ಮಂಗಳವಾರ, ಮೇ 18, 2021
24 °C

ಮಕ್ಕಳಿಗೆ ಸ್ವಂತ ಮನೆಯೆಷ್ಟು ಸುರಕ್ಷಿತ?

ಆರ್. ಇಂದಿರಾ Updated:

ಅಕ್ಷರ ಗಾತ್ರ : | |

ಏಳನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯ ವಿದ್ಯಾಭ್ಯಾಸದ ಪ್ರಗತಿ ಅತೃಪ್ತಿಕರವಾಗಿತ್ತೆಂಬ ಕಾರಣಕ್ಕಾಗಿ ಮೈಸೂರಿನ ಒಬ್ಬ ತಂದೆ ಮಗಳಿಗೆ `ಬುದ್ಧಿ ಕಲಿಸಲು~ ಬೀದಿಯಲ್ಲಿ ಭಿಕ್ಷೆ ಬೇಡಲು ನಿಲ್ಲಿಸಿದ ಘಟನೆ ಇಂದು ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.

 

ನಗರದ ದೇವಸ್ಥಾನವೊಂದರ ಮುಂದೆ ಶಾಲಾ ಸಮವಸ್ತ್ರವನ್ನು ಧರಿಸಿ ತಟ್ಟೆ ಹಿಡಿದು ಅಳುತ್ತಾ ನಿಂತಿದ್ದ ಈ ಮಗುವಿನತ್ತ ಸಾರ್ವಜನಿಕರ ಗಮನ ಹರಿದಾಗ ಸನಿಹದಲ್ಲಿದ್ದ ಸ್ವಯಂಸೇವಾ ಸಂಸ್ಥೆಯೊಂದರ ಕಾರ್ಯಕರ್ತರು ಮಗುವನ್ನು ಪೊಲೀಸರ ಬಳಿ ಕರೆದೊಯ್ದರು.ಸರ್ಕಾರಿ ಉದ್ಯೋಗದಲ್ಲಿರುವ ತಂದೆಯನ್ನು ಪೊಲೀಸ್ ಬಂಧನಕ್ಕೆ ಒಳಪಡಿಸಿ 12 ವರ್ಷದ ಈ ಮಗುವನ್ನು ಮಕ್ಕಳ ರಕ್ಷಣಾ ಸಮಿತಿಗೆ ಒಪ್ಪಿಸಲಾಯಿತು. ಮನೆಯಲ್ಲಿ ಬಾಲಕಿಯ ಬೆಳವಣಿಗೆಗೆ ಸೂಕ್ತ ವಾತಾವರಣದ ಕೊರತೆಯನ್ನು ಮನಗಂಡ ಸಮಿತಿ ಆಕೆಯನ್ನು ಬಾಲಮಂದಿರಕ್ಕೆ ಕಳುಹಿಸಿತ್ತು.`ನನ್ನ ಮಗಳಿಗೆ ಜೀವನದ ಕಷ್ಟಕಾರ್ಪಣ್ಯಗಳ ಬಗ್ಗೆ ಅರಿವು ಮೂಡಿಸಿ, ವಿದ್ಯೆಯ ಮಹತ್ವದ ಬಗ್ಗೆ ಜ್ಞಾನೋದಯವಾಗುವಂತೆ ಮಾಡುವ `ಘನ~ಉದ್ದೇಶದಿಂದ ಆಕೆಯನ್ನು ಭಿಕ್ಷೆ ಬೇಡಲು ನಿಲ್ಲಿಸಿದೆ~ ಎಂಬುದು ಈ ತಂದೆಯ ವಾದ.

 

ಬಾಲ ನ್ಯಾಯ ಕಾಯಿದೆಯ ಉಲ್ಲಂಘನೆಯನ್ನು ಮಾಡಿದನೆಂಬ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಆತ ಜಾಮೀನನ ಮೇಲೆ ಹೊರ ಬಂದಿದ್ದೇ ಅಲ್ಲದೆ ಮಗಳ ಮೇಲಿದ್ದ `ಪ್ರೀತಿ~ ಮತ್ತು ಆಕೆಯ ಭವಿಷ್ಯವನ್ನು ಕುರಿತ `ಕಾಳಜಿ~ಗಳ ಹೆಸರಿನಲ್ಲಿ ತನ್ನ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ!ಮಗಳ ಪರೀಕ್ಷೆಗಳು ಇನ್ನೂ ನಡೆಯುತ್ತಿರುವಾಗಲೇ ಆ ಎಳೆಯ ಜೀವವನ್ನು ಬೀದಿಯಲ್ಲಿ ಭಿಕ್ಷೆ ಬೇಡಲು ನಿಲ್ಲಿಸಿದ ಈ ತಂದೆಗೆ ತನ್ನ ಅತಿರೇಕದ ನಿರ್ಧಾರದ ಬಗ್ಗೆ ಪಶ್ಚಾತ್ತಾಪವಿದ್ದಂತೆ ಕಾಣುತ್ತಿಲ್ಲ.ನಿರಂತರವಾಗಿ ಪ್ರೀತಿಯ ಪಾಠ ಪಠಿಸಿ, ಇನ್ನು ಮುಂದೆ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವ ಆಶ್ವಾಸನೆಯನ್ನಿತ್ತುಸುಮಾರು ಹತ್ತು ದಿನಗಳ ಕಾಲ ಬಾಲಮಂದಿರದಲ್ಲಿದ್ದ ಮಗಳನ್ನು ಮನೆಗೆ ಕರೆತರುವಲ್ಲಿ ಈ ತಂದೆ ಯಶಸ್ವಿಯಾಗಿದ್ದಾರೆ.ಮಕ್ಕಳ ಪಾಲನಾ ಸಮಿತಿಯ ಸದಸ್ಯರೇನೋ `ತಂದೆ ಮತ್ತು ಮಗಳಿಬ್ಬರಿಗೂ ಸೂಕ್ತ ಸಲಹೆಗಳನ್ನು ನೀಡಿದ್ದೇವೆ, ಪ್ರತಿ ಎರಡು ತಿಂಗಳಿಗೊಮ್ಮೆ ಈ ಬಾಲೆಯ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುತ್ತೇವೆ~ ಎಂಬ ಹೇಳಿಕೆಯನ್ನಿತ್ತಿದ್ದಾರೆ. ಇಡೀ ಘಟನೆ ಸುಖಾಂತ್ಯ ಕಂಡಿತೇನೋ ಎಂಬಂತೆ ಬಿಂಬಿಸಲಾಗುತ್ತಿದೆ.ಭಿಕ್ಷಾಟನೆಯ ಪ್ರಕರಣ ನಡೆದ ಸಂದರ್ಭದಲ್ಲೇ ಮೈಸೂರು ನಗರ ಮತ್ತೊಂದು ಆಘಾತಕಾರಿ ಘಟನೆಗೆ ಸಾಕ್ಷಿಯಾಯಿತು. ತನ್ನ ತಾಯಿ ಹಾಗೂ ಆಕೆಯ ಸಂಗಾತಿಯಿಂದ ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ದಿನನಿತ್ಯವೂ ಒಳಗಾಗುತ್ತಿದ್ದ ಒಂಬತ್ತು ವರ್ಷದ ಬಾಲಕನೊಬ್ಬ ಈಗ ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಯಲ್ಲಿದ್ದಾನೆ.

