ಭಾನುವಾರ, ಜೂಲೈ 5, 2020
22 °C

ಬೇಕೇ ಬೇಕಿತ್ತು ಇಂತಹುದೊಂದು ಚರ್ಚೆ

ಡಿ. ಉಮಾಪತಿ Updated:

ಅಕ್ಷರ ಗಾತ್ರ : | |

ಬೇಕೇ ಬೇಕಿತ್ತು ಇಂತಹುದೊಂದು ಚರ್ಚೆ

ಬೇರೆ ಯಾವುದಕ್ಕಲ್ಲದಿದ್ದರೂ ಇಂತಹುದೊಂದು ಚರ್ಚೆಗೆ ವೇದಿಕೆ ನಿರ್ಮಿಸಿದ್ದಕ್ಕಾಗಿ ಯಶವಂತ ಸಿನ್ಹಾ ಅವರಿಗೆ ದೇಶ ಋಣಿಯಾಗಿರಬೇಕು.

ಮೋದಿ ನೇತೃತ್ವದ ಸರ್ಕಾರದ ಆರ್ಥಿಕ ಅನಾಹುತಗಳ ಕುರಿತು ಸಿನ್ಹಾ ಟೀಕೆ ಟಿಪ್ಪಣಿಗಳ ಸುಂಟರಗಾಳಿಯನ್ನೇ ಎಬ್ಬಿಸಿದ್ದಾರೆ. ಈ ದಿಸೆಯಲ್ಲಿ ಅವರು ಏಕಾಕಿ ಅಲ್ಲ. ಪಕ್ಷ ಮತ್ತು ಪರಿವಾರದ ಒಳಗಿನವರಾಗಿ ಈ ಕೆಲಸವನ್ನು ಸುಬ್ರಮಣಿಯನ್‌ ಸ್ವಾಮಿ ಮತ್ತು ಎಸ್.ಗುರುಮೂರ್ತಿ ತಕ್ಕಮಟ್ಟಿಗೆ ಮಾಡಿದ್ದಾರೆ. ಒಂದು ಕಾಲದಲ್ಲಿ ಬಿಜೆಪಿಯ ತಿರುಳು ನೇತೃತ್ವದ ಭಾಗವಾಗಿದ್ದ ಅರುಣ್ ಶೌರಿಯಂತೂ ನೋಟು ರದ್ದತಿಯನ್ನು ಕಳೆದ 70 ವರ್ಷಗಳ ಬಲು ದೊಡ್ಡಅನಾಹುತವೆಂದು ಜರೆದರು. ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಂ ರಾಜನ್ ಕೂಡ ಅರ್ಥವ್ಯವಸ್ಥೆಯು ಹಳ್ಳ ಹಿಡಿದಿದೆ ಎಂಬ ಅರ್ಥದ ಮಾತುಗಳನ್ನು ಆಡಿದ್ದಾರೆ. ನೆಲಮಟ್ಟದಲ್ಲಿ ಗೋಚರಿಸುತ್ತಿರುವ ಕ್ರೂರ ವಾಸ್ತವವನ್ನು ಗಮನಿಸಿದರೆ ಈ ಮಹಾಶಯರ ಟೀಕೆ ಟಿಪ್ಪಣಿಗಳು ನಿರಾಧಾರ ಎಂದು ಹೇಳಲು ಬರುವುದಿಲ್ಲ.

ಇಷ್ಟಕ್ಕೂ ಸಿನ್ಹಾ ಪರಮ ರಹಸ್ಯವನ್ನೇನೂ ರಟ್ಟುಮಾಡಿಲ್ಲ. ಬಿಜೆಪಿ ಸಂಸದೀಯ ಪಕ್ಷದ ಸಭೆಗಳಲ್ಲಿ ಪ್ರಶ್ನೆ ಎತ್ತಲು ಎಷ್ಟು ಅವಕಾಶವಿದೆ ಎಂಬುದು ಜನಜನಿತ. ಅಲ್ಲೊಂದು ಇಲ್ಲೊಂದರಂತೆ ರೈತರ ಆತ್ಮಹತ್ಯೆ, ಕೃಷಿ ಬಿಕ್ಕಟ್ಟು ಕುರಿತು ಪ್ರಶ್ನೆ ಕೇಳಿರುವ ಸಂಸದರ ಬಾಯಿ ಬಡಿದಿರುವ ಪರಿಯೂ ಸೋರಿ ಹೊರಬಿದ್ದು ಪತ್ರಿಕೆಗಳಲ್ಲಿ ಬೆಳಕು ಕಂಡಿದೆ.

