ಭಾನುವಾರ, ಮೇ 16, 2021
25 °C

ಪ್ರವಾಸೋದ್ಯಮ: ರಾಜ್ಯಕ್ಕೆ ಮಾದರಿಯಾಗಲಿ ಉತ್ತರ ಕನ್ನಡ

ಎಂ ನಾಗರಾಜ್ Updated:

ಅಕ್ಷರ ಗಾತ್ರ : | |

ಪ್ರವಾಸೋದ್ಯಮ: ರಾಜ್ಯಕ್ಕೆ ಮಾದರಿಯಾಗಲಿ ಉತ್ತರ ಕನ್ನಡ

ರಾಜ್ಯದಲ್ಲಿ ಇದುವರೆಗೆ ಆಡಳಿತ ನಡೆಸಿರುವ ಎಲ್ಲ ಸರ್ಕಾರಗಳೂ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಪದೇ ಪದೇ ಘೋಷಣೆ ಮಾಡಿವೆ. ಆದರೆ ಯಾವೊಂದು ಸರ್ಕಾರ ಕೂಡ ಹೇಳಿಕೊಂಡಂತೆ ನಡೆದಿಲ್ಲ ಎಂಬುದು ನೆರೆಯ ಗೋವಾ ಮತ್ತು ಕೇರಳ ರಾಜ್ಯಗಳ ಪ್ರವಾಸಿ ತಾಣಗಳೊಂದಿಗೆ ರಾಜ್ಯವನ್ನು ಹೋಲಿಕೆ ಮಾಡಿದರೆ ಎದ್ದು ಕಾಣಿಸುತ್ತದೆ.ಎಷ್ಟೋ ಕಡೆ ಪ್ರವಾಸಿ ತಾಣಗಳಿಗೆ ರಸ್ತೆಯೇ ಸಮರ್ಪಕವಾಗಿಲ್ಲ. ಇಂತಹ ಕನಿಷ್ಠ ಸೌಕರ್ಯವನ್ನೂ ಕಲ್ಪಿಸದ ಸರ್ಕಾರ ಹೆಚ್ಚು ನೆರವು ನೀಡುವ ಭರವಸೆಯನ್ನು ಮಾತ್ರ ಕೊಡುತ್ತಲೇ ಇರುವುದು ವ್ಯಂಗ್ಯವೇ ಸರಿ. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಕರಾವಳಿ, ಮಲೆನಾಡು, ಬಯಲುಸೀಮೆ, ಪಶ್ಚಿಮಘಟ್ಟ, ಐತಿಹಾಸಿಕ ಸ್ಥಳಗಳು, ಧಾರ್ಮಿಕ ಕ್ಷೇತ್ರಗಳಿದ್ದರೂ ಏಕೋ ಏನೋ ಸರ್ಕಾರ ಈ ಜಿಲ್ಲೆಯನ್ನು ಪ್ರವಾಸೋದ್ಯಮದ ದೃಷ್ಟಿಯಿಂದ ಕಡೆಗಣಿಸಿದೆ ಎಂದು ಹೇಳಬಹುದು. ಚಾರಣ, ಪರಿಸರ, ಸಾಹಸ ಪ್ರವಾಸೋದ್ಯಮಕ್ಕೆ ಉತ್ತರ ಕನ್ನಡ ಹೇಳಿಮಾಡಿಸಿದಂತಿದೆ.  ಬೆಟ್ಟ–ಗುಡ್ಡಗಳಿರುವ ಕಾರವಾರದಲ್ಲಿ ಸೈಕಲ್‌ನಲ್ಲಿ ಬೆಟ್ಟ ಹತ್ತುವ ‘ಮೌಂಟೇನ್‌ ಸೈಕಲಿಂಗ್‌’ ಆರಂಭಿಸಬಹುದು.ಕೇರಳದಲ್ಲಿ ಪ್ರವಾಸೋದ್ಯಮಕ್ಕೆ ಹಿನ್ನೀರನ್ನು ಬಳಸಿಕೊಂಡಿರುವಂತೆಯೇ ಇಲ್ಲೂ ಕಾಳಿ ಮತ್ತು ಶರಾವತಿ ನದಿಗಳ ಹಿನ್ನೀರಿನಲ್ಲಿ ಸುಮಾರು 15–20 ಕಿ.ಮೀ ದೂರದವರೆಗೆ ಹಿನ್ನೀರು ಪ್ರವಾಸೋದ್ಯಮ ಅಭಿವೃದ್ಧಿಪಡಿಸಬಹುದು. ಬೋಟ್‌ಹೌಸ್‌ ಸೌಲಭ್ಯ ಕಲ್ಪಿಸಿ, ಪ್ರವಾಸಿಗರನ್ನು ಸೆಳೆಯಬಹುದು. ಈ ಮೂಲಕ  ಸ್ಥಳೀಯ ನಿರುದ್ಯೋಗಿಗಳಿಗೂ ಉದ್ಯೋಗ ಒದಗಿಸಬಹುದು.