 

ಹೆತ್ತ ತಾಯಿಯಿಂದಲೇ ಅಸಹನೀಯ ಕ್ರೌರ್ಯಕ್ಕೆ ಒಳಗಾದ ಈ ಬಾಲಕ ಗೃಹಕೃತ್ಯಗಳ ಭಾರವನ್ನೆಲ್ಲಾ ಹೊರುವುದರ ಜೊತೆ ಜೊತೆಗೆ ಆಕೆಯ ಗೆಳೆಯನ ಬೆದರಿಕೆ ಹಾಗೂ ಹೊಡೆತಗಳಿಗೂ ಬಲಿಯಾಗುತ್ತಿದ್ದ.ಈ ಹಿಂಸೆಯಿಂದ ತಪ್ಪಿಸಿಕೊಳ್ಳಲು ಪೊಲೀಸ್ ಠಾಣೆಯ ಮೊರೆ ಹೊಕ್ಕ ಬಾಲಕನಿಗೆ ಈಗ ಬಾಲ ಮಂದಿರದಲ್ಲಿ ಆಶ್ರಯ ನೀಡಲಾಗಿದೆ. ಈತ ತನ್ನ ಮನೆಗೆ ಮರಳಲು ನಿರಾಕರಿಸಿದ್ದಾನೆ. ಈ ಮಗುವನ್ನು ಹಿಂಸಿಸಿದ್ದಕ್ಕೆ ಶಿಕ್ಷೆಯ ರೂಪದಲ್ಲಿ ಬಾಲ ಮಂದಿರದಲ್ಲಿ ಶ್ರಮದಾನ ಮಾಡಲು ಆ ಮಗುವಿನ ತಾಯಿಯ ಗೆಳೆಯನಿಗೆ ನಿರ್ದೇಶಿಸಲಾಗಿದೆ.ಮೈಸೂರಿನಲ್ಲಿ ನಡೆದ ಈ ಎರಡು ಘಟನೆಗಳೂ ದಿನಗಳು ಉರುಳಿದ ಹಾಗೆ ಸಾರ್ವಜನಿಕರ ಹಾಗೂ ಆಡಳಿತ ವ್ಯವಸ್ಥೆಯ ಮನಃಪಟಲದಿಂದ ದೂರ ಸರಿಯುತ್ತವೆ.ಆದರೆ ದೇಶದಾದ್ಯಂತ ನಿರಂತರವಾಗಿ ಮನೆಯ ಒಳಗೆ, ಸಂಬಂಧಿಕರಿಂದ, ವಿಶೇಷವಾಗಿ ತಂದೆ-ತಾಯಿಗಳಿಂದ ಮಕ್ಕಳ ಮೇಲೆ ನಡೆಯುತ್ತಿರುವ ನಾನಾ ಬಗೆಯ ದೌರ್ಜನ್ಯಗಳ ಬಗ್ಗೆ ಪ್ರಜ್ಞಾವಂತ ಸಮಾಜ ಕಣ್ಣು ಮುಚ್ಚಿ ಕುಳಿತು ಕೊಳ್ಳುವ ಹಾಗಿಲ್ಲ.ಮನೆಯನ್ನು ದೇಗುಲಕ್ಕೂ ಮಾತಾ ಪಿತೃಗಳನ್ನು ದೇವ ದೇವತೆಗಳಿಗೂ ಹೋಲಿಸುವ ಹಾಗೂ ಕೌಟುಂಬಿಕ ಸಂಬಂಧಗಳನ್ನು ವೈಭವೀಕರಿಸುವ ಭಾರತೀಯ ಸಂಸ್ಕೃತಿಯ ಒಂದು ಪ್ರವೃತ್ತಿಯನ್ನು ಗಂಭೀರವಾದ ಚಿಂತನೆ-ಪ್ರಶ್ನೆಗಳಿಗೆ ಒಳಪಡಿಸುವ ಅಗತ್ಯವನ್ನು ಈಗಲಾದರೂ ಮನಗಾಣಬೇಕಾಗಿದೆ.ತೀರಾ ಇತ್ತೀಚಿನವರೆಗೂ ಕುಟುಂಬದ ಒಳಗೆ, ಅದರಲ್ಲೂ ಪೋಷಕರಿಂದ ಅಥವಾ ಇತರ ಬಂಧುಗಳಿಂದ ಮಕ್ಕಳ ಮೇಲೆ ದೈಹಿಕ ಅಥವಾ ಲೈಂಗಿಕ ಅತ್ಯಾಚಾರ ನಡೆಯಬಹುದು ಎಂಬುದನ್ನು ಒಪ್ಪಿಕೊಳ್ಳಲು ಕೂಡ ನಾವು ಸಿದ್ಧರಿರಲಿಲ್ಲ.ಆದರೆ ಸ್ವಲ್ಪ ದಿನಗಳ ಹಿಂದೆ ಕೌಟುಂಬಿಕ ವಲಯದಲ್ಲಿ ಮಕ್ಕಳು ಅನುಭವಿಸುವ ಕ್ರೌರ್ಯದ ಸ್ವರೂಪವನ್ನು ಕುರಿತಂತೆ ಕೈಗೊಂಡ ರಾಷ್ಟ್ರೀಯ ಮಟ್ಟದ ಅಧ್ಯಯನವೊಂದು ಹಲವಾರು ಅಘಾತಕಾರಿ ಸಂಗತಿಗಳನ್ನು ಬಯಲಿಗೆಳೆಯಿತು.ನಮ್ಮ ದೇಶದಲ್ಲಿ ದೌರ್ಜನ್ಯ ಹಾಗೂ ಶೋಷಣೆಗೊಳಗಾಗುವ ಮಕ್ಕಳಲ್ಲಿ ಅತಿ ಹೆಚ್ಚಿನ ಸಂಖ್ಯೆಯವರು 5-12ರ ವಯೋಗುಂಪಿಗೆ ಸೇರಿದವರು. ಇವರಲ್ಲಿ ಶೇಕಡ 60 ರಷ್ಟು ಮಕ್ಕಳು ಅನುಭವಿಸುವ ಹಿಂಸೆ ಕುಟುಂಬದ ಪರಿಧಿಯ ಒಳಗೇ ನಡೆಯುವಂತಹುದು.