ಸಿನ್ಹಾ ಟೀಕೆಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಉತ್ತರ ನೀಡಿದ್ದಾರೆ. ಆದರೆ ಉದ್ಯೋಗಾವಕಾಶಗಳ ಕುಸಿತ, ಹಣದುಬ್ಬರ, ರಫ್ತು ಕುಸಿತ, ಜಿಡಿಪಿ ಕುರಿತು ಅವರು ತುಟಿ ಬಿಚ್ಚಲಿಲ್ಲ. ಕೈಗಾರಿಕೆಗಳು ಸಾಲ ಪಡೆಯುವ ದರ ಕಳೆದ 63 ವರ್ಷಗಳಲ್ಲೇ ಅತಿ ಕೆಳಕ್ಕೆ ಕುಸಿದಿರುವುದು ಯಾಕೆ ಎಂದು ಅವರು ಹೇಳಲಿಲ್ಲ. ಕೈಗಾರಿಕೆಗಳ ವಿದ್ಯುಚ್ಛಕ್ತಿ ಬೇಡಿಕೆ ಯಾಕೆ ಪಾತಾಳ ಕಂಡಿದೆ, ದೂರಸಂಪರ್ಕ ವಲಯ ನಾಲ್ಕು ಲಕ್ಷ ಕೋಟಿ ರೂಪಾಯಿ ಸಾಲದಲ್ಲಿ ಮುಳುಗಿರುವುದು ಏನನ್ನು ಸೂಚಿಸುತ್ತದೆ, ಕಲ್ಲಿದ್ದಲು ಖಾನೆಗಳ ಹರಾಜು ಕಟ್ಟೆಗಳು ಕೂಗುವವರಿಲ್ಲದೆ ಯಾಕೆ ಭಣಗುಟ್ಟಿವೆ, ಉಕ್ಕು ಉದ್ಯಮದ ದೈತ್ಯ ಕಂಪೆನಿಗಳು ನೆಲ ಕಚ್ಚತೊಡಗಿಲ್ಲವೇನು, ರಿಯಲ್ ಎಸ್ಟೇಟ್ ಉದ್ಯಮ ಗೊಂದಲರಾಶಿಯಲ್ಲಿ ಮುಳುಗಿದ್ದು, ಡೆವಲಪರ್ ಕಂಪೆನಿಗಳು ಸೋಡಚೀಟಿ ಅರಸತೊಡಗಿರುವ ಕಾರಣಗಳೇನು, ವಸತಿ ನಿರ್ಮಾಣ ಉದ್ಯಮ ಹಿಡಿದಿರುವ ಮಂದಗತಿಯು ಕೋಟಿ ಕೋಟಿ ಉದ್ಯೋಗಗಳನ್ನು ಆಹುತಿ ಪಡೆದಿರುವುದು ಸುಳ್ಳೇನು ಎಂಬ ಪ್ರಶ್ನೆಗಳಿಗೆ ಅವರು ಸಮಾಧಾನ ಹೇಳಲಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಬ್ಯಾಂಕುಗಳ ಒಟ್ಟು ನಿರುತ್ಪಾದಕ ಆಸ್ತಿಪಾಸ್ತಿ ಅರ್ಥಾತ್ ವಸೂಲಾಗದ ಸಾಲಗಳ ಮೊತ್ತ (ಎನ್.ಪಿ.ಎ) ₹ 8.80 ಲಕ್ಷ ಕೋಟಿಗೆ ಜಿಗಿದಿದೆ. ಈ ಸಂಕಟದಿಂದ ಇವುಗಳನ್ನು ಪಾರು ಮಾಡಿ ದಡ ಸೇರಿಸಲು ಸರ್ಕಾರದ ಬಳಿ ಹಣವಿಲ್ಲ. ನೋಟು ರದ್ದತಿ ಕ್ರಮದಿಂದ ಮೂರು ಲಕ್ಷ ಕೋಟಿ ರೂಪಾಯಿಗಳಷ್ಟು ಮೌಲ್ಯದ ನೋಟುಗಳು ವಾಪಸು ಬರುವುದಿಲ್ಲ, ಈ ಮೊತ್ತವನ್ನು ಬ್ಯಾಂಕುಗಳಿಗೆ ಹೊಸ ಇಡುಗಂಟಾಗಿ ನೀಡಲು ಬಂದೀತು ಎಂಬುದು ಸರ್ಕಾರದ ಲೆಕ್ಕಾಚಾರವಾಗಿತ್ತು. ಈ ನಿರೀಕ್ಷೆ ಹುಸಿಯಾಯಿತು. ರದ್ದು ಮಾಡಲಾದ ನೋಟುಗಳ ಪೈಕಿ ಶೇ 99ರಷ್ಟು ವಾಪಸು ಬಂದಿವೆ ಎಂದು ಲೆಕ್ಕ ಒಪ್ಪಿಸಿದೆ ಭಾರತೀಯ ರಿಸರ್ವ್ ಬ್ಯಾಂಕ್. ನಿರುತ್ಪಾದಕ ಆಸ್ತಿಗಳ ಹೊರೆ ತಗ್ಗಿಸಲು ಸಣ್ಣ ಬ್ಯಾಂಕುಗಳನ್ನು ದೊಡ್ಡ ಬ್ಯಾಂಕುಗಳಲ್ಲಿ ವಿಲೀನಗೊಳಿಸುವ ಕ್ರಮ ಅಪಾಯಕಾರಿ ಎಂಬ ತಜ್ಞರ ಎಚ್ಚರಿಕೆಗೆ ಕೇಂದ್ರ ಸರ್ಕಾರ ಈಗಲೂ ಕಿವುಡು.