ಗೋವಾ, ಅಲ್ಲಿನ ಬೀಚ್‌ಗಳಿಂದಾಗಿಯೇ ಪ್ರಸಿದ್ಧಿಯಾಗಿದೆ. ಪ್ರವಾಸಿಗರಿಗೂ ಇದೇ ಆಕರ್ಷಣೆ. ಉತ್ತರ ಕನ್ನಡದಲ್ಲಿ ಗೋವಾವನ್ನು ಮೀರಿಸುವಂತಹ ರವೀಂದ್ರನಾಥ್‌ ಟ್ಯಾಗೋರ್‌ ಬೀಚ್‌, ಓಂ, ಪ್ಯಾರಡೈಸ್‌, ಹನಿ, ಗೋಕರ್ಣ, ದೇವಭಾಗ, ಕುಡ್ಲೆ ಬೀಚ್‌ಗಳಿದ್ದರೂ ಅವು ಪ್ರವಾಸಿಗರನ್ನು ಸೆಳೆಯುತ್ತಿಲ್ಲ. ಬೀಚ್‌ಗಳಲ್ಲಿ ಮೈನವಿರೇಳಿಸುವ ಜಲ ಸಾಹಸ ಕ್ರೀಡೆಗಳ ಸೌಲಭ್ಯವಿಲ್ಲ. ಅದೇ ಪಕ್ಕದಲ್ಲಿನ ಗೋವಾದಲ್ಲಿ ಪ್ರಮುಖ ಆಕರ್ಷಣೆ. ಮಕ್ಕಳು ಆಡಲು ಒಂದಿಷ್ಟು ಆಟಿಕೆ ವಸ್ತುಗಳನ್ನು ರವೀಂದ್ರನಾಥ್‌ ಟ್ಯಾಗೋರ್‌ ಬೀಚ್‌ನಲ್ಲಿ ಅಳವಡಿಸಲಾಗಿದೆ. ಸಮುದ್ರ ತೀರಕ್ಕೆ ಬಂದರೂ ಪ್ರವಾಸಿಗರು ನೀರಿಗಿಳಿಯಲು ಹಿಂದೆಮುಂದೆ ನೋಡುವಂತಹ ವಾತಾವರಣ ಇಲ್ಲಿದೆ.ಮನತಣಿಯುವಷ್ಟು ನೀರಿನಲ್ಲಿ ಆಡಬೇಕು ಎಂದು ಮನಸ್ಸು ಬಯಸಿದರೂ ಸ್ನಾನಕ್ಕೆ ಮತ್ತು ಬಟ್ಟೆ ಬದಲಿಸಲು ಸೌಕರ್ಯವಿಲ್ಲದ ಕಾರಣ ಜನರು ನೀರಿಗಿಳಿಯುವುದು ಕಡಿಮೆ. ಜಿಲ್ಲೆಯ ಹೊನ್ನಾವರದಲ್ಲಿರುವ ಬೀಚ್‌ನಲ್ಲಿ ಇಂತಹ ಸೌಲಭ್ಯವಿದೆ. ಅದನ್ನು ಎಲ್ಲ ಬೀಚ್‌ಗಳಿಗೂ ಕಲ್ಪಿಸಬಹುದಿತ್ತು. ಜಿಲ್ಲೆಯ ಬೀಚ್‌ಗಳು, ಪ್ರವಾಸಿ ತಾಣಗಳು, ಪ್ರವಾಸಿ ಕಾರಿಡಾರ್‌ ಬಗೆಗಿನ ಒಂದಿಷ್ಟು ಮಾಹಿತಿ ವೆಬ್‌ಸೈಟ್‌ನಲ್ಲಿ ಸಿಗುತ್ತವೆ ಎಂಬುದೇ ಖುಷಿಯ ಸಂಗತಿ. ಆದರೆ ಹಲವೆಡೆಗೆ ಹೋಗಲು ಹಾದಿಯೇ ಇಲ್ಲ. ಇರುವ ರಸ್ತೆಗಳೂ ಉತ್ತಮ ಎನ್ನುವಂತಿಲ್ಲ. ಹೊನ್ನಾವರ ಬಳಿಯ ಅಪ್ಸರಾಕೊಂಡದಲ್ಲಿ ಜಲಪಾತ, ದೇವಾಲಯಗಳಿದ್ದರೂ ಹೋಗಲು ರಸ್ತೆ ಇಲ್ಲ. ಇರುವುದರಲ್ಲಿ ಯಾಣಕ್ಕೆ ಮಾತ್ರ ರಸ್ತೆ ಚೆನ್ನಾಗಿದೆ. ಧಾರ್ಮಿಕ ಕ್ಷೇತ್ರಗಳಿಗೂ ಪರವಾಗಿಲ್ಲ. ಒಟ್ಟಾರೆ ಜಿಲ್ಲೆಯ ಪ್ರವಾಸಿ ತಾಣಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನೋಡಿದರೆ ಸೌಕರ್ಯ ಏನೇನೂ ಸಾಲದು.ರಾಜ್ಯದಲ್ಲಿ ಬೀಚ್‌ಗಳ ಅಭಿವೃದ್ಧಿಗೆ ಕರಾವಳಿ ನಿಯಂತ್ರಣ ವಲಯದಿಂದ (ಸಿಆರ್‌ಜೆಡ್‌) ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಬೊಟ್ಟು ಮಾಡುತ್ತಾರೆ. ಆದರೆ ಕೇರಳ ಮತ್ತು ಗೋವಾ ರಾಜ್ಯಗಳಲ್ಲಿ ಕರಾವಳಿ ಪ್ರದೇಶದಲ್ಲಿ ಅಷ್ಟೊಂದು ಅಭಿವೃದ್ಧಿ ಆಗಿದೆಯಲ್ಲವೇ? ಅವರಂತೆಯೇ ನಮ್ಮಲ್ಲೂ ಮಾಡಬಹುದಿತ್ತಲ್ಲವೇ? ಇತ್ತೀಚೆಗಷ್ಟೇ ಕೇಂದ್ರ ಸರ್ಕಾರದಿಂದ ಕರಾವಳಿ ಪ್ರದೇಶದ ಅಭಿವೃದ್ಧಿಗೆಂದು ₨ 50 ಕೋಟಿ ಬಿಡುಗಡೆಯಾಗಿದೆ. ಆದರೆ ರಾಜ್ಯದ 23 ಬೀಚ್‌ಗಳನ್ನು ಅಭಿವೃದ್ಧಿಪಡಿಸಲು 50 ಮೀಟರ್‌ವರೆಗೆ ವಿನಾಯಿತಿ ನೀಡುವಂತೆ ಕೋರಿದ್ದರೂ ಅನುಮತಿ ಸಿಕ್ಕಿಲ್ಲ ಎನ್ನಲಾಗುತ್ತಿದೆ. ಇದು ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಅನ್ಯ ಪಕ್ಷದ ಸರ್ಕಾರಗಳಿದ್ದಾಗಲೆಲ್ಲಾ ಕೇಳಿ ಬರುವ ಸಾಮಾನ್ಯ ಆರೋಪ. ರಾಜಕೀಯ ಲಾಭಕ್ಕೆ ಪರಸ್ಪರ ಅಡ್ಡಗಾಲು ಹಾಕುವ ಅಥವಾ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಪಡಿಸುವ ಕಾರ್ಯವನ್ನು ಯಾವ ರಾಜಕೀಯ ಪಕ್ಷಗಳೂ ಮಾಡಬಾರದು. ಕನಿಷ್ಠ ಈ ತಿಳಿವಳಿಕೆಯೂ ಇಲ್ಲದ ರಾಜಕಾರಣಿಗಳೇ ಎಲ್ಲ ಪಕ್ಷಗಳಲ್ಲೂ ತುಂಬಿಕೊಂಡಿರುವುದರಿಂದ ಜನರು ತೊಂದರೆ ಅನುಭವಿಸಬೇಕಾಗಿದೆ.ಕೇಂದ್ರ ಅನುಮತಿ ನೀಡಿಲ್ಲ ಎಂದು ಅತ್ತ ಬೊಟ್ಟು ಮಾಡುವುದನ್ನು ಬಿಟ್ಟು, ರಾಜ್ಯ ಸರ್ಕಾರ ತಾನೇನು ಮಾಡಬಹುದು ಎಂಬ ಬಗ್ಗೆ ಆಲೋಚಿಸುವುದು ಒಳಿತು. ರಾಜ್ಯದ ಪ್ರವಾಸೋದ್ಯಮ ಸಚಿವರಾದ ಆರ್‌.ವಿ.ದೇಶಪಾಂಡೆಯವರೇ ಈ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದಾರೆ. ತವರು ಜಿಲ್ಲೆಯನ್ನು ಪ್ರವಾಸೋದ್ಯಮದ ದೃಷ್ಟಿಯಿಂದ ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ಇತರೆ ಜಿಲ್ಲೆಗಳಿಗೆ ಮಾದರಿಯನ್ನಾಗಿಸುವ ಎಲ್ಲ ಅವಕಾಶ ಅವರಿಗಿದೆ. ಈ ಅವಕಾಶವನ್ನು ಅವರು ಬಳಸಿಕೊಳ್ಳಬೇಕು ಅಷ್ಟೇ. ನಂತರ ಈ ಜಿಲ್ಲೆಯ ಮಾದರಿಯನ್ನು ಇತರೆ ಜಿಲ್ಲೆಗಳಿಗೆ ಮಾರ್ಗಸೂಚಿಯಾಗಿ ಬಳಸಬಹುದು.

ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರಿಗೆ ಉತ್ತಮ ರಸ್ತೆ, ಶೌಚಾಲಯ, ಕುಡಿಯುವ ನೀರು, ಸಾರಿಗೆ ಸೌಲಭ್ಯ,  ಪ್ರವಾಸಿ ತಾಣಗಳಿಗೆ ಹೋಗಲು ರಸ್ತೆ ಬದಿಯಲ್ಲಿ ಮಾರ್ಗದರ್ಶಿ ಫಲಕಗಳನ್ನು ಅಳವಡಿಸಬೇಕು. ಇಂತಹ ಕಡೆ ತರಬೇತಿ ಹೊಂದಿದ ಮಾರ್ಗದರ್ಶಿಗಳೂ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯನ್ನು ದೇಶಪಾಂಡೆಯವರು ಸವಾಲಾಗಿ ಸ್ವೀಕರಿಸಿ, ಕಾರ್ಯಮಗ್ನರಾಗಬೇಕು. ಐ.ಎಂ.ವಿಠಲಮೂರ್ತಿ ಪ್ರವಾಸೋದ್ಯಮ ಇಲಾಖೆ ಆಯುಕ್ತರಾಗಿದ್ದ ಅವಧಿಯಲ್ಲಿ ಅಭಿವೃದ್ಧಿಗೆ ಒತ್ತು ಸಿಕ್ಕಿತ್ತು. ಅವರಿಗೂ ಪ್ರವಾಸೋದ್ಯಮ ಇಷ್ಟದ ವಿಷಯವಾಗಿತ್ತು. ಇಲಾಖೆ ಮುಖ್ಯಸ್ಥರಾದವರಿಗೆ ಆ ಕ್ಷೇತ್ರದಲ್ಲಿ ಆಸಕ್ತಿಯೇ ಇರದಿದ್ದರೆ ಅವರಿಂದ ಅಭಿವೃದ್ಧಿ ನಿರೀಕ್ಷಿಸಲಾದೀತೇ? ಜತೆಗೆ ಸರ್ಕಾರ ಇಲಾಖೆಗೆ ಹಣವನ್ನೂ ಒದಗಿಸುವುದಿಲ್ಲ. ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಇದೆ. ಇದು ನಾಮಕಾವಸ್ಥೆಗಾಗಿ ಇರುವ ವ್ಯವಸ್ಥೆ.  ವರ್ಷಗಟ್ಟಲೆ ಮಂಡಳಿಯ ಸಭೆ ಕೂಡ ನಡೆಯುವುದಿಲ್ಲ. ಇನ್ನು ಇಲಾಖೆಗೆ ಸಿಬ್ಬಂದಿ ಕೊರತೆ ಎಷ್ಟಿದೆ ಎಂದರೆ, ಕೈಗೊಂಡ ಕೆಲಸ– ಕಾರ್ಯಗಳು ಸರಿಯಾಗಿದೆಯೇ ಎಂದು ಪರಿಶೀಲಿಸಲೂ ಒಬ್ಬರಿರುವುದಿಲ್ಲ; ಇನ್ನು ಪ್ರವಾಸೋದ್ಯಮ ಹೇಗೆ ಅಭಿವೃದ್ಧಿಯಾಗುತ್ತದೆ?ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ನಿರ್ಮಿಸಿರುವ ಶೌಚಾಲಯಗಳ ನಿರ್ವಹಣೆಯೂ ಆಗುತ್ತಿಲ್ಲ. ಇವುಗಳ ನಿರ್ವಹಣೆಯನ್ನು ಯಾರು ಮಾಡಬೇಕು ಎಂಬುದೇ ದೊಡ್ಡ ತಲೆಬಿಸಿ ವಿಚಾರ. ಸ್ಥಳೀಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಅಥವಾ ಗ್ರಾಮ ಪಂಚಾಯ್ತಿಗಳು ಈ ಹೊಣೆ ಹೊರಲು ಸಿದ್ಧವಿರುವುದಿಲ್ಲ. ಅವುಗಳಿಗೂ ಸಿಬ್ಬಂದಿ ಕೊರತೆ ಕಾಡುತ್ತಿದೆ.