 

ಈ ಅಧ್ಯಯನ ಹೊರ ಹಾಕಿದ ಮತ್ತೊಂದು ಆಘಾತಕಾರಿ ಸಂಗತಿಯೆಂದರೆ ಕುಟುಂಬದ ಒಳಗೆ ಮಕ್ಕಳು ಎದುರಿಸುವ ದೌರ್ಜನ್ಯದ ಪ್ರಕರಣಗಳಲ್ಲಿ ಶೇಕಡ 90ರಷ್ಟಕ್ಕೆ ಕಾರಣರಾಗುವವರು ಆ ಮಕ್ಕಳ ತಂದೆ-ತಾಯಿಗಳು ಎಂಬುದು.ಭಾರತೀಯ ಸಂಪ್ರದಾಯದಲ್ಲಿ ಮಕ್ಕಳ ಮೇಲೆ ಮಾತಾ-ಪಿತೃಗಳಿಗೆ ಅಪರಿಮಿತ ಅಧಿಕಾರವಿದೆ. ಆ ಕಾರಣದಿಂದಲೇ ತಮ್ಮ ಮಕ್ಕಳ ಬದುಕನ್ನು ನಿಯಂತ್ರಿಸುವ ಹಾಗೂ ನಿರ್ದೇಶಿಸುವ ಏಕೈಕ ಹಕ್ಕು ತಮಗಿದೆ ಎಂದು ಬಹುತೇಕ ಪೋಷಕರು ಭಾವಿಸಿರುತ್ತಾರೆ.