ಆರ್ಥಿಕ ಅಭಿವೃದ್ಧಿ ದರ ಕಳೆದ ಆರು ತ್ರೈಮಾಸಿಕಗಳಿಂದ ಸತತವಾಗಿ ಕುಸಿಯುತ್ತಿದೆ. ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುವ ಪ್ರಧಾನಮಂತ್ರಿಯವರ ಭರವಸೆ ಕಳೆದೇ ಹೋಗಿದೆ. ಹೊಸ ಉದ್ಯೋಗಗಳನ್ನು ಸೃಷ್ಟಿಸುವುದಿರಲಿ, ನೋಟು ರದ್ದತಿ ಎಂಬ ಬೇಜವಾಬ್ದಾರಿ ಕ್ರಮದಿಂದ ನಾಶವಾದ ಉದ್ಯೋಗಗಳ ಕುರಿತು ಜೇಟ್ಲಿ ಬಾಯಿ ಬಿಡಲಿಲ್ಲ. ಕಾಲ ಮೇಲೆ ನಿಂತುಕೊಳ್ಳಲು ತ್ರಾಸಪಡುತ್ತಿದ್ದ ಅರ್ಥವ್ಯವಸ್ಥೆಯ ಮೇಲೆ ನೋಟು ರದ್ದತಿಯ ಆಘಾತ. ಈ ಆಘಾತದ ಬೆನ್ನಿಗೇ ಅವಸರದ ಅರೆಬೆಂದ ಜಿ.ಎಸ್.ಟಿ. ತೆರಿಗೆ ಸುಧಾರಣೆಯ ಬಲವಂತದ ಹೇರಿಕೆ. ಜಿ.ಎಸ್.ಟಿ. ಹೇರಿಕೆಯಂತೂ ಸಣ್ಣಪುಟ್ಟ ವ್ಯಾಪಾರ-ಕೈಗಾರಿಕೆಗಳ ಬೆನ್ನು ಮೂಳೆ ಮುರಿದಿದ್ದು ಕದವಿಕ್ಕುವ ಹಂತ ತಲುಪಿವೆ. ಅಸಂಘಟಿತ ವಲಯ ಭಾರೀ ಪೆಟ್ಟು ತಿಂದಿದೆ. ಈ ವಲಯಗಳಲ್ಲಿ ಉದ್ಯೋಗ ಕಳೆದುಕೊಂಡು ಬೀದಿ ಪಾಲಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ನಡೆದಿದೆ. ಗ್ರಾಹಕ ಸರಕು ಸರಂಜಾಮುಗಳ ಬಳಕೆಯೂ ತಗ್ಗಿತೆಂದರೆ ಅರ್ಥವ್ಯವಸ್ಥೆ ಅಪಾಯದ ಗಂಟೆಯನ್ನು ಆಲಿಸುವ ದಿನಗಳು ದೂರ ಉಳಿಯುವುದಿಲ್ಲ.

