕೆಲಸ ಮಾಡುತ್ತದೆ. ಆಂಡ್ರಾಯ್ಡ್‌, ಐಫೋನ್ ಮತ್ತು ಐಪ್ಯಾಡ್‌ಗಳಿಗೆ ಕಿರುತಂತ್ರಾಂಶ (ಆ್ಯಪ್) ಅವರ ಜಾಲತಾಣದಲ್ಲಿ ದೊರೆಯುತ್ತದೆ. ಅದನ್ನು ಸ್ಮಾರ್ಟ್‌ಫೋನಿನಲ್ಲಿ ಹಾಕಿಕೊಳ್ಳಬೇಕು. ಈ ಮುದ್ರಕ ಸ್ಮಾರ್ಟ್‌ಫೋನಿನ ಜೊತೆ ಬ್ಲೂಟೂತ್ ವಿಧಾನದಲ್ಲಿ ಸಂಪರ್ಕಗೊಳ್ಳುತ್ತದೆ. ಸಂಪರ್ಕವನ್ನು ಪ್ರಾರಂಭಿಸಲು ಎನ್‌ಎಫ್‌ಸಿಯನ್ನೂ ಬಳಸಬಹುದು.ಮೈಕ್ರೊಯುಎಸ್‌ಬಿ ಕಿಂಡಿ ಇದ್ದರೂ ಅದು ಚಾರ್ಜ್ ಮಾಡಲು ಮಾತ್ರ ಬಳಕೆಯಾಗುತ್ತದೆ. ಗಣಕಕ್ಕೆ ಸಂಪರ್ಕಿಸಿ ಅದರಿಂದ ಮುದ್ರಿಸಲು ಆಗುವುದಿಲ್ಲ. ನಿಮ್ಮ ಗಣಕದಲ್ಲಿ ಇರುವ ಫೋಟೊವನ್ನು ಮುದ್ರಿಸಬೇಕಿದ್ದರೆ ಮೊದಲು ಅದನ್ನು ನಿಮ್ಮ ಸ್ಮಾರ್ಟ್‌ಫೋನಿಗೆ ಪ್ರತಿಮಾಡಿಕೊಳ್ಳಬೇಕು.ಇದಕ್ಕಾಗಿ ಇರುವ ಕಿರುತಂತ್ರಾಂಶದಲ್ಲಿ ಹಲವು ಆಯ್ಕೆಗಳಿವೆ. ಕ್ಯಾಮೆರಾದಿಂದ ಫೋಟೊ ತೆಗೆದು ಮುದ್ರಿಸುವುದು, ಗ್ಯಾಲರಿಯಲ್ಲಿ ಈಗಾಗಲೇ ಇರುವ ಫೋಟೊವನ್ನು ಮುದ್ರಿಸುವುದು, ನಿಮ್ಮ ವಿಸಿಟಿಂಗ್ ಕಾರ್ಡ್ ಅನ್ನು ಫೋಟೊ ಸಹಿತ ತಯಾರಿಸಿ ಮುದ್ರಿಸುವುದು, ಹಲವು ಫೋಟೊಗಳನ್ನು ಕೊಲ್ಯಾಜ್ ಮಾಡಿ ಮುದ್ರಿಸುವುದು, ಇತ್ಯಾದಿ ಆಯ್ಕೆಗಳಿವೆ.ಸುಮಾರು 45 ಸೆಕೆಂಡುಗಳಲ್ಲಿ ಒಂದು ಫೋಟೊ ಮುದ್ರಣ ಆಗುತ್ತದೆ. ಫೋಟೊ ಮುದ್ರಣಕ್ಕಾಗಿ ಇದು ಬಳಸುವುದು ಶಾಯಿ (ಇಂಕ್) ರಹಿತ ತಂತ್ರಜ್ಞಾನ. ಆದುದರಿಂದ ಇದರಲ್ಲಿ ಹಾಕುವ ಕಾಗದಕ್ಕೆ ಅವರು ZINK Paper ಎಂದು ಹೆಸರಿಟ್ಟಿದ್ದಾರೆ. ಇದು ಮುದ್ರಿಸುವ ಫೋಟೊದ ಗಾತ್ರ ಕೇವಲ 2 x 3 ಇಂಚು. ಅಂದರೆ ತುಂಬ ಚಿಕ್ಕದು. ಯಾವುದಾದರೂ ಪ್ರವಾಸಿ ತಾಣಕ್ಕೆ ಹೋಗಿದ್ದಾಗ ಅಲ್ಲಿಯ ಫೋಟೊವನ್ನು ಅಥವಾ ಅಲ್ಲಿ ನಿಮ್ಮ ಸ್ನೇಹಿತರ ಜೊತೆ ತೆಗೆದ ಸ್ವಂತೀಯನ್ನು ಅಲ್ಲಿಯೇ ಮುದ್ರಿಸಲು ಇದು ಉಪಯೋಗಿ.ಮುದ್ರಿತ ಫೋಟೊ ಕೆಲವು ಬಣ್ಣಗಳಲ್ಲಿ ತುಂಬ ಚೆನ್ನಾಗಿ ಬರುತ್ತದೆ. ಕೆಲವು ಬಣ್ಣಗಳ ಪುನರುತ್ಪತ್ತಿಯಲ್ಲಿ ಅಷ್ಟು ಪ್ರಾಮಾಣಿಕವಾಗಿಲ್ಲ. ಈ ಮುದ್ರಕ ಮಾರುಕಟ್ಟೆಗೆ ಬಂದು 3 ತಿಂಗಳು ಆಗಿದೆಯಷ್ಟೆ. ಆದ್ದರಿಂದ ಇದು ಮುದ್ರಿಸಿದ ಫೋಟೊ ಎಷ್ಟು ಕಾಲ ಬಣ್ಣ ಕಳೆದುಕೊಳ್ಳದೆ ಇರುತ್ತದೆ ಎಂಬ ವಿಷಯ ಗೊತ್ತಿಲ್ಲ. ನಾನು ಗಮನಿಸಿದ ಒಂದು ಸಣ್ಣ ಕಿರಿಕಿರಿಯೆಂದರೆ ಸ್ಮಾರ್ಟ್‌ಫೋನಿನ ಜೊತೆ ಇದು ಸಂಪರ್ಕವನ್ನು ಬೇಗನೆ ಕಡಿದುಕೊಳ್ಳುವುದು. ಉದಾಹರಣೆಗೆ ಇದರ ಕಿರುತಂತ್ರಾಂಶದಲ್ಲಿ ಬೇಕಾದ ರೀತಿ ಫೋಟೊ ಸರಿಹೊಂದಿಸಿಕೊಳ್ಳುವ ಆಯ್ಕೆಗಳಿವೆ.