ಅಪ್ರಾಪ್ತ ವಯಸ್ಸಿನ ಮಕ್ಕಳ ವಿಷಯದಲ್ಲಂತೂ ಈ ಹಕ್ಕು ಪ್ರಶ್ನಾತೀತವಾಗುತ್ತದೆ. ಸಣ್ಣ ವಯಸ್ಸಿನ ಮಕ್ಕಳು ತಮ್ಮ ಜೀವನಾವಶ್ಯಕತೆಗಳ ಪೂರೈಕೆಗಾಗಿ ಸಂಪೂರ್ಣವಾಗಿ ತಂದೆ-ತಾಯಿಗಳನ್ನೇ ಅವಲಂಬಿಸಬೇಕಾಗಿರುವುದರಿಂದ ಅವರಲ್ಲಿ ದೌರ್ಜನ್ಯವನ್ನು ಪ್ರತಿಭಟಿಸುವಂಥ ಶಕ್ತಿಯೇ ಇರುವುದಿಲ್ಲ.ಹಾಗೆಂದ ಮಾತ್ರಕ್ಕೆ ಎಲ್ಲ ಪೋಷಕರೂ ತಮ್ಮ ಮಕ್ಕಳ ಮೇಲೆ ದೌರ್ಜನ್ಯ ಮಾಡುತ್ತಾರೆ ಎಂದು ಅರ್ಥೈಸಬಾರದು. ಅಧಿಕಾರ ಮತ್ತು ವಾತ್ಸಲ್ಯಗಳ ನಡುವೆ ಸಮತೋಲನವನ್ನು ಕಾದಿರಿಸಿಕೊಂಡು ತಮ್ಮ ಮಕ್ಕಳನ್ನು ಸತ್ಪ್ರಜೆಗಳಾಗಿ ಬೆಳೆಸಿದ-ಬೆಳೆಸುತ್ತಿರುವ ಕೋಟ್ಯಂತರ ಪೋಷಕರು ನಮ್ಮಲ್ಲಿದ್ದಾರೆ.ಆದರೆ ಇಲ್ಲಿ ಮುಖ್ಯವಾದುದು ಅಂಕಿ-ಸಂಖ್ಯೆಗಳಲ್ಲ. ಮಕ್ಕಳ ಹಕ್ಕುಗಳ ಬಗ್ಗೆ ಪುಂಖಾನುಪುಂಖವಾಗಿ ಭಾಷಣಗಳು, ಬರಹಗಳು ಹೊರ ಹೊಮ್ಮತ್ತಿರುವ ಈ ದೇಶದಲ್ಲಿ ಅವರ ಪಾಲಿಗೆ ಅತಿ ಸುರಕ್ಷಿತ ವಲಯ ಎಂದು ಪರಿಗಣಿತವಾಗಿರುವ ಕುಟುಂಬದಲ್ಲೇ ಈ ಹಕ್ಕುಗಳ ಉಲ್ಲಂಘನೆ ನಡೆಯುತ್ತಿರುವುದು ಗಮನಿಸಬೇಕಾದ ವಿಷಯ.ಕುಟುಂಬದ ಒಳಗೆ ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳನ್ನು ಸಾಮಾನ್ಯವಾಗಿ ಮೂರು ಬಗೆಗಳಲ್ಲಿ ವಿಂಗಡಿಸಲಾಗುತ್ತದೆ. ಅವುಗಳೆಂದರೆ ದೈಹಿಕ, ಭಾವನಾತ್ಮಕ ಮತ್ತು ಲೈಂಗಿಕ.ಮಕ್ಕಳಿಗೆ ಹೊಡೆಯುವುದು, ತಮ್ಮ ಸ್ವಾರ್ಥ ಸಾಧನೆಗಾಗಿ ಅಥವಾ ಜೀವನ ನಿರ್ವಹಣೆಗಾಗಿ ಅವರನ್ನು ಕಷ್ಟಕರವಾದ ದುಡಿಮೆಯಲ್ಲಿ ತೊಡಗಿಸುವುದು. ತಮ್ಮ ಅಥವಾ ಇತರರ ಮನೆಗಳಲ್ಲಿ ಗೃಹ ಕೃತ್ಯಗಳನ್ನು ನಿಭಾಯಿಸುವಂತೆ ಒತ್ತಡ ಹೇರುವುದು-ಇವೇ ಮುಂತಾದವು ದೈಹಿಕ ದೌರ್ಜನ್ಯಕ್ಕೆ ಉದಾಹರಣೆಗಳು.ಮಕ್ಕಳನ್ನು ದೈಹಿಕವಾಗಿ ಹಿಂಸಿಸದಿದ್ದರೂ ಪೋಷಕರು ಅವರನ್ನು ಅಲಕ್ಷ್ಯ ಮಾಡುವುದು, ಪದೇ ಪದೇ ಅವಮಾನ ಮಾಡುವುದು ಅಥವಾ ತಮ್ಮ ಬದುಕಿನಲ್ಲಿ ಅವರ ಅಗತ್ಯವಿಲ್ಲವೆಂಬಂತೆ ವರ್ತಿಸುವುದು ಅನೇಕ ಕುಟುಂಬಗಳಲ್ಲಿ ಕಂಡು ಬರುವಂಥ ಪರಿಸ್ಥಿತಿ.