ಹಾಸಿಗೆ ಹಿಡಿದಿರುವ ಅರ್ಥವ್ಯವಸ್ಥೆ ಸದ್ಯಕ್ಕಂತೂ ಚೇತರಿಸಿಕೊಳ್ಳುವ ಸೂಚನೆಗಳು ಕಾಣುತ್ತಿಲ್ಲ. ಆದಾಯ ಮೂಲಗಳೇ ಸೊರಗಿ ಹೋದಾಗ ಅಭಿವೃದ್ಧಿಯ ಕಾಲುವೆಗಳಲ್ಲಿ ನಿಧಿ ಹಂಚಿಕೆಯ ನೀರು ಹರಿದೀತಾದರೂ ಹೇಗೆ? ಮುಂಬರುವ ಮುಂಗಡಪತ್ರದಲ್ಲಿ ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಕೃಷಿ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಸಾಮಾಜಿಕ ನ್ಯಾಯಕ್ಕೆ ನೀಡಲಾಗುವ ಹಣಕಾಸು ಕಳೆದ ವರ್ಷಕ್ಕಿಂತ ಹೆಚ್ಚುವುದು ದುಸ್ಸಾಧ್ಯ. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿಯಂತಹ ಯೋಜನೆಗೆ ಹಂಚಿಕೆ ಖೋತಾ ಆದರೆ ಅದರ ಪೆಟ್ಟು ನೇರವಾಗಿ ಬೀಳುವುದು ಹಳ್ಳಿಗಾಡಿನ ಹಸಿದ ಹೊಟ್ಟೆಗಳ ಮೇಲೆ.

ಕೃಷಿ ವಲಯದ ಸಂಕಟ ದಿನದಿಂದ ದಿನಕ್ಕೆ ಕೈಮೀರುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶದ ರೈತರು ಲಕ್ಷ ಸಂಖ್ಯೆಯಲ್ಲಿ ಬೀದಿಗಿಳಿದಿದ್ದಾರೆ. 2015ರ ಒಂದೇ ವರ್ಷದಲ್ಲಿ 12 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡರು. ಬೆಲೆ ಕುಸಿತ ಮತ್ತು ಸಾಹುಕಾರಿ ಸಾಲದ ವಿಷಚಕ್ರಗಳಡಿ ರೈತರು ಉಸಿರಾಡುವ ಕಳೇಬರಗಳು. ಸ್ವರ್ಗವನ್ನೇ ತೋರಿಸಿದ ಮೋದಿಯವರ ಭರವಸೆಗಳು ಈಡೇರದಿರುವುದು ಅವರನ್ನು ಇನ್ನಷ್ಟು ಹತಾಶೆಗೆ ನೂಕಿದೆ. 25 ಪೈಸೆ ಮೌಲ್ಯದ ಚಾಕೊಲೆಟ್‌ ಮೇಲೆ ಎಂ.ಆರ್.ಪಿ. ಬರೆದಿರುತ್ತದೆ. ನೂರು ಕಿಲೋ ಗೋಧಿ ಮೂಟೆಗೆ ಈ ಕಾನೂನು ಯಾಕೆ ಅನ್ವಯಿಸುವುದಿಲ್ಲ ಎಂಬ ಸರಳ ಪ್ರಶ್ನೆ ರೈತರದು. ಅವರ ಮೇಲೆ ಬಿದ್ದಿರುವ ಮತ್ತೊಂದು ಮಾರಣಾಂತಿಕ ಹೊಡೆತ ಗೋರಕ್ಷಕ ಪಡೆಯ ಪೊಲೀಸುಗಿರಿಯದು. ಪಶುಧನದ ವರಮಾನ ಅಕ್ಷರಶಃ ಸ್ಥಗಿತಗೊಂಡಿದೆ.

ಸರ್ಕಾರಿ ವಲಯದ ಬ್ಯಾಂಕುಗಳ ಬಳಿ ಸಾಲ ಕೊಡಲು ಹಣ ಇಲ್ಲ. ನಿರುತ್ಪಾದಕ ಆಸ್ತಿಗಳೆಂಬ ಮರಳಿ ಬಾರದ ಕಾರ್ಪೊರೇಟ್ ವಲಯದ ಸಾಲಗಳು ಬೆಟ್ಟದಂತೆ ಬೆಳೆದಿವೆ. ವಿಸರ್ಜಿಸಿದರೂ ಈ ಕಂಪೆನಿಗಳಿಂದ ಸರಾಸರಿ ಶೇ 30ಕ್ಕಿಂತ ಹೆಚ್ಚು ಸಾಲ ವಸೂಲಿ ಸಾಧ್ಯವಿಲ್ಲ. ಶೇ 70ರಷ್ಟು ಸಾಲವನ್ನು ಮನ್ನಾ ಮಾಡದೆ ವಿಧಿಯಿಲ್ಲ ಎನ್ನುತ್ತವೆ ಬ್ಯಾಂಕಿಂಗ್ ವಲಯದ ಉಚ್ಚ ಮೂಲಗಳು. ಕಳೆದ ನಾಲ್ಕು ವರ್ಷಗಳಲ್ಲಿ ಇಂತಹ ಮೂರು ಲಕ್ಷ ಕೋಟಿ ರೂಪಾಯಿ ಸಲಾ ಮನ್ನಾ ಮಾಡಲಾಗಿದೆ.

ಅಂತರರಾಷ್ಟ್ರೀಯ ಪೇಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರಗಳು ಕುಸಿಯುತ್ತಿದ್ದರೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರಗಳು ಸತತವಾಗಿ ಹೆಚ್ಚತೊಡಗಿವೆ. 2013ರ ಸೆಪ್ಟೆಂಬರ್ ತಿಂಗಳಲ್ಲಿ ಕಚ್ಚಾತೈಲದ ಅಂತರರಾಷ್ಟ್ರೀಯ ದರ ಪ್ರತಿ ಬ್ಯಾರೆಲ್‌ಗೆ 109.45 ಡಾಲರುಗಳಷ್ಟಿತ್ತು. ಅಂದು ದೇಶದಲ್ಲಿದ್ದ ಪೆಟ್ರೋಲ್ ದರ ಲೀಟರಿಗೆ ಸರಾಸರಿ ₹ 82. ಭಾರೀ ಹಾಹಾಕಾರ ಎದ್ದಿತ್ತು. ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕೂಡ ಗಂಟಲೇರಿಸಿದ್ದರು. ಈಗ 2017ರ ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿ ಬ್ಯಾರೆಲ್ ದರ 54.58 ಡಾಲರುಗಳು. 2013ಕ್ಕೆ ಹೋಲಿಸಿದರೆ ಅರ್ಧಕ್ಕಿಂತ ಕಡಿಮೆ ದರ. ಆದರೂ ಪೆಟ್ರೋಲ್ ದರ ಲೀಟರಿಗೆ ₹ 70 ಕ್ಕಿಂತ ಹೆಚ್ಚು. ಹೆದ್ದಾರಿ, ಶಿಕ್ಷಣ, ಸ್ವಾಸ್ಥ್ಯ ಸೌಲಭ್ಯ ಒದಗಿಸಲು ಹಣ ಬೇಕು. ಅದಕ್ಕೆಂದೇ ಹೆಚ್ಚು ದರ ತೆರಬೇಕು ಎನ್ನುತ್ತಾರೆ ಪೆಟ್ರೋಲಿಯಂ ಮಂತ್ರಿ. ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ದುಪ್ಪಟ್ಟು ದರ ವಿಧಿಸಿ ಕಳೆದ ಮೂರು ವರ್ಷಗಳಲ್ಲಿ ಐದು ಲಕ್ಷ ಕೋಟಿ ರೂಪಾಯಿಯಷ್ಟು ಹೆಚ್ಚು ವರಮಾನ ಗಳಿಸಿದೆ ಕೇಂದ್ರ ಸರ್ಕಾರ. ಈ ಪೈಕಿ ಶೇ 25ರಷ್ಟು ಮೊತ್ತವನ್ನು ಮಾತ್ರವೇ ಗ್ರಾಹಕರಿಗೆ ವರ್ಗಾಯಿಸಿದೆ. ಜನಕಲ್ಯಾಣ ಯೋಜನೆಗಳಿಗೆ ಬಳಸಿಕೊಳ್ಳುತ್ತಿದ್ದೇವೆ ಎಂಬುದು ಕೇಂದ್ರದ ವಿವರಣೆ. ಸರ್ಕಾರದ ತಪ್ಪು ಅರ್ಥನೀತಿಯ ದಂಡವನ್ನು ಜನಸಾಮಾನ್ಯರು ತೆರಬೇಕಾಗಿ ಬಂದಿದೆ.