ಈ ಎಲ್ಲ ಆಯ್ಕೆಗಳನ್ನು ಬಳಸಿ ಫೋಟೊವನ್ನು ನಮಗೆ ಬೇಕಾದಂತೆ ವಿನ್ಯಾಸ ಮಾಡುತ್ತಿರುವಾಗ ಬ್ಲೂಟೂತ್ ಸಂಪರ್ಕ ಕಡಿದುಹೋಗಿರುತ್ತದೆ. ಪುನಃ ಸಂಪರ್ಕ ಮಾಡಿ ಮುದ್ರಿಸಬೇಕು. ಇದಕ್ಕೆ ಹಾಕುವ ಕಾಗದ ಭಾರತದಲ್ಲಿ ಎಲ್ಲಿ ದೊರೆಯುತ್ತಿವೆ ಎಂಬ ಬಗ್ಗೆ ಅವರ ಜಾಲತಾಣದಲ್ಲಾಗಲೀ ಯಾವುದೇ ಭಾರತೀಯ ಜಾಲಮಳಿಗೆಗಳಲ್ಲಾಗಲೀ ಮಾಹಿತಿಯಿಲ್ಲ. ಅಮೆರಿಕದ ಡಾಲರ್ ಬೆಲೆಯನ್ನು ಭಾರತೀಯ ರೂಪಾಯಿಗೆ ಬದಲಿಸಿದಾಗ ಇದು ಬಳಸುವ ಒಂದು ಫೋಟೊ ಮುದ್ರಣ ಕಾಗದದ ಬೆಲೆ ಸುಮಾರು 16 ರೂಪಾಯಿ ಆಗುತ್ತದೆ.***

ವಾರದ ಆ್ಯಪ್

ಇ-ಪಾಠಶಾಲೆ: 
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಎನ್‌ಸಿಇಆರ್‌ಟಿ ಭಾರತದಲ್ಲಿ ಒಂದರಿಂದ ಹನ್ನೆರಡನೆಯ ತರಗತಿಯ ತನಕ ಸಿಬಿಎಸ್‌ಇ ಶಿಕ್ಷಣ ಪದ್ಧತಿಯಲ್ಲಿ ಕಲಿಯುವವರಿಗೆ ಪಠ್ಯ ಪುಸ್ತಕಗಳನ್ನು ರೂಪಿಸಿದೆ. ಈ ಪುಸ್ತಕಗಳನ್ನು ಅವರ ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.ಈಗ ಅವರು ಒಂದು ಹೆಜ್ಜೆ ಮುಂದೆ ಹೋಗಿ ಇವುಗಳಿಗೆ ಕಿರುತಂತ್ರಾಂಶ (ಆ್ಯಪ್) ತಯಾರಿಸಿದ್ದಾರೆ. ಇದು ಬೇಕಿದ್ದರೆ ನೀವು ಗೂಗಲ್‌ ಪ್ಲೇ ಸ್ಟೋರಿಗೆ ಹೋಗಿ ePathshala ಎಂದು ಹುಡುಕಬೇಕು.ಇದರಲ್ಲಿ ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಅಧ್ಯಾಪಕರಿಗೆ, ಕಲಿಸುವವರಿಗೆ ಎಂಬ ವಿಭಾಗಗಳಿವೆ. ಪುಸ್ತಕಗಳು, ಪಠ್ಯಕ್ರಮಗಳಲ್ಲದೆ ವಿಡಿಯೊಗಳೂ ಇವೆ. ಇದನ್ನು ಬಳಸಬೇಕಾದರೆ ಉತ್ತಮ ಅಂತರಜಾಲ ಸಂಪರ್ಕ ಅಗತ್ಯ. ಯಾಕೆಂದರೆ ಆಯ್ಕೆ ಮಾಡಿಕೊಂಡುದುದನ್ನು ಅದು ಅಂತರಜಾಲದಿಂದ ಡೌನ್‌ಲೋಡ್ ಮಾಡಿಕೊಳ್ಳುತ್ತದೆ. ಇಲ್ಲಿರುವ ಎಲ್ಲ ಮಾಹಿತಿಗಳು ಇಂಗ್ಲಿಷ್‌, ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಮಾತ್ರ ಇವೆ.