 

ವೈವಾಹಿಕ ವಿಘಟನೆ, ವಿವಾಹ ವಿಚ್ಛೇದನ, ತಂದೆ ಅಥವಾ ತಾಯಿ ಬೇರೊಬ್ಬ ಸಂಗಾತಿಯನ್ನು ಮನೆಗೆ ಕರೆತಂದಿರುವುದು-ಇಂಥ ಸಂದರ್ಭಗಳಲ್ಲಿ ಮಕ್ಕಳು ಭಾವನಾತ್ಮಕ ಆಘಾತಗಳಿಗೆ ಬಳಗಾಗುತ್ತಾರೆ.ವಿಚ್ಛೇದನ ಪಡೆದ ದಂಪತಿಗಳು ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿರಾಕರಿಸುವಂಥ ಪರಿಸ್ಥಿತಿ ಸೃಷ್ಟಿಯಾಗುವ ಸಂದರ್ಭಗಳಲ್ಲಂತೂ ಆ ಮಕ್ಕಳು ಅನುಭವಿಸುವ ಭಾವನಾತ್ಮಕ ಹಿಂಸೆ ಅಪಾರ. ಮಕ್ಕಳು ಅನುಭವಿಸುವ ಅನೇಕ ಶಿಕ್ಷೆಗಳು ದೈಹಿಕ ಹಾಗೂ ಭಾವನಾತ್ಮಕ ದೌರ್ಜನ್ಯಗಳ ಸಮ್ಮಿಶ್ರಣ ಎಂದೇನೂ ಪ್ರತ್ಯೇಕವಾಗಿ ಹೇಳಬೇಕಿಲ್ಲ.ಕುಟುಂಬದ ಒಳಗೆ ತಂದೆ, ಸಹೋದರ ಅಥವಾ ಈ ಸ್ಥಾನಗಳಿಗೆ ಸಮಾನವಾದ ಸ್ಥಾನದಲ್ಲಿರುವ ಬಂಧುಗಳಿಂದ ಲೈಂಗಿಕ ದೌರ್ಜನ್ಯ ನಡೆಯುತ್ತದೆಂಬ ವಿಷಯ ನಮ್ಮ ಊಹೆಗೂ ನಿಲುಕಲಾರದಂಥದ್ದು.