ಲಾಭಬಡುಕ ಆರ್ಥಿಕ ಮೂಲಭೂತವಾದಿಗಳು ಈಗಲೂ ಮೋದಿಯವರೇ ಕಟ್ಟ ಕಡೆಯ ಆಶಾವಾದ ಎನ್ನುತ್ತಿದ್ದಾರೆ. ಮೋದಿಯವರ ಕಡು ಕಠಿಣ ಅಗ್ನಿಪರೀಕ್ಷೆ ಇನ್ನೂ ಬಂದಿಲ್ಲ, ಈ ಮೂಲಭೂತವಾದಿಗಳ ಪ್ರಕಾರ ನಮ್ಮ ಅಳಿದುಳಿದ ಸಮಾಜವಾದಿ ಅರ್ಥವ್ಯವಸ್ಥೆಯ ಹೊರಕವಚವನ್ನು ಕಿತ್ತು ಎಸೆದು ಮುಕ್ತ ಮಾರುಕಟ್ಟೆಯ ವ್ಯವಸ್ಥೆಯತ್ತ ನಡೆಯಬೇಕು. ಸರ್ಕಾರಿ ವಲಯದ ಬ್ಯಾಂಕುಗಳು ಮತ್ತು ಕೈಗಾರಿಕೆಗಳನ್ನು ಸಾರಾಸಗಟಾಗಿ ಮಾರಾಟ ಮಾಡಬೇಕು. ಈ ಬ್ಯಾಂಕುಗಳಿಗೆ ಬಂಡವಾಳ ನೀಡುವುದರಿಂದ, ಈ ಕೈಗಾರಿಕೆಗಳ ಆಂಶಿಕ ಷೇರು ವಿಕ್ರಯದಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಬಂಡವಾಳವನ್ನು ಇಡಿ ಇಡಿಯಾಗಿ ನುಂಗಿ ಹಾಕುವ ಬ್ಲ್ಯಾಕ್ ಹೋಲ್‌ಗಳಿವು. ಇವುಗಳಿಂದ ಕೈತೊಳೆದುಕೊಳ್ಳುವುದೊಂದೇ ವಿವೇಕದ ಉಪಾಯ. ತಳಪಾಯಕ್ಕೆ ಹಿಡಿದ ಈ ಗೆದ್ದಲನ್ನು ತೊಡೆದು ಹಾಕುವ ಈ ಕೆಲಸವನ್ನು ಮೋದಿಯವರೇ ಮಾಡಬೇಕು. ವ್ಯಾಪಾರ- ಉದ್ದಿಮೆ- ವಹಿವಾಟು ಸರ್ಕಾರದ ಕೆಲಸ ಅಲ್ಲವೇ ಅಲ್ಲ ಎಂಬುದಾಗಿ ತಾವು ಮಾಡಿರುವ ಘೋಷಣೆಯನ್ನು ಅವರು ನಿಜ ಮಾಡಿ ತೋರಿಸಬೇಕು ಎಂಬುದು ಈ ಮೂಲಭೂತವಾದಿಗಳ ಆಗ್ರಹ.

ಈ ಅಮಾನವೀಯ ಮಾತಿಗೆ ಕಿವಿಗೊಟ್ಟರೆ ದೇಶ ಹಾಹಾಕಾರದೆಡೆಗೆ ಧಾವಿಸುವುದು ನಿಶ್ಚಿತ. ನಮ್ಮ ಬಂಡವಾಳಶಾಹಿ ಅರ್ಥವ್ಯವಸ್ಥೆಯ ತಳಹದಿಯೇ ಅಸಮಾನತೆಯದು. ಈ ಅಸಮಾನತೆಯ ಕಂದರವನ್ನು ಸ್ವತಂತ್ರ ಭಾರತ ಹಿರಿದು ಮಾಡುತ್ತ ಬಂದಿದೆಯೇ ವಿನಾ ಕಿರಿದಾಗಿಸಿಲ್ಲ. ಜಾಗತಿಕ ಉದಾರ ಅರ್ಥನೀತಿಯ ಗಾಳಿಯಂತೂ ಬಡವ- ಬಲ್ಲಿದನ ನಡುವಣ ಕಂದಕವನ್ನು ಪ್ರಪಾತದ ಸ್ವರೂಪಕ್ಕೆ ಹಿಗ್ಗಿಸಿದೆ.

‘ನಮ್ಮ ರಾಜಕಾರಣದಲ್ಲಿ ಜನತಂತ್ರ ಮತ್ತು ಸಮಾನತೆ ಇದೆ. ಆದರೆ ಸಮಾಜ ಮತ್ತು ಅರ್ಥವ್ಯವಸ್ಥೆಯಲ್ಲಿ ಅದರ ಸುಳಿವೇ ಇಲ್ಲ. ಈ ಇರುವುದು ಮತ್ತು ಇಲ್ಲದಿರುವುದರ ನಡುವಣ ಬಿಗುವು ಒಂದಲ್ಲ ಒಂದು ದಿನ ನಮ್ಮ ರಾಜಕೀಯ ಜನತಂತ್ರದಲ್ಲಿ ದೊಡ್ಡದಾಗಿ ಸ್ಫೋಟಿಸಲಿದೆ’ ಎಂದಿದ್ದರು ಡಾ.ಬಿ.ಆರ್. ಅಂಬೇಡ್ಕರ್. ಈ ಭವಿಷ್ಯವನ್ನು ನಿಜವಾಗಿಸುವ ದಿಸೆಯಲ್ಲಿ ನಾವು ನಾಗಾಲೋಟದಲ್ಲಿ ಓಡತೊಡಗಿದ್ದೇವೆ.

ಅಭಿವೃದ್ಧಿ ಪತ್ರಿಕೋದ್ಯಮದ ಹರಿಕಾರ ಪಾಲಗುಮ್ಮಿ ಸಾಯಿನಾಥ್ ಪ್ರಕಾರ 20 ವರ್ಷಗಳಲ್ಲಿ ಆರ್ಥಿಕ ಅಸಮಾನತೆಯ ಅಂತರ ಅಚ್ಚರಿಯ ವೇಗದಲ್ಲಿ ಹಿಗ್ಗಿದೆ. ದೇಶದ ಶೇ 58.4ರಷ್ಟು ಸಿರಿ ಸಂಪತ್ತಿನ ಒಡೆತನ ದೇಶದ ತುತ್ತ ತುದಿಯ ಶೇ 1ರಷ್ಟು ಜನರ ಕೈಲಿದೆ. ‘ಕ್ರೆಡಿಟ್ ಸ್ಯುಸೆ’ಯ ‘ಗ್ಲೋಬಲ್ ವೆಲ್ತ್ ಡೇಟಾ ಬುಕ್’ನ ಮಾಹಿತಿಯನ್ನು ಆಧರಿಸಿದ ಈ ಅಂಕಿ ಅಂಶದ ಪ್ರಕಾರ ಭಾರತದ ನೂರು ಮಂದಿ ಸಿರಿವಂತರು ಹೊಂದಿರುವ ಸಂಪತ್ತು, ದೇಶದ ಶೇ 69-70ರಷ್ಟು ಜನಸಂಖ್ಯೆ ಹೊಂದಿರುವ ಸಿರಿಪಂಪತ್ತಿಗೆ ಸಮನಾದದ್ದು.

2000 ಇಸವಿಯಲ್ಲಿ ‘ಕ್ರೆಡಿಟ್ ಸ್ಯುಸೆ’ ಮೊದಲ ಸಲ ಹೊರಗೆಡವಿದ್ದ ಅಂಕಿ ಅಂಶಗಳ ಪ್ರಕಾರ ಅಂದು ಭಾರತದ ಶೇ 1ರಷ್ಟು ಜನರ ಕೈಲಿದ್ದ ಸಂಪತ್ತಿನ ಪ್ರಮಾಣ, ಭಾರತದ ಶೇ 26ರಷ್ಟು ಜನಸಂಖ್ಯೆ ಹೊಂದಿದ್ದ ಸಂಪತ್ತಿಗೆ ಸರಿಸಮನಾಗಿತ್ತು. ಕೇವಲ ಹದಿನಾರು ವರ್ಷಗಳಲ್ಲಿ ಈ ಪ್ರಮಾಣ ದುಪ್ಪಟ್ಟಿಗಿಂತ ಹೆಚ್ಚಾಗಿದೆ! ಜಗತ್ತಿನ ಬೇರೆ ಯಾವ ದೇಶದಲ್ಲಿಯೂ ಆರ್ಥಿಕ ಅಸಮಾನತೆ ಈ ವೇಗದಲ್ಲಿ ಹಿಗ್ಗಿಲ್ಲವಂತೆ. ನಮ್ಮ ಜನಸಂಖ್ಯೆಯ ತಳಭಾಗದ ಶೇ 10ರಷ್ಟು ಜನಸಂಖ್ಯೆಯಂತೂ ಸಿರಿ ಸಂಪತ್ತಿಗೆ ಸಾರಾಸಗಟಾಗಿ ಎರವಾದ ನಿರ್ಗತಿಕ ಸಮಾಜ. ಇದೇ ಲೆಕ್ಕಾಚಾರದ ಪ್ರಕಾರ ಮುಕೇಶ್ ಅಂಬಾನಿಯವರ ಬಳಿ ಇರುವ ಆಸ್ತಿಪಾಸ್ತಿಯು ದೇಶದ 40 ಕೋಟಿ ಜನರ ಆಸ್ತಿಪಾಸ್ತಿಗೆ ಸಮನಾದದ್ದು ಎನ್ನಲಾಗಿದೆ. ನವ ಉದಾರವಾದಿ ಜಾಗತೀಕರಣದ ಜೊತೆಗೆ ಹೆಚ್ಚು ಹೆಚ್ಚು ಖಾಸಗೀಕರಣದ ಕ್ರಮಗಳು ಸಿರಿಸಂಪತ್ತನ್ನು ಬಡವರಿಂದ ಸಿರಿವಂತರೆಡೆಗೆ ಅತಿವೇಗದಲ್ಲಿ ವರ್ಗಾಯಿಸತೊಡಗಿವೆ. ಎತ್ತುಗಳನ್ನು ಚಕ್ಕಡಿಯ ಹಿಂದೆ ಕಟ್ಟಿ ಮಾಡತೊಡಗಿರುವ ಪ್ರಯಾಣವಿದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.