ಶನಿವಾರ, ಮಾರ್ಚ್ 6, 2021
30 °C

ಭಗ್ನಕನಸುಗಳ ನಡುವೆ ಹೊಸ ಲೋಕಸಭೆಯ ಕನಸು ಕಾಣುತ್ತ...

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ಭಗ್ನಕನಸುಗಳ ನಡುವೆ ಹೊಸ ಲೋಕಸಭೆಯ ಕನಸು ಕಾಣುತ್ತ...

ಅವರು ತಮ್ಮ ಆಸನದಿಂದ ಎದ್ದು ನಿಂತಾಗ ಅವರಲ್ಲಿ ಕೃತಾರ್ಥ ಭಾವನೆ ಇರಲಿಲ್ಲ. ವಿಷಾದದ ಗಾಢ ಛಾಯೆ ಇತ್ತು. ಕಳೆದ 60 ವರ್ಷಗಳಲ್ಲಿ ಅವರು ಆ ಸದನಕ್ಕೆ ಮತ್ತೆ ಮತ್ತೆ ಬಂದಿದ್ದರು. ಸಂಸದೀಯ ನಡವಳಿಕೆಯನ್ನು ತಮ್ಮ ಉಸಿರು ಎಂದು ಅಂದುಕೊಂಡಿದ್ದರು. ಅದು ಪ್ರಜಾತಂತ್ರದ ದೇಗುಲ ಎನ್ನುವಂತೆ  ಅವರು ನಡೆದುಕೊಂಡಿದ್ದರು. ಪ್ರತಿ ದಿನ ಸದನಕ್ಕೆ ಬಂದಾಗ ರುಜು ಹಾಕಿ ಒಳಗೆ ಬಂದಿದ್ದರು. ಆರೋಗ್ಯ ಸರಿ ಇಲ್ಲದೇ ಇದ್ದಾಗ ಮಾತ್ರ ಗೈರುಹಾಜರಾಗಿದ್ದರು. ಯಾವ ಕಾರಣಕ್ಕೆ ಗೈರುಹಾಜರಾದರೂ ಸಭಾಧ್ಯಕ್ಷರಿಗೆ, ಸಭಾಪತಿಗಳಿಗೆ ತಿಳಿಸದೇ ಇರಲಿಲ್ಲ.ಅವರ ಹೆಸರು ರಿಷಾಂಗ್‌ ಕೀಷಿಂಗ್. ಅವರು ಮಣಿಪುರದವರು. ಅವರು 1952ರ ಮೊದಲ ಲೋಕಸಭೆಯ ಸದಸ್ಯರಾಗಿದ್ದರು. ಮತ್ತೆ ಮೂರನೇ ಲೋಕಸಭೆ ಸದಸ್ಯರಾಗಿದ್ದರು. ಮಧ್ಯ ನಾಲ್ಕು ಅವಧಿಗೆ ಮಣಿಪುರದ ಮುಖ್ಯಮಂತ್ರಿ ಆಗಿದ್ದರು. ಇದೀಗ ಎರಡು ಅವಧಿಗೆ ರಾಜ್ಯಸಭೆ ಸದಸ್ಯತ್ವವನ್ನು ಪೂರೈಸಿದ ರಿಷಾಂಗ್‌ಗೆ ಈಗ 94 ವಯಸ್ಸು. ಸಂಸತ್ತಿನಲ್ಲಿ ಅವರ ಹಾಜರಾತಿ ಕೂಡ ಶೇಕಡಾ 94.  ತಮ್ಮ ಆಸನದಿಂದ ಅವರು ಕೊನೆಯದಾಗಿ ಎದ್ದು ನಿಂತು, ‘ಇದು ಈಗ ಸಂತೆಯಾಗಿದೆ. ಇಲ್ಲಿ ದೊಡ್ಡ ಗಂಟಲು ಇದ್ದವರು ಮಾತ್ರ ಬಾಳಲು ಸಾಧ್ಯ. ನನಗೆ ಇನ್ನು ಇಲ್ಲಿ ಕೆಲಸವಿಲ್ಲ’ ಎಂದು ಅಂದುಕೊಂಡರು.