 

ಆದರೆ ಇದು ಭಾರತೀಯ ಕೌಟುಂಬಿಕ ಜೀವನದ ಒಂದು ಕಟು ಸತ್ಯ. ಬಹು ಕಾಲದಿಂದ ಆಪ್ತ ಬಂಧುಗಳಿಂದ ಲೈಂಗಿಕ ಅತ್ಯಾಚಾರಕ್ಕೆ ಬಲಿಯಾಗುತ್ತಿರುವ ಹೆಣ್ಣು ಮಕ್ಕಳ ಬವಣೆ ಗೋಪ್ಯತೆಯ ಸೆರಗಿನಲ್ಲಿ ಮುಚ್ಚಿದಂತೆಯೇ ಇದ್ದದ್ದು, ಈಗೀಗ ಕೆಲ ಪ್ರಕರಣಗಳು ಹೊರಬರುತ್ತಿವೆ.ಆದರೆ ಮನೆತನದ ಮರ್ಯಾದೆಯನ್ನು ಕಾಪಾಡುವ ಪ್ರಧಾನ ಜವಾಬ್ದಾರಿಯೂ ಹೆಣ್ಣು ಮಕ್ಕಳದ್ದೇ ಆಗಿರುವುದರಿಂದ ಅವರಲ್ಲನೇಕರು ಮೌನ ಸಾಂಗತ್ಯ ಮಾಡಿಕೊಳ್ಳುತ್ತಾರೆ.ಮಕ್ಕಳನ್ನು ಕೌಟುಂಬಿಕ ಹಿಂಸೆಯೂ ಸೇರಿದಂತೆ ಸಮಾಜದ ವಿವಿಧ ಸಂಸ್ಥೆಗಳಲ್ಲಿ ದೌರ್ಜನ್ಯದಿಂದ ರಕ್ಷಿಸುವ ರಾಷ್ಟ್ರೀಯ ಕಾಯಿದೆಯೊಂದನ್ನು ಅನುಷ್ಠಾನಗೊಳಿಸುವ ಬಗ್ಗೆ ಚರ್ಚೆ ಆಗಿಂದಾಗ್ಗೆ ನಡೆಯುತ್ತಲೇ ಇದ್ದರೂ ಇದುವರೆಗೂ ಆ ನಿಟ್ಟಿನಲ್ಲಿ ಸಂಬಂಧಪಟ್ಟ ವ್ಯವಸ್ಥೆ ಕಾರ್ಯ ಪ್ರವೃತ್ತವಾಗಿಲ್ಲ.ತಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲಾಗದಂಥ ಸ್ಥಿತಿಯಲ್ಲೇ ಅನೇಕ ಮಕ್ಕಳಿರುವುದರಿಂದ ಅವರ ದೇಹ-ಮನಸ್ಸುಗಳು ಅವ್ಯಾಹತವಾಗಿ ದಾಳಿಗೆ ಒಳಗಾಗುತ್ತಲೇ ಇರುತ್ತವೆ. ಪ್ರತಿಭಟಿಸಬೇಕೆಂದಿರುವ ಮಕ್ಕಳಿಗೂ ಬೆಂಬಲಕ್ಕೆ ನಿಲ್ಲುವಂಥ ವ್ಯವಸ್ಥೆಯಾದರೂ ನಮ್ಮಲ್ಲಿ ಎಲ್ಲಿದೆ?ಮಗಳನ್ನು ಭಿಕ್ಷೆಗೆ ಹಚ್ಚುವ ಅಥವಾ ಮಗನನ್ನು ಚಿತ್ರ ಹಿಂಸೆಗೆ ಗುರಿಪಡಿಸಿ ಮನೆಯಿಂದ ಓಡಿಸುವ ದೌರ್ಜನ್ಯ ಯಾವುದಾದರೂ ಪಾಶ್ಚಿಮಾತ್ಯ ದೇಶದಲ್ಲಿ ಸಂಭವಿಸಿದ್ದರೆ ಏನಾಗುತಿತ್ತು ಎಂಬ ಪ್ರಶ್ನೆಯನ್ನೆತ್ತಿದಾಗ ನಮಗೆ ಥಟ್ಟನೆ ನೆನಪಿಗೆ ಬರುವುದು ನಾರ್ವೆ.