*

ಗ್ಯಾಜೆಟ್ ಸುದ್ದಿ

ಯುಎಸ್‌ಬಿ ಟೈಪ್‌ರೈಟರ್: ಗಣಕಗಳು ಮತ್ತು ಡಿಟಿಪಿ ಬಳಕೆಗೆ ಬಂದು ಹಳೆಯ ಟೈಪ್‌ರೈಟರ್ ಯಂತ್ರಗಳು ನಾಪತ್ತೆಯಾಗಿವೆ. ಹಳೆ ಟೈಪ್‌ರೈಟರ್‌ಗಳನ್ನು ಹೊಸ ತಂತ್ರಜ್ಞಾನದ ಜೊತೆ ಮಿಲನ ಮಾಡಿದರೆ ಹೇಗಿರುತ್ತದೆ?ಹೌದು ಈಗ ಅಂತಹ ಒಂದು ಟೈಪ್‌ರೈಟರ್ ಲಭ್ಯವಿದೆ. ಅದು ನೋಡಲು ಹಳೆ ಟೈಪ್‌ರೈಟರ್ ಯಂತ್ರದಂತೆಯೇ ಕಾಣಿಸುತ್ತದೆ. ಆದರೆ ವ್ಯತ್ಯಾಸವೆಂದರೆ ಇದರಲ್ಲಿ ಯುಎಸ್‌ಬಿ ಸಂಪರ್ಕವಿದೆ.ನೀವು ಹಳೆಯ ಟೈಪ್‌ರೈಟರನ್ನು ಬಳಸಿದಂತೆಯೇ ಇದನ್ನು ಬಳಸಿ ಬೆರಳಚ್ಚು ಮಾಡಬಹುದು. ಆದರೆ ಇದಕ್ಕೆ ಕಾಗದ ಊಡಿಸುವಂತಿಲ್ಲ. ಬದಲಿಗೆ ನೀವು ಬೆರಳಚ್ಚು ಮಾಡಿದ ಮಾಹಿತಿ ಯುಎಸ್‌ಬಿ ಕಿಂಡಿ ಮೂಲಕ ನಿಮ್ಮ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಅಥವಾ ಐಪ್ಯಾಡ್‌ಗೆ ವರ್ಗಾವಣೆಯಾಗುತ್ತದೆ. ಇದರ ಬೆಲೆ ಕೇವಲ 64 ಸಾವಿರ ರೂ!

*

ಗ್ಯಾಜೆಟ್ ಸಲಹೆ

ಪ್ರಶ್ನೆ: ನನ್ನ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನಿನ ಮೆಮೊರಿ ಜಾಸ್ತಿ ಮಾಡಲು ಸಾಧ್ಯವೇ?

ಉ: ಇಲ್ಲ.

*

ಗ್ಯಾಜೆಟ್ ತರ್ಲೆ

ಮಳೆ ಬಂದಾಗ ನೀವು ಮನೆಯಿಂದ ಹೊರಗೆ ಇದ್ದರೆ ನಿಮ್ಮ ಸ್ಮಾರ್ಟ್‌ಫೋನ್ ಬಳಸುವುದು ಹೇಗೆ? ಈಗ ಅಂತಹ ಸಂದರ್ಭಗಳಿಗೆಂದೇ ಒಂದು ಚಿಕ್ಕ ಕೊಡೆ ತಯಾರಾಗಿದೆ. ಅದನ್ನು ನಿಮ್ಮ ಸ್ಮಾರ್ಟ್‌ಫೋನಿಗೆ ಜೋಡಿಸಿ ಮಳೆಯಲ್ಲೂ ನೀವು ಫೋನ್ ಬಳಸಬಹುದು!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.