ರಾಜ್ಯ ಸರ್ಕಾರ ಪ್ರತಿ ಐದು ವರ್ಷಕ್ಕೊಮ್ಮೆ ಪ್ರವಾಸೋದ್ಯಮ ನೀತಿಯನ್ನು ರೂಪಿಸುತ್ತದೆ. ಆದರೆ ಅದರಲ್ಲಿ ಎಷ್ಟು ಅನುಷ್ಠಾನವಾಗಿದೆ ಎಂಬುದರ ಪರಿಶೀಲನೆ ನಡೆಯುವುದಿಲ್ಲ.  2014–19ರ ಅವಧಿಯ ಕರಡು ನೀತಿ ಕೂಡ ಸಿದ್ಧವಾಗಿದೆ. ಪ್ರವಾಸೋದ್ಯಮ ನೀತಿ ಉದಾರವಾಗಿರಬೇಕು. ಇದು ಆತಿಥ್ಯ ವಲಯವಾಗಿರುವುದರಿಂದ ಪ್ರವಾಸಿಗರಿಗೆ ಉತ್ತಮ ಸೌಕರ್ಯಗಳು ದೊರೆಯುವಂತೆ ಮಾಡಬೇಕು. ಏಕಗವಾಕ್ಷಿ ಯೋಜನೆ ಜಾರಿಯಾಗಬೇಕು. ನಾಲ್ಕಾರು ಇಲಾಖೆಗಳು ಒಟ್ಟಿಗೆ ಕೆಲಸ ನಿರ್ವಹಿಸಬೇಕಾದುದರಿಂದ ಪರಸ್ಪರ ಸಹಕಾರ ಇರಬೇಕು. ಜತೆಗೆ ಇನ್ನು ಮುಂದಾದರೂ ಬಜೆಟ್‌ನಲ್ಲಿ ಇಲಾಖೆಗೆ ಹೆಚ್ಚು ಹಣ ಒದಗಿಸುವ ಔದಾರ್ಯವನ್ನು ಸರ್ಕಾರ ತೋರಬೇಕು.ಇಲ್ಲವೇ ಬರೀ ಪ್ರವಾಸೋದ್ಯಮಕ್ಕೆ ಒತ್ತು ನೀಡುತ್ತೇವೆ ಎಂದು ಹೇಳಿಕೊಂಡು ತಿರುಗಿದರೆ ಅದರಿಂದ ಉಪಯೋಗವಾಗದು. ಪ್ರವಾಸೋದ್ಯಮದ ಬಗೆಗೆ ಒಲವು ಇರುವ ಅಧಿಕಾರಿಯನ್ನು ಇಲಾಖೆಗೆ ನಿಯೋಜಿಸಬೇಕು. ಇಲಾಖೆಯ ಅಂಗ ಸಂಸ್ಥೆಯಾದ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ವಿಶೇಷ ಪ್ಯಾಕೇಜ್‌ ಘೋಷಿಸಿ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಮಾರುಕಟ್ಟೆ ಸೃಷ್ಟಿಸಿಕೊಳ್ಳಬೇಕು. ಅನೇಕ ಸಣ್ಣ ಪುಟ್ಟ ದೇಶಗಳು ಪ್ರವಾಸೋದ್ಯಮವನ್ನೇ ಸಂಪೂರ್ಣವಾಗಿ ಅವಲಂಬಿಸಿವೆ. ಅಂದರೆ ಅಲ್ಲಿ ಈ ಉದ್ಯಮದ ಮಾರುಕಟ್ಟೆ ಅಷ್ಟು ಸಮರ್ಪಕವಾಗಿದೆ. ನಮ್ಮಲ್ಲೂ ಅಂತಹ ಒಂದು ಪ್ರಯತ್ನವಾದರೆ ದೇಶ ವಿದೇಶಗಳಿಂದ ಪ್ರವಾಸಿಗರು ಹರಿದು ಬಂದಾರು. ಉತ್ತರಕನ್ನಡ ಜಿಲ್ಲೆಯನ್ನು ಮಾದರಿಯನ್ನಾಗಿಸುವ ಇಚ್ಛಾಶಕ್ತಿಯನ್ನು ಸಚಿವ ದೇಶಪಾಂಡೆ ಪ್ರದರ್ಶಿಸುವವರೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.