ಇತ್ತೀಚೆಗಷ್ಟೇ ಭಾರತೀಯರ ದೃಷ್ಟಿಯಲ್ಲಿ ತೀರಾ ಸಾಧಾರಣ ಎನಿಸುವಂಥ ರೀತಿಯಲ್ಲಿ ಮಕ್ಕಳೊಡನೆ ತಂದೆ-ತಾಯಿಗಳು ನಡೆದುಕೊಂಡರು ಎನ್ನುವ ಕಾರಣಕ್ಕಾಗಿ ಅವರನ್ನು ತನ್ನ ವಶಕ್ಕೆ ತೆಗೆದುಕೊಂಡಿರುವ ನಾರ್ವೆಯ ಸಾಮಾಜಿಕ ಕಾರ್ಯಕರ್ತರು ಇದುವರೆಗೂ ಆ ಮಕ್ಕಳನ್ನು ಪೋಷಕರಿಗೆ ಹಿಂದಿರುಗಿಸಿಲ್ಲ.ಆ ಮಕ್ಕಳಿಗೆ ಪ್ರತ್ಯೇಕವಾದ ಮಲಗುವ ಕೊಠಡಿಯಿರಲಿಲ್ಲ ಹಾಗೂ ಪೋಷಕರು ಅವರಿಗೆ ಊಟ ಮಾಡಿಸುತ್ತಿದ್ದುದನ್ನೇ ದೊಡ್ಡ ಅಪರಾಧವೆಂಬಂತೆ ಪರಿಗಣಿಸಿದ ಆ ದೇಶದಲ್ಲಿ ನಮ್ಮ ನಡುವೆ ನಡೆಯುತ್ತಿರುವ ಕೌಟುಂಬಿಕ ದೌರ್ಜನ್ಯದ ಕೃತ್ಯಗಳು ಯಾವ ಬಗೆಯ ಪ್ರತಿಕ್ರಿಯೆಯನ್ನು ತರುತ್ತಿತ್ತೋ ಎಂದು ಊಹಿಸಬಹುದಲ್ಲ.ಪೋಷಕರು ಮಕ್ಕಳಿಗೆ ಬುದ್ಧಿವಾದ ಹೇಳಬಾರದು ಅಥವಾ ಅವರು ತಪ್ಪುಗಳನ್ನು ಮಾಡಿದಾಗ ತಿದ್ದಬಾರದು ಎಂದಾಗಲಿ ಇದರ ಅರ್ಥವಲ್ಲ. ಆದರೆ ಬಾಲ್ಯಾವಸ್ಥೆಯ ಅಗತ್ಯಗಳು-ಆಶಯಗಳನ್ನು ಚಿವುಟಿ ತಾವು ಮಾಡಿದ್ದೇ ಸರಿ ಎಂಬ ಕೆಟ್ಟ ಹಟದಿಂದ ಅವರು ನಡೆದುಕೊಂಡರೆ ಆರಕ್ಷಕ ಹಾಗೂ ಆಡಳಿತ ವ್ಯವಸ್ಥೆ ಮತ್ತು ಸೂಕ್ಷ್ಮ ಮನಸ್ಸುಳ್ಳ ನಾಗರಿಕರು ಅದನ್ನು ಸಹಿಸಬಾರದು.ತಾಯಿಯ ಗರ್ಭದಿಂದ ಹಿಡಿದು ಎಲ್ಲಿಯೂ ಮಕ್ಕಳಿಗೆ ಸುರಕ್ಷಿತವಾದ ತಾಣವಿಲ್ಲವೆಂದರೆ ಅವರು ಹೋಗುವುದಾದರೂ ಎಲ್ಲಿಗೆ? ಮೈಸೂರಿನಲ್ಲಿ ನಡೆದ ಘಟನೆಗಳು ಮರುಕಳಿಸಿದಂತೆ ನೋಡಿಕೊಳ್ಳುವುದರಲ್ಲಿ ನಮ್ಮೆಲ್ಲರ ಪಾತ್ರವೂ ಇದೆ.(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.