ಅವರು ಹಿಂದಿನ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಭಾಷಣ ಕೇಳಿದ್ದರು. ಮೊದಲ ಶಿಕ್ಷಣ ಸಚಿವ ಅಬುಲ್‌ ಕಲಾಂ ಆಜಾದ್‌ ಅವರ ಭಾಷಣ ಕೇಳಿದ್ದರು. ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಜೆ.ಬಿ.ಕೃಪಲಾನಿ ಅವರ ಮಾತು ಕೇಳಿದ್ದರು. ಅಂಥವರೆಲ್ಲ ಎದ್ದು ನಿಂತು ಮಾತನಾಡಲು ತೊಡಗಿದರೆ ಇಡೀ ಸದನ ಕಿವಿಯಾಗುತ್ತಿತ್ತು. ಅವರಿಗೆಲ್ಲ ದೇಶ ಕಟ್ಟುವ ಕನಸು ಇತ್ತು ಎಂದು ಕೀಷಿಂಗ್‌ ನೆನಪಿಸಿಕೊಂಡರು. ಸದನದ ಹೊರಗೆ ಬಂದಾಗ ಅವರಿಗಾಗಿ ಕಾಯುತ್ತಿದ್ದ ವರದಿಗಾರರ ಜತೆಗೆ ಅವರು ತಮ್ಮ ವಿಷಾದವನ್ನೇ ಹಂಚಿಕೊಂಡರು. ಕೀಷಿಂಗ್‌, ಸಂಸತ್‌ ಭವನದಿಂದ ತಮ್ಮ ಮನೆ ಕಡೆಗೆ ಹೊರಟು ಹೋದಾಗ ಹಳೆಯ ಮೌಲ್ಯಗಳು ನಡು ಬಾಗಿ ತೆರೆಯ ಹಿಂದೆ ಸರಿದು ಹೋದಂತೆ ಅನಿಸಿತು.ಅವರಿಗೆಲ್ಲ ಎಂಥ ಶ್ರದ್ಧೆ ಇತ್ತು! ಸಾರ್ವಜನಿಕರ ತೆರಿಗೆ ಹಣದ ಬಗ್ಗೆ ಎಂಥ ಗೌರವ ಇತ್ತು! ಮಣಿಪುರ ಸಣ್ಣ ರಾಜ್ಯ. ಸದನದಲ್ಲಿ ಎದ್ದು ನಿಂತರು ಎಂದರೆ ಕೀಷಿಂಗ್‌ ತಮ್ಮ ರಾಜ್ಯದ ಬಗ್ಗೆ ಏನಾದರೂ ಪ್ರಸ್ತಾಪ ಮಾಡುತ್ತಾರೆ ಎಂದೇ ಅರ್ಥ. ಅದು ನಮಗೆ ದೊಡ್ಡ ಸಂಗತಿ ಎನಿಸಲಿಕ್ಕಿಲ್ಲ. ಆದರೆ, ಸಣ್ಣ ರಾಜ್ಯದ ಪರವಾಗಿ ಕೀಷಿಂಗ್‌ ಅಲ್ಲದೆ ಯಾರು ಮಾತನಾಡಲು ಸಾಧ್ಯ ಎನ್ನುವಂತೆ ಸದನದಲ್ಲಿ ಅವರ ಖ್ಯಾತಿ ಬೆಳೆದಿತ್ತು. ತಮ್ಮ ರಾಜ್ಯದ ಬುಡಕಟ್ಟು ಜನರಿಗೆ ಹಣಕಾಸು ನೆರವು ಕೊಡುವುದೇ ಇರಲಿ, ಕೇಂದ್ರೀಯ ಕೃಷಿ ವಿಶ್ವ ವಿದ್ಯಾಲಯದ ಸ್ಥಾಪನೆಯೇ ಇರಲಿ, ರೈತರಿಗೆ ಕ್ರೆಡಿಟ್‌ ಕಾರ್ಡ್‌ ಕೊಡುವುದೇ ಇರಲಿ, ತಮ್ಮ ಊರಿನ ರೈಲ್ವೆ ಟಿಕೆಟ್‌ ಕೌಂಟರ್‌ಗಳ ಕಂಪ್ಯೂಟರೀಕರಣವೇ ಇರಲಿ, ಕೀಷಿಂಗ್‌ ಎದ್ದು ನಿಂತು ಮಾತನಾಡುತ್ತಿದ್ದರು.ಅವರಿಗೆ ಇದೆಲ್ಲ ಸಣ್ಣ ಸಂಗತಿ, ತನ್ನಂಥ ಅತ್ಯಂತ ಹಿರಿಯ ಸದಸ್ಯ ಮಾತನಾಡುವ ಸಂಗತಿಗಳು ಅಲ್ಲ ಎಂದು ಅವರಿಗೆ ಎಂದೂ ಅನಿಸಲೇ ಇಲ್ಲ. ಬೋಫೊರ್ಸ್‌ ಬಗ್ಗೆ, 2–ಜಿ ಬಗ್ಗೆ, ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಬಗ್ಗೆ, ಕಲ್ಲಿದ್ದಲು ಬ್ಲಾಕ್‌ ಹಂಚಿಕೆ ಬಗ್ಗೆ ಅವರು ಎಂದೂ ಮಾತನಾಡಲಿಲ್ಲ. ಬಹುಶಃ ಆ ಬಗ್ಗೆ ಮಾತನಾಡುವವರು ಬಹಳ ಮಂದಿ ಇದ್ದಾರೆ ಎಂದು ಅವರಿಗೆ ಗೊತ್ತಿತ್ತು! ಅವರು ತಮ್ಮ ಊರಿನ ಸವಲತ್ತುಗಳ ಬಗ್ಗೆ ಮಾತನಾಡಿದರು. ತಮ್ಮ ರಾಜ್ಯದ ಒಳಿತಿನ ಬಗ್ಗೆ ಮಾತನಾಡಿದರು. ಉಳಿದುದನ್ನು ಗದ್ದಲ ಮಾಡುವವರಿಗೆ ಬಿಟ್ಟು ಬಿಟ್ಟರು!ದೇಶ ಮತ್ತೆ ಲೋಕಸಭೆಯ ಚುನಾವಣೆ ಹೊಸ್ತಿಲಲ್ಲಿ ನಿಂತಿದೆ. ಈಗಷ್ಟೇ ರಾಜ್ಯಸಭೆಯಿಂದ ನಿರ್ಗಮಿಸಿರುವ ಕೀಷಿಂಗ್‌, ನಮ್ಮ ಎಲ್ಲ ಯುವ ರಾಜಕಾರಣಿಗಳಿಗೆ ಒಂದು ಮಾದರಿ ಎಂದು ನನಗೆ ತೋರಿತು. 15ನೇ ಲೋಕಸಭೆಗೆ ರಾಜ್ಯದಿಂದ ಆರಿಸಿ ಹೋದ ಅನೇಕರ ಬಗ್ಗೆ ನಮಗೆ ಕನಸುಗಳು ಇದ್ದುವು. ಕೆಲವರು ಸದನದಲ್ಲಿ ಹೊಸ ಮಾತುಗಳನ್ನೇ ಆಡಬಹುದು ಎಂದು ನಮಗೆ ಅನಿಸಿತ್ತು.  ಆದರೆ, ಅವರು ನಮ್ಮನ್ನು ನಿರಾಶರನ್ನಾಗಿ ಮಾಡಿದರು. ಒಬ್ಬ ಸಂಸದನಾಗುವುದು ಎಂಥ ಭಾಗ್ಯ ಅಲ್ಲವೇ? ಅಥವಾ ದೊಡ್ಡ ಅವಕಾಶ ಅಲ್ಲವೇ? ಒಂದು ಕ್ಷೇತ್ರದ 15–20ಲಕ್ಷ  ಜನರನ್ನು ಲೋಕಸಭೆಯಲ್ಲಿ ಪ್ರತಿನಿಧಿಸುವ ಅವಕಾಶ ಎಷ್ಟು ಮಂದಿಗೆ ಸಿಗಲು ಸಾಧ್ಯ? ಸಿಕ್ಕ ಅವಕಾಶವನ್ನು ಅವರು ಬಳಸಿಕೊಳ್ಳಬೇಕು ಅಲ್ಲವೇ? ಎಷ್ಟು ಜನ ಅದನ್ನು ಸಮರ್ಪಕವಾಗಿ ಬಳಸಿಕೊಂಡರು?ಸಂಸತ್ತು ಎಂದರೆ ಮುಖ್ಯವಾಗಿ ಶಾಸನಗಳನ್ನು ರಚಿಸುವ ಒಂದು ಸದನ. ನೀತಿಗಳನ್ನು ನಿರೂಪಿಸುವ ಮತ್ತು ವಿಮರ್ಶಿಸುವ ಮನೆ. ಆದರೆ, 15ನೇ ಲೋಕಸಭೆಯಲ್ಲಿ ಅತಿ ಕಡಿಮೆ ಅಂದರೆ ಮಂಡನೆಯಾದ 326ರ ಪೈಕಿ 177 ಮಸೂದೆಗಳು ಮಾತ್ರ ಅಂಗೀಕಾರವಾದುವು. ಇದು ಒಂದು ಲೋಕಸಭೆಯ ಅವಧಿಯಲ್ಲಿ ಆದ ಅತಿ ಕಡಿಮೆ ‘ಸರ್ಕಾರಿ ಕಲಾಪ’. 1980–84ರ ನಡುವಿನ ಅವಧಿಯ ಲೋಕಸಭೆ ಶೇ 120ರಷ್ಟು ಸಾಧನೆ ಮಾಡಿತ್ತು. ಆಗ, ಅನೇಕ ದಿನಗಳ ಕಾಲ ಅದು ನಿಗದಿತ ಅವಧಿಗಿಂತ ಹೆಚ್ಚು ಸಮಯ ಕುಳಿತು ಕಲಾಪ ಮಾಡಿತ್ತು. ಅದಕ್ಕೆಲ್ಲ ಈಗ ಅರ್ಥವೇ ಇರುವಂತೆ ಕಾಣುವುದಿಲ್ಲ. ಲೋಕಸಭೆ ಒಂದೊಂದು ಅವಧಿ ಮುಗಿಸಿದ ನಂತರವೂ ಅದರ ಕಲಾಪದ, ಚರ್ಚೆಯ ಮಟ್ಟ ಎಷ್ಟು ಕೆಳಗೆ ಹೋಯಿತು ಎಂದು ಲೆಕ್ಕ ಹಾಕಬಹುದೇ ಹೊರತು ಅದು ಎಷ್ಟು ಎತ್ತರಕ್ಕೆ ಹೋಯಿತು ಎಂದು ಲೆಕ್ಕ ಹಾಕುವ ಪ್ರಮೇಯ ಈಗ ಇಲ್ಲವೇ ಇಲ್ಲ. ಬಹುಶಃ ಇದು ಎಲ್ಲ ಅರ್ಥದಲ್ಲಿಯೂ ಅವನತಿಯ ಕಾಲ ಆಗಿರಬಹುದು.ಇದಕ್ಕೆ ಜನರೂ ಕಾರಣ ಆಗಿರಬಹುದು. ಜನಪ್ರತಿನಿಧಿಗಳು ನಮ್ಮವರಲ್ಲಿಯೇ ಒಬ್ಬರಾಗಿರುತ್ತಾರೆ. ಅಂದರೆ ಅವರ ಮಟ್ಟ ಕುಸಿದಿದ್ದರೆ ನಮ್ಮ ಮಟ್ಟವೂ ಕುಸಿದಿದೆ ಎಂದೇ ಅರ್ಥ. ಅವರು ಭ್ರಷ್ಟರಾಗಿದ್ದರೆ ನಾವೂ ಭ್ರಷ್ಟರಾಗಿದ್ದೇವೆ ಎಂದೇ ಅರ್ಥ. ಸಂಸದರು ಬರೀ ಸಂಸದರ ಕೆಲಸ ಮಾಡುವುದನ್ನು ಅರಗಿಸಿಕೊಳ್ಳಲು ನಮಗೂ ಆಗುತ್ತಿಲ್ಲ. ಅವರು ನಮಗೆ ಸಿಗಬೇಕು ಎಂದು ನಾವು ಬಯಸುತ್ತೇವೆ. ನಮ್ಮ ಸಣ್ಣ ಪುಟ್ಟ ಕುಂದುಕೊರತೆಗಳನ್ನು ಅವರು ನಿವಾರಿಸಬೇಕು ಎಂದೂ ಭಾವಿಸುತ್ತೇವೆ.ಪಂಚಾಯ್ತಿ, ಪುರಸಭೆ, ನಗರಸಭೆ, ವಿಧಾನಸಭೆ ಮತ್ತು ಲೋಕಸಭೆಯ ಸದಸ್ಯರ ನಡುವೆ ನಮಗೆ ವ್ಯತ್ಯಾಸವೇ ಗೊತ್ತಾಗುತ್ತಿಲ್ಲ. ಎಲ್ಲರಿಂದಲೂ ಒಂದೇ ಬಗೆಯ ಕೆಲಸಗಳನ್ನು ನಾವು ನಿರೀಕ್ಷೆ ಮಾಡುತ್ತಿದ್ದೇವೆ. ಅವರವರ ‘ಪಾತ್ರ’ಗಳ ಬಗ್ಗೆ ಜನಪ್ರತಿನಿಧಿಗಳೂ ಗೊಂದಲಗೊಂಡಂತೆ ಕಾಣುತ್ತದೆ.  ಮಧ್ಯದಲ್ಲಿ ಕಾರ್ಯಾಂಗ ಹೊಣೆ ಮರೆತಂತೆ ಭಾಸವಾಗುತ್ತದೆ. ಅರವತ್ತು ವರ್ಷಗಳಲ್ಲಿ ಶಾಸಕಾಂಗ ಅವನತಿ ಕಂಡ ಹಾಗೆಯೇ ಕಾರ್ಯಾಂಗವೂ ಅವನತಿ ಕಂಡಿದೆ. ಆದರೆ, ಶಾಸಕಾಂಗಕ್ಕೆ ಗರಿಷ್ಠ ಐದು ವರ್ಷಗಳ ಜನರ ಮುಂದೆ ಬರುವ ಜವಾಬ್ದಾರಿ ಇದೆ. ಕಾರ್ಯಾಂಗದ ಮುಂದೆ ಆ ಉತ್ತರದಾಯಿತ್ವ ಇಲ್ಲ. ಒಂದು ಸಾರಿ ಒಬ್ಬ ವ್ಯಕ್ತಿ ಸರ್ಕಾರಿ ನೌಕರಿ ಸೇರಿದ ಎಂದರೆ 35 ವರ್ಷ ಅವನನ್ನು ಮಾತನಾಡಿಸುವವರು ಯಾರೂ ಇರುವುದಿಲ್ಲ.ಈ ಭದ್ರತೆ ಆತನನ್ನು ನಿಧಾನದ್ರೋಹಿಯಾಗಿಯೂ, ಜನ ಕಂಟಕನಾಗಿಯೂ ಮತ್ತು ಭ್ರಷ್ಟನನ್ನಾಗಿಯೂ ಮಾಡಿದೆ. ಆತ ತನ್ನ ಮುಂದೆ ಬರುವ ಜನರನ್ನು ನೋಯಿಸುತ್ತಿದ್ದಾನೆ, ಅವಮಾನಿಸುತ್ತಿದ್ದಾನೆ, ಕುಬ್ಜರನ್ನಾಗಿ ಮಾಡುತ್ತಿದ್ದಾನೆ. ಜನರು ಜನಪ್ರತಿನಿಧಿಗಳ ಮೊಬೈಲ್‌ಗೆ ಮತ್ತೆ ಮತ್ತೆ ಕರೆ ಮಾಡಿ ಜೀವ ತಿನ್ನುವುದು ಈ ಕಾರಣಕ್ಕಾಗಿ. ಶಾಸಕ ಅಥವಾ ಸಂಸದ ಫೋನ್‌ ಮಾಡಿ ಹೇಳಿದರೆ ಮಾತ್ರ ತನ್ನ ಕೆಲಸ ಆಗುತ್ತದೆ ಎಂದು ಜನರು ಭಾವಿಸುತ್ತಿದ್ದರೆ ಅದರಲ್ಲಿ ಸತ್ಯಾಂಶ ಇಲ್ಲ ಎಂದು ಹೇಳಲಾಗದು. ತನ್ನ ಮನೆಯಲ್ಲಿ ಮದುವೆ–ಮುಂಜಿ ಆದಾಗ, ಯಾರಾದರೂ ಸತ್ತಾಗ ಶಾಸಕ, ಸಂಸದ ತನ್ನ ಮನೆಗೆ ಬಂದು ಸಾಂತ್ವನ ಹೇಳಿದರೆ ಸಾಕು ಎಂದೂ ಜನರು ಅಂದುಕೊಳ್ಳುತ್ತಿದ್ದಾರೆ. ಈಗ ಶಾಸಕರು, ಸಂಸದರು ಅದನ್ನೇ ಮಾಡುತ್ತಿದ್ದಾರೆ.ಮದುವೆಗೆ ಹೋಗದಿದ್ದರೂ ಸತ್ತಾಗ ಖಂಡಿತ ಹೋಗಿಯೇ ಹೋಗುತ್ತಾರೆ! ಚುನಾವಣೆಗೆ ನಿಂತಾಗ ಬಹುತೇಕ ಎಲ್ಲರ ಮನೆಗೆ ಒಂದಲ್ಲ ಒಂದು ಕಾಣಿಕೆ ಹೋಗಿ ತಲುಪಿಯೇ ತಲುಪುತ್ತದೆ. ಮತದಾನ ಪ್ರಮಾಣ ಹೆಚ್ಚು ಇರುವ ಹಳ್ಳಿಗಾಡಿನಲ್ಲಿ ಈ ಕಾಣಿಕೆಗಳು ಹೆಚ್ಚೂ ಕಡಿಮೆ ಎಲ್ಲ ಮನೆಗಳಿಗೆ ಮುಟ್ಟುತ್ತವೆ. ಅಲ್ಲಿಗೆ ರಾಜಕಾರಣಿ ಮತ್ತು ಮತದಾರರ ನಡುವಿನ ಸಂಬಂಧ ವ್ಯಾವಹಾರಿಕ ಆಗುತ್ತದೆ. ಜನರು ತಮ್ಮ ಕುಂದು ಕೊರತೆ ತೆಗೆದುಕೊಂಡು ಹೋದರೆ ಕೆಲವರು ಸಂಸದರು, ಶಾಸಕರು, ‘ಏನ್ರಿ? ನೀವೇನು ನನಗೆ ಪುಕ್ಕಟೆ ಮತ ಹಾಕಿದ್ದೀರಾ’ ಎಂದು ವ್ಯವಹಾರದ ಮಾತು ಆಡಿದ್ದು ಇದೇ ಕಾರಣಕ್ಕಾಗಿ!  ಭ್ರಷ್ಟ ಮತದಾರರು ತಮ್ಮ ಪ್ರತಿನಿಧಿಯ ಮುಂಗೈ ಹಿಡಿದು ಪ್ರಶ್ನೆ ಕೇಳುವ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ. ಒಂದು ಸಾರಿ ನಾವು ಪ್ರಶ್ನೆ ಕೇಳುವ ಅಧಿಕಾರವನ್ನು ಕಳೆದುಕೊಂಡೆವು ಎಂದರೆ ‘ಸಂಸತ್ತಿಗೆ, ಶಾಸನಸಭೆಗೆ ನೀವು ಚುನಾಯಿತರಾಗಿ ಹೋಗಿ ಏನು ಮಾಡಿದಿರಿ’ ಎಂದು ಅವರನ್ನು ಕೇಳುವ ಅಧಿಕಾರವನ್ನೂ ಕಳೆದುಕೊಳ್ಳುತ್ತೇವೆ. 15ನೇ ಲೋಕಸಭೆಯಲ್ಲಿ ಒಂದೂ ಪ್ರಶ್ನೆ ಕೇಳದೆ, ಬಾಯಿಯನ್ನೇ ತೆರೆಯದೆ ನಿವೃತ್ತರಾದ ಅನೇಕ ಸದಸ್ಯರು ಈಗ ಮತ್ತೆ ನಮ್ಮ ಮುಂದೆ ಮತ ಕೇಳಲು ಬರುತ್ತಿದ್ದಾರೆ. ಅವರಿಗೆ ಎಂಥ ಧೈರ್ಯ!ಆದರೆ, ಕೆಲವು ಅಚ್ಚರಿಗಳನ್ನೂ ಈ ಲೋಕಸಭೆ ನಮ್ಮ ಮುಂದೆ ತೆರೆದು ಇಟ್ಟಿದೆ. ಬಳ್ಳಾರಿಯ ಜೆ.ಶಾಂತಾ, ರಾಯಚೂರಿನ ಸಣ್ಣಫಕೀರಪ್ಪ, ಕೊಪ್ಪಳದ ಶಿವರಾಮೇಗೌಡ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿ ಹೋದವರು. ‘ಆದರೆ, ಅವರು ಅಲ್ಲಿ ಕೇಳಿದ ಪ್ರಶ್ನೆಗಳು, ಎತ್ತಿದ ವಿಚಾರಗಳು ಅಚ್ಚರಿ ಮೂಡಿಸುತ್ತವೆ’ ಎಂದು ಆ ಕುರಿತು ಸಂಶೋಧನೆ ಮಾಡಿ ನಮಗೆ ಕಳುಹಿಸಿಕೊಡುತ್ತಿರುವ ರಿಜೋರ್ಸ್‌ ರೀಸರ್ಚ್‌ ಫೌಂಡೇಶನ್‌ನ ಮುಖ್ಯಸ್ಥ ಕೆ.ವಿ.ನರೇಂದ್ರ ನನಗೆ ಹೇಳಿದರು. ಡಿ.ಬಿ.ಚಂದ್ರೇಗೌಡ ಅವರ ಆರೋಗ್ಯ ಈಗ ಅಷ್ಟೇನೂ ಸರಿ ಇಲ್ಲದೇ ಇರಬಹುದು.ಅವರಿಗೆ ಯಾವ ಕಾರಣಕ್ಕಾಗಿ ಬಿಜೆಪಿ, ಟಿಕೆಟ್  ನಿರಾಕರಿಸಿತು ಎಂದೂ ನಮಗೆ ಗೊತ್ತಿಲ್ಲ. ಆದರೆ, ಲೋಕಸಭೆಯಲ್ಲಿ ಅವರು ಮಾತನಾಡುತ್ತಿದ್ದರೆ ಇಡೀ ಸದನ ಕಿವಿಯಾಗಿ ಕೇಳುತ್ತಿತ್ತು. ಟ್ರೆಜರಿ ಬೆಂಚಿನ ಸಚಿವರು, ‘ಚಂದ್ರೇಗೌಡರ ಮಾತು ಕೇಳುವುದು ಉಪಯುಕ್ತ’ ಎಂದು ಭಾವಿಸುತ್ತಿದ್ದರು. ದುರಂತ ನೋಡಿ. ಚಂದ್ರೇಗೌಡರಿಗೆ ಟಿಕೆಟ್‌ ಸಿಗುವುದಿಲ್ಲ. ಶಾಂತಾ, ಸಣ್ಣಫಕೀರಪ್ಪ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಶಿವರಾಮೇಗೌಡರಿಗೆ ಈಗಾಗಲೇ ಟಿಕೆಟ್ ನಿರಾಕರಿಸಲಾಗಿದೆ. ಅಂದರೆ ಪಕ್ಷಗಳಿಗೂ ತಮ್ಮ ಸಂಸದರು ಸದನದಲ್ಲಿ ಸಕ್ರಿಯವಾಗಿ ಚರ್ಚೆ ಮಾಡುವುದು ಅಷ್ಟೇನೂ ಮುಖ್ಯವಲ್ಲ. ಯಾರು ಸದನದಲ್ಲಿ ಎದ್ದು ನಿಂತ ಕೂಡಲೇ ಗದ್ದಲ ಆರಂಭವಾಗುತ್ತದೆಯೋ ಅಂಥ ‘ರಾಜಕೀಯ ಪ್ರಾಣಿ’ಗಳಿಗೆ ಯಾವಾಗಲೂ ಟಿಕೆಟ್‌ ಖಾತ್ರಿಯಾಗಿರುತ್ತದೆ! ರಾಜಕೀಯದ ವಿಪರ್ಯಾಸಗಳು ಒಂದೆರಡಲ್ಲ.ಅಂದರೆ ಇದು ನಿರಾಸೆಯ ಕಾಲವೇ? ಆಸೆಯ ಕಾಲವೇ? 15ನೇ ಲೋಕಸಭೆಯ ನಡವಳಿಕೆಯನ್ನೆಲ್ಲ ಅರೆದು ಕುಡಿದಂತಿರುವ ಕೆ.ವಿ.ನರೇಂದ್ರ ಅವರ ಪ್ರಕಾರ, ‘ಒಂದು ವ್ಯವಸ್ಥೆ ಪರಿಪಕ್ವವಾಗುವ ಕಾಲವಿದು (!)’ ನರೇಂದ್ರ ಮತ್ತೆ ಹೇಳಿದರು: ‘ಇದೆಲ್ಲ ಒಂದು ಪ್ರಕ್ರಿಯೆ. ಅವರು ಸಂಸದರಾಗಿ ಏಕೆ ವಿಫಲರಾದರು ಎಂದು ಯೋಚಿಸುವ ಜತೆಗೇ ನಾವು ಪ್ರಜೆಗಳಾಗಿ ಏನು ಮಾಡಬೇಕು ಎಂದೂ ಯೋಚಿಸಬೇಕು. ಅವರು ಐದು ವರ್ಷಗಳ ಅವಧಿಯಲ್ಲಿ ಏನು ಮಾಡಿದರು ಎಂಬುದನ್ನು ನಮ್ಮ ಸಂಸ್ಥೆ ಅವರ ಮುಂದೆ ಕನ್ನಡಿ ಹಿಡಿದಿದೆ. ಅವರು ತಮ್ಮ ಮುಖ ನೋಡಿಕೊಂಡು ತಮ್ಮ ನಡತೆಯನ್ನು ಸುಧಾರಿಸಿಕೊಂಡಾರು.’94 ವರ್ಷದ ರಿಷಾಂಗ್‌ ಕೀಷಿಂಗ್‌ ನಿರಾಸೆ ಹೊತ್ತು ಹೊರಗೆ ಹೋದರು. ನಡುವಯಸ್ಸಿನ ನರೇಂದ್ರ ತಮ್ಮ ನೂರೆಂಟು ಕೆಲಸಗಳ ನಡುವೆ ಯಾವ ಫಲಾಪೇಕ್ಷೆ ಇಲ್ಲದೆ ನಮ್ಮ ಸಂಸದೀಯ ವ್ಯವಸ್ಥೆಯ ‘ಸುಧಾರಣಾ ಕೈಂಕರ್ಯ’ ತೊಟ್ಟಂತೆ ಕಾಣುತ್ತದೆ. ಅವರು ಜನರ ಮುಂದೆ ಅತ್ಯಂತ ಮಹತ್ವದ ಅಂಕಿ ಅಂಶಗಳನ್ನು ಇಟ್ಟಿದ್ದಾರೆ ಎಂದೇ ನನ್ನ ಭಾವನೆ. ಜೀವನವೇ ಹಾಗೆ: ನಿರಾಸೆಯಲ್ಲಿ ಆಸೆಯೂ ಇದೆಯಲ